“ಮನುಷ್ಯನ ಒಳಿತು-ಕೆಡುಕು ಪ್ರವೃತ್ತಿಗಳ ಬಗ್ಗೆ ಗಮನಸೆಳೆಯುವ 'ಆತ್ಮಸಾಕ್ಷಿ' ಹಾಗೂ 'ಸರ್ವೆ ನಂಬರ್-97' ಕಥೆಗಳು, ಬದುಕು ಹಾಗೂ ಸಮಾಜಕ್ಕೆ ಯಾವುದು ಮುಖ್ಯ ಎನ್ನುವುದನ್ನು ಧ್ವನಿಸುವಂತಿವೆ,” ಎನ್ನುತ್ತಾರೆ ರಘುನಾಥ ಚ.ಹ ಅವರು ಅನಿಲ್ ಗುನ್ನಾಪೂರ ಅವರ “ಸರ್ವೇ ನಂಬರ್ - 97” ಕೃತಿ ಕುರಿತು ಬರೆದ ಮುನ್ನುಡಿ.
ಏನನ್ನೋ ಹಂಬಲಿಸುತ್ತ ಯಾವುದರ ಹುಡುಕಾಟದಲ್ಲೋ ನಿರತನಾಗಿರುವುದು ಎಲ್ಲ ಕಾಲದ ಮನುಷ್ಯ ಜೀವನದ ಪ್ರಮುಖ ಲಕ್ಷಣವಾಗಿದೆ. ಆ ಹುಡುಕಾಟವೇ ಬದುಕಿನ ಗುರಿಯೂ ಆಗಿರುತ್ತದೆ. ಹಾಗೆ ಹುಡುಕುವುದು ಸಿಗಬಹುದು ಇಲ್ಲವೇ ಸಿಗದಿರಬಹುದು. ಹುಡುಕುತ್ತಿದ್ದುದು ದೊರೆತಾಗ, ಕೆಲವರಿಗೆ ಸಂತೋಷವಾಗಬಹುದು; ಮತ್ತೆ ಕೆಲವರಿಗೆ, ಈವರೆಗೂ ನಾವು ಹುಡುಕುತ್ತಿದ್ದುದು ಅರ್ಥಹೀನವಾಗಿ ಕಾಣಿಸಿ, ಹುಡುಕಾಟವೇ ನಿರರ್ಥಕವೆನ್ನಿಸಿ ನಿರಾಶೆಯಾಗಬಹುದು. ಹಲವರಿಗೆ ತಾವು ಏನನ್ನು ಹುಡುಕುತ್ತಿದ್ದೇವೆ ಎನ್ನುವುದು ತಿಳಿಯದೆಯೇ ಹುಡುಕಾಟದಲ್ಲಿ ನಿರತವಾಗಿರಬಹುದು. ಹುಡುಕಾಟವಿಲ್ಲದೆ ಬದುಕೂ ಇಲ್ಲ, ಬದುಕಿನ ಕಥೆಗಳೂ ಇಲ್ಲ. ಅನಿಲ್ ಗುನ್ನಾಪೂರ ಅವರ 'ಸರ್ವೆ ನಂಬರ್- 97' ಸಂಕಲನದ ಕಥೆಗಳು ನಮ್ಮ ಮುಂದಿಡುವುದು ಭಿನ್ನ ರೂಪದ ಹುಡುಕಾಟಗಳನ್ನೇ, ಬದುಕಿನ ಕುರಿತ ಜಿಜ್ಞಾಸೆಗಳನ್ನೇ. ಬೆಳಕಿನ ಕಿಟಕಿಗಳೇ ಮುಚ್ಚಿಹೋದ ಬದುಕುಗಳು ನಡೆಸುವ ಹೋರಾಟದಂತೆ ಕಾಣಿಸುವ ಅನಿಲ್‌ರ ಕಥೆಗಳಲ್ಲಿನ ಹುಡುಕಾಟಗಳು, ಜೀವನಕ್ಕೆ ಅಗತ್ಯವಾದ ನಂಬಿಕೆ, ಅಂತಃಕರಣಗಳ ಶೋಧದಂತೆಯೂ ಕಾಣಿಸುತ್ತವೆ. ಸಂಕಷ್ಟಗಳ ಮರಳುಗಾಡಿನಲ್ಲಿ ಓಯಸಿಸ್‌ಗಳ ಹುಡುಕಾಟ ನಡೆಸುವ ಬದುಕುಗಳನ್ನು ಚಿತ್ರಿಸುತ್ತ, ನೀರಿನ ಒರತೆಗಳು ಸಿಗದೆಹೋದರೂ ಬೊಗಸೆಯಷ್ಟಾದರೂ ಜೀವಜಲವನ್ನು ಕಾಣಿಸುವುದರಿಂದಾಗಿ ಅನಿಲ್‌ರ ಕಥೆಗಳು 'ಮಾನವೀಯತೆಯ ಹುಡುಕಾಟ'ದ ಪ್ರಯತ್ನಗಳಾಗಿ ಮುಖ್ಯವೆನ್ನಿಸುತ್ತವೆ. ಬರಹಗಾರನನ್ನೂ ಮೀರಿ ಬರವಣಿಗೆ ರೂಪುಗೊಳ್ಳುವ ಮಾಂತ್ರಿಕ ಕ್ಷಣಗಳ ಬಗ್ಗೆ ಕುತೂಹಲ ಹಾಗೂ ಸಾಹಿತ್ಯದ ಬಗ್ಗೆ ಬದ್ಧತೆಯುಳ್ಳ ಬರಹಗಾರನೊಬ್ಬ ಕಥೆಗಳನ್ನು ಕಟ್ಟುವ ನಿಟ್ಟಿನಲ್ಲಿ ನಡೆಸಿದ ಪ್ರಯೋಗದ ರೂಪದಲ್ಲೂ ನೋಡಬಹುದಾದ ಕಥೆಗಳಿವು.
'ಕಲ್ಲು ಹೂವಿನ ನೆರಳು' (2021) ಕಥಾಸಂಕಲನ ಪ್ರಕಟಗೊಂಡ ಮೂರು ವರ್ಷಗಳ ನಂತರ ಅನಿಲ್ ಅವರ ಎರಡನೇ ಸಂಕಲನ ಪ್ರಕಟಗೊಳ್ಳುತ್ತಿದೆ. ಮೊದಲ ಸಂಕಲನದಲ್ಲಿ ಹುಟ್ಟಿಸಿದ್ದ ಭರವಸೆಯನ್ನು ಈ ಸಂಕಲನದ ಕಥೆಗಳು ಸುಳ್ಳು ಮಾಡುವುದಿಲ್ಲ ಎನ್ನುವುದು ಕಥೆಗಾರರಾಗಿ ಅನಿಲ್‌ರ ಬೆಳವಣಿಗೆಯನ್ನು ಸೂಚಿಸುವಂತಿದೆ. ಸಮಾಜದ ಕೆಡುಕುಗಳನ್ನು,
ಅನಾರೋಗ್ಯ ಸ್ಥಿತಿಯನ್ನು ಹೇಳುವಲ್ಲಿ ಅನಿಲ್ ಹಿಂಜರಿಯುವುದಿಲ್ಲವಾದರೂ, ಬದುಕು ಹಾಗೂ ಸಮಾಜದಲ್ಲಿ ಉಳಿದಿರಬಹುದಾದ ಒಳಿತಿನ ಬಿತ್ತಗಳನ್ನು ಕಾಣಿಸುದರಲ್ಲಿ ಅವರಿಗೆ ವಿಶೇಷ ಆಸಕ್ತಿ, ಮನುಷ್ಯನಲ್ಲಿ ಇನ್ನೂ ಉಳಿದಿರಬಹುದಾದ ಒಳ್ಳೆಯತನಲ್ಲಿ ಸರ್ವೆ ನಡೆಸುವ ಪ್ರಯತ್ನದಂತೆ ಈ ಸಂಕಲನದ ಕಥೆಗಳು ಕಾಣಿಸುತ್ತವೆ. ಇದಕ್ಕೆ ನಿದರ್ಶನದ ರೂಪದಲ್ಲಿ ಸಂಕಲನ ಶೀರ್ಷಿಕೆಯೂ ಆದ 'ಸರ್ವೆ ನಂಬರ್-9 ಹಾಗೂ 'ಆತ್ಮಸಾಕ್ಷಿ' ಕಥೆಗಳನ್ನು ಗಮನಿಸಬಹುದು.
ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಪೀರಪ್ಪ, ಬಡೇಸಾಬ್ ಎನ್ನುವ ವ್ಯಕ್ತಿಯ ಕೆಲಸವನ್ನು ವೈಯಕ್ತಿಕ ಮುತುವರ್ಜಿಯಿಂದ ಮಾಡಿಕೊಡುತ್ತಾನೆ. ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡಿಕೊಟ್ಟರೂ ಪೀರಪ್ಪನ ಜೇಬಿಗೆ ಬಡೇಸಾಬ್ ಎರಡು ಸಾವಿರ ರೂಪಾಯಿ ತುರುಕಿಹೋಗುತ್ತಾನೆ. ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾಗುವ ಪೀರಪ್ಪನನ್ನು ಅಳುಕು ಹಾಗೂ ಪಾಪಪ್ರಜ್ಞೆ ಕಾಡತೊಡಗುತ್ತದೆ. ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಕಚೇರಿಯಲ್ಲೂ ಪೀರಪ್ಪ ಒಡಕು ಮಾತನಾಡುತ್ತಾನೆ. ಹೆಂಡತಿ-ಮಗ ಅವನಿಂದ ದೂರವಾಗುತ್ತಾರೆ. ಹಟಕ್ಕೆ ಬೀಳುವ ಪೀರಪ್ಪ ಹೆಂಡತಿಗೆ ವಿಚ್ಚೇದನ ಕೊಡಲು ಮುಂದಾಗುತ್ತಾನೆ. ಕೋರ್ಟ್ ಪರಿಸರದಲ್ಲಿ ತಳ್ಳುಗಾಡಿ ಹೋಟೆಲ್ ನಡೆಸುವ ಬಡೇಸಾಬ್‌ನ ಕುಟುಂಬವನ್ನು ಕಂಡು, ಅವರ ಆತಿಥ್ಯವನ್ನು ಸವಿದು, ಪೀರಪ್ಪನ ಮನಸ್ಸು ತಿಳಿಯಾಗುತ್ತದೆ. ವಿಚ್ಛೇದನದ ಪತ್ರ ಹರಿದೆಸೆಯುತ್ತಾನೆ. ಬಡೇಸಾಬ್ ಮಗನಿಗೆ ಹಣ ಕೊಡುವುದರೊಂದಿಗೆ ಮಾನಸಿಕ ತೊಳಲಾಟದಿಂದ ಮುಕ್ತನಾಗುತ್ತಾನೆ. ಮಧ್ಯಮ ವರ್ಗದ ಜಾಗೃತ ಆತ್ಮಸಾಕ್ಷಿಯಂತೆ ಕಾಣಿಸುವ 'ಆತ್ಮಸಾಕ್ಷಿಗೆ ಹೋಲಿಸಿದರೆ 'ಸರ್ವೆ ನಂಬರ್- 97 ಹೆಚ್ಚು ಸಂಕೀರ್ಣವಾದ ರಚನೆ. ಪೀರಪ್ಪನ ಸ್ತ್ರೀರೂಪದಂತೆ ಕಾಣಿಸುವ ಪ್ರಭಾ ಎನ್ನುವ ಅಧಿಕಾರಿ ಈ ಕಥೆಯಲ್ಲಿದ್ದಾಳೆ. ಸರ್ವೆ ಕಚೇರಿಯಲ್ಲಿ ನಡೆಯುವ ಈ ಕಥೆಯಲ್ಲಿ, ಲ್ಯಾಂಬ್ಲಿನ್ ಎನ್ನುವ ವ್ಯಕ್ತಿ, 'ನಮ್ಮ ಹೊಲ ಅಳ್ಳು ಕೊಡ್ಲಾಕ ಯಾವಾಗ ಬರ್ತೀರಿ ಮೇಡಂ?' ಎಂದು ಪದೇ ಪದೇ ಮುಖಾಮುಖಿಯಾಗುತ್ತಾನೆ. ಪ್ರಭಾ ಹುಮ್ಮಸ್ಸಿನಿಂದ ಲ್ಯಾಂಬ್ಲಿನ್ ಜಮೀನಿನ ಇತಿಹಾಸ ಕೆದಕುತ್ತಾ ಹೋದಾಗ, ಬ್ರಿಟಿಷರ ಅವಧಿಯಲ್ಲಿ ನಡೆದ 'ಗ್ರೇಟ್ ಟ್ರಿಗ್ನಾಮಿಟ್ರಿಕಲ್ ಸರ್ವೆ'ಯ ರೋಚಕ ವಿವರಗಳು ತೆರೆದುಕೊಳ್ಳುತ್ತವೆ. ಆ ಸರ್ವೆಯಲ್ಲಿ ಭಾಗವಹಿಸಿ, ಬ್ರಿಟಿಷ್ ಅಧಿಕಾರಿಯಿಂದ ಚಿನ್ನದ ನಾಣ್ಯಗಳ ಇನಾಮು ಪಡೆದಿದ್ದ ವ್ಯಕ್ತಿಯೊಬ್ಬ, ತಾನು ಕಾರ್ಯ ನಿರ್ವಹಿಸಿದ್ದ ವಿಲಿಯಂ ಲ್ಯಾ೦ಬ್ಬನ್ ಅಧಿಕಾರಿಯ ಹೆಸರನ್ನು ಮಗನಿಗೆ ಇರಿಸಿದ್ದಾನೆ. ಆ ಲ್ಯಾಂಬ್ಬನ್ ಈಗ ತನ್ನ ಜಮೀನಿನ ನಕ್ಷೆಯನ್ನು ಸ್ಪಷ್ಟಪಡಿಸಿಕೊಳ್ಳಲು ಹೆಣಗುತ್ತಿರುವ ವ್ಯಕ್ತಿ. ನಿಧಿಯ ಆಸೆಗೆ ಕೆಲಸದ ಆಳುಗಳಿಂದಲೇ ಲ್ಯಾಂಬ್ಬನ್ ಕೊಲೆಯಾಗುವುದು ಹಾಗೂ ಆ ಕೆಲಸದಾಳುಗಳಿಗೇ 'ಸರ್ವೆ ನಂಬರ್- 97ನ್ನು ಆತ ಉಯಿಲು ಬರೆದಿಟ್ಟಿದ್ದ ಎನ್ನುವ ವಿವರದೊಂದಿಗೆ ಕಥೆ ಕೊನೆಗೊಳ್ಳುತ್ತದೆ. 'ಆತ್ಮಸಾಕ್ಷಿ'ಯ ಪೀರಪ್ಪನ ಮಾನಸಿಕ ಶೋಭೆಯೇನೋ ನಿವಾರಣೆಗೊಂಡಿತು. ಆದರೆ ಪ್ರಭಾಳ ಸ್ಥಿತಿ? ಲ್ಯಾಂಬ್ಬನ್‌ನ ಸಾವು ಅವಳ ಮೇಲೆ ಯಾವ ಪರಿಣಾಮ ಉಂಟುಮಾಡಬಹುದು?
ಮನುಷ್ಯನ ಒಳಿತು-ಕೆಡುಕು ಪ್ರವೃತ್ತಿಗಳ ಬಗ್ಗೆ ಗಮನಸೆಳೆಯುವ 'ಆತ್ಮಸಾಕ್ಷಿ' ಹಾಗೂ 'ಸರ್ವೆ ನಂಬರ್-97' ಕಥೆಗಳು, ಬದುಕು ಹಾಗೂ ಸಮಾಜಕ್ಕೆ ಯಾವುದು ಮುಖ್ಯ ಎನ್ನುವುದನ್ನು ಧ್ವನಿಸುವಂತಿವೆ. ಆದರೆ, ಇವೆರಡು ಕಥೆಗಳಿಗಿಂತಲೂ, ಕಟ್ಟುವಿಕೆ ಹಾಗೂ ಪರಿಣಾಮದ ದೃಷ್ಟಿಯಿಂದ 'ಲಿಂಗಾಯತ ಖಾನಾವಳಿ' ಹಾಗೂ 'ಕಸ್ತೂರಿ ಕ್ಯಾಂಟೀನ್' ಹೆಚ್ಚು ಯಶಸ್ಸು ಕಂಡಿರುವ ರಚನೆಗಳು. ವ್ಯಕ್ತಿ ಹಾಗೂ ಸಮಷ್ಟಿಯ ಅಂತಃಕರಣದ ಪಸೆಯನ್ನು ಹಂಬಲಿಸಿ ಕಥೆಗಾರರು ನಡೆಸುವ ಹುಡುಕಾಟಕ್ಕೆ ನಿದರ್ಶನದ ರೂಪದಲ್ಲಿ ಒಟ್ಟಿಗೆ ಗಮನಿಸಬಹುದಾದ ಕಥೆಗಳಿವು. ಕಾಕತಾಳೀಯ ಎನ್ನುವಂತೆ ಎರಡೂ ಕಥೆಗಳಲ್ಲಿ ಹೋಟೆಲ್‌ಗಳಿವೆ. 'ಲಿಂಗಾಯತ ಖಾನಾವಳಿ'ಯ ನಾಯಕ ಮಾದೇವ ಹಾಗೂ 'ಕಸ್ತೂರಿ ಕ್ಯಾಂಟೀನ್'ನ ಕಸ್ತೂರಿ ಇಬ್ಬರೂ ಬದುಕಿನ ಓಟದಲ್ಲಿ ಒಂಟಿಯಾಗಿ ದಿಕ್ಕೆಟ್ಟವರು. ಜಾತಿ ಕಾರಣದಿಂದಾಗಿ ಮಾದೇವ ಸಂಕಟ ಅನುಭವಿಸಿದರೆ, ಹೆಣ್ಣಾದ ಕಾರಣದಿಂದಲೇ ಕಸ್ತೂರಿ ನೋವುಣ್ಣುತ್ತಿದ್ದಾಳೆ.
ಕೊರೊನಾ ಸೋಂಕಿನಿಂದ ಅಜ್ಜಿಯನ್ನು ಕಳೆದುಕೊಂಡು ಅನಾಥನಾಗಿ ಊರು ಬಿಡುವ ಮಾದೇವನಿಗೆ ಬಾಗಲಕೋಟೆಯಲ್ಲಿ ಅನ್ನ-ನೆಲೆ ದೊರೆತಿದೆ. ಒಳ್ಳೆಯತನದಿಂದಾಗಿ ಖಾನಾವಳಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಅವನು, ಧರೆಪ್ಪನ ಮಾನಸಪುತ್ರನಂತೆ ಪ್ರಾಮಾಣಿಕವಾಗಿ ದುಡಿಯುತ್ತಾನೆ. ಹೋಟೆಲ್‌ಗೆ ಬರುವ ಅಧಿಕಾರಿಯೊಬ್ಬನಿಗೆ ಮಾದೇವನ ಪರಿಚಯ ಸಿಕ್ಕುವುದರೊಂದಿಗೆ ಕಥೆ ಬೇರೊಂದು ಮಜಲಿಗೆ ಹೊರಳುತ್ತದೆ. ಬಾಲ್ಯದಲ್ಲಿ ಟೀವಿ ನೋಡಲು ಸಾಹುಕಾರರ ಮನೆಗೆ ಹೋಗುತ್ತಿದ್ದ ಮಾದೇವ, ಒಂದು ದಿನ ಚಪ್ಪಲಿ ಹಾಕಿಕೊಂಡಿರುವುದು ಸಾಹುಕಾರನ ಕಣ್ಣಿಗೆ ಕಳ್ಳತನವಾಗಿ ಕಾಣಿಸಿ, ಪೆಟ್ಟು ತಿಂದಿದ್ದಾನೆ. ಈಗ ಹೋಟೆಲ್‌ನಲ್ಲಿ ಬಾಲ್ಯದ ಮಾಯದ ಗಾಯ ಮತ್ತೆ ಹಸಿಯಾಗಿದೆ ಹಾಗೂ ಜಾತಿಯ ವಿಷವನ್ನು ಮಾದೇವ ಮತ್ತೆ ಎದುರಿಸಬೇಕಾಗಿದೆ. ಆದರೆ, ಕಥೆಯ ಕೊನೆಯಲ್ಲಿ ಧರೆಪ್ಪ ತೆಗೆದುಕೊಳ್ಳುವ 'ನಮ್ಮ ನೆಮ್ಮದಿ ಕೆಡಸ್ಲಾಕ ಯಾಕ ಬರ್ತೀರಿ… ನಿಮ್ಮಂಥವರು ನಮ್ಮ ಖಾನಾವಳಿಗೆ ಬರೋದೆ ಬ್ಯಾಡ... ಹೋಗು ಮೊದ್ದ' ಎನ್ನುವ ನಿರ್ಧಾರ ಮಾದೇವನ ಬದುಕಿಗೆ ಸಂದ ಪ್ರಮಾಣಪತ್ರದಂತೆ ಕಾಣಿಸುತ್ತದೆ. ವ್ಯಾಪಾರಕ್ಕಿಂತಲೂ ಅಂತಃಕರಣವೇ ಮುಖ್ಯ ಎಂದು ಧರೆಪ್ಪ ಭಾವಿಸುವುದು ಹಾಗೂ ಅವನ ಬಾಯಲ್ಲಿ ಮಾದ್ಯಾ ಮಾದೇವ ಆಗುವುದು, ಮನುಷ್ಯ ಮನುಷ್ಯನ ನಡುವಿನ ನಂಬಿಕೆ ಉಳಿಸುವ ನಡೆಗಳಾಗಿ ಮುಖ್ಯವೆನ್ನಿಸುತ್ತವೆ. ಆದರೆ, ಧರೆಪ್ಪನ ಒಳ್ಳೆಯತನ ಮಾದೇವನ ನಾಳೆಗಳಿಗೆ ಆಸರೆಯಾಗುತ್ತದೆಂದು ಹೇಳಲಾಗದು. ಅಂಥ ಹುಸಿ ಭರವಸೆಯನ್ನು ಕಥೆಯೂ ಕಟ್ಟಿಕೊಡುವುದಿಲ್ಲ. ಹೊರಗಿನ ವ್ಯಕ್ತಿಯ ಸಂದರ್ಭದಲ್ಲಿ ಮಾದೇವನ ಪರವಾಗಿ ಧರೆಪ್ಪ ನಿಂತರೂ, ಮಗನ ಸಂದರ್ಭದಲ್ಲಿ ಮೌನವಾಗುಳಿಯುತ್ತಾನೆ ಮಾದೇವನ ಬದುಕು ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿಯುತ್ತದೆ.
ಮಾದೇವನ ಸಮಸ್ಯೆಗಳಿಗೆ ಹೋಲಿಸಿದರೆ ಕಸ್ತೂರಿಯ ಸಂಕಟಗಳು ಮತ್ತೂ ತೀವ್ರವಾದವು, ಕ್ಯಾಂಟೀನ್ ನಡೆಸುವ ಮೂಲಕ ಸ್ವಂತ ಬದುಕು ಕಂಡುಕೊಂಡಿದ್ದ ಕಸ್ತೂರಿಯನ್ನು, ದೂರದ ನುಣ್ಣನೆ ಬೆಟ್ಟ ತೋರಿಸಿ ರಾಜಸ್ಥಾನಕ್ಕೆ ಮದುವೆ ಮಾಡಿಕೊಡಲಾಗಿದೆ. ಅಪರಿಚಿತ ಭಾಷೆ ಮತ್ತು ಅಪರಿಚಿತ ಜನರ ನಡುವೆ ಕಸ್ತೂರಿ ಅನುಭವಿಸಿರಬಹುದಾದ ತಲ್ಲಣಗಳು ಊಹೆಗೆ ನಿಲುಕುವಂತಹವಲ್ಲ. ಜೈಲಿನಂಥ ಪರಿಸರದಲ್ಲಿ ಕಸ್ತೂರಿಯ ಮನಸ್ಸನ್ನು ಓದುವ ಪ್ರಯತ್ನವನ್ನೇ ನಡೆಸದ ಗಂಡ, ಅವಳ ದೇಹದೊಂದಿಗೆ ಮಾತ್ರ ಮಾತನಾಡುತ್ತಾನೆ. ಮುಂದೊಂದು ದಿನ ಎಲ್ಲವೂ ಬದಲಾಗಬಹುದು ಎನ್ನುವ ಭಾರತೀಯ ಹೆಣ್ಣಿನ ನಿರೀಕ್ಷೆಯಲ್ಲಿ ಗಂಡನ ಮೃಗೀಯ ವರ್ತನೆಯನ್ನು ಸಹಿಸಿಕೊಳ್ಳುವ ಕಸ್ತೂರಿ. ನಿಜವಾಗಲೂ ಹೌಹಾರುವುದು ಮೈದುನನನ್ನು ಎದುರಿಸಬೇಕಾದಾಗ, ಹೆಂಡತಿಯನ್ನು ಬಯಸಿದ ಸಹೋದರನನ್ನು ದಂಡಿಸಬೇಕಾದ ವ್ಯಕ್ತಿ ಕಸ್ತೂರಿಯನ್ನೇ ಗಾಸಿಗೊಳಿಸುತ್ತಾನೆ. 'ಮೈದುನನನ್ನು ಒಪ್ಪಿಕೋ' ಎಂದು ಮನೆಯಲ್ಲಿನ ಅಜ್ಜಿಯೂ ಒತ್ತಾಯಿಸುತ್ತಾಳೆ. ಬಯಲಿನಿಂದ ಕಿವಿಗೆ ಬೀಳುವ ಕನ್ನಡ ಶಬ್ದಗಳ ಬೆನ್ನತ್ತುವ ಕಸ್ತೂರಿ ಕೊನೆಗೂ ಗಂಡನಮನೆಯ ಸೆರೆಯಿಂದ ತಪ್ಪಿಸಿಕೊಂಡು ತವರಿಗೆ ಬಂದರೆ ಅಲ್ಲಿರುವುದಾದರೂ ಏನು? ಕುಟುಂಬದ ಒಬ್ಬರೂ ಅಲ್ಲಿಲ್ಲ. ಕ್ಯಾಂಟೀನ್ನ ಪಳೆಯುಳಿಕೆಗಳಷ್ಟೇ ಉಳಿದಿವೆ. ತಾನು ಬೆಳೆದ ನೆಲದಲ್ಲಿ ಅಪರಿಚಿತಳಂತೆ ನಿಲ್ಲುವ ಕಸ್ತೂರಿ ಮತ್ತೆ ಆತಂತ್ರಳಾಗಿ ನಿಲ್ಲುತ್ತಾಳೆ. ಕಸ್ತೂರಿಯೆದುರು ಮಾದೇವ ಅದೃಷ್ಟವಂತನಂತೆ ಕಾಣಿಸಿದರೂ, ಇಬ್ಬರೂ ಒಂದೇ ದೋಣಿಯ ಪಯಣಿಗರೂ ಹೌದು. ಓದಿನ ನಂತರವೂ ಬೆಳೆಯುವ, ಕಾಡುವ ಮಾದೇವ, ಕಸ್ತೂರಿಯರು ಆಯಾ ಕಥೆಗಳ ಹೊಳಪು ಹೆಚ್ಚಿಸಿದ್ದಾರೆ.
ಕಸ್ತೂರಿ, ಮಾದೇವನಿಗಿಂತಲೂ 'ಹಳದಿ ಬಣ್ಣದ ಹರಳಿನುಂಗುರ' ಕಥೆಯ ನೀಲವ್ವನ ಬದುಕು ಮತ್ತೂ ದಾರುಣವಾದುದು. ಬದುಕಿನ ಕುರಿತು ನೀಲವ್ವನಿಗಿರುವ ತಿಳಿವಳಿಕೆ ಹಾಗೂ ಪ್ರೌಢತೆ ಅವಳ ಗಂಡನಿಗಿಲ್ಲ. ಮಗನಿಗೂ ಇಲ್ಲ. ರಾಜಕೀಯವಾಗಿ ಮುಂದೆ ತರುವೆನೆಂದು ಆಮಿಷವೊಡ್ಡುವ ಗ್ರಾಮಪಂಚಾಯಿತಿ ಮೆಂಬರ್ ಕಾಶೀರಾಯಗೌಡನ ಅಸಲಿಯತ್ತನ್ನು ಆಕೆ ಬಲ್ಲಳು. ತನ್ನ ಸಂಕಷ್ಟಗಳಿಗೆಲ್ಲ ಮಗ ಪುಟ್ಟಪ್ಪ ಡಾಕ್ಟರ್ ಆಗುವುದೇ ಪರಿಹಾರ ಎಂದುಕೊಂಡಿರುವ ಗಂಡ ದ್ಯಾಮಣ್ಣನ ನಂಬಿಕೆ ಹಾಗೂ ಓದಿನ ಕುರಿತಂತೆ ಮಗನ ಬದ್ಧತೆಯ ಕುರಿತು ಅವಳಿಗೆ ಅನುಮಾನವಿದೆ. ಜ್ಯೋತಿಷಿಯೊಬ್ಬನಿಂದ ಪಡೆದ ಹಳದಿ ಬಣ್ಣದ ಹರಳಿನ ಉಂಗುರ ತೊಟ್ಟು ಶ್ರೀಮಂತಿಕೆಯ ಕನಸು ಕಾಣುವ ದ್ಯಾಮಣ್ಣ ಕಷ್ಟಪಟ್ಟು ದುಡಿದರೂ, ಅದೃಷ್ಟದ ಹುಡುಕಾಟದಲ್ಲಿ ನೆಮ್ಮದಿ ಕಳೆದುಕೊಂಡಿದ್ದಾನೆ. ದ್ಯಾಮಣ್ಣ ಆಶ್ರಯ ಕೊಡುವ ಸಾಧುವೇ ಅವನಿಗೆ ವಂಚಿಸುತ್ತಾನೆ. ಸಾಧುವಿನ ಧೂರ್ತತನ ಪತ್ತೆಹಚ್ಚಿದ ಪುಟ್ಟಪ್ಪನ ಕೊಲೆಯಾಗುತ್ತದೆ. ಹಳ್ಳಿ ಜನರ ಮುಗ್ಧತೆ, ಮೌಡ್ಯ, ರಾಜಕೀಯ, ಎಲ್ಲವನ್ನೂ ಕಥೆ ಕಟ್ಟಿಕೊಡುತ್ತದೆ. ಗಂಡನ ಸೋಲು ಹಾಗೂ ಮಗನ ಸಾವು ಎರಡನ್ನೂ ಸಂಭಾಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ನೀಲವ್ವನ ಓದುಗರ ಮನಸ್ಸಿನಲ್ಲಿ ವಿಷಾದವನ್ನು ಮೂಡಿಸುವಷ್ಟು ಪ್ರಭಾವಿಯಾಗಿದ್ದಾಳೆ.
'ಸರ್ವೆ ನಂಬರ್- 97' ಸಂಕಲನದ ಎಲ್ಲ ಕಥೆಗಳು ಹಾಗೂ ಕಥೆಗಾರರಾಗಿ ಅನಿಲ್ ಗುನ್ನಾಪೂರ ಅವರ ಹುಡುಕಾಟದ ಸಂಕೇತದ ರೂಪದಲ್ಲಿ 'ಕಸ್ತೂರಿ ಕ್ಯಾಂಟೀನ್' ಕಥೆಯಲ್ಲಿನ ವಿಶಿಷ್ಟ ಪ್ರಸಂಗವೊಂದನ್ನು ಗುರ್ತಿಸಬಹುದು. ದೂರದ ನಾಡಿನಲ್ಲಿ ಸೆರೆಯಾಳಿನಂತೆ ಬದುಕುತ್ತಿರುವ ಕಸ್ತೂರಿ, ಇಂಗ್ಲಿಷ್ ಅಕ್ಷರಗಳನ್ನು ಓದಲು ಸಾಧ್ಯವಾದರೂ ಊರಿನ ಹೆಸರನ್ನು ಉಚ್ಚರಿಸಲಾಗದೆ ಒದ್ದಾಡುತ್ತಾಳೆ. ಅಕ್ಷರಗಳು ಕಲಸುಮೇಲೋಗರವಾಗಿ ಅವಳಿಗೆ ಕಾಣಿಸುತ್ತಿವೆ. ಪದವಾಗಿ ಜೋಡಿಸಿಕೊಳ್ಳಲಾಗದ ಆ ಅಕ್ಷರಗಳು ಕಸ್ತೂರಿಯ ಬದುಕಿನ ಜೋಡಣೆಯೂ ಅಯೋಮಯ ಹಾಗೂ ಅಪೂರ್ಣವಾಗಿರುವುದನ್ನು ಸೂಚಿಸುವಂತಿವೆ. ಕಿವಿಗೆ ಬೀಳುವ ಕನ್ನಡದ ಶಬ್ದಗಳು ಅವಳಿಗೆ ಬಿಡುಗಡೆಯ ಬೆಳಕಿನ ರೂಪದಲ್ಲಿ ಒದಗಿಬರುತ್ತವೆ. ತನ್ನದಲ್ಲದ ಭಾಷೆಯ ಅಕ್ಷರಗಳು ಉಂಟುಮಾಡುವ ಮಬ್ಬಿಗೆ ಉತ್ತರವಾಗಿ ತಾಯ್ಯುಡಿಯ ಶಬ್ದಗಳು ಒದಗಿಬರುತ್ತವೆ. ಈ ಘಟನೆ ಕಥೆಯಾಚೆಗೂ ಅರ್ಥಗಳನ್ನು ಬಿಟ್ಟುಕೊಡುವ ರೂಪಕದಂತಿದೆ. ಭಾಷೆ ಮತ್ತು ಬದುಕಿನ 'ಸಂಬಂಜ'ವನ್ನು ಕಾಣಿಸುವ ಸಾಹಿತ್ಯ ಬದುಕೂ ಹೌದು, ಸಮಾಜವೂ ಹೌದು ಎನ್ನುವುದನ್ನು ಸೂಚಿಸುವಂತಿರುವ ಕಸ್ತೂರಿ ಕಥೆಯ ಪ್ರಸಂಗ, ಕಥನ ಕ್ರಿಯೆಗೂ ಬರವಣಿಗೆಯ ತವಕ ತಲ್ಲಣಕ್ಕೂ ಅನ್ವಯಿಸುವಂತಿದೆ; ಬದುಕಿನ ಅಸ್ಪಷ್ಟ ಸಂಗತಿ- ವಿಚಾರಗಳನ್ನು ಬರಹಗಾರನೊಬ್ಬ ಕಥೆಯ ರೂಪದಲ್ಲಿ ಹಿಡಿಯಲು ಪ್ರಯತ್ನಿಸಿದಾಗಿನ ಸೋಲು ಗೆಲುವಿನ ಕುರಿತು ಹೇಳುವಂತಿದೆ. ಚೆಲ್ಲಾಪಿಲ್ಲಿ ಬಿಂಬಗಳನ್ನು ಜೋಡಿಸುತ್ತ, ಅವುಗಳ ಮೂಲಕ ಯಾವುದೋ ಅರ್ಥ ಹೊರಡಿಸುತ್ತ, ಬದುಕಿನ ಸಾರ್ಥಕ ಹಾಗೂ ವಿಫಲ ಕ್ಷಣಗಳನ್ನು ಅರಿಯುವ ಹಾಗೂ ನಿವೇದಿಸುವ ಪ್ರಯತ್ನಗಳ ರೂಪದಲ್ಲಿ 'ಸರ್ವೆ ನಂಬರ್- 97' ಮುಖ್ಯವೆನ್ನಿಸುತ್ತದೆ.
ಅನಿಲ್‌ರ ಕಥೆಗಳನ್ನು ಮೆಚ್ಚಿಕೊಳ್ಳುತ್ತಲೇ ಕೆಲವು ಕಥೆಗಳು ಉಳಿಸುವ ಅಸಮಾಧಾನದ ಬಗ್ಗೆಯೂ ಹೇಳಬೇಕು. ಬೆಂಗಳೂರಿನ ಯಶವಂತಪುರದ ರೈಲ್ವೆ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಎದುರಾಗುವ ಬಾಲ್ಯದ ಗೆಳೆಯ ದುಡ್ಡಿಗಾಗಿ ಕೈ ಚಾಚಿದಾಗ, ರೈಲು ಚಲಿಸಿದ್ದರಿಂದಾಗಿ ನೂರರ ನೋಟು ಕೊಡಲು ಸಾಧ್ಯವಾಗದೆ 'ಗೋಲ್ ಗುಂಬಜ್ ಎಕ್ಸ್‌ಪ್ರೆಸ್' ಕಥೆಯ ನಾಯಕನನ್ನು ಆವರಿಸುವ ವಿಷಣ್ಣತೆ ಓದುಗರದೂ ಆಗುತ್ತದೆ. ರೈಲು ಪ್ರಯಾಣ ಸಂದರ್ಭದ ನೆಪದಲ್ಲಿ ಹಲವು ಮನೋಲೋಕಗಳ ಬಗ್ಗೆ ಗಮನಸೆಳೆಯುವ, ಹಿಜ್ಜಾಗಳ ಬಗ್ಗೆ ಸಹಾನುಭೂತಿಯಿಂದ ವರ್ತಿಸುವ ಮೂಲಕ ಗಮನಸೆಳೆದರೂ, ಈ ಕಥೆ ಅಪೂರ್ಣ ಕಲಾಕೃತಿಯಂತೆ ಕಾಣಿಸುತ್ತದೆ. ಕಥೆಯ ಕೇಂದ್ರ ಬದಲಾಗುತ್ತಲೇ ಹೋಗುವ 'ಹಳದಿ ಬಣ್ಣದ ಹರಳಿನುಂಗುರ' ಮತ್ತಷ್ಟು ಸಾಂದ್ರತೆ ಸಾಧಿಸಬೇಕಾಗಿದ್ದ ಕಥೆ. ಪ್ರಯೋಗಗಳ ರೂಪದಲ್ಲಿ ನೋಡಬಹುದಾದ ಈ ಕಥೆಗಳ ಸಾಧ್ಯತೆಗಳ ಬಗ್ಗೆ ಯೋಚಿಸುತ್ತಲೇ ‘ಲಿಂಗಾಯತ ಖಾನಾವಳಿ' ಮತ್ತು 'ಕಸ್ತೂರಿ ಕ್ಯಾಂಟೀನ್' ಕಥೆಗಳಲ್ಲಿ ಅನಿಲ್ ಸಾಧಿಸಿರುವ ಯಶಸ್ಸು ಗಮನಾರ್ಹವಾದುದು, ಅಭಿನಂದನೆಗೆ ಅರ್ಹವಾದುದು.
ಬದುಕಿನ ವಿಶೇಷ ಇಲ್ಲವೇ ವಿಲಕ್ಷಣ ಕ್ಷಣಗಳ ವಿನ್ಯಾಸವನ್ನು ನಿರೂಪಿಸಿ. ಓದುಗರನ್ನು ಬೆರಗುಗೊಳಿಸುವ ಬೆಚ್ಚಿಬೀಳಿಸುವ ಜನಪ್ರಿಯ ಕಥನಕ್ರಮದಿಂದ, ಬದುಕಿನ ಹಲವು ಮಗ್ಗುಲುಗಳನ್ನೂ ವಿರೋಧಾಭಾಸಗಳನ್ನೂ ಕಾಣಿಸುವ ಸಾಧ್ಯತೆಯತ್ತ ಅನಿಲ್ ಗುನ್ನಾಪೂರ ಸಾಗುತ್ತಿರುವುದಕ್ಕೆ ಈ ಸಂಕಲನದ ಕಥೆಗಳು ಉದಾಹರಣೆಯಂತಿವೆ. ಶ್ರಮ ಹಾಗೂ ಕಸುಬುದಾರಿಕೆಯನ್ನು ಅಪೇಕ್ಷಿಸುವ 'ಕಾಣಿಸುವ ಕಥನ' ಮಾರ್ಗದಲ್ಲಿ ಅನಿಲ್ ನಡೆಯುತ್ತಿದ್ದಾರೆ. ತಾವೇ ಆಯ್ದುಕೊಂಡಿರುವ ಸವಾಲಿನ ಮಾರ್ಗದಲ್ಲಿ ಅವರು ಬಹುದೂರ ನಡೆಯಲಿ, ಆ ನಡಿಗೆಯ ನೋಟಗಳು ಸಹೃದಯರಿಗೆ ದೊರೆಯಲಿ ಎಂದು ಆಶಿಸುವೆ. 'ಕಲ್ಲು ಹೂವಿನ ನೆರಳು' ಸಂಕಲನದ ಮೂಲಕ ಓದುಗರ ಮೆಚ್ಚುಗೆ ಪಡೆದಿರುವ ಯುವಮಿತ್ರ ಅನಿಲ್‌ಗೆ, 'ಸರ್ವೆ ನಂಬರ್- 97' ಎಲ್ಲ ರೀತಿಯ ಯಶಸ್ಸನ್ನು ತರಲಿ ಎಂದು ಪ್ರೀತಿಯಿಂದ ಹಾರೈಸುವೆ.
- ರಘುನಾಥ ಚ.ಹ
“ಅವರ ವೈಯಕ್ತಿಕ ಜೀವನ ಯಾತ್ರೆಯ ವಿವರಗಳು ಯಥಾವತ್ತಾಗಿ ದಾಖಲಾಗಿದೆ, ಬಾಲ್ಯದ, ಯೌವನದ, ವೃತ್ತಿ ವಿಲಾಸದ ನಂತರದ ಇಲ...
“ಇದು ನನ್ನ ಅಂತರಂಗದ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿದ ಕೃತಿ. ಜೊತೆಗೆ ನಾವು ಭೇಟಿಯಿತ್ತ ಸ್ಥಳಗಳ ಬಗೆಗಿನ ಮಾಹಿ...
“ಜಗತ್ತಿನ ಎಂಟು ಧರ್ಮಗಳು ಪ್ರತಿಪಾದಿಸಿದ ದೇವರು, ಜಗತ್ತು, ಜೀವ, ಸ್ವರ್ಗ- ನರಕಗಳ ಪರಿಕಲ್ಪನೆ, ಕರ್ಮ-ಪುನರ್ಜನ್ಮ...
©2024 Book Brahma Private Limited.