ಮಂಡ್ಯದ ಮೊದಲ ಮಹಿಳಾ ಸಮ್ಮೇಳನಾಧ್ಯಕ್ಷೆ ಜಯದೇವಿತಾಯಿ ಲಿಗಾಡೆ

Date: 06-12-2024

Location: ಬೆಂಗಳೂರು


ಮಂಡ್ಯ: ಪ್ರತೀ ವರ್ಷ ಕರ್ನಾಟಕದಲ್ಲಿ ಕನ್ನಡದ ಏಕೀಕರಣ, ಸಾಹಿತ್ಯ ಸಂಸ್ಕೃತಿ, ಭಾಷೆಯ ಉಳಿವಿನ ಮತ್ತು ಕನ್ನಡದ ಏಳಿಗೆಯ ಉದ್ದೇಶವನ್ನು ಇಟ್ಟಿಕೊಂಡು ಸಾಹಿತ್ಯ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಇದೊಂದು ಕನ್ನಡದ ಕವಿಗಳು, ಸಾಹಿತಿಗಳ ಹಾಗೂ ಕಲಾವಿದರ ಕೂಡುವಿಕೆಯ ಸಂಗಮವೆಂದೇ ಹೇಳಬಹುದು.

ಇದೀಗ ‘ಸಕ್ಕರೆ ನಾಡು’ ಮಂಡ್ಯ ಇಂತಹ ಸಾಹಿತಿ ಕಲಾವಿದರ ಕೂಡುವಿಕೆಗೆ ಮೂರನೇ ಬಾರಿಗೆ ಸಜ್ಜಾಗುತ್ತಿದೆ. ಕುವೆಂಪು ಮೆಚ್ಚಿದ, ನಾಲ್ವಡಿ ಹರಸಿದ, ಕೆ.ವಿ ಶಂಕರಗೌಡರು ಕಟ್ಟಿದ ಮಂಡ್ಯದ ನೆಲದಲ್ಲಿ ಈಗಾಗಲೇ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘನತೆಯಿಂದ ಜರುಗಿವೆ. ಇಡೀ ನಾಡು ಕೊಂಡಾಡುವಂತೆ ಮಂಡ್ಯ ಜಿಲ್ಲೆ ಆತಿಥ್ಯ ವಹಿಸಿ, ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟಿದೆ.

ಹೀಗೆ ಸಾಹಿತ್ಯಿಕವಾಗಿ ತನ್ನದೇ ಇತಿಹಾಸವನ್ನು ಪಡೆದುಕೊಂಡಿರುವ ಮಂಡ್ಯಕ್ಕೆ ಮತ್ತೊಮ್ಮೆ ಸಾಹಿತ್ಯ ಸಮ್ಮೇಳನದ ಸುವರ್ಣ ಅವಕಾಶ ಒದಗಿ ಬಂದಿದ್ದು, ಇದೇ ಡಿಸೆಂಬರ್ 20, 21, 22 ರಂದು ಗೊ.ರು. ಚನ್ನಬಸಪ್ಪ ಅವರ ಸಭಾಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಡ್ಯ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆಸಲಾಗುತ್ತಿದೆ.

ಮಂಡ್ಯ ಜಿಲ್ಲೆಗೆ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನವನ್ನು ಆಚರಿಸುವ ಅವಕಾಶ ಒದಗಿ ಬಂದಿದ್ದು, 1974ರಲ್ಲಿ. ಜಯದೇವಿತಾಯಿ ಲಿಗಾಡೆ ಅವರು ಅಂದಿನ ಸಮ್ಮೇಳನಾಧ್ಯಕ್ಷೆಯಾಗಿ, ಮೊದಲ ಮಹಿಳಾ ಸಮ್ಮೇಳನಾಧ್ಯಕ್ಷೆಯ ಪಟ್ಟವನ್ನು ಪಡೆದಿದ್ದರು. ನಂತರ 1994ರಲ್ಲಿ ಮಂಡ್ಯ ಜಿಲ್ಲೆಗೆ ಎರಡನೇಯ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಅವಕಾಶ ಸಿಕ್ಕಿದ್ದು, ಕತೆಗಾರ, ಕಾದಂಬರಿಕಾರ ಹಾಗೂ ಚಲನಚಿತ್ರ ನಿರ್ದೇಶಕರಾಗಿ ಹೆಸರಾಗಿದ್ದ ಚದುರಂಗ ಅವರ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದರು. ಹೀಗೆ ಏಕ ಮಾತ್ರ ಮಂಡ್ಯ ಜಿಲ್ಲೆಯು ಮೂರು ಭಾರೀ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವ ಜಿಲ್ಲೆಯಾಗಿದೆ.

ಈವರೆಗೂ 87 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದೆ. 1914ರಲ್ಲಿ ಮೈಸೂರು ಒಡೆಯರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಕನ್ನಡ ಭಾಷೆಯನ್ನು ಜೀವಂತವಾಗಿ ಉಳಿಸಲು ಹಾಗೂ ಅಂಖಡ ಕರ್ನಾಟಕತ್ವದ ಕಲ್ಪನೆಯನ್ನು ಸಾಹಿತ್ಯದ ಮೂಲಕ ಉತ್ತರ, ದಕ್ಷಿಣ ಹಾಗೂ ಕರಾವಳಿ ಕರ್ನಾಟಕ ಭಾಗಗಳಲ್ಲಿ ಬಿತ್ತುವ ಧ್ಯೇಯ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಇದಕ್ಕೆ ಮೂಲ ಕಾರಣರಾದವರು ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ ಎಸ್ ಅಚ್ಯುತರಾವ್. 1935ರಲ್ಲಿ ಮತ್ತೆ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಅನ್ನು ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಮರುನಾಮಕರಣ ಮಾಡಲಾಯಿತು. ಹೀಗೆ ಕನ್ನಡ ಸಾಹಿತ್ಯ ಪರಿಷತ್ತು 1915 ರಿಂದ ಪ್ರತೀವರ್ಷ ಸಾಹಿತ್ಯ ಸಮ್ಮೇಳನವನ್ನು ಆಚರಿಸುತ್ತಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕನ್ನಡದ ಕಂಪನ್ನು, ಕನ್ನಡ ಹಿರಿಮೆಯನ್ನು, ಭಾಷಾ ವೈವಿಧ್ಯತೆಯನ್ನು ಎತ್ತಿ ಹಿಡಿದು, ಕನ್ನಡದ ಉಳಿವಿಗೆ ಸಾಕ್ಷಿಯಾಗುತ್ತಿದೆ.

ಇದೀಗ 30 ವರ್ಷಗಳ ಸುಧೀರ್ಷ ಅಂತರದ ಬಳಿಕ ಮತ್ತೆ ಮಂಡ್ಯ ಜಿಲ್ಲೆಯು ವಿಶ್ವ ಸಾಹಿತ್ಯ ಸಮ್ಮೇಳನವನ್ನು ಸ್ವಾಗತಿಸಲು ಕಾತುರತೆಯಿಂದ ಎದುರು ನೋಡುತ್ತಿದೆ.

- ರಂಜಿತಾ ಸಿದ್ಧಕಟ್ಟೆ

MORE NEWS

ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ನಡೆಯಲಿ:  ಅಮರನಾಥ ಗೌಡ  

22-12-2024 ಮಂಡ್ಯ

ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...

ಗಣಿನಾಡು ಬಳ್ಳಾರಿಯಲ್ಲಿ ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

22-12-2024 ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...

ಸರ್ಕಾರಿ ಶಾಲೆಗಳ ಜಮೀನು ಒತ್ತುವರಿಗೆ ನಾವೇ ದನಿಯಾಗಬೇಕು: ಪುರುಷೋತ್ತಮ ಬಿಳಿಮಲೆ 

22-12-2024 ಮಂಡ್ಯ

ಮಂಡ್ಯ:  100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...