ಲೇಖಕಿಯ ನೈಜ ಬದುಕಿನ ಬಾಲ್ಯದ ಅನಾವರಣವಿಲ್ಲಿದೆ


"ಎಳವೆಯಲ್ಲಿಯೇ ತಂದೆಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡು ತಾಯಿ, ತಮ್ಮನ ಜೊತೆ ತಾಯಿಯ ತಾಯಿಯ ಅಂದರೆ ಅಜ್ಜಿಮನೆ-ಸಂಪಗೋಡಿಗೆ ಬಂದು ನೆಲೆಯಾದ ಲೇಖಕಿಯ ನೈಜ ಬದುಕಿನ ಬಾಲ್ಯದ ಒಂದೊಂದೇ ಮಜಲುಗಳು ಇಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ," ಎನ್ನುತ್ತಾರೆ ಶೈಲಾ ಗೋವಿಂದ್. ಅವರು ಶೋಭಾ ರಾವ್ ಅವರ ‘ಮಲೆನಾಡ ಅಜ್ಜಿ’ ಕೃತಿ ಕುರಿತು ಬರೆದಿರುವ ಅನಿಸಿಕೆ.

ಕೃತಿಯ ಶೀರ್ಷಿಕೆ: ಮಲೆನಾಡ ಅಜ್ಜಿ
ಲೇಖಕರು: ಶೋಭಾ ರಾವ್
ಪ್ರಕಾಶಕರು: ವೀರಲೋಕ ಪ್ರಕಾಶನ ಬೆಂಗಳೂರು(2023)
ಪುಟಗಳು: 150 ಬೆಲೆ: 175/-

'ಅಜ್ಜಿ' ಎಂದರೆ ಅಕ್ಕರೆಯ ಕೊಡ, ಪ್ರೀತಿಯನ್ನು ಮೊಗೆದು ಕೊಟ್ಟರೂ ಅವಳಿಗೆ ತನ್ನದೇ ಆದ ಜವಾಬ್ದಾರಿಗಳಿವೆ. ಮೊಮ್ಮಕ್ಕಳ ಅಮೂರ್ತ ರೂಪವಾದ ಆಕೆ, ಸಕಲ ಕಲಾವಲ್ಲಭೆ, ಭೂತದ ನೆನಪಿಲ್ಲ- ಭವಿಷ್ಯದ ಕನಸಿಲ್ಲ, ನಿರಂತರ ವರ್ತಮಾನದ ನಡವಳಿಕೆಗಳು ತುಂಬಿ ತುಳುಕುವ ಕಾಯ ಅವಳದು.. ಏನನ್ನೂ ಅಪೇಕ್ಷಿಸದ,‌ ಯಾರನ್ನೂ ಉಪೇಕ್ಷಿಸದ ಈಕೆ ಎಲ್ಲರಿಗೂ ಬೇಕಾದವಳು.. ಲೇಖಕರು ಇಲ್ಲಿ ಒಟ್ಟು 24 ಪುಟ್ಟ ಲೇಖನಗಳಲ್ಲಿ ತಮ್ಮ ಅಜ್ಜಿಯ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಎಳವೆಯಲ್ಲಿಯೇ ತಂದೆಯನ್ನು ಅನಿರೀಕ್ಷಿತವಾಗಿ ಕಳೆದುಕೊಂಡು ತಾಯಿ, ತಮ್ಮನ ಜೊತೆ ತಾಯಿಯ ತಾಯಿಯ ಅಂದರೆ ಅಜ್ಜಿಮನೆ-ಸಂಪಗೋಡಿಗೆ ಬಂದು ನೆಲೆಯಾದ ಲೇಖಕಿಯ ನೈಜ ಬದುಕಿನ ಬಾಲ್ಯದ ಒಂದೊಂದೇ ಮಜಲುಗಳು ಇಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಕಟ್ಟಿಗೆ ಒರಿಸಿ ಬೆಂಕಿ ಮಾಡಿ ಒಲೆಯಲ್ಲಿ ಮಾಡುವ ಅಡುಗೆ ಎಂಬ ಆಧ್ಯಾತ್ಮ, ಆಕಾಶದಲ್ಲಿ ಕಂಡ ಅವಕಾಶಗಳು, ಮನೆ ಔಷಧಿಯ ಭಂಡಾರ, ಬೀಸುವ ಕಲ್ಲು, ಹೊಸೆಯುವ ಬತ್ತಿ, ಅಟ್ಟದ ಮೇಲಿನ ಕರಿಕಸ, ಉಳುಕು ತೆಗೆಯುವ ಚಾಣಾಕ್ಷತೆ, ಬಾಣಂತನದ ನೈಪುಣ್ಯತೆ, ಅನ್ನಪೂರ್ಣೇಶ್ವರಿಯ ಅವತಾರ, ಬದುಕು ಕಲಿಸಿದ ಲೆಕ್ಕಾಚಾರ ಇವೆಲ್ಲವೂ ಅಜ್ಜಿಯ ಬಹುಮುಖ ಪ್ರತಿಭೆಯ ದ್ಯೋತಕವಾಗಿ, ಎಣಿಕೆಯ ಸಿಗದ ಬಾಂಧವ್ಯದ ಕುರುಹಾಗಿ, ಕಾಡುವ ನೆನಪುಗಳಾಗಿ ಮೊಮ್ಮಗಳ ಸ್ವಭಾವದ ಪ್ರತಿಧ್ವನಿಯಾಗಿ ಇಲ್ಲಿ ಒಡಮೂಡಿವೆ.

ಬದುಕಿನ ಚೌಕಟ್ಟನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಂಬಂಧಗಳ ಸಮಾರಂಭವನ್ನು ಏರ್ಪಡಿಸಿ ಅನ್ಯೋನ್ಯತೆಗಳ ಹಾರವನ್ನು ಪೋಣಿಸಿ ಸುಖ- ಸಮೃದ್ಧ ಬದುಕಿಗೆ ಮಾದರಿಯಾದವಳು ಅಜ್ಜಿ. ಸಾಮಾನ್ಯ ಸಂಪಾದನೆಯಲ್ಲೂ ಅಸಾಮಾನ್ಯವಾಗಿ ಜೀವಿಸಿ ಅನಾಯಾಸವಾಗಿ ದೇವರ ಪಾದ ಸೇರಿ ಮನಸ್ಸು-ನಡತೆಗಳಲ್ಲಿ ನೆಲೆಯಾದ ಅಜ್ಜಿ ಎಂಬ ಆತ್ಮಸಖಿಯನ್ನು ಭಾವಾಕ್ಷರಗಳಲ್ಲಿ ನಮೂದಿಸಿದ ಲೇಖಕರ ಬರಹದ ಶೈಲಿ ಓದುಗರ ಮನಮುಟ್ಟುವಂತೆ ಇದೆ.

ನಮ್ಮಜ್ಜಿ(ಅಪ್ಪನ ಅಮ್ಮ)ಯ ಜೊತೆ ನಾನೂ ಹೀಗೇ ಮಡಿಲಲ್ಲಿ ಆಡಿ ಬಾಲಂಗೋಚಿಯಾಗಿ, ಆತ್ಮಸಖಿಯಾಗಿ ಅನುಭವಗಳಲ್ಲಿ ಮಿಂದೆದ್ದು ಎಲ್ಲಾ ಸುಖ ಅನುಭವಿಸುತ್ತಾ ಬೆಳೆದೆ. 10 ಮಕ್ಕಳನ್ನು ಹೆತ್ತು ಸಾಕಿ ಸಲಹಿ ಮೊಮ್ಮಕ್ಕಳ ಬಾಣಂತನದವರೆಗೂ ದುಡಿದ ನನ್ನಜ್ಜಿಗೆ ಕುಟುಂಬದೊಂದಿಗೆ ಹೃದಯ ಶ್ರೀಮಂತಿಕೆಯೂ ತುಂಬಾ ದೊಡ್ಡದಾಗಿತ್ತು.. ಇಂತಹ ಅಜ್ಜ ಅಜ್ಜಿಯರ ಸಖ್ಯ ಅನುಭವಿಸಿದವರೇ ಅತಿ ಪುಣ್ಯವಂತರು ಎಂದು ನನ್ನ ಭಾವನೆ... ಅಂತವರ ಸಂಖ್ಯೆ ಹೆಚ್ಚಾಗಲಿ.. ದೇಹತ್ಯಾಗದ ನಂತರವೂ ಮಕ್ಕಳ-ಮೊಮ್ಮಕ್ಕಳ ಗುಣ-ನಡತೆಗಳಲ್ಲಿ ಆವಾಹಿಸಿಕೊಂಡು ಪ್ರಜ್ವಲಿಸುತ್ತ ಪ್ರತಿಫಲಿಸುತ್ತಿರುವ ಅಜ್ಜ ಅಜ್ಜಿಯರ ಆತ್ಮಶಕ್ತಿ ನಮ್ಮ ಭವ ಬದುಕಿಗೆ ಸದಾ ರಕ್ಷಾಕವಚವಾಗಲಿ..

- ಶೈಲಾ ಗೋವಿಂದ್

MORE FEATURES

ಸಾಹಿತ್ಯಾಸಕ್ತರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧವಾಗಿದೆ ‘ಬೆಂಗಳೂರು ಲಿಟ್ ಫೆಸ್ಟ್’

04-12-2024 ಬೆಂಗಳೂರು

ಬೆಂಗಳೂರು: ಸಾಹಿತ್ಯಾಸಕ್ತರನ್ನು ಅತೀವವಾಗಿ ಸೆಳೆಯುವ ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರ...

ಕೆಂಡದಗಿರಿಯ ಮೇಲೆ ಅರಗಿನ ಕಂಬ..

04-12-2024 ಬೆಂಗಳೂರು

"ಮಾತು, ಮೌನಗಳ ಅನುಭವದಲ್ಲಿನ ಈ ಹುಡುಕಾಟವು ಪ್ರಪಂಚದ ಚರಾಚರಗಳೊಂದಿಗೆ ಒಂದು ಆತ್ಮೀಯತೆಯನ್ನು ಏರ್ಪಡಿಸುತ್ತಲೇ ಇದೆ...

ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ

04-12-2024 ಬೆಂಗಳೂರು

“ಇಲ್ಲಿನ ಚೌಪದಿಗಳನ್ನು ಬರೆಯುವಾಗ ನನಗಾದ ಸಂತೋಷ ಅವರ್ಣನೀಯ, ಪದಬಣ್ಣನೆಗೆ ನಿಲುಕದ ಸಂಗತಿ. ಅದೊಂದು ಆನಂದದ ರಸಯಾತ...