ಮಹಾಭಾರತದ ಕತೆ, ಓದಿದಷ್ಟೂ ಮುಗಿಯದು, ತಣಿಯದು...


"‘ಕವಚ’ದಲ್ಲೂ ಇದೇ ಇರುವುದು. ಕರ್ಣನ ಸ್ವಗತವೇ ಅನೇಕ ಬಾರಿ ಮುಖಾಮುಖಿಯೂ ಆಗಿದೆ. ರಾಧಾಕೃಷ್ಣ ಕಲ್ಚಾರ್ ತಾನೇ ಕರ್ಣನಾಗಿ ಕುಳಿತು ಅದನ್ನು ಸಾಧಿಸಿದ್ದಾರೆ. ಪೆಟ್ಟಿಗೆಯಲ್ಲಿಟ್ಟು ತಾಯಿ ತೇಲಿಬಿಟ್ಟ ಮಗು ದಡ ಸೇರಿದ್ದು ಕತೆ. ಅದೇ ದಡದಲ್ಲಿ ಆ ಮಗು ಬೆಳೆಯಿತು, ಬದುಕಿತು, ಬಾಳಿತು, ಹೋರಾಡಿತು. ‘ಹಸ್ತಿನಾವತಿಯ ದಡ ನನ್ನನ್ನು ಉಳಿಸಿಕೊಂಡಿತು’ ಎಂಬ ಸಾಲು ಹುತ್ತಗಟ್ಟುತ್ತದೆ," ಎನ್ನುತ್ತಾರೆ ಗೋಪಾಲಕೃಷ್ಣ ಕುಂಟಿನಿ. ಅವರು ರಾಧಾಕೃಷ್ಣ ಕಲ್ಚರ್ ಅವರ ‘ಕವಚ’ ಕೃತಿ ಕುರಿತು ಬರೆದ ವಿಮರ್ಶೆ.

ಗೆಳೆಯ ರಾಧಾಕೃಷ್ಣ ಕಲ್ಚಾರ್ ತಾಳಮದ್ದಳೆ ಪ್ರಕಾರದ ಸ್ಟಾರ್ ಕಲಾವಿದ. ಶೇಣಿ, ಸಾಮಗರು ಆಳಿದ ಸಾಮ್ರಾಜ್ಯವನ್ನು ಅದೇ ಹುಮ್ಮಸ್ಸಿನಲ್ಲಿ ಆಳುತ್ತಿರುವವರು. ಕಲ್ಚಾರ್ ಅಷ್ಟೇ ಆಗಿದ್ದಿದ್ದರೆ ಸಾಕಾಗುವುದಿಲ್ಲ. ಅವರು ಅದರಾಚೆಗೆ ಅನೇಕ ಬಾರಿ ನೋಡಿದ್ದಾರೆ. ಕತೆಗಾರನಾಗಿ, ಪತ್ರಕರ್ತನಾಗಿ, ಪ್ರಾಧ್ಯಾಪಕನಾಗಿ, ಸಂಸ್ಕೃತಿ ಚಿಂತಕನಾಗಿ ಅವರು ಕನ್ನಡದ ಪರಂಪರೆಯಲ್ಲಿ ಕಾಣಿಸಿಕೊಂಡಿದ್ದಾರೆ. ನನಗೆ ಕಲ್ಚಾರ್ ಅವರ ಕತೆಗಳು ಇಷ್ಟವಾಗಿದ್ದವು. ಆಮೇಲೆ ಅವರು ಪದ್ಯಗಳನ್ನೂ ಬರೆಯುತ್ತಾರೆ ಎಂದೂ ಗೊತ್ತಾಯಿತು. ಕಲಾವಿದನೊಳಗೆ ಇವರೆಲ್ಲಾ ಬಂದು ಹೋಗಬೇಕು, ಕಲ್ಚಾರ್ ಒಳಗೆ ಇವರೆಲ್ಲಾ ಬಂದು ಕುಳಿತೇ ಇದ್ದಾರೆ.

“ಕವಚ” ಓದುತ್ತಿದ್ದೆ. ಕರ್ಣನ ಸ್ವಗತವೇ ಕವಚ. ಕಲ್ಚಾರ್ ಎಷ್ಟು ಸೊಗಸಾಗಿ ಇದನ್ನು ರೂಪಿಸಿದ್ದಾರೆ ಎಂದರೆ ಕರ್ಣನನ್ನು ಹೇಗಿದ್ದನೋ ಹಾಗೇ ತಂದು ತೋರಿಸಿದ್ದಾರೆ, ಅಳೆಯುವುದಕ್ಕಿಲ್ಲ, ತೂಗುವುದಕ್ಕಿಲ್ಲ.

ಹಾಗೇ ನೋಡಿದರೆ, ಕರ್ಣ ಒಂಟಿಯೇ. ಹಾಗಾಗಿ ಸ್ವಗತವೇ ಅವನ ಭಾಷೆ. ಕಲ್ಚಾರ್ ಅವರಿಗೆ ಇದು ಗೊತ್ತಿದೆ. ಗೊತ್ತಿರಲೇಬೇಕು. ಏಕೆಂದರೆ ಅವರು ಅರ್ಥಧಾರಿ.ಸಾಮಾನ್ಯವಾಗಿ ತಾಳಮದ್ದಳೆ ಅರ್ಥಧಾರಿಗಳಲ್ಲಿ ಒಂದು ಅನನ್ಯವಾದ ಅಧ್ಯಯನವಿರುತ್ತದೆ. ಅದು ಅನಿವಾರ್ಯ. ಪಾತ್ರವಾಗಿ ಕುಳಿತಾಗ ಸ್ವಗತದಾಚೆಗೆ ಬಂದರೆ ಎದುರಿಗಿರುವ ಪಾತ್ರದ ಜೊತೆ ಮುಖಾಮುಖಿಯಾಗಲೇಬೇಕು. ಅಲ್ಲಿ ಆ ಕ್ಷಣದಲ್ಲಿ ಶ್ರದ್ಧೆ ಮತ್ತು ಅಧ್ಯಯನ ಇಲ್ಲದೇ ಹೋದರೆ ಕಷ್ಟ. ಕಲಾವಿದನ ಜರೂರತ್ತೂ ಅದು. ಸ್ವಗತವೂ, ಮುಖಾಮುಖಿಯೂ.

‘ಕವಚ’ದಲ್ಲೂ ಇದೇ ಇರುವುದು. ಕರ್ಣನ ಸ್ವಗತವೇ ಅನೇಕ ಬಾರಿ ಮುಖಾಮುಖಿಯೂ ಆಗಿದೆ. ರಾಧಾಕೃಷ್ಣ ಕಲ್ಚಾರ್ ತಾನೇ ಕರ್ಣನಾಗಿ ಕುಳಿತು ಅದನ್ನು ಸಾಧಿಸಿದ್ದಾರೆ. ಪೆಟ್ಟಿಗೆಯಲ್ಲಿಟ್ಟು ತಾಯಿ ತೇಲಿಬಿಟ್ಟ ಮಗು ದಡ ಸೇರಿದ್ದು ಕತೆ. ಅದೇ ದಡದಲ್ಲಿ ಆ ಮಗು ಬೆಳೆಯಿತು, ಬದುಕಿತು, ಬಾಳಿತು, ಹೋರಾಡಿತು. ‘ಹಸ್ತಿನಾವತಿಯ ದಡ ನನ್ನನ್ನು ಉಳಿಸಿಕೊಂಡಿತು’ ಎಂಬ ಸಾಲು ಹುತ್ತಗಟ್ಟುತ್ತದೆ.

ಕರ್ಣ ಸೂತನ ಮಗ ಅಂತ ಆಗಿದೆ. ಸೂತರು ಪುರಾಣಿಕರೂ ಆಗಬಹುದು,ಹೊಗಳುಭಟರೂ ಆಗಬಹುದು,ರಥ ಓಡಿಸುವವರೂ ಆಗಬಹುದು, ದೋಣಿ ಚಲಾಯಿಸಬಹುದು, ಮೀನುಗಾರಿಕೆಯೂ ಮಾಡಬಹುದು. ಕರ್ಣ ಮಾತ್ರಾ ಕಲಿಯಾದ. ಅವನಿಗೆ ಇದರಾಚೆಗೆ ಬೇಕಾಗಿತ್ತು. ಅದನ್ನು ಅವನು ಹುಡುಕಿದ. ಗುರು ನಿರಾಕರಿಸಿದಾಗ, ಗುರುವಿನ ಗುರುವನ್ನು ಪಡೆದ. ಶಾಪಗ್ರಸ್ತನಾದ, ವರಫಲವನ್ನೂ ಪಡೆದ.

ಪರಶುರಾಮನ ಬಳಿ ಬಂದ ಸಂದರ್ಭ. ಕರ್ಣನಿಗೆ ಸಂದಿಗ್ಧ. ಕ್ಷತ್ರಿಯ ಎಂದರೆ ಪರಶುರಾಮ ಸಾಯಿಸುತ್ತಾನೆ, ಸೂತ ಎಂದರೆ ತೊಲಗಾಚೆ ಎನ್ನುತ್ತಾನೆ. ಕರ್ಣ ಬ್ರಾಹ್ಮಣ ತಾನು ಎಂದ. ಕಲ್ಚಾರ್ ಬರೆಯುತ್ತಾರೆ, ಬ್ರಾಹ್ಮಣನಾಗಿದ್ದ ಪರಶುರಾಮ ತನ್ನ ವರ್ಣವನ್ನು ಅತಿಕ್ರಮಿಸಿ, ಕ್ಷತ್ರಿಯನೇ ಆಗಿ ತಾನೇ ಕ್ಷತ್ರಿಯರನ್ನು ಕೊಂದಿದ್ದು, ಅಂದಮೇಲೆ ಕರ್ಣನ ವಿಚಾರದಲ್ಲಿ ಅವರೂ ಉದಾರಿಯಾಗಿ ವರ್ಣಾತಿಕ್ರಮಣಕ್ಕೆ ಏಕೆ ಸಹಕರಿಸಬಾರದು? ಒಂದು ಹಂತದಲ್ಲಿ ಕರ್ಣನಿಗೆ ಸಂಶಯವನ್ನೂ ಬರಿಸುತ್ತಾರೆ, ತಾನು ಬ್ರಾಹ್ಮಣ ಎಂದುದನ್ನು ನಂಬಿದ ಪರಶುರಾಮನಿಗೆ ತಾನು ಸುಳ್ಳು ಹೇಳಿದ್ದು ಗೊತ್ತಾಗಲಿಲ್ಲ ಎಂದರೆ ದೈವಾಂಶವೋ ಮತ್ತೊಂದೋ ಭ್ರಮೆಯೇ ಇರಬೇಕು.

ಕ್ಷಾತ್ರವಿದ್ಯಾ ಪ್ರದರ್ಶನದ ಸಂದರ್ಭ. ಕರ್ಣನಿಗೆ ಕೃಪನ ಪ್ರಶ್ನೆ, ನೀನು ಯಾರು ಹೇಳು.

ತತ್ತರಿಸಿದ ಕರ್ಣ. ಜಗತ್ತಿನ ಕರ್ಮಸಾಕ್ಷಿಯಾದ ಸೂರ್ಯನತ್ತ ತಲೆ ಎತ್ತಿ ನೋಡಿದ. ಅವನೇ ಹೇಳಬೇಕು ಇದನ್ನು.. ಕಲ್ಚಾರ್ ಪ್ರತಿಭೆ ಕಾಣುವುದು ಹೀಗೆ.

ದ್ರೌಪದಿ ಸ್ವಯಂವರದ ಸಂದರ್ಭ. ಬ್ರಾಹ್ಮಣ ಯುವಕ ಎದ್ದು ಬಂದು ಧನಸ್ಸನ್ನು ಎತ್ತಿದ. ಆ ಝೇಂಕಾರವನ್ನು ಕೇಳಿದಾಗ ಕರ್ಣನಿಗೆ ಇದನ್ನು ಎಲ್ಲೋ ಕೇಳಿದ ನೆನಪಾಯಿತು. ಕಲ್ಚಾರ್ ಪ್ರತಿಭೆ ಕಾಣುವುದು ಹೀಗೆ.

ಅರಗಿನ ಅರಮನೆಯ ಘಟನೆ. ಪಾಂಡವರು ತಾಯಿ ಸಹಿತ ಸುಟ್ಟುಹೋದ ಪ್ರಕರಣವನ್ನು ಹಸ್ತಿನಾವತಿ ಆಡಳಿತ ತನಿಖೆಗೆ ಒಳಪಡಿಸಬೇಕಿತ್ತಲ್ಲ.? ಆದರೆ ಅದನ್ನು ಮಾಡಲಿಲ್ಲ. ಹೋಗಲಿ,ಕೊನೆಗೊಮ್ಮೆ ಪಾಂಡವರು ಕಂಡಮೇಲಾದರೂ ಆ ಪ್ರಕರಣಕ್ಕೆ ಮರುಜೀವ ನೀಡಿ ತನಿಖೆಗೆ ಒಪ್ಪಿಸಬೇಕಿತ್ತಲ್ಲ? ಧೃತರಾಷ್ಟ್ರನ ಆಡಳಿತ ಅದನ್ನು ಮಾಡಲಿಲ್ಲ. ಯಾಕೆ ಮಾಡಲಿಲ್ಲ? ಯಾಕೆ ಎಂದರೆ,ತನಿಖೆ ಸಾಗುತ್ತಾ ಸಾಗುತ್ತಾ ತಮ್ಮ ಬುಡಕ್ಕೇ ಬರುತ್ತದೆ ಎಂದು ಅವರಿಗೆ ಗೊತ್ತಿತ್ತು. ಕಲ್ಚಾರ್ ಪ್ರತಿಭೆ ಕಾಣುವುದು ಹೀಗೆ.

ರಕ್ಷಾಕವಚವನ್ನು ದಾನವಾಗಿ ಕೇಳಿದ ಬ್ರಾಹ್ಮಣನಿಗೆ ಕರ್ಣ ಎರಡನೇ ಮಾತನಾಡದೇ ಕಿತ್ತು ಕೊಟ್ಟ ಹೊತ್ತು. ಕವಚ ಹೋಯಿತು. ಕರ್ಣ ಅಸಹಾಯಕನಾದ. ಇನ್ನು ನನ್ನನ್ನು ಅರ್ಜುನ ಕೊಲ್ಲುತ್ತಾನೆ. ಅಸಹಾಯಕನಾದ ಕರ್ಣನನ್ನು ಅರ್ಜುನ ಕೊಲ್ಲುತ್ತಾನೆ. ಅವನೇನಿದ್ದರೂ ಕೊಲ್ಲುವುದು ಶಕ್ತನಾದ ಕರ್ಣನನಲ್ಲ. ಕರ್ಣನಿಗೂ ಅರ್ಜುನನಿಗೂ ವ್ಯತ್ಯಾಸವಿದೆ.ನಾನು ಕೊಂದರೆ ಕೊಲ್ಲುವುದು ಪೂರ್ಣ ಶಕ್ತನಾದ ಅರ್ಜುನನನ್ನು. ಆದರೆ ಅರ್ಜುನ ನನ್ನನ್ನು ಕೊಂದರೆ ಕೊಂದಿದ್ದು ಅಸಹಾಯಕನಾದ ಕರ್ಣನನ್ನು… ಕಲ್ಚಾರ್ ಪ್ರತಿಭೆ ಕಾಣುವುದು ಹೀಗೆ.

ಆಜೂಬಾಜು ನೂರಾಐವತ್ತು ಪುಟಗಳ ‘ಕವಚ’ ಹೀಗೇ ಒಳನೋಟಗಳ ಮೂಲಕ ಆಪ್ತವೆನಿಸುತ್ತದೆ. ಕಲ್ಚಾರ್ ಭಾಷೆ ಮತ್ತು ಶೈಲಿಯನ್ನು ಸೊಗಯಿಸಿದ್ದಾರೆ. ಒಂದೇ ಸಿಟ್ಟಿಂಗ್ ಗೆ ಓದಿಸಬಲ್ಲಂಥ ಕೃತಿ. ಎಲ್ಲಾ ವಯಸ್ಸಿನವರನ್ನೂ ಒಳಗೊಳಿಸುತ್ತದೆ. ಎಷ್ಟಾದರೂ ಮಹಾಭಾರತದ ಕತೆ, ಓದಿದಷ್ಟೂ ಮುಗಿಯದು, ತಣಿಯದು.

- ಗೋಪಾಲಕೃಷ್ಣ ಕುಂಟಿನಿ

MORE FEATURES

ಮಕ್ಕಳಿಗಾಗಿ ಮೊತ್ತೆಮ್ಮೆ ಹೇಳಿದ ‘ವಿಕ್ರಮ ಬೇತಾಳ ಕಥೆಗಳು’; ಸು. ರುದ್ರಮೂರ್ತಿ ಶಾಸ್ತ್ರಿ

14-11-2024 ಬೆಂಗಳೂರು

"ಒಂದು ದಿನ ಆ ತಪಸ್ವಿ ಎಂದಿನಂತೆ ರಾಜನಿಗೆ ಹಣ್ಣನ್ನು ಅರ್ಪಿಸಿ ಹೋದಾಗ, ಅಲ್ಲಿಗೆ ಆಕಸ್ಮಿಕವಾಗಿ ಬಂದ ಒಂದು ಸಾಕಿದ ...

ಮಕ್ಕಳ ಭವಿಷ್ಯಕ್ಕೆ ಹೊಸ ಹೊಳಪು ದೊರೆಯಲಿ     

14-11-2024 ಬೆಂಗಳೂರು

"ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ...

ನಿರ್ಲಿಪ್ತ ಮನೋಭಾವದಿಂದ ಸಾಗಿದ ಏಕಾಂಗಿ ವೀರರ ರೋಚಕ ಕತೆಯಿದು

13-11-2024 ಬೆಂಗಳೂರು

"ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್...