ಕವಿಯಾಗಿ ಚಿರಪರಿಚಿತರಿರುವ ಪಾಟೀಲರು ಕಾದಂಬರಿ ರಚನೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ


"ಲೇಖಕರ ಕಲ್ಪನೆಯ ಮೂಸೆಯಲ್ಲಿ ಅವರು ಕಂಡು ಕೇಳಿದ. ಓದಿ ತಿಳಿದ, ನೋಡಿ ಅನುಭವಿಸಿದ್ದು ಸೇರಿದಂತೆ ಹಲವು ರೀತಿಯಲ್ಲಿ ಗ್ರಹಿಸಿದ ಸಂಗತಿಗಳನ್ನು ಕಲ್ಪನೆಯ ಪಾತ್ರೆಯ ಮೂಲಕ ಹಾಯಿಸಿ ಕತೆಯಾಗಿಸಿದ್ದಾರೆ. ಇದು ನಮ್ಮ ಜೊತೆ ಬದುಕಿದ ಜೀವಂತ ವ್ಯಕ್ತಿತ್ವವೊಂದು ಅಸಾಧಾರಣ ಸಾಧನೆ ಮಾಡಿ 'ಕತೆ'ಯಾದ ಸೋಜಿಗ," ಎನ್ನುತ್ತಾರೆ ದೇವು ಪತ್ತಾರ ಅವರು ಬಿ. ಆರ್. ಪೊಲೀಸ್‌ ಪಾಟೀಲ ಅವರ `ಉರಿಯ ಗದ್ದುಗೆ’ ಕೃತಿ ಕುರಿತು ಬರೆದ ಮುನ್ನುಡಿ.

ಕವಿ ಸಿದ್ಧರಾಮರು ಬಯಲ ಬೆಳಕಾದುದು.ತಮ್ಮ ಲಾವಣಿಗಳ ಮೂಲಕ ಜನಪ್ರಿಯರಾಗಿರುವ ಕವಿ, ಲೇಖಕ ಬಾಪುಗೌಡ ಪೋಲಿಸ್‌ಪಾಟೀಲರು ನೂರಾರು ನಾಟಕಗಳ ಮೂಲಕ ರಂಜಿಸಿದವರು. ಅವರಿಗೆ ಗದ್ಯ ಮತ್ತು ಪದ್ಯಗಳೆರಡೂ ನೀರು ಕುಡಿದಷ್ಟೆ ಸರಳ ಮತ್ತು ಸರಾಗ. ಕವಿಯಾಗಿ ಚಿರಪರಿಚಿತರಿರುವ ಪಾಟೀಲರು ಕಾದಂಬರಿ ರಚನೆಯಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಬೆಳಗಾವಿ ನಾಗನೂರು ಮಠದ ಶಿವಬಸವ ಸ್ವಾಮಿಗಳ ಜೀವನ ಆಧಾರಿತ 'ಮಹಾವೃಕ್ಷ' ಎಂಬ ಕಾದಂಬರಿ ಬರೆದಿದ್ದ ಪಾಟೀಲರು ಸದ್ಯ ಗದುಗಿನ ತೋಂಟದ ಸಿದ್ಧಲಿಂಗ ಶ್ರೀಗಳ ಬದುಕು-ಸಾಧನೆ ಆಧರಿಸಿ 'ಉರಿಯ ಗದ್ದುಗೆ' ಕೃತಿಯ ಮೂಲಕ ನಮ್ಮ ಮುಂದಿದ್ದಾರೆ. ನಾಗನೂರು ಶ್ರೀಗಳ ಬದುಕನ್ನು ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿದ್ದ ಪಾಟೀಲರ ಪದಕುಂಚವು ಸಿದ್ಧಲಿಂಗ ಶ್ರೀಗಳ ಕುರಿತ ಬರವಣಿಗೆಯಲ್ಲಿ ಹೃದಯಂಗಮವಾಗಿದೆ. ಪಾಟೀಲರಿಗೆ 'ಗುರುಗಳು' ಹೊರಗಿನವರಲ್ಲ. ಒಳಗಿನವರೇ ಆಗಿರುವುದು ಅಥವಾ ಒಳಗೆ ಮಾಡಿಕೊಂಡದ್ದು ಕಾರಣ ಇರಬಹುದು. ಈ ಕಾದಂಬರಿಯ ತಂತ್ರವೇ ಅದಕ್ಕೆ ಸಾಕ್ಷಿ.

ಪ್ರಮುಖ ಪಾತ್ರವೇ ತನ್ನ ಕತೆ ಹೇಳಿಕೊಳ್ಳುವ ತಂತ್ರವನ್ನು ಪಾಟೀಲರು ಈ ಕಾದಂಬರಿಯಲ್ಲಿ ಬಳಸಿದ್ದಾರೆ. ಆದರೆ, ಕೇವಲ ಆತ್ಮಕಥನಾತ್ಮಕ ತಂತ್ರ ಅಲ್ಲ. ಅಥವಾ ಪ್ರಜ್ಞಾಪ್ರವಾಹ ಮಾದರಿಯ ತಂತ್ರವೂ ಅಲ್ಲ. ಕೇಂದ್ರ ಪಾತ್ರವು ತನ್ನ ಕತೆ ಹೇಳುತ್ತದೆ. ಅದು ತಾನಾಗಿ ಹೇಳುವುದಿಲ್ಲ. ಅದಕ್ಕೊಂದು ಸಮಯ-ಸಂದರ್ಭವನ್ನು ಪಾಟೀಲರು ಸೃಷ್ಟಿಸಿದ್ದಾರೆ. ವಿಜಯದಶಮಿಯ ರಾತ್ರಿ ನಡೆಯುವ ಘಟನೆಗಳ ಮೂಲಕ ಆರಂಭವಾಗುವ ಹೇಳುವ ಕತೆಯ ಕೇಳುಗ ಬೇರಾರೂ ಅಲ್ಲ 'ಕಾಲಪುರುಷ'. ತೋಂಟದ ಸಿದ್ಧಲಿಂಗಶ್ರೀಗಳು ಕಾಲಪುರುಷನೊಂದಿಗೆ ಮುಖಾಮುಖಿ ಆಗುತ್ತ ಸಂವಾದ ನಡೆಸಿದ ಮಾದರಿಯಲ್ಲಿ ಇಡೀ ಕಾದಂಬರಿಯ ಕತೆಯನ್ನು ಹೆಣೆದಿದ್ದಾರೆ. ಲೇಖಕರ ಕಲ್ಪನೆಯ ಮೂಸೆಯಲ್ಲಿ ಅವರು ಕಂಡು ಕೇಳಿದ. ಓದಿ ತಿಳಿದ, ನೋಡಿ ಅನುಭವಿಸಿದ್ದು ಸೇರಿದಂತೆ ಹಲವು ರೀತಿಯಲ್ಲಿ ಗ್ರಹಿಸಿದ ಸಂಗತಿಗಳನ್ನು ಕಲ್ಪನೆಯ ಪಾತ್ರೆಯ ಮೂಲಕ ಹಾಯಿಸಿ ಕತೆಯಾಗಿಸಿದ್ದಾರೆ. ಇದು ನಮ್ಮ ಜೊತೆ ಬದುಕಿದ ಜೀವಂತ ವ್ಯಕ್ತಿತ್ವವೊಂದು ಅಸಾಧಾರಣ ಸಾಧನೆ ಮಾಡಿ 'ಕತೆ'ಯಾದ ಸೋಜಿಗ. ನಮ್ಮ ಮುಂದೆಯೇ ನಡೆದ ಪವಾಡವೊಂದನ್ನು ಅಚ್ಚರಿ ಮೂಡಿಸುವ ಹಾಗೆ ಕಟ್ಟಿದ್ದು ಪಾಟೀಲರ ಲೇಖನಿಯ ವಿಶೇಷ.

ಪಾಟೀಲರು ಕಾದಂಬರಿಯಲ್ಲಿ ಕಟ್ಟಿದ ತೋಂಟದ ಸಿದ್ಧಲಿಂಗ ಶ್ರೀಗಳ ಬದುಕು-ಸಾಧನೆಗಳ ಸೊಬಗು-ಸೊಗಸು ಕಣ್ಮನ ತಣಿಸುವಂತಿದೆ. ವಟುವಾಗಿದ್ದ ಸಿಂದಗಿಯ ಹಿರೇಮಠದ ಸಿದ್ಧರಾಮ ಸಾಗಿ ಬಂದ ಹಾದಿ ಸರಳ-ನೇರವಾದುದೇನಾಗಿರಲಿಲ್ಲ. ಕಾವ್ಯ-ಸಾಹಿತ್ಯ ಮತ್ತು ಜೀವನ ಪ್ರೀತಿಯ ಮೂಲಕ ಕಟ್ಟುವ ಪ್ರಕ್ರಿಯೆಯಲ್ಲಿ ಅಪಾರ ನಂಬುಗೆ ಇಟ್ಟುಕೊಂಡಿದ್ದ ಯುವಜೀವ. ಪೂರ್ವಾಶ್ರಮದ ವಿವರಗಳನ್ನು ಹೇಳುವಾಗ ಯಾವುದೇ ರೀತಿಯ ಭಾವೋದ್ವೇಗಕ್ಕೆ ಒಳಗಾಗುವುದಿಲ್ಲ. ತಣ್ಣನೆಯ ಮಂದ್ರಸ್ವರದಲ್ಲಿ ಸಂಗೀತ ಸಾಗಿದ ಹಾಗೆ, ಅಬ್ಬರಸಿ ಬೊಬ್ಬಿರಿಯದೆ ಶಾಂತ ರೀತಿಯಲ್ಲಿ ನದಿಯೊಂದು ಹರಿದ ಹಾಗೆ ಕಾದಂಬರಿಯ ಓಘ ಮತ್ತು ಓಟವಿದೆ. ಕಾದಂಬರಿ ಬಯಸುವ ತರ್ಕಬದ್ಧ ಸಂಗತಿಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಹಾಗೆಯೇ 'ಜೀವಂತ' ವ್ಯಕ್ತಿತ್ವಕ್ಕೆ 'ಅನ್ಯಾಯ'ವಾಗ ಬಾರದು ಎಂಬ ಎಚ್ಚರವೂ ಪಾಟೀಲರ ಜೊತೆಗೆ ಇದೆ. ಇದರಿಂದಾಗಿ ಅದು 'ಜೀವನ ಚರಿತ್ರೆ'ಯಾಗಿ ಬಿಡುವ ಅಪಾಯದಿಂದ ಪಾರಾಗಿದೆ. ಅದು ಆತ್ಮಕತೆಯೂ ಆಗದಂತಹ ಎಚ್ಚರವನ್ನು ಲೇಖಕರು ವಹಿಸಿದ್ದಾರೆ. ಹಾಗಂತ ಅದು ಕೇವಲ ಸಂದರ್ಶನ ಮಾದರಿಯ ಮಾತುಕತೆಯೂ ಅಲ್ಲ. ಕಟ್ಟುವ ಹಂತದಲ್ಲಿ ಪಾಟೀಲರು ತೆಗೆದುಕೊಂಡ ಸ್ವಾತಂತ್ರ್ಯ ಮತ್ತು ಎಚ್ಚರಗಳು ಕಾದಂಬರಿ ಓದನ್ನು ಸರಾಗಗೊಳಿಸಿವೆ. ಗೊಂದಲಕ್ಕೆ ಎಡೆಯಿಲ್ಲದಂತಿರುವ ಬರವಣಿಗೆಯು ಸಂಕೀರ್ಣವೂ ಆಗಿಲ್ಲ. ಓದುಗ ಆರಂಭಿಸಬೇಕಷ್ಟೆ, ತಾನಾಗಿ ಮುಗಿದುಬಿಡುತ್ತದೆ. ಮುಗಿದಾಗ. 'ಅಯ್ಯೋ ಮುಗಿದೇ ಹೋಯಿತಲ್ಲ. ಅದು ಇಷ್ಟುಬೇಗ' ಎಂದೂ ಅನಿಸುತ್ತದೆ. ಗಳ ಅರಡತಾಗಿbas

ತೋಂಟದ ಸಿದ್ಧಲಿಂಗ ಶ್ರೀಗಳನ್ನು ನಾನು ಮೊದಲ ಬಾರಿಗೆ ನೋಡಿದ್ದು ನಮ್ಮೂರಿನಲ್ಲಿ. ಶಹಾಪುರದ ಶ್ರೀಚರಬಸವೇಶ್ವರ ಪ್ರೌಢಶಾಲೆಯ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ. ನಾನಾಗ ಹತ್ತನೆಯ ತರಗತಿಯಲ್ಲಿದ್ದೆ. ಶಾಲೆಯ ಪಾಠವಲ್ಲದೆ, ನಾನು ಕೇಳಿದ ಮೊದಲ ಉತ್ತಮ-ಅತ್ಯುತ್ತಮ ಭಾಷಣಗಳಲ್ಲಿ ಶ್ರೀಗಳದು ಎರಡನೆಯದು. ಅದಕ್ಕಿಂತ ಮುಂಚೆ ನಾನು ಒಂಬತ್ತನೆ ತರಗತಿಯಲ್ಲಿದ್ದಾಗ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಾ.ಮಾ. ನಾಯಕರು ನಮ್ಮ ಶಾಲೆಗೆ ಬಂದು ಮಾತನಾಡಿದ್ದರು. ಅವರ ಮಾತಿನ ಮೋಡಿಗೆ ಒಳಗಾಗಿದ್ದ ನನಗೆ ಇವರಿಗಿಂತ ಅಸ್ಸಲಿತವಾಗಿ ಕನ್ನಡದಲ್ಲಿ ಮತ್ಯಾರು ಮಾತನಾಡಲಾರರು ಎಂದನಸಿತ್ತು. ಅದಾದ [10:32 am, 12/11/2024] Shilpa: ಕೆಲವೇ ದಿನಗಳ ನಂತರ ಗದುಗಿನ ಶ್ರೀಗಳ ಕತೆಗಳನ್ನು ಒಳಗೊಂಡ ಮಾತು ಕೇಳಿದ್ದು ಅಚ್ಚರಿಗೆ ಕಾರಣವಾಗಿತ್ತು. ಕಾವಿಧಾರಿಗಳ ಬಗ್ಗೆ ಇದ್ದ 'ಗೌರವ' ಬೇರೊಂದು ನೆಲೆಗೆ ತಲುಪಿತ್ತು. ಅವರು ಆಗ ಹೇಳಿದ ಕತೆಯೊಂದು ಈಗಲೂ ನೆನಪಿನಲ್ಲಿದೆ. ಆದರೆ, ಅದನ್ನಿಲ್ಲಿ ಹೇಳುವ ಅಗತ್ಯವಿಲ್ಲ.

ಎರಡನೆ ಬಾರಿಗೆ ತೋಂಟದ ಶ್ರೀಗಳನ್ನು ಕಂಡದ್ದು ಅನಿರೀಕ್ಷಿತವಾಗಿ ಅದೂ ಕಾರಟಗಿಯಲ್ಲಿ. ಬಸವರಾಜಪ್ಪ ಯಾಪಲಪರವಿ ಅವರ ಮನೆಯಲ್ಲಿ ಪೂಜೆ- ಪ್ರಸಾದಕ್ಕೆ ಶ್ರೀಗಳು ಬಂದಿದ್ದರು. ಅದು ಕೇವಲ ಭೇಟಿ ಮಾತ್ರ ಆಗಿರಲಿಲ್ಲ. ಮಾತುಕತೆಯ ಆರಂಭವೂ ಆಯಿತು. ಪ್ರಸಾದದ ಪಂಕ್ತಿಯಲ್ಲಿ ಕುಳಿತಿದ್ದ ನನ್ನೊಂದಿಗೆ, ನನ್ನಂತಹ ಬಾಲಕನೊಂದಿಗೆ ಮಾತನಾಡಿದ್ದು ಬೆರಗು ಮೂಡಿಸಿತು. ಸತ್ಯ-ಪ್ರಾಮಾಣಿಕತೆ ಕುರಿತು ಬಾಲಭಾಷೆಯಲ್ಲಿನ ನನ್ನ ಮಾತುಗಳನ್ನವರು ಕೇಳಿದರು ಮಾತ್ರವಲ್ಲ. ಅದಕ್ಕೆ ಉತ್ತರವನ್ನೂ ನೀಡಿದ್ದರು. ಶಹಾಪುರದ ರಾಜಕಾರಣ, ಬಾಪುಗೌಡ ದರ್ಶನಾಪುರ-ಶಿವಶೇಖರಪ್ಪ ಪಾಟೀಲರ ಕುರಿತು ಮಾತನಾಡಿದ ಅವರು 'ಹಿಂಡುವ ಎಮ್ಮೆ' ಮತ್ತು 'ಹಾಯದ ಹಸು'ವಿನ ನಡುವಿನ ಆಯ್ಕೆಯ ವಿಚಾರ ಹರಿಬಿಟ್ಟಿದ್ದರು. ಆಯ್ಕೆ ಆಗ ಸರಳ ಆಗಿರಲಿಲ್ಲ. ಈಗ ಕೂಡ. ಅದೇ ಹೊತ್ತಿಗೆ 'ತರಂಗ' ವಾರಪತ್ರಿಕೆಯ ಮುಖಪುಟದಲ್ಲಿ ಕಾಣಿಸಿದ ಶ್ರೀಗಳು ನನ್ನ ಪ್ರೀತಿ-ಗೌರವ ಇಮ್ಮಡಿಯಾಗಲು ಕಾರಣವಾದರು. 'ತರಂಗ'ದಲ್ಲಿ ಮುಖಪುಟದ ಲೇಖನ ಬಂದದ್ದು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿದ್ದು 'ಪ್ರಗತಿಪರ ಚಿಂತನೆ' ಹಾಗೂ 'ಪ್ರಾಮಾಣಿಕ ನಡವಳಿಕೆಗೆ' ಸಮಾಜವು ತೋರಿದ ಪ್ರತಿಕ್ರಿಯೆಯಾಗಿತ್ತು. ಸ್ವಾಮೀಜಿ ತಮ್ಮ ಚಿಂತನೆ-ನಡವಳಿಕೆಯ ಸ್ವರೂಪವನ್ನು ಉಳಿಸಿಕೊಂಡರು. ಆದರೆ, ಸಮಾಜ ಮತ್ತು ಅದರ ಚಲನೆಯ ಸ್ವರೂಪ ಬದಲಾಗಿತ್ತು. ಸಮಾಜದ ಹಿಂಚಲನೆ ಹಾಗೂ ಮಾಧ್ಯಮಗಳ ಬಲ-ಬೆಂಬಲಗಳೆರಡೂ ಶ್ರೀಗಳಿಂದ ದೂರ ಸರಿದವು. ಒಂದು ಬಗೆಯ ಕೆಲಸವನ್ನು ಒಂದು ಕಾಲದ ಸಮಾಜ ಮೆಚ್ಚಿದರೆ, ಕಾಲ ಬದಲಾದಂತೆ ಅದೇ ಸಮಾಜವು ತನ್ನ ಬಣ್ಣ ಬದಲಿಸಿ ಕಡೆಗಣಿಸತೊಡಗಿತು. ಪತ್ರಿಕೆಗಳಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತಿದ್ದ ಅವರ ಮಾತುಗಳು ಟಿ.ವಿ. ಸೇರಿದಂತೆ ಮಾಧ್ಯಮಗಳಲ್ಲಿ 'ವಿವಾದಾತ್ಮಕ ಹೇಳಿಕೆ'ಗಳಾದವು.

ಪಿಯುಸಿಯ ದಂಡಯಾತ್ರೆಯ ದಿನಗಳಲ್ಲಿ ಮಠಕ್ಕೆ ಹಲವು ಬಾರಿ ಹೋಗಿದ್ದೆ. ಹತ್ತಿರದಿಂದ ನೋಡುವ, ಮಾತನಾಡುವ ಅವಕಾಶ ದೊರೆತಿದ್ದವು. ತಲೆಮಾಸದ ನನ್ನ ಮಾತುಗಳನ್ನು ಅವರ ಜೊತೆಗೆ ಆಡಿದ ಬಗ್ಗೆ ಈಗ ಸೋಜಿಗವಾಗುತ್ತಿದೆ. ಮೂಗಿನ ನೇರಕ್ಕೆ ಸರಿ ಎನ್ನುವಂತಹ ತಕರಾರಿನವನಾಗಿದ್ದ ನಾನು ಅದನ್ನ ಭೀಡೆಯಿಲ್ಲದೆ ಹೇಳಿಬಿಡುತ್ತಿದ್ದೆ. ಅದನ್ನವರು ಇಷ್ಟಪಡುತ್ತಿದ್ದರು. ಆ ಮಾತುಗಳ ಮಿತಿ-ಕೊರತೆಯನ್ನೊಮ್ಮೆ ನನಗವರು ತೋರಿಸಿದರು. ಕನ್ನಡಿ ಹಿಡಿದರು. ಕಾಣಿಸಿತು. ಆಗ ಅಣ್ಣ ಅಜೇಂದ್ರ ಜೊತೆಗಿದ್ದರು. ಸಿದ್ದು ಕೂಡ. ಮಠಗಳ ಬಗೆಗಿನ ಅಭಿಪ್ರಾಯ ಬದಲಾಗಲು ಗದುಗಿನ ಶ್ರೀಗಳೇ ಕಾರಣ. ಇಂತಹವರೂ ಇರುತ್ತಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡರೆ 'ಇದ್ದಾರಲ್ಲ' ಎಂಬ ಉತ್ತರವೂ ಕಾಣಿಸಿಕೊಳ್ಳುತ್ತಿತ್ತು. ಈ ಅವಧಿಯಲ್ಲಿ ನಾನು ಹಲವಾರು ಬಾರಿ ಮಠಕ್ಕೆ ಭೇಟಿ ನೀಡಿದೆ. ಶ್ರೀಗಳನ್ನು ಕಂಡ ಪ್ರತಿ ಭೇಟಿಯಿಂದಲೂ ಬೆಳೆಯುತ್ತ ಹೋದ ಅನುಭವ ನನ್ನದಾಗಿತ್ತು.

ಅಂತೂ ಇಂತೂ ಪಿಯುಸಿ ಮುಗಿಸಿ ಡಿಗ್ರಿಗೆ ಧಾರವಾಡ ಸೇರಿದ ಮೇಲೆ ಗದುಗಿಗೆ ಭೇಟಿ ನೀಡುವುದು ಹೆಚ್ಚಾಯಿತು. ಒಮ್ಮೆ ತಮ್ಮ ಕಾರಿನಲ್ಲಿಯೇ ನನ್ನನ್ನು ಡಂಬಳಕ್ಕೆ ಕರೆದುಕೊಂಡು ಹೋಗಿದ್ದರು. ಆ ದಿನ ರಾತ್ರಿ ತೋಟಕ್ಕೂ ಹೋಗಿದ್ದೆವು. ಶಿವಾನಂದ ಈ ಪಟ್ಟಣಶೆಟ್ಟರೂ ಜೊತೆಗಿದ್ದರು. .ನನಗೆ ತೋಟದ, ಕೃಷಿಯ ಆರಂಭದ ದಿನಗಳ ಕತೆ ಹೇಳಿದರು. ನಾನು ಕೇಳುವಷ್ಟು ದೊಡ್ಡವನಲ್ಲದಿದ್ದರೂ, ನನ್ನ ಸಹಜ ಪ್ರಶ್ನೆಗಳಿಗೆ ಉತ್ತರಿಸಿದರು. ಎದುರಿಗೆ ಕುಳಿತು ಅತ್ಯುತ್ತಮ ಪ್ರಸಾದ ನೀಡಿದರು. ಕೆಲವೊಮ್ಮೆ ಅವರೇ ನಿಂತು ಬಡಿಸಿದರು.

ಒಮ್ಮೆ ನನ್ನ ತಂದೆ-ತಾಯಿಯನ್ನು ಮಠಕ್ಕೆ ಕರೆದುಕೊಂಡು ಹೋಗಿದ್ದೆ. ನಾನು ಬರವಣಿಗೆ ಆರಂಭಿಸಿದ್ದ ದಿನಗಳವು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅಪ್ಪ-ಅವ್ವನನ್ನು ಉದ್ದೇಶಿಸಿ ಮಾತನಾಡುತ್ತ 'ಸಮಾಜಕ್ಕೆ ಎಂತಹ ಮಗನನ್ನು ಕೊಟ್ಟಿದ್ದೀರಿ' ಎಂದು ಮೆಚ್ಚುಗೆಯ ಮಾತುಗಳನ್ನು ಹೇಳಿದರು. ಅದನ್ನು ಕೇಳಿದ ಅಪ್ಪ-ಅವ್ವನಿಗೆ ಅಪರಿಮಿತ ಆನಂದವಾದರೆ, ನಾನೋ ನಾಚಿಕೆ-ಸಂಕೋಚದಿಂದ ತಲೆ ತಗ್ಗಿಸಿದ್ದೆ. ಅವರ ಮಾತುಗಳು ನನ್ನ ಯೋಗ್ಯತೆ ಮತ್ತು ಅರ್ಹತೆಯನ್ನು ಮೀರಿದ ಮಾತುಗಳಾಗಿದ್ದವು. ಭಾರತ ಸರ್ಕಾರ ನೀಡುವ ಸೌಹಾರ್ದ ಪುರಸ್ಕಾರದ ಮನ್ನಣೆ ಪಡೆದ ನಂತರದ ದಿನಗಳಲ್ಲಿ ಧಾರವಾಡದಲ್ಲಿ ಮನ್ಸೂರ ಕಲಾಭವನದಲ್ಲಿ ನಡೆದ ಸಭೆಯೊಂದರಲ್ಲಿ ಅವರು ಆಡಿದ ಮಾತುಗಳು ಅನಗತ್ಯ ವಿವಾದಕ್ಕೆ ಕಾರಣವಾದವು. ಆ ಸಭೆಯಲ್ಲಿ ನಾನವರ ಮಾತುಗಳನ್ನು ಕೇಳಿದ್ದೆ. 'ಅಕ್ಕ-ತಂಗಿಯರ ಮರ್ಯಾದೆ ಮುಚ್ಚುವ ಬೌಸ್ಥಳಾಗದ ಕೇಸರಿ ಹಸಿರು ಧ್ವಜ'ಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರು ಹೇಳಿದ್ದು, ಪ್ರಸ್ತಾಪಿಸಿದ್ದು ಧಾರ್ಮಿಕ ಲಾಂಛನಗಳಾಗಿರುವ ಝಂಡಾಗಳನ್ನು. ಆದರೆ, ವಿವಾದ ಆದದ್ದು ಸ್ವಾಮೀಜಿ ರಾಷ್ಟ್ರಧ್ವಜವನ್ನು ಕುರಿತು ಲಘುವಾಗಿ ಮಾತನಾಡಿದ್ದಾರೆ ಎಂದಾಗಿತ್ತು. ಅದು ತಳೆಯುತ್ತ ಹೋದ ಸ್ವರೂಪ ನನಗಂತೂ ಅಚ್ಚರಿ ಮತ್ತು ವಿಷಾದ ಮೂಡಿಸಿತು. ಮಾಡದ ತಪ್ಪಿಗೆ, ಆಡದ ಮಾತಿಗೆ ಕ್ಷಮೆ ಕೇಳುವ, ವಿಷಾದ ವ್ಯಕ್ತ ಪಡಿಸುವ ಸ್ಥಿತಿ ಉಂಟಾದದ್ದು, ಸಮಾಜ ಅಂತಹ ಪರಿಸ್ಥಿತಿ ತಂದದ್ದು ನೋಡಿ ಕೆಟ್ಟೆನಿಸದೇ ಇರಲಿಲ್ಲ. ಹೌದು ಇದರಿಂದ ಸ್ವಾಮೀಜಿ ವಿಚಲಿತರಾಗಿದ್ದರು. ಆದರೆ, ತಮ್ಮ ನೆಲೆ-ನಿಲುವು ಬಿಟ್ಟುಕೊಡಲಿಲ್ಲ. ಆದರೆ, ಸಮಾಜದ ಬಹುತೇಕರು ಅವರಿಗೆ ಬೆಂಬಲವಾಗಿ ನಿಲ್ಲುವುದನ್ನು ಕಡಿಮೆ ಮಾಡತೊಡಗಿದ್ದರು. ಧಾರವಾಡದಲ್ಲಿದ್ದ ದಿನಗಳಲ್ಲಿ ಹತ್ತಾರು ಬಾರಿ ಅವರ ಮಾತುಗಳನ್ನ ಕೇಳುವ ಅವಕಾಶ ಒದಗಿ ಬಂದಿತ್ತು. ಅದೊಂದು ಯೋಗಾಯೋಗ.

ಎಂ.ಎ. ಪರೀಕ್ಷೆ ಮುಗಿದು ಫಲಿತಾಂಶ ಬರುವ ಮುನ್ನ ಮತ್ತು ಬಂದ ದಿನಗಳಲ್ಲಿ ಕೆಲಕಾಲ ಕೆಲಸ ಇಲ್ಲದೆ ಹತಾಶನಾಗುವ ಸ್ಥಿತಿ ಬಂದಿತ್ತು. ಕಾಲೇಜಿನಲ್ಲಿ ಪಾರ್ಟೈಮ್ ಲೆಕ್ಚರರ್ ಆಗಿ ಇಂಗ್ಲಿಷ್ ಕಲಿಸುತ್ತಿದ್ದರೂ ಅಲ್ಲಿ ದೊರೆಯುತ್ತಿದ್ದ ಬಿಡಿಗಾಸು ಆತಂಕ ಉಂಟು ಮಾಡಿತ್ತು. ಅದೇ ದಿನಗಳಲ್ಲಿ ನನಗೆ ಪ್ರಿಯರೊ ಆಪ್ತರೂ ಆದ ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ಅವರಲ್ಲಿ ನನ್ನ ಅಸಹಾಯಕತೆ- ಆತಂಕಗಳನ್ನು ವ್ಯಕ್ತ ಪಡಿಸಿದ್ದೆ. ಸಾಧ್ಯವಾದರೆ ಅವರಿಂದ ನೆರವು ದೊರೆಯಲಿ ಎಂಬ ಆಸೆಯೂ ಇತ್ತು. ಕೆಲದಿನಗಳ ನಂತರ ಸರ್ ನನಗೆ ಗದುಗಿಗೆ, ಮಠಕ್ಕೆ ಹೋಗಿ ಸ್ವಾಮೀಜಿಯವರನ್ನು ಭೇಟಿ ಮಾಡಲು ಹೇಳಿದರು. ಮಠದ ಪ್ರಕಟಣೆಗಳ ನೋಡಿಕೊಳ್ಳುವ ಕೆಲಸಕ್ಕೆ ನಾನು ಸೂಕ್ತ ಎಂದು ಸ್ವಾಮೀಜಿ ಮತ್ತು ಸರ್ ಯೋಚಿಸಿದ್ದರು. ನನಗೆ ಅವರಿಬ್ಬರ ಬಗೆಗೂ ಪ್ರೀತಿ-ಗೌರವ. ಮಾತು ಮೀರಲು ಆಗದ ಸ್ಥಿತಿ. ಆದರೆ, ಮಠದ ವ್ಯವಸ್ಥೆಯೊಂದಿಗೆ ಹೊಂದಿಕೊಳ್ಳಲು ನನಗೆ ಸಾಧ್ಯವೇ? ಎಂಬ ಅನುಮಾನ, ಗೊಂದಲ. ಮಠಕ್ಕೆ ಹೋಗುವುದನ್ನು ಮುಂದೂಡುತ್ತ ಹೋದೆ. ಮುಂದಕ್ಕೆ ಹಾಕುವ ನಿಲುವು ತಪ್ಪಿಸಿಕೊಳ್ಳುವ, ಹೋಗದೇ ಇರುವ ನಿರ್ಧಾರವೇ ಆಗಿತ್ತು. ನನ್ನ ನಡವಳಿಕೆ ಅವರಿಬ್ಬರಿಗೂ ಬೇಸರ ಉಂಟು ಮಾಡಿತ್ತು. ನಾನಾಗಿ ಕೇಳಿದ ಸಹಾಯಕ್ಕೆ ನೆರವಿನ ಭರವಸೆ ನೀಡಿದರೂ ಒಪ್ಪಲಾಗದ ಮನಸ್ಥಿತಿ ನನ್ನದಾಗಿತ್ತು. ಈ ಅಸಮಾಧಾನ ಸರಿಪಡಿಸಲಾಗದ ನಾನು 'ಧೂರ್ತ'ನಂತೆ ಕಾಲವೇ ಇದಕ್ಕೆ ಪರಿಹಾರ ನೀಡಲಿ ಎಂದು ಸುಮ್ಮನಾದೆ. ಅಂದರೆ, ಅವರಿಬ್ಬರಿಂದ ಕೆಲಕಾಲ ಅಂದರೆ ನಾಲ್ಕಾರು ವರ್ಷ ಅಂತರ ಕಾಯ್ದುಕೊಂಡೆ. ನಂತರದ ದಿನಗಳಲ್ಲಿ 'ಪ್ರಜಾವಾಣಿ' ಸೇರಿ, ನೆಲೆ ಕಂಡುಕೊಂಡೆ. ಆಮೇಲೆ ನನ್ನ ಮದುವೆಯ ಆಮಂತ್ರಣ ಪತ್ರವನ್ನು ಪೋಸ್ಟಿನಲ್ಲಿ ಕಳಿಸಿದೆ. ಅದಕ್ಕೆ ಅಂಚೆಯ ಮೂಲಕ ಆಶೀರ್ವಾದವೂ ಬಂತು. ನಾಲ್ಕಾರು ವರ್ಷ ಮಠದಿಂದ, ಸ್ವಾಮೀಜಿಯವರಿಂದ ಹಾಗೂ ಕೆಲಕಾಲ ಸಿ.ಪ. ಅವರಿಂದ 'ದೂರ' ಕಾಪಾಡಿಕೊಂಡಿದ್ದೆ. ಅದಕ್ಕೆ ಅವರು ಕಾರಣರಲ್ಲ. ತಪ್ಪು ಮಾಡಿದ ನನಗೇ ಕೀಳರಿಮೆ ದೂರ ಉಳಿಯುವಂತೆ ಮಾಡಿತ್ತು. ಪ್ರಜಾವಾಣಿಯ ಬೀದರ ಜಿಲ್ಲಾ ಪ್ರತಿನಿಧಿಯಾಗಿದ್ದ ದಿನಗಳಲ್ಲಿ ಸ್ವಾಮೀಜಿ ಅವರನ್ನು ನೋಡುವ, ಕೇಳುವ ಪ್ರಸಂಗಗಳು ಹೆಚ್ಚಾದವು. ಅವೆಲ್ಲ ಬಹುತೇಕ ಕಾರ್ಯ ನಿಮಿತ್ತ ಹಾಜರಾತಿಗಳಾಗಿದ್ದವು. ಅವರಿಂದ ದೂರ ಕಾಯ್ದುಕೊಂಡೇ ಇದ್ದೆ. ಭಾಲ್ಕಿ-ಬೀದರ- ಕಲ್ಯಾಣಗಳಲ್ಲಿ ಅವರ ಹತ್ತಾರು ಸಭೆ-ಸಮಾರಂಭಗಳನ್ನು ವರದಿ ಮಾಡುವ ಅವಕಾಶ ನನ್ನದಾಗಿತ್ತು.

2010ರ ಒಂದು ದಿನ ಸ್ವಾಮೀಜಿಯವರ ಆಪ್ತರಿಂದ ನನಗೊಂದು ಕರೆ ಬಂತು. 'ಅಜ್ಜಾರು ನಿಮಗೆ ಬರಲಿಕ್ಕೆ ಹೇಳ್ಯಾರ' ಎಂಬ ಸಂದೇಶ. ಬೆಳಗಿನ ಪೂಜೆ-ಪ್ರಸಾದದ ನಂತರದ ಭೇಟಿಗೆ ಸಮಯ ನಿಗದಿ ಮಾಡಿದ್ದರು. ಹತ್ತುವರೆ ಹನ್ನೊಂದು ಗಂಟೆಯ ಸುಮಾರಿಗೆ ಅವರು ಉಳಿದುಕೊಂಡಿದ್ದ ಮನೆಗೆ ಹೋದೆ. ಅಲ್ಲಿ ಆಗ ತಾನೇ ಪೂಜೆ ಮುಗಿಸಿ ಗುರುಗಳು ಕುಳಿತಿದ್ದರು. ಅವರ ಜೊತೆಗೆ ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರೂ ಇದ್ದರು. ಯಾಕೆ ಕರೆದಿರಬಹುದು? ಏನು ವಿಚಾರಣೆ? ಎಂಬ ಭಯ-ಆತಂಕದಲ್ಲಿದೆ. ಹಳೆಯ ವಿಚಾರ ಬಂದರೆ ಸಮರ್ಥಿಸಿಕೊಳ್ಳುವುದು ಹೇಗೆ? ಎಂಬ ಗೊಂದಲವ ಅದರಲ್ಲಿ ಸೇರಿತ್ತು. ಇಬ್ಬರೂ ಸ್ವಾಮೀಜಿಯವರ ಎದುರಿನ ಕುರ್ಚಿಯಲ್ಲಿ ನನಗೆ ಕುಳಿತುಕೊಳ್ಳುವ ಅವಕಾಶ. ಒಂದೆರಡು ಕ್ಷಣದಲ್ಲಿಯೇ ನನ್ನ ಆತಂಕ-ಭಯಗಳನ್ನು ಸ್ವಾಮೀಜಿ ದೂರ ಮಾಡಿದ್ದರು. ಅಲ್ಲಿಂದ ನಾಲೈದು ಗಂಟೆಗಳ ಕಾಲ ನಾನವರ ಎದುರಿಗೇ ಕುಳಿತಿದ್ದೆ. ತೋಂಟದ ಶ್ರೀಗಳ ಹತ್ತಾರು ಪ್ರಶ್ನೆಗಳಿಗೆ ಉತ್ತರ ಹೇಳುವ ಸರದಿ ನನ್ನದಾಗಿತ್ತು. ರಾಜಧಾನಿ ಬೀದರನಲ್ಲಿ ಪ್ರಧಾನಿಯಾಗಿದ್ದ ಮಹಮೂದ್ ಗಾವಾನನ ಜನಪರ ಕೆಲಸ ಕಾರ್ಯಗಳ ಬಗ್ಗೆ ಕುತೂಹಲ ಆಸಕ್ತಿಯಿಂದ ಕೇಳುತ್ತ ಹೋದರು. ಉಮೇದಿನಲ್ಲಿದ್ದ ನಾನು ಕತೆಗಳನ್ನು ಹೇಳುತ್ತಲೇ ಹೋದೆ. ಬೆತ್ತದ ಮೇಲೆ ಎರಡೂ ಕೈಗಳನ್ನಿಟ್ಟು ಅದರ ಮೇಲೆ ತಮ್ಮ ಗದ್ದವನ್ನಿಟ್ಟುಕೊಂಡು ಕೇಳಿಸಿಕೊಂಡರು. ಅದೊಂದು ಸುದೀರ್ಘ ಮಾತುಕತೆ. ಮಾತುಕತೆಯ ಅವಧಿಯಲ್ಲಿ ಒಂದೇ ಒಂದು ಬಾರಿ ಮಾತ್ರ ಪಟ್ಟದ್ದೇವರ ಕಡೆ ನೋಡಿ 'ಇವೆಲ್ಲ ಗೊತ್ತಿರಬೇಕು, ಸರಿಯಾಗಿ ಕೇಳಿಸಿಕೊಳ್ಳಿರಿ' ಎಂದರು. ಆಗ, ಮಾತು ಗಾವಾನ್ನಿಂದ ಹೊರಟು ಜನಪರ ಆಡಳಿತ ಹೇಗೆ ಜನರ ಬದುಕನ್ನು ಹಸನುಗೊಳಿಸುತ್ತದೆ ಎಂಬುದರ ಕಡೆಗೆ ತಿರುಗಿತ್ತು. ಬೀದರಿನ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಕೈಕೊಂಡ ಕ್ರಮಗಳ ಬಗೆಗೂ ಕೇಳಿ ತಿಳಿದುಕೊಂಡರು. ಅಂದರೆ, ಅವರಿಗೆ ಆ ವಿಷಯ ಗೊತ್ತಿದ್ದಿರಲಿಲ್ಲ ಎಂದಲ್ಲ. ಅದಕ್ಕೆ ನನ್ನ ಪ್ರತಿಕ್ರಿಯೆ ಏನು? ನೋಟ ಕ್ರಮ ಯಾವುದು? ನನ್ನ ನಿಲುವು-ಅಭಿಪ್ರಾಯ ಏನು ಎಂಬುದಷ್ಟೇ ಅವರ ಆಸಕ್ತಿ ಆಗಿತ್ತು. ಹರ್ಷ ಗುಪ್ತ ರಸ್ತೆಯನ್ನು ಅಗಲಿಸಿದ್ದು, ಮುಸ್ಲಿಮರು ಹೆಚ್ಚಾಗಿ ವಾಸಿಸುವ ಹಳೆಯ ಬೀದರ ಮತ್ತು ಹಿಂದುಗಳು ಹೆಚ್ಚಾಗಿರುವ ಹೊಸ ಬೀದರ ನಡುವಿನ ಕಂದಕ ಇಲ್ಲವಾಗಿಸಿದ್ದನ್ನು ಪ್ರಸ್ತಾಪಿಸಿದಾಗ ಅವರ ಕಣ್ಣಲ್ಲಿ ಒಂದು ಬಗೆಯ ಬೆಳಕು ಕಾಣಿಸಿತು. ಅದು ನನಗೆ ಮಾತ್ರ ಕಾಣಿಸಿದ್ದಾ?

ಮರುದಿನದ ಸಭೆಯಲ್ಲಿ ಮಹಮೂದ್ ಗಾವಾನ್ ಬಗ್ಗೆ ಮಾತನಾಡಿದರು. ಅರ್ಧ-ಮುಕ್ಕಾಲು ಗಂಟೆಯ ಮಾತುಗಳಲ್ಲಿ ಬಹುತೇಕ ಅವಧಿಯನ್ನು ಗಾವಾನ್ ಗಾಗಿ ಮೀಸಲಿಟ್ಟಿದ್ದರು. ನನ್ನ ಬಗ್ಗೆಯೂ ಪ್ರಸ್ತಾಪಿಸಿದರು. ವಿವರ ನಾನು ಹೇಳಿದ್ದು- ಹಂಚಿಕೊಂಡದ್ದು ಎಂದೂ ಹೇಳಿದರು. ಅದರೆ ಅದು ಅರೆಸತ್ಯವಾಗಿತ್ತು. ನಾನು ಹೇಳಿದ್ದರ ಹತ್ತುಪಟ್ಟು ಮಾಹಿತಿ ಅವರ ಬಳಿ ಇತ್ತು. ಅದರ ಶ್ರೇಯ ನನಗೆ ನೀಡಿದರು. ಇದಲ್ಲದೆ ಇಂತಹ ತಾಯ್ತನದ ಅನುಭವ ನೀಡಿದ ಹಲವು ಘಟನೆಗಳು ನನ್ನೊಂದಿಗೆ ನಡೆದಿವೆ. ಅದನ್ನು ಯೋಗಾಯೋಗ ಅನ್ನಬೇಕು. ಅಷ್ಟೆ. ಪ್ರಭುತ್ವದ ಜೊತೆಗಿನ ಸಂಬಂಧದ ಬಗ್ಗೆ ನನಗೆ ಕೆಲವು ಆಕ್ಷೇಪಗಳಿದ್ದವು. ಪೋಸ್ಕೊ ವಿರುದ್ಧ ಅವರು ನಡೆಸಿದ ಹೋರಾಟ ನನಗೆ ಬಹಳ ಇಷ್ಟವಾಗಿತ್ತು. ಅದು ಅವರ ಬಗೆಗಿನ ನನ್ನ ಗೌರವ ಹೆಚ್ಚಿಸಲು ಕಾರಣವಾದರೆ ರಾಮುಲು ಹಾಗೂ ಗಣಿಧಣಿಗಳ ಬಗೆಗಿನ ಮೃದುಧೋರಣೆ ಹಾಗೂ ಮೆಚ್ಚುಗೆಯ ಮಾತುಗಳು ಕಿರಿಕಿರಿ ಉಂಟು ಮಾಡದೇ ಇರುತ್ತಿರಲಿಲ್ಲ. ಅದಕ್ಕೆ ಅವರದೇ ಆದ ಕಾರಣಗಳು ಇದ್ದಿರಬಹುದು. ವ್ಯವಸ್ಥೆಯ ಭಾಗ ಆಗದೇ ಇರುವುದು, ಪ್ರಭುತ್ವದ ಜೊತೆಗಿನ ಮುಖಾಮುಖಿ ನಿರೀಕ್ಷಿಸಿದ್ದ ನನಗೆ ಅಥವಾ ನನ್ನಂತವರಿಗೆ ಅವರ 'ಮಜಬೂರಿ” ಏನಿದ್ದರಬಹುದು ಎಂದು ಅರಿವಾಗಲೇ ಇಲ್ಲ. ಆಗುವುದು ಸಾಧ್ಯವೂ ಇಲ್ಲ. ನಮಗೆ ಕಾಣುವುದು ಅಥವಾ ಕಂಡದ್ದು ಒಂದು ಪಾರ್ಶ್ವನೋಟ. - ಧಾರ್ಮಿಕ ಸಾಮರಸ್ಯದ ಬಗ್ಗೆಅವರ ನಿಲುವು-ನೋಟ ಸ್ಪಷ್ಟವೂ ಖಚಿತವೂ ಆಗಿತ್ತು. ಇಲ್ಲದಿದ್ದರೆ ಹಾಲಿ ಸಂಸದರಿಗೆ 'ಪಡ್ಡೆ ಹುಡುಗರ ಹಾಗೆ ಮಾತನಾಡಬೇಡಿ' ಎಂದು ಹೇಳುವುದು ಸಾಧ್ಯವಿರಲಿಲ್ಲ. ಸಂಸದರ ಪಕ್ಷವೇ ಮುಂದೆ ಕರ್ನಾಟಕದಲ್ಲಿಯೂ 'ಅಧಿಕಾರ'ಕ್ಕೆ ಬಂತು. ಜಾತಿ-ಧರ್ಮಗಳು ಮುಖ್ಯವಾಗುವ, ವೈಚಾರಿಕತೆ, ಸತ್ಯ-ಪ್ರಾಮಾಣಿಕತೆಗಳು ಹಿಂದೆ ಸರಿಯುವ ಹಿಮ್ಮುಖ ಚಲನೆಯು ಆರಂಭವಾಗಿತ್ತು. ಕರ್ನಾಟಕದಲ್ಲಿನ ಈ ಬದಲಾವಣೆಯನ್ನ ಅವರು ನಿರೀಕ್ಷಿಸಿರಲಿಲ್ಲ. ಅದು ಆಘಾತವನ್ನುಂಟು ಮಾಡಿತ್ತು. ಸಂಸದರು ಪತ್ರಿಕೆಯೊಂದರ ಚುಕ್ಕಾಣಿ ಹಿಡಿದು ಅದನ್ನ ಸ್ವಾಮೀಜಿಯವರನ್ನು ಹಣಿಯಲು ಬಳಸಿದ್ದು, ಕರ್ನಾಟಕದ ಪತ್ರಿಕೋದ್ಯಮದ ಮಾತ್ರವಲ್ಲ, ಕರ್ನಾಟಕದ ಸಾಂಸ್ಕೃತಿಕ ಅಧಃಪತನದ ದ್ಯೋತಕವೂ ಆಗಿತ್ತು. 'ಉರಿಯ ಗದ್ದುಗೆ'ಯ ಮೇಲೆ ಕುಳಿತ ಶ್ರೀಗಳು ತಮ್ಮ ಅಸಾಧಾರಣ, ಅನನ್ಯ ಮತ್ತು ಅಮೂಲ್ಯ ಕೆಲಸಗಳ ಮೂಲಕ ಹೊಸ ದಾರಿಯನ್ನು ತೆರೆದಿದ್ದರು. ಅಲ್ಲಿನ ಬೆಳಕು ಕಾಣಲು ಅಗತ್ಯವಿರುವ ಕಣ್ಣುಗಳ ಸಂಖ್ಯೆ ಹೆಚ್ಚಿಸಲು ಅವರು ಅವಿರತವಾಗಿ ಶ್ರಮಿಸಿದರು. ಆದರೆ, ಕಾಲದ ಓಟ ಮತ್ತು ಅದರ ಚಲನೆಯ ಸ್ವರೂಪ ಹಿಮ್ಮೊಗವಾಗಿತ್ತು. ಕತ್ತಲೆಯ ಕಡೆಗಿನ ಚಲನೆಯ ದಿಕ್ಕು ಬದಲಿಸುವುದು ಅವರಿಗೂ ಮೀರಿದೆ ಬದಲಾವಣೆ–ಬೆಳವಣಿಗೆಯಾಗಿತ್ತು. ಅವರ ಹತಾಶೆ, ಆತಂಕ, ದುಮ್ಮಾನಗಳು ನೇರವಾಗಿ ಅಲ್ಲದಿದ್ದರೂ ನನಗೆ ಅಥವಾ ನನ್ನಂತವರ ಅರಿವಿಗೆ ಬರುತ್ತಿದ್ದವು ಅವರು 'ಬಯಲಾದ' ದಿನದ ಪತ್ರಿಕೆಗಳನ್ನು ನೋಡಿದರೆ, ಮಾಧ್ಯಮಗಳು ನೀಡಿದ ವರದಿಗಳನ್ನು ಗಮನಿಸಿದರೆ, ಸರ್ಕಾರ ತೋರಿದ ಪ್ರತಿಕ್ರಿಯೆಯನ್ನು ಗಮನಿಸಿದರೆ ಚಿತ್ರ ಸ್ಪಷ್ಟವಾಗುತ್ತದೆ. ಅವು ಸ್ವಾಮೀಜಿಗೆ 'ಅವಮಾನ' ಮಾಡಿದಂತೆ ಸಂಭ್ರಮಿಸಿದವು. ಅವರು ಅದನ್ನು ಮೀರಿ ನಿಂತ ಚೇತನ ಆಗಿದ್ದರು. ಅದನ್ನು ಅರಿಯುವುದು ಸಮಾಜಕ್ಕೆ ಸಾಧ್ಯವಾಗಲಿಲ್ಲ. ಸಮಾಜದ ಆಲೋಚನ ಕ್ರಮದ ಏರಿಳಿತ ಹಾಗೂ ವೈಚಾರಿಕತೆ-ಪ್ರಾಮಾಣಿಕತೆಗಳ ಕುರಿತ ಸಮಾಜದಲ್ಲಿ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದರು ಮಾತ್ರವಲ್ಲ ಸಾಕ್ಷಿಪ್ರಜ್ಞೆಯೂ ಆಗಿದ್ದರು. ಪೊಲೀಸ್ಟಾಟೀಲರ ಈ ಕೃತಿ ಅವರೇ ಹೇಳಿಕೊಂಡಿರುವ ಹಾಗೆ 'ಕಾದಂಬರಿ'. ಅದರಲ್ಲೂ ಅದು 'ಐತಿಹಾಸಿಕ ಕಾದಂಬರಿ'. ಇತಿಹಾಸದ ಘಟನೆಗಳನ್ನು ಆಧರಿಸಿ ರಚಿಸಿದ ಕೃತಿ. ಕಾದಂಬರಿಯಲ್ಲಿ ಕಲ್ಪಕತೆಗೆ ಹೆಚ್ಚಿನ ಪ್ರಾಧಾನ್ಯ. ಲೇಖಕರ ಲಹರಿ ಮನೋಭಿಲಾಷೆಗಳಿಗೇ ಆದ್ಯತೆ. ಆದರೆ, ಗದುಗಿನ ಗುರುಗಳನ್ನು ಕುರಿತ ಈ ಬರಹ ಕೇವಲ 'ಕಾದಂಬರಿ' ಎಂಬ ಸಾಹಿತ್ಯ ಪ್ರಕಾರಕ್ಕೆ ಸೇರಿದ್ದಲ್ಲ. ಇದರಲ್ಲಿ ಜೀವನ ಚರಿತ್ರೆಯ ಎಳೆಗಳೂ ಇವೆ. ಸ್ವತಃ ಗುರುಗಳೇ ತಮ್ಮ ಕತೆ ಹೇಳಿಕೊಳ್ಳುವ 'ತಂತ್ರ' ಬಳಸಿರುವುದರಿಂದ ಇದೊಂದು ಆತ್ಮಕತೆಯಲ್ಲದ, ಆತ್ಮಕತೆಯೂ ಹೌದು. ಹೀಗೆ ಅಧ್ಯಯನಕ್ಕೆ ಅನುವಾಗುವಂತೆ ಮಾಡಿಕೊಂಡ ಪ್ರಕಾರ ನಿಷ್ಠೆಯ ಚೌಕಟ್ಟುಗಳನ್ನು ಮೀರಿ ಕೃತಿ ಬೆಳೆಯುತ್ತ ಹೋಗುತ್ತದೆ.

ವರ್ತಮಾನದ ಅಂದರೆ ವ್ಯಕ್ತಿಯ ಸಮಕಾಲೀನರು ಬದುಕಿದ್ದ ಅವಧಿಯಲ್ಲಿಯೇ ಸೃಜನಶೀಲ ಕೃತಿ ರಚಿಸುವ ಸವಾಲಿಗೆ ಪಾಟೀಲರು ಎದುರಾಗಿದ್ದಾರೆ. ಹೌದು, ನಿಜವಾಗಿಯೂ ಸವಾಲಿನ ಸಂಗತಿಯೇ. ಅಂತಹ ಸವಾಲಿಗೆ ಮುಖಾಮುಖಿಯಾಗಿ ನಿಂತು ಕಟ್ಟಿದ ಆಕೃತಿಯು ತನ್ನ ಸೊಗಸುಗಾರಿಕೆಯಿಂದ ಗಮನ ಸೆಳೆಯುತ್ತದೆ. ನೀರಸ ವಿವರಗಳ 'ಕಂತೆ'ಯಾಗಬಹುದಾಗಿದ್ದ ಮಾಹಿತಿಯನ್ನು ತಮ್ಮ ಕಸುಬುಗಾರಿಕೆಯ ಕಥನವಾಗಿಸಿ ಸೈ ಎನ್ನಿಸಿಕೊಂಡಿದ್ದಾರೆ. ದುಬಾಕೆ

ಶ್ರೀಗಳು ಬದುಕಿದ್ದು 69 ವರ್ಷ. ಅಷ್ಟೇ ಸಂಖ್ಯೆಯ ಅಧ್ಯಾಯ ಅಥವಾ ಘಟಕಗಳಲ್ಲಿ ಚಿತ್ರ ಕಟ್ಟಿಕೊಟ್ಟಿದ್ದಾರೆ. ವಾಚ್ಯ-ಸೂಚ್ಯಗಳೆರಡನ್ನೂ ಬಳಸಿಕೊಂಡಿರುವುದು ಈ ಪುಸ್ತಕದ ವಿಶೇಷ ವಾಚ್ಯವಾಗುತ್ತಿದೆ ಎಂದು ಅನ್ನಿಸುವ ಹೊತ್ತಿಗೇ ಕಾಣಿಸಿಕೊಳ್ಳುವ ಕಾವ್ಯ, ಕಾವ್ಯಾತ್ಮಕ ಸಾಲು ಮತ್ತು ಸೂಚ್ಯವಾಗಿ ಕಟ್ಟಿ ಕೊಡುವ ಕ್ರಮ ಲೇಖಕರ ಕಾಳಜಿಗೆ ದ್ಯೋತಕವಾಗಿವೆ. ಘನ ಗಂಭೀರ ಚರ್ಚೆಗಳ ವಿವರಗಳು ಕೂಡ ಹೃದ್ಯವಾಗುವಂತೆ ಮಾಡಿದ್ದು ಪಾಟೀಲರ ಹೆಚ್ಚುಗಾರಿಕೆ. ಇಡೀ ಕಾದಂಬರಿಯಲ್ಲಿ ಒಂದೆರಡು ಪ್ರಸಂಗಳು ಕಣ್ಣಾಲಿ ತುಂಬಿ ಬರುವಂತಿವೆ. ಅವು ಕಾದಂಬರಿಯ ರಸಘಟ್ಟಿಗಳೆಂದೇ ಹೇಳಬೇಕು.

ಈ ಕಾದಂಬರಿಯ 'ನಾಯಕ' ಗದುಗಿನ ತೋಂಟದ ಸಿದ್ದಲಿಂಗ ಶ್ರೀಗಳು. ಕಾದಂಬರಿ ಪ್ರಕಾರವೂ ಸೇರಿದಂತೆ ನಾಟಕ-ಮಹಾಕಾವ್ಯಗಳು 'ಪ್ರತಿನಾಯಕ' ಅಥವಾ 'ಖಳನಾಯಕ'ರನ್ನು ಬಯಸುತ್ತವೆ. ಖಳರನ್ನು ಮೆಟ್ಟಿ, ಮಟ್ಟಹಾಕುವ ಮೂಲಕವೇ ನಾಯಕನ ಹೆಗ್ಗಳಿಕೆ ದಾಖಲಾಗುತ್ತದೆ. ಸಾಹಿತ್ಯ ಕೃತಿಗಳಲ್ಲಿ ಇದೊಂದು ಸೆಟ್ ಪ್ಯಾಟರ್ನ್. ಸಾಮಾನ್ಯವಾಗಿ ಕಂಡು ಬರುವ ಈ ಅಂಶ ಪಾಟೀಲರ ಈ ಕಾದಂಬರಿಯಲ್ಲಿಲ್ಲ. ಅದಕ್ಕೆ ವ್ಯತಿರಿಕ್ತವಾಗಿದೆ. ಈ ಕಾದಂಬರಿಯಲ್ಲಿ ಪ್ರತಿನಾಯಕ ಅಥವಾ ಖಳನಾಯಕ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಇರುವ ಒಂದೆರಡು ಪಾತ್ರಗಳೂ (ವ್ಯಕ್ತಿಗಳು) ಪಾಟೀಲರ ಒಳ್ಳೆಯತನದ ಬೆಂಕಿಯಲ್ಲಿ ಬೆಂದು ದ್ರವವಾಗಿ ಬಿಡುತ್ತವೆ. ಖಳನಾಗುವ ಗುಣದಿಂದ ಆ ಪಾತ್ರಗಳನ್ನು ಬಿಡುಗಡೆ ಮಾಡಿದ್ದು 'ಗೌಡ'ರ ದೊಡ್ಡತನ.

ಸ್ವಾಮೀಜಿಯರನ್ನು ಕುರಿತು ಹೇಳಬೇಕಾದದ್ದನ್ನೆಲ್ಲ ಈ ಕಾದಂಬರಿಯಲ್ಲಿ ಹೇಳಿದ್ದಾರೆ. ಅವರ ಸುತ್ತಲಿನ ಶಕ್ತಿಗಳು, ಕೇಂದ್ರಗಳು ಅವುಗಳು ಉಂಟುಮಾಡಿದ ಸಮಸ್ಯೆಗಳು, ಅದನ್ನು ಬಗೆಹರಿಸಲು ನಡೆಸಿದ ಹೆಣಗಾಟ ಹೀಗೆ ಹೇಳಬಾರದ್ದನ್ನು,

ಹೇಳಲಾಗದ್ದನ್ನು ಉದ್ದೇಶಪೂರ್ವಕವಾಗಿ ಕೈ ಬಿಟ್ಟಿದ್ದಾರೆ. ಇಂತಹ ಸಂದರ್ಭಗಳಲ್ಲಿ ಪಾಟೀಲರ ಜಾಣನಡೆಯೂ ಗಮನಕ್ಕೆ ಬಾರದೇ ಇರಲಾರದು. ಸಾಹಿತ್ಯ ಕೃತಿಯೂ ಸೇರಿದಂತೆ ಬದುಕು-ಬರವಣಿಗೆ ಒಂದು ಹಂತದ ವರೆಗಿನ ಹೊಂದಾಣಿಕೆ. ಪಾಟೀಲರ ಹದವರಿತ ನಿಲುವು ಮತ್ತು ಅದನ್ನು ದಾಖಲಿಸುವ ರೀತಿಯಿಂದಾಗಿ ಓದು ಸಹ್ಯವಾಗುತ್ತ ಹೋಗುತ್ತದೆ.

ಹೇಳಲಾಗದ, ಹೇಳಬಾರದ ಸಂಗತಿಗಳಿಗಾಗಿ ಕವಿತೆಯ ಮೊರೆ ಹೋಗುತ್ತಾರೆ. ಇಡೀ ಕಾದಂಬರಿಯ ಆಶಯವನ್ನು ಹೇಳುವ ಕಾದಂಬರಿಯ ಕೊನೆಯಲ್ಲಿ ಬರುವ ಆರು ಚೌಕಗಳು ಕಾದಂಬರಿಯು ವಾಚ್ಯದ ಕಡೆಗೆ ಸಾಗದಂತೆ ಮಾಡಿವೆ. ಕಾದಂಬರಿಯಲ್ಲಿ ದಾಖಲಾದ ವಿವರಗಳನ್ನು ಮತ್ತೊಮ್ಮೆ ಇಲ್ಲಿ ಬರೆದು ರಸಾಭಾಸ ಉಂಟು ಮಾಡಲಾರೆ. ಒಂದು ವರ್ತಮಾನ ನಿನ್ನೆಯಾದ ಚರಿತ್ರೆಯನ್ನು ತಣ್ಣನೆಯ ದನಿಯಲ್ಲಿ ದಾಖಲಿಸಿರುವ ಈ ಕಥನದ ಓದು ನಮ್ಮ ಹೃದಯ ಮತ್ತು ಮೆದುಳಿಗೆ ಆಹಾರವಾಗುವಂತಿದೆ. ಬರೆಯುವುದು ತುಂಬಾ ಇದೆ. ಆದರೆ, ಈಗ ಇಷ್ಟು ಸಾಕು.


- ದೇವು ಪತ್ತಾರ ಬೆಂಗಳೂರು

 

MORE FEATURES

ಮಕ್ಕಳಿಗಾಗಿ ಮೊತ್ತೆಮ್ಮೆ ಹೇಳಿದ ‘ವಿಕ್ರಮ ಬೇತಾಳ ಕಥೆಗಳು’; ಸು. ರುದ್ರಮೂರ್ತಿ ಶಾಸ್ತ್ರಿ

14-11-2024 ಬೆಂಗಳೂರು

"ಒಂದು ದಿನ ಆ ತಪಸ್ವಿ ಎಂದಿನಂತೆ ರಾಜನಿಗೆ ಹಣ್ಣನ್ನು ಅರ್ಪಿಸಿ ಹೋದಾಗ, ಅಲ್ಲಿಗೆ ಆಕಸ್ಮಿಕವಾಗಿ ಬಂದ ಒಂದು ಸಾಕಿದ ...

ಮಕ್ಕಳ ಭವಿಷ್ಯಕ್ಕೆ ಹೊಸ ಹೊಳಪು ದೊರೆಯಲಿ     

14-11-2024 ಬೆಂಗಳೂರು

"ಎಲ್ಲರೂ ಹೇಳುವಂತೆ ಮಕ್ಕಳ ಮನಸ್ಸು ಹೂವಿನಂತೆ ಮಧುರ ಮತ್ತು ನಿಷ್ಕಲ್ಮಶವಾದದ್ದು. ಇದಕ್ಕೆ ಒಂದಿಷ್ಟೂ ಮುಕ್ಕಾಗದಂತೆ...

ನಿರ್ಲಿಪ್ತ ಮನೋಭಾವದಿಂದ ಸಾಗಿದ ಏಕಾಂಗಿ ವೀರರ ರೋಚಕ ಕತೆಯಿದು

13-11-2024 ಬೆಂಗಳೂರು

"ಇದ್ದ ಉತ್ತಮ ನೌಕರಿಯ ಹಂಗ ತೊರೆದು ಶಿಕ್ಷಣ ಸಂಸ್ಥೆ ಆರಂಭಿಸಿದಾಗ, ತಮ್ಮವರೇ ತೊಡಕಾದಾಗ ಆದ ನೋವು, ಹಿಂಸೆ ಅಷ್ಟಿಷ್...