ಮೊಸಳೆ ಸೆರೆ ಹಿಡಿದ ಪ್ರಸಂಗ


"ನನ್ನ ಗಸ್ತಿಗೆ ಬಂದ ಹೊಸತರಲ್ಲಿ ವಾಚರುಗಳಿಬ್ಬರು ನನ್ಮುಂದೆ "ಈ ಗಸ್ತಿನ ವ್ಯಾಪ್ತಿಯಲ್ಲಿ ಮೊಸಳೆ ಕಾಟ ಜಾಸ್ತಿ, ನಾವು ಈ ಮೂರ್ನಾಲ್ಕು ವರುಷಗಳಲ್ಲಿ ಹಲವಾರು ಮೊಸಳೆಗಳನ್ನು ಸೆರೆಹಿಡಿದಿದ್ದೇವೆ" ಹೆಮ್ಮೆಯಿಂದ ಹೇಳಿದ್ದರು. ಅವರು ನೀಡಿದ ಮೊಸಳೆಗಳ ಸಂಖ್ಯೆಯೇ ನನಗೆ ಬಾಯ್ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತ್ತು. ಎಲ್ಲರಂತೆ ಮೊಸಳೆಯ ಬಗ್ಗೆ ಭಯವಿರುವ ನನಗೆ ಅವುಗಳನ್ನು ಇವರು ಹೇಗಾದರೂ ಹಿಡಿಯುತ್ತಾರೆಂಬ ಕುತೂಹಲ," ಎನ್ನುತ್ತಾರೆ ಶ್ರೀಧರ ಪತ್ತಾರ. ಅವರು ‘ಮೊಸಳೆ ಸೆರೆ ಹಿಡಿದ ಪ್ರಸಂಗ’ ಕುರಿತು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ನಾನು ಬಂಡೀಪುರದಲ್ಲಿದ್ದಾಗ ಹುಲಿ, ಚಿರತೆ, ಆನೆ, ಕಾಟಿ, ಜಿಂಕೆಯಂತಹ ಪ್ರಾಣಿಗಳನ್ನು ಹೆಚ್ಚಾಗಿ ಕಂಡದ್ದೇನೋ ನಿಜ ಆದರೆ, ಮೊಸಳೆಗಳನ್ನು ಕಂಡದ್ದು ವಿರಳ. ಅಲ್ಲಿಂದ ವರ್ಗಾವಣೆಗೊಂಡು ಮಮದಾಪುರಕ್ಕೆ ಬಂದಾಗ ಮೊಸಳೆ ಸೆರೆಹಿಡಿವ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗುತ್ತೇನೆಂದು ಯೋಚಿಸಿರಲಿಲ್ಲ.

ನನ್ನ ಗಸ್ತಿಗೆ ಬಂದ ಹೊಸತರಲ್ಲಿ ವಾಚರುಗಳಿಬ್ಬರು ನನ್ಮುಂದೆ "ಈ ಗಸ್ತಿನ ವ್ಯಾಪ್ತಿಯಲ್ಲಿ ಮೊಸಳೆ ಕಾಟ ಜಾಸ್ತಿ, ನಾವು ಈ ಮೂರ್ನಾಲ್ಕು ವರುಷಗಳಲ್ಲಿ ಹಲವಾರು ಮೊಸಳೆಗಳನ್ನು ಸೆರೆಹಿಡಿದಿದ್ದೇವೆ" ಹೆಮ್ಮೆಯಿಂದ ಹೇಳಿದ್ದರು. ಅವರು ನೀಡಿದ ಮೊಸಳೆಗಳ ಸಂಖ್ಯೆಯೇ ನನಗೆ ಬಾಯ್ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತ್ತು. ಎಲ್ಲರಂತೆ ಮೊಸಳೆಯ ಬಗ್ಗೆ ಭಯವಿರುವ ನನಗೆ ಅವುಗಳನ್ನು ಇವರು ಹೇಗಾದರೂ ಹಿಡಿಯುತ್ತಾರೆಂಬ ಕುತೂಹಲ. ಅದಾದ ಮೇಲೆ ಒಂದರನಂತರ ಒಂದು ಅಂತಹ ಪ್ರಸಂಗಗಳು ಬಂದೇ ಬಂದವು. ಅನಿವಾರ್ಯವಾಗಿ ನಾನೂ ಅದರ ಒಂದು ಭಾಗವಾಗಬೇಕಾಯ್ತು. ವಿಜಯಪುರ ವಲಯದ ಇತರ ಗಸ್ತಿನಲ್ಲಿ ಮೊಸಳೆ ಪ್ರಕರಣಗಳು ವರದಿಯಾದುದು ಕಡಿಮೆ. ಆದರೆ ಮಮದಾಪುರ ಗಸ್ತು ಮಾತ್ರ ಮೊಸಳೆಗಳಿಗೆ ಹಾಟ್'ಸ್ಪಾಟ್. ಇದಕ್ಕೆ ಕಾರಣವೂ ಉಂಟು.

ಚಳಿಗಾಲ ಕಳೆದು ಬೇಸಗೆಯ‌ ಬಿಸಿಲು ಮೈಚಾಚುವ ಹೊತ್ತಿಗೆ ಈ ಭಾಗದಲ್ಲಿ ಹರಿದಿರುವ ಕೃಷ್ಟಾನದಿ ಬಹುತೇಕ ಬತ್ತಿಹೋಗುತ್ತದೆ. ನೀರು ಕಡಿಮೆಯಾಗಿ, ಆವಾಸ ಸ್ಥಾನ, ಆಹಾರದ ಕೊರತೆ ಉಂಟಾಗುತ್ತಲೇ ಮೊಸಳೆಗಳು ಸಹಜವಾಗಿಯೇ ನದಿಯ ಹತ್ತಿರದ ನೀರಿನ ಮೂಲ ಹುಡುಕಿಕೊಂಡು ಹೊರಡುತ್ತವೆ. ಊರುಗಳಂಚಿನ ನಲ್ಲಿರುವ ಕೆರೆ, ಹೊಂಡ, ರೈತರ ಬಾವಿಗಳು, ಕೃಷಿಹೊಂಡಗಳು ಇವುಗಳಿಗೆ ಸುರಕ್ಷಿತ ಜಾಗಗಳು. ಅವುಗಳಲ್ಲಿರುವ ಅಷ್ಟಿಷ್ಟು ಸಿಗುವ ಮೀನುಗಳು ಇವುಗಳ ಹೊಟ್ಟೆ ತುಂಬಿಸುತ್ತಿದ್ದವು. ದನಗಳ ಸಗಣಿಯೂ ಅದಕ್ಕೆ ಅಚ್ಚುಮೆಚ್ಚು ಎಂಬುದು ಬಹುತೇಕರ ನಂಬಿಕೆ. ಸಾಲದ್ದಕ್ಕೆ ಆಗಾಗ ಕುರಿ, ಮೇಕೆಯಂತಹ ಸಾಕುಪ್ರಾಣಿಗಳು ಬಲಿಯಾದುದ್ದಿದೆ. ಇದರ ವಿನಃ ಮನುಷ್ಯರ ಮೇಲಾವ ದಾಳಿಗಳಾಗದಿರುವುದು ಖುಷಿಯ ವಿಷಯ. ಆದರೆ ಮುಂದೆ ಇಂತಹ ಅವಘಡಗಳು ಘಟಿಸಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿರಲಿಲ್ಲ. ರೈತರ ಜಮೀನು, ಬಾವಿ, ಹೊಂಡಗಳಿಗೆ ಸೇರಿಕೊಂಡ ಮೊಸಳೆಗಳು ಊರವರ ಕಣ್ಣಿಗೆ ಬಿದ್ದರಂತೂ ಭಯಗೊಂಡ‌ ಜನ ನಮಗೆ ಸುದ್ದಿ ಮುಟ್ಟಿಸುತ್ತಿದ್ದರು.

ನಾವು ಇಲಾಖಾ ಸಿಬ್ಬಂದಿಗಳು ಮೊಸಳೆ ಕಾರ್ಯಾಚರಣೆಗೆ ಅಣಿಯಾಗುತ್ತಿದ್ದೇವು. ವಿಶಾಲವಾದ ಕೆರೆ ಹೊಂಡಗಳಿಂದ ಮೊಸಳೆ ಹಿಡಿಯೋದು ತೀರ ಕಷ್ಟಸಾಧ್ಯದ ಕೆಲಸ. ಆದರೆ, ಬಾವಿ, ಕೃಷಿಹೊಂಡಗಳಲ್ಲಿ ಚೂರು ಸಲೀಸು. ಮೊಣಕಾಲೆತ್ತರದಷ್ಟೂ ನೀರಿದ್ದರೂ ಮೊಸಳೆ ದಾಳಿಯ ಸಾಮರ್ಥ್ಯ ಬಲಿಷ್ಟವಾಗಿರುತ್ತದೆ. ಆದರೆ, ನೀರಿಲ್ಲದಿದ್ದಾಗ ಅದನ್ನು ನಿಯಂತ್ರಿಸಬಹುದು. ಅದರ ಒಂದಷ್ಟೂ ಶಕ್ತಿ ಕಡಿಮೆಯಾಗಿರುತ್ತದೆ.

ಇಲ್ಲಿ ನಾವಷ್ಟೇ ಸುರಕ್ಷಿತವಾಗಿದ್ದರೆ ಸಾಲದು ಮೊಸಳೆಗೂ ಯಾವ ಏಟು, ಗಾಯಗಳಾಗದಂತೆ ಸುರಕ್ಷಿತವಾಗಿ ಸೆರೆ ಹಿಡಿಯಬೇಕಾದ ಗುರುತರ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಅದನ್ನೇ ತಲೆಯಲ್ಲಿಟ್ಟುಕೊಂಡು ನಾವು ಹೆಜ್ಜೆ ಇಡಬೇಕಾಗುತ್ತಿತ್ತು. ಹಗಲಾಗಿದ್ದರೆ ಮೊಸಳೆ ಕಾರ್ಯಾಚರಣೆಗೆ ಅನುಕೂಲ, ಆದರೆ ರಾತ್ರಿ ಸ್ವಲ್ಪ ಕಷ್ಟವೇ. ನಾವು ಕಾರ್ಯಾಚರಣೆ ಮಾಡಿದ ಬಾವಿಗಳಲ್ಲಿ ಕೆಲವು ಹಾಳು, ಕಡಿಮೆ ನೀರಿನ ಬಾವಿಗಳಾದರೂ, ಬಹುತೇಕ ಬಾವಿಗಳು ನೀರಿನಿಂದ ತುಂಬಿರುತ್ತವೆ. ಆಗ ಬಾವಿಯಿಂದ ನೀರು ಬಳಸಬೇಕು. ಈ ಕೆಲಸ ಒಮ್ಮೊಮ್ಮೆ ಒಂದೆರಡು ದಿನದ ಸಮಯ ಬೇಕಾಗಿ ನಮ್ಮ ತಾಳ್ಮೆ ಪರೀಕ್ಷಿಸುತ್ತದೆ. ಒಮ್ಮೊಮ್ಮೆ ಯಾವ ಘಳಿಗೆಯಲ್ಲೋ ಎಲ್ಲರ ಕಣ್ಣುತಪ್ಪಿಸಿ ಮೊಸಳೆ ಪಾರಾದರೆ ನಮ್ಮ ಅಷ್ಟೂ ಶ್ರಮ ವ್ಯರ್ಥ. ಒಮ್ಮೆ ಹೀಗೆ ಆಯ್ತು.

ಅದೊಂದಿನ ರೈತರೊಬ್ಬರಿಂದ ಮೊಸಳೆಯಿರುವ ಬಾತ್ಮಿ ಪಡೆದ ನಾವು ಸಿಬ್ಬಂದಿಗಳು ಆ ಸ್ಥಳಕ್ಕೆ ದೌಡಾಯಿಸಿದೆವು. ಮೂವತ್ತು ಅಡಿ ಉದ್ದಗಲದ ಆಳವಾದ ಭಾವಿಯದು. ಒಂದೆರಡು ಪಂಪಸೆಟ್ ಬಳಸಿ ನೀರೆತ್ತಲು ಒಂದು ಪೂರ್ತಿ ಹಗಲು ಒಂದು ರಾತ್ರಿಯೇ ಬೇಕಾಯ್ತು. ಈ ನಡುವೆ ನಾವು ಮೊಸಳೆಯ ಇರುವಿಕೆಯ‌ ಬಗ್ಗೆ ಸಂಶಯಿಸಿದ್ದೇವಾದರೂ ಆ ರೈತ ಮತ್ತು ಅಲ್ಲಿ ಸೇರಿರುವ ಜನರದು ಮಾತ್ರ ಬಾವಿಯೊಳಗೆ ಮೊಸಳೆ ಇದ್ದೇ ಇದೆ ಎಂಬ ವರಾತ. ಬೆಳಗ್ಗೆ ಹತ್ತಾಗುವುದರ ಹೊತ್ತಿಗೆ ಬಾವಿಯೆಲ್ಲ ಬರಿದಾಗಿ ಒಂದೆರಡಡಿ ನೀರು ಉಳಿದಾಗ ಮೀನುಗಳು ಓಡಾಡುವುದು, ಜಿಗಿಯುವುದು ಕಂಡಿತು. ಸೇರಿದ್ದ ನೂರಾರು ಜನ ಮೊಸಳೆ ವಿಚಾರವನ್ನೇ ಮರೆತಂತೆ ನಾ ಮುಂದೆ ತಾ ಮುಂದೆ ಎಂದು ಮೀನು ಹಿಡಿದುಕೊಳ್ಳಲು ಬಾವಿಗಿಳಿದರು. ಒಂದು ಬದಿಯ ಗಿಡಗಂಟಿಗಳಿರುವ ಜಾಗದಿಂದ ಮೊಸಳೆ ಯಾವ ಘಳಿಗೆಯಲ್ಲೋ ತಪ್ಪಿಸಿಕೊಂಡು ನೀರಿನಿಂದ ಹೋರಹೋದದ್ದು ಯಾರಿಗೂ ಗೊತ್ತಾಗಿರಲಿಲ್ಲ. "ಇಂದಿನ ಮಧ್ಯಾಹ್ನದ ಊಟಕ್ಕ ಮೀನು ಸಾಂಬಾರ್ ಆದ್ರೂ ಆಯ್ತಲ್ಲ" ಎನ್ನುವ ಜನರ ಖುಶಿ ಒಂದ್ಕಡೆಯಾದ್ರೆ ಇನ್ನೊಂದ್ಕಡೆ ಎರಡು ದಿನದ ಶ್ರಮ ಹಾಳಾಯ್ತಲ್ಲ ಎಂಬ ಕೊರಗು ನಮಗೆ..

ಈ ಭಾಗದಲ್ಲಿ ಎಲ್ಲಿಯಾದ್ರೂ ಮೊಸಳೆ ಕಂಡಿದೆ ಎಂಬ ವಿಚಾರ ಗೊತ್ತಾದೊಡನೆ ಆಸುಪಾಸಿನ ಜನರೆಲ್ಲ ಎಲ್ಲರೂ ಎದ್ದುಬಿದ್ದು ಓಡಿಬಂದು ಮೊಸಳೆಯಿರುವ ಜಾಗದಲ್ಲಿ ಜಮಾಯಿಸುತ್ತಾರೆ. ಗೌಜು ಗದ್ದಲ ಗಲಾಟೆ ಎಬ್ಬಿಸುತ್ತಾರೆ. ಆಗ ನಾವು ಬೆರಳೆಣಿಕೆಯಷ್ಟಿರುವ ಸಿಬ್ಬಂಧಿ ಅವರನ್ನು ನಿಯಂತ್ರಿಸಿ ಸಾಗಹಾಕುವುದರಲ್ಲೇ ಸಾಕುಸಾಕಾಗಿ ಹೋಗುತ್ತದೆ. ಬಾವಿಗಳಿರುವ ಇಕ್ಕಟ್ಟಾದ ಜಾಗಗಳಲ್ಲಿ ನಿಂತಿರುವರಾರಾದರೂ ಸ್ವಲ್ಪ ಆಯ ತಪ್ಪಿದರೂ ನೀರಿನೊಳಕ್ಕೆ ಬಿದ್ದು ಮೊಸಳೆಗೆ ಆಹಾರವಾಗಬಹುದು. ನಮ್ಮಲ್ಲೂ ಆ ಭಯ ಇಲ್ಲದಿಲ್ಲ.

ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿದಾಗಲೂ ಪ್ರತಿ ಬಾರಿಯೂ ನಮ್ಮೊಳಗೆ ಒಂದು ಸಾರ್ಥಕ ಭಾವ ಮೂಡುತ್ತಿತ್ತು. ಭಿನ್ನ ವಿಭಿನ್ನ ಜಾಗಗಳಲ್ಲಿ ಮತ್ತು ಭಿನ್ನ ಭಿನ್ನ ಸನ್ನಿವೇಷಗಳಲ್ಲಿ ಮೊಸಳೆ ಕಾರ್ಯಾಚರಣೆ ಕೈಗೊಂಡಿದ್ದೇವೆ. ಅದರಲ್ಲಿ ಕೆಲವೊಂದು ಪ್ರಕರಣಗಳು ತೀರ ವಿಶೇಷ, ಸದಾ ನೆನಪಿನಲ್ಲುಳಿವಂತವು. ಅದೊಂದು ಕಾರ್ಯಾಚರಣೆಯೂ ಹಾಗೆಯೇ.

ರೈತರೊಬ್ಬರ ಕರೆಯ ಮೇರೆಗೆ ನಾವು ಮೊಸಳೆ ಸೆರೆಹಿಡಿಯಲು ತೆರಳಿದೆವು. ಸುತ್ತಲೂ ಕಬ್ಬಿನ ಗದ್ದೆ ಇರುವ ಅರೆಹಾಳುಬಿದ್ದ ಭಾವಿಯದು. ಕಡಿಮೆ ನೀರಿತ್ತಾದರೂ ಬಾವಿ ಪೂರ್ತಿ ಖಾಲಿಯಾಗಿಸುವ ವಿನಃ ನಾವೇನೂ ಮಾಡುವಂತಿರಲಿಲ್ಲ. ಪಂಪ್ ಸೆಟ್ ನಿಂದ ಎರಡ್ಮೂರು ಗಂಟೆ ನೀರೆತ್ತಿದೆವು. ಬಾವಿಯಲ್ಲಿನ ನೀರು ಕಡಿಮೆಯಾಗುತ್ತಿದ್ದಂತೆ ಮೊಸಳೆಯ ಕದಲಿಕೆ ಗೊತ್ತಾಗತೊಡಗಿತು. ನಾವು ಈ ಮೊದಲೇ ಯೋಜಿಸಿದಂತೆ ಹಗ್ಗ ಸಿದ್ದಪಡಿದ್ದೆವು. ನೈಲಾನ್ ಹಗ್ಗದ ಬದಲು ನೂಲಿನ ಹಗ್ಗ ಈ ಕೆಲಸಕ್ಕೆ ಯೋಗ್ಯವಾದುದೆಂದು ಅದನ್ನೇ ತಂದಿದ್ದೆವು.

ನಮ್ಮ ಸಿಬ್ಬಂದಿಯೊಬ್ಬ ಹಗ್ಗದ ಒಂದು ತುದಿಯಲ್ಲಿ ಸರಕು ಗಂಟು ಹಾಕಿ ಗಟ್ಟಿಯಾದ ಕೋಲಿನ ಒಂದು ತುದಿಯ‌ ಗೇಣುದ್ದದ ಸೀಳಿನಲ್ಲಿ ಹಗ್ಗ ಸಿಕ್ಕಿಸಿ ಮೊಸಳೆಯ ಮುಖದೆಡೆಗೆ ಒಯ್ದು ಪ್ರಯತ್ನಿಸಿದ. ಹಾಗೆಂದು ನಾವು ಹೂಡಿದ ಮೊದಲ ತಂತ್ರಕ್ಕೇನು ಮೊಸಳೆ ತತಃಕ್ಷಣ ಮರುಳಾಗಲಿಲ್ಲ. ಇದ್ದಕ್ಕಿದ್ದಂತೆ ಮುಖ ತಿರುಗಿಸಿ ಎತ್ತೆತ್ತಲೋ ತೆವಳತೊಡಗಿತು. ಕೆಸರು ರಾಡಿಯಲ್ಲಿ ಅವಿತುಕೊಂಡು ಎಳ್ಳಷ್ಟೂ ಕದಲದೆ ಕಲ್ಲಿನಂತಾಗುತ್ತಿತ್ತು. ಸ್ವಲ್ಪ ಸಮಯದ ನಂತರ ಅದು ಬಾವಿಯ ಮತ್ತೊಂದು ತುದಿಯೆಡೆಗೆ ಹೋಗುತ್ತಿತ್ತು. ನಾವು ಅದು ಹೋದ ದಿಕ್ಕಿಗೆ ಹೋಗಿ ಪುನಃ ಅದರ ಮುಖದೆಡೆಗೆ ಹಗ್ಗ ತಿರುಗಿಸಬೇಕೆಂದೆವು. ಆದರೆ ಅದು ಸವಾಲಿನ ಕೆಲಸವಾಗಿತ್ತು. ಬಾವಿಯ ಎಲ್ಲಬದಿಗೂ ಓಡಾಡಲು ಸ್ಥಳಾವಕಾಶವಿದ್ದರೆ ಒಳಿತು. ಕಂಟಿ ಗಿಡ ಗೊಂಪೆ ಮುಳ್ಳುಗಳ ಇಕ್ಕಟ್ಟಾದ ಜಾಗವಿದ್ದರಂತೂ ತೀರ ದುರ್ಲಭ. ಅಕ್ಷರಶ಼ಃ ಅದು ಅಂತದೇ ಜಾಗವಾಗಿತ್ತು. ಕೋಲಿನ ಸಹಾಯದಿಂದ ಅನುವಾಗುವ ಜಾಗಕ್ಕೆ ಅದನ್ನು ಪುನಃ ಪುನಃ ಓಡಿಸಲು ಪ್ರಯತ್ನಿಸುತ್ತಲೇ ಇದ್ದೆವು. ಮೊಸಳೆ ಹಗ್ಗ, ಕೋಲು ಕಂಡು ಹಿಂದಿಂದೆ ಹೋಗುತ್ತಿದ್ದರೆ ಬಾಲದ ಕಡೆಗೆ ನಿಂತವನೊಬ್ಬ ಉದ್ದವಾದ ಕೋಲಿನಿಂದ ಅದರ ಬಾಲ, ಬೆನ್ನಿಗೆ ತಿವಿದಂತೆ ಅದು ಮುಂದಕ್ಕೆ ಅಡಿಯಿಡುತ್ತಿತ್ತು. ಹಾಕಿದ ಸರಕು ಹಗ್ಗ ಕುತ್ತಿಗೆಗೆ ಬಿದ್ದರೂ ಹಗ್ಗದ ಇನ್ನೊಂದು ತುದಿಯನ್ನು ಎಳೆಯುವಾಗ ಸರಕು ಕಿರಿದಾಗಿ ಅದರ ಕುತ್ತಿಗೆಗೆ ಕಚ್ಚಿಕೊಳ್ಳದೇ ಹೊರಬರುತ್ತಿತ್ತು. ಆಗ ನಾಲ್ಕೈದು ಬಾರಿ ಮೊದಲಿನಿಂದ ಪ್ರಯತ್ನ ಶುರು ಮಾಡಬೇಕಾಯ್ತು. ಈ ಸಂದರ್ಭದ ಸಾಧ್ಯತೆ ಏನಾಗಬಹುದಿತ್ತೆಂದರೆ ಈ ಯತ್ನದಲ್ಲಿ ಒಮ್ಮೊಮ್ಮೆ ಕುತ್ತಿಗೆಯಿಂದ ಜಾರುವ ಹಗ್ಗದ ಸರಕು ಅದರ ಹಲ್ಲುಗಳಿಗೆ ಸಿಕ್ಕಿಹಾಕಿಕೊಳ್ಳಬಹುದು. ಕೆಲವೊಮ್ಮೆ ಮೊಸಳೆಯೇ ಕೋಪಗೊಂಡು ಮುಖದ ಮುಂದೆ ನೇತಾಡುವ ಹಗ್ಗ, ಕೋಲನ್ನು ಬಾಯಿಯಿಂದ ಕಚ್ಚಬಹುದು. ಹೀಗಾದಾಗ ಹಗ್ಗ ಇಲ್ಲವೇ ಕೋಲು ಇಲ್ಲವೇ ಎರಡೂ ತುಂಡಾಗುತ್ತವೆ. ಇಲ್ಲ ಹಾಕಿದ ಹಗ್ಗ ಅದರ ಹಲ್ಲಿಗೆ ಸಿಕ್ಕು ಗಂಟು ಬಿದ್ದಾಗ ಬಲವಾಗಿ ಹಗ್ಗ ಎಳೆದುಕೊಂಡರೆ ಮೊಸಳೆಯ ಹಲ್ಲಿಗೆ, ಬಾಯಿಗೆ ಖಂಡಿತ ಗಾಯವಾಗುತ್ತದೆ. ಇಲ್ಲವೇ ಅದು ಜೋರಾಗಿ ತನ್ನತ್ತಲೇ ಹಗ್ಗವೆಳೆದುಕೊಂಡರೆ ಬಾವಿಯ ಮೇಲೆ ನಿಂತು ಹಗ್ಗದ ಒಂದು ತುದಿಯನ್ನು ಹಿಡಿದುಕೊಂಡವರು ಬಾವಿಯೊಳಕ್ಕೆ ಬೀಳಬಹುದು. ಇಲ್ಲವೇ ಮೇಲೆ ನಿಂತವರಿಗಿಂತ ಮೊಸಳೆಯ ಹತ್ತಿರಕ್ಕೆ ಹೋಗಿ ಕೋಲಿನಿಂದ ಹಗ್ಗ ಹಾಕುವವನು ತನ್ನ ಕೈಯಿಂದ ಕೋಲು ಹಗ್ಗ ಬಿಡದಿದ್ದರೆ ಮೊಸಳೆಯೆಡೆಗೆ ಎಳೆಯಲ್ಪಡುತ್ತಾನೆ. ಇದೆಲ್ಲವನ್ನು ತಿಳಿದೇ ನಾವು ಕಾರ್ಯಾಚರಣೆಗಿಳಿದ್ದೆವು. ಏಕೆಂದರೆ ಅನೇಕ ಬಾರಿ ಇಂತಹ ಅನೇಕ ಅನುಭವಗಳಾಗಿದ್ದವು. ಆದರೆ ಪ್ರತಿಬಾರಿಯೂ ಅದೃಷ್ಟ ನಮ್ಮೊಡನಿತ್ತು. ಮೊಸಳೆ ಸೆರೆಹಿಡಿಯುವಲ್ಲಿನ ಯಶಸ್ಸು ಆಗಿನ ತತಃಕ್ಷಣದ ನಿರ್ಧಾರ ಮತ್ತು ಹಗ್ಗ ಕೋಲು ಹಿಡಿದವರ ನಡುವಿನ ಹೊಂದಾಣಿಕೆಗಳು ನಿರ್ಧರಿಸಬಲ್ಲವು. ಅವರ ಮಧ್ಯೇ ಸ್ವಲ್ಪ ತಪ್ಪು ಸಂವಹನವಾದರೂ ಉಪಾಯ ಫಲಿಸದೇ, ಅನಾಹುತವಾಗುವ ಸಂದರ್ಭಗಳು ಎದುರಾಗಬಹುದು. ನಮ್ಮ ಹಲವು ಪ್ರಯತ್ನಗಳ ನಂತರ ಹಗ್ಗದಲ್ಲಿ ಮೊಸಳೆ ಬಂಧಿಯಾಯ್ತು. ಅದನ್ನು ತಕ್ಷಣಕ್ಕೆ ಹೊರಗೆಳೆದೆವು. .

ಮೊಸಳೆ ಸೆರೆಹಿಡಿವ ಕಾರ್ಯಾಚರಣೆಯ ಸಾಮಾನ್ಯ ತಂತ್ರವೆಂದರೆ ಈ ಕೆಲಸಕ್ಕೆ ಮೂರ್ನಾಲ್ಕು ಜನರಾದರೂ ಬೇಕಾಗಬಹುದು. ಬಾವಿಯ ಮೇಲಕ್ಕಲ್ಲದಿದ್ದರೂ ಅದರ ಇಳಿಜಾರಿನ ಮಧ್ಯೆಯೇ ಮೂರ್ನಾಲ್ಕು ಜನ ನಿಲ್ಲಬಹುದಾದ ಸ್ಥಳಾವಕಾಶ ವಿದ್ದರೆ ತಕ್ಷಣವೇ ಕೋಲುಗಳ ಸಹಾಯದಿಂದ ಅದರ ಕತ್ತಿನ ಮೇಲೊಂದು, ಬಾಲದ ಮೇಲೊಂದು ಕೋಲು ಹಾಕಿ ಎರಡು ಕಡೆಗೂ ಕಾಲಿನಿಂದ ತುಳಿದು ಹಿಡಿಯಬೇಕು. ಬಾಲವನ್ನು ಬಲವಾಗಿ ಹಿಡಿಯದಿದ್ದರೆ ಅದು ಯಾರೊಬ್ಬರಿಗಾದರೂ ಬಾಲದಿಂದ ಹೊಡೆಯಬಹುದೆಂಬ ಮುನ್ನೆಚ್ಚರಿಕೆಯದು. ಏಕೆಂದರೆ ಮೊಸಳೆಯ‌ ಬಾಲದಲ್ಲಿ ಬಹಳ ಬಲವಿರುತ್ತದೆ. ಅದು ಬಾಲವೆತ್ತಿ ಜಾಡಿಸಿ ಯಾರಿಗಾದರೂ ಹೊಡೆತ ಕೊಟ್ಟರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ಬಾಲವನ್ನು ಬಲವಾಗಿ ಅದುಮಿ ಹಿಡಿದು, ಅದರ ಕಣ್ಣಿನ ಮೇಲೊಂದು ಬಟ್ಟೆ ಹಾಕಿದರೆ ಮೊಸಳೆ ಗಾಬರಿಯಿಂದ ಮುಕ್ತವಾಗುತ್ತದೆ. ಅದಾದ ಮೇಲೆ ಮತ್ತಿಬ್ಬರ ಸಹಾಯದಿಂದ ಅದರ ಮುಂಗಾಲುಗಳನ್ನು, ಹಿಂಗಾಲುಗಳನ್ನು ಹಿಂದಕ್ಕೆ ಬೆನ್ನಿನೆಡೆಗೆ ತಂದು ದಾರದ ಸಹಾಯದಿಂದ ಕಟ್ಟಬೇಕು. ಅದು ಬಾಯಿ ಅಗಲಿಸದಂತೆ ಬಾಯಿಗೂ ದಾರ ಬಿಗಿದು ಅದರ ಕೊರಳಿಗೆ ಹಾಕಿರುವ ಹಗ್ಗ ಸಡಲಿಸಿ ಹೊರತೆಗೆಯಬೇಕು. ಅಷ್ಟೊತ್ತಿಗೆ ಮೊಸಳೆ ಸಂಪೂರ್ಣ ಶರಣಾಗತವಾಗಿರುತ್ತದೆ. ಈ ಸಮಯದಲ್ಲಿ ಅದು ಬಹುತೇಕ ಕೊರಡಿನಂತೆ ಬಿದ್ದುಕೊಂಡಿರುತ್ತದೆ. ಹೆಗಲಿಗೇರಿಸಿಕೊಂಡು ಬಾವಿಯಿಂದ ಹೊರಬಂದು ವಾಹನಕ್ಕೇರುವರೆಗೂ ಅದು ಉಸಿರು ಬಿಡುವುದಿಲ್ಲ. ನಾವು ಅಭ್ಯಾಸಬಲದಿಂದೆಂಬಂತೆ ಹಾಗೆಯೇ ಮಾಡಿದೆವು. ಸರಿಸುಮಾರು ಒಂಭತ್ತು ಅಡಿ ಉದ್ದದ ಭಾರಿ ಗಾತ್ರದ ಮೊಸಳೆ ಹೀಗೆ ಸೆರೆಸಿಕ್ಕಿತು.

ಮಧ್ಯಾಹ್ನ ಆರಂಭಿಸಿದ ಸೆರೆಕಾರ್ಯಾಚರಣೆ ಮುಗಿಯುವ ಹೊತ್ತಿಗೆ ರಾತ್ರಿ ಏಳಾಗಿದ್ದಿತೇನೋ ಆಗಲೇ ಮುಸುಕು ಆವರಿಸಿತ್ತು. ಪಶುವೈದ್ಯಾಧಿಕಾರಿಗಳಿಂದ ಮೊಸಳೆಯ ಆರೋಗ್ಯ ಪರೀಕ್ಷಿಸಿ ಪುನಃ ಅದನ್ನು ಪಿಕ್ ಅಪ್ ವಾಹನದಲ್ಲಿ ಹೇರಿಕೊಂಡು ಗಾಡಿ ಚಲಾಯಿಸಿದೆವು. ಮೊಸಳೆಯನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಒಯ್ದು ಬಿಡುವುದು ಪ್ರತಿಸಾರಿಯೂಸವಾಲಿನ ಕೆಲಸವೇ. ನೀರಿನ ಮೂಲಕ್ಕೆ ತಂದು ಅದರ ಹಗ್ಗದ ಕಟ್ಟುಗಳನ್ನು ಬಿಚ್ಚುವಾಗ ಅದು ವ್ಯಗ್ರವಾಗಿ ವರ್ತಿಸುವ ಸಾಧ್ಯತೆ ಇರುತ್ತದೆ. ಹತ್ತಿರವಿದ್ದವರ ಮೇಲೆ ದಾಳಿ ಮಾಡುವ ಅಪಾಯವನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಅದನ್ನು ಬಿಡುಗಡೆಗೊಳಿಸುವಲ್ಲಿ ತುಸು ಜಾಣತನ ತೋರಬೇಕು.

ನೀರಿಗೆ ಹತ್ತಿರ ಬರುತ್ತಿದ್ದಂತೆ ಮೊಸಳೆಗೆ ನೀರಿನ ವಾಸನೆ ಬಡಿಯಿತೇನೋ ಅದು ಮುಸುಗಾಡಲು ತೊಡಗಿತು. ಆಗ ಅದು ತುಸು ರೆಬೆಲ್ ಆಗಿರುತ್ತದೆಂಬುದು ನಮ್ಮ ತಿಳುವಳಿಕೆ. ಅದರ ಹತ್ತಿರಕ್ಕೆ ಹೋಗದೇ ಮೂರ್ನಾಲ್ಕು ಅಡಿ ದೂರದಿಂದಲೇ ಕೊಡಲಿ ಮುಂದಕ್ಕೆ ಚಾಚಿ ಅದರ ಕಾಲುಗಳಿಗೆ, ಬಾಯಿಗೆ ಕಟ್ಟಿದ ದಾರವನ್ನು ಕೊಯ್ದು ತೆಗೆದೆವು. ಆ ಕ್ಷಣದಲ್ಲೇ ಅಥವಾ ಐದ್ಹತ್ತು ನಿಮಿಷಗಳಲ್ಲಿ ಮೊಸಳೆ ನೀರಿಗಿಳಿದು ಓಡತೊಡಗಿತು. ಆ ನಿರುಮ್ಮಳತೆಯಲ್ಲಿ ಏನನ್ನೋ ಸಾಧಿಸಿದ ಖುಷಿಯಲ್ಲಿ ನಾವು ಸಿಬ್ಬಂದಿಗಳ ಜೀಪ್ ಹತ್ತಿ ವಾಪಸ್ಸು ಬರುವ ಹೊತ್ತಿಗೆ ಆಗಸದಲ್ಲಿ ಬೆಳ್ಳಿ ಚುಕ್ಕಿ ಮೂಡಿತ್ತು...

- ಶ್ರೀಧರ ಪತ್ತಾರ

MORE FEATURES

ಸಾಹಿತ್ಯ ಸಾಧಕರಲ್ಲಿ ನಿಲ್ಲುವ ಅಪ್ರತಿಮ ವ್ಯಕ್ತಿತ್ವವುಳ್ಳ ಸೃಜನಾತ್ಮಕ ಸಾಹಿತಿ ಗವಿಸಿದ್ಧಪ್ಪ

19-09-2024 ಬೆಂಗಳೂರು

“ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಮುಟ್ಟದ ವಿಷಯವಿಲ್ಲ ಎಂಬ ನಾಡ ನುಡಿಯಂತೆ ಡಾ. ಗವಿಸಿದ್ದಪ್ಪ ಹೆಚ್ ಪಾಟೀಲ ಅವರ...

ನಿಗೂಢ, ಪತ್ತೇದಾರಿಯ ಜಾಡಿನಲ್ಲಿ ಸಾಗುವ ಕಾದಂಬರಿಯಿದು..

19-09-2024 ಬೆಂಗಳೂರು

“ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿದ್ದ ಯಾವುದೋ ಊರು ಅದು. ಆ ಊರಲ್ಲಿ ಸಂಪಾದಕರು, ವರದಿಗಾರರು ಯಾರೆಂದೇ ತ...

ಒಂದು ಕಥೆಯೊಳಗೆ ಎಷ್ಟೆಲ್ಲ ಕಥೆಗಳು!

19-09-2024 ಬೆಂಗಳೂರು

"ನಾವು ಬದುಕನ್ನು ಆ ವರ್ಷ ಪಡೆದ ಸಂಬಳ, ಮಾಡಿದ ಖರ್ಚು, ಕೊಂಡ ವಸ್ತುಗಳು, ಕಳೆದುಕೊಂಡ ವ್ಯಕ್ತಿಗಳು ಎಂಬ ಅಂತಿಮ ಘಟ್...