ಕಥೆ ಎನ್ನುವುದು ಮಾನವನ ಜೀವನಕ್ಕೆ ಉಸಿರಾಟವಿದ್ದಂತೆ; ವಿ. ತೇಜಶಂಕರ ಸೋಮಯಾಜಿ ಕೆ. ಎಲ್


‘ಹೊರಗಿನ ಪ್ರಪಂಚದ ಒಂದು ಕಥೆ ಉಚ್ಪ್ವಾಸದಂತೆ ಮನದೊಳಗೆ ಬಂದರೆ, ನಿಶ್ವಾಸರೂಪದಲ್ಲಿ ಮನದೊಳಗಿರುವ ಒಂದು ಕಥೆ ಹೊರಹೊಮ್ಮುತ್ತದೆ. ಹೀಗೆ ಜೀವನಕ್ಕೆ ಮೂಲಾಧಾರವಾಗಿ ಈ ಕಥೆ ಪ್ರವಹಿಸುತ್ತದೆ’ ಎನ್ನುತ್ತಾರೆ ವಿ. ತೇಜಶಂಕರ ಸೋಮಯಾಜಿ ಕೆ.ಎಲ್. ಅವರು ರಾಜೇಶ್ವರೀ ಕುಮಾರ್ ರಾವ್ ಅವರ ‘ಹೊಸ ಬೆಳಕು’ ಕೃತಿ ಕುರಿತು ಬರೆದ ಮಾತು ನಿಮ್ಮ ಓದಿಗಾಗಿ.

ಕಥೆ ಎನ್ನುವುದರ ಕಥೆ.

ಕಥೆ ಎನ್ನುವ ಪದವು ಎಲ್ಲರ ಜೀವನದಲ್ಲೂ ಹಾಸುಹೊಕ್ಕಾಗಿದೆ. ಎಲ್ಲರೂ ತಮ್ಮೊಳಗೆ ಕಥೆಯನ್ನಿಟ್ಟುಕೊಂಡಿರುವುದೇ ಇದಕ್ಕೆ ಕಾರಣ. ಎಷ್ಟಾದರೂ ಜೀವಿಗಳು ಭಾವದ ಬಂಧಿಗಳಲ್ಲವೇ? ಅದರಲ್ಲೂ ಮುಖ್ಯವಾಗಿ ಭಾರತೀಯರು ಅನುಭವವನ್ನೇ ಪರಮ ಪ್ರಮಾಣವಾಗಿ ಸ್ವೀಕರಿಸಿದ್ದರಿಂದ ಶ್ರೀರಾಮ ಭಾವವನ್ನು ಅವನ ಜೀವನಾನುಭವವನ್ನು ತಿಳಿಸುವ ಶ್ರೀರಾಮನ ಜೀವನಕಥೆಯು ರಾಮಾಯಣವಾಯಿತು. ಪಾಂಡವ- ಕೌರವರ ಜೀವನ ಮಹಾಭಾರತವಾಯಿತು. ಈ ಎರಡೂ ಕಥೆಗಳು ನೀತಿಪಾಠವಾಗಿ ಧರ್ಮಗ್ರಂಥಗಳಾದವು. ಹೀಗೆ ಅದೆಷ್ಟೋ ಕಥೆಗಳು ಜೀವನ ಪ್ರಬೋಧಕಗಳಾದವು. ಹೀಗಿರುವ ಕಥೆ ಎಂಬ ಪದವನ್ನು ಭಾಷಾಶಾಸ್ತ್ರದ ದೃಷ್ಟಿಯಿಂದ ಅವಲೋಕಿಸಿದರೆ ಸಂಸ್ಕೃತ ಭಾಷೆಯ ಕಥಾ ಎನ್ನುವ ಶಬ್ದವು ಕಥೆ ಎಂಬ ಪದಕ್ಕೆ ಮೂಲಪದ. 'ಕಥ ವಾಕ್ಯಪ್ರಬಂಧೇ' ಎನ್ನುವ ಧಾತುವಿನಿಂದ ಹುಟ್ಟಿದ ಈ ಶಬ್ದಕ್ಕೆ ಹೇಳುವಿಕೆ. ನಿರೂಪಿಸುವಿಕೆ, ಸಂಭಾಷಣೆ, ಕಟ್ಟುಕಥೆ, ತತ್ತ್ವವನ್ನು ತಿಳಿಯಲು ನಡೆಸುವ ವಾದಿ ಪ್ರತಿವಾದಿಗಳ ಮಾತು ಎನ್ನುವ ಅರ್ಥಗಳಿವೆ.

ಸಂದರ್ಭವೊಂದನ್ನು ನೀತಿಪಾಠಕ್ಕೋಸ್ಕರ ಬಳಸಿದರೆ ಅದೊಂದು ಕಥೆಯಾಗುತ್ತದೆ ಎಂಬ ಉತ್ಕೃಷ್ಟವಾದ ಪರಿಭಾಷೆಯನ್ನು ಹಿತೋಪದೇಶ ಎನ್ನುವ ಗ್ರಂಥದಲ್ಲಿ ನಾವು ಕಾಣಬಹುದು. ಅಂದರೆ ಎಲ್ಲರ ಜೀವನದ ಎಲ್ಲಾ ಅಂಶಗಳು ಕಥೆಯಾಗಬಲ್ಲದ್ದಾದರೂ ನೀತಿಗೋ, ಪಾಠಕ್ಕೋ ಬಳಸದೇ ಇದ್ದಾಗ ಅದು ಕೇವಲ ಹರಟೆ ಎನ್ನುವ ಅಲ್ಪಪರಿಧಿಯೊಳಗೆ ಜಾರುತ್ತದೆ ಎನ್ನುವುದು ತಾತ್ಪರ್ಯ. ಇನ್ನೊಂದು ಆಯಾಮದಲ್ಲಿ ಚಿಂತಿಸಿದರೆ ಇತಿಹಾಸವೆಲ್ಲವೂ ಕಥೆಯಾಗುತ್ತದೆ. ಆದರೆ ಕಥೆ ಇತಿಹಾಸವೇ ಆಗಿರಬೇಕೆಂದಿಲ್ಲ. ಅಂದರೆ ನಡೆದ ಘಟನೆಗಳು ಮಾತ್ರ ಕಥೆಗಳಲ್ಲ. ನೀತಿಬೋಧಕ ಪಾತ್ರಗಳ ಪುಟ್ಟಪ್ರಪಂಚವು ಕಥೆಯ ಸೃಷ್ಟಿಯನ್ನು ಮಾಡಿಸುತ್ತದೆ. ಹಾಗಾಗಿಯೇ ಪ್ರಸಿದ್ಧ ಪಂಚತಂತ್ರ ಕಥೆಗಳಲ್ಲಿ ಗಿಳಿ, ಸಿಂಹ, ಕಾಗೆ, ಕೋಗಿಲೆ ಇವೆಲ್ಲವೂ ಮಾತನಾಡುತ್ತವೆ. ಭಾರತೀಯರ ಪರಮಗುರಿಯಾದ ಮೋಕ್ಷದ ವಿಚಾರವೂ ನಚಿಕೇತನ ಕಥೆಯಲ್ಲಿ ವಿವರಿಸಲ್ಪಟ್ಟದ್ದರಿಂದ ಕಥೆಯ ಮಹತ್ವವನ್ನು ನಾವು ಮನಗಾಣಬಹುದು.

ಮಾನವನ ಜೀವನಕ್ಕೆ ಕಥೆ ಎನ್ನುವುದು ಉಸಿರಾಟವಿದ್ದಂತೆ. ಹೊರಗಿನ ಪ್ರಪಂಚದ ಒಂದು ಕಥೆ ಉಚ್ಫ್ವಾಸದಂತೆ ಮನದೊಳಗೆ ಬಂದರೆ, ನಿಶ್ವಾಸರೂಪದಲ್ಲಿ ಮನದೊಳಗಿರುವ ಒಂದು ಕಥೆ ಹೊರಹೊಮ್ಮುತ್ತದೆ. ಹೀಗೆ ಜೀವನಕ್ಕೆ ಮೂಲಾಧಾರವಾಗಿ ಈ ಕಥೆ ಪ್ರವಹಿಸುತ್ತದೆ.

ಕಥೆ ಎನ್ನುವುದು ಸರ್ವವ್ಯಾಪಕ. ಉದಾಹರಣೆಗೆ ಬರೆದ ನನ್ನದೊಂದು ಕಥೆ, ಓದುಗರಾದ ನಿಮ್ಮದೊಂದು ಕಥೆ. ಇದೆಲ್ಲವನ್ನೂ ಚಿತ್ರದಂತೆ ಮನದಲ್ಲಿ ಅಚ್ಚಳಿಸಿದ ಈ ಅಕ್ಷರಗಳ ಕಥೆ. ಕಥೆ ಎನ್ನುವುದರ ಕಥೆ.

-ವಿ. ತೇಜಶಂಕರ ಸೋಮಯಾಜಿ ಕೆ. ಎಲ್.
ಮುಖ್ಯಸ್ಥರು, ತತ್ತ್ವಶಾಸ್ತ್ರ ವಿಭಾಗ, ಅಂಬಿಕಾ ಮಹಾವಿದ್ಯಾಲಯ, ಪುತ್ತೂರು

MORE FEATURES

ನಾವು ಬದುಕುತ್ತಿರುವ ಪರಿಸರವೇ ಕುಂ.ವೀ ಅವರ ಬರವಣಿಗೆಯ ಶಕ್ತಿಯಾಗಿದೆ

16-09-2024 ಬೆಂಗಳೂರು

“ಕುಂ.ವೀರಭದ್ರಪ್ಪ ಅವರ ಸೃಷ್ಟಿ ಪ್ರತಿಭಟನಾತ್ಮಕ ಸಾಹಿತ್ಯವಾಗಿ ಸಹಜ ಬಂಡಾಯದ ಧ್ವನಿಯಾಗಿದೆ. ಎಪ್ಪತ್ತೊಂದು ವರ್ಷದ...

ಮೊಸಳೆ ಸೆರೆ ಹಿಡಿದ ಪ್ರಸಂಗ

16-09-2024 ಬೆಂಗಳೂರು

"ನನ್ನ ಗಸ್ತಿಗೆ ಬಂದ ಹೊಸತರಲ್ಲಿ ವಾಚರುಗಳಿಬ್ಬರು ನನ್ಮುಂದೆ "ಈ ಗಸ್ತಿನ ವ್ಯಾಪ್ತಿಯಲ್ಲಿ ಮೊಸಳೆ ಕಾಟ ಜಾಸ್ತ...

ಕನ್ನಡ ಕಾದಂಬರಿ ಲೋಕದ ಅಗ್ರಮಾನ್ಯ ಪ್ರಯತ್ನಗಳಲ್ಲೊಂದು `ಚೆನ್ನಭೈರಾದೇವಿ'

16-09-2024 ಬೆಂಗಳೂರು

"ಈ ಕಾದಂಬರಿಯಲ್ಲಿ ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಸಾಲು "ರೂಪವೋ ಗುಣವೋ ಸಂಸ್ಕಾರವೋ ಬುದ್ಧಿಯೋ ರಕ್ತಸಂಬಧ...