ಕವಿಗಿಂತ ಕವಿತೆಗಳನ್ನು ಪ್ರೀತಿಸುವವರು ಹೆಚ್ಚಾಗಬೇಕು; ಪ್ರಕಾಶ ಖಾಡೆ

Date: 07-10-2024

Location: ಬೆಂಗಳೂರು


ಮುಧೋಳ: `ಕವಿಗಳಿಗಿಂತ ಕವಿತೆಗಳು ವಿಜೃಂಭಿಸುವ ಕಾಲ ಬರಬೇಕಾಗಿದೆ, ಪ್ರಶಸ್ತಿಗಳು, ಗೌರವ, ಮಾನ ಸನ್ಮಾನಗಳು ಇವತ್ತು ಕವಿಗಳಿಗೆ ಜಾಸ್ತಿಯಾಗಿವೆ, ಆದರೆ ಕವಿತೆಗಳನ್ನು ಪ್ರೀತಿಸುವವರು, ಗಂಭೀರವಾಗಿ ಓದುವವರು ಸಿಗುತ್ತಿಲ್ಲ,' ಎಂದು ಬಾಗಲಕೋಟೆ ಕವಿ ಡಾ.ಪ್ರಕಾಶ ಖಾಡೆ ಹೇಳಿದರು.

ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ರನ್ನಭೂಮಿ ಪ್ರಕಾಶನ ಮತ್ತು ಕ.ಸಾ.ಪ ಮುಧೋಳ ಸಹಯೋಗದಲ್ಲಿ ಶ್ರೀಮತಿ ನೇತ್ರಾವತಿ ಮತ್ತು ಸುರೇಶ ರಾಜಮಾನೆಯವರ ಸುಪುತ್ರಿ ಕು.ಅಕ್ಷರಳ ಪ್ರಥಮ ಹುಟ್ಟುಹಬ್ಬದ ಪ್ರಯುಕ್ತ ಕವಿ ಸುರೇಶ ಎಲ್.ರಾಜಮಾನೆಯವರ ರಾಜಿಯಾಗದ ರಕ್ತದ ಕಣ ಮತ್ತು ಅಕ್ಷರದರಸಿ ಎಂಬ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

'ಕವಿ ಸುರೇಶ ರಾಜಮಾನೆ ಅವರ ಕವಿತೆಗಳು ಸಮಕಾಲೀನ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಸಾಮಾಜೀಕರಣಗೊಂಡ ಪ್ರಖರ ಚಿಂತನೆಯ ಮೊತ್ತ ಗಳಾಗಿವೆ, ಕನಸುಗಾರರಿಂದ ಮಾತ್ರ ಕವಿತೆ ಮತ್ತು ಕವಿತ್ವ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ. ಅಂತಹ ಕನಸುಗಾರರಲ್ಲಿ ರನ್ನಬೆಳಗಲಿಯ ಯುವ ಕವಿ ಸುರೇಶ ರಾಜಮಾನೆಯವರು ಮುಂಚೂಣಿಯ ಸ್ಥಾನದಲ್ಲಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಘಟ್ಟಗಳೂ ಈ ತರಹದ ಒಂದು ವಿಸ್ತಾರತೆಯನ್ನು ಪಡೆದುಕೊಳ್ಳುತ್ತಲೇ ಇವೆ. ಕವಿಯ ಬರಹ ಕಾವ್ಯವಾಗಿ ಬದಲಾದಾಗ ಅದು ಸಮಾಜದ ಕನ್ನಡಿಯಾಗಿ ಮಾರ್ಪಾಡಾಗುತ್ತದೆ.ಆ ಕನ್ನಡಿಯಲ್ಲಿ ಭಾವನೆಗಳು ಮತ್ತು ರೋಚಕ ವಿಷಯಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. ಕವಿತೆ ಸಮಾಜದ ಭಾಗವಾಗಿ ನಿಂತಾಗ ಕವಿ ಎತ್ತರಕ್ಕೇರುತ್ತಾನೆ,' ಎಂದೂ ಪ್ರಕಾಶ ಖಾಡೆ ಹೇಳಿದರು.

'ಮೂರುವರೆ ವರ್ಷದ ವಿಶ್ವಾಸ ರಾಜಮಾನೆ ಸಂವಿಧಾನ ಪೀಠಿಕೆಯನ್ನು ಬೋಧಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಡಾ.ಶಿವಾನಂದ ಕುಬಸದ ಮಾತನಾಡಿ ರನ್ನನ ನೆಲದ ಗಂಭೀರ ಸಾಹಿತ್ಯದ ಕನ್ನಡಿಯಾಗಿ ಇಂದಿನ ಸುರೇಶ ರಾಜಮಾನೆಯವರ ರಾಜಿಯಾಗದ ರಕ್ತದ ಕಣ ಕವನಸಂಕಲನ ಬಿಂಬಿಸಿಕೊಳ್ಳುತ್ತದೆ. ಹಾಗೂ ಅರಳುವ ಮಕ್ಕಳ ಎದೆಗೆ ಇಳಿಯುವ ಅಕ್ಷರದರಸಿ ಎಂಬ ಪುಸ್ತಕ ಮಕ್ಕಳ ಜ್ಞಾನಕ್ಕೆ ತಕ್ಕುದಾದುದಾಗಿದೆ,' ಎಂದರು.

ಉದ್ಘಾಟನೆಯನ್ನು ನೆರವೇರಿಸಿದ ಸಾಹಿತಿಗಳಾದ ಡಾ.ಲಲಿತಾ ಕೆ.ಹೊಸಪ್ಯಾಟಿ ಮಾತನಾಡಿ, `ಕವಿತೆಗಳಿಗೆ ತನ್ನದೆಯಾದ ಶಕ್ತಿ ಇರುತ್ತದೆ ಅದು ಅರ್ಥವಾದರೆ ಅದರಷ್ಟು ಸಮೃದ್ಧವಾದ ಆದರ್ಶಗಳು ಮತ್ತೆಲ್ಲಿಯೂ ದಕ್ಕುವುದಿಲ್ಲ. ಸುರೇಶ ರಾಜಮಾನೆಯವರ ಕವಿತೆಗಳು ಸಮಾಜಕ್ಕೆ ದಕ್ಕಬಹುದಾದ ಮತ್ತು ವ್ಯವಸ್ಥೆಯನ್ನು ಎಚ್ಚರಿಸಬಹುದಾದ ನಿಲುವಿನಲ್ಲಿ ನಿಲ್ಲುವಂತಹ ಗಟ್ಟಿತನವನ್ನು ಹೊಂದಿವೆ,' ಎಂದರು.

ಮಂಗಳೂರು ಸಾಹಿತಿ ರಾಜಲಕ್ಷ್ಮಿ ಎನ್.ಕೆ. ಅವರು `ಅಕ್ಷರದರಸಿ' ಕೃತಿಯನ್ನು ಬಿಡುಗಡೆ ಮಾಡಿದರು.

ಪುಸ್ತಕ ಪರಿಚಯಿಸಿದ ಶಿವಲಿಂಗ ಸಿದ್ನಾಳ, ‘ಸಮಾಜದಲ್ಲಿನ ಅಸಮಾನತೆಗಳನ್ನು ಓರೆಕೋರೆಗಳನ್ನು ಸಮರ್ಥವಾಗಿ ಕಾವ್ಯದ ಮೂಲಕ ಕಟುವಾಗಿ ಟೀಕಿಸುವುದಲ್ಲದೆ. ಸಾತ್ವಿಕ ಸಿಟ್ಟನ್ನು ಕವಿತೆಗಳ ಮೂಲಕ ಸುರೇಶ ರಾಜಮಾನೆಯವರು ಈ ರಾಜಿಯಾಗದ ರಕ್ತದ ಕಣ ಕವನಸಂಕಲನದ ಮೂಲಕ ಹೊರಹಾಕಿದ್ದಾರೆ ಎಂದರು. ಅಕ್ಷರದರಸಿಯನ್ನು ಪರಿಚಯಿಸಿದ ಜಹಾನ ಆರಾ ಕೋಳೂರು ಇವರು ಅಕ್ಷರದರಸಿ ಪುಸ್ತಕವು ಕೇವಲ ಮಕ್ಕಳಿಗಷ್ಟೇ ಅಲ್ಲದೆ ಸ್ಪರ್ಧಾತ್ಮಕ ನೆಲೆಯಲ್ಲಿಯೂ ತನ್ನ ಗಟ್ಟಿ ಚಾಪನ್ನು ಮೂಡಿಸುವಂತಹದ್ದು. ಕನ್ನಡ ಸಾಹಿತ್ಯದ ಮಹಿಳಾ ಸಾಹಿತಿಗಳ ಮಾಹಿತಿ ಹೊಂದಿರುವ ಈ ಹೊತ್ತಿಗೆ ಮಕ್ಕಳ ಪಾಲಿನ ಅಚ್ಚುಮೆಚ್ಚಿನ ಓದುಗರ ಪಾಲಿನ ಜ್ಞಾನದ ಬುತ್ತಿಯಾಗಿದೆ,’ ಎಂದರು.

ಬೆಂಗಳೂರಿನ ಕಲಾವಿದ ಪಂಚು ಪ್ರಮೋದ್ ,ಮುಧೋಳ ತಾಲೂಕು ಕಸಾಪ ಅಧ್ಯಕ್ಷ ಆನಂದ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃತಿಗಳ ರಚಕಾರರಾದ ಸುರೇಶ ರಾಜಮಾನೆ ಪ್ರಕಾಶಕರಾದ ನೇತ್ರಾ ಸುರೇಶ ರಾಜಮಾನೆ, ಶಶಿ ಟ್ರಸ್ಟ ನ ಅಧ್ಯಕ್ಷ ಚಂದ್ರಶೇಖರ ದೇಸಾಯಿ ಉಪಸ್ಥಿತರಿದ್ದರು.

ಸುರೇಶ ರಾಜಮಾನೆಯವರಿಗೆ ಅಕ್ಷರಜ್ಞಾನವನ್ನು ಉಣಬಡಿಸಿದ ಪ್ರಾಥಮಿಕ ಶಿಕ್ಷಣವನ್ನು ನೀಡಿದ ರಾಜು ಬಣಜವಾಡ ಮತ್ತು ಪದ್ಮಾವತಿ ಹಜಾರೆ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕು.ಅಕ್ಷರಾ ಸುರೇಶ ರಾಜಮಾನೆ ಇವಳ ಹುಟ್ಟುಹಬ್ಬದ ಪ್ರಯುಕ್ತ ಜ್ಯೋತಿ ಕುಂದರಗಿ ಅವರು ಇನ್ನೂರು ಉಚಿತ ಸಸಿ ವಿತರಿಸಿದರು.

ಕ.ಜಾ.ಪ ವಲಯ ಘಟಕ ರನ್ನಬೆಳಗಲಿಯ ಅಧ್ಯಕ್ಷರ ರಾಘವೇಂದ್ರ ನೀಲನ್ನವರ ಸ್ವಾಗತಿಸಿದರು. ಕು.ನೀಲಮ್ಮ ವಿಠ್ಠಲ ರಾಮದುರ್ಗ ಪ್ರಾರ್ಥಿಸಿದರು. ಬಸವರಾಜ ಬಳ್ಳಾರಿ, ಮಹೇಶ ದಿವಾಣ ನಿರೂಪಿಸಿದರು. ಬಸವರಾಜ ಬೀಷ್ಟಣ್ಣವರ, ವಿಠ್ಠಲ ಕಟಗಿ, ಮಂಜುನಾಥ ದಳವಾಯಿ, ಮಹಾದೇವ ಕುಲಗೋಡ, ಪ್ರಕಾಶ ಕೊಣ್ಣೂರು, ಶಿವಾನಂದ ಗೋಲಶೆಟ್ಟಿ, ಆರ್ ಎಮ್.ಸುತಾರ ಚಿರಂಜೀವಿ ರೋಡ್ಕರ್, ಪ್ರಕಾಶ ಡಂಗಿ, ಮುತ್ತು ಬಳ್ಳಾ, ರವಿ ಠಂಕಸಾಲಿ, ವೈ ಎಸ್ ಮೇತ್ರಿ, ನಾಗರಾಜ ಬಟಾಟೆಪ್ಪಗೋಳ, ರಮೇಶ ಅರಕೇರಿ, ಸಿದ್ದು ದಿವಾಣ, ಸಿದ್ದಣ್ಣ ಬಾಡಗಿ, ಮತ್ತು ಅಪಾರ ಸಾಹಿತ್ಯಾಸಕ್ತರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಡೋಣಿ ತೋಟ ಮೆಟಗುಡ್ಡ ಶಾಲೆಯ ಮಕ್ಕಳು ಹಾಗೂ ರನ್ನಬೆಳಗಲಿ ಮತ್ತು ಮುಧೋಳದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

MORE NEWS

ಅಮ್ಮ ಪ್ರಶಸ್ತಿಗೆ 2023-24ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳ ಆಹ್ವಾನ

07-10-2024 ಬೆಂಗಳೂರು

ಕಲಬುರಗಿ: ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ 23ನೇ ವರ್ಷದ `ಅಮ್ಮ ಪ್ರಶಸ್ತಿ&...

ಛಲವಾದಿ ವೇದಿಕೆಯಲ್ಲಿ ಬಿಡುಗಡೆಗೊಂಡ ‘ಸಂಜು ವೆಡ್ಸ್ ಗೀತಾ-2’ ಹಾಡು

07-10-2024 ಬೆಂಗಳೂರು

ಬೆಂಗಳೂರು: ಪವಿತ್ರಾ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರು ನಿರ್ಮಿಸಿರುವ ಕನ್ನಡದ ಬ...

ವೀರಣ್ಣ ರಾಜೂರ ಅವರಿಗೆ ‘ರಮಣಶ್ರೀ ಪ್ರಶಸ್ತಿ’

07-10-2024 ಬೆಂಗಳೂರು

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನದಿಂದ ಕೊಡಮಾಡಲಾಗುವ 2024ನೇ ಸಾಲಿನ 'ರ...