ಕೊಡಲು ಕೊಳಲು ಒಲವು ಬಿಟ್ಟು ಬೇರೆ ಉಂಟೆ ಬಾಳಲಿ? 


''ನಾನು ಬರೆದ, ಆರಿಸಿಕೊಂಡ ಕಥೆಗಳಲ್ಲಿ ಭಿನ್ನಭಿನ್ನ ಮನೋಭಾವದ, ಭಿನ್ನಭಿನ್ನ ವಯೋಮಾನದ, ಭಿನ್ನಭಿನ್ನ ಹಿನ್ನೆಲೆಯ ಪ್ರೇಮದ ಕಥೆಗಳಿವೆ. ಇದು ನಾನು ಅರಿತೋ ಅರಿಯದೆಯೋ ಮಾಡಿಕೊಂಡ ಆಯ್ಕೆ. ಏಕೆಂದರೆ ಪ್ರೇಮವನ್ನು ಕೇವಲ ಒಂದು ಚೌಕಟ್ಟಿನಲ್ಲಿ ನಿಲ್ಲಿಸಲು ನಾನು ಸಿದ್ಧಳಿರಲಿಲ್ಲ, ಸಿದ್ಧಳಿಲ್ಲ,'' ಎನ್ನುತ್ತಾರೆ ಎನ್‌ ಸಂಧ್ಯಾರಾಣಿ. ಅವರು ತಮ್ಮ ‘ಲವ್ ಟುಡೆ’ ಕೃತಿಗೆ ಬರೆದ ಲೇಖಕಿಯ ನುಡಿ.

`ಮೇಡಂ ಒಂದು ಐಡಿಯಾ ಬಂದಿದೆ, ಹೇಗಿದೆ ನೋಡಿ' ಎಂದು ಜಮೀಲ್‌ ಅವರು ಕರೆ ಮಾಡಿದರೆ ನಮಗೇ ಗೊತ್ತಿಲ್ಲದಂತೆ ಆ ಉತ್ಸಾಹ ನಮ್ಮನ್ನೂ ಆವರಿಸಿಕೊಳ್ಳುತ್ತದೆ. ನಾನೂ `ಹೇಳಿ ಸರ್‌' ಎಂದು ಕಾತರದಲ್ಲಿ ಕಾಯುತ್ತೇನೆ. ಹಾಗೆ ಹುಟ್ಟಿದ ಕನಸು ಈಗ ನಿಮ್ಮ ಕೈಲಿರುವ `ಲವ್‌ ಟುಡೆ'. `ಮೂರು ಜನ ಕಥೆಗಾರ್ತಿಯರು, ಒಬ್ಬೊಬ್ಬರು ನಾಲ್ಕು ನಾಲ್ಕು ಕಥೆಗಳು, ವಿಷಯ ಮಾತ್ರ ಒಂದೇ-ಪ್ರೇಮ!' ಹೀಗೆ ಒಂದು ಪ್ರಸ್ತಾವನೆ ಬಂದರೆ ವಾವ್‌ ಅನ್ನಿಸದೆ ಇರುವುದು ಹೇಗೆ?! ಪುಸ್ತಕಕ್ಕೆ `ಲವ್‌ ಟುಡೆ' ಎಂದು ಹೆಸರಿಟ್ಟ ಜಮೀಲ್‌ ಅವರು ಆ ಮೂಲಕ ಪುಸ್ತಕದ ವಸ್ತುವಿಗೆ ಒಂದು ಚೌಕಟ್ಟು ಸಹ ಒದಗಿಸಿದರು.

ಆದರೆ ಚೌಕಟ್ಟು ಬಂದ ಕೂಡಲೇ ಅದನ್ನು ವ್ಯಾಖ್ಯಾನ ಮಾಡಬೇಕು. `ಲವ್‌ ಟುಡೆ' ಎಂದರೆ ಇಂದಿನ ಪ್ರೇಮವೆ ಅಥವಾ ಇಂದಿನವರ ಪ್ರೇಮವೆ? ಅದಕ್ಕೂ ಮೊದಲು ಇಂದಿನವರು ಎಂದರೆ ಯಾರು? ಇಂದು ಇರುವ ಎಲ್ಲ ವಯೋಮಾನದವರು ಅಥವಾ ಇಂದು ಹದಿಹರೆಯದಲ್ಲಿರುವವರು? ಚೌಕಟ್ಟುಗಳನ್ನು ಮೀರಲು ತುಡಿಯದದ್ದಿರೆ ಅದು ಪ್ರೇಮ ಏಕಾದೀತು?! ನಾನು ಮೊದಲು ಮಾಡಿಕೊಂಡ ನಿರ್ಣಯವೇ ಚೌಕಟ್ಟುಗಳನ್ನು ಒಡೆಯುವುದು. ಇಂದು ಎನ್ನುವುದು ಕಾಲದ ಒಂದು ಘಟ್ಟ ಎಂದುಕೊಂಡರೆ, ಆ ಕಾಲಘಟ್ಟದಲ್ಲಿ ಎಲ್ಲ ವಯೋಮಾನದವರೂ ಇರುತ್ತಾರೆ. ಕಾಲ ಎನ್ನುವ ನದಿಯಲ್ಲಿ ನಿನ್ನೆ, ಇಂದು, ನಾಳೆಗಳು ಪ್ರತಿ ಹಂತದಲ್ಲೂ ಬೆರೆಯುತ್ತಲೇ ಇರುತ್ತವೆ. ಹಾಗಾಗಿ ನನ್ನ ಪ್ರೇಮದ ಕಥೆಗಳಿಗೆ ವಯಸ್ಸಿನ ಹಂಗನ್ನು ತೆಗೆದೆ.

ಬಹುಶಃ ಪ್ರತಿ ಜನಾಂಗವೂ ಪ್ರೇಮದ ವಿಷಯದಲ್ಲಿ ತಾವು ಕ್ರಾಂತಿಕಾರಿಗಳು, ನಮ್ಮ ಹಿರಿಯರಿಗೆ ಅದು ಅರ್ಥವಾಗುವುದಿಲ್ಲ ಎಂದುಕೊಳ್ಳುತ್ತಾರೆ. ಆದರೇನು ಮಾಡುವುದು? ದಿಲ್‌ ತೋ ಬಚ್ಚಾ ಹೈ ಜಿ! ಹಾಗೆಯೇ ಬಹಳಷ್ಟು ಜನ ಅವರ ಪ್ರೇಮ `ದಿವ್ಯ' ವಾದದ್ದು, ಮಿಕ್ಕವರದ್ದು ಲಾಲಸೆ ಎಂದುಕೊಳ್ಳುತ್ತಾರೆ. ಪ್ರೇಮದ ಮಟ್ಟವನ್ನು, ಅದರ ದೈವಿಕತೆಯನ್ನು ನಿರ್ಣಯಿಸುವವರು ಯಾರು? ಬಹುಶಃ ಅದರೊಳಗಿರುವವರು ಮಾತ್ರ. ಆ ವೃತ್ತದ ಆಚೆಗಿರುವವರು ಅದನ್ನು ಗೌರವಿಸಬೇಕು, ಅಷ್ಟೆ. `ಯಾವ ಜೀವ ಯಾವ ನೋವಿಗೀಡೋ, ಯಾವ ಭಾವ ನೆಮ್ಮಿ ಅದರ ಪಾಡೋ... ಕಾಣಲು ಬಿಡಿ ತನ್ನೊಳಗಿನ ಬೆಳಕ, ಇರಲಿ ಅದನು ಕುರಿತು ಚೂರು ಮರುಕ' ಎಂದು ಎನ್‌ ಎಸ್‌ ಲಕ್ಷ್ಮಿನಾರಾಯಣ ಭಟ್ಟರು ತಮ್ಮ ಒಂದು ಗೀತೆಯಲ್ಲಿ ಬರೆಯುತ್ತಾರೆ. ಇನ್ನೊಬ್ಬರನ್ನು ಕುರಿತು ನ್ಯಾಯಾಧೀಶರಾಗುವುದು ಸುಲಭ, ಏಕೆಂದರೆ ಅಲ್ಲಿ ನಾವು ನಿರ್ಭಾವುಕವಾಗಿ ಸರಿತಪ್ಪುಗಳ ತುಲನೆ ಮಾಡಬಹುದು, ಇದು ಮತ್ತು ಇದು ಮಾತ್ರವೇ ಸರಿ ಎಂದು ಗೆರೆ ಎಳೆಯಬಹುದು. ಆದರೆ ಅದರಲ್ಲಿ ಭಾಗಿಯಾದವರ ಪಾಲಿಗೆ ಅದು ಜೀವನ್ಮರಣದ ಪ್ರಶ್ನೆ. `ಎ ಇಶ್ಕ್ ನಹೀ ಆಸಾನ್‌, ಇತ್ನಾ ಸಮಝ್‌ ಲಿಜಿಯೇ, ಇಕ್‌ ಆಗ್‌ ಕ ದರಿಯಾ ಹೈ ಔರ್‌ ಡೂಬ್‌ ಕೆ ಜಾನಾ ಹೈ' ಎಂದು ಜಿಗರ್‌ ಮೊರಾದಾಬಾದಿ ಹೇಳುತ್ತಾರೆ. ಪ್ರೇಮ ಎಂದರೆ ತಮಾಷೆಯಲ್ಲ, ಇಷ್ಟು ಅರ್ಥ ಮಾಡಿಕೊಳ್ಳಿ ಅದೊಂದು ಬೆಂಕಿಯ ನದಿ ಮತ್ತು ಅದರಲ್ಲಿ ಮುಳುಗಿಯೇ ಅದನ್ನು ದಾಟಬೇಕು-ಎನ್ನುವುದು ಅದರ ಅರ್ಥ. ನಾವು ಸ್ವಲ್ಪ ಊಟ ಮಾಡಬಹುದು, ಸ್ವಲ್ಪ ತಿಂಡಿ ತಿನ್ನಬಹುದು, ಸ್ವಲ್ಪ ಊರು ಸುತ್ತಬಹುದು, ಸ್ವಲ್ಪ ಸಿನಿಮಾ ನೋಡಿ ಸಹ ಬರಬಹುದು. ಆದರೆ ಪ್ರೇಮ ಎನ್ನುವುದು ಯಾವಾಗಲೂ ಸ್ವಲ್ಪ ಆಗುವುದಿಲ್ಲ. ಒಂದೋ ಇದೆ, ಅಥವಾ ಇಲ್ಲ. ಹಾಗೆ ಮುಳುಗದದ್ದಿರೆ ಬಹುಶಃ ಅದು ಇಶ್ಕ್ ಆಗುವುದಿಲ್ಲ.

ನಾನು ಬರೆದ, ಆರಿಸಿಕೊಂಡ ಕಥೆಗಳಲ್ಲಿ ಭಿನ್ನಭಿನ್ನ ಮನೋಭಾವದ, ಭಿನ್ನಭಿನ್ನ ವಯೋಮಾನದ, ಭಿನ್ನಭಿನ್ನ ಹಿನ್ನೆಲೆಯ ಪ್ರೇಮದ ಕಥೆಗಳಿವೆ. ಇದು ನಾನು ಅರಿತೋ ಅರಿಯದೆಯೋ ಮಾಡಿಕೊಂಡ ಆಯ್ಕೆ. ಏಕೆಂದರೆ ಪ್ರೇಮವನ್ನು ಕೇವಲ ಒಂದು ಚೌಕಟ್ಟಿನಲ್ಲಿ ನಿಲ್ಲಿಸಲು ನಾನು ಸಿದ್ಧಳಿರಲಿಲ್ಲ, ಸಿದ್ಧಳಿಲ್ಲ. ಪ್ರೇಮ ಕೆಲವೊಮ್ಮೆ ಬಿಟ್ಟು ಹೊರಡುವಂತೆ ಮಾಡುತ್ತದೆ, ಮತ್ತೆ ಕೆಲವೊಮ್ಮೆ ತಾಳ್ಮೆಯಲಿ ಕಾಯುವಂತೆ ಮಾಡುತ್ತದೆ. ಕೆಲವೊಮ್ಮೆ ಗೇರುಸೊಪ್ಪೆಯ ಜಲಪಾತದಂತೆ ದಬದಬ ಎಂದು ಸುರಿದರೆ, ಕೆಲವೊಮ್ಮೆ ಶಾಲ್ಮಲೆಯಂತೆ ಗುಪ್ತಗಾಮಿನಿಯಾಗಿರುತ್ತದೆ. ಕೆಲವೊಮ್ಮೆ ಅತ್ಯಂತ ಸ್ವಾರ್ಥಿಯಾಗಿಯೂ, ಮತ್ತೆ ಕೆಲವೊಮ್ಮೆ ಅತ್ಯಂತ ಉದಾರಿಯಾಗಿಯೂ ನಡೆದುಕೊಳ್ಳುತ್ತದೆ. ಕೆಲವೊಮ್ಮೆ ಸಮಾಜ ನಿರ್ಮಿತ ಬೇಲಿಯೊಳಗೆ ಈ ಹೂವು ಅರಳಿದರೆ, ಕೆಲವೊಮ್ಮೆ ಬೇಲಿಯನ್ನು ಭಂಗಿಸಿಯೇ ಬದುಕುತ್ತದೆ. ಯಾವುದಕ್ಕೂ ತರ್ಕ ಇರುವುದಿಲ್ಲ. ಅದೊಂದು ತೀವ್ರ ಭಾವದ ಉತ್ತುಂಗ ಕ್ಷಣ. ಆ ಕ್ಷಣಗಳನ್ನು ಆದಷ್ಟೂ ತೀವ್ರತೆಯಿಂದ ಹಿಡಿಯುವ ಪ್ರಯತ್ನ ಮಾಡಿದ್ದೇನೆ.

ಎಷ್ಟೇ ವಯಸ್ಸಾದರೂ, ಎಷ್ಟೆಲ್ಲಾ ನಗು, ನೋವು, ನಿರಾಸೆ, ಅವಮಾನ, ಅಪಮಾನ, ಹತಾಶೆ ಅನುಭವಿಸಿದ ನಂತರವೂ ಪ್ರೀತಿಯ ವಿಷಯ ಬಂದಾಗ `ಕಿಸೀ ನಜರ್‌ ಕೊ ತೇರಾ ಇಂತ಼ಾರ್‌ ಆಜ್‌ ಭಿ ಹೈ...' ಎಂದು ನಿಮಗೂ ಅನ್ನಿಸುವುದಾದರೆ ಈ ಕಥೆಗಳು ನಿಮಗಾಗಿ. ಯುಗಾದಿಯ ಹಾಗೆ, ಶ್ರಾವಣದ ಹಾಗೆ ಪ್ರೇಮಕ್ಕೂ `ನಿದ್ದೆಗೊಮ್ಮೆ ನಿತ್ಯಮರಣ, ಎದ್ದ ಸಲ ನವೀನ ಜನನ'. ಅದರಲ್ಲೇ ಪ್ರೇಮದ ಗೆಲುವು ಮತ್ತು ಅದರಲೇ ನಮ್ಮ ಮನಸು ಜೀವಂತವಾಗಿರುವುದಕ್ಕೆ ಪುರಾವೆ ಸಹ.

ಈ ಕಥೆಗಳು ನಿಮ್ಮ ನೆನಪುಗಳಿಗೆ ಜೀವ ತುಂಬಲಿ, ನಿಮ್ಮ ಬೊಗಸೆಗೆ ಮತ್ತಷ್ಟು ನೆನಪು ತುಂಬಲಿ, ನಿಮ್ಮ ಮೊಗದಲ್ಲಿ ಮೂಡುವ ನಗು ನಿಮ್ಮ ಕಣ್ಣುಗಳು ಮತ್ತು ಹೃದಯವನ್ನು ಸಹ ಮುಟ್ಟಲಿ.

ಪ್ರೀತಿಯಿಂದ,

-ಎನ್‌ ಸಂಧ್ಯಾರಾಣಿ

MORE FEATURES

ಆತ್ಮಕಥೆ: ವ್ಯಕ್ತಿಯಿಂದ ಬರೆಯಲ್ಪಟ್ಟ ವ್ಯಕ್ತಿಯ ಜೀವನದ ಖಾತೆ

06-10-2024 ಬೆಂಗಳೂರು

“ಆತ್ಮಚರಿತ್ರೆ ಎಂದರೆ ಒಬ್ಬ ವ್ಯಕ್ತಿಯು ಕೆಲವು ನಿಯಮಗಳಿಗೆ ಬದ್ಧನಾಗಿ ತನ್ನ ಸ್ವಂತ ಜೀವನ ಕಥೆಯನ್ನು ಹೇಳುತ್ತಾನೆ...

ಹೆಣ್ಣಿನ ಅಂತರಂಗದ ನೋವನ್ನು ಅರಿಯುವಲ್ಲಿ ಕವಿ ಯಶಸ್ವಿಯಾಗಿದ್ದಾರೆ

06-10-2024 ಬೆಂಗಳೂರು

"ಸಮಾಜ ಈ ಮೈಲಿಗೆಯನ್ನು ಕೇವಲ ಋತುಮತಿ ಆದ ಹೆಣ್ಣಿಗೆ ಮೀಸಲಿಡಲಿಲ್ಲ ಹೆತ್ತ ಮಗುವನ್ನು, ಬಾಣಂತಿಯನ್ನು ಮೈಲಿಗೆಯೆಂದ...

ಕಥೆಗಳು ಮನುಷ್ಯನ ಜೀವನವೆ ಶ್ರೇಷ್ಠವೆಂದು ಧ್ವನಿಸುತ್ತವೆ‌

06-10-2024 ಬೆಂಗಳೂರು

"ಪಾತ್ರಗಳನ್ನು, ಅವುಗಳಿಗೆ ಸಂಬಂಧ ಪಟ್ಟ ಕಥಾನಕಗಳ ಪ್ರತ್ಯಕ್ಷ ಸಾಕ್ಷಿ ಇವರಾದ್ದರಿಂದ ಕಥೆಗಳಿಗೆ ಅಧಿಕೃತತೆ ಬಂದಿದೆ...