ಕತೆಗಳೆಲ್ಲವೂ ಬದುಕಿನ ಹೆಜ್ಜೆಯಲ್ಲಿ ಹುಟ್ಟಿದ ಜೀವತಂತುಗಳು


“ಇಲ್ಲಿನ ಎಲ್ಲಾ ಕತೆಗಳಲ್ಲೂ ಕತೆಗಾರನಿಗೆ ಅರಿವಿದ್ದೋ, ಇಲ್ಲದೆಯೋ ಪ್ರಾದೇಶಿಕ ಪ್ರಜ್ಞೆ ಸ್ಥಾಯಿಭಾವವಾದರೆ, ಮನುಷ್ಯನ ಹುಡುಕಾಟಗಳೆಲ್ಲವೂ ಸಂಚಾರಿ ಭಾವವಾಗಬಲ್ಲವು! ಸುಡು ಬಿಸಿಲಿನ ಕಲ್ಬುರ್ಗಿಯತೆ ಇಲ್ಲಿನ ಕತೆಗಳಲ್ಲಿ ಕಾಣಿಸುವ ಬಿಸಿಲಿನ ರೂಪಕದಲ್ಲಿ ಮತ್ತೆ ಮತ್ತೆ ಮೋಹಕವೆನಿಸುತ್ತದೆ,” ಎನ್ನುತ್ತಾರೆ ಚಾಂದ್‌ ಕವಿಚಂದ್ರ ಅವರು ಕಪಿಲ ಪಿ ಹುಮನಾಬಾದೆ ಅವರ “ಬಣಮಿ” ಕೃತಿಗೆ ಬೆರದ ಮುನ್ನುಡಿ ನಿಮ್ಮ ಓದಿಗಾಗಿ..

ಕತೆಗಳು ಬದುಕಿಗೆ ಸದಾ ಕಾಲ ಮುಖ ತೋರುತ್ತಲೇ ಇರುವ ಕನ್ನಡಿಯ ಚೂರಿದ್ದ ಹಾಗೆ, ಬಿಂಬಗಳು ಬದಲಾದ ಹಾಗೆಯೇ ಬದುಕಿನ ಘಟನೆಗಳು, ಭಾವನೆಗಳು, ಕಲ್ಪಿತ ಸುಖ, ಕೊನೆಗಾಣದ ಕಷ್ಟ, ನೆರಳಂತಿರುವ ಆತ್ಮವಿಮರ್ಶೆ, ಅಸಹಾಯಕತೆ, ಅಂತಃಕರಣ, ಅಂತ್ಯವಿಲ್ಲದ ಅವಮಾನ, ನಗುವಿನ ಹುಡುಕಾಟ.... ಹೀಗೆ ಏನೆಲ್ಲವೂ ಕೂಡ ಕಿರುತೆರೆಯಂತೆ ಸರಿದು ಹೋಗುತ್ತವೆ. ಸರಿದು ಹೋಗುತ್ತಲೇ ಗಕ್ಕನೆ ನಿಂತು ಬಿಡುವ ಒಂದು ಕ್ಷಣವೇ ಕತೆಯಾಗಬಲ್ಲದು. ಮನುಷ್ಯನ ಪ್ರತಿ ಹೆಜ್ಜೆಯಲ್ಲೂ ಕತೆಗಳು ಗರ್ಭ ಧರಿಸಬಲ್ಲವಾದರೂ ಕೂಡ, ಜೀವ ಪಡೆಯುವುದು ಕೆಲವು ಮಾತ್ರ ಉಳಿದವುಗಳೆಲ್ಲ ಹೆಜ್ಜೆಯ ಧೂಳಾಗಿ ಗಾಳಿಯಲ್ಲಿ ಕೊನೆ ಉಸಿರೆಳೆಯುತ್ತವೆ.

'ಇದು ಗೆಳೆಯ ಕಪಿಲನ ಮೊದಲ ಕಥಾ ಸಂಕಲನ. ಇಲ್ಲಿನ ಕತೆಗಳೆಲ್ಲವೂ ಬದುಕಿನ ಹೆಜ್ಜೆಯಲ್ಲಿ ಹುಟ್ಟಿದ ಜೀವತಂತುಗಳು. ಇಲ್ಲಿನ ಎಲ್ಲಾ ಕತೆಗಳಲ್ಲೂ ಕತೆಗಾರನಿಗೆ ಅರಿವಿದ್ದೋ, ಇಲ್ಲದೆಯೋ ಪ್ರಾದೇಶಿಕ ಪ್ರಜ್ಞೆ ಸ್ಥಾಯಿಭಾವವಾದರೆ, ಮನುಷ್ಯನ ಹುಡುಕಾಟಗಳೆಲ್ಲವೂ ಸಂಚಾರಿ ಭಾವವಾಗಬಲ್ಲವು! ಸುಡು ಬಿಸಿಲಿನ ಕಲ್ಬುರ್ಗಿಯತೆ ಇಲ್ಲಿನ ಕತೆಗಳಲ್ಲಿ ಕಾಣಿಸುವ ಬಿಸಿಲಿನ ರೂಪಕದಲ್ಲಿ ಮತ್ತೆ ಮತ್ತೆ ಮೋಹಕವೆನಿಸುತ್ತದೆ. ಬದುಕಿನ ಜಂಜಾಟದಲ್ಲಿ ಮುಳುಗುವ ಮನುಷ್ಯನಿಗೆ ಬಿಸಿಲೆಂಬುದು ಬಯಲಾಗಿ, ಬಯಲೆಂಬುದು ಬಿಡುಗಡೆಯಾಗಿ ಕಾಣುವ ರೀತಿ 'ಬಣಮಿ' ಕಥಾ ಸಂಕಲನದ 'ಶಕ್ತಿಪ್ರಜ್ಞೆ' ಎಂದೇ ಹೇಳಬೇಕು.

'ಬಣಮಿ' ಯ ಬಹುತೇಕ ಕೇಂದ್ರ ಪಾತ್ರಗಳೆಲ್ಲ ನನ್ನೊಳಗೆ ತಾನೆ ಲೀನವಾಗಿರುವ ಮತ್ತು ತನ್ನ 'ತನ'ದ ಹುಡುಕಾಟದಲ್ಲಿರುವ ಅಲೆಮಾರಿ ಸ್ವಪ್ನಗಳಿದ್ದ ಹಾಗೆ. ಆರಂಭದಲ್ಲಿ ಪಾತ್ರಗಳಿಗೆ ಕಾಡುವ ಅನಾಥ ಪ್ರಜ್ಞೆ ನಂತರದಲ್ಲಿ ಏನೋ ಆಗಿ ಬಿಡುವ ಚಲನಶೀಲ ದೃಷ್ಟಿ ಇಲ್ಲಿ ಕಾಣುತ್ತೇವೆ. ಇಲ್ಲಿನ ಪ್ರತಿ ಕತೆಯೂ ಒಂದಕ್ಕೊಂದು ಸಂಬಂಧವಿರುವ ಮತ್ತು ಸಂಬಂಧ ಕಲ್ಪಿಸಬಹುದಾದ ಸರಪಳಿ ಮಾದರಿಯ ಕಲಾಕೃತಿ ಇದಾಗಿದೆ.

- ಚಾಂದ್‌ ಕವಿಚಂದ್ರ

MORE FEATURES

ಎಲ್ಲರಿಗೂ ಅವರವರ ಆವರಣದ ಅರಿವಿದೆ

07-01-2025 ಬೆಂಗಳೂರು

"ಇಲ್ಲಿ ಜಾತಿ, ಧರ್ಮ ಯಾರನ್ನೂ ದೊಡ್ಡವರು, ಚಿಕ್ಕವರನ್ನಾಗಿ ಮಾಡಿಲ್ಲ. ತಮ್ಮ ಮತ ತಮಗೆ ಹಾಕುವ ಕಟ್ಟುಪಾಡುಗಳಿದ್ದಾಗ...

‘ಕೊನೆಯ ಕುಣಿಕೆ’ ಹೆಸರಿನಲ್ಲಿ ಭುಟ್ಟೊ ನಾಟಕ..

06-01-2025 ಬೆಂಗಳೂರು

“ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದ...

ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು

06-01-2025 ಬೆಂಗಳೂರು

“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...