“ಇದು ನನ್ನ ಅಂತರಂಗದ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿದ ಕೃತಿ. ಜೊತೆಗೆ ನಾವು ಭೇಟಿಯಿತ್ತ ಸ್ಥಳಗಳ ಬಗೆಗಿನ ಮಾಹಿತಿಗಳನ್ನು ಅನೇಕ ಸಹೃದಯರಿಂದ, ಗ್ರಂಥಗಳಿಂದ, ಜಾಲತಾಣಗಳಿಂದ ಓದಿ, ಕೇಳಿಸಿಕೊಂಡು ಬರೆದ ಕೃತಿ,” ಎನ್ನುತ್ತಾರೆ ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರು ತಮ್ಮ ಕೃತಿ “ಅಲೆದಾಟದ ಅಂತರಂಗ” ಕೃತಿ ಕುರಿತು ಬರೆದ ಲೇಖಕರ ನುಡಿ.
ಪ್ರವಾಸ ಕಥನ ಬರೆಯಬೇಕೆಂಬುದು ನಾನು ಬರೆವಣಿಗೆ ಆರಂಭಿಸಿದ್ದಾಗಲೇ ಅಂಕುರಿಸಿದ್ದ ಯೋಚನೆ. ಸಣ್ಣ ಪುಟ್ಟ ಪ್ರವಾಸ ಕಥನಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅದೇ ಸಮಯದಲ್ಲಿ 2022ರ ಅಕ್ಟೋಬರ್ ತಿಂಗಳಲ್ಲಿ ಈ ಪ್ರವಾಸ ಕೈಗೊಂಡಿದ್ದೆ. ಪ್ರವಾಸ ಮುಗಿಸಿ ಬಂದಾಗ ಬರೆಯಬೇಕೆನ್ನುವ ತುಡಿತ. ಆದರೆ ನನ್ನ ಔದಾಸಿನ್ಯ ಇದಕ್ಕೆ ಅಡ್ಡ ಬಂದಿತ್ತು. ಅದೆಷ್ಟೇ ಪ್ರಯತ್ನಪಟ್ಟರೂ ಪ್ರವಾಸ ಕಥನದ ಬರೆವಣಿಗೆ ಶುರುವಾಗಿರಲಿಲ್ಲ. ವರ್ಷ ಕಳೆದು ಕೆಲ ಸಮಯವಾದಾಗ ಆ ಯೋಜನೆ ಬದಿಗಿರಿಸಿ ಪರಿಸರದ ಕುರಿತಾದ ನನ್ನ ಲೇಖನಗಳನ್ನು ಕ್ರೋಡೀಕರಿಸಿ ಹೊತ್ತಗೆ ತರುವ ಆಲೋಚನೆ ಮಾಡಿದ್ದೆ. 'ಹೆಜ್ಜೆ ಊರುವ ತವಕ' ಪ್ರಕಟವಾದ ಕಾಲಘಟ್ಟದಲ್ಲಿ ಅದಕ್ಕೆ ಬಂದ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಬರೆಯುವಂತೆ ಪ್ರೇರೇಪಿಸಿತು. ನಂತರ ದ್ವಾರಕಾ ಪ್ರಕಾಶನದ ಮೂಲಕ ಪ್ರಕಟವಾದ 'ವಿದ್ಯಾ ಸ್ತುತಿ' ಪುಸ್ತಕದ ಕೆಲಸ ಮಾಡಿಕೊಡುವ ಸದವಕಾಶ ಲಭ್ಯವಾಯಿತು.
ಏತನ್ಮಧ್ಯೆ ಡಿಗ್ರಿ ಪರೀಕ್ಷೆಗಳು ಮುಗಿದು ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗುವುದಕ್ಕೂ ಮುನ್ನ ಒಂದೂವರೆ ತಿಂಗಳ ದೀರ್ಘ ರಜೆ ಸಿಕ್ಕಿತ್ತು. ಈ ರಜೆಯನ್ನು ಸದುಪಯೋಗಪಡಿಸಿಕೊಳ್ಳುವುದಕ್ಕೆ ನಾನು ಆರಿಸಿದ್ದು ಪ್ರವಾಸ ಕಥನದ ಬರೆವಣಿಗೆ. ಸುಮಾರು ಒಂದು ತಿಂಗಳೊಳಗೆ ಪ್ರವಾಸ ಕಥನ ಬರೆದಿದ್ದೆ. ಒಟ್ಟು ಬರೆದುಕೊಂಡು ಹೋಗುವ ಬದಲು ವೇಳಾಪಟ್ಟಿ ಹಾಕಿ ಬರೆಯುವುದು ಉತ್ತಮವೆಂದು ಅನಿಸಿತ್ತು. ವೇಳಾಪಟ್ಟಿಗಿಂತಲೂ 9 ದಿನ ಮೊದಲೇ ಬರೆದು ಮುಗಿಸಿದ್ದು ಖುಷಿ ತಂದಿತ್ತು.
’ಅಲೆದಾಟದ ಅಂತರಂಗ' ಎಂಬ ಹೆಸರೇ ಸೂಚಿಸುವಂತೆ ಇದು ನನ್ನ ಅಂತರಂಗದ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿದ ಕೃತಿ. ಜೊತೆಗೆ ನಾವು ಭೇಟಿಯಿತ್ತ ಸ್ಥಳಗಳ ಬಗೆಗಿನ ಮಾಹಿತಿಗಳನ್ನು ಅನೇಕ ಸಹೃದಯರಿಂದ, ಗ್ರಂಥಗಳಿಂದ, ಜಾಲತಾಣಗಳಿಂದ ಓದಿ, ಕೇಳಿಸಿಕೊಂಡು ಬರೆದ ಕೃತಿ. ಯಾವುದೇ ಸಿದ್ಧ ಮಾದರಿಯನ್ನು ಅನುಸರಿಸದೆ ಆಯಾ ಪ್ರದೇಶದ ವಿವರಗಳ ಜೊತೆಗೆ ನನ್ನ ಅನುಭವಗಳನ್ನು ಸೇರಿಸಿ ಬರೆದಿರುವೆ.
ಓದುಗರಿಗೆ ಪ್ರಿಯವಾದರೆ ನನ್ನ ಶ್ರಮ ಸಾರ್ಥಕ. ನೀವುಗಳು ನನ್ನ ಸಾಹಿತ್ಯ ರಚನೆಗೆ ಆಸರೆಯಾಗುವಿರೆಂಬ ನಂಬಿಕೆ. ಅಭಿಪ್ರಾಯ, ಸಲಹೆ-ಸೂಚನೆಗಳಿಗೆ ಸದಾ ಸ್ವಾಗತ.
- ನವೀನಕೃಷ್ಣ ಎಸ್. ಉಪ್ಪಿನಂಗಡಿ
“ಅವರ ವೈಯಕ್ತಿಕ ಜೀವನ ಯಾತ್ರೆಯ ವಿವರಗಳು ಯಥಾವತ್ತಾಗಿ ದಾಖಲಾಗಿದೆ, ಬಾಲ್ಯದ, ಯೌವನದ, ವೃತ್ತಿ ವಿಲಾಸದ ನಂತರದ ಇಲ...
“ಮನುಷ್ಯನ ಒಳಿತು-ಕೆಡುಕು ಪ್ರವೃತ್ತಿಗಳ ಬಗ್ಗೆ ಗಮನಸೆಳೆಯುವ 'ಆತ್ಮಸಾಕ್ಷಿ' ಹಾಗೂ 'ಸರ್ವೆ ನಂಬರ್-...
“ಜಗತ್ತಿನ ಎಂಟು ಧರ್ಮಗಳು ಪ್ರತಿಪಾದಿಸಿದ ದೇವರು, ಜಗತ್ತು, ಜೀವ, ಸ್ವರ್ಗ- ನರಕಗಳ ಪರಿಕಲ್ಪನೆ, ಕರ್ಮ-ಪುನರ್ಜನ್ಮ...
©2024 Book Brahma Private Limited.