ಕನ್ನಡದ ಓದುಗರಿಂದ, ಪತ್ರಿಕೆಗಳಿಂದ ನನಗೆ ಬೇಕಾದಷ್ಟು ಪ್ರೋತ್ಸಾಹ ದೊರೆತಿದೆ, ದೊರೆಯುತ್ತಿದೆ. ಆ ದೃಷ್ಟಿಯಿಂದ ನಾನು ಅದೃಷ್ಟಶಾಲಿಯೇ ಹೌದು, ವಾಚಕರ ವಾಣಿಯಲ್ಲಿ ಮತ್ತು ಎದುರಿಗೆ ಕಂಡಾಗ ಓದುಗ ಅಭಿಮಾನಿಗಳು ತುಂಬ ಪ್ರೀತಿ ತೋರಿದ್ದಾರೆ. ಈಗ ಓದುವದೇ ಕಡಿಮೆಯಾಗಿರುವದರಿಂದ ಕತೆ ಕವಿತೆಗಳ ಬಗ್ಗೆ ಚರ್ಚಿಸುವವರೂ ಕಡಿಮೆಯಾಗುತ್ತಿದ್ದಾರೆ, ಅದು ಬೇರೆ ಮಾತು ಎನ್ನುತ್ತಾರೆ ಭಾಗೀರಥಿ ಹೆಗಡೆ. ವನಮಾಲಾ ಸಂಪನ್ನಕುಮಾರ್ ಅವರು ಪ್ರಧಾನ ಸಂಪಾದಕರಾಗಿ, ಜಿ.ವಿ ನಿರ್ಮಲಾ ಸಂಪಾದಕರಾಗಿ, ಕರ್ನಾಟಕ ಲೇಖಕಿಯರ ಸಂಘ ಹೊರತಂದ ‘ಲೇಖ ಲೋಕ-7' ಅವರು ಬರೆದ ಆತ್ಮಕಥನ ನಿಮ್ಮ ಓದಿಗಾಗಿ...
ಘಟ್ಟದ ಕರಿಕೆಯ ಮೆಟ್ಟುವರೊ ತುಳಿವರೆ
ಮತ್ತೊಂದು ಮೊಳಕೆಯೊಡವುದು | ಘಟ್ಟದ
ಕರಿಕೆಯಂದದಲಿ ಸುಖಬಾಳು ||
ಯಾವ ತಾಯಿ ತನ್ನ ಮಗುವಿಗೆ ಹೀಗೆಂದು ಹರಸಿದಳೊ ಏನೋ - ಮಹಿಳೆಯ ವಿಷಯದಲ್ಲಂತೂ ಈ ಹರಕೆ ಅಕ್ಷರಶಃ ಫಲಿಸಿದೆ ಫಲಿಸುತ್ತಿದೆ. ಕರಿಕೆ ಎಂದರೆ ದೂರ್ವಯ ಅದೇ ಜಿಗುಟುತನ - ತನ್ನ ಒಳಬೇರಿನಲ್ಲೆಲ್ಲೊ ಜೀವ ಹಿಡಿದಿಟ್ಟು ಕೊಳ್ಳುವ ಸಾಮರ್ಥ್ಯ ಮತ್ತು ಜೀವದಾಸೆಗಳಿಂದಲೇ ಹೆಂಗಸು ಬದುಕಿದ್ದಾಳೆ-ಬದುಕುತ್ತಾಳೆ ಎಂಬುದು ಬಹುಶಃ ಸಾರ್ವಕಾಲಿಕ ಸತ್ಯವಾಗಿರಬಹುದು.
ಆದರೆ ಮಹಿಳೆಯಾದವಳು ಅದರಲ್ಲೂ ಮಧ್ಯಮ ವರ್ಗದ ಸ್ತ್ರೀ ಪ್ರಾಮಾಣಿಕವಾಗಿ ಆತ್ಮಕಥನ ಬರೆಯುವುದು ಸ್ವಲ್ಪ ಕಷ್ಟದ ಕೆಲಸವೇ ಹೌದು, ಯಾಕೆಂದರೆ ಯಾರೂ ವೈರಿಗಳೊಂದಿಗೆ - ವೈರಿದೇಶದೊಂದಿಗೆ ಯುದ್ಧ ಮಾಡುವುದು - ವೀರಾವೇಶದ ಮಾತಾಡುವುದು ಕಾರಣವಲ್ಲದ ಕಾರಣಕ್ಕಾಗಿ ಹುಂಬ ಆತ್ಮಾಹುತಿ ಮಾಡಿಕೊಳ್ಳುವದು ಸುಲಭ. ಆದರೆ ನಿಂತ ನೆಲದ ಪದರುಗಳೊಳಗಿನ ಹಿಂಸೆಯನ್ನು - ನಮ್ಮವರೆಂದು ನಂಬಿದವರ ಕೌರವನ್ನು ಬಯಲ ಬೆಳಕಿಗೊಡ್ಡುವದು ತುಂಬಾ ಕಷ್ಟ. ಯಾಕೆಂದರೆ ನಾವು ಜೀವಮಾನವಿಡೀ ಅದೇ ವಲಯದೊಳಗೆ -ಕುಟುಂಬದ ಚೌಕಟ್ಟಿನೊಳಗೆ, ನೆರಹೊರ ಸಮಾಜದೊಂದಿಗೆ, ಸಹಜ ಸಂಬಂಧವನ್ನಿಟ್ಟುಕೊಂಡೇ ಬದುಕಬೇಕಾಗುತ್ತದೆ. “ಮರ್‍ಯಾದೆ” ಎಂಬ ಮೂರಕ್ಷರ ಮಧ್ಯಮ ವರ್ಗದವರನ್ನು ಕಾಡುವಷ್ಟು ಮತ್ಯಾರನ್ನೂ ಕಾಡುವುದಿಲ್ಲ. ಜೊತೆಗೆ “ಸಂಸಾರ ಗುಟ್ಟು-ವ್ಯಾಧಿ ರಟ್ಟು” ಎಂಬ ಗಾದೆಯೇ ಇದೆ. ಇಷ್ಟೆಲ್ಲ ಅನುಮಾನಗಳ ಜೊತೆಗೆ ಅಪ್ಪ ಅಣ್ಣ ಗಂಡ ಮಗ ಮುಂತಾಗಿ ಮನೆಯ ಗಂಡಸರ ವಿರುದ್ಧ ಬರೆದರೆ 1000 ಮನೆಗಳ ಎಣಿಸಿದಂತಾಗಿಬಿಟ್ಟಿತೊ?" ಎಂಬ ಆತ್ಮ ನಿಂದನೆಯೂ ನಮ್ಮನ್ನು ಕಾಡಿಯೇ ಕಾಡುತ್ತದೆ.
ಹೀಗೆಂದು ಎಲ್ಲಾ ಮುಚ್ಚಿಟ್ಟು, ತಿಪ್ಪೆ ಸರಿಸಿದಂತೆ ಬರೆದರೆ ಇಲ್ಲಿ ನಮ್ಮ ಉದ್ದೇಶವೇ ವಿಫಲವಾಗುತ್ತದೆ. ಯಾವುದೇ ರೋಗದ ಲಕ್ಷಣ ಗೊತ್ತಾಗದೆ ಚಿಕಿತ್ಸೆ ಸಾಧ್ಯಾವಾಗುವದೂ ಇಲ್ಲ. ಈ ಹಿನ್ನೆಲೆಯಲ್ಲಿ ನಾನೊಬ್ಬ ಹೆಂಡತಿ-ಸೊಸೆ-ತಾಯಿ ಅಜ್ಜಿ ಮಾತ್ರವಲ್ಲದೆ ಒಬ್ಬಲೇಖಕಿ ಆಗಿ, ತಪ್ಪು-ಒಪ್ಪು, ಕೋಪ ಕರುಣೆ, ಸಾಧ್ಯತೆ ಮಿತಿಗಳನೆಲ್ಲಒಳಗೊಂಡ ಒಬ್ಬ ಮನುಷ್ಯ ಮಾತ್ರಳಾಗಿ ಇಲ್ಲಿ ನನ್ನ ಅನುಭವ ಅನಿಸಿಕೆಗಳನ್ನು ದಾಖಲಿಸುತ್ತಿದ್ದೇನೆ.
ನಾನಿಲ್ಲಿ ಯಾರನ್ನೂ ದೂಷಿಸುತ್ತಿಲ್ಲ - ದೂರುತ್ತಿಲ್ಲ. ಆಯಾ ಕಾಲದ ಕುಣಿಕೆಗಳೊಳಗೆ ಬಂಧಿಸಲ್ಪಟ್ಟ, ಮನುಷ್ಯರ ನಡಾವಳಿಗಳು ಅವರವರ ದೃಷ್ಟಿಯಲ್ಲಿ ಸರಿಯೇ ಆಗಿರಬಹುದು. ನನ್ನ ಬರಹಗಳಲ್ಲಿರುವ ಸ್ತ್ರೀಪರ ಕಾಳಜಿಗಳು ಉದ್ದಟತನವಾಗಿಯೂ ಕಂಡಿರಬಹುದು. ನಾನು ಅದನ್ನೆಲ್ಲ ಇಲ್ಲಿ ಎತ್ತಿ ಹೇಳುತ್ತಿಲ್ಲ. ಬದಲಾಗಿ ಒಬ್ಬ ಲೇಖಕಿಯಾಗಿ ಅನುಭವಿಸಿದ ಎದುರಿಸಿದ ಸುಖದುಃಖಗಳನ್ನು ಮಾತ್ರ ಹೇಳ ಹೊರಟಿದ್ದೇನೆ. ಒಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಸ್ತ್ರೀ ಇರುವುದನ್ನು ಯಾರು ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ, ಅವನ ಯಶಸ್ಸಿಗಾಗಿ ಆಕೆ ಸಂಭ್ರಮಿಸುವುದನ್ನು, ಹೆಮ್ಮೆ ಪಟ್ಟುಕೊಳ್ಳುವದನ್ನು ಮಾತ್ರ ಅಲ್ಲ ಗೆಳೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಈ ಮಾತು ಸ್ತ್ರೀಸಾಧನೆಯ ಸಂದರ್ಭಕ್ಕೂ ಅನ್ವಯಿಸುತ್ತದೆ ಎಂದು ನಿಕ್ಕಿ ಹೇಳಲು ಸಾಧ್ಯವಿಲ್ಲ. ಹೆಂಡತಿಯ ಸಾಧನೆಗೆ ಸಂಪೂರ್ಣ ಸಹಕಾರ ಪ್ರೋತ್ಸಾಹ ಕೊಡದಿದ್ದರೂ ಅಡ್ಡಿಯನ್ನುಂಟು ಗಂಡಂದಿರೂ ಇದ್ದಿರಬಹುದು. ಏನೇ ಆದರೂ ಅವಳ ಯೋಗ್ಯತೆಯನ್ನು ಒಪ್ಪಿ ಗೌರವಿಸುವ ಗಂಡಂದಿರ ಸಂಖ್ಯೆ ತೀರಾ ಕಡಿಮೆಯೆಂದೇ ನನ್ನ ಭಾವನೆ.
ನಾನು ಹುಟ್ಟಿದ್ದು ಮಲೆನಾಡ ಮೂಲೆ ಹಳ್ಳಿ ತಟ್ಟೀಕ್ಕೈ ಎಂಬ ಊರಲ್ಲಿ 1948 ರಲ್ಲಿ ಊರೆಂದರೆ ಗುಡ್ಡಗಳ ಬುಡದಲ್ಲಿ ಹರಡಿಕೊಂಡ ಆರೆಂಟು ಮನೆಗಳ ಗುಂಪು ಅಷ್ಟೆ. ಊರ ಅಸುಪಾಸಿನಲ್ಲೇ ಕರೆವಕ್ಕಲಿಗರು, ಕುಂದಾಪುರದಿಂದ ಘಟ್ಟ ಹತ್ತಿ ಬರುವ ಶೇರುದಾರರು ಊರೊಳಗಿರುವ ಹವ್ಯಕರು... ಹೀಗೆ ಅವರವರ ಪರಿಧಿಯಲ್ಲಿ ಶಾಂತವಾಗಿ ಬದುಕುತ್ತಿದ್ದರು. ಊರಿಗೆ ಒಂದು ಬಸ್ಸಿಲ್ಲ - ಕರೆಂಟಿಲ್ಲ - ರೇಡಿಯೊ ಇಲ್ಲ-ಆಸ್ಪತ್ರೆ ಇಲ್ಲ. ಎಲ್ಲೆಲ್ಲೂ ಒಂದು ಬೈಕು-ಜೀಪು ಅನ್ನೋದಿಲ್ಲ. ಯಾರಾದರೂ ಸಾಯಲು ಬಿದ್ದರೆ ಕಂಬಳಿಯಲ್ಲಿ ಕಟ್ಟಿ 20ಕಿ.ಮೀ ದೂರದ ಶಿರಸಿಗೆ ಹೊತ್ತು ಒಯ್ಯಬೇಕು. ಮಳೆಗಾಲ ಐದು ತಿಂಗಳಂತೂ ಎರಡು ಕಡೆಯಿಂದ ನಮ್ಮ ಸೀಮೆಯನ್ನು ಅಘನಾಶಿನಿ ನದಿ ಸುತ್ತುವರಿದಿರುವದರಿಂದ ಒಂದು ದ್ವೀಪವೇ ಆಗಿ ಬಿಡುತ್ತಿತ್ತು. ನದಿಗೆ ಸೇತುವೆಯಾಗಿರಲಿಲ್ಲ. ಆದರೆ ಊರ ಹೊರಗೆ ಒಂದು ಶಾಲೆಯಿತ್ತು. ನಮ್ಮ ಅಪ್ಪ ಅಜ್ಜ ಎಲ್ಲ ಅಲ್ಲಿ ಕಲಿತಿದ್ದಂತೆ. ಕಬ್ಬಿನ ಗದ್ದೆ ಕಾಯಲು ಕಟ್ಟಿದ ಮಾಳದಲ್ಲಿ ಪ್ರತಿ ಏಕಾದಶಿಗೆ ಪ್ರಸಂಗ. ಅಂದರೆ ತಾಳಮದ್ದಳೆ ನಡೆಯುತ್ತಿತ್ತು. ನಾವು ಹುಡುಗರೂ ದೊಡ್ಡವರೊಂದಿಗೆ ಹೋಗಿ ಕೂಡ್ರುತ್ತಿದ್ದೆವು. ಚೌತಿ ಹಬ್ಬದೆದುರಿಗೆ ಮೇಲಿನ ಮನೆ ಗಣಪ ಗಣಪ ಮಾಡುವವನು ನಾವಲ್ಲಿ ಹೋಗಿ ಗಗನ ಕೊರಳ ಸರಕ್ಕಗಿ ಮೇಣದ ಸರಿಗೆ ಹೊಸೆಯುವವರು.
ನಮ್ಮ ಮನೆಯಲ್ಲಿ ಅಪ್ಪ-ಅಮ್ಮ-ಅಣ್ಣ-ತಮ್ಮ-ನಾನು. ಜೊತೆಗೆ ಯಂಕತ್ತೆ ಅಂದರೆ ಅಪ್ಪನ ವಿಧವೆ ಅಕ್ಕ. ಅವರ ತಮ್ಮನಿಗೆ ಮೂರು ವರ್ಷವಾದಾಗಲೇ ನಮ್ಮ ತಂದೆ ತೀರಿ ಹೋದರು. ನಮ್ಮನ್ನು ಬದುಕಿನುದ್ದಕ್ಕೂ ಕಾಡಿದ ಒಂದು ದೊಡ್ಡ ಕೊರತೆ ಎಲ್ಲರಂತೆ ನಗಲಾರದ ನಲಿಯಲಾರದ ಒಂದು ಖಿನ್ನತೆಗೆ ನಮ್ಮನ್ನು ದೂಡಿದ್ದು ಇದೇ ಪರದೇಸಿತನವೇ ಇರಬೇಕು. ಅಪ್ಪನಿಗೆ ಅಪಂಡಿಸೈಟಿಸ್ ಆಗಿ ಆಪರೇಷನ್ ಆಗ್ಬೇಕು ಅಂದಿದ್ದರಂತೆ. ಆತ ಅಪರೇಚ್ಛಾರ ಹೆದರಿ ಯಾರಿಗೂ ಹೇಳದೆ, ಅದು ಒಳಗೇ ಒಡೆದು ತೀರಿ ಕೊಂಡರಂತೆ. ಆಗ ಅಣ್ಣನಿಗೆ ಒಂಬತ್ತು ವರ್ಷ, ನನಗೆ ಅರು, ನಮ್ಮ ಅಮ್ಮನಿಗೆ ಕೇವಲ 24 ವರ್ಷ. ಅದರೂ ಅಡಿಕೆ ತೋಟವಿತ್ತು. ಅನುಅಪತ್ತಿಗೊದಗಲು ಅರ್ಧಮೈಲಿ ದೂರದಲ್ಲೇ ಅಜ್ಜಿ-ಸೋದರಮಾವಂದಿರಿದ್ದರು. ಜೊತೆಗೆ ಯಂಕತ್ತೆ ಇದ್ದಳು, ಅವರೆಲ್ಲರ ಆರೈಕೆ - ಹಾರೈಕೆಯೊಂದಿಗೆ ನಾವು ಬೆಳೆದೆವು.
ಆದರೆ “ಹೆಣ್ಣು ಮಕ್ಕಿಗ್ಯಾಕೆ ಹೈಸ್ಕೂಲು ಗೈಸ್ಕೂಲು? ಅವ್ರೇನು ಓದಿ ಓದಿ ಮಾಮಲೇದಾರಿಮಾಡ್ಬೇಕಾ' ಎಂದು ನಮ್ಮಜ್ಜಿ ಹೇಳಿ ಹೇಳಿ ಐದನೇ ಕ್ಲಾಸು ಮುಗಿದ ಕೂಡಲೇ ನನ್ನ ಶಾಲೆ ಬಿಡಿಸಿಬಿಟ್ಟರು. ಆದರೂ ನಮ್ಮ ಶಾಲೆಯಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದವರ ಪರೀಕ್ಷಾ ಕೇಂದ್ರವಿದ್ದುದರಿಂದ ಶಾಲೆಗೆ ಹೋಗುವಾಗ ಪ್ರಥಮಾ ಬಿಟ್ಟಮೇಲೆ ಮಧ್ಯಮಾ ರಾಷ್ಟ್ರಭಾಷಾ-ಪ್ರವೇಶಿಕಾ ಪರೀಕ್ಷೆಗಳನ್ನು ಮನೆಯಲ್ಲೇ ಓದಿಕೊಂಡು ಪಾಸು ಮಾಡಿದೆ. ಪ್ರವೇಶಿಕಾಕ್ಕೆ ಬರೆಯಲು ಶಿರಸಿಗೆ ಹೋಗಬೇಕಿತ್ತು. ಅಮ್ಮ ಕರೆದುಕೊಂಡು ಹೋಗಿದ್ದರು.
ನನಗೆ ಹದಿಮೂರು ವರ್ಷ ತುಂಬಿ ಒಂದೆರಡು ತಿಂಗಳಾದಾಗಲೇ ಮದುವೆಯಾಯಿತು. ವರನ ಊರಂದರೆ ನಾಲ್ಕೇ ಫರ್‍ಲಾಂಗ್ ದೂರದ ಬಿಳೇಕಲ್. ಇವರು ಆಗ ಒಂಬತ್ತನೇ ಇಯತ್ತೆ ಮುಗಿಸಿ ಶಾಲೆ ಬಿಟ್ಟು, ಮನೆಯಲ್ಲಿದ್ದರು. ಅವರಿಗೆ ಹದಿನೆಂಟು ವರ್ಷ. (ಆಕೆಯಿದ್ದಳು ಕೂಸು-ಆತನಿನ್ನೂ ಹುಡುಗ!) ಇವರು ನನ್ನಣ್ಣನ ಕ್ಲಾಸ್‌ಮೇಟ್ ಆಗಿದ್ದರಿಂದ ಗುರುತಿನವರೇ. ಅತ್ತೆ ಮಾವಂದಿರ ಗುರುತೂ ಕೆಲ ಮಟ್ಟಿಗೆ ಇತ್ತು. ಸಾಕಷ್ಟು ಅನುಕೂಲಸ್ಥ ಹೌದು. ಆದರೆ ನನ್ನ ಒಪ್ಪಿಯನ್ನು ಯಾರೂ ಕೇಳಲೇ ಇಲ್ಲ. ಕೇಳುವ ಕಾಲವೂ ಅದಾಗಿರಲಿಲ್ಲ. ಕೇಳಿದ್ದರೂ ಹದಿಮೂರು ವರ್ಷದ ಹುಡುಗಿಗೆ ಅದೇನು ತಿಳಿಯುತ್ತದ ಮಣ್ಣು? ಸರಿ, ಮದುವೆಯಾಯಿತು. ನಾವೈದೇ ಜನರಿದ್ದ ಸಣ್ಣ ಕುಟುಂಬದಿಂದ ಅತ್ತೆ-ಮಾವ, ಅಕ್ಕ-ಭಾವ, ನಾದಿನಿಯರು-ಮೈದುನರು ತುಂಬಿಕೊಂಡಿದ್ದ ಮನೆಗೆ ಹೋಗಿ ಸೇರಿದೆ. ಆ ಕಾಲದಲ್ಲಿ ನನಗೆ ಮಾತ್ರವಲ್ಲ, ನನ್ನ ಓರಗೆಯ ಎಲ್ಲ ಹುಡುಗಿಯರಿಗೂ ಹದಿನಾಲ್ಕೆ ವರ್ಷಕ್ಕೆ ಮದುವೆ ಮಾಡುತ್ತಿದ್ದರು.
ನಾನೂ ಎಲ್ಲರಂತೆ ಮನೆಗೆಲಸ ಮಾಡುತ್ತ, ಹಬ್ಬ ಹುಣ್ಣಿಮೆ ಎಂದು ಸಂಭ್ರಮಿಸುತ್ತ, ನೆಂಟರ ಮನೆಗೆ ತಿರುಗುತ್ತ ಅವಿಭಕ್ತ ಕುಟುಂಬದ ಹಲವಾರು ಒಳಿತು ಕೆಡುಕುಗಳೊಳಗೆ ಒಂದಾಗುತ್ತ ಇರುವಾಗಲೇ ಹದಿನೈದೇ ವರ್ಷಕ್ಕೆ ನಾನು ತಾಯಿಯಾದೆ. (ಆಡೋ ಕೂಸಿಗೊಂದು ಕಾಡೊ ಪೋರಿ!) ಅದೇ ವರ್ಷ ಇವರು ಖಾಸಾಗಿಯಾಗಿ ಎಸ್.ಎಸ್.ಎಲ್.ಸಿ ಗೆ ಕೂತು ಪಾಸದರು. ಅದೆ ಮುನ್ನಾ ವರ್ಷ ಶಿರಸಿಯಲ್ಲಿ ಕಾಲೇಜು ಪ್ರಾರಂಭವಾಗಿತ್ತು. ಇವರು ತಾನೂ ಕಾಲೇಜಿಗೆ ಹೋಗುತ್ತೇನೆಂದು ಹಟ ಹಿಡಿದರು. ಮಾವ ಬಡಪೆಟ್ಟಿಗೆ ಒಪ್ಪಲಿಲ್ಲ. ಇವರು ಬಿಡಲಿಲ್ಲ. ಅಂತೂ ಇಂತೂ ನಾಲ್ಕು ವರ್ಷ ಶಿರಸಿ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಎಂ.ಎ ಮಾಡಲು ಧಾರಾವಾಡಕ್ಕೆ ಹೊರಟಾಗ ನಾನು ಮೂರನೇ ಮಗುವಿನ ತಯಾರಿಯಲ್ಲಿದೆ.
ಇಲ್ಲಿ, ಗಂಡನಿಲ್ಲದ ಗಂಡನ ಮನೆಯಲ್ಲಿ, ಆ ಸಣ್ಣ ಮಕ್ಕಳೊಂದಿಗೆ ಅವರೆಲ್ಲರ ನಡುವೆ ನಾನು ಹೇಗೆ ಕಾಲ ಕಳೆದನೆಂಬುದು ದೇವರಿಗೇ ಗೊತ್ತು. ಹೇಳ ಹೊರಟದೆ ಅದೊಂದು ಒಡ್ಅಡ ಪುರಾಣವೇ ಆಗುತ್ತದೆ. ಎಲ್ಲ ಮಧ್ಯಮ ವರ್ಗದ ಸೊಸೆಯಂದಿರಂತೆ ನಾನು ಬದುಕಿದೆ. (ವಿ.ಕೃ. ಗೋಕಾಕರ ಇಜ್ಜೋಡು ಯಾಕೋ ಇಲ್ಲಿ ನೆನಪಾಗುತ್ತಿದೆ. ) ಅದೇ ಹೊತ್ತಿಗೆ ಅಂದರೆ ಬಹುಷ್ಯ 1967 ಇರಬೇಕು, ಒಂದು ಹಾಡು ಕಟ್ಟಿದೆ. ‘ಬಂತಿದೂ ಚುನಾವಣೆ ಬಂತಿದೊ-ಚುನಾವಣೆ” ಅಂತ ಅದನ್ನು ಹೊನ್ನಾವರದ ಒಂದು ಪತ್ರಿಕೆಗೆ ಹೆಸರು 'ಜನತಾ' ಎಂದು ನೆನಪು ಕಳಿಸಿದೆ. ಅದು ಅಲ್ಲಿ ಪ್ರಕಟವೂ ಆಯಿತು. ಅದೇ ನನ್ನ ಮೊದಲ ಕವಿತೆ. ಈ ಮೊದಲೇ ನಾನು ಸಂಪ್ರದಾಯದ ಹಾಡುಗಳನ್ನು ಕಟ್ಟುತ್ತಿದ್ದೆ. ನನ್ನ ಅಮ್ಮನೂ ಹಾಡು ಕಟ್ಟುತ್ತಿದ್ದರು. ಅಣ್ಣ ಕಾಲೇಜು ದಿನಗಳಲ್ಲಿ ಕವಿತೆ ಬರೆಯುತ್ತಿದ್ದ. ನನ್ನ ಈ ಕವಿತೆ ಓದಿದವನು ಆರೆಂಟು ಕವನ ಸಂಕಲನಗಳನ್ನು ತಂದುಕೊಟ್ಟು ಇವುಗಳನ್ನೋದು ನಿನ್ನ ಬರವಣಿಗೆಗೆ ಸಹಾಯವಾಗುತ್ತದೆ ಅಂದ". ಯಾವ ಕಾರಣಕ್ಕೂ ಬರೆಯುವದನ್ನು ನಿಲ್ಲಿಸಬೇಡ ಎಂದು ತುಂಬಾ ಒತ್ತಾಸೆ ನೀಡಿದ. ನನ್ನ ಬರವಣಿಗೆಯ ಹಿಂದೆ ನನ್ನಣ್ಣನ ತುಂಬು ಪ್ರೋತ್ಸಾಹದ ಬೆಂಬಲವಿದೆ.
1969ರಲ್ಲಿ ಇವರು ಎಂ.ಎ. ಮುಗಿಸಿ ಶಿರಸಿಯ ಮಾರಿಕಾಂಬಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದಾಗ ನಾನೂ ಮೂರು ಮಕ್ಕಳೊಂದಿಗೆ ಶಿರಸಿ ಸೇರಿದೆ. ಇಲ್ಲಿ ಬದುಕು ಬಹುಮುಖ್ಯವಾದೊಂದು ತಿರುವು ತೆಗೆದುಕೊಂಡಿತು. ಇವರು ಲೈಬ್ರರಿಯಿಂದ ಅದೂ ಇದೂ ಪುಸ್ತಕ ತಂದುಕೊಡುತ್ತಿದ್ದರು. ನಾಲ್ಕಾರು ವರ್ಷದ ನಂತರ ಪ್ರಜಾವಾಣಿ ತರಿಸಲು ಆರಂಭಿಸಿದೆವು. ಹಿಂದಿಯ 'ಧರ್ಮಯುಗ' ಸಾಪ್ತಾಹಿಕವೂ ಸೇರಿದಂತೆ ಎಲ್ಲವನ್ನೂ ಗಬ ಗಬ ಓದುತ್ತಿದೆ. ‘'ಆಯಿ ಪೇಪರಿನ ಕೊನೆಯ ಪುಟದ ಕೊನೆ ಅಕ್ಷರದವರೆಗೂ ಓದ್ತಾಳೆ' ಅಂತ ಮಕ್ಕಳು ಚಾಳಿಸುತ್ತಿದ್ದರು. ಒಂದು ಕಾದಂಬರಿ ಹಿಡಿದರೆ ರಾತ್ರಿ ಎರಡಾಗಲಿ, ಮೂರಾಗಲಿ ಮುಗಿಸಿಯೇ ಮಲಗುತ್ತಿದ್ದೆ. ಈಗ ಮಾತ್ರ ರಾತ್ರಿ ಹತ್ತರ ನಂತರ ಒಂದಕ್ಷರ ಓದಲಿಕ್ಕೂ ಆಗುವುದಿಲ್ಲ. ಆದರೆ ಈ ಓದುವ ಚಟ ಬಾಲ್ಯದಿಂದಲೇ ನನಗೆ ಅಂಟಿಕೊಂಡಿದ್ದು, ನಮ್ಮೂರಿನಲ್ಲಿ ಅಂಬಿಕಾ ವಾಚನಾಲಯ ಅಂತ ಇತ್ತು. ಈಗಲೂ ಇದೆ. ಕಣ್ಣಿಗೆ ಕಂಡ ಪುಸ್ತಕವನ್ನೆಲ್ಲ ಅಲ್ಲಿಂದ ತಂದುಕೊಂಡು ಓದುತ್ತಿದ್ದೆ. ಒಮ್ಮೆ 'ಚಿತ್ರಲೇಖ' ಎಂಬ ಹಿಂದಿ ಮೂಲದ ಕಾದಂಬರಿ ತಂದು ಕೊಂಡಿದ್ದೆ. ಅದನ್ನು ನೋಡಿದ ಅಣ್ಣ ''ಭಾಗಿ ಹೊಲಸೊಲಸು ಪುಸ್ತಕ ತಂದೊಂಡು ಓದ್ತಾಳೆ ಎಂದು ಆಯಿಗೆ ದೂರ ಹೇಳಿದ್ದ. ಆವಾಗ ನನಗೆ ತುಂಬಾ ಅವಮಾನವಾಗಿತ್ತು. ಆದರೆ ಇಂದು ನೋಡಿದರೆ ಅಂಥಾ ಹೊಲಸು ಅನ್ನುವಂಥದ್ದೇನಿದೆ ಅದರಲ್ಲಿ? ಎಂದು ಆಶ್ವರ್‍ಯವಾಗುತ್ತದೆ. ಈ ನಡುವೆ 1971ರಲ್ಲಿ ಇವರಿಗೆ ಹತ್ತು ತಿಂಗಳು ಆಗ್ರಾದಲ್ಲಿ ಒಂದು ಟ್ರೇನಿಂಗ್ ಇತ್ತು.ಅಲ್ಲಿಯ ಊಟ ತಿಂಡಿಗೆ ಒಗ್ಗದೇ ಎರೆಡೇ ತಿಂಗಳಿಗೆ ಬಂದು ಸಣ್ಣ ಮಗಳೊಂದಿಗೆ ನನನ್ನು ಕರೆದುಕೊಂಡು ಹೋದರು. ಐದಾರು ತಿಂಗಳು ಅಲ್ಲಿ ಉಳಿದು ನನ್ನ ಲೋಕಾನುಭವವೂ ಹೆಚ್ಚಿತು ಅಂದುಕೊಳ್ಳುತ್ತೇನೆ. ಅಲ್ಲಿಂದು ನಾವು ಬಂದಿದ್ದೇ. ನಮ್ಮ ಜಿಲ್ಲೆಯ ಉತ್ತರ ತುದಿಯಲ್ಲಿರುವ ಹಳೆಯಾಳಕ್ಕೆ ಇವರಿಗೆ ವರ್ಗವಾಯಿತು. 22ರಿಂದ 29ರವರೆಗೆ ಅಲ್ಲಿದ್ದೆವು. ನಾವು ಅದು ನೀರಿಲ್ಲದ ಊರು. ಸುತ್ತಮುತ್ತ ಮರಾಠಿ ಭಾಷಿಕರು. ನಮ್ಮೂರಿನಿಂದ ಸಾಕಷ್ಟು ದೂರವಿದ್ದುದರಿಂದ ಯಾರೂ ಬರ ಹೋಗುವವರೂ ಇಲ್ಲ. ನಾವೈದು ಮಂದಿಯ ಅಡುಗೆಯೆಂದರೆ ಇಡೀ ದಿನವಂತೂ ಬೇಕಾಗುವದಿಲ್ಲವಲ್ಲ, ಅಲ್ಲದೆ ನಾನಾಗಿ ಹೋಗಿ ಯಾರನ್ನಾದರೂ ಮಾತಾಡಿಸುವವಳೂ ಅಲ್ಲ. ಜೊತೆಗೆ ಹೆಂಗಸರ ಕೈಲಿ ಮಾತಾಡಲಿಕ್ಕೂ ಏನೋ ಕೀಳರಿಮೆ-ಕಳವಳ ಹೀಗಾಗಿ ಬೇಜಾರು ಕಾಯಲು ಹೊಲಿಗೆ ಕ್ಲಾಸಿಗೆ ಸೇರಿಕೊಂಡ ನಂತರ 'ನೀ ಮೊದ್ಲು ಎಸ್ಸೆಸ್ಸೆಲ್ಸಿ ಮಾಡ್ಲಬೇಕು" ಎಂಬ ಅಣ್ಣನ ಒತ್ತಾಯಕ್ಕೆ ಮಣಿದು ಖಾಸಗಿಯಾಗಿ ಕುಳಿತು ಪರೀಕ್ಷೆ ಬರೆದೆ. ಫಸ್ಟ್ ಕ್ಲಾಸ್ ನಲ್ಲಿ ಪಾಸೂ ಆದೆ. (ಗಣಿತಕ್ಕೆ ಮಾತ್ರ ಕೇವಲ 37 ಮಾರ್ಕ್ಸ್‌ಗಳು )1975ರಲ್ಲಿ.
ಆ ಅಭ್ಯಾಸದ ಕತೆಯನ್ನಷ್ಟು ಇಲ್ಲಿ ಹೇಳಲೇಬೇಕು. ಆಗ ನಮ್ಮ ಹಿರಿ ಮಗಳು ಜಯಾ ಏಳನೇ ಕ್ಲಾಸ್,.ಎರಡನೇಯವಳು ಉಷಾ ಐದು, ಸಣ್ಣವಳು ಆಶಾ ಎರಡು, ಮನೆಗೆಲಸ ಅಡಿಗೆ ಎಲ್ಲ ಮಗಿಸಿ ಈ ಮೂರೂ ಮಕ್ಕಳಿಗೆ ಪ್ರಸ್ನೋತ್ತರ ಅದೂ ಇದೂ ಹೇಳಿಕೊಟ್ಟು ಉಳಿದ ವೇಳೆಯಲ್ಲಿ ನನ್ನ ಅಭ್ಯಾಸ. ಅವರಿಗೆ ಕಲಿಸುತ್ತ ನಾನೂ ಕಲಿತೆ. ಅವರೊಂದಿಗೆ ನಾನೂ ಬೆಳೆದೆ ಬುದ್ಧಿಯಲ್ಲಿ. ಎಲ್ಲ ಮಲಗಿದ ಮೇಲೆ ರಾತ್ರಿ ಹನ್ನೆರಡರವರೆಗೆ ಕೂತು ಓದುತ್ತಿದ್ದೆ. ಐದು ನಿಮಿಷ ಬಿಡುವು ಸಿಕ್ಕರೂ ಅಚೀಚೆ ನೋಡದೆ ಲೆಕ್ಕ ಬಿಡಿಸುತ್ತಿದ್ದೆ. ಅ ಲೆಕ್ಕ ಮಾತ್ರ ಏನು ಮಾಡಿದರೂ ನನ್ನ ತಲೆಯೊಳಗೆ ಹೋಗಲೇ ಇಲ್ಲ. ಇವರು ಎಸ್ಸೆಸ್ಸೆಲ್ಸಿ ಮ್ಯಾಗಝಿನ್ ತರಿಸಿಕೊಟ್ಟಿದ್ದರು. ಎದುರು ಮನೆ ಹುಡುಗಿ ಪಬ್ಬಿ ನನ್ನ ಜೊತೆ ಅಭ್ಯಾಸಕ್ಕೆ ಬರುತ್ತಿದ್ದಳು. ಅಷ್ಟು ಬಿಟ್ಟರೆ ಗಣಿತ ವಿಜ್ಞಾನ - ಇಂಗ್ಲೀಷ್ ಕಲಿಸುವವರು ಯಾರೂ ಇಲ್ಲ. ಒಮ್ಮೆಯಂತೂ ಲೆಕ್ಕ ಬಗೆಹರಿಯದೇ ತಲೆಚಿಟ್ಟು ಹಿಡಿದಾಗ ಮಕ್ಕಳು ಬಂದು ಏನೋ ಕೇಳಿದ್ದಕ್ಕೆ ಸಿಟ್ಟಾಗಿ ಕಂಪಾಸ್ ಬಾಕ್ಸ್-ಪುಸ್ತಕ ಎಲ್ಲ ತೆಗೆದು ಬಿಸಾಕಿ ಬಿಟ್ಟಿದ್ದೆ. ಮುಂದೆ ಕಾಲೇಜಿಗೆ ಅಡ್ಮಿಷನ್ ಮಾಡಿಸಿ ಒಂದೆರಡು ದಿನ ಕ್ಲಾಸಿಗೂ ಹೋಗಿದ್ದೆ. ಆದರೆ, ಏನೇನೂ ಅರ್ಥಿಕ ತೊಂದರೆಗಳು ಎದುರಾಗಿ ನಾನಿನ್ನು ಕಲಿತು ಮಹಾ ಏನು ಮಾಡೋದಿದೆ? ಮಕ್ಕಳು ಕಲಿಯಲಿ, ಅವರು ಕಲಿಯುವಷ್ಟು ಕಲಿಸೋಣ ಎಂಬ ವಿಚಾರದಲ್ಲಿ ಕಾಲೇಜು ಸುದ್ದಿ ಬಿಟ್ಟೆ. ಈಗಲೂ ಕೂಡ ಒಂದು ದಿನ ಎಂ.ಎ. ಮಾಡಬೇಕು ಎಂಬ ಆಸೆ ತೀವ್ರವಾಗಿದೆ. ಅದು ಯಾವತ್ತಾದ್ರೂ ಸಾಧ್ಯ ವಾಗುತ್ತೋ ಇಲ್ಲವೋ ದೇವರಿಗೇ ಗೊತ್ತು.
ಅದೇ ಹೊತ್ತಿಗೆ ಹಳಿಯಾಳದಲ್ಲಿದ್ದ ಸಾಹಿತಿ ಪಿ.ವಿ. ಶಾಸ್ತ್ರಿಯವರು ನಮ್ಮ ಫ್ಯಾಮಿಲಿ ಫ್ರೆಂಡ್ ಆಗಿದ್ದರು. ಟಿ.ಜಿ. ಭಟ್ಟ ಹಾಸಣಗಿಯವರು ಆಗ ಹುಬ್ಬಳ್ಳಿಯ 'ವಿಶಾಲ ಕರ್ನಾಟಕ' ಪತ್ರಿಕೆಯಲ್ಲಿದ್ದರು. ಅವರಿಬ್ಬರೂ ಸೇರಿ ಒಮ್ಮೆ ನಮ್ಮಲ್ಲಿಗೆ ಬಂದಾಗ ಹೀಗೆ ಮಾತು ಬಂದು ನಾನು ಕವಿತೆ ಬರೆಯುವ ವಿಷಯವೂ ಹೊರ ಬಂತು. ಹಾಗೇ ಭಟ್ಟರು ನನ್ನದೊಂದು ಕವಿತೆ ಒಯ್ದು ಪ್ರಟಕಿಸಿಯೂ ಬಿಟ್ಟರು. ಅಲ್ಲದೆ “ವಿಶಾಲ ಕರ್ನಾಟಕ ದೀಪಾವಳಿ ಕವನ ಸ್ಪರ್ಧೆ’’ ಯ ವಿಷಯ ತಿಳಿಸಿದರು. ನನ್ನ “ಜನ್ಮ” ಕವಿತೆಗೆ ಎರಡನೇ ಬಹುಮಾನ ಸಿಕ್ಕಿತು. (1976). ಅದರಿಂದಾಗಿ ನಾನು ಅಧಿಕೃತವಾಗಿ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯಿಟಂತಾಯಿತು. ಆ ಸುದ್ದಿ ತಿಳಿದಾಗ ನನಗಾದ ಸಂತೋಷ, ಸಂಭ್ರಮದ ಸವಿಯನ್ನು ವರ್ಣಿಸಲು ಸಾಧ್ಯ ಇಲ್ಲ. ಆನಂತರ, ಎಷ್ಟೇ ಮೊತ್ತದ ಬಹುಮಾನಗಳು ಬಂದರೂ ಅಷ್ಟು ಸಂತೋಷವಿಲ್ಲ. ಯಾಕೆಂದರೆ ಅಂದು ನಾನು ``ನನ್ನದಾದ 75'' ರೂಗಳನ್ನು ಮೊಟ್ಟಮೊದಲಬಾರಿಗೆ ಕಂಡಿದ್ದೆ. ಅದಕ್ಕಿಂತ “ಬಹುಮಾನ" ಅನ್ನುವದು ದೊಡ್ಡದಾಗಿತ್ತು. ಅಲ್ಲದೆ ಏನೇನೂ ಆಗಿರದ ತಟ್ಟೀಕೈ ಬಾಯಾ, ಜನರ ಮುಖ ಕಂಡ ಕೂಡಲೇ ತಲೆ ತಗ್ಗಿಸಿ, ನಾಲಿಗೆ ತೊದಲ್ಲಿ ಬೆವರುತ್ತಿದ್ದ ಬಾಯಾ-ಬಾಯಾ ಅಂದರೆ ಭಾಗೀರಥಿಯ ಸಂಕ್ಷಿಪ್ತ ರೂಪ-ಕವಯಿತ್ರಿಯಾದ ಪವಾಡವೊಂದು ಅಲ್ಲಿ ಜರುಗಿತ್ತು. ದಯವಿಟ್ಟು ತಪ್ಪು ತಿಳಿಯಬಾರದು. ಇದಕ್ಕೆ ಮಹಾ ಸಾಧಿಸಿದನೆಂದು ಕೊಚ್ಚಿಕೊಳ್ಳುತ್ತಿಲ್ಲ. ಇದ್ದದ್ದು ಇದ್ದ ಹಾಗೆ ಬರೆಯುತ್ತಿದ್ದೇನಷ್ಟೇ. ಮರು ದೀಪಾವಳಿ ಸ್ಪರ್ಧೆಯಲ್ಲೂ ನನ್ನ “ಬದುಕು’' ಕವನಕ್ಕೆ ಎರಡನೇ ಬಹುಮಾನ ಸಿಕ್ಕಿತ್ತು. (1977).
ಪಿ.ವಿ. ಶಾಸ್ತ್ರಿಯವರು ಅಲ್ಲಿರುವನ್ನೂ ದಿನ ಆಗಾಗ ಬಂದು ನನಗೆ ಬರವಣಿಗೆಯ ಮಾರ್ಗದರ್ಶನ ಮಾಡುತ್ತಿದ್ದರು. ಒಮ್ಮೆ ಶ್ರೀ ಅಕಬರ ಅಲಿಯುವರನ್ನೂ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಆ ಮೇಲೆ ಅವರು ಹಟ್ಟಿ ಚಿನ್ನದ ಗಣಿಯ ಹೈಸ್ಕೂಲಿಗೆ ವರ್ಗವಾಗಿ ಹೋದರು. 1979ರಲ್ಲಿ ಇವರಿಗೆ ತಿರುಗಿ ಶಿರಸಿಯ ಮಾರಿಕಾಂಬಾ ಹೈಸ್ಕೂಲಿಗೆ ವರ್ಗವಾಗಿ ಇಲ್ಲಿಗೆ ಬಂದೆವು. ಈ ಪ್ರಯಾಣ, ಬದುಕಿನ ಮತ್ತೊಂದು ಬಹುಮುಖ್ಯ ತಿರುವಾಗಿತ್ತು.
1973ರಲ್ಲಿ ತುಷಾರ ಮಾಸಿಕ ಪ್ರಾರಂಭವಾದಾಗಿನಿಂದ ನಾನದನ್ನು ಕೊಂಡುಕೊಳ್ಳುತ್ತಿದೆ. ಅದರಲ್ಲಿಯ ಕತೆಗಳನ್ನು ಎರಡೂ ಮೂರು ಬಾರಿ ಓದಿದ್ದೂ ಉಂಟು. ಚಿತ್ರ ಕವನ ಸ್ಪರ್ಧೆಗೆ ಕವಿತೆ ಬರೆಯುತ್ತಿದ್ದೆ. ಹಾಗೆ 77ರ ಮಾರ್ಚ್ ಸಂಚಿಕೆಯಲ್ಲಿ ನನ್ನದೊಂದು ಪುಟ್ಟ ಕವಿತೆ "ಸ್ಥಿರ" ಪ್ರಕಟವಾಗಿ ತುಪಾರದೊಂದಿಗಿನ ನನ್ನ ನಂಟು ಪ್ರಾರಂಭವಾಯಿತು. ನಂಟು ಅಂದರೆ ತುಪರ ಕಾರ್‍ಯಾಲಯವನ್ನು ನಾನಿನ್ನೂ ನೋಡಿಲ್ಲ. ಅದರ ಸಂಪಾದಕರಲ್ಲಿ ಶ್ರೀ ಚರಂಜೀವಿ ಯವರನ್ನು ಇಲ್ಲಿ ನಡೆದ ತುಷಾರೋತ್ಸವದಲ್ಲಿ ಕಂಡಿದ್ದು ಬಿಟ್ಟರೆ ಮತ್ಯಾರನ್ನೂ ಕಂಡೂ ಇಲ್ಲ. ಆದರೆ ನಾನು ಕತೆಗಾರ್ತಿಯಾಗಿ ಬೆಳೆದದ್ದು ತುಷಾರದಿಂದಲೇ ಎಂಬುದು ನಿರ್ವಿವಾದ. ನನ್ನ ಮೊದಲ ಕತೆ "ನಮ್ಮ ಲುಬುಗಳ ಮೇಲೆ ಬೆಳಕು ಕಂಡಿದ್ದು ಕೂಡ ತುಷಾರದಲ್ಲಿಯೇ (1982ರಲ್ಲಿ ) ಆ ಕತೆಯ ಗೌರವಧನ ರೂ.75 ರಿಂದ, ನಾಲ್ಕು ಜನ ಬಂದರೆ ಸಾರು ಮಾಡಲು ಬೇಕೆಂದು ಒಂದು ಸ್ಟೀಲ್ ಬೋಗುಣಿ ಒಂದೆರಡು ಸೌಂಟು ಕೊಂಡುಕೊಂಡೆ. ಮಂಗಳದಲ್ಲಿ ಬಂದ ಕವಿತೆಯ ಹಣದಿಂದ ಒಂದು ಹೂಬುಟ್ಟಿಕೊಂಡು ಕೊಂಡೆ. ಯಾಕೆಂದರೆ ನಾವು ಶಿರಸಿಯಲ್ಲಿ ಸಂಸಾರ ಹೂಡುವಾಗ ನಾಲ್ಕಾರು ಪಾತ್ರೆಗಳ ಹೊರತಾಗಿ ಏನನ್ನೂ ತಂದಿರಲಿಲ್ಲ. ಎಲ್ಲಾ ಬ್ರಹ್ಮ ಸೃಷ್ಟಿ ಬುಡದಿಂದ ಪ್ರಾರಂಭವಾಗಬೇಕಿತ್ತು. ನನ್ನ ಬರವಣಿಗೆ ನನ್ನ ಅಡುಗೆ ಮನೆಗೆ ಈ ರೀತಿಯಲ್ಲಿ ಸಹಾಯಕವಾಯಿತು. ಆದರೆ ನಾನು ಕತೆ ಬರೆಯತೊಡಗಿದ್ದು ಕೂಡ ಒಂದು ಆಕಸ್ಮಿಕವೇ ಹೌದು. ತಮ್ಮನ ಹೆಂಡತಿ ಭಾರತಿ “ಅತ್ಗೆ ಕವಿತೆ ಯಾಋಉ ಓದೋದಿಲ್ಲ. ಕತೆ ಬರಿ’ ಎಂದು ಸರ ಒತ್ತಾಯಿಸದಿದರೆ ಬಹುಶಃ ನಾನು ಕವಿತೆಯಲ್ಲೇ ನಿಂತು ಬಿಡುತ್ತಿದ್ದನೇನೋ ಅಥವಾ ಅದರಲ್ಲೇ ಇನ್ನೂ ಹೆಚ್ಚಿನ ಸಾಧನೆ ಸಾಧ್ಯವಾಗುತ್ತಿತ್ತೋ? ಎಂಬುದು ಗೊತ್ತಿಲ್ಲದ ಮಾತು. ಆದರೆ ನನ ಸ್ತ್ರೀವಾದಿ ಲೇಖಕಿಯಾದದ್ದು ಹೇಗೆ ಎಂಬುದು ನನಗೆ ಇಂದಿಗೂ ಒಂದು ಚೋದಿಗದ ಸಂಗತಿಯೇ ಹೌದು. ಯಾಕೆಂದರೆ ನಾನು ಗಂಡನಿಗೆ- ಗಂಡಸರಿಗೆ ಎದುರುತ್ತರ ಕೊಡಬಾರದು- ಕೊಡಕೂಡದು ಎಂಬಂಥ ಮಾತಾವರಣದಿಂದ ಬಂದವಳು. ಇವರು ಏನೇ ಹೇಳಿದರೂ, ಏನೇ ಮಾಡಿದರೂ ಒಮ್ಮೆ ಅತ್ತು ಒಮ್ಮೆ ಗೊಣಗುಟ್ಟಿ, ಇನ್ನೊಮ್ಮೆ ಸಿಟ್ಟು ಮಾಡಿ ನಂತರ ಸುಮ್ಮ ನಾಗುವವಳು. ಅಂಥವಳು 'ಹೆಣ್ಣಾಗಿ ಹುಟ್ಟಿ' ಎಂಬ ಕತೆಯನ್ನು ಹೇಗೆ ಬರೆದೆ? ಎಂದು ನನಗಿಂದಿಗೂ ಆಶ್ವರ್‍ಯಾವಾಗುತ್ತದೆ.
ಆದರಿಲ್ಲಿ, ಈ ಕತೆಯ ಮತ್ತು ಇಂಥ ಕತೆಗಳ ಹಿನ್ನೆಲೆಯಾಗಿ ಒಂದಿಷ್ಟು ಸಂಗತಿಗಳನ್ನು ನೆನಪಿಸಿಕೊಳ್ಳಬೇಕು. 1978ರಲ್ಲಿ ನಮ್ಮ ಮಾವ ತೀರಿಹೋದರು. ಹಿರಿಯ ಭಾವನಿಗೆ ಮತ್ತು ಕಿರಿಯ ಮೈದುನಂದಿರಿಗೆ ಸೇರಿ ಬರದೆ ನಾವು ಶಿರಸಿಗೆ ಬಂದ ತಿಂಗಳೊಪ್ಪತ್ತಿನಲ್ಲೇ ಬೇರೆಯಾದರು. ತಾಯಿ ತಂಗಿ-ತಮ್ಮಂದಿರ ಮೇಲುಸ್ತುವಾರಿಯನ್ನು ಇವರು ಹೊತ್ತುಕೊಂಡು ವಾರಕ್ಕೆರಡು ದಿನ ಅಲ್ಲಿಗೆ ಹೋಗಿರುತ್ತಿದ್ದರು. 81ರಲ್ಲಿ ಇಲ್ಲಿ ಸ್ವಂತ ಮನೆಯನ್ನು ಕಟ್ಟಿಸಿದ್ದರಿಂದ ಮೈ ತುಂಬಾ ಸಾಲವಾಗಿತ್ತು. ಮೂರೂ ಮಕ್ಕಳು ಕಲಿಯುವವರು, ಊರು ಸಮೀಪವಿದ್ದುದರಿಂದ ದಿನ ನಿತ್ಯವೆಂಬಂತೆ ಬಂದು ಹೋಗುವವರು, ಬಂದವರಿಗೆ ವಿಶೇಷ ಅಡಿಗೆಯನ್ನೇನೂ ಮಾಡಿ ಬಡಿಸಲಿಲ್ಲ. ಕೇವಲ ಅನ್ನಸಾರು, ದೋಸೆ, ಇಡ್ಲಿ ಅಷ್ಟೆ, ಅದನ್ನೂ ಕೂಡ ಒಂದೇ ಒಂದು ಹಿತ್ತಾಳೆ ಪಂಪ್ ಸ್ಟವ್ ನಲ್ಲಿ ಬೇಯಿಸಬೇಕಿತ್ತು. ಹೀಗಿರುವಾಗ ನನ್ನ ಬರವಣಿಗೆಗೆ ಕಾಗದ ಕವರು, ಸ್ಟಾಂಪುಗಳಿಗೆ ದುಡ್ಡು ಸಿಗುವುದೂ ಕಷ್ಟವೇ ಆಗಿತ್ತು. ಯಾವಾಗ ಕೇಳಿದರೂ ಇವರು ದುಡ್ಡಿಲ್ಲ ಎಂದೇ ಹೇಳುತ್ತಿದ್ದರು. ಆಗ ಅಕ್ಕಪಕ್ಕದವರಿಗೆ ಬ್ಲೌಸು ಲಂಗ ಹೊಲಿದುಕೊಟ್ಟು ಆ ಹಣದಿಂದ ಬರವಣಿಗೆಯ ಸಾಮಗ್ರಿ ತಂದು ಕೊಳ್ಳುತ್ತಿದ್ದೆ. ಆ ಕಾರಣವಾಗಿ ನಾನೊಂದು ಹೇಳುವದು - ಇವರು ಮತ್ತೊಂದು ಹೇಳುವದು, ಮಾತಿಗೆ ಮಾತು ಬೆಳೆದು ಜಗಳ, ನಂತರ ತಿಂಗಳು ಗಟ್ಟಿ ಮಾತು ಬಿಡುವುದು ಹೀಗೆ ಬದುಕು ದುರ್ಭರವಾಗಿತ್ತು. ಇವರಿಗೆ ಕ್ರಮೇಣ ಹೆಂಡತಿ ಮಕ್ಕಳ ಮೇಲೆ ಉದಾಸೀನ ಅಸಡ್ಡೆ ಹೆಚ್ಚಾಗುತ್ತ ಹೋಗಿ 94ರಲ್ಲಿ ಆ ಮೃದನಂದಿರು ಇವರಿಂದ ಬೇರೆಯಾಗುವವರೆಗೂ ಮನೆಯೆಂದರೆ ಒಂದು ಕುರುಕ್ಷೇತ್ರವ ಆಗಿರುತ್ತಿತ್ತು. ಆದಲ್ಲಿಯವರೆಗೆ೦ದರೆ ''ತಾನೊಬ್ಬೇ ದುಡಿದುಕೊಂಡು ಬಂದಿದ್ದನ್ನು ನೀವೆಲ್ಲಾ ಕೂತ್ಕೊಂಡು ಉಣ್ತೀರಿ'' ಎಂದು ಇವರು ಎಷ್ಟೋ ಸಲ ಹೇಳಿದ್ದುಂಟು. ಬದುಕು ಹೀಗಿರುವಾಗ ಅಲ್ಲಿಂದಲೇ ಹೊರಟ ಬರಹ ಇನ್ನು ಹೇಗಿರಲು ಸಾಧ್ಯ? ಇಂಥ ಮಾತುಗಳನ್ನು ತಾಳಿಕೊಂಡಿರುವದಾದರೂ ಹೇಗೆ ಸಾಧ್ಯ?.... ಇಲ್ಲಿ ಇನ್ನೊಂದು ಮಾತು ಹೇಳಲೇಬೇಕು. ನನಗಾಗ ನಮ್ಮ ಮನೆ-ಹಿತ್ತಿಲು ಗಿಡಗಳು ಎಂದು ಒಂದು ರೀತಿಯ ಹುಚ್ಚೇ ಇತ್ತು. ಬೆಳಗಿನ ಹೊತ್ತಿಗೆ ಬಾವಿಯಿಂದ ನೀರು ಗಿಡಗಳಿಗೆ ಹೊಯ್ಯುವುದು ಸಂಜೆ ಬಿಡುವಿದ್ದಾಗ ಬಟ್ಟೆ ಹೊಲಿಯುವುದು. ನಡುವೆ ಅಡಿಗೆ ಕಸ ಮುಸುರೆ ಬಂದು ಹೋಗುವವರ ಉಪಚಾರ, ಹೀಗೆ ಒಂದು ಕ್ಷಣವು ಖಾಲಿ ಕುಂತಿರುತ್ತಿರಲಿಲ್ಲ. ಮಕ್ಕಳೂ ಅವರವರ ಪಾಲಿನ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದರು. ಆದರೂ ಕೂತು ತಿನ್ನುವುದು ಅಂದರೆ ಹೇಗಾಗುತ್ತೆ ಹೇಳಿ?..... ಆ ಕಾಲದಲ್ಲೇ ನಾನು ಬರೆದ ಕತೆಗಳು: ಮನೆ, ಹೆಣ್ಣಾಗಿ ಹುಟ್ಟಿ ವ್ಯಾಖ್ಯೆ, ಕಾಯಕ್ಕೆ ನೆರಳಾಗಿ... ಸಾಗರ ಮುಂತಾದವುಗಳು.
ಈ ನಡುವೆ 1986ರಲ್ಲಿ ನನ್ನ ಪ್ರಥಮ ಕಥಾಸಂಕಲನ 'ಸ್ವೀಕಾರ' ಪ್ರಕಟವಾಯಿತು. 89ರಲ್ಲಿ ಇಬ್ಬರು ಮಕ್ಕಳ ಮದುವೆಯಾಯಿತು. 90ರಲ್ಲಿ ಮೊದಲ ಮೊಮ್ಮಗಳು ಹುಟ್ಟಿದಳು. 92ರಲ್ಲಿ ಮತ್ತೊಬ್ಬ ಮಗಳ ಮದುವೆಯಾಯಿತು. 93ರಲ್ಲಿ ಒಬ್ಬ94ರಲ್ಲಿ ಇನ್ನೊಬ್ಬ ಗಂಡು ಮೊಮ್ಮಕ್ಕಳು 96ರಲ್ಲಿ ಮತ್ತೊಬ್ಬ ಮೊಮ್ಮಗಳು ಹುಟ್ಟಿದರು. ಮಕ್ಕಳ ಬಾಣಂತನ, ಮೊಮ್ಮಕ್ಕಳ ಆರೈಕೆ, ಮನೆಗೆಲಸವಂತೂ ಇದ್ದೇ ಇರುತ್ತದಲ್ಲ. ಈ ಎಲ್ಲ ಕಾರಣದಿಂದಾಗಿ ಬರವಣಿಗೆ ಹಿಂದೆ ಬಿತ್ತು. ಮಕ್ಕಳು ಬಸುರಿ ಬಾಣಂತಿಯರಿದ್ದಾಗ ಲೇಖಕಿಯರ ಸಂಘದ ಎರಡು ಮೂರು ಕಾರ್‍ಯಕ್ರಮಗಳನ್ನು ನಿರಾಕರಿಸಿದ್ದೇನೆ. ಮನೆಗೆದ್ದು ಮಾರು ಗೆಲ್ಲು ಎಂಬ ತತ್ವದಂತೆ ಮೊದಲು ನನ್ನ ಕರ್ತವ್ಯವನ್ನು ನಿಭಾಯಿಸಿ ನಂತರ ನನ್ನ ಬರವಣಿಗೆ, ಓಡಾಟದತ್ತ ಗಮನ ಹರಿಸುತ್ತೇನೆ. ಓಡಾಟವಾದರೂ ಅಷ್ಟೆ, ಮೊದಲೆಲ್ಲ ನನ್ನ ಅಮ್ಮನನ್ನು ಕರೆದುಕೊಂಡು ಹೋಗುತ್ತಿದ್ದೆ ಜೊತೆಯಲ್ಲಿ, ನಂತರ ನನಗೆ 41-42ವರ್ಷ ಆದ ಮೇಲೆ ಹೇಗೂ ಮುದುಕಿಯಾದೆ ಎಂದು ಒಬ್ಬಳೇ ಓಡಾಡತೊಡಗಿದೆ. ಆದರೂ ಕೂಡ ಒಬ್ಬರಿಂದ ಒಂದು ಮಾತು ಬರಬಾರದೆಂಬ ಎಚ್ಚರಿಕೆಯಿಂದಲೇ ಓಡಾಡುತ್ತೇನೆ. ಕಾರಕ್ರಮ ಮುಗಿದ ಕೂಡಲೇ ಸೀದಾ ಮನೆಗೆ ಬಸ್ಸು ಹತ್ತುತ್ತೇನೆ.
1990ರಲ್ಲಿ ನನ್ನ 'ಅರ್ಥ' ಕಥಾ ಸಂಕಲನದ ಹಸ್ತಪ್ರತಿಗೆ ಬೆಂಗಳೂರಿನ ಮಾಸ್ತಿ ಕನ್ನಡ ಸೇವಾನಿಧಿ ಪುರಸ್ಕಾರ ಸಿಕ್ಕಿತು. ಅದನ್ನು ನಾನೇ ಪ್ರಕಟಿಸಬೇಕಿತ್ತು. ಆ ಕುರಿತು ಅಲ್ಲಿ ಇಲ್ಲಿ ವಿಚಾರಿಸಿದಾಗ ಮಂಚಿಕೇರಿಯ ಸೂರ್‍ಯ ಪ್ರಕಾಶನದವರು ಪ್ರಕಟಣೆಗೆ ಮುಂದೆ ಬಂದರು. ಪ್ರೂಫ್ ತಾನೇ ತಿದ್ದುತ್ತೇನೆ ಅಂದರು. ನನಗೂ ವಿಶೇಷ ಲಕ್ಷ್ಯ ಹಾಕಲಾಗಲಿಲ್ಲ. ಯಾಕೆಂದರೆ ಮನೆಯಲ್ಲಿ ಮಗಳು ಬಾಣಂತಿಯಾಗಿದ್ದಳು. ಪ್ರೆಸ್ಸಿನವರು ಪುಸ್ತಕ ರೆಡಿ ಮಾಡಿಕೊಟ್ಟಾಗ ನೋಡುತ್ತೇನೆ ಒಂದೊಂದು ಪುಟದಲ್ಲಿ ಐದಾರು ತಪ್ಪುಗಳು! ಅವರಿಗೆ ಇದನ್ನೆಲ್ಲ ತೋರಿಸಿದಾಗ ಕೆಲವನ್ನು ಪುಟಗಳನ್ನು ಹೊಸದಾಗಿ ಮುದ್ರಿಸಿ ಕೊನೆಗೊಂದು ಒಪ್ಪೋಲೆ ಹಾಕಿ ಏನೇನೋ ಆಯಿತು. ನಾಲ್ಕು ಬಹುಮಾನಿತ ಕತೆಗಳಿದ್ದ ಆ ಪುಸ್ತಕದ ಮೇಲೆ ನಾನು ತುಂಬ ಭರವಸೆ ಇಟ್ಟುಕೊಂಡಿದ್ದ. ಅವೆಲ್ಲವೂ ಹೊಳೆಯಲ್ಲಿ ತೊಳೆದ ಹುಣಿಸೆಯಾಯಿತು. ಆದರೂ ಧಾರವಾಡದ ವಿದ್ಯಾವರ್ಧಕ ಸಂಘದ ಬಹುಮಾನವೊಂದು ಬಂದಿದ್ದು ಸ್ವಲ್ಪ ಸಮಾಧಾನ ನೀಡಿತು.
ಇದೇ ರೀತಿಯ ಇನ್ನೊಂದು ಅನುಭವ 'ಚಂದ್ರಗಾವಿ' ಕವನ ಸಂಕಲನದ್ದು. ಬೆಂಗಳೂರಿನ ಕನ್ನಡ ಲೇಖಕಿಯರ ಪರಿಷತ್ತಿನವರು ಸುವರ್ಣ ಸ್ವಾತಂತ್ರೋತ್ಸವದ ಅಂಗವಾಗಿ, ಲೇಖಕಿಯರ ಪುಸ್ತಕ ಪ್ರಕಟಣೆಗೆ ಸಹಾಯ ನೀಡುತ್ತೇವೆಂದು ಪ್ರಕಟಿಸಿದ್ದರು. ಆ ಪ್ರಕಾರವಾಗಿ ನಾನು ನನ್ನ ಕವನ ಸಂಕಲನದ ಹಸ್ತಪ್ರತಿ ಕಳಿಸಿದೆ. ಅವರು ಪ್ರೂಫ್ ತಿದ್ದಲು ನನಗೆ ಕಳಿಸಿದ್ದರು. ನಾನು ಸಿದ್ದಿ ಕಳಿಸಿದ್ದನ್ನು ಅವರು ಲಕ್ಷಕ್ಕೆ ತಂದುಕೊಳ್ಳಲಿಲ್ಲ. ಪುಟಕ್ಕೆ ಎರಡು ಮೂರು ತಪ್ಪು, ಜೊತೆಗೆ ಮುಖ ಪುಟವು ಅಷ್ಟೆ, ನಾ ಹೇಳಿದೊಂದು ಅವರು ಮಾಡಿದೊಂದು ಆಗಿ ಪುಸ್ತಕವು ಏನೂ ಚೆನ್ನಾಗಿ ಆಗಲಿಲ್ಲ. ಮಧ್ಯದಲ್ಲಿ ನಾನೊಮ್ಮೆ ಹೋಗಿ ಮುದ್ರಣ ಕೆಲಸವನ್ನು ನೋಡಬೇಕು, ಅದು ಸಾಧ್ಯವಾಗಲಿಲ್ಲ. ಯಾಕೆಂದರೆ ಒಮ್ಮೆ ಬೆಂಗಳೂರಿಗೆ ಹೋಗಿ ಬರಲು ಐದಾರು ನೂರು ಬೇಕು.
ಆದರೆ 'ಪ್ರವಾಹ' ಕಥಾ ಸಂಕಲನವನ್ನು ಹನುಮಾಕ್ಷಿ ಗೋಗಿಯವರು ಚೆನ್ನಾಗಿ ಮಾಡಿದ್ದಾರೆ. ಹಾಗೆಯೇ ಇಂದಿರಾಗಾಂಧಿ' ಪುಸ್ತಕವನ್ನು ಹಂಪಿ ವಿಶ್ವವಿದ್ಯಾಲಯದವರೂ, ಸ್ವೀಕಾರ 'ಪ್ರಭಾವತಿ'ಗಳನ್ನು ವಿಷ್ಣುನಾಯ್ಕರೂ ಚೆನ್ನಾಗಿಯೇ ಹೊರತಂದಿದ್ದಾರೆ. ಇನ್ನು ನಗೆಬರಹ ಶಿಶುಗೀತೆ, ಕಥಾಸಂಕಲನಗಳಲ್ಲಿ ಪ್ರಕಟಣೆಗೆ ಸಿದ್ಧವಾಗಿ ಇವೆ. ಅವು ಯಾವಾಗ ಯಾರಿಂದ ಬೆಳಕು ಕಾಣುತ್ತವೊ ಗೊತ್ತಿಲ್ಲ. ನನ್ನಿಂದಂತೂ ಆ ಖರ್ಚು ಒದ್ದಾಟ ಸಾಧ್ಯವಿಲ್ಲ. ಈ ಸಮಸ್ಯೆ ಬಹುಶಃ ನನ್ನೊಬ್ಬಳದಾಗಿರದೇ ಎಲ್ಲ ಲೇಖಕರದ್ದೂ ಇದೇ ಹಾಡು ಎಂದು ನನಗನಿಸುತ್ತದೆ. “ಹೊಳೆಯ ಹಾದಿ" ಎಂಬ ಕಾದಂಬರಿಯೊಂದು ಅಂಕೋಲಾದ ಸಕಾಲಿಕದಲ್ಲಿ ಧಾರಾವಾಹಿಯಾಗಿ ಬರುತ್ತಿದೆ. ಅದಕ್ಕೆ ಮುಂಬೈಯ ಸದಾನಂದ ಸುವರ್ಣ ಪ್ರತಿಷ್ಠಾನದ ಕಾದಂಬದಿ ಸ್ಪರ್ಧೆಯ ಬಹುಮಾನ ದೊರೆತಿರುವ ಬಗ್ಗೆ ಮೊನ್ನೆ ಪತ್ರ ಬಂದಿದೆ. ಅದೂ ಕೂಡ ಪುಸ್ತಕರೂಪದಲ್ಲಿ ಬರುವದು ಹೇಗೊ ಏನೊ.
ಆದರೆ ಕನ್ನಡದ ಓದುಗರಿಂದ, ಪತ್ರಿಕೆಗಳಿಂದ ನನಗೆ ಬೇಕಾದಷ್ಟು ಪ್ರೋತ್ಸಾಹ ದೊರೆತಿದೆ, ದೊರೆಯುತ್ತಿದೆ. ಆ ದೃಷ್ಟಿಯಿಂದ ನಾನು ಅದೃಷ್ಟಶಾಲಿಯೇ ಹೌದು, ವಾಚಕರ ವಾಣಿಯಲ್ಲಿ ಮತ್ತು ಎದುರಿಗೆ ಕಂಡಾಗ ಓದುಗ ಅಭಿಮಾನಿಗಳು ತುಂಬ ಪ್ರೀತಿ ತೋರಿದ್ದಾರೆ. ಈಗ ಓದುವದೇ ಕಡಿಮೆಯಾಗಿರುವದರಿಂದ ಕತೆ ಕವಿತೆಗಳ ಬಗ್ಗೆ ಚರ್ಚಿಸುವವರೂ ಕಡಿಮೆಯಾಗು ತ್ತಿದ್ದಾರೆ, ಅದು ಬೇರೆ ಮಾತು.
ಇಲ್ಲಿ ನನ್ನ ಮೊದಲ ಭಾಷಣದ ಸಂದರ್ಭವನ್ನು ಹೇಳಲೇ ಬೇಕು, ಅದು 1984ರ ಜನವರಿ, ಬನವಾಸಿ ಹೈಸ್ಕೂಲಿನ ವಾರ್ಷಿಕೋತ್ಸವಕ್ಕೆ ನನ್ನನ್ನು ಅತಿಥಿಯಾಗಿ ಕರೆದರು. ನಂಗೆ ಭಾಷಣ ಮಾಡಿ ರೂಢಿ ಇಲ್ಲ. ನಾ ಬರೋದಿಲ್ಲ ಅಂದೆ. ಅದ್ರೂ ಅವರು ತುಂಬಾ ಒತ್ತಾಯ ಮಾಡಿದಾಗ ಒಪ್ಪಿಕೊಂಡೆ. ಅವತ್ತು ಏನು ಹೇಳಬೇಕು ಅಂತ ಮೊದಲೇ ಬರೆದು ಓದಿ ರೆಡಿ ಮಾಡಿಕೊಂಡಿದ್ದೆ. ಅದರೂ ಮಾತಾಡಲು ನಿಂತಾಗ ಇಡೀ ಮೈ ಗಡಗಡ ನಡುಗುತ್ತಿತ್ತು !! ಟೇಬಲ್ ಹಿಡಿದುಕೊಳ್ಳಲು ಹೋದರೆ ಅದೂ ನಡುಗುತ್ತಿತ್ತು,. ಅಂತೂ ಹೇಗೋ ಭಾಷಣದ ಶಾಸ್ತ್ರ ಮುಗಿಸಿದೆ ಅನ್ನಿ. ಈಗಲೂ ನಾನು ಬರಹಗಾರ್‍ತಿಯಲ್ಲ ಹೊರತೂ ಭಾಷಣಕಾರ್‍ತಿಯಲ್ಲ. ಆದರೆ ನನಗನಿಸಿದ್ದನ್ನು ತಡವರಿಸದ ಸ್ಪಷ್ಟವಾಗಿ ಹೇಳುವಷ್ಟರ ಮಟ್ಟಿಗೆ ಧೈರ್ಯ ಬಂದಿದೆ.
ಇದೆಲ್ಲ ಸರಿ, ಆದರೆ ಬರವಣಿಗೆ ಅನ್ನುವ ಮಾಯಾದೀಶ ಉದ್ಭವವಾಗುವ ಬಗ್ಗೆ ಹೇಗೆ? ಆ ದೀಪದ ಯಾವ ಭಾಗವನ್ನು ಉಜ್ಜುವುದರಿಂದ ಯಾವ ಕವಿತೆಯೊ ಕತೆಯೊ ಹೊರಬಂದೀತು? ಅಥವಾ ಯಾವ ರಾಕ್ಷಸ ನಮ್ಮೆದುರು ಏನ್ ಮಾಡ್ಲಿ? ಎಂದು ಕೈ ಕಟ್ಟಿ ನಿಂತೀತು. ಎನ್ನುವುದೊಂದು ಅಷ್ಟೇ ಮಾಯಕದ ಪ್ರಶ್ನೆಯೇ ಹೌದು. ಯಾಕೆಂದರೆ ಮನುಷ್ಯನ ಅದೇ ಅದೇ ಅನುಭವಗಳು, ಹಸಿವು ನಿದ್ರೆ ಕಾಮ-ಹುಟ್ಟು-ಸಾವು-ರೋಗ-ಮುಪ್ಪುಗಳ ಹೊರತಾಗಿ ಬೇರೊಂದಿಲ್ಲದ ಸತ್ಯಗಳು ಭಾಷೆಯಿಂದೊದಗುವ ಅದೇ ಅದೇ ಅಭಿವ್ಯಕ್ತಿಗಳು. ಆದರೆ ಪ್ರತಿಯೊಂದು ಬರಹವೂ ಹೊಚ್ಚ ಹೊಸದಾಗಿ ತನ್ನದೇ ಆದ ಅನನ್ಯತೆಯೊಂದಿಗೆ ಅರ್ಥಪೂರ್ಣ ವಾಗುವುದು ಹೇಗೆ?... ಈ ಪ್ರಶ್ನೆಗಳಿಗೆ ಉತ್ತರ ಬಹುಶಃ ಸುಲಭವಿಲ್ಲ. ಇನ್ನೂ ನಾವು ರೂಪಕ ಸಂಕೇತಗಳ ಮೊರೆ ಹೋಗಬೇಕಾಗುತ್ತದೆ. ಒಂದು ಗುಲಾಶಯ ಮುಳ್ಳು ಮೈಯೊಳಗೆ ಹಾವಿನಂಥ ಹೂವು ಎಲ್ಲಿ ಅಡಗಿ ಕುಳಿತಿರುತ್ತದೆ?.. ಯಾವ ಕ್ಷಣದಲ್ಲಿ ಯಾಕಾಗಿ... ಮುಟ್ಟಿದರೆ ಮಾಸುವಂಥಾ ಮೃದುತ್ವದೊಂದಿಗೆ ಹೊರಬಂದು ಅರಳಿ ನಿಲ್ಲುತ್ತದೆ? ಎಂಬುದನ್ನು ಹೇಗೆ ಹೇಳಲು ಸಾಧ್ಯ ? ಯಾರು ಹೇಳಲು ಸಾಧ್ಯವಿದೆ?....ಬರವೂ ಕೂಡ ಇಂಥದೇ ಪ್ರಕ್ರಿಯೆ. ಮನುಷ್ಯನ ಅನುಭವ-ಆಲೋಚನೆ-ಕಾಲ-ದೇಶಗಳ ಪ್ರಭಾವ ಆಯಾ ಭಾಷೆಯ ಸತ್ಯಗಳೆಲ್ಲವೂ ಒಟ್ಟಾಗಿ ಇನ್ನಾವುದೊ ರೂಪು ತಳೆದು ನಿಲ್ಲುವ ಪ್ರಕ್ರಿಯೆಯನ್ನು ಹೀಗೇ ಎಂದು ವರ್ಣಿಸಲು ಾಧ್ಯವಿಲ್ಲ. ಹೀಗಾಗಬಹುದು ಎಂಬ ಊಹೆ ಮಾತ್ರ ಸಾಧ್ಯವಿದೆ ಎಂದು ನನ್ನ ಭಾವನೆ.
ಇದೇ ಮಾತನ್ನು ನನ್ನ ಮಟ್ಟಿಗೆ ಹೇಳುವುದಾದರೆ ಯಾವುದೋ ಒಂದು ಮಾತು ದೃಶ್ಯ-ಓದಿದ ಕೇಳಿದ ಒಂದು ಸುದ್ದಿ, ಮನಸ್ಸಿನ ಯಾವುದೋ ಮೂಲೆಯನ್ನು ಚುಚ್ಚಿ ಆಗಾಗ ಎಚ್ಚರಿಸುತ್ತಿರುತ್ತದೆ. ಆ ಒಂದು ಮೂಲ ಬಿಂದುವಿಗೆ ಕಾಲು-ಬಾಲ-ತಲೆ ಹೊಟ್ಟೆ ಕತೆಯಾಗಬಹುದು, ಕವಿತೆಯಾಗಬಹುದು, ಅಥವಾ ಎರಡೂ ಆಗಬಹುದು. ಉದಾಹರಣೆಗೆ :ಪ್ರಭಾವತಿ ನಾಟಕದ ವಸ್ತು ಒಂದು ಜಾನಪದ ಹಾಡು.. ಆ ಹಾಡನ್ನು ಸಂಕೇತವಾಗಿಟ್ಟುಕೊಂಡು ಒಂದು ಕವಿತೆ ಬರೆದೆ “ಕೊಡೆಮಾಸೆ ಹಾಡು” ಅಂತ. ಆ ಹಾಡಿನ ವಸ್ತುವನ್ನೇ ಇಟ್ಟುಕೊಂಡು ಬರೆದ ನಾಟಕ ಪ್ರಭಾವತಿ. ಎರಡರಲ್ಲೂ ಕತ್ತಲೆಯ ಕುರಿತಾದ ಜಿಜ್ಞಾಸೆಯಿದೆ. ಮನುಷ್ಯನಲ್ಲಿರುವ ಅಜ್ಞಾನದ ಕತ್ತಲೆ-ಅಹಂಕಾರದ ಕತ್ತಲೆ-ಕ್ರೌರ್‍ಯದ ಕತ್ತಲೆ ಕೊನೆಗೆ ಮರಣದ ಕತ್ತಲೆ... ಈ ಕತ್ತಲೆಗಳನ್ನು ಓದಿಸುವ ದೀಪ ಯಾವುದು? ದೀಪ ಹಚ್ಚುವವರು ಯಾರು? ಅನ್ನುವದು ಇಲ್ಲಿಯ ಮುಖ್ಯ ಪ್ರಶ್ನೆ.
ಇನ್ನೊಂದು ಸಂದರ್ಭ, ನಮ್ಮ ಮನೆಯ ಹಿಂದಿದ್ದ ಹೊಲದಲ್ಲಿ ಎರಡು ಕಿಂಗ್ ಫಿಶರ್ ಅಂದರೆ ಮೀಂಚುಳ್ಳಿಗಳು ಬರುತ್ತಿದ್ದವು. ವರ್ಷಗಳ ಕಾಲ ಜೊತೆಯಾಗಿಯೇ ಹಾರಾಡುತ್ತಿದ್ದವು. ಮರುವರ್ಷ ಒಂದೇ ಹಕ್ಕಿ ಬಂತು. ಒಂಟಿಯಾಗಿ ದೀನವಾಗಿ ಸುಮ್ಮನೆ ಕೂತಿರುತ್ತಿತ್ತು, ಅದ ನೋಡಿ ಒಮ್ಮೆಲೆ ಮನಸ್ಸಿನಲ್ಲಿ 'ಬಯಲ ವಿಸ್ತಾರದಲ್ಲಿ ಒಂಟಿ ಪಕ್ಷಿ' ಎಂಬ ಮಾತು ಮೂಡಿ ಬಂತು. ಸುಮಾರು ಒಂದು ವರ್ಷದ ನಂತರ ಅದು ಕವಿತೆಯಾಯಿತು. ಇದೇ ಶೀರ್ಷಿಕೆಯೊಂದಿಗೆ ಆದರೆ ಆ ಕವಿತೆ ಅಕ್ಕಮಹಾದೇವಿಯ ಕತೆಯಾಗಿ ಹೊರಬಂದಿತ್ತು. ಇನ್ನೊಂದು ಕವಿತೆ ‘ಅಮರ’. ನಮ್ಮ ಮಾವನವರು ತೀರಿಕೊಂಡಾಗ ಬರೆದದ್ದು. ಇಲ್ಲಿ ಮನುಷ್ಯ ಜೀವನಕ್ಕೆ ಸಂವಾದಿಯಾಗಿ ಮರದ ಬದುಕಿದೆ. ಇನ್ನೊಮ್ಮೆ ಏನಾಯಿತೆಂದರೆ 20 ದಿನ ನಮ್ಮೂರಿನ ಝೂಕ್ಕೆ ಹೋಗಿದ್ದೆವು.
ಬಹುಶಃ ನಾವು ಐದು ಮಂದಿ. ಅಲ್ಲಿ ಪ್ರಾಣಿಗಳನ್ನು ನೋಡ್ತಾ ನೋಡ್ತಾ ಇರುವಾಗ ಮಂಗ ತನ್ನ ಪಂಜರದ ಬಾಗಿಲು ತೆಗೆಯಲು ಹರ ಸಾಹಸ ಮಾಡುತ್ತಿರುವುದು ಕಂಡು, ಅಬ್ಬಾ ಅನ್ನಿಸಿತು. ಪಂಜರದ ಬದುಕಿಗೊಂದು ವ್ಯಾಖ್ಯೆ ದೊರೆಯಿತು. ಅದೇ ಪ್ರೇರಣೆಯಿಂದ ಬಂದ ಕತೆ ‘ವಿಕಾಸ' ಅದು ತರಂಗದ ತಿಂಗಳ ಕತೆ ಬಹುಮಾನ ಪಡೆಯಿತು.
19ರಲ್ಲಿ ರಾಜೀವ ಗಾಂಧಿಯವರನ್ನು ಕೊಂದರು. ಅದಕ್ಕೂ ಮೊದಲು ನಮ್ಮೂರಿನ ಡಿ.ಎಫ್.ಒ ಆಗಿದ್ದ ಅರವಿಂದ ಹೆಗಡೆಯವರ ಬರ್ಬರ ಹತ್ಯೆಯಾಗಿತ್ತು. ರಾಜೀವ ಹತ್ಯೆಯಲಂತೂ ಹೆಂಗಸರೇ ಹಂತಕಿಯರಾಗಿದ್ದರು. ಈ ಕ್ರೌರ್‍ಯಹಿಂಸೆಗಳಿಂದ ಮನುಷ್ಯ ಕುಲಕ್ಕೆ ಬಿಡುಗಡೆಯೇ ಇಲ್ಲವೇ?. ಅದರಲ್ಲೂ ಹೆಣ್ಣು ಮಕ್ಕಳ ಕೂಡ ಇಂಥ ನೀಚ ಕೃತ್ಯದಲ್ಲಿ ಪಾಲ್ಗೊಳ್ಳಬೇಕೆ?... ಸ್ತ್ರೀ ಸಮಾನತೆ ಎಂಬುದು ಇಂಥ ಅಡ್ಡದಾರಿ ಹಿಡಿದುಬಿಟ್ಟಿತೆ' ಎಂಬ ಕಳವಳ ತಲ್ಲಣಗಳಿಂದ ಮೂಡಿ ಬಂದ ಕತೆ ‘ಉರಿದಾರಿ'. ಇದು ತುಷಾರ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿತ್ತು.
ಇನ್ನು ಕೆಲವು ಸಂಕೇತಗಳು ಅಕಾರಣವಾಗಿ ಮನಸ್ಸು ತಟ್ಟಿದಾಗ ಈ ನೂಲೆಳೆಗಳನ್ನು ಹಿಡಿದುಸಾಗುವುದೂ ಉಂಟು. ಹೂಗ್ಲಿ-ಕೋಳುಗಂಬ-ಭೂಶಿರ-ಹಿಮನದಿ ಮುಂತಾಗಿ ಹೀಗೆ ದೊರೆತ ವಸ್ತುಗಳು ಮನಸ್ಸಿನಲ್ಲೆ ಕೂತು ವರ್ಷಗಟ್ಲೆ ಕಳೆಯುವದೂ ಇದೆ. ಬಿಡುವಾದಾಗ ಕೂತು ಬರೆದು, ಕಾಪಿ ತೆಗೆದು ಪೋಸ್ಟಿಗೆ ಹಾಕುತ್ತೇನೆ, ಆಯಿತು. ಅದು ಪತ್ರಿಕೆಯಲ್ಲಿ ಪ್ರಿಂಟಾಗಿ ಬಂದ ನಂತರ ನಾನೇ ಮತ್ತೊಮ್ಮೆ ಓದಿ ಒಂದು ಕಡೆ ಇಟ್ಟು ಬಿಟ್ಟರೆ ಕತೆಯ ಕತೆ ಅಲ್ಲಿಗೆ ಮುಗಿಯಿತು. ಆದರೆ ಇಷ್ಟೆಲ್ಲ ಮಾಡಿ ಬರದದ್ದು ವಾಡಸು ಬರುವುದೂ ಉಂಟು ಸಹಜ ಬಿಡಿ ಯಾಕೆಂದರ ನಮ್ಮಸಿದ್ದನ್ನೂ ವಾಪಸು ಕಳಿಸಿದರೆ ಆ ಕ್ಷಣದಲ್ಲಿ ಆಗುವ ನಿರಾಶೆ ತುಂಬಾ ತೀವ್ರತರದ್ದು. ‘ಹೊಳೆಯ ಹಾದಿ' ಕಾದಂಬರಿ ನನಗೀ ಅನುಭವವನ್ನು ತಂದು ಕೊಟ್ಟಿತು. ಆದರೆ ನಾವು ಇಂಥದನ್ನೆಲ್ಲ ಎದುರಿಸಿಕೊಂಡು ಹೋಗದೆ ಬೇರೆ ಉಪಾಯವಿಲ್ಲ.
ಹೀಗೆ ನನ್ನಿಂದ ಸಾಧ್ಯವಾದಂತೆ-ಸಾಧ್ಯವಾದಷ್ಟು ಬರೆಯುತ್ತಿದ್ದೇನೆ ಖರೆ. ಆದರೆ ಆ ಬರಹಗಳು ನನಗೆ ಪೂರ್ತಿ ತೃಪ್ಪಿಕೊಟ್ಟಿಲ್ಲ. ಆ ಶಬ್ದ ಇಲ್ಲಿ ತರಬೇಕಿತ್ತು. ಈ ವಾಕ್ಯ ಅಲ್ಲಿರಬೇಕಿತ್ತು ಈ ಸನ್ನಿವೇಶವೇ ಬೇಡವಾಗಿತ್ತು. ಹೀಗೆ ಬರಹ ಪ್ರಿಂಟಾಗಿ ಬಂದ ಮೇಲೆ ಅನಿಸುವದುಂಟು. ವೈದೇಹಿ, ಜಯಂತ್ ಕಾಯ್ಕಿಣಿ, ಯಶವಂತ ಚಿತ್ತಾಲ, ಮಿತ್ರಾ ವೆಂಕಟ್ರಾಜ, ಮೊನ್ನ ಓದಿದ ಜಯಾ ಎಸ್. ಕುಮಾಕರ ಮುಂತಾದವರ ಕತೆಗಳ ಮಟ್ಟಕ್ಕೆ ನಾನು ಬರಲಾಗಲಿಲ್ಲವಲ್ಲ ಎಂಬ ಕಸಿವಿಸಿಯುಂಟಾಗುತ್ತದೆ. ಖಂಡಿತಾ ಅಸೂಯೆಯಲ್ಲ. ಯಾಕೆಂದರೆ ನನ್ನಂಥ ಹಳ್ಳಿಮುಕ್ಕ ಹೆಂಗಸು ಈ ಮಟ್ಟಕ್ಕೆ ಬಂದಿದ್ದೇ ದೊಡ್ಡದು. ಇನ್ನೂ ಮೇಲೇರಬೇಕೆಂದರೆ ಬಹುಶಃ ಮತ್ತೊಮ್ಮೆ ಹುಟ್ಟಿಬರಬೇಕಾಗುತ್ತದೆ. ಕತೆಯೆಂದಾಗ ಇಷ್ಟಾದರೂ ಆಯಿತು. ಕವಿತೆ ಮತ್ತೂ ಕಷ್ಟ; ಮನಸ್ಸಿನಲ್ಲಿ, ಒಂದು ಚಿತ್ರ ಮೂಡಿ ಶಬ್ದಗಳು ಸಂಕೇತಗಳು ಒಂದಕ್ಕೊಂದು ಹೊಂದಿದೆ ಎಂದು ಬಂದರೆ ಬಂತು, ಇನ್ನೊಂದರೆ ನಮ್ಮ ಗೀಚಿದರೂ ಅದು ಬರೀ ಶಬ್ದವಾಗುತ್ತ ಕವಿತೆ ಯಾಗುವುದಿಲ್ಲ, ಇದು ನನ್ನ ಮಿತಿ.
ಹೌದು, ಇಷ್ಟೆಲ್ಲ ಹೇಳಿಯಾಯಿತು. ಆದರೆ ಸಾಹಿತ್ಯ ಅಂದರೇನು ಅನ್ನುವ ಬರಹವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸುವದು, ಬಿಡುವದು ಆಯಾ ಸಂಪಾದಕರ ಇಷ್ಟ-ಅಭಿರುಚಿ-ಆಸಕ್ತಿ-ವಿವೇಚನೆಗಳಿಗೆ ಸೇರಿದ್ದು, ಅದನ್ನು ಪ್ರಶ್ನಿಸುವ ಹಕ್ಕು ನಮಗೆ ಅಂದರೆ ಲೇಖಕರಿಗಿಲ್ಲ. ಆದರೆ ಅವರಾಗಿ ಒತ್ತಾಯ ಮಾಡಿ ಮಾಡಿ ಬರೆದು ಮೊದಲು ಬೇಕಲ್ಲ... ಈ ಕುರಿತು ನೂರಾರು ಜನ ನೂರಾರು ರೀತಿಯ ವ್ಯಾಖ್ಯಾನ ಬರೆದಿರಬಹುದು. ಆದರೆ ನನ್ನ ದೃಷ್ಟಿಯಲ್ಲಿ ಸಾಹಿತ್ಯ ಅಂದರೆ ಈ ಭೂಮಿ ಬಾನಿನ ನಡುವಿನಲ್ಲಿ, ಹುಟ್ಟು ಸಾವಿನ ಮಧ್ಯದ ಸೀಮಿತ ಅವಧಿಯಲ್ಲಿ ಬದುಕುವ ಮನುಷ್ಯನ ಸಮಸ್ಯೆ ಒಳಿತು-ಕೆಡುಕು, ಸಾಧ್ಯತೆ ಮಿತಿಗಳಲ್ಲವನ್ನೂ ಅಭಿರುವಂತೆಯೇ ಒಪ್ಪಿಕೊಂಡು, ಅವುಗಳನ್ನು ಮೀರುವ ಒಂದು ದಾರಿಯತ್ತ ತೋರು ಬೆರಳುಗುವದು ಸಾಹಿತ್ಯದ ಜವಾಬ್ದಾರಿ ಎಂದು ನನ್ನ ಭಾವನೆ. ಸಾಹಿತ್ಯವೆಂದರೆ ಉಪದೇಶವಲ್ಲ, ತತ್ವಪ್ರಣಾಲಿಯಲ್ಲ, ಜೀವನ ಸೂತ್ರವೂ ಅಲ್ಲ, ಬದಲಾಗಿ ಸಾಹಿತ್ಯವೆಂದರೆ ತನ್ನ ಉಪ್ಪಿನೊಡಲನ್ನು ನಿರಂತರ ತುಯ್ದು ತೇಯ್ದು ಜೀವ ಸಂಕುಲಕ್ಕೆಲ್ಲ ಸಿಹಿ ನೀರುಣ್ಣಿಸುವ ಕಡಲ ಕರುಣೆ ಎಂದು ನಾನು ನಂಬುತ್ತೇನೆ. ಎಲ್ಲ ಕೃತಿಗಳೂ ಆ ಮಟ್ಟ ತಲುಪದೇ ಇರಬಹುದು. ಆದರೆ ಒಂದು ಸೂಕ್ಷ್ಮ ಜೀವಕೋಶದಲ್ಲಿ ಇಡಿಯ ಜೀವನ ಅಡಗಿರುವಂತೆ ಯಾವುದೇ ಒಳ್ಳೆಯ ಸಾಹಿತ್ಯ ಕೃಷಿ ಮನುಷ್ಯನ ಏಳ್ಗೆಯ ಅಂಶವನ್ನು ಒಂದು ಕಣದಷ್ಟಾದರೂ ಹೊಂದಿಯೇ ಹೊಂದಿರುತ್ತದೆ. ನನ್ನ ಕೃತಿಗಳಲ್ಲಿ ಇಂಥ ಅಂಶ ಎಷ್ಟರ ಮಟ್ಟಿಗಿದೆಯೊ, ಓದುಗರು ಹೇಳಬೇಕು. ಯಾಕೆಂದರೆ ನಮ್ಮ ನಮ್ಮ ಬೆನ್ನು ಹಾಗಿರಲಿ ಮುಖ ನೋಡಿಕೊಳ್ಳಲಿಕ್ಕೂ ನಮಗೆ ಬೇರೆಯವರ ಕಣ್ಣೇಬೇಕು ಅಥವಾ ಕನ್ನಡಿ ಬೇಕು.
ಈ ಮಾತೂ ಪೂರ್ತಿ ಸತ್ಯವಾಗಲಿಕ್ಕಿಲ್ಲ. ಯಾಕೆಂದರೆ ಕನ್ನಡಿ ತೋರಿಸುವದು ನಮ್ಮ ಹೊರ ಚರ್ಮವನ್ನೇ ಹೊರತೂ ಒಳಗಿನ ಮಾಂಸ, ಮಚ್ಚೆ, ಹೃದಯ, ಮಿದುಳುಗಳನ್ನೊಳಗೊಂಡ ಇಡಿಯಾದ ನಮ್ಮನ್ನಲ್ಲ. ಯಾರೊಬ್ಬರ ಸಾಧನೆಯ ಒಂದು ಬಹಿರ್ಮುಖ ಇರುವಂತೆ ಮಿತಿಯ ಇನ್ನೊಂದು ಅಂತರ್ಮುವೂ ಇದ್ದೇ ಇರುತ್ತದೆ. ಯಾರೂ ಪರಿಪೂರ್ಣರಲ್ಲಿ, ಇಲ್ಲಿ ಲೇಖಕಿಯಾಗಿ ಆಲೋಚನೆ - ಅಭಿವ್ಯಕ್ತಿಗಳ ಮಿತಿ ಹೊಂದಿರುವಂತೆಯೇ ಒಬ್ಬ ಹೆಂಗಸಾಗಿರುವ ಕಾರಣಕ್ಕೆ ಹಲವು ಬಾಹ್ಯ ಮಿತಿಗಳೂ ನನ್ನನ್ನು ಕಾಡುತ್ತಿರುತ್ತವೆ, ಆರ್ಥಿಕ ಪರಾವಲಂಬನೆಯೂ ಹೆಣ್ತನದ ಜೊತೆಗೂಡಿ, ನನ್ನ ಮಾತ್ರವಲ್ಲ, ನನ್ನಂಥ ಹಲವರ ಕೈ ಕಾಲುಗಳನ್ನು ಕಟ್ಟಿ ಹಾಕುತ್ತವೆ. ಮನೆಯಿಂದ ಹೊರಬಿದ್ದ ಕೂಡಲೇ ಹಣ ಬೇಕು. ಆ ಹಣಕ್ಕಾಗಿ ಗಂಡಸರೆದುರು ಕೈಯೊಡ್ಡಬೇಕು. ಅವರು ಹೆಂಗಸರನ್ನು ಅರ್ಥಮಾಡಿಕೊಂಡು ಅಥವಾ ಹೆಂಡತಿ ಮಕ್ಕಳ ಖರ್ಚಿಗೆ ಕೊಡುವದು ತಮ್ಮ ಕರ್ತವ್ಯವೆಂದು ತಿಳಿದು ಕೊಟ್ಟರೆ ಸರಿ, ಅದಿಲ್ಲದೆ ಮೊನ್ನೆ ಕೊಟ್ಟ ಹತ್ತು ರೂಪೈ ಏನಾಯ್ತು? ಅಂತ ಕೂಗಾಡಿದರೆ, ಫೋನ್ ಮಾಡೋದ್ಯಾಕೆ? ಪತ್ರ ಬರಿ ಎಂದು ಆಜ್ಞಾಪಿಸಿದರೆ, ರೆಜಿಸ್ಟರ್ ಪೋಸ್ಟ್ ಯಾಕೆ? ಸದಾ ಪೋಸ್ಟಿಗೆ ಕಳಿಸು ಎಂದು ಬೈದರೆ, ಯಾಕೆ ರಿಕ್ಷಾಕ್ಕೆ ದುಡ್ಡು ಬಡಿದೆ? ನಡಕೊಂಡು ಬರಬೇಕಿತ್ತು ಎಂದು ಕೂಗಾಡಿದಾಗೆಲ್ಲ ಬದುಕು ತುಂಬ ಭಾರವಾಗುತ್ತದೆ. ಈ ಸಾಹಿತ್ಯ, ಈ ಓಡಾಟಗಳೆಲ್ಲ ನಮ್ಮಂಥವರಿಗಲ್ಲವೆ ಅಲ್ಲ. ಸಾಯ್ಕ, ಬಿಟ್ಟೇ ಬಿಡೋ ಎಂಬಷ್ಟು, ಬೇಜಾರಾಗುತ್ತದೆ. ಆದರೆ ಬಿಟ್ಟರೆ ಮತ್ತೇನಿದೆ ಬದುಕಲು? ಹುಟ್ಟಿಬಂದಿದ್ದಕ್ಕೆ ಕಾಣುವದನ್ನೆಲ್ಲಾ, ಕಂಡಾಯಿತು. ಮಾಡಬೇಕಾದ ಕೆಲಸಗಳನ್ನೆಲ್ಲ ಮಾಡಿ ಮುಗಿಸಿಯಾಯಿತು. ಇನ್ನು ಬದುಕಿರುವಷ್ಟು ಕಾಲದಲ್ಲಿ, ನನ್ನಿಂದ ಬರೆಯಲು ಸಾಧ್ಯವಾಗುವವರೆಗೆ, ಪತ್ರಿಕೆಗಳು, ಪ್ರಕಾಶಕರು ನನ್ನ ಬರಹ ಪ್ರಕಟಿಸುವವರೆಗೆ ನನ್ನಿಂದಾದಂತೆ, ಅದಷ್ಟು ಬರೆಯುತ್ತ ಹೋಗುವುದು. ಇರ್‍ಲಿ, ಇಷ್ಟರ ಜೊತೆ ಮತ್ತಷ್ಟು ಎಂದು ಧೈರ್‍ಯ ತಂದುಕೊಳ್ಳುತ್ತೇನೆ.
ಹಾಗೆಂದು ತೀರಾ ಬಡತನವನ್ನು ನಾನೆಂದೂ ಕಂಡಿಲ್ಲ. ಅಥವಾ ಕೂಲಿನಾಲಿ ಮಾಡಬೇಕಾಗಿ ಬಂದಿಲ್ಲ. ಇವರ ಪೆನ್‌ಶನ್‌ನೊಂದಿಗೆ ಸ್ವಲ್ಪ ಅಡಿಕೆ ತೋಟವೂ ಇದೆ. ಆದರೆ ಇದೆಲ್ಲವೂ ಯಜಮಾನರ ಜೇಬು ಸೇರಿರುತ್ತದೆ. ಅವರು ಕೊಟ್ಟರೆ ಮಾತ್ರ ಉಂಟು ಇಲ್ಲವಾದರಿಲ್ಲ. ಹೇಳಹೊರಟರೆ ಇವರು ಹಣ ಕೊಡುವದೇ ಇಲ್ಲ ಅಂತಲ್ಲ, ಹೊರಟಾಗ ಬಸ್ ಸ್ಟ್ಯಾಂಡಿಗೆ ಕಳಿಸಿಕೊಡುತ್ತಾರೆ. ಬಸ್‌ಚಾರ್ಜಿಗೆ ದುಡ್ಡೂ ಕೊಡುತ್ತಾರೆ. ನನ್ನ ಪತ್ರಗಳನ್ನು ಪೋಸ್ಟಿಗೂ ಹಾಕುತ್ತಾರೆ. ಆದರೆ ಯಾವಾಗ ಕೃಷ್ಣಪಕ್ಷ ಯಾವಾಗ ಶುಕ್ಲ ಪಕ್ಷ ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿ ಹಣ ಕೇಳುವದೆಂದರೆ ಕುತ್ತಿಗೆಗೆ ಬರುತ್ತದೆ. ಈಗ ಕೆಲದಿನಗಳ ಹಿಂದೆ ” ಗಂಡಸರ ಸಂಬಳದಲ್ಲಿ ಹೆಂಡತಿಯರಿಗೂ ಹಕ್ಕು ಇರಬೇಕು'’ ಎಂಬ ಮಹಿಳಾ ಅಯೋಗದ ಶಿಫಾರಸ್ಸು ಓದಿದ್ದೆ. ಅಂಥ ಕಾಯದೆ ಬಂದರೆ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇನೋ.
ಲೇಖಕಿಯಾಗಿ ನಾನು ಎದುರಿಸುವ ಇನ್ನೊಂದು ಕಷ್ಟವೆಂದರೆ, ಮೊದಮೊದಲೆಲ್ಲ ನನ್ನ ಕೈಲಿ ಮಾತಾಡಲಿಕ್ಕೆಂದೇ ಜನ ಬರ್‍ತಿದ್ದರು. ಬಂದವರನ್ನು ಮನೆ ಯಜಮಾನರು ಸರಿಯಾಗಿ ಮಾತಾಡಿಸಿದರೆ ಸರಿ. ಇಲ್ಲಾಂದ್ರೆ ಬಂದವರಿಗೂ ಬೇಜಾರು, ನನಗಂತೂ ಧರ್ಮಸಂಕಟ ಈಗೆರಡು ವರ್ಷಗಳ ಹಿಂದೆ ನಮ್ಮೂರಿನ ಒಂದು ಕಾರಕ್ರಮಕ್ಕೆ ನನ್ನನ್ನು ಅತಿಥಿಯಾಗಿ ಕರೆದಿದ್ದರು. ಆಮಂತ್ರಣ ಕೊಡಲು ಫ್ಯೂನ್ ಬಂದಿದ್ದ. ನಾನು ಸಹಜವಾಗಿ ಬಾಯಾರಿಕೆ ಏನಾದ್ರೂ ಬೇಕಾ? ಅಂತ ಕೇಳಿದೆ. ಅವನು "ಅಮ್ಮ ಒಂದು ಕಪ್ ಚಾ ಕೊಡಿ” ಅಂದ, ಮಾಡಲು ಒಳಗೆದ್ದಾಗ ಇವರು “ಚಾ ಮಾಡಲು ಒಲೆ ಖಾಲಿ ಇದಯೇನೆ?'' ಎಂದು ಅಲ್ಲಿಂದಲೇ ಕೇಳಿದರು. "ಖಾಲಿ ಇದೆ'’ ಎಂದು ಚಾ ಮಾಡಿ ಅವನಿಗೆ ಕೊಟ್ಟೆ. ಇವರ ಮಾತಿನಂತೆ ಚಾ ಮಾಡದೆ ಇದ್ದಿದ್ದರ ಅವನು ಊರೆಲ್ಲ ಡಂಗುರ ಸಾರಿದ್ದ, ಹೀಂಗಾಯ್ತು ಅಂತ ಮಾಡಿಕೊಟ್ಟಿದ್ದಕ್ಕೆ ಇವರಿಂದ ಸಾಕಷ್ಟು ಬೈಗುಳ ಕೇಳಬೇಕಾಯ್ತು.
ಒಮ್ಮೆ ಊರಿನ ಒಂದು ಕವಿಗೋಷ್ಠಿಗೆ ಅತಿಥಿಯಾಗಿ ಕರೆದಿದ್ದರು. ಮೂರೂವರೆಗೆ ಇವರಿಗೆ ಕಳಿಸಿಕೊಟ್ಟಿದ್ದಾರೆ. ಅಲ್ಲಿ ನಲವತ್ತೈವತ್ತು ಮಂದಿ ಕವಿಗಳಿದ್ದರು, ಕವಿತೆಯಲ್ಲಾ ಮುಗಿದು ಭಾಷಣ ಮುಗಿಸಿ ಹೊರಡುವಾಗ ಆರೂವರೆ. ಮನೆ ತಲುಪುವಾಗ ಎಳಕ್ಕೆ ಐದು ನಿಮಿಷವಿದೆ. ಟಿ.ವಿ. ನೋಡ್ತಾ ಮಲಗಿದ್ದ ಇವರು ನನ್ನ ಕಂಡ ಕೂಡಲೇ ಕೂಗಲಿಕ್ಕೇ ಶುರುಮಾಡಿಬಿಟ್ಟರು. ಏಳು ಗಂಟೆಯಾಯ್ತು, ಇದು ಹೆಂಗಸು ಮನೆಗೆ ಬರೋ ಹೊತ್ತಾ? ಮೊದ್ಲೇ ಬರ್‍ಲಿಕ್ಕೆಂತಾ ಆಗಿತ್ತು ನಿಂಗೆ?" ಎಂದಲ್ಲ ಒದರಾಡತೊಡಗಿದಾಗ ಯಾವಾಗೂ ನಿಮ್ಮು ಇದೇ ಹಾಡು ಅಂದವಳು ಮಾತು ಬೆಳೆಸಲಿಲ್ಲ. در
ನಾಲ್ಕಾರು ವರ್ಷಗಳ ಹಿಂದೆ ಒಮ್ಮೆ ಪಕ್ಕದ ಸಿದ್ದಾಪುರದ ಶಾಲೆಯೊಂದರ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಕರೆದಿದ್ದರು. ಮೂರವರೆಗೆ ಸಮಾರಂಭ ಎರಡು ಗಂಟೆಗಾದರೂ ಮನೆಯಿಂದ ಹೊರಡಬೇಕು. ಒಂದು ಗಂಟೆಗೆ ಊಟಕ್ಕೆ ಕೂಡ್ರುವ ಹೊತ್ತಿಗೆ ಸರಿಯಾಗಿ ಯಾರೋ ನೆಂಟ ಬಂದ. ಮತ್ತೆ ಹೊಸದಾಗಿ ಅನ್ನ ಮಾಡಿ ಒಂದು ಗೊಜ್ಜು ಬೀಸಿ ಬಡಿಸಿ ಪಾತ್ರೆ ತೊಳಿದು ಅಂತೂ ಎರಡೂವರೆಗೆ ಹೊರಟೆ. ಆ ಗಡಿಬಿಡಿಯಲ್ಲಿ ಅನ್ನ ಬಸಿಯುವಾಗ ತಿಳಿ ಚೆಲ್ಲಿ ಸ್ವಲ್ಪ ಕೈ ಬೇರೆ ಸುಟ್ಟಿತು. ಅಂತೂ ಹೇಗೆ ನಿಭಾಯಿಸಿದೆ.
ಇನ್ನು ಕೆಲವು ಬಾರಿ ಪತ್ರಿಕೆಯವರು ಇಂತಿಷ್ಟನೇ ತಾರೀಖಿನೊಳಗೆ ಬರಹ ಕಳಿಸಿ ಅಂದಿರುತ್ತಾರೆ. ಆಗಿರುತ್ತಾರೆ. ಅದೇ ಹೊತ್ತಿಗೆ ಯಾರಿಗೂ ಅನಾರೋಗ್ಯ ಅಥವಾ ಎಲ್ಲಿಗೂ ತಿರುಗಾಟ ಅಥವಾ ಯಾರಾದರೂ ಬಂದಿರುತ್ತಾರೆ. ಹೀಗಾಗಿ ಬರವಣಿಗೆ ಮುಂದುವರಿಯುವ ಇಲ್ಲ. ಆವಾಗೆಲ್ಲ ಇಂಥಾ ಸಿಟ್ಟು ಬರುತ್ತೆದೆಂದರೆ ಮೈಕೈಯೆಲ್ಲ ಪರಚಿಕೊಳ್ಳುವಂತಾಗುತ್ತದೆ. ಅವರ ಯಾರ ಮೇಲೆ? ಹತ್ತಿರ ಮಕ್ಕಳೂ ಇಲ್ಲದಿದ್ದಾಗ ಹೆಂಗಸು ಯಾರ ಮೇಲೆ ಸಿಟ್ಟು ತೀರಿಸಿಕೊಳ್ಳುವದು? ಅವಾಗೆಲ್ಲ ಹಲ್ಲು ಕಚ್ಚಿ ಹಿಡಿದು ರಾತ್ರಿಯಲ್ಲಿ ಕೂತು ಹೇಗೊ ಬರೆದು ಮುಗಿಸುತ್ತೇನೆ.
ಇನ್ನೊಮ್ಮೆ ಏನಾಯಿತೆಂದರೆ 1990ರಲ್ಲಿ ಧರ್ಮಸ್ಥಳದ ಲಕ್ಷದೀಪೋತ್ಸವದ ಸಾಹಿತ್ಯ ಸಮ್ಮೇಳನಕ್ಕೆ ಕರೆದಿದ್ದರು. ಮನೆಯಲ್ಲಿ ಮಗಳು ಬಾಣಂತಿ ಅದರೂ ನನ್ನಮ್ಮ ತಾನವರನ್ನು ನೋಡಿಕೊಳ್ಳುತ್ತೇನೆಂದು ಒತ್ತಾಯ ಮಾಡಿ ಕಳಿಸಿದ್ದರು, ಮೊದಲು ಲಕ್ಷವಿಲ್ಲದ ರಿಝರ್ವೇಶನ್ ಮಾಡಿಲ್ಲ. ಮುನ್ನರಾತ್ರಿ ಹೊರಟರೆ ಬಸ್ ಅಷ್ಟೂ ಫುಲ್. ಅಂತೂ ಇಂತ ಒಂದು ಸೀಟು ದೊರೆತಾಗ ಒಮ್ಮೆ ನಾನು ಒಮ್ಮೆ ಇವರು ಕುಳಿತುಕೊಳ್ಳುತ್ತ ಹೊರಟಾಯಿತು ಆ ಬಸ್ಸು, ದಾರಿಯಲ್ಲಿ ಮೂರು ಸಲ ಹಾರಾಗಿ ಬೆಳಿಗ್ಗೆ ಹತ್ತುವರೆಗೆ ಧರ್ಮಸ್ಥಳ ತಲುಪಿತು. ಊಟ ವಿಶ್ರಾಂತಿ ಎಲ್ಲ ಮುಗಿಸಿ ಸಂಜೆ ಐದರ ಹೊತ್ತಿಗೆ ವೇದಿಕೆಯ ಮೇಲೆ ಕುಳಿತ ನನಗೆ ನಿದ್ದೆಯೊ ನಿದ್ದೆ ನನ್ನ ಪಾಳಿ ಬಂದಾಗ ಮೈಕಿನೆದುರು ಹೋಗಿ ನಿಲ್ಲುತ್ತೇನೆ, ಬಾಯಿಂದ ಒಂದೇ ಒಂದು ಶಬ್ದವೂ ಹೊರಬೀಳುತ್ತಿಲ್ಲ. ಒಂದು ನಿಮಿಷ ಹಾಗೇ ನಿಂತ, ಎದುರಿಗೆ ಸಾವಿರಾರು ಜನರು' ವೇದಿಕೆಯಲ್ಲಿ, ಮೈಸೂರಿನ ಎಚ್ಚೆಸ್ಕೆಯವರು ವೀರೇಂದ್ರ ಹೆಗ್ಗಡೆಯವರು ನಂತರ ಸುಧಾರಿಸಿಕೊಂಡು ಮಾತಾಡಿದೆ. ಮುಂದೆಲ್ಲ ಸರಿಯಾಯಿತು. ಇದು ಇನ್ನೊಂದು ಅನುಭವ ಹೇಳುತ್ತ ಹೋದರೆ ಇಂಥ - ಸ್ತ್ರೀಯರಿಗೆ ವಿಶಿಷ್ಟವಾಗಿ ಕಾಡುವ ಹಲವಾರು ಅನುಭಗಳನ್ನು ಹೇಳಬಹುದು. ಆದರೆ ಇಲ್ಲಿ ಇಷ್ಟು ಸಾಕನಿಸುತ್ತಿದೆ.
ಇಂಥ ಇಕ್ಕಟ್ಟು ಕಷ್ಟಗಳೊಂದಿಗೆ ಬರವಣಿಗೆಯಿಂದ ಮಾತ್ರ ಲಭ್ಯವಾದ ಲಭ್ಯವಾಗುವ ಸಂತಸದ ಕ್ಷಣಗಳೂ ಬೇಕಾದಷ್ಟಿವೆ. ಹಾಗೆ ಸಾಫಲ್ಯವೂ ಇರುವದರಿಂದಲೇ ಈ ಅತ್ತಿ ಆತಂಕಗಳನ್ನು ಎದುರಿಸುವ ಮನೋಬಲ ಬಂದಿರುತ್ತದೆ. ಪತ್ರಿಕೆಗಳಲ್ಲಿ ಯಾವುದೇ ಬರಹ ಪ್ರಕಟವಾಗುವದರಿಂದ ತೊಡಗಿ ಕತೆ ಕವಿತೆಗಳು ಧಾರವಾಡ ಕಾರವಾರ ಆಕಾಶವಾಣಿಯಲ್ಲಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದಾಗ, ಈ ಟಿ.ವಿಯ ನಮಸ್ಕಾರದಲ್ಲಿ ಸಂದರ್ಶನ ಪ್ರಸಾರವಾದಾಗ, 2002ನೇ ಸಾಲಿನಲ್ಲಿ ದೊರೆತ ಮೂರು ಬಹುಮಾನಗಳು - ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕೆ ಶಾಮರಾವ್ ದತ್ತಿ ನಿಧಿ ಬಹುಮಾನ, ಪ್ರಭಾವತಿ ನಾಟಕಕ್ಕೆ ಸಾಹಿತ್ಯ ಪರಿಷತ್ತಿನ ಮಹಿಳಾವರ್ಷ ದತ್ತಿ ನಿಧಿ ಬಹುಮಾನ, ಹೀಗೆ ಇವುಗಳನ್ನು ಸ್ವೀಕರಿಸುವಾಗೆಲ್ಲ ನಾನು ಕಂಡ ಕಷ್ಟ ಕಷ್ಟಗಳೇ ಅಲ್ಲ. ಅಷ್ಟಾದರೂ ಕಷ್ಟ ಪಟ್ಟರೆ ಮಾತ್ರ ಇಷ್ಟಾರ್ಥ ಸಿಗುವುದು ಅಂದುಕೊಂಡಿದ್ದೇನೆ.
ಆದರೆ ಚೆನ್ನಮ್ಮ ಪ್ರಶಸ್ತಿ ಬೆನ್ನಿಗೆ ಅಂದರೆ ಕಳೆದ ಏಪ್ರಿಲದಿಂದ ನಾನು ಅನುಭವಿಸಿದ ಆತಂಕ-ಭಯ ತಳಮಳ ಮಾತಿಗೆ ನಿಲುಕುವಂಥದ್ದಲ್ಲ. ಯಾಕೆಂದರೆ ವೈರಿ ಎದುರಿಗೆ ಕಂಡರ ಹೊಡೆಯಬಹುದು, ಕಡಿಯಬಹುದು. ಬೇಕಿದ್ದರೆ ಸಂಧಿಯನ್ನು ಮಾಡಿಕೊಳ್ಳಬಹುದು. ಅದಿಲ್ಲದೆ ಕಣ್ಣಿಗೆ ಕಾಣದ ಕೈಗೆ ಸಿಕ್ಕಿದ ನಮ್ಮ ಜೀವನವನ್ನೇ ಹಿಂಡತೊಡಗಿದರೆ? ಏನು ಮಾಡಲು ಸಾಧ್ಯ? ಹೇಗೆ ಎದುರಿಸಬೇಕು? ಗೊತ್ತಾಗುತ್ತಿಲ್ಲ. ವಿಷಯವೇನೆಂದರೆ ಹಿಂದಿನ ಮಾರ್ಚ್ 4ರಂದು ಸಾಹಿತ್ಯ ಕ್ಷೇತ್ರದ ಕಿತ್ತೂರು ರಾಣಿ ಚೆನ್ನ ಪ್ರಶಸ್ತಿಯನ್ನು ನನಗೆ ಕೊಟ್ಟರು. ಅದಾಗಿ 2-3 ವಾರಕ್ಕೇ ಜನ ಯಾಕೊ ನನ್ನ ಕಡೆ ವಿಚಿತ್ರವಾಗಿ ನೋಡ್ತಾರೆ ಅಂತ ಭಾಸವಾಗತೊಡಗಿತು. ಸುಳ್ಳಾಗಿರಬೇಕೆಂದು ಮೊದ ಮೊದಲು ಅಲಕ್ಷಿಸಿದೆ. ಆದರೆ ದಿನಗಳೆದಂತೆ ಅಪರಿಚಿತರ ವ್ಯಂಗ್ಯ ನಗು ಕುಹಕ ಮಾತುಗಳಿಂದ ಅಶ್ಚರ್‍ಯ, ಭೀತಿ ಎರಡೂ ಅಗತೊಡಗಿತು. ಅದೂ ಪರ ಊರುಗಳಲ್ಲೂ ಇಂಥ ಸಂದರ್ಭಗಳು ಎದುರಾಗುತ್ತ ಹೋದಂತೆ ಏನೊ ಒಂದು ಮೋಸ ನನ್ನ ಬೆನ್ನ ಹಿಂದೆ ನಡೆದಿರುವದು ಖಾತ್ರಿಯಾಯಿತು. ಯಾರೊ ನನ್ನ ಎಳ್ಗೆಯನ್ನು ಸಹಿಸದ ಹೊಟ್ಟೆಕಿಚ್ಚಿನ ಪಾಪಿಗಳು ಏನೋ ಒಂದು ಸಂಚು ಮಾಡಿ ನನ್ನನ್ನು ಪೂರ್ತಿ ಮುಗಿಸಿಬಿಡಲು ಹೊರಟಿದ್ದಾರೆ ಎಂಬುದು ಮನದಟ್ಟಾಯಿತು. ದಿನಗಳೆದಂತೆ ನೆಂಟರಿಷ್ಟರ ನೆರೆಹೊರೆಯವರ ವರ್ತನೆಗಳೂ ವಿಚಿತ್ರವಾಗತೊಡಗಿತು. ಪರಿಚಯಸ್ಥರು ಮುಖ ತಿರುಗಿಸಿ ಕೊಂಡು ಹೋಗತೊಡಗಿದರು. ನಮ್ಮ ಸಾಹಿತ್ಯಕ ವಲಯದವರೂ ಕೂಡ ಅದನ್ನೇ ನಂಬಿದವರಂತೆ ಒಂದು ಅಮಂತ್ರಣ ಕಳಿಸುವುದನ್ನೂ ಬಿಟ್ಟು ಬಿಟ್ಟಿದ್ದರು. ಆದರೆ ಈಗೊಂದೆರಡು ತಿಂಗಳಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ. ಆದರೂ ಆಗಾಗ ವಿಚಿತ್ರ ವರ್ತನೆಗಳು ತಪ್ಪುವದಿಲ್ಲ.
ಇದೇನಿರಬಹುದೆಂದು ನನ್ನ ಆಪ್ತ ವಲಯದಲ್ಲಿ ಕೇಳಿ ನೋಡಿದೆ. ಅವರು ಇದೆಲ್ಲಾ ಭ್ರಮೆ ಅಂದರು. ಪೊಲೀಸ್ ಕಂಪ್ಲೇಂಟ್ ಕೊಡುತ್ತೇನೆ ಅಂದೆ. ಬೇಡವೆಂದು ತಡೆದರು. ಯಾರೂ ಸ್ಪಷ್ಟವಾಗಿ ಏನೂ ಹೇಳುವದಿಲ್ಲ. ಅವಮಾನ ಮಾತ್ರ ತಪ್ಪುತ್ತಿಲ್ಲ, ಈ ಐವತ್ತೈದರ ಮುದುಕಿಗೇ ಇಂಥ ವಂಚನೆ ಮೋಸಗಳನ್ನು ಮಾಡುತ್ತಾರೆಂದರೆ ನಮ್ಮ ಬದುಕು ಇನ್ಯಾವ ನರಕಕ್ಕೆ ಹೋಗಿ ಬೀಳಬಹುದೊ ಎಂದು ಭಯವಾಗುತ್ತದೆ. ನನ್ನ ಹಿಂದೆ ನಡೆದಿರುವ ಮೋಸವನ್ನು ಬಯಲಿಗೆಳೆಯ ಬೇಕು. ಸತ್ಯ ಏನೆಂದು ಇಡೀ ಜಗತ್ತಿಗೇ ಗೊತ್ತಾಗಬೇಕು. ಅದರೆ ಹೇಗೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಈ ಅನ್ಯಾಯದ ಸುಳಿಯಿಂದ ಪಾರಾಗಿ ಮೇಲೇಳುವನೊ, ಅಥವಾ ಮುಳುಗಿ ಹೋಗುವನೂ ದೇವರಿಗೇ ಗೊತ್ತು.
ಈ ಸಮಸ್ಯೆ ಕೂಡಾ ಹೆ೦ಗಸಾದ ಕಾರಣಕ್ಕೆ ಕಾಡುವಂಥದ್ದು. ಯಾಕೆಂದರೆ ಗಂಡಸು ಹೇಗಿದ್ದರೂ, ಏನೇ ಮಾಡಿದರೂ ಆದರೆ, ನಮ್ಮ ಸಮಾಜದಲ್ಲಿ ಅಷ್ಟು ಮಹತ್ವವಿಲ್ಲ. ಹೆಂಗಸನ್ನು ಕೊಲ್ಲಲು ಯಾವುದೇ ಆಯುಧ ಬೇಕಿಲ್ಲ ಕೊಂಕು ಮಾತು ಕುಹಕ ನೋಟಗಳೆಸಾಕು. ಆದರೆ ಇಲ್ಲಿರುವ ಪ್ರಶ್ನೆಯೆಂದರೆ, ಇನ್ನು ಯುಗಗಳವರೆಗೆ ಹೆಂಗಸು ಅನ್ನು ಈ ಪ್ರಶ್ನೆಗಳಿಗೆಲ್ಲ ಉತ್ತರ ಇಲ್ಲಿ ದೌರ್ಜನ್ಯಗಳಿಗೆ ಗುರಿಯಾಗಿ ನರಳಬೇಕು? ತಪ್ಪಿಲ್ಲದ ಶಿಕ್ಷೆ ಅನುಭವಿಸಬೇಕು? ಜಗತ್ತು ದಿನದಿಂದ ದಿನಕ್ಕೆ ಮತ್ತಷ್ಟು ಕ್ರೂರವಾಗುತ್ತಿದೆ ಯಾಕೆ? ಈ ಪ್ರಶ್ನೆಗಳಿಗೆಲ್ಲ ಉತ್ತರ ಇಲ್ಲಿ ಸಿಗಬಹುದೆಂದು ಆಸೆಯಿಟ್ಟುಕೊಂಡು ಇಲ್ಲಿ ಬಂದಿದ್ದೇನೆ, ನನಗೆ ಬಂದಂಥ ಕಷ್ಟ ಇನ್ನೊಬ್ಬ ಮಹಿಳೆಗೆ ಬರಬಾರದು. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಿ ಏನಾದರೂ ಪರಿಹಾರ ಹುಡುಕಲು ಸಾಧ್ಯವಾಗಬಹುದೆಂದು ಭಾವಿಸುತ್ತೇನೆ. ಅಂದರೆ ಕಾನೂನು ಸಲಹೆ ಅಥವಾ ಮಾಧ್ಯಮಗಳ ಮೂಲಕ ಪರಿಹಾರ ನೀಡಬಹುದೇನೋ, ಲೇಖಕಿಯರು ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು ಎಂದು ನನ್ನ ಭಾವನೆ. ಒಟ್ಟಿನಲ್ಲಿ ಬರಹಗಾರ್ತಿಯ ಬದುಕಿನ ಒಡಲಾಳದ ನೋವುಗಳನ್ನು ಹೊರಗೆಳೆದು ಹಗುರಗೊಳಿಸುವ, ಕರ್ನಾಟಕ ಲೇಖಕಿಯ ಸಂಘದ ಈ 'ಲೇಖಲೋಕ" ಒಂದು ಅನನ್ಯ ಸಾಧನೆಯಾಗಿದೆ ಎಂದು ನಾನು ತಿಳಿಯುತ್ತೇನೆ.
ಪ್ರಶ್ನೆ : ನಿಮ್ಮ ಸಾಹಿತ್ಯ ಕೃಷಿ ಮತ್ತು ಕೃತಿಗಳ ಬಗ್ಗೆ ನಿಮ್ಮ ಮನೆಯವರೆಲ್ಲರ ಪ್ರತಿಕ್ರಿಯೆ?
ಉತ್ತರ : ಮೊದಲೇ ಹೇಳಿದಂತೆ ನಾನು ತೀರ ಸಾವಕಾಶವಾಗಿ ಬರೆಯುತ್ತಾ ಬಂದವಳು. ನಾನು ಬರೆಯವಾಗಲೇ ಮಕ್ಕಳು ಓದಿ ಮುಗಿಸುತ್ತಿದ್ದರು. ಹೀಂಗಲ್ಲ ಹಾಂಗೆ ಎಂದು ವಾದಿಸುತ್ತಿದ್ದರು. ಅವರು ಏನೇ ಹೇಳಲಿ, ನನಗೆ ಸರಿ ಎನಿಸಿದಂತೆ ತಿದ್ದುತ್ತಿದ್ದೆ. ಈಗ ಮೂವರೂ ಅವರವರ ಗಂಡನ ಮನೆಯಲ್ಲಿದ್ದಾರೆ, ನನ್ನ ಕತೆ ಕವಿತೆಗಳನ್ನು ಓದಿ ಸಂತೋಷಿಸುತ್ತಾರೆ. ಆದರೆ ನನ್ನ ಪತಿಯ ಮನಸ್ಸು ಹೀಗೆ ಎಂದು ಸ್ಪಷ್ಟವಾಗಿ ಹೇಳುವಂತಿಲ್ಲ. ಒಮ್ಮೊಮ್ಮೆ ಸಹಕಾರ ಸಿಗುತ್ತದೆ. ಇನ್ನೊಮ್ಮೆ ಇಲ್ಲ.
ಪ್ರಶ್ನೆ : ನಿಮ್ಮ “ಮನೆ” ಒಳ್ಳೆಯ ಕಥೆ ಯಾವ ಹಿನ್ನೆಲೆಯಲ್ಲಿ, ಹೇಗೆ ಇದನ್ನ ನಿಮಗೆ ಬರೆಯೋಕೆ ಸಾಧ್ಯವಾಯ್ತು?
1981ರಲ್ಲಿ ನಾವು ಕುಟುಂಬದವರೆಲ್ಲ ಸೇರಿ ಕಲ್ಲು ಮಣ್ಣು ಹೊತ್ತು ಮನೆ ಕಟ್ಟಿಸಿದವು. ಸಿಮೆಂಟಿಗೆ ನೀರೆತ್ತಿ ಹಾಕಿದವು. ಇಡೀ ಮನೆಗೆ ನಾನೊಬ್ಬಳೇ ಸುಣ್ಣ ಬಳಿದ. ನನಗಾವಾಗ `ನಮ್ಮ ಮನೆ' ಎಂಬ ಹುಚ್ಚೇ ಇತ್ತು. ಆದರೆ ಮುಂದೊಮ್ಮೆ “ಈ ಮನೆಯಲ್ಲಿ ನಿಂದಂತಾ ಇದೆ?” ಎನ್ನುವ ಪ್ರಶ್ನೆ ನನ್ನ ಕಿವಿಗೆ ಬಿದ್ದಾಗ ಮನಸ್ಸು ನೊಂದಿತು. 'ಮನೆ' ಕಥೆಗೆ ಪ್ರೇರಣೆ ಸಿಕ್ಕಿತು. ಕಥೆಯಲ್ಲಿ ಬರುವ ಉಪವಾಸ, ಹೊಡೆತ, ಹೊರಗಟ್ಟುವಿಕೆ ಇತ್ಯಾದಿ ಯಾವುದೂ ನಿಜವಾಗಿ ನಡೆದಿರದ ಸಂಗತಿಗಳು. ಅವೆಲ್ಲ ನನ್ನ ಕಾಲ್ಪನಿಕ ಹೆಣಿಗೆ ಅಷ್ಟೇ.
“ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ. ಇಂದೂ ಕೂಡ ನನ್ನ ಬೆನ್ನು ಹತ್ತಿರುವ ಕಾರಣಕ್ಕೆ, ಕೆಲವು ಉತ್ತಮವಾದ ಕಂತ...
""ಒಂದು ಪುರಾತನ ನೆಲದಲ್ಲಿ" ಪ್ರವಾಸ ಕಥನದ ರೂಪದಲ್ಲಿರುವ ಒಂದು ಮಿಶ್ರ ತಳಿಯ ಇತಿಹಾಸ. ಇದು ಈಜಿಪ್ಟ್ ಸ...
"ಪದ್ಮಾ ಅವರ ಕಥೆಗಳು ಮುಖ್ಯವಾಗಿ ಹದಿಹರೆಯದವರ ಸಂದಿಗ್ಧತೆಗಳು, ಆಧುನೀಕರಣ, ಗ್ರಾಹಕೀಕರಣ ಮತ್ತು ಜಾಗತೀಕರಣದೊಂದಿಗೆ...
©2024 Book Brahma Private Limited.