ಮನುಷ್ಯನ ಜೀವನ ಅತ್ಯಂತ ಅಮೂಲ್ಯವಾದುದು


"ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಚರಿತ್ರೆಗಳಿಗೆ ಒಂದು ಶತಮಾನದ ಇತಿಹಾಸವಿದೆ. ಅದು ಜೀವನ ಚರಿತ್ರೆ ಅಥವಾ ಆತ್ಮ ಚರಿತ್ರೆ ಯಾವುದಾದರೂ ಆಗಿರಬಹುದು. ತಮ್ಮ ಬದುಕಿನ ಚಿತ್ರಣವನ್ನು ತಾವೇ ದಾಖಲಿಸುತ್ತ ಹೋದರೆ 'ಆತ್ಮಚರಿತ್ರೆ' ಇತರರ ಜೀವನ ಶೈಲಿ ಪ್ರೇರಣಾದಾಯಕ ಎನಿಸಿ, ಅವರ ಕುರಿತು ಬರೆದರೆ 'ಜೀವನಚರಿತ್ರೆ’," ಎನ್ನುತ್ತಾರೆ ಕಾವ್ಯಶ್ರೀ ಮಹಾಗಾಂವಕರ ಅವರು ಯಲ್ಲಪ್ಪ ಹಂಚಿನಾಳ ಅವರ `ಬೆವರ ಹನಿಯ ಪಯಣ’ ಕೃತಿ ಕುರಿತು ಬರೆದ ಅನಿಸಿಕೆ.

ಇಡೀ ಜೀವ ಜಗತ್ತಿನಲ್ಲಿ ಅನೇಕ ಜೀವಿಗಳು ತಮ್ಮ ಪಾಡಿಗೆ ತಮ್ಮ ಜೀವನ ಸಾಗಿಸುತ್ತಿರುತ್ತವೆ. ಅವುಗಳಲ್ಲಿ ಮನುಷ್ಯನ ಜೀವನ ಅತ್ಯಂತ ಅಮೂಲ್ಯವಾದುದು. ಹೊಟ್ಟಿ, ರೊಟ್ಟಿ, ಬಟ್ಟಿ, ಹಟ್ಟಿ ಎಂದು ಒಟ್ಟು ಜೀವನ ಕಳೆದು ಹೋದರೆ, ಹತ್ತರಗೂಡ ಹನ್ನೊಂದಾಗಿ ಬದುಕು ಖಾಲಿ ಖಾಲಿ ಎನಿಸುತ್ತದೆ. ಆದರೆ ಅದೇ ಬದುಕನ್ನು ಮಹತ್ವದ್ದಾಗಿಸಲು 'ಪ್ರತಿಯೊಬ್ಬರಿಗೂ ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸತ್ಯ. ದಿನನಿತ್ಯದ ಯಾಂತ್ರಿಕ ಜೀವನವನ್ನು ಹೊರತುಪಡಿಸಿ, ಇನ್ನೇನನ್ನಾದರು ಮಾಡಿದರೆ ಅದು 'ಸಾಧನೆ'. ಯಾರ ಬದುಕಿನಲ್ಲಿ ಹಸಿವು, ಬಡತನ, ಸಂಘರ್ಷ, ಹೋರಾಟ, ಮಹತ್ವಾಕಾಂಕ್ಷೆ ಇರುತ್ತದೊ ಅಲ್ಲಿ ಇತಿಹಾಸ ಸೃಷ್ಟಿ ಮಾಡುವ ಅದಮ್ಯ ಚೈತನ್ಯವಿರುತ್ತದೆ.

ಏನು ಮಾಡಿದರೇನು? ಏನೂ ಮಾಡದಿದ್ದರೇನು? ಹಾಗೆಯೇ ಕಳೆದು ಹೋಗುವ ದಿನಗಳನ್ನು ಯಾರಿಂದಲೂ ಹಿಡಿದಿಡಲು ಸಾಧ್ಯವಿಲ್ಲ. ಜೀವನದ ಓಟದಿಂದ ಒಂದು ಕ್ಷಣ ನಿಂತು, 'ಇದನ್ನು ಅರ್ಥಪೂರ್ಣವಾಗಿ ಕಳೆಯುತ್ತಿರುವೆನೆ?' ಅನ್ನೊ ಸಣ್ಣ ಆಲೋಚನೆ ಮೂಡಿದರೂ ಸಾಕು, ಅದು ನಮ್ಮನ್ನೊಂದು ಗಮ್ಯಕ್ಕೆ ತಲುಪಿಸುವ ಸಾಧ್ಯತೆ ಇರುತ್ತದೆ. ಹೀಗೆ ವೈದ್ಯಕೀಯ ಕ್ಷೇತ್ರದಲ್ಲಿ ಸದ್ದಿಲ್ಲದೆ ಹೆಸರು ಮಾಡಿದವರು ಡಾ.ಈರೇಶ ಕೊಟ್ಟೂರಶೆಟ್ಟಿ, ಆತ್ಮೀಯರ ಪಾಲಿನ ಡಾ.ವೀರೇಶ.

ಡಾ.ಕೊಟ್ಟೂರಶೆಟ್ಟಿಯವರು ಪ್ರೊ.ಸಿದ್ದು ಯಾಪಲಪರವಿಯವರ ಮೂಲಕ ಪರಿಚಯವಾದವರು. ಅವರನ್ನು ಮೊದಲ ಬಾರಿ ನೋಡಿದಾಗ ಶಾಂತಿ, ಸಹನೆಯಿಂದ ಕೂಡಿದ ಶಿಸ್ತಿನ ವ್ಯಕ್ತಿ ಎನಿಸಿದ್ದರು. ಆದರೆ ಕ್ರಮೇಣ ಪರಿಚಯದ ನಂತರ ತಿಳಿದು ಬಂದದ್ದು, ಮೇಲ್ನೋಟಕ್ಕೆ ಕಾಣುವಂತೆ ಒಳಗೂ ಇದ್ದಾರೆ. ಅದು ಅವರ ಸ್ವಭಾವವೂ ಹೌದು. ಅವರು ಮಿತಭಾಷಿ. ಆದರೂ ನನ್ನೊಂದಿಗೆ ಅಗತ್ಯವಿದ್ದಾಗ ಆತ್ಮೀಯವಾಗಿ ಮಾತನಾಡುತ್ತಾರೆ. ಇಂತಹ ಅಪರೂಪದ ಮಾದರಿ ವ್ಯಕ್ತಿಯ ಜೀವನವನ್ನು ಅಕ್ಷರಗಳಲ್ಲಿ ಸೆರೆ ಹಿಡಿದು 'ಬೆವರ ಹನಿಯ ಪಯಣ'ವಾಗಿಸಿ ನಮ್ಮೆಲ್ಲರ ಕೈಗಿಡುತ್ತಿರುವುದು ಸಂತಸದ ಸಂಗತಿ.

'ಬೆವರ ಹನಿಯ ಪಯಣ' ಕೃತಿಯ ಲೇಖಕರಾದ ಹಂಚಿನಾಳವರು, ಪ್ರೊಸಿದ್ದು ಯಾಪಲಪರವಿಯವರ ಕುರಿತಾಗಿ ಬರೆದ 'ಬ್ಯಾಸರಿಲ್ಲದ ಜೀವ' ಕೃತಿಯ ಮೂಲಕ ಪರಿಚಯವಾದವರು. ಆಗ ಜೀವನ ಚರಿತ್ರೆ ಬರಹದಲ್ಲಿ ತೊಡಗಿಸಿಕೊಂಡಿದ್ದ ಹಂಚಿನಾಳವರು ಬ್ಯಾಸರಿಲ್ಲದ ಜೀವ ಓದಿದ ನಂತರ ಫೋನಾಯಿಸಿ ಸುಮಾರು

ಹೊತ್ತು ಮಾತನಾಡಿದ್ದರು. ಒಬ್ಬ ವ್ಯಕ್ತಿಯ ಚರಿತ್ರೆ ನಿರೂಪಿಸುವಾಗ, ವಿಷಯ ಸಂಗ್ರಹ ಮಾಡಿದ ಬಗೆಯನ್ನು ವಿಚಾರಿಸಿ, ಸಾಹಿತ್ಯಕ ಆಸಕ್ತಿಯಿಂದ ಅರ್ಥಪೂರ್ಣವಾಗಿ ಚರ್ಚಿಸಿದ್ದರು.

ನಾನು ಆರಂಭದಲ್ಲಿ ಹೇಳಿದಂತೆ 'ಬೆವರ ಹನಿಯ ಪಯಣ' ಓದಿ ಮುಗಿಸುವಾಗ ಗಮ್ಯ ತಲುಪಿದ ಇಬ್ಬರು ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ಒಬ್ಬರು ಡಾ.ಕೊಟ್ಟೂರಶೆಟ್ಟಿ, ಇನ್ನೊಬ್ಬರು ಯಲ್ಲಪ್ಪ ಹಂಚಿನಾಳ, ಸಾಹಿತ್ಯ ಲೋಕದಲ್ಲಿ ಕತೆಗಾರರಾಗಿ 'ಹಂಚಿ' ಎಂದೇ ಗುರುತಿಸಿಕೊಂಡ ಹಂಚಿನಾಳ ಅವರು, ಡಾ.ಕೊಟ್ಟೂರಶೆಟ್ಟಿಯವರ ಜೀವನ ಚರಿತ್ರೆ ದಾಖಲಿಸಿ, ಒಂದೊಂದು ಬೆವರ ಹನಿಗೂ ಬೆಲೆ ಕಟ್ಟಿ ಕೊಟ್ಟಿದ್ದಾರೆ.

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಚರಿತ್ರೆಗಳಿಗೆ ಒಂದು ಶತಮಾನದ ಇತಿಹಾಸವಿದೆ. ಅದು ಜೀವನ ಚರಿತ್ರೆ ಅಥವಾ ಆತ್ಮ ಚರಿತ್ರೆ ಯಾವುದಾದರೂ ಆಗಿರಬಹುದು. ತಮ್ಮ ಬದುಕಿನ ಚಿತ್ರಣವನ್ನು ತಾವೇ ದಾಖಲಿಸುತ್ತ ಹೋದರೆ 'ಆತ್ಮಚರಿತ್ರೆ' ಇತರರ ಜೀವನ ಶೈಲಿ ಪ್ರೇರಣಾದಾಯಕ ಎನಿಸಿ, ಅವರ ಕುರಿತು ಬರೆದರೆ 'ಜೀವನಚರಿತ್ರೆ'. ಈ ಪ್ರಕಾರ ರೂಢಿಯಲ್ಲಿ ಬರಲು ಪ್ರಮುಖ ಕಾರಣಗಳಿವೆ. ವ್ಯಕ್ತಿಯ ಪ್ರತಿಭೆ, ಸೃಜನಶೀಲತೆ, ಕ್ರಿಯಾಶೀಲತೆ, ಸಮಾಜಮುಖಿ ಸೇವೆ, ತತ್ವ ನಿಷ್ಠೆ ಇತ್ಯಾದಿ. ಪ್ರಸ್ತುತದಲ್ಲಿ ಧಾರ್ಮಿಕ, ರಾಜಕೀಯ, ಸಾಹಿತ್ಯಕ, ಸಿನಿಜಗತ್ತು, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಹೆಸರು ಮಾಡಿದವರ ಚರಿತ್ರೆಗಳು ಬರುತ್ತಿವೆ. ಕ್ರಮೇಣ ಅವು ಬಯೋಪಿಕ್ ಸಿನಿಮಾ, ಟಿವಿ ಸೀರಿಯಲ್ ಕೂಡ ಆಗುತ್ತಿವೆ.

ಹೀಗೆ ಬರೆಯಲ್ಪಟ್ಟ ಜೀವನ ಚರಿತ್ರೆಗಳ ಅಗತ್ಯವಿದೆಯೆ? ಪ್ರಶ್ನೆ ಹುಟ್ಟುವುದು ಸಹಜ. ಇದಕ್ಕೆ ಉತ್ತರ ಹೌದು. 'ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು' ಡಿ.ವಿ.ಜಿ. ಯವರ ರಚನೆಯ ಈ ಸಾಲುಗಳು ನೆನಪಾಗುತ್ತವೆ. ಇಡೀ ಮರ ಜೀವಂತ ಹಸಿರು ಹಸಿರಾಗಿ ನಳನಳಿಸಲು ಬೇರು, ಕಾಂಡಗಳ ಅವಶ್ಯಕತೆ ಇರುತ್ತದೆ. ಹಾಗೆಯೇ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಶಿಸ್ತು, ಬದ್ಧತೆ, ಮಹತ್ವಾಕಾಂಕ್ಷೆ ಪ್ರವಹಿಸಬೇಕಾದರೆ ಇಂತಹ ಕೃತಿಗಳು ಮಹತ್ವದ ಪಾತ್ರವಹಿಸುತ್ತವೆ. ಯುವ ಸಮೂಹ ಗಟ್ಟಿಯಾಗಿ ಸಮಾಜದಲ್ಲಿ ನಿಲ್ಲಲು, ಹಿರಿಯರ ಆದರ್ಶ ಜೀವನವನ್ನು ಮಾದರಿಯಾಗಿ ತಿಳಿದುಕೊಳ್ಳುವ ಅಗತ್ಯವಿದೆ.

ವ್ಯಕ್ತಿಯ ಜೀವನ ಚರಿತ್ರೆ ದಾಖಲಿಸುವಾಗ ಕೆಲವು ಅಂಶಗಳು ಪ್ರಮುಖ ಎನಿಸುತ್ತವೆ. ಒಬ್ಬ ಬರಹಗಾರ ಬೇರೆ ವ್ಯಕ್ತಿಯೊಬ್ಬರಿಂದ ಪ್ರೇರಿತನಾಗಿ, ಅವರಲ್ಲಿ ತಾನು ಕಂಡ ವಿಶಿಷ್ಟ ಅಂಶಗಳನ್ನು ಗುರುತಿಸುತ್ತಾನೆ. ಹಾಗೆಯೇ ಅವರೊಂದಿಗೆ ಸಂದರ್ಶಿಸಿ, ತಾನು ಕಂಡುಕೊಂಡ ಸತ್ಯದ ಆಳಕ್ಕೆ ಇಳಿದು, ಅಳೆದು ತೂಗಿ ಬರೆಯಲಾರಂಭಿಸುತ್ತಾನೆ. ಅಂತಹ ಬರಹ ಅವನ ಸೃಜನಶೀಲತೆಯ ಪ್ರತಿಬಿಂಬ

ಈ ಮಧ್ಯದಲ್ಲಿ ಚರಿತ್ರೆ ಬರೆಸಿಕೊಳ್ಳುವ ವ್ಯಕ್ತಿ ಮತ್ತು ಲೇಖಕನ ನಡುವೆ 'ತೆರೆದುಕೊಳ್ಳುವ' ಪ್ರಕ್ರಿಯೆ ಸಂಭವಿಸುತ್ತದೆ. ಅಲ್ಲಿ ಜೀವನದ ಸತ್ಯ ಪ್ರತಿಪಾದನೆಗೆ ಮೊದಲ ಆದ್ಯತೆಯಾಗಿ ಬಯಸುತ್ತದೆ. ಅದರೊಳಗಿನ ಪ್ರಾಮಾಣಿಕತೆ ಹಾಗೂ ಮುಕ್ತತೆ, ಈ ಎರಡೂ ಅಂಶಗಳು ಇರಲೇ ಬೇಕಾದುದು ಅವಶ್ಯಕ.

ಇನ್ನೂ ಒಂದು ಪ್ರಶ್ನೆ ಮೂಡಬಹುದು. ಲೇಖಕ ಬರೆದದ್ದೆಲ್ಲಾ ಸತ್ಯವೆ? ಹೀಗೆ ಗುಮಾನಿಯಿಂದ ನೋಡುವವರೂ ಇದ್ದಾರೆ. ಆದರೆ ಸಮಾಜದಲ್ಲಿ ವಿಶಿಷ್ಟ ವ್ಯಕ್ತಿಯ ವ್ಯಕ್ತಿತ್ವವೇ ಅದೆಷ್ಟೋ ಅಂಶಗಳನ್ನು ಅನಾವರಣಗೊಳಿಸುತ್ತದೆ. ವಾಸ್ತವ ಎನ್ನುವುದು ವಾಸ್ತವವೇ! ಅದಕ್ಕೆ ಪರ್ಯಾಯವಿರುವುದಿಲ್ಲ. ಹಾಗಾಗಿ ಸತ್ಯದ ಆಧಾರದ ಮೇಲೆ, ಪ್ರಾಮಾಣಿಕವಾಗಿ ಗ್ರಹಿಸಿ, ಮುಕ್ತವಾಗಿ ರಚಿಸಲ್ಪಟ್ಟ ಜೀವನ ಚರಿತ್ರೆಗಳು ನೇರವಾಗಿ ಮನಸಿಗೆ ನಾಟುತ್ತವೆ, ಹೌದೆನಿಸಿಕೊಳ್ಳುತ್ತವೆ. ಪ್ರೇರಣಾದಾಯಕವೂ ಆಗಿರುತ್ತವೆ. ಆತ್ಮರತಿ, ಅನಗತ್ಯ ಹೊಗಳಿಕೆ, ಘಟನಾವಳಿಗಳ ವೈಭವೀಕರಣ ಓದುಗನಿಗೆ ರಸಭಂಗ ಮಾಡುತ್ತವೆ. ಬರಹ ವಾಸ್ತವಕ್ಕೆ ಸಮೀಪವಾದಷ್ಟೂ ಹೃದಯಕ್ಕೆ ಹತ್ತಿರವಾಗುತ್ತದೆ.

ಇಂದು ನಮ್ಮ ಎದುರಿಗೆ ನಿಂತಿರುವ ಬಹುಶಿಸ್ತಿನ, ಉನ್ನತ ವ್ಯಾಸಂಗಿ, ಮಿತಭಾಷಿ, ಕ್ರಿಯಾಶೀಲ, ನಿರಂತರ ಚಟುವಟಿಕೆಯಲ್ಲಿ ನಿರತರಾಗಿರುವ ಡಾ.ಕೊಟ್ಟೂರಶೆಟ್ಟಿಯವರು. ಅವರ ಜೀವನ ಪಯಣ ಆರಂಭದಿಂದ ಹಿಡಿದು ಇಂದಿನವರೆಗೆ ಎಳೆಎಳೆಯಾಗಿ ಬಿಡಿಸುತ್ತ ಸಾಗಿದವರು ಯಲ್ಲಪ್ಪ ಹಂಚಿನಾಳ,

ಮನುಷ್ಯನ ಬದುಕು ಸುಖದ ಸುಪ್ಪತ್ತಿಗೆಯಲ್ಲ. ಅಲ್ಲಿ ಬಡತನ-ಶ್ರೀಮಂತಿಕೆ ಎರಡರ ಸಾಧ್ಯತೆಗಳಿರುತ್ತವೆ. ಹಸಿವು ಹೇಗೆ ನೀಗುತ್ತದೆ? ಮತ್ತು ಯಾವ ದಾರಿಯ ಮೂಲಕ ನೀಗಿಸಿಕೊಳ್ಳಲಾಗುತ್ತದೆ? ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತದೆ. ಡಾ.ಕೊಟ್ಟೂರುಶೆಟ್ಟಿಯವರು ತಮ್ಮ ಬದುಕಿನಲ್ಲಿ ಸಹನೆ, ಸಂಯಮ, ಕಷ್ಟಸಹಿಷ್ಣುತೆಯನ್ನು ರೂಢಿಸಿಕೊಂಡ ಶ್ರಮಜೀವಿಗಳು. ವೈದ್ಯಕೀಯ ಕ್ಷೇತ್ರವಾದ್ದರಿಂದ ಸೇವೆಗೆ ಸಿಕ್ಕ ಅವಕಾಶವನ್ನು ಅಷ್ಟೇ ಶ್ರದ್ಧೆಯಿಂದ ಬಳಸಿಕೊಂಡಿದ್ದಾರೆ.

ಪ್ರಸ್ತುತ ಜೀವನ ಚರಿತ್ರೆ 'ಬೆವರ ಹನಿಯ ಪಯಣ'ದ ನಾಯಕ ಡಾ.ಕೊಟ್ಟೂರುಶೆಟ್ಟಿಯವರ ವ್ಯಕ್ತಿತ್ವದಿಂದ ಹಾಗೂ ಅವರ ಸೇವಾ ಭಾವದಿಂದ ಯಲ್ಲಪ್ಪ ಹಂಚಿನಾಳ ಅವರು ಸ್ಪೂರ್ತಿ ಪಡೆದುಕೊಂಡಿದ್ದಾರೆ. ಮೇಲಾಗಿ ಇಬ್ಬರೂ ಒಂದೇ ಪ್ರದೇಶದವರಾದುದರಿಂದ ಹುಟ್ಟು, ಬೆಳವಣಿಗೆ, ಪರಿಸರದ ಪ್ರಭಾವದಲ್ಲಿ ಸಾಮ್ಯತೆ ಕಂಡು ಬರುತ್ತದೆ. ಅದು ಬರಹಕ್ಕೆ ಆಂತರಿಕ ಶಕ್ತಿ ನೀಡುವುದರಲ್ಲಿ ಸಂದೇಹವಿಲ್ಲ.

ಯಲ್ಲಪ್ಪ ಹಂಚಿನಾಳ ಅವರು ಡಾ.ಕೊಟ್ಟೂರುಶೆಟ್ಟಿಯವರ ಜೀವನ ವೃತ್ತಾಂತವನ್ನು ನಿರೂಪಿಸುತ್ತ, ಕತೆಗೆ ಪೂರಕವಾದ ಸೂಕ್ತ ಜನಪದೀಯ ತ್ರಿಪದಿಗಳನ್ನು ಅರ್ಥಪೂರ್ಣವಾಗಿ ಬಳಸಿದ್ದಾರೆ. ಹಸಿವು, ಬಡತನ, ವಿದ್ಯಾಭ್ಯಾಸ, ವೃತ್ತಿ, ಮದುವೆ, ಮಕ್ಕಳು, ಸಾವು, ನೋವು, ಉನ್ನತ ಶಿಕ್ಷಣ ಮುಂತಾದ ವಿಷಯಗಳನ್ನು ಕುತೂಹಲಕರವಾಗಿ ರಚಿಸಿದ್ದಾರೆ. ಸಮರ್ಪಕವಾದ ಪ್ರಾದೇಶಿಕ ಭಾಷಾ ಸೊಗಡು ಅಲ್ಲಲ್ಲಿ ಮುದ ನೀಡುತ್ತವೆ.

ಡಾ.ಕೊಟ್ಟೂರುಶೆಟ್ಟಿಯವರ ತಾಯಿಯ ಆರ್ಥಿಕ ಭದ್ರತೆ, ಸಾವಿಗೆ ಮುಖಾಮುಖಿಯಾದ ಘಟನೆ, ಉನ್ನತ ಶಿಕ್ಷಣ ಪಡೆದ ರೀತಿ, ಕಾಲೇಜಿನ ಕಾರ್ಯಚಟುವಟಿಕೆಗಳು, ಮುಂತಾದ ಸಂಗತಿಗಳು ಗಮನ ಸೆಳೆಯುತ್ತವೆ. ಒಟ್ಟಾರೆ ಸಾಂಪ್ರದಾಯಿಕ ಶೈಲಿಯ ನಿರೂಪಣಾ ಹಂದರ ಡಾ.ಕೊಟ್ಟೂರುಶೆಟ್ಟಿಯವರ ಜೀವನ ಚಿತ್ರಣವನ್ನು ಕಟ್ಟಿಕೊಡುತ್ತದೆ. ಇವರು ಬಳಸುವ ಭಾಷಾ ಶೈಲಿಗೆ ಸಮಕಾಲೀನ ಆಧುನಿಕತೆಯ ಗತ್ತನ್ನು ಅಳವಡಿಸಿದರೆ ಇನ್ನೂ ಸಶಕ್ತವೆನಿಸುತ್ತಿತ್ತು. ಜೀವನ ಚರಿತ್ರೆಗೆ ಆಹಾರವಾದ 'ವಿಶಿಷ್ಟ ವ್ಯಕ್ತಿ' ಮತ್ತು 'ಬರಹಗಾರ' ಇಬ್ಬರ ನಡುವಿನ ಸಂಬಂಧ ಗಾಢವಾದ ಸ್ನೇಹದಿಂದ ಕೂಡಿರುತ್ತದೆ. ಏಕೆಂದರೆ ವಿಶಿಷ್ಟ ವ್ಯಕ್ತಿಯೊಳಗೆ ಆಂತರಿಕವಾಗಿ ಭಾವಕೋಶ ವಿಕಸನಗೊಂಡು ಸುಪ್ತವಾಗಿ ಅಡಗಿ ಕುಳಿತಿರುತ್ತದೆ. ಅದನ್ನು ಲೇಖಕರು ಬಗೆದು ಬಾಯಿ ಬಿಡಿಸಿದಾಗ, ಭಾವನಾತ್ಮಕ ಅಂಶಗಳನ್ನು ಹೊರಗೆಳೆಯಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಸಂಕೋಚ, ಮುಜುಗರ ಮೇಲುಗೈಯಾದಾಗ ಬರಹದಲ್ಲಿ ತೀವ್ರತೆ, ಆಳವಾದ ಭಾವನಾತ್ಮಕ ಅಂಶಗಳು ಗೌಣವಾಗುತ್ತವೆ. ಎರಡು ಮನಸುಗಳು ಮಾನಸಿಕವಾಗಿ ಮುಕ್ತವಾಗದ ಹೊರತು ಈ ಕ್ರಿಯೆ ನಡೆಯುವುದು ಕಷ್ಟ, ಯಲ್ಲಪ್ಪನವರ ಮುಂದಿನ ಬರಹಗಳಲ್ಲಿ ಇದನ್ನು ನಿರೀಕ್ಷಿಸುವ ಭರವಸೆ ಈ ಕೃತಿಯಲ್ಲಿದೆ.

ಯಲ್ಲಪ್ಪ ಹಂಚಿನಾಳ ಅವರು ಬಹಳ ಅಸಕ್ತಿಯಿಂದ ಬರಹದಲ್ಲಿ ತೊಡಗಿಸಿಕೊಂಡು ಸಾಹಿತ್ಯ ಲೋಕದಲ್ಲಿ ಶ್ರಮಿಸುತ್ತಿರುವ ಯುವ ಬರಹಗಾರರು. ಈ ಹಾದಿಯಲ್ಲಿ ಅವರ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲೆಂದು ಶುಭ ಹಾರೈಸುವೆ.

- ಕಾವ್ಯಶ್ರೀ ಮಹಾಗಾಂವಕರ

MORE FEATURES

ಮಕ್ಕಳಿಗಾಗಿ ಮೊತ್ತೆಮ್ಮೆ ಹೇಳಿದ ‘ವಿಕ್ರಮ ಬೇತಾಳ ಕಥೆಗಳು’; ಸು. ರುದ್ರಮೂರ್ತಿ ಶಾಸ್ತ್ರಿ

14-11-2024 ಬೆಂಗಳೂರು

"ಒಂದು ದಿನ ಆ ತಪಸ್ವಿ ಎಂದಿನಂತೆ ರಾಜನಿಗೆ ಹಣ್ಣನ್ನು ಅರ್ಪಿಸಿ ಹೋದಾಗ, ಅಲ್ಲಿಗೆ ಆಕಸ್ಮಿಕವಾಗಿ ಬಂದ ಒಂದು ಸಾಕಿದ ...

ಮಕ್ಕಳ ಭವಿಷ್ಯಕ್ಕೆ ಹೊಸ ಹೊಳಪು ದೊರೆಯಲಿ     

14-11-2024 ಬೆಂಗಳೂರು

"ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ...

ನಿರ್ಲಿಪ್ತ ಮನೋಭಾವದಿಂದ ಸಾಗಿದ ಏಕಾಂಗಿ ವೀರರ ರೋಚಕ ಕತೆಯಿದು

13-11-2024 ಬೆಂಗಳೂರು

"ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್...