ಕೃಷಿಕೇಂದ್ರಿತ ಸಾಂಸ್ಕೃತಿಕ ಬದುಕಿನ ದಯಾನೀಯ ಸ್ಥಿತಿ ‘ಇದ್ದೂ ಇಲ್ಲದ್ದು’


ಕೃಷಿಕೇಂದ್ರಿತ ಸಾಂಸ್ಕೃತಿಕ ಬದುಕಿನ ದಯಾನೀಯ ಸ್ಥಿತಿ ಈ ಕಾದಂಬರಿಯ ಅಸ್ತಿಭಾರ. ಕೃಷಿ ತ್ಯಜಿಸಿ ನಮ್ಮ ಯುವಕರು ನಗರಗಳಿಗೆ ವಲಸೆ ಹೋದರೆ ಹಳ್ಳಿಗಳ ಸಾಂಸ್ಕೃತಿಕ ಬದುಕಿಗೆ ವಾರಸುದಾರರು ಯಾರು ಎನ್ನುವುದು ಇಲ್ಲಿ ದೊಡ್ಡ ಪ್ರಶ್ನೆಯಾಗಿ ನಿಲ್ಲುತ್ತದೆ ಎನ್ನುತ್ತಾರೆ ಲೇಖಕ ಎಂ ಆರ್ ದತ್ತಾತ್ರಿ. ಅವರು ಸಾಹಿತಿ ನಾ. ಮೊಗಸಾಲೆಯವರ ಇದ್ದೂ ಇಲ್ಲದ್ದು ಕಾದಂಬರಿಯ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಕೃತಿ: ಇದ್ದೂ ಇಲ್ಲದ್ದು
ಲೇಖಕ: ನಾ. ಮೊಗಸಾಲೆ
ಬೆಲೆ: 290
ಮುದ್ರಣ: 2022
ಪ್ರಕಾಶನ: ಸಾಹಿತ್ಯ ಪ್ರಕಾಶನ

ನಾ ಮೊಗಸಾಲೆಯವರ ಇದ್ದೂ ಇಲ್ಲದ್ದು ಒಂದು ಉತ್ತಮ ಚಿಂತನೆಯ ಕಾದಂಬರಿ. ಒಂದೇ ಕಾಲಘಟ್ಟದಲ್ಲಿ ಬದುಕುವ ವಿವಿಧ ತಲೆಮಾರುಗಳ ನಡುವೆ ಎದ್ದುಕಾಣುವ ವ್ಯತ್ಯಾಸ ಬರೀ ವಯಸ್ಸಷ್ಟೇ ಅಲ್ಲ, ಬದುಕನ್ನು ಕುರಿತಾದ ನಂಬಿಕೆಗಳು ಕೂಡ ಎನ್ನುವುದನ್ನು ಸೊಗಸಾಗಿ ನಿರೂಪಿಸುವ ಕಾದಂಬರಿ. ’ದೇವರು ಇದ್ದಾನೋ ಇಲ್ಲವೋ’ ಚರ್ಚೆ ನಮ್ಮಲ್ಲಿ ನಿರಂತರ; ಅದು ನಿಜಕ್ಕೂ ಉತ್ತರವಿಲ್ಲದ್ದು; ಒಂದು ಬಗೆಯಲ್ಲಿ ಅಚಿಂತ್ಯ. ಆದರೆ ದೇವರ ಮೇಲಿನ ನಂಬಿಕೆಯು ಇಬ್ಬರು ವ್ಯಕ್ತಿಗಳಲ್ಲಿ ಪರಸ್ಪರ ವಿರುದ್ಧ ಧ್ರುವಗಳಲ್ಲಿ ನಿಂತಾಗ, ಮತ್ತು ಆ ಇಬ್ಬರು ವ್ಯಕ್ತಿಗಳು ಸಂಬಂಧದಲ್ಲಿ ತಂದೆ-ಮಗರಾದಾಗ ಅದು ತೆಗೆದುಕೊಳ್ಳುವ ಸಂಘರ್ಷಗಳು ಇಲ್ಲಿಯ ಕಥಾವಸ್ತು. ತಂದೆಗೆ ತನ್ನ ಬದುಕಿನ ತರುವಾಯ ಮನೆದೇವರಿಗೆ ಪೂಜೆ ನಿಲ್ಲಬಾರದು ಎನ್ನುವ ಸಂಕಲ್ಪದ ಜೊತೆಗೆ ಮಗನು ಅದನ್ನು ಮುಂದುವರೆಸಿಕೊಂಡು ಹೋಗಲಿ ಎನ್ನುವ ಆಸೆ. ಮೂರು ಹೆಣ್ಣುಮಕ್ಕಳ ನಂತರ ಗಂಡುಸಂತಾನವಾದದ್ದು ಅವರ ಪಾಲಿಗೆ ’ದೇವರ ತಲೆಗೆ ನೀರು ಹಾಕಿಲಿಕ್ಕಾಗಿ ಬಂದ ಕೃಪೆ’. ಆದರೆ, ಮಗ, ಅವನ ವಿಶ್ವವೇ ಬೇರೆ. ತಂದೆಗನ್ನಿಸಿದ್ದು ಅವನಿಗೆ ಅನ್ನಿಸಬೇಕಿಲ್ಲ. ಆಧುನಿಕ ಶಿಕ್ಷಣವನ್ನು ಪಡೆಯುವ, ಗಣಿತ ವಿಜ್ಞಾನಗಳಲ್ಲಿ ಬುದ್ಧಿವಂತನಾದ ಮತ್ತು ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ವೃತ್ತಿ ಜೀವನನಡೆಸುವ ಅವನಿಗೆ ತನ್ನದೇ ಅಸ್ತಿತ್ವವಿದೆ. ತನ್ನದೇ ಚಿಂತನೆಗಳಿವೆ. ಇಂದಿನ ಯಂತ್ರ ಜಗತ್ತಿಗೆ ತಕ್ಕುನಾಗಿ ಅವನಿಗೆ ಪರಮಾರ್ಥವಲ್ಲ, ಈವತ್ತಿನ ಬದುಕು ಮುಖ್ಯ. ಜೊತೆಗೆ ಅವನೊಬ್ಬ ಆಜ್ಞೇಯತಾವಾದಿ - ಆಗ್ನಾಸ್ಟಿಕ್‍. ’ದೇವರತಲೆಗೆ ನೀರೆರೆಯಲೆಂದೇ’ ತಾನು ಬಂದವನೆಂದು ಮತ್ತು ಅದಷ್ಟೇ ತನ್ನ ಬದುಕಿನ ಸಾರ್ಥಕತೆಯೆಂದು ಯಾವತ್ತಿಗೂ ನಂಬುವವನಲ್ಲ. ಕ್ರಿಶ್ಚಿಯನ್ ಹುಡುಗಿಯನ್ನು ಮೆಚ್ಚಿ ಮದುವೆಯಾಗುವಾಗ ಅಪ್ಪ-ಅಮ್ಮನನ್ನು ಅದಕ್ಕೆ ಹೇಗೆ ಒಪ್ಪಿಸಬೇಕು ಎನ್ನುವ ಯೋಚನೆ ಕಾಡುತ್ತದೆಯೇ ಹೊರತು, ಮನೆದೇವರ ಪೂಜೆಗೆ ಅದರಿಂದ ತೊಡಕಾಗಬಹುದು ಎನ್ನುವ ವಿಚಾರ ಅವನ ಮನಸ್ಸಿನಲ್ಲಿ ಒಂದು ಬಾರಿಯೂ ಹಾದುಹೋಗುವುದಿಲ್ಲ. ತನ್ನದೇ ಬಗೆಯ ಸೆಕ್ಯುಲರ್ ಜೀವನವನ್ನು ನಡೆಸುವವನು. ಈ ಬಗೆಯಲ್ಲಿ, ವಿಚಾರ ಸಂಘರ್ಷಗಳಲ್ಲಿ, ಪರಸ್ಪರ ವಿರುದ್ಧ ನಂಬಿಕೆಗಳ ಪಾತ್ರಗಳ ಮುಖಾಮುಖಿಯಲ್ಲಿ ಕಾದಂಬರಿ ಬೆಳೆಯುತ್ತದೆ.

ಕೃಷಿಕೇಂದ್ರಿತ ಸಾಂಸ್ಕೃತಿಕ ಬದುಕಿನ ದಯಾನೀಯ ಸ್ಥಿತಿ ಈ ಕಾದಂಬರಿಯ ಅಸ್ತಿಭಾರ. ಕೃಷಿ ತ್ಯಜಿಸಿ ನಮ್ಮ ಯುವಕರು ನಗರಗಳಿಗೆ ವಲಸೆ ಹೋದರೆ ಹಳ್ಳಿಗಳ ಸಾಂಸ್ಕೃತಿಕ ಬದುಕಿಗೆ ವಾರಸುದಾರರು ಯಾರು ಎನ್ನುವುದು ಇಲ್ಲಿ ದೊಡ್ಡ ಪ್ರಶ್ನೆಯಾಗಿ ನಿಲ್ಲುತ್ತದೆ. ಈ ಕಾದಂಬರಿಯ ಮುಖ್ಯಪಾತ್ರದಾರಿ ದಾಸಭಟ್ಟರು ವಿದ್ಯಾವಂತರಾಗಿದ್ದೂ ಹಳ್ಳಿಯಲ್ಲೇ ಉಳಿಯುವವರು. ಊರಲ್ಲಿದ್ದ ಕ್ರಿಶ್ಚಿಯನ್ ಶಾಲೆಯಲ್ಲಿ ಉಪಾಧ್ಯಾಯರಾಗಿ ಕೆಲಸ ಮಾಡುವುದರ ಜೊತೆಗೆ ಕೃಷಿಯನ್ನು ಮತ್ತು ಊರ ಕಲ್ಯಾಣವನ್ನು ಆತ್ಮತೃಪ್ತಿಗಾಗಿ ನಡೆಸುವವರು. ಅವರ ಎಲ್ಲ ಚಟುವಟಿಕೆಗಳು ಸಂಭವಿಸುವುದು ಸೀತಾಪುರವೆಂಬ ಗ್ರಾಮದಲ್ಲಿ. ಊರಿನಲ್ಲಿ ಯುವಕಸಂಘವನ್ನು ಕಟ್ಟಿ ಯುವಶಕ್ತಿಯನ್ನು ನಾಗರಿಕ ಸದುದ್ದೇಶಗಳಿಗೆ ಹರಿಸುವವರು. ನಿಸ್ವಾರ್ಥ ಚಿಂತಕರು. ಇಷ್ಟಾದರೂ, ಅವರಿಗೆ ಮಗನು ತಮ್ಮ ನಂಬುಗೆಗಳ ಪರಿಧಿಯಾಚೆಗೆ ಬದುಕುವುದನ್ನು ಸೈರಿಸಲಾಗುವುದಿಲ್ಲ. ಅವನು ಅನ್ಯಧರ್ಮೀಯಳನ್ನು ಮದುವೆಯಾದ ಎನ್ನುವ ಕಾರಣಕ್ಕೆ ಅವನೊಂದಿಗಿನ ತಮ್ಮ ಸಂಬಂಧವನ್ನೇ ಕಡಿದುಕೊಳ್ಳುತ್ತಾರೆ. ಅದು ಯಾವ ಮಟ್ಟಕ್ಕೆ ಎಂದರೆ ತನ್ನ ತಂದೆ ತಾಯಿಯ ಅಂತ್ಯಸಂಸ್ಕಾರಕ್ಕೂ ಅವನು ಬರಬಾರದು ಎಂದು ಘೋಷಿಸುವ ಹಂತಕ್ಕೆ. ಈ ಪಾತ್ರಕ್ಕೆ ಏಕಾಗಿ ಮಗನೆಡೆಗೆ ಈ ಮಟ್ಟದ ಕ್ರೌರ್ಯ ಎಂದು ಯೋಚಿಸಿದರೆ ಸಿಗುವ ಉತ್ತರ, ಅದು ಬರೀ ಮಗನೆಡೆಗಲ್ಲ ಸಮುದಾಯವನ್ನು ತಿರಸ್ಕರಿಸಿ ಸ್ವಹಿತಕ್ಕಾಗಿ ಚದುರಿಹೋಗುವ ಎಲ್ಲರ ಮೇಲೆ ಎನ್ನುವುದು ಕಾದಂಬರಿ ಬೆಳೆದಂತೆ ಅರಿವಾಗುತ್ತದೆ. ಬದಲಾದ ಯುಗವು ವಸ್ತುರಾಶಿಯನ್ನು ನಮ್ಮೆಡೆಗೆ ಹಾಸಿ ಮನಸ್ಸನ್ನು ವಿಚಲಿತಗೊಳಿಸಿ ಸಮುದಾಯದ ಆದರ್ಶಗಳಿಂದ ವಿಮುಖಗೊಳಿಸುತ್ತಿರುವ ಪರಿಯೆಡೆಗೆ ದಾಸಭಟ್ಟರು ತೋರುವ ಪ್ರತಿಭಟನೆ ಅದು. ಆದರಿದು ಸುಖಾಂತ್ಯದ್ದಲ್ಲ. ಸುಖಾಂತ್ಯವಾಗಿದ್ದರೆ ತೀರ ಅಸಹಜವಾಗುತ್ತಿತ್ತು. ತಂದೆ ಮತ್ತು ಮಗ ತಮ್ಮತಮ್ಮ ಮಿತಿಯೊಳಗೆ ಬಂಧಿತರಾಗಿ ನೋವನ್ನು ಅನುಭವಿಸುತ್ತಾರೆ. ಇದು ಬರೀ ಅವರಿಬ್ಬರ ನೋವಲ್ಲ. ಇಂದಿನ ಭಾರತದ ಸಾರ್ವತ್ರಿಕತೆ ಮತ್ತು ವಲಸೆಯ ವ್ಯಾಖ್ಯಾನ ಅದಕ್ಕಿದೆ.

ನಾ ಮೊಗಸಾಲೆಯವರು ಶಿವರಾಮ ಕಾರಂತರಿಂದ ಪ್ರಭಾವಿತರಾದವರು. ಈ ಕಾದಂಬರಿಯ ದಾಸಭಟ್ಟನಿಗೆ ಶಿವರಾಮ ಕಾರಂತರ ಚಿಗುರಿದ ಕನಸು ಕಾದಂಬರಿಯ ಶಂಕರ ಆದರ್ಶ. ಕಾದಂಬರಿಯ ಅಂತಃರ್ಭಾವವೂ ಅದೇ. ಕಾರಂತರಂತೆ ಮೊಗಸಾಲೆಯವರೂ ತಮ್ಮ ಬದುಕಿನುದ್ದಕ್ಕೂ ಸಾಮಾಜಿಕ ಪ್ರಯೋಗಗಳಿಗೆ ತೆರೆದುಕೊಂಡವರು. ಕಾಂತಾವರವೆಂಬ ಪುಟ್ಟ ಪ್ರದೇಶಕ್ಕೆ ಒಂದು ಸಾಂಸ್ಕೃತಿಕ ನಕ್ಷೆಯನ್ನು ದಕ್ಕಿಸಿಕೊಟ್ಟವರು. ವೈದ್ಯರಾಗಿ, ಸಾಮಾಜಿಕ ಕಳಕಳಿಯ ಕಾರ್ಯಕರ್ತರಾಗಿ, ಜೊತೆಗೆ ಸಮೃದ್ಧ ಸಾಹಿತ್ಯ ಸೃಷ್ಟಿಯೊಂದಿಗೆ ಅವ್ಯಾಹತವಾಗಿ ಸಮಾಜಸೇವೆಯಲ್ಲಿ ನಿರತರಾದವರು. ಕಾದಂಬರಿಯಲ್ಲಿ ಸೀತಾಪುರವೆಂಬ ಹಳ್ಳಿಯನ್ನು ಅಭಿವೃದ್ಧಿಪಡಿಸುವ ದಾಸಭಟ್ಟರ ಪಾತ್ರ ಈ ಕಾರಣಗಳಿಗಾಗಿ ತೂಕದ್ದಾಗುತ್ತದೆ. ಲೇಖಕರ ಸ್ವಾನುಭವವಾಗುತ್ತದೆ. ಒಂದು ಕಾಲ್ಪನಿಕ ಕಥೆಯ ಪಾತ್ರವಾಗಿ ಬರುವ ದಾಸಭಟ್ಟರ ಮಾತು ಮತ್ತು ಕೃತಿಗಳನ್ನು ನಾವು ಯಾವ ಶಂಕೆಯಿಲ್ಲದೆ ನಂಬುತ್ತೇವೆ. ಹಾಗೆ ನಂಬಿಸುವ ಶಕ್ತಿ ಲೇಖಕರ ಬದುಕಿನಿಂದ ಬಂದಿದೆ. ಕಾರಂತರ ನಂತರ ಈ ಬಗೆಯಲ್ಲಿ, ಬದುಕು ಒದಗಿಸಿದ ತೂಕದಲ್ಲಿ, ಸಂವಾದ ನಡೆಸಬಲ್ಲವರು ನಾ ಮೊಗಸಾಲೆಯೊಬ್ಬರೇ ಎನ್ನಿಸುತ್ತದೆ.

ಇಷ್ಟಾದರೂ, ಕೃಷಿಯನ್ನು ಒಂದು ವೃತ್ತಿಗಿಂತ ಹೆಚ್ಚಿನ ಧನ್ಯತಾಭಾವದಲ್ಲಿ ಸ್ವೀಕರಿಸುವ ಮತ್ತು ಮಣ್ಣಿಗೆ ಮರಳುವುದೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರವೆಂಬ ಸರಳ ಸೂತ್ರದಲ್ಲಿ ನನಗೆ ಸಮಸ್ಯೆಗಳು ಕಂಡವು. ಕೃಷಿ ನಮ್ಮ ಅತ್ಯಂತ ಪ್ರಾಚೀನ ನಾಗರಿಕ ಜೀವನವಿಧಾನ ಎನ್ನುವುದು ಸುಳ್ಳಲ್ಲ. ಮನುಷ್ಯ ಒಂದು ಸ್ಥಳದಲ್ಲಿ ನೆಲೆಸುವಂತಾಗಿ ನಮ್ಮ ನಾಗರೀಕತೆಗಳು ಆರಂಭವಾಗಿದ್ದೇ ಕೃಷಿಯ ಕಾರಣದಿಂದ. ಆದರೆ ಈ ದಿನಗಳಲ್ಲಿ ಕೃಷಿಗೋಸ್ಕರ ಬೃಹತ್ ಪ್ರಮಾಣದಲ್ಲಿ ಅರಣ್ಯನಾಶವಾಗುತ್ತಿರುವುದೂ ಸತ್ಯವೇ. ಏರು ಜನಸಂಖ್ಯೆಗೆ ತಕ್ಕುನಾಗಿ ಆಹಾರ ಉತ್ಪಾದನೆಯಂತೂ ಆಗುತ್ತಿದೆಯಷ್ಟೇ; ಆದರೆ ಅದರ ಪರಿಸರ ಪರಿಣಾಮಗಳು ವಿಪರೀತ. ಕಾರಂತರ ಕಾದಂಬರಿಗಳ ನಾಯಕರಾದ ಶಂಕರ, ರಾಮ ಐತಾಳರಂತೆ ಈ ಕಾದಂಬರಿಯ ದಾಸಭಟ್ಟನೂ ಮಣ್ಣಿನಪ್ರೀತಿಯಿಂದ ಕೃಷಿ ಬೆಳೆಸುತ್ತಾನೆಯೇ ಹೊರತು ಕಾಡು ಬೆಳೆಸುವುದಿಲ್ಲ. ಸಮಾಜವನ್ನು ಕುರಿತು ಇವರೆಲ್ಲ ನಾಯಕರ ಅವ್ಯಾಜಪ್ರೀತಿ, ಅದಮ್ಯ ಉತ್ಸಾಹ ಮತ್ತು ನಿಸ್ಪೃಹತೆ ಪ್ರಶ್ನಾತೀತ; ಆದರೆ ಅವರ ಚಿಂತನೆಗಳು ಇಂದಿನ ಜಗತ್ತನ್ನು ಉಳಿಸಬಲ್ಲಷ್ಟು ಶಕ್ತಿಶಾಲಿಯೇ ಎನ್ನುವಲ್ಲಿ ನಾನು ಅದೇ ಮಾತನ್ನು ಹೇಳಲಾರೆ. ನಮ್ಮೆಲ್ಲ ಸಮಸ್ಯೆಗಳಿಗೆ ಮೂಲವಾದ ಜನಸಂಖ್ಯೆಯನ್ನು ನಿಯಂತ್ರಿಸಿ, ತಂತ್ರಜ್ಞಾನಕ್ಕೊಂದು ನೀತಿಬದ್ಧತೆಯುಡಿಸಿ, ಕೃಷಿ, ಅರಣ್ಯ, ಗ್ರಾಮ, ನಗರ ಮತ್ತು ಭೂಮಿಯನ್ನು ಉಳಿಸಿ ಎನ್ನುವ ಅನುಸಂಧಾನ ಭಾವವನ್ನು ಇವರ‍್ಯಾರೂ ಮೂಡಿಸುವುದಿಲ್ಲ. ಅದು ನನಗೆ ಮಿತಿಯಾಗಿ ಕಾಡಿತು. ಭೌತರೂಪದ ಸಂಘಟಿತ ಮನುಷ್ಯ ಶಕ್ತಿಯನ್ನೇ (ಹ್ಯೂಮನ್ ರೀಸೋರ್ಸ್) ಭೂಮಿಯನ್ನು ರಕ್ಷಿಸುವ ಅಂತಿಮ ಶಕ್ತಿಯನ್ನಾಗಿ ಪರಿಭಾವಿಸುವುದಾದರೆ ಈ ಚಿಂತನೆಗೂ, ಮನುಷ್ಯ ಶಕ್ತಿಯಿಂದ ದಕ್ಕುವ ಲಾಭ ಮತ್ಯಾವುದರಿಂದಲೂ ಇಲ್ಲ ಎನ್ನುವ ಬಂಡವಾಳಶಾಹಿ ಚಿಂತನೆಗೂ ನಡುವೆ ದೊಡ್ಡ ವ್ಯತ್ಯಾಸವು ಕಾಣುವುದಿಲ್ಲ. ಎರಡಕ್ಕೂ ಭೂಮಿಯ ಮುಂದಿನ ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತೆಯಿದ್ದಂತಿಲ್ಲ. ಈಗಿನ ಮುನ್ನೂರು ‌ವರ್ಷಗಳಲ್ಲಿ ಬೃಹದಾಕಾರ ತಳೆದ ಯಂತ್ರಪ್ರಣೀತ ಕೈಗಾರಿಕೀಕರಣದಂತೆ ಕೃಷಿಯೂ, ಎಷ್ಟೇ ಪುರಾತನವಾದರೂ, ಮಾನವನ ವಿಜ್ಞಾನ-ತಂತ್ರಜ್ಞಾನ ಚಿಂತನೆಗಳ ಫಲ ಎಂದಾಗ, ಅದು ನಿರ್ಮಿಸುವ ಸಂಸ್ಕೃತಿಯು ಸದಾಕಾಲಕ್ಕೆ ’ಪ್ರಕೃತಿ ಪರ’ ಎನ್ನುವ ಆದಿಕಲ್ಪನೆ ಅವಾಸ್ತವವೆನ್ನಿಸೀತು.

ಕೆಲವು ನಿಲುವುಗಳಲ್ಲಿ ಏಕಾಭಿಪ್ರಾಯ ಮೂಡದಿರಬಹುದು, ಆದರೆ ಇಷ್ಟೊಂದು ಬಗೆಗಳಲ್ಲಿ ಚಿಂತನೆಗೆ ಹಚ್ಚುವ ಶಕ್ತಿ ಈ ಕಾದಂಬರಿಗಿದೆ ಎನ್ನುವುದು ಒಂದು ದೊಡ್ಡ ಗುಣವೇ. ಮುನ್ನುಡಿಯಲ್ಲಿ ಬೆಳಗೋಡು ರಮೇಶ ಭಟ್ಟರು ನಾ ಮೊಗಸಾಲೆಯವರ ಸಾಹಿತ್ಯವಿಶೇಷವನ್ನು ಗುರುತಿಸುತ್ತ ‘ಬಹುಸಂಸ್ಕೃತಿಯ ಕುತೂಹಲ ಮತ್ತು ಸಮಾಜಶಾಸ್ತ್ರಜ್ಞನೊಬ್ಬನ ಖಚಿತ ನಿಷ್ಠುರತೆ’ ಎನ್ನುತ್ತಾರೆ. ಆ ಮಾತು ಈ ಕಾದಂಬರಿಯನ್ನು ಸೊಗಸಾಗಿ ಸಂಕ್ಷಿಪ್ತಗೊಳಿಸುತ್ತದೆ. ತಲೆಮಾರುಗಳ ನಡುವಿನ ಮೌಲ್ಯ ಸಂಘರ್ಷಗಳನ್ನು ದಾಖಲಿಸುವ ಮತ್ತು ಸಂವಹನಕ್ಕೆ ಸೇತುವೆಯಾಗುವ ಕೆಲಸವನ್ನು ನಾ ಮೊಗಸಾಲೆಯವರು ಮಾಡುತ್ತಿದ್ದಾರೆ. ಇದ್ದೂ ಇಲ್ಲದ್ದು ಕಾದಂಬರಿ ಅದಕ್ಕೆ ಒಂದು ಒಳ್ಳೆಯ ಸಾಕ್ಷಿ. ಶಿವರಾಮ ಕಾರಂತರ ಪ್ರಪಂಚ ಮತ್ತು ಕಾರಂತೋತ್ತರ ಪ್ರಪಂಚವನ್ನು ಕೂಡಿಸುವ ಅಪರೂಪದ ಕೊಂಡಿಯಾಗಿ ನನಗೆ ನಾ ಮೊಗಸಾಲೆಯವರು ಕಾಣುತ್ತಾರೆ.

- ಎಂ ಆರ್ ದತ್ತಾತ್ರಿ

MORE FEATURES

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...

ನನ್ನ ದೃಷ್ಟಿಯಲ್ಲಿ ಬದುಕೆಂದರೆ ನ್ಯಾಯಾಲಯದ ಕಟಕಟೆಯಲ್ಲ..

21-11-2024 ಬೆಂಗಳೂರು

"ಸಾಮಾನ್ಯ ಹೆಣ್ಣುಮಗಳು ಸರಳಾದೇವಿಯ ಚಿತ್ರಣದೊಂದಿಗೆ ಪ್ರಾರಂಭವಾಗುವ ಈ ಕಾದಂಬರಿ ನಿಜಕ್ಕೂ ತನ್ನೊಳಗೆ ಎಳೆದುಕೊಳ್ಳು...