ಅದ್ಭುತ ಸಂಯಮ, ಕೆಚ್ಚು ಮತ್ತು ಹೋರಾಟದ ಮನೋಭಾವ ಪ್ರದರ್ಶಿಸುವ ಈ ಕಾದಂಬರಿಯಲ್ಲಿನ ಸ್ತ್ರೀ ಪಾತ್ರಗಳು ವಿಶೇಷ ಗಮನ ಸೆಳೆಯಂತಹವು. ಕಾದಂಬರಿಯು ಹೆಣ್ಣಿನ ಶಕ್ತಿ, ಸಾಮರ್ಥ್ಯಗಳನ್ನು ಅದ್ಭುತವಾಗಿ ಚಿತ್ರಿಸುತ್ತದೆ.ಈ ಕಾದಂಬರಿ ಕರ್ನಾಟಕ ಮತ್ತು ಮುಂಬೈ ಪ್ರದೇಶದವರೆಗೂ ತನ್ನ ಹರಹು ಪಡೆದಿದೆ ಎನ್ನುತ್ತಾರೆ ಸಿ.ಎಸ್.ಭೀಮರಾಯ (ಸಿಎಸ್ಬಿ). ಅವರು ಬಾಳಾಸಾಹೇಬ ಲೋಕಾಪುರ ಅವರ ಕೃಷ್ಣೆ ಹರಿದಳು ಕೃತಿಯ ಬಗ್ಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ…
ಕೃತಿ: ಕೃಷ್ಣೆ ಹರಿದಳು
ಲೇಖಕ: ಬಾಳಾಸಾಹೇಬ ಲೋಕಾಪುರ
ಪುಟ : 396
ಬೆಲೆ : 290
ಪ್ರಕಾಶನ : ಕಣ್ವ ಪ್ರಕಾಶನ ಬೆಂಗಳೂರು
ಡಾ. ಬಾಳಾಸಾಹೇಬ ಲೋಕಾಪುರ ನವ್ಯೋತ್ತರ ಕನ್ನಡದ ಮಹತ್ವದ ಕಥೆಗಾರ ಮತ್ತು ಕಾದಂಬರಿಕಾರರು. ಅವರು ಕಳೆದ ಮೂರು ದಶಕಗಳಿಂದ ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಪ್ರಮುಖ ಕೃತಿಗಳನ್ನು ನೀಡುತ್ತಾ ಬಂದಿದ್ದಾರೆ. ಬಾಳಾಸಾಹೇಬ ಲೋಕಾಪುರ ಹುಟ್ಟು ಕಥೆಗಾರ. ನಮ್ಮ ಜಾನಪದ ಕಥೆಗಾರರಂತೆ ದಿನನಿತ್ಯದ ಹಲವಾರು ಸಂಗತಿಗಳನ್ನು ಅವರು ಆಕರ್ಷಕವಾಗಿ ಕಥೆ ಮಾಡಿ ಹೇಳುತ್ತಾರೆ. ಕಥೆಗಳ ಕಣಜವೇ ಅವರಲ್ಲಿದೆ. ಲೋಕಾಪುರವರಿಗೆ ಕಥೆಯ ಈ ಸೃಜನಶೀಲ ಶಕ್ತಿಯ ಬಗ್ಗೆ ಗಾಢವಾದ ನಂಬಿಕೆ. ಈ ನಂಬಿಕೆಯೇ ಅವರ ಕಥನ ಪ್ರತಿಭೆಯ ಮೂಲದ್ರವ್ಯ. ಲೋಕಾಪುರವರ ಕಾವ್ಯಭಾಷೆಯೇ ಅವರ ಎಲ್ಲಾ ಕಥಾನಕಗಳ ಹಿಂದಿನ ಜೀವಶಕ್ತಿ. ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ನದಿಯಲ್ಲಿ ಕೊಚ್ಚಿಹೋದ ಹಲವಾರು ಹಳ್ಳಿಗಳ ಸಂತ್ರಸ್ತರ ಸಂಕಷ್ಟಗಳ ಚಿತ್ರಣವನ್ನು ಮನಮುಟ್ಟುವಂತೆ ಕಥೆ-ಕಾದಂಬರಿಗಳ ಮೂಲಕ ಹೊರಪ್ರಪಂಚಕ್ಕೆ ತಿಳಿಸಿರುವ ಬಾಳಾಸಾಹೇಬ ಲೋಕಾಪುರ ‘ಮುಳುಗಡೆ ಸಾಹಿತಿ’ ಎಂದು ಹೆಸರುವಾಸಿಯಾದವರು. ಲೋಕಾಪುರವರ ಬಹಳಷ್ಟು ಕಥೆ-ಕಾದಂಬರಿಗಳಿಗೆ ಉತ್ತರ ಕರ್ನಾಟಕದ ಗ್ರಾಮೀಣ ಪರಿಸರವೇ ಮುಖ್ಯ ಭೂಮಿಕೆಯಾಗಿದೆ. ಅವುಗಳಲ್ಲಿ ಕಂಡುಬರುವ ಬದುಕು, ಭಾಷೆ, ಜೀವಸೆಲೆ ಬಹುತೇಕ ಗ್ರಾಮೀಣ ಪರಿಸರದ್ದು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಗ್ರಾಮೀಣ ಬದುಕಿನೊಂದಿಗೆ ಬದುಕಿ-ಬೆಳೆದ ಲೋಕಾಪುರವರು ಸಹಜವಾಗಿಯೇ ದಟ್ಟವಾದ ಗ್ರಾಮೀಣ ಜೀವನಾನುಭವ ಹೊಂದಿದವರು. ಅದನ್ನೇ ಅವರು ತಮ್ಮ ಬರಹದ ಮೂಲಸೆಲೆಯನ್ನಾಗಿ ಮಾಡಿಕೊಂಡವರು. ಆದ್ದರಿಂದ ಅವರ ಕಥೆ-ಕಾದಂಬರಿಗಳಲ್ಲಿ ಗ್ರಾಮೀಣ ಜೀವನ-ಪರಿಸರದ ಸೊಗಡು ಎದ್ದು ಕಾಣುತ್ತದೆ. ಅತ್ಯಂತ ಆತ್ಮವಿಶ್ವಾಸದಿಂದ, ನೇರವಾಗಿ, ದಿಟ್ಟವಾಗಿ, ಬರೆಯುವ ಲೇಖಕ ಈ ಕಾದಂಬರಿಗಾಗಿ ವಿಶಾಲ ಭೂಮಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಆಧುನೀಕರಣದ ಕುರುಹುಗಳಾದ ಅಣೆಕಟ್ಟುಗಳ ಭರಾಟೆಯಲ್ಲಿ ಭೂಮಿ ಮುಳುಗಡೆಯಾಗುವ ಸಮಸ್ಯೆ ಮತ್ತು ಅದರ ಪರಿಣಾಮವಾಗಿ ತಮ್ಮ ಮನೆ, ಆಸ್ತಿ, ದನ, ಜಮೀನುಗಳನ್ನು ಕಳೆದುಕೊಂಡ ಸ್ಥಳೀಯ ಜನರು ಸ್ಥಳಾಂತರಗೊಳ್ಳಬೇಕಾದ ದಾರುಣ ಪರಿಸ್ಥಿತಿಗಳು ಅವರನ್ನು ಹೆಚ್ಚು ಗಾಢವಾಗಿ ಕಾಡಿವೆ.
Dr. Balasaheb Lokapur is a well-known Short story writer and novelist. He has a special place in the heart of the readers of Kannada literature for his wonderful narrative technique. He is known for narrating the story with a great amount of delight and passion, and then giving a twist to its tail. His stories are so impressive in the memory lane that we cannot afford to forget their endings with a special touch of surprise finishing. With his wonderful gift of talent and keen observation of life, he could invent plots and create fantastic situations and weave the stories .If at all Balasaheb Lokapur is a popular story teller, it is because of his celebrated formula of surprising twists to the endings of his stories. In spite of his shortcomings, Lokapur is able to give us a very good entertainment: he fills the gaps by good scenery and immortal characters. For him characters are more important than their manners or situations. He has a great sympathy for the poor and the downtrodden.
ಪ್ರಸ್ತುತ ‘ಕೃಷ್ಣೆ ಹರಿದಳು’ ಬಾಳಾಸಾಹೇಬ ಲೋಕಾಪುರವರ ಐದನೆಯ ಕಾದಂಬರಿ. ಅವರ ಪ್ರಮುಖ ಕಾಳಜಿಗಳೆಲ್ಲ ಏಕತ್ರ ಸಂಘಟಿಸಿರುವ, ಅವರ ಸೃಜನಶೀಲ ಚೈತನ್ಯವು ಮಡುಗಟ್ಟಿರುವ ಮಹತ್ವಾಕಾಂಕ್ಷೆಯ ಬೃಹತ್ ಕಾದಂಬರಿಯಿದು. ಓದುಗರ-ವಿಮರ್ಶಕರ ಗಂಭೀರ ಪ್ರತಿಕ್ರಿಯೆಯನ್ನು ಪಡೆಯಬೇಕಾಗಿರುವ ಈ ಕಾದಂಬರಿ ಹಲವು ನೆಲೆಗಳನ್ನು ಒಳಗೊಂಡಿದ್ದು ವಿಶೇಷವಾಗಿದೆ. ಈ ಕಾದಂಬರಿಯ ಶಿಲ್ಪ ಲೋಕಾಪುರವರ ಹಿಂದಿನ ಕಾದಂಬರಿಗಳಿಗಿಂತ ಭಿನ್ನವಾಗಿದೆ.ಅಭಿವ್ಯಕ್ತಿ ಕ್ರಮಕ್ಕಾಗಿ ಹೊಸ ಹೊಸ ರೂಪಕಗಳನ್ನು ಅನ್ವೇಷಿಸುತ್ತಿರುವ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಈ ಕಾದಂಬರಿ ವಿಶಿಷ್ಟವಾಗಿದೆ. ತಮ್ಮ ವಿಶಿಷ್ಟ ನಿರೂಪಣಾ ಕೌಶಲ್ಯಕ್ಕೆ ಹೆಸರುವಾಸಿಯಾದ ಲೋಕಾಪುರವರ ಛಾಪು ಈ ಕಾದಂಬರಿಯ ಪ್ರತಿಯೊಂದು ಪುಟದಲ್ಲಿಯೂ ಎದ್ದು ಕಾಣುತ್ತದೆ. ಆಕರ್ಷಕ ನಿರೂಪಣೆ ಹಾಗೂ ಆಪ್ತ ಕಥನಶೈಲಿ ಲೋಕಾಪುರವರ ಬರವಣಿಗೆಯ ವಿಶೇಷ ಶಕ್ತಿ. ಸರಳವಾಗಿ ಸುಖ-ದುಃಖಗಳನ್ನು ಹೇಳಿಕೊಳ್ಳುವ ರೀತಿಯಲ್ಲಿ ಅವರು ಕಥೆ ಕಟ್ಟಬಲ್ಲ ಸಮರ್ಥ ಲೇಖಕರು. ಈ ಕಾದಂಬರಿಯು ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ ಮತ್ತು ಜನಸಮುದಾಯವನ್ನು ಕೇಂದ್ರವಾಗಿಸಿಕೊಂಡು ರಚಿತವಾಗಿದೆ. ಆಧುನಿಕ ನಾಗರಿಕ ಪ್ರಪಂಚವು ಗ್ರಾಮದ ಸಹಜತೆಗಳನ್ನು ಇಲ್ಲವಾಗಿಸುವ ಹಾಗೂ ಗ್ರಾಮದ ಅನನ್ಯತೆಗಳ ಮೇಲೆ ಸವಾರಿ ಮಾಡುವ ಪ್ರಕ್ರಿಯೆಗಳನ್ನು ಲೋಕಾಪುರವರು ಈ ಕಾದಂಬರಿಯಲ್ಲಿ ಮುಖಾಮುಖಿಯಾಗಿಸಿದ್ದಾರೆ. ನಾಗರಿಕ ಪ್ರಪಂಚದ ಬಗೆಗಿನ ಆಕರ್ಷಣೆಗಳ ಮತ್ತು ಗ್ರಾಮದ ನೈಜತೆಗಳ ಮುಖಾಮುಖಿಯಿಂದ ಎದುರಾಗುವ ದ್ವಂದ್ವಗಳ ಪುರಾಣದಂತೆ ಈ ಕಾದಂಬರಿ ಕಾಣುತ್ತದೆ. ನಗರ- ಗ್ರಾಮೀಣ ಪ್ರದೇಶಗಳ ಸಮುದಾಯ-ವ್ಯಕ್ತಿಪ್ರಜ್ಞೆ, ಇವುಗಳ ಬಾಂಧವ್ಯವನ್ನು ವಿಶೇಷವಾಗಿ ಈ ಕಾದಂಬರಿ ಚಿತ್ರಿಸುತ್ತದೆ. ‘ಕೃಷ್ಣೆ ಹರಿದಳು’ ಕಾದಂಬರಿಯನ್ನು ಓದುತ್ತ ಹೋದಂತೆ ಕೃತಿಯಲ್ಲಿ ಅಭಿವ್ಯಕ್ತಗೊಂಡಿರುವ ಜೀವನಾನುಭವ, ದೇಸೀ ಸಂಸ್ಕೃತಿ, ನಂಬಿಕೆ,ಹಬ್ಬ, ಕೊಲೆ, ನ್ಯಾಯ, ಉತ್ಸವ, ಆಚರಣೆ, ವಾಸ್ತವ, ಕನಸು, ತಂತ್ರ-ಭಾಷಿಕ ನೆಲೆಗಳು ಓದುಗನನ್ನು ಆಶ್ಚರ್ಯಗೊಳಿಸುತ್ತವೆ. ನಗರೀಕರಣದ ಭರಾಟೆಯಲ್ಲಿ ಭೋಗ ಸಂಸ್ಕೃತಿಯ ಬೆನ್ನುಹತ್ತಿ ಹೊರಟಿರುವ ಸಮಕಾಲೀನ ಸಮಾಜದಲ್ಲಿನ ಸಮಸ್ಯೆಗಳನ್ನು, ತಲ್ಲಣಗಳನ್ನು, ಆತಂಕಗಳನ್ನು, ಸವಾಲುಗಳನ್ನು, ದುರಂತವನ್ನು ಈ ಕಾದಂಬರಿ ಬಹುಮುಖೀ ನೆಲೆಯಲ್ಲಿ ವಿಶ್ಲೇಷಿಸುತ್ತಲೇ ರ‍್ಯಾಯ ಸಾಧ್ಯತೆಗಳನ್ನು ಅನ್ವೇಷಿಸುವ ಕಥಾನಕವಾಗಿ ಇದರ ರಚನಾ ವಿನ್ಯಾಸ ರೂಪುಗೊಂಡಿರುವುದರಿAದ ‘ಕೃಷ್ಣೆ ಹರಿದಳು’ ಕಾದಂಬರಿ ಅಧಿಕ ಮುಖ್ಯವೆನಿಸುತ್ತದೆ. “ಕೃಷ್ಣೆ ಇಲ್ಲಿ ಹಿರಿಹೊಳೆಯಾಗಿದ್ದು, ಕೃಷ್ಣೆ ಬೇಸಿಗೆ, ಮಳೆಗಾಲ, ಚಳಿಗಾಲಗಳಲ್ಲಿ ಭಿನ್ನವಾಗಿ ಹರಿಯುತ್ತಾಳೆ. ಒಡಲ ತುಂಬಿ ಹರಿವ ಅವಳ ಕಣ್ಣ ಮುಂದೆ ಎಷ್ಟು ಜನ ತೊಡೆತಟ್ಟಿ ಗೌಡಕಿ-ದೇಸಾಯಿಕಿ ಮಾಡಿದ್ದಾರೆ, ಗಡಿಕಟ್ಟಿ ಆಳಿದ್ದಾರೆ, ಗುಡಿಕಟ್ಟಿ ಆಳಿದ್ದಾರೆ. ಆದರೆ ಯಾರು ಕೊನೆಯವರೆಗೂ ಸುಖವಾಗಿ ಬದುಕಿದ್ದಾರೆ ......? ಸಾವು ಯಾರ ಮನೆಯ ಕದ ತಟ್ಟಿಲ್ಲ........?” ಈ ಕುರಿತು ನಾವು ಗಂಭೀರವಾಗಿ ಆಲೋಚಿಸಬೇಕು.
ಕನ್ನಡದಲ್ಲಿ ಉತ್ತಮ ಕಾದಂಬರಿಗಳು ಅಪರೂಪವಾಗುತ್ತಿವೆ. ಗಂಭೀರವಾದ ಚರ್ಚೆ, ಸಂವಾದ ಮತ್ತು ಗಮನವನ್ನು ಬೇಡುವ ಕೃತಿಗಳು ಕಡಿಮೆಯಾಗುತ್ತಿವೆ. ಇಂಥ ಸಂದರ್ಭದಲ್ಲಿ ಬಾಳಾಸಾಹೇಬ ಲೋಕಾಪುರವರ ‘ಕೃಷ್ಣೆ ಹರಿದಳು’ ಕಾದಂಬರಿ ಅಧಿಕ ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟಿಸಿದೆ. ಕಾದಂಬರಿಯ ಓದಿನ ಸುಖ ಬಲ್ಲವರಿಗೆ ಈ ಕಾದಂಬರಿಯಲ್ಲಿ ಓದಿನ ಸುಖದ ಸಮೃದ್ಧಿಯೇ ಇದೆ. ಸುಮ್ಮನೆ ಓದಿದರೂ ದೃಢವಾದ ಕಥೆ ಮನಸ್ಸನ್ನು ಸೆಳೆಯುತ್ತದೆ. ಗ್ರಾಮೀಣ ಬದುಕಿನ ದುರಂತದ, ವಿನಾಶದ, ಕೇಡಿನ, ಅಭಿವೃದ್ಧಿಯ, ಭರವಸೆಗಳ ಹೆಣಿಗೆಯಾಗಿ ಕಾಣುತ್ತದೆ. ಈ ಕಾದಂಬರಿಯ ಆರಂಭದಲ್ಲಿ ಲೇಖಕರು ಹೇಳಿದಂತೆ, “ ಇಲ್ಲಿ ಕತೆಯೊಂದೆ ಮುಖ್ಯ. ಕತೆ ಅಲ್ಲದೆ ಮತ್ತೇನಿಲ್ಲ, ಬದುಕೆಂದರೆ ಕತೆ.....” ಎಂಬುದು ಅದನ್ನು ಧ್ವನಿಸುತ್ತದೆ. ಕೃಷ್ಣಾ ನದಿಯ ನೀರಿನ ಹರಿವಿಕೆಗಳ ಜೊತೆ ಜೊತೆಗೇ ಮನುಷ್ಯನ ಸಂಬಂಧಗಳು, ಸಣ್ಣತನ, ಮೋಸ,ಕೊಲೆ,ವಂಚನೆ, ಕ್ರೌರ್ಯ, ಕಾಮವಾಂಛೆ –ಇತ್ಯಾದಿಗಳು ಸೇರಿ ಒಂದು ಚಿತ್ರ ವಿವರ ಲಭ್ಯವಾಗುತ್ತದೆ. ಈ ಕಾದಂಬರಿಯಲ್ಲಿ ನಲವತ್ತಾರು ಭಾಗಗಳಿದ್ದು, ಅವುಗಳಿಗೆ ತೋರಿಕೆಗೆ ಮಾತ್ರ ಪರಸ್ಪರ ಸಂಬಂಧ. ಈ ಭಾಗಗಳಲ್ಲಿ ಪಾತ್ರಗಳು ಸಂಪೂರ್ಣ ಬೇರೆ ರೂಪದಲ್ಲಿ ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತವೆ.
ಕಥಾ ಪ್ರಧಾನವಾದ ‘ಕೃಷ್ಣೆ ಹರಿದಳು’ ಒಂದು ಹೊಸ ಪಾಕದಲ್ಲಿ ಕೂಡಿಕೊಂಡು ವಿಶಾಲವಾದ ಒಂದು ಹರಹಿನಲ್ಲಿ ಸುಮಾರು ಎಂಬತ್ತು ವರ್ಷಗಳ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಡುತ್ತದೆ. ಒಂದು ನಿರ್ದಿಷ್ಟ ಕಾಲ ದೇಶದಲ್ಲಿ ಸಂಭವಿಸಿದ ಪಲ್ಲಟಗಳು ಮತ್ತು ಸ್ಥಿತ್ಯಂತರಗಳ ಕಥನವೂ ಪರ್ಯಾಯವಾಗಿ ನಡೆದು ಈ ಕಾದಂಬರಿಗೆ ಸಾಮಾಜಿಕ-ಸಾಂಸ್ಕೃತಿಕ ದಾಖಲೆಯ ಆಯಾಮವೂ ಸಹಜವಾಗಿ ತಾನಾಗಿಯೇ ಒದಗಿಬಂದಿರುವುದು ಗಮನಾರ್ಹ. ಈ ಬಗೆಯ ಮಹತ್ವದ ಕನ್ನಡದ ಪ್ರಮುಖ ಕಾದಂಬರಿಗಳಂತೆ ‘ಕೃಷ್ಣೆ ಹರಿದಳು’ ಕಾದಂಬರಿಯೂ ಒಂದು ಪ್ರದೇಶದ ವಿದ್ಯಮಾನಗಳ ವರ್ಣನೆಯಲ್ಲೇ ಹಲವು ಗ್ರಾಮೀಣ ಭಾರತ ಮಾದರಿಗಳನ್ನು ಧ್ವನಿಸುವ ಮಹತ್ವಾಕಾಂಕ್ಷೆಯನ್ನು ಪಡೆದುಕೊಂಡಿದೆ. ಮಲೆನಾಡಿನ ಸ್ಥಿತ್ಯಂತರಗಳ ಕುವೆಂಪು ಕಥನ, ಕರಾವಳಿ ಸ್ಥಿತ್ಯಂತರಗಳ ಕಾರಂತ ಕಥನಗಳಿಗೆ ಹೋಲಿಸಬಹುದಾದ ಉತ್ತರ ಕರ್ನಾಟಕದ ಸ್ಥಿತ್ಯಂತರಗಳ ಕಥನವೊಂದು ಬಾಳಾಸಾಹೇಬ ಲೋಕಾಪುರವರ ‘ಕೃಷ್ಣೆ ಹರಿದಳು’ ಕಾದಂಬರಿಯಲ್ಲಿ ನಡೆದಿದೆಯೆಂದು ಹೇಳಿದರೆ ಅದು ಅತಿಶಯೋಕ್ತಿಯಾಗಲಾರದು. ಕುವೆಂಪು-ಕಾರಂತರು ತಾವು ಹುಟ್ಟಿ ಬೆಳೆದ ಪರಿಸರವನ್ನು, ಅಲ್ಲಿಯ ಜೀವನ ಮತ್ತು ಪ್ರಕೃತಿ ವರ್ಣನೆಗಳು ಹಾಗೂ ನುಡಿಗಟ್ಟುಗಳಲ್ಲಿ ಪುನರ್ ಸೃಷ್ಟಿಸುವಿಕೆ ಲೋಕಾಪುರವರು ಬೆಳಗಾವಿಯ ಬಯಲುಸೀಮೆಯ ಒಂದು ಕಾಲದ ಬದುಕನ್ನು ದಟ್ಟವಾಗಿ ಸೆರೆಹಿಡಿದಿದ್ದಾರೆ. ಅದರ ಚಲನಶೀಲ ಇತಿಹಾಸದ ನಡೆಗಳನ್ನು ನೈಜವಾಗಿ ಗುರುತಿಸಿದ್ದಾರೆ. ಬಾಳಾಸಾಹೇಬ ಲೋಕಾಪುರವರ ಬಹುತೇಕ ಕಥೆ-ಕಾದಂಬರಿಗಳ ಅನುಭವ ಜಗತ್ತು ‘ ಶಿರಿಹಾಡಿ’ ಎಂಬ ಕಾಲ್ಪನಿಕ ಗ್ರಾಮದಲ್ಲಿ ಘಟಿಸುತ್ತದೆ. ಒಂದು ರೀತಿಯಲ್ಲಿ ಡಾ. ಚಂದ್ರಶೇಖರ ಕಂಬಾರರ ‘ಶಿವಾಪುರ’, ಯಶವಂತ ಚಿತ್ತಾಲರ ‘ಹನೇಹಳ್ಳಿ’ ಮತ್ತು ಬೊಳುವಾರರ ‘ಮುತ್ತುಪಾಡಿ’ ಇದ್ದಂತೆ. ಆದರೆ ಲೋಕಾಪುರವರ ‘ಶಿರಿಹಾಡಿ’ ಗ್ರಾಮವು ಶಿವಾಪುರ, ಹನೇಹಳ್ಳಿ ಮತ್ತು ಮುತ್ತುಪಾಡಿಗಳಿಗಿಂತ ತೀರ ಭಿನ್ನವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ‘ಶಿರಹಟ್ಟಿ’ ಅವರ ಕಥಾನಕದ ಕೇಂದ್ರ. ಅದು ಇಲ್ಲಿ ‘ಶಿರಿಹಾಡಿ’ಯಾಗಿದೆ. ‘ಶಿರಿಹಾಡಿ’ ಲೋಕಾಪುರವರ ಸಾಹಿತ್ಯದ ಕೇಂದ್ರ ಪ್ರತೀಕ. ಸಮೃದ್ಧ ಸೃಜನಶೀಲ ಬದುಕಿನ ಸಂಕೇತವಾದ ‘ಶಿರಿಹಾಡಿ’ಯನ್ನು ಲೇಖಕ ಮನದುಂಬಿ ನೆನೆಯುತ್ತಾರೆ.
ಅದ್ಭುತ ಸಂಯಮ, ಕೆಚ್ಚು ಮತ್ತು ಹೋರಾಟದ ಮನೋಭಾವ ಪ್ರದರ್ಶಿಸುವ ಈ ಕಾದಂಬರಿಯಲ್ಲಿನ ಸ್ತ್ರೀ ಪಾತ್ರಗಳು ವಿಶೇಷ ಗಮನ ಸೆಳೆಯಂತಹವು. ಕಾದಂಬರಿಯು ಹೆಣ್ಣಿನ ಶಕ್ತಿ, ಸಾಮರ್ಥ್ಯಗಳನ್ನು ಅದ್ಭುತವಾಗಿ ಚಿತ್ರಿಸುತ್ತದೆ.ಈ ಕಾದಂಬರಿ ಕರ್ನಾಟಕ ಮತ್ತು ಮುಂಬೈ ಪ್ರದೇಶದವರೆಗೂ ತನ್ನ ಹರಹು ಪಡೆದಿದೆ. ಈಗ ಈ ಕಾದಂಬರಿಯ ಕೆಲವು ಪ್ರಮುಖ ಪಾತ್ರಗಳತ್ತ ಗಮನ ಹರಿಸೋಣ;
ಅಣ್ಣಾ ದೇಸಾಯಿ ಮೂಲತಃ ಶಿರಿಹಾಡಿಯವನಲ್ಲ. ಅವನು ತನ್ನ ತಾಯಿ ಆಸ್ತಿಗೆ ಶಿರಿಹಾಡಿಗೆ ಬಂದವನು. ದೇಸಾಯಿ ಸದಾ ಬರಗಾಲಕ್ಕೆ ತುತ್ತಾಗುವ ವಿಜಯಪುರ ಕಡೆಯ ಮಡ್ಡಿಸಾಲ ಸಿರಡೋಣಿಯವನು. ಅವನು ಈ ಊರಿಗೆ ಬಂದು ತುಂಬಾ ಅಹಂಕಾರದಿಂದ ಮೆರೆಯುತ್ತಾನೆ. ಸ್ವಾಭಿಮಾನದ ಮಹಿಳೆ ಗಿರೆವ್ವಳ ಶೀಲ ಕೆಡಿಸುತ್ತಾನೆ. ಕೊನೆಗೆ ಯಾವ ಊರಿನ ನೆಲದ ಸರಹದ್ದಿನಲ್ಲೂ ಬಾರದ ತಾಣದಲ್ಲಿ ಗಿರೆವ್ವ, ಜಿಂಗಾಡಿ ಭೀಮ ಮತ್ತು ಸಣ್ಣೀರಪ್ಪರಿಂದ ಅವನು ಕೊಲೆಯಾಗುತ್ತಾನೆ. ಶಿರಹಾಡಿ ಗುರುಪಾದಪ್ಪಗೌಡನ ಹಿಡಿತದಲ್ಲಿದ್ದರೂ ಆತ ದುರ್ಬಲನಾಗಿ ವರ್ತಿಸುತ್ತಾನೆ. ದೇಸಾಯಿಯ ಅಧಿಕಾರಶಾಹಿಯ ಮುಂದೆ ಅವನ ಆಟ ನಡೆಯುವುದಿಲ್ಲ. ದೇಸಾಯಿ, ಸರಪಂಚ ಮಹಾದೇವಪ್ಪ ಮತ್ತು ಗೋಪಾಲರಾವ ಕುಲಕರ್ಣಿಯವರನ್ನು ಸಮರ್ಥವಾಗಿ ಎದುರಿಸಲು ಅವನಿಗೆ ಸಾಧ್ಯವಾಗುವುದಿಲ್ಲ. ಅಣ್ಣಾ ದೇಸಾಯಿಯ ಹೆಂಡತಿ ಸುಮಿತ್ರಾಬಾಯಿ ಗುಣವಂತೆ. ಅವಳು ಗಂಡನ ನೀಚತವನ್ನು ನಯವಾಗಿ ತಿರಸ್ಕರಿಸುತ್ತಾಳೆ. ಗಂಡ ಸತ್ತ ನಂತರ ಅವಳ ಮನಸ್ಥಿತಿ ಬದಲಾಗುತ್ತದೆ. ಅವಳು ತನ್ನ ಸಹೋದರ ರಾಕೇಶ ದೇಸಾಯಿಯ ಚಟುವಟಿಕೆಗಳನ್ನು ಸೂಕ್ಷö್ಮವಾಗಿ ಗಮನಿಸಿ, ಅವನಿಗೆ ಎಚ್ಚರಿಸಿ ಅವನನ್ನು ತನ್ನೂರು ಐನಾಪೂರಿಗೆ ತೆರಳುವಂತೆ ಬುದ್ಧಿ ಹೇಳುತ್ತಾಳೆ.
ಅಣ್ಣಾ ದೇಸಾಯಿ ಮುಗ್ಧ ಗಿರೆವ್ವಳ ಶೀಲ ಭಂಗ ಮಾಡಿ ಅವಳನ್ನು ತೊತ್ತಿನಂತೆ ಕಾಣುತ್ತಾನೆ. ದೇಸಾಯಿ, ಸರಪಂಚ ಮಹಾದೇವಪ್ಪ ಮತ್ತು ಗೋಪಾಲರಾವ ಕುಲಕರ್ಣಿಯವರು ಸೇರಿಕೊಂಡು ಅವಳನ್ನು ತಮ್ಮ ಕಾಮಕ್ಕೆ ಬಳಸಿಕೊಳ್ಳುತ್ತಾರೆ. ಗಿರೆವ್ವ ತನ್ನ ಬದುಕನ್ನು, ಶೀಲವನ್ನು ಹಾಳುಮಾಡಿದ ದೇಸಾಯಿಯ ಕೊಲೆಗಾಗಿ ಹೊಂಚುಹಾಕುತ್ತಾಳೆ. ಗಿರೆವ್ವ ದಾಸಾಯಿಯನ್ನು ಧೀನ್ ಹಾಕಿ ಕೋಪದಿಂದ ಕೊಲ್ಲುತ್ತಾಳೆ. ವಿಧಿ ಅವಳ ಬದುಕಿನ ಮೇಲೆ ಕಷ್ಟಗಳ ಮಳೆಯನ್ನೇ ಸುರಿಯುತ್ತದೆ; ತಲೆಯ ಮೇಲೆ ಕೆಂಡವನ್ನು ಸುರಿಯುತ್ತದೆ. ಇಷ್ಟಾದರೂ ಬದುಕಬೇಕೆಂದು ಮತ್ತೆ ಮತ್ತೆ ಯತ್ನಿಸುವ ಯುವತಿಯನ್ನು ವಿಧಿ ಗಂಡನೊಂದಿಗೆ ಸುಖವಾಗಿ ಬದುಕಲು ಬಿಡುವುದಿಲ್ಲ. ಬೇಟೆಯ ಮಿಗದಂತೆ ಬೇಟೆಯಾಡುತ್ತದೆ. ಗಿರೆವ್ವ ದೇಸಾಯಿಯ ಕೊಲೆಯಲ್ಲಿ ತೃಪ್ತಳಾಗದೆ ತನ್ನ ಮೇಲೆ ಅವನೊಂದಿಗೆ ಸೇರಿಕೊಂಡು ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಸರಪಂಚ ಮಹಾದೇವಪ್ಪ ಮತ್ತು ಗೋಪಾಲರಾವ ಕುಲಕರ್ಣಿಯವರನ್ನು ಕೊಲ್ಲುಲು ಹೊಂಚಹಾಕಿ ಕಾಯುತ್ತಿದ್ದಾಳೆ. ಇದೇ ಅವಳ ಬದುಕಿನ ಗುರಿ, ಹಣೆಯ ಬರಹ- ಒಬ್ಬಂಟಿಗಳಾಗಿ ನಡೆಯುವುದು, ಮೇಲೆ ಆಕಾಶ, ಕೆಳಗೆ ಭೂಮಿ, ನಡುವೆ ನಡೆಯುವ ಯುವತಿ.
ಇಂದ್ರಾಯಣಿ ಗುರುಪಾದಪ್ಪಗೌಡನ ಹೆಂಡತಿ. ಇಂದ್ರಾಯಣಿಯ ವ್ಯಕ್ತಿತ್ವ ಗುರುಪಾದಪ್ಪ ಗೌಡನಗಿಂತಲೂ ಗಟ್ಟಿ. ಅವಳ ಪ್ರಗತಿಪರ ವಿಚಾರ ಮೆಚ್ಚುವಂಥದ್ದು. ಇಂದ್ರಾಯಣಿ ಗೌಡನಂತೆ ಕ್ರೂರಿ ಅಲ್ಲ. ಅವಳ ಮೃದುಸ್ವಭಾವ ಓದುಗನ ಹೃದಯದಲ್ಲಿ ಕರುಣೆಯನ್ನು ಹುಟ್ಟಿಸುತ್ತದೆ. ಸಂಶಯ ಪಿಶಾಚಿ ಗಂಡ, ಅತ್ತೆ ರುದ್ರಾಯಣಿಯ ಆರೈಕೆ, ಊರಿನ ಘನತೆ, ಕುಟುಂಬದ ಹೊರೆ ಎಲ್ಲವನ್ನೂ ತಾಳ್ಮೆಯಿಂದಲೇ ನಿಭಾಯಿಸಿದ ಆಕೆ ಆಧುನಿಕ ನಾರಿಯ ಪ್ರತೀಕವಾಗಿದ್ದಾಳೆ. ಗಂಡ ಸೂಕ್ತ ನಿರ್ಧಾರ ಕೈಗೊಳ್ಳಲು ಅಸಮರ್ಥನಾದಾಗ ತಾನೇ ಊರಿನ ಜವಾಬ್ದಾರಿಗೆ ಹೆಗಲು ಕೊಟ್ಟು ಪತಿಗೆ ಮಾರ್ಗದರ್ಶನ ನೀಡುತ್ತಾಳೆ. ಅಲ್ಲದೆ ಮಗ ಶಿವಲಿಂಗು ದಲಿತ ಹುಡುಗಿ ಗೌರಿಯನ್ನು ಮದುವೆಯಾಗಿ ಮನೆಗೆ ಬಂದರೆ ಅವರಿಬ್ಬರನ್ನು ಹೃದಯ ತುಂಬಿ ಸ್ವಾಗತಿಸಿ ಮನೆ ತುಂಬಿಸಿಕೊಳ್ಳುತ್ತಾಳೆ.
ಕಾಮದ ಕುರಿತಾದ ಗಂಡು-ಹೆಣ್ಣಿನ ದ್ವಂದ್ವ, ಉತ್ತರ ಸಿಗಲಾರದ ಹತ್ತೆಂಟು ಪ್ರಶ್ನೆಗಳು ಹುಟ್ಟುವಂತೆ ಈ ಕಾದಂಬರಿ ಮಾಡುತ್ತದೆ. ಕಾಮತೃಪ್ತಿ ಜೀವನದ ಆತ್ಯಂತಿಕ ಅವಶ್ಯಕತೆ. ಅದು ಅನಂತ ಜೀವನದ ಮೂಲತತ್ವ ಕೂಡ. ವ್ಯವಸ್ಥಿತವಾಗಿ ಹಾಗೂ ಸಂಪೂರ್ಣ ತೃಪ್ತಿ ಹೊಂದದ ಹೊರತು ಅದು ಮನುಷ್ಯನ ಮನದ ಮೂಲೆಯಲ್ಲಿ ವಾಸನೆಯ ರೂಪದಲ್ಲಿ ಉಳಿದು ಆತನ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುವ ಪ್ರಬಲ ಶಕ್ತಿಯಾಗುತ್ತದೆ. ಇಂಥ ಕಾಮವನ್ನು ಯಾವುದೇ ವ್ಯಕ್ತಿಯು ಹಟದಿಂದ ಪಡೆಯಲು ಸಾಧ್ಯವಿಲ್ಲವೆನ್ನುವುದಕ್ಕೆ ಸುಂದ್ರಾ ಮತ್ತು ಪೋಸ್ಟಮ್ಯಾನ್ ಸಿದ್ರಾಮ ಪಾತ್ರಗಳೇ ಸಾಕ್ಷಿ. ಸುಂದ್ರಾಗೆ ಗಂಡನಲ್ಲಿ ತಿರಸ್ಕಾರ. ಆದರೆ ಅವಳು ಯೌವನದಲ್ಲಿ ಪೋಸ್ಟಮ್ಯಾನ್ ಸಿದ್ರಾಮನಲ್ಲಿ ಉಕ್ಕುತ್ತಿದ್ದ ಪೌರುಷದಿಂದ ಆಕರ್ಷಿತಳಾಗುತ್ತಾಳೆ. ಅವಳ ಮೊದಲ ಪ್ರೇಮ ಭಗ್ನವಾಗುತ್ತದೆ. ಅವಳು ಪಂಡರಾಪೂರದ ಗಿರಿಮಲ್ಲನೊಂದಿಗೆ ಮದುವೆಯಾಗುತ್ತಾಳೆ. ಅನಾರೋಗ್ಯದ ಅಣ್ಣನನ್ನು ಕಾಣಲೆಂದು ಶಿರಿಹಾಡಿಗೆ ಬರುವ ಆಕೆ ಅಲ್ಲಿಯೇ ಇರಬಯಸುತ್ತಾಳೆ. ಸುಂದ್ರಾ ತನ್ನ ಗಂಡನಿಂದ ಸಿಗದ ಸುಖವನ್ನು ಸಿದ್ರಾಮನಿಂದ ಪಡೆಯಲು ಪ್ರಯತ್ನಿಸುತ್ತಾಳೆ. ಅವಳ ಈ ಪ್ರಬಲ ಆಸೆ ಮತ್ತು ಆಕಾಂಕ್ಷೆಗಳು ನೆರವೇರುವುದಿಲ್ಲ. ಸಿದ್ರಾಮನಿಗಾಗಿ ಮನೆ ಬಿಟ್ಟು ಓಡಿ ಬರುವ ಆಕೆಯ ಈ ಪ್ರಯತ್ನದಲ್ಲಿ ಜಯ ಸಿಗುವುದಿಲ್ಲ. ನಂತರ ಅವಳು ವೇಷ ಬದಲಾಯಿಸಿಕೊಂಡು ಹುಚ್ಚಮಲ್ಲವ್ವಳಾಗಿ ಬದಲಾಗುತ್ತಾಳೆ. ಊರ ಜನರೆಲ್ಲ ಅವಳನ್ನು ದೇವಿಯೆಂದು ತಿಳಿದು ಶ್ರದ್ಧೆ- ಭಕ್ತಿಯಿಂದ ಆರಾಧಿಸುತ್ತಾರೆ.
ಸುಂದ್ರಾ ಮತ್ತು ಸಿದ್ರಾಮರು ಸಹಜ ಪ್ರವೃತ್ತಿಗೆ, ಅಧೀನರಾಗಿ, ಸಾಕಷ್ಟು ವಿವೇಚಿಸದೆ ಒಂದು ಹೆಜ್ಜೆ ಮುಂದೆ ಇಡುತ್ತಾರೆ. ಸುಂದ್ರಾ ಗಂಡನಿಂದ ದೂರವಿದ್ದು ಸಿದ್ರಾಮನೊಂದಿಗೆ ಸಂಬಂಧ ಬೆಳೆಸುವುದು, ಸಿದ್ರಾಮ ಸುಂದ್ರಾಳೊಂದಿಗೆ ಓಡಿಹೋಗಬೇಕೆನ್ನುವುದು, ಇಂತಹ ವಿವೇಚನಾರಹಿತ ಹೆಜ್ಜೆಗಳು. ಅಲ್ಲಿಂದ ಅವರನ್ನು ಪಾಪಪ್ರಜ್ಞೆ ಕಾಡುತ್ತದೆ. ಇದು ಯಾವುದೂ ಪಾಪವಲ್ಲ, ಅನೈತಿಕವಲ್ಲ. ಆದರೆ ಅವರು ಅದಕ್ಕೆ ತೆರುವ ಬೆಲೆ ಅಧಿಕ ಭಯಂಕರ.
ಮಾಲಗಾರ ಅಪ್ಪಣ್ಣನ ಪಾತ್ರ ಇಲ್ಲಿ ಗಮನಾರ್ಹವಾಗಿದೆ. ಅವನು ಒಂದು ದಿನ ಮುಂಜಾನೆ ತನ್ನ ಜೋಳದ ಹೊಲಕ್ಕೆ ಹೋಗುತ್ತಾನೆ. ಆದರೆ ಯಾರೋ ದುಷ್ಟರು ಅವನ ಹೊಲದಲ್ಲಿನ ಜೋಳದ ತೆನೆಗಳನ್ನು ಚೆಂಡಿ ಆಡಿರುತ್ತಾರೆ. ಇದರಿಂದ ಅವನು ಸಾಕಷ್ಟು ಆಘಾತಗೊಳಗಾಗುತ್ತಾನೆ. ನ್ಯಾಯ ಪಡೆಯಲು ವಾಡೆಗೆ ಬಂದರೆ ದೇಸಾಯಿ ಕೊಲೆ ಆರೋಪದ ಗುಮಾನಿಗೆ ಒಳಗಾಗಿ ಹೆಂಡತಿ ಗೌರವ್ವನೊಂದಿಗೆ ದೇಶಾಂತರ ಹೋಗಿ ಬದುಕಬೇಕಾಗುತ್ತದೆ. ತಾನೊಬ್ಬ ಜಮೀನ್ದಾರನಾಗಿದ್ದರೂ ಇನ್ನೊಬ್ಬರ ಹತ್ತಿರ ಆಳಾಗಿ ದುಡಿಯುತ್ತಾನೆ. ಆದರೆ ಕೆಲವು ದಿನಗಳ ನಂತರ ಅವನು ಈ ಕೇಸಿನಿಂದ ಮುಕ್ತನಾಗಿ ತನ್ನೂರಿಗೆ ಮರಳುತ್ತಾನೆ. ಯಾವುದೇ ದುರ್ಗಣಗಳಿಲ್ಲದ ಆತ ಗುರುಪಾದಪ್ಪಗೌಡ ಹಾಗೂ ದೇಸಾಯಿ ಆಮಿಷ್ಯಕ್ಕೆ ಬಲಿ ಬೀಳದೆ ಸಮಾಜಕ್ಕೆ ಒಳ್ಳೆಯದನ್ನೇ ಬಯಸುತ್ತಾನೆ. ಅವನು ಬಸವಾದಿ ಶರಣರ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟವನು.
ರಾಕೇಶ ದೇಸಾಯಿಯ ಪಾತ್ರ ಕೂಡ ಸಾಕಷ್ಟು ದರ್ಪದ್ದೇ ಆಗಿದೆ. ರಾಕೇಶ ದೇಸಾಯಿ ತನ್ನ ಮಾವ ಅಣ್ಣಾ ದೇಸಾಯಿ ಮರಣದ ನಂತರ ಐನಾಪೂರದಿಂದ ಶಿರಿಹಾಡಿಗೆ ಬರುತ್ತಾನೆ. ತನಗೆ ಸಂಬಂಧವೇ ಇಲ್ಲದ ಶಿರಿಹಾಡಿಯಲ್ಲಿ ದೌರ್ಜನ್ಯ, ದಬ್ಬಾಳಿಕೆ ಮಾಡುತ್ತಾನೆ. ತನ್ನ ಚೆಲುವೆ ಹೆಂಡತಿ ಋತಿಕಾಳನ್ನು ಕಡೆಗಣಿಸುತ್ತಾನೆ. ಗೋಪಾಲರಾವ ಕುಲಕರ್ಣಿಯ ಮಗಳಾದ ಸುಹಾಸಿನಿಯೊಂದಿಗೆ ವಿವಾಹೇತರ ಲೈಂಗಿಕ ಸಂಬಂಧದಲ್ಲಿ ತನ್ನ ಜೀವನದ ಸಾಫಲ್ಯತೆಗಳನ್ನು ಕಂಡುಕೊಳ್ಳುತ್ತಾನೆ. ಆದರೆ ರಾಕೇಶ ದೇಸಾಯಿಯ ಹೆಂಡತಿ ಋತಿಕಾ ಅವನಿಂದ ವೈವಾಹಿಕ ಜೀವನದಲ್ಲಿ ಯವುದೇ ಸುಖ,ಸಂತೋಷ, ಸಂತೃಪ್ತ ಪಡೆಯದ ಕಾರಣಕ್ಕಾಗಿ ವಾಡೆ ತೊರೆದು ಬೇರೆ ಯುವಕನೊಂದಿಗೆ ಓಡಿ ಹೋಗುತ್ತಾಳೆ.
ಅಣ್ಣಾ ದೇಸಾಯಿಯ ಕೊಲೆಗೆ ಕಾರಣರಾದ ಜಿಂಗಾಡಿ ಭೀಮ, ಸಣ್ಣೀರಪ್ಪ, ಕೋಕಾ ಭೀಮ ಮತ್ತು ಪೋನು ಗಿರೆಪ್ಪರೆಲ್ಲರೂ ಪೊಲೀಸರಿಂದ ಬಂಧಿತರಾಗಿ ಬೆಳಗಾವಿಯ ಹಿಂಡಲಗಾ ಜೈಲು ಸೇರುತ್ತಾರೆ. ಬಂಧಿಸಲ್ಪಟ್ಟವರೆಲ್ಲ ಅಪರಾಧಿಗಳೆಂದು ತೀರ್ಮಾನವಾಗಿ ಕೆಲವು ತಿಂಗಳವರೆಗೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ, ನಂತರ ಕೊಲೆಗೆ ಸರಿಯಾದ ಸಾಕ್ಷಿ ದೊರೆಯದ ಕಾರಣ ಬಿಡುಗಡೆ ಹೊಂದುತ್ತಾರೆ. ಕೋಕಾ ಭೀಮ ಮತ್ತು ಪೋನು ಗಿರೆಪ್ಪ ಶಿರಿಹಾಡಿಯ ಗೌಡ- ರಾಕೇಶ ದೇಸಾಯಿಯವರ ದೌರ್ಜನ್ಯ ತಾಳದೆ ಹೆದರಿ ರಾತ್ರೋರಾತ್ರಿ ಊರು ಬಿಟ್ಟು ಹೋಗುತ್ತಾರೆ.
ಸರಪಂಚ ಮಹಾದೇವಪ್ಪ ಮತ್ತು ಗೋಪಾಲ ಕುಲಕರ್ಣಿಯವರು ಕುಟಿಲ, ಮೋಸ, ವಂಚನೆಗಳಿಂದ ಗೌಡ- ದೇಸಾಯಿಗಳ ನಡುವೆ ಬೆಂಕಿ ಇಡುತ್ತಾರೆ. ಇವರಿಬ್ಬರು ಸೇರಿಕೊಂಡು ಶಿರಿಹಾಡಿಯ ಜನರ ಜೀವನವನ್ನೇ ದಯನೀಯ ಸ್ಥಿತಿಗೆ ತಳ್ಳುತ್ತಾರೆ. ಗುರುಪಾದಪ್ಪಗೌಡ ಮತ್ತು ದೇಸಾಯಿ ಖಳನಾಯಕರಾಗಿ ಕಂಡುಬರುತ್ತಾರೆ. ಪೋಜುದಾರ ಶಿವಲಿಂಗಪ್ಪ, ಪಿ.ಸಿ. ಶಂಕ್ರಪ್ಪ, ಪಾಚಂಗಿ, ಸಾತೀರವ್ವ, ಯಮನಪ್ಪ, ಮಹಾದೇವಿ,ನಿಂಗಪ್ಪ, ನ್ಯಾಮವ್ವ, ಅವಧೂತ-ಮುಂತಾದ ಪಾತ್ರಗಳು ಜೀವಂತ ಓಡಾಡಿರುವುದರಿಂದಲೇ ಈ ಕಾದಂಬರಿಗೆ ಜೀವಂತಿಕೆ ಪ್ರಾಪ್ತವಾಗಿದೆ.
ಪ್ರಕಾಶ ಒಬ್ಬ ನಿರುದ್ಯೋಗಿ ಯುವಕ. ಅವನು ಕೆಲಸ ಹುಡುಕಿಕೊಂಡು ಮುಂಬೈಗೆ ಬರುತ್ತಾನೆ. ತನ್ನೂರಿನ ರೇಣುಕಾಳ ಪರಿಚಯವಾಗುತ್ತದೆ. ಅವನು ಮುಂಬೈ ನಗರದಲ್ಲಿ ಖಾಯಂ ಉದ್ಯೋಗಕ್ಕಾಗಿ ಅಂಗಲಾಚುತ್ತಾನೆ. ಆದರೆ ಅದು ಸಿಗದ ಕಾರಣಕ್ಕಾಗಿ ರೈಟರ ಕೆಲಸ ಆರಂಬಿಸುತ್ತಾನೆ. ರೇಣುಕಾ ಒಬ್ಬ ಧನದಾಹಿ ವೈಭಿಚಾರಿಣಿ. ಮಾನ-ಮರ್ಯಾದೆ,ಅಳುಕು-ಅಂಜಿಕೆಯಿಲ್ಲದೆ ಸಿಕ್ಕ ಸಿಕ್ಕವರಿಗೆ ಮೈಮಾರಿದ ರೇಣುಕಾ, ಪ್ರಕಾಶನನ್ನು ತನ್ನ ಒಡಹುಟ್ಟಿದ ತಮ್ಮನಂತೆ ನೋಡಿಕೊಳ್ಳುತ್ತಾಳೆ. ಪ್ರಕಾಶ ಮುಂಬೈನ ನಯವಾದ ನೀಚತನದಿಂದ, ಥಳುಕಿನಿಂದ ಮೋಸ ಹೋಗಿ ಗಂಗಾಳನ್ನು ಮದುವೆಯಾಗುತ್ತಾನೆ. ಆದರೆ ಅವನಿಗೆ ಆಸಕ್ತಿ ಇರುವುದು ತನ್ನ ಬಾಲ್ಯದ ಗೆಳತಿ ಕಸ್ತೂರಿಯಲ್ಲಿ ಮಾತ್ರ. ಪ್ರಕಾಶ –ಗಂಗಾಳರದು ವಿಫಲ ದಾಂಪತ್ಯ.
ತನ್ನ ಶೀಲದ ಬಗ್ಗೆ ಕಾಳಜಿಯಿರದೆ ದೇಹದ ತುಡಿತಗಳಿಗೆ ಈಡಾಗುವ ರೇಣುಕಾ, ಕಡುಬಡತನದಲ್ಲೂ ಮಾನವೀಯತೆ ಮೆರೆಯುವ ನಿಂಗಪ್ಪ, ಯಮನಪ್ಪ, ನ್ಯಾಮವ್ವರ ಪಾತ್ರಚಿತ್ರಣ ಕಾದಂಬರಿಗೊಂದು ಆಳ ದೊರಕಿಸಿಕೊಟ್ಟಿವೆ.ಕಾದಂಬರಿ ಬಾಪುನ ಮೂಲಕ ಮುಖ್ಯವಾಗಿ ಗಾಂಧೀಜಿಯ ಗ್ರಾಮ ಸ್ವರಾಜ್ಯ ವಿಚಾರಗಳಿಗೆ ಕ್ರಿಯಾತ್ಮಕ ರೂಪ ಕೊಡುತ್ತದೆ. ಬಾಪು ಹಿಡಿದ ದಾರಿ, ಸಾಧಿಸಿದ ಪ್ರಗತಿ, ಅವನ ಮುನ್ನೋಟಗಳೆಲ್ಲವೂ ಗಾಂಧೀಜಿಯಿಂದ ಪ್ರೇರಿತರಾದ ಬಾಳಾಸಾಹೇಬ ಲೋಕಾಪುರವರ ಪ್ರಗತಿಪರ ಆಶಯಗಳ ಪ್ರತಿರೂಪವಾಗಿವೆ.
ಅತ್ಯಂತ ಸಹಜವೆನ್ನುವಂತೆ ಸಾಗುವ ಕಾದಂಬರಿಯಲ್ಲಿ, ಮುಂಬೈನಂತಹ ಮಹಾನಗರಿಯಲ್ಲಿ ಹೆಚ್ಚು ಶ್ರಮವಿಲ್ಲದೆ ರೇಣುಕಾಳನ್ನು ಭೇಟಿಯಾಗುವ ಪ್ರಕಾಶ, ಅದೇ ರೀತಿ ಬೆಂಗಳೂರಿನಲ್ಲಿ ಗೌರಿಯನ್ನು ಭೇಟಿಯಾಗುವ ಶಿವಲಿಂಗುವರ ಪ್ರಸಂಗಗಳೆರಡೂ ಓದಲು ಆಪ್ಯಾಯಮಾನವೆನಿಸಿದರೂ ಅಸಹಜದ ಭಾವ ಮೂಡಿಸುತ್ತವೆ. ಕಾದಂಬರಿಯಲ್ಲಿ ಜೀವನನಿಷ್ಠೆಯಿದೆಯೇ ಹೊರತು, ಬಂಡಾಯದ ಅಧಿಕ ದನಿಯಿಲ್ಲ. ಬದುಕಿನ ಸಾಧ್ಯತೆಯನ್ನು ಬೆನ್ನಟ್ಟಿ ಮುಂಬೈಗೆ ಹೋದ ಪ್ರಕಾಶ ಕೊನೆಗೆ ಶಿರಿಹಾಡಿಗೆ ಮರಳುವುದು, ಬೆಂಗಳೂರಿನಲ್ಲಿ ಮುಳುಗಿದ್ದ ಬಾಪು, ಶಿವಲಿಂಗು ಮತ್ತು ಗೌರಿಯರು ಆದರ್ಶದ ಕನಸು ಹೊತ್ತು ಊರಿಗೆ ಬರುವುದು ಅತ್ಯಂತ ಪ್ರಮುಖ ಅಂಶವಾಗಿದೆ. ಇದು ಮರಳಿ ಮಣ್ಣಿಗೆ, ಗ್ರಾಮದತ್ತ ಹೊರಳಿರಿ ಎಂಬ ಗಾಂಧೀಜಿಯವರ ತತ್ವಗಳಿಗೆ ಈ ಕಾದಂಬರಿ ಸುಳಿವು ನೀಡುತ್ತದೆಯೆನ್ನುವುದರಲ್ಲಿ ಸಂಶಯವಿಲ್ಲ.
ದೇಸೀ ಜೀವನಶೈಲಿ, ವಿಚಾರ, ಭಾವನೆ, ದರ್ಶನಗಳನ್ನು ಒಟ್ಟಿಗೆ ಹಿಡಿದುಕೊಡುವ, ಹೊಸ ನಿರೂಪಣೆಯ ಈ ಅದ್ಭುತ ಕಾದಂಬರಿ ಓದುಗನನ್ನು ಬಹುಕಾಲ ಕಾಡುವ ಕೃತಿ. ಗ್ರಾಮೀಣ ಭಾಷೆಯ ಸತ್ವಯುತ ಬಳಕೆ, ಆ ಭಾಷೆಯಲ್ಲಿಯೇ ನಡೆಯುವ ಸಂಭಾಷಣೆ ಕಾದಂಬರಿಗೆ ಮೆರಗು ತಂದಿದೆ. ಈ ಕಾದಂಬರಿಯ ಬಂಧದಲ್ಲಿ ಸಾಕಷ್ಟು ಬಿಗುವಿದೆ. ಸಮಕಾಲೀನ ಗ್ರಾಮೀಣ ಜೀವನದ ಯಥಾವತ್ತಾದ ಚಿತ್ರಣ ಕೊಡುವ ಇದರ ವ್ಯಾಪ್ತಿ ಬಹು ದೊಡ್ಡದಾಗಿದೆ. ಗ್ರಾಮೀಣ ಬದುಕಿನ ವಿಶಾಲ ವೇದಿಕೆ, ಅದು ಕಟ್ಟಿಕೊಡುವ ಗ್ರಾಮೀಣ ಸಮಾಜದ ಸಂಕೀರ್ಣತೆಗಳು ಇಲ್ಲಿ ಅಧಿಕವಾಗಿ ಕಾಣುತ್ತವೆ. ರಸವತ್ತಾದ ಘಟನೆಗಳೇ ಇಲ್ಲಿ ಮೇಲುಗೈ ಪಡೆದಂತಿವೆ. ಗ್ರಾಮೀಣ ಸಮಾಜದಲ್ಲಿಯ ವ್ಯಕ್ತಿಗಳ ವಿಚಿತ್ರ ಸಂಬAಧಗಳ ಒಂದು ಬೃಹತ್ ಮಾದರಿಯಾಗುವ ‘ಕೃಷ್ಣೆ ಹರಿದಳು’ ತುಂಬಾ ಮಹತ್ವದ ಕಾದಂಬರಿಯಾಗಿದೆ. ವಸ್ತು, ಪ್ರತಿಮೆ, ಅಭಿವ್ಯಕ್ತಿ, ತಂತ್ರಗಳು ಈ ಕಾದಂಬರಿ ಗೆಲುವಿಗೆ ಸಹಾಯಕವಾಗಿವೆ.ಅಲ್ಲದೆ ಅದರ ಹಿಂದೆ ತುಡಿಯುವ ಸಾಮಾಜಿಕ ಪ್ರಜ್ಞೆ ಮತ್ತು ಪ್ರಯೋಗಶೀಲತೆಗಳು ಗಮನಾರ್ಹವಾಗಿವೆ. ನೇರ ಕಥನದ ಮಾರ್ಗವನ್ನು ಬಿಟ್ಟು ಪಾತ್ರಗಳ ಒಳಗನ್ನು ಪಾರದರ್ಶಕಗೊಳಿಸಿ, ಆಂಗಿಕ ಚಲನಗಳಿಂದ ವ್ಯಾಖ್ಯಾನಿಸುತ್ತ ನಿರೂಪಿಸವ ವಿಧಾನ ಈ ಕಾದಂಬರಿಯಲ್ಲಿ ಹುಡುಕಿಟ್ಟಿದ್ದಾರೆ. ಇದು ಕನ್ನಡದ ಕಾದಂಬರಿಗಳ ಶೈಲಿಯ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ಅನುಭವವನ್ನು ನೋಡುವ ದೃಷ್ಟಿಯಂತೆ ಅದನ್ನು ಭಾಷೆಯಲ್ಲಿ ಸಾಕಾರಗೊಳಿಸುವಲ್ಲಿ ವ್ಯಕ್ತಪಡಿಸಿದ ದಿಟ್ಟತನ, ಪ್ರಾಮಾಣಿಕತೆ, ಪ್ರಯೋಗದ ತಂತ್ರದಲ್ಲಿನ ನಾವೀನ್ಯ ಈ ಕಾದಂಬರಿಯ ಮಹತ್ವದ ಗುಣಗಳಾಗಿವೆ. ಬಳಸಿದ ಭಾಷೆ ಸರಳವಾಗಿರುವ ಹಾಗೆ ಲಲಿತವಾಗಿದೆ. ಅಲ್ಲಲ್ಲಿ ಬರುವ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಸಂಭಾಷಣೆಗಳು ಕಾದಂಬರಿಗೆ ಮೆರಗು ತಂದಿವೆ. ವಸ್ತುವಿನ ವಾಸ್ತವತೆ, ಅದರ ಅಭಿವ್ಯಕ್ತಿ ತಂತ್ರದಲ್ಲಿನ ಸಹಜತೆ, ಸರಳತೆ –ಈ ಎಲ್ಲ ಕಾರಣಗಳಿಂದ ‘ಕೃಷ್ಣೆ ಹರಿದಳು’ ಒಂದು ಶ್ರೇಷ್ಠ ಕಾದಂಬರಿಯಾಗಿದೆ.
ಕಾದಂಬರಿಯಲ್ಲಿ ಬಳಕೆಯಾಗಿರುವ ಗ್ರಾಮೀಣ ಭಾಷೆ, ಪ್ರತಿಮೆ, ಭಾವಗೀತೆ, ಜನಪದ ಹಾಡು, ವಚನ, ಪ್ರಾರ್ಥನೆ, ತತ್ವಪದಗಳೇ ಕೃತಿಯ ಶಕ್ತಿ, ಜೀವಾಳ, ವೈಶಿಷ್ಟö್ಯ ಅನ್ನಿಸಿಬಿಡುತ್ತದೆ. ಹಾಗೆ ವಿಶಿಷ್ಟವಾಗಿರುವಾಗಲೂ ಧರ್ಮ, ಅರ್ಥ, ಕಾಮ ಮತ್ತ ಮೋಕ್ಷಗಳೆಂಬ ಪುರುಷಾರ್ಥಗಳನ್ನು ಬಾಳಾಸಾಹೇಬ ಲೋಕಾಪುರ ಸಾಧಿಸಿದ ಬಗೆಯನ್ನು ಮಂಡಿಸುವುದೇ ಮುಖ್ಯ ಉದ್ದೇಶವಾಗಿರುವುದು ಮಿತಿ ಅನ್ನಿಸುತ್ತದೆ. ಕಾದಂಬರಿಯುದ್ದಕ್ಕೂ ವಚನ, ತತ್ವಪದಗಳ ಉಲ್ಲೇಖ ಮತ್ತ ಮತ್ತೆ ಎದುರಾಗುವುದಿದೆಯಲ್ಲ, ಅದು ವರ್ತಮಾನದ ಬದುಕು ಮೀರಲಾಗದ ಪ್ರಾಚೀನದ ಅಚ್ಚು ಎಷ್ಟು ಗಟ್ಟಿ ಅನ್ನುವುದನ್ನು ತೋರುವ ಉದ್ದೇಶದ್ದೋ ಅನ್ನಿಸುತ್ತದೆ. ಇಷ್ಟಾದರೂ ಯಾರ ಒಪ್ಪಗೆಗೂ ಕಾಯದ ಕಾಲ ಸಹಜ ಪರಿವರ್ತನೆಗಳು ಆಗುತ್ತಿರುವುದನ್ನು ಕೂಡ ಕಾದಂಬರಿ ಸಮರ್ಥವಾಗಿ ಹೇಳುತ್ತದೆ. ಆದ್ದರಿಂದಲೇ ಕಾದಂಬರಿಯ ಮೊದಲ ವಾಕ್ಯವೇ ಇಡೀ ಕೃತಿಯ ಬೀಜವಾಕ್ಯ ಅನ್ನಿಸುತ್ತದೆ. ಈ ಕಾದಂಬರಿಯಲ್ಲಿ ಕೆಲವು ಕಡೆ ಮುದ್ರಣದ ದೋಷಗಳು ಸಹಜ ಓದಿಗೆ ಅಡ್ಡಿಯನ್ನುಂಟು ಮಾಡುತ್ತವೆ. ಲೇಖಕರ ಅತ್ಯುತ್ಸಾಹ ಹಾಗೂ ಅಸಂಯಮಗಳ ಪರಿಣಾಮವಾಗಿ ಇಲ್ಲಿನ ಕಥೆಗೆ ಮುಕ್ತಾಯವಿಲ್ಲ. ಅದು ಹಿರಿಹೊಳೆ ಕೃಷ್ಣೆಯಂತೆ ಮುಮ್ಮುಖವಾಗಿ ಹರಿಯುತ್ತದೆ. ಲೋಕಾಪುರವರ ‘ಕೃಷ್ಣೆ ಹರಿದಳು’ ಕಾದಂಬರಿಯನ್ನು ಓದುವಾಗ ಥಾಮಸ್ ಹಾರ್ಡಿಯ ‘ದಿ ರಿಟರ್ನ್ ಆಫ್ ದಿ ನೇಟಿವ್’, ರಾವ ಬಹದ್ದೂರರ ‘ಗ್ರಾಮಾಯಣ’, ಲಂಕೇಶರ ‘ಮುಸ್ಸಂಜೆ ಕಥಾಪ್ರಸಂಗ’ ಮತ್ತು ಕಂಬಾರರ ‘ಶಿವನ ಡಂಗುರ’ಗಳು ನೆನಪಿಗೆ ಬರುತ್ತವೆ.
ಉತ್ತರ ಕರ್ನಾಟಕದಲ್ಲಿ , ವಿಶೇಷವಾಗಿ ಆಡಂಬರ,ದರ್ಪ, ಅಟ್ಟಹಾಸ ಹಾಗೂ ವೈಭವೋಪೇತ ಜೀವನಕ್ಕೆ ಹೆಸರಾಗಿದ್ದ ದೇಸಾಯಿ ಮತ್ತು ಗೌಡ ಮನೆತನಗಳು ಕಾರಣಾಂತರಗಳಿಂದ ಕ್ರಮೇಣ ಅವನತಿಯತ್ತ ಸಾಗಿದ್ದು ಕಾಲದ ಬದಲಾವಣೆಯ ಸಂಕೇತ. ಇಂಥ ದೇಸಾಯಿ ಮತ್ತು ಗೌಡ ಮನೆತನಗಳ ವಿಶಿಷ್ಟ ಕಥೆಯನ್ನೊಳಗೊಂಡ ‘ಕೃಷ್ಣೆ ಹರಿದಳು’ ಒಂದು ಅದ್ಭುತ ಸಾಮಾಜಿಕ ಕಾದಂಬರಿ. ಶಿರಿಹಾಡಿಯ ಗೌಡಿಕೆ ಮತ್ತು ದೇಸಾಯಿಕೆಗಳ ಸಂಘರ್ಷದಲ್ಲಿ ನಲುಗುವ ಜನಸಾಮಾನ್ಯರ ಬದುಕು ಅಧಃಪತನದ ಹಾದಿ ಹಿಡಿಯುತ್ತದೆ. ಅಧಿಕಾರ,ಅನ್ಯಾಯ, ಅತ್ಯಾಚಾರ, ಕೊಲೆ, ಸುಲಿಗೆ, ದೌರ್ಜನ್ಯ, ದಬ್ಬಾಳಿಕೆ - ಮುಂತಾದವುಗಳು ಇಲ್ಲಿ ಹೆಡೆ ಎತ್ತಿವೆ. ನಮ್ಮ ದೇಶದ ಹಳ್ಳಿಗಳ ಜೀವನದ ರೀತಿ, ಅಲ್ಲಿ ಮುಖ್ಯವಾಗಿ ಕಾಡುವ ಸಮಸ್ಯೆಗಳು, ಸಂಘರ್ಷ, ರಾಜಕೀಯ, ಸ್ವಾರ್ಥಿಗಳ ಮೋಸ, ಮೋಸಕ್ಕೊಳಗಾದ ಸಾಮಾನ್ಯ ಜನರ ದಾರುಣ ಸ್ಥಿತಿಗತಿ-ಇವೆಲ್ಲವನ್ನು ವಾಸ್ತವವಾಗಿ ಹಿಡಿದಿಟ್ಟಿರುವ ‘ಕೃಷ್ಣೆ ಹರಿದಳು’ ಆ ಜೀವನದ ಕೈಗನ್ನಡಿಯಂತಿದೆ. ಅದು ಕಲಾತ್ಮಕ ಕನ್ನಡಿಯೂ ಆಗಿರುವುದು ಸತ್ಯ. ಕನ್ನಡದ ಶ್ರೇಷ್ಠ ಕಾದಂಬರಿಗಳ ಸಾಲಿನಲ್ಲಿ ಬಾಳಾಸಾಹೇಬ ಲೋಕಾಪುರರ ‘ಕೃಷ್ಣೆ ಹರಿದಳು’ ಕೂಡ ಒಂದೆಂದು ನಿಸ್ಸಂದೇಹವಾಗಿ ಹೇಳಬಹುದು.
ಬಾಳಾಸಾಹೇಬ ಲೋಕಾಪುರ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...
ಕೃಷ್ಣೆ ಹರಿದಳು ಕೃತಿ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ...
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...
"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...
©2024 Book Brahma Private Limited.