"ನಾಗಶ್ರೀ ಅವರ ಕವಿತೆಗಳ ಆಶಯ, ವಿಷಯ ಸೊಗಸಾಗಿದೆ. ಅಲ್ಲಿ ಮನೆ, ಮಳೆ, ದೀಪಾವಳಿ, ಸಂಕ್ರಾಂತಿ, ಅಮ್ಮ, ಅಪ್ಪ, ಸಂಗಾತಿ, ಎಲ್ಲರೂ ಪಾತ್ರಗಳಾಗಿ, ಚಿತ್ರಗಳಾಗಿ ಕಾಣುತ್ತಾರೆ, ಕಾಡುತ್ತಾರೆ. ಆಯಾ ಕವಿತೆಗೆ ಬೇಕಾದಷ್ಟೇ ಬಳಸಿದ ಭಾವುಕತೆ, ಅಮಾಯಕತೆ, ಸಹಜತೆ, ಸರಳತೆ, ಮೋಹಕತೆ, ರಸಿಕತೆಗಳೆಲ್ಲಾ ಒಟ್ಟಾರೆ ಕವಿತೆಯ ಓಘಕ್ಕೆ ಇಂಬು ಕೊಡುತ್ತಾ ಸಾಗುತ್ತೆ," ಎನ್ನುತ್ತಾರೆ ಟಿ.ಜಿ.ನಂದೀಶ್, ತೀರ್ಥಹಳ್ಳಿ. ಅವರು ನಾಗಶ್ರೀ ಅಜಯ್ ಅವರ ‘ನಾಲ್ಕು ಋತುಗಳ ಹುಡುಗಿ’ ಕೃತಿ ಕುರಿತು ಬರೆದ ವಿಮರ್ಶೆ.
ನಾಗಶ್ರೀ ಅಜೇಯ್ ಅವರ ಒಂದಷ್ಟು ಬರವಣಿಗೆಯನ್ನು ಫೇಸ್ ಬುಕ್‌ನಲ್ಲಿ ನೋಡಿ, ಓದಿ ಮೆಚ್ಚಿದ್ದೆ. ಒಂದು ದಿನ ತಮ್ಮ ಹೊಸ ಕವನ ಸಂಕಲನದ ಕುರಿತು ಪೋಸ್ಟ್ ಹಾಕಿದ್ದರು. ಸಂಕಲನದ ಹೆಸರು 'ನಾಲ್ಕು ಋತುಗಳ ಹುಡುಗಿ'.
ಈ ಶೀರ್ಷಿಕೆ ಕೇಳಿದೊಡನೆಯೇ ಒಂದು ಕುತೂಹಲ ಹುಟ್ಟಿತ್ತು.
5G ಯುಗದಲ್ಲಿ, ರೀಲ್ಸ್, ವ್ಲಾಗ್, ಸ್ನಾಪ್ ಸ್ಟ್ರೀಕ್ ಲೋಕದಲ್ಲಿ ಬಹುತೇಕರು ಮುಳುಗಿರುವಾಗ ಇಂದು ಕವಿತೆಗಳನ್ನು ಓದುವರೆಲ್ಲಿರಬಹುದು ಎಂದನಿಸುತ್ತದೆ. ಆದರೆ ಇಂಥದೊಂದು ಚೆಂದದ ಕವನ ಓದಿದಾಗ ಕವಿತೆಗೂ ಸಾವಿಲ್ಲ, ಓದುಗರಿಗೂ ಕೊನೆಯಿಲ್ಲ ಎಂದನಿಸುತ್ತೆ.
ನಾಗಶ್ರೀ ಅವರ ಕವಿತೆಗಳ ಆಶಯ, ವಿಷಯ ಸೊಗಸಾಗಿದೆ. ಅಲ್ಲಿ ಮನೆ, ಮಳೆ, ದೀಪಾವಳಿ, ಸಂಕ್ರಾಂತಿ, ಅಮ್ಮ, ಅಪ್ಪ, ಸಂಗಾತಿ, ಎಲ್ಲರೂ ಪಾತ್ರಗಳಾಗಿ, ಚಿತ್ರಗಳಾಗಿ ಕಾಣುತ್ತಾರೆ, ಕಾಡುತ್ತಾರೆ. ಆಯಾ ಕವಿತೆಗೆ ಬೇಕಾದಷ್ಟೇ ಬಳಸಿದ ಭಾವುಕತೆ, ಅಮಾಯಕತೆ, ಸಹಜತೆ, ಸರಳತೆ, ಮೋಹಕತೆ, ರಸಿಕತೆಗಳೆಲ್ಲಾ ಒಟ್ಟಾರೆ ಕವಿತೆಯ ಓಘಕ್ಕೆ ಇಂಬು ಕೊಡುತ್ತಾ ಸಾಗುತ್ತೆ. ಬಣ್ಣಗಳನ್ನು ಭಾವದೊಂದಿಗೆ, ಪ್ರಕೃತಿಯೊಂದಿಗೆ ಸಮೀಕರಿಸಿ ಕವಿತೆ ಕಟ್ಟುತ್ತಾರೆ. ಮನೆಯ ಪಾತ್ರೆ ಪಗಡೆ ತಟ್ಟೆ ಲೋಟಗಳೆಲ್ಲವು ಇವರ ಕವಿತೆಗಳಿಗೆ ಸಿಕ್ಕ ಚೆಂದದ ಸರಕಾಗಿದೆ.
ಮಳೆಯಲ್ಲಿ ನೆಂದು ಜ್ವರದೊಂದಿಗೆ ಮನೆಗೆ ಮರಳಿದ ಕವಿತೆ ಆಪ್ತ ಅನಿಸುತ್ತದೆ. ಮಳೆಗಾಲ, ಚಳಿಗಾಲಗಳೆಲ್ಲವು ಕವಿತೆಗಳಾಗಿ ಈ ಸಂಕಲನದಿ ಉಸಿರಾಡುತ್ತೆ. ಅದು ಈ ಸಂಕಲನದ ಪದಜೀವಂತಿಕೆಗೆ ಸಾಕ್ಷಿ. ಬೇಕಂತಲೇ ನಾನು ಕವಿತೆಯ ಸಾಲುಗಳನ್ನು ಇಲ್ಲಿ ಬರೆದಿಲ್ಲ. ಆ ಕವಿತೆ ನೀಡುವ ಭಾವವನ್ನು ಓದುಗರು ಓದೇ ಸವಿದರೆ ಚೆಂದ.
ಕವಿತೆಗಳ ಜೊತೆಗೆ ಕ್ಷಣ ಕಳೆಯ ಬಯಸುವವರಿಗೆ, ಕವಿತೆ ಓದುತ್ತಾ ಮೈಮರೆಯುವ ಮನಸುಳ್ಳವರಿಗೆ ಈ ಸಂಕಲನ ಇಷ್ಟವಾಗುತ್ತೆ ಅನ್ಸುತ್ತೆ.
ನನಗಂತು ಓದುವಾಗ ಹಿತಾನುಭವ ಕೊಟ್ಟ ಸಂಕಲನವಿದು.
“ನೈತಿಕ ಬದುಕು ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಕುರಿತು ಯೋಗಮಾರ್ಗದಲ್ಲಿ ನಡೆಯಲು ಈ ಪುಸ್ತಕ ಮಾರ್ಗದರ್ಶನ ಮಾ...
"ಆ ರಾತ್ರಿ ನಡೆದದ್ದು ಏನು?: ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿ ಕ...
"'ರೆಕ್ಕೆಯಿಲ್ಲದ ಹಕ್ಕಿ ' ಶೆಲತ್ ಅವರ ಆಯ್ದ ಕತೆಗಳ ಸಂಗ್ರಹ. ಕನ್ನಡಕ್ಕೆ ಅನುವಾದ ಮಾಡಿದ್ದು ಅಗ್ರಹಾರ ಕ...
©2025 Book Brahma Private Limited.