“ಒಂದುಕಡೆ ಅನುಮಾನ ಪಡುವ ಸ್ವಭಾವವನ್ನು `ರಾಮಮತಿ’ ಎಂದು ಕರೆಯಲಾಗಿದೆ! ಸಮಕಾಲೀನ ವಿದ್ಯಮಾನಗಳಿಂದಾಗಿ `ಅವರಿವರೆನ್ನದೆ’ ಎಲ್ಲ `ಜನರಿಗೂ ಮರುಳು ಹಿಡಿದಿದೆ’. `ರಾಮನ ಮರುಳು ಅಯೋಧ್ಯೆಯ ಮರುಳು’ ಎಷ್ಟೆಲ್ಲ ಅನಾಹುತ ಮಾಡಿದೆಯೆಂಬುದನ್ನು ಕವಿ ಕಾಣಿಸುತ್ತಾನೆ,” ಎನ್ನುತ್ತಾರೆ ಅಗ್ರಹಾರ ಕೃಷ್ಣಮೂರ್ತಿ ಅವರು ಎಸ್. ಜಿ. ಸಿದ್ಧರಾಮಯ್ಯ ಅವರ “ಅನಾದಿಯ ಗಜ್ಜೆದನಿ” ಕೃತಿಗೆ ಬರೆದ ಮುನ್ನುಡಿ..
ಕವಿಯ ಕೋಪ ಚಾಲ್ತಿಯಲ್ಲಿದೆ!
ಕವಿಗೆಳೆಯ ಸಿದ್ಧರಾಮಯ್ಯನ ಹೊಸ ಕವಿತಾ ಸಂಕಲನಕ್ಕೆ ಮುನ್ನುಡಿ ಬೆನ್ನುಡಿಗಳಂಥ ಯಾವ ತೊಡಿಗೆಗಳ ಅಗತ್ಯವಿಲ್ಲ. ಸಮಕಾಲೀನ ಕನ್ನಡ ಕಾವ್ಯಲೋಕದಲ್ಲಿ ಈಗಾಗಲೇ ಪ್ರತಿಷ್ಠಾಪಿತನಾದ ಕವಿಯಾಗಿದ್ದರೂ ಹಳೆಕಾಲದಿಂದಲೂ ಗೆಳೆತನವುಳಿಸಿಕೊಂಡವನಿಂದ ಕೆಲವು ಮಾತುಗಳನ್ನು ಬರೆಯಿಸಿಕೊಳ್ಳುವ ಹಂಬಲ, ಆಶೆಯಿದ್ದೀತು ಎಂದು ಭಾವಿಸುತ್ತೇನೆ. ಅದು ನನಗೆ ಅಚ್ಚರಿಯ ಸಂತೋಷವನ್ನು ತಂದಿದೆ.
ಈ ಕವಿ ತನ್ನ ತನ್ನತನ, ತನ್ನ ಭಾಷೆ, ಕಾವ್ಯ, ಸಮಾಜ ಪರಿಸರ, ತನ್ನ ನಾಡು_ ಸಕಲಿಷ್ಟಕ್ಕೂ ಅನ್ವಯವಾಗುವಂತಹ ಒಂದು ವ್ಯುತ್ಪತ್ತಿಯ ಶೋಧದಲ್ಲಿ ತೊಡಗಿಕೊಂಡ ಕವಿ. ಅಂತಹ ಶೋಧನೆಯಲ್ಲಿ ಕಂಡುಕೊಂಡ ವ್ಯುತ್ಪತ್ತಿಯೇ `ನೆಲಮೂಲ’ ಧಾತು. ಇಂಥದ್ದೇ ಒಂದು ಸೃಜನ ಚಿಂತನೆಯನ್ನು ನವ್ಯರು `ಮಣ್ಣಿನ ವಾಸನೆ’ ಎಂದು ಕರೆದರಾದರೂ ಅದು ವ್ಯಷ್ಠಿನೆಲೆಯ ಆಶಯವಾಗಿಯೇ ಆವಿಯಾಗಿ ಹೋಯಿತು. ನೆಲಮೂಲವೆಂಬುದು ಸಮಷ್ಠಿನೆಲೆಯ ಆಶಯವನ್ನು ವ್ಯಕ್ತಗೊಳಿಸುತ್ತದೆ. ಈ ಹೊತ್ತಿನ ಇಂಡಿಯಾದ ಪರಿಸ್ಥಿತಿಯನ್ನು ಅವಲೋಕಿಸಿದರೆ ಈ ಮಾತಿನ ಪ್ರಸ್ತುತತೆ ಅರಿವಾಗದಿರದು. ಸ್ಥಳೀಯತೆಯ ಎಲ್ಲ ಮೂಲಗಳಿಗೆ ಆತಂಕ ಧಕ್ಕೆಯುಂಟಾಗುತ್ತಿರುವ ಪ್ರತಿಗಳಿಗೆಗಳನ್ನು ಗಮನಿಸುತ್ತಿರುವ ಎಲ್ಲ ಎಚ್ಚರ ಮತಿಗಳಿಗೂ ನೆಲಮೂಲವೆಂಬುದು ಒಂದು ದೊಡ್ಡ ಅಪೇಕ್ಷಿತ ಆಶಯವಾಗಿದೆ.
ಈಚೆಗೆ ಒಂದು ಸಮಾರಂಭದಲ್ಲಿ ಸಿದ್ಧರಾಮಯ್ಯನನ್ನು ಪರಿಚಯಿಸಿದವರು _ಅವರು ಕಾವ್ಯ ಓದಿಕೊಂಡವರೇನಲ್ಲ_ ನೆಲಮೂಲ ಕವಿ ಎಂದೇ ಪರಿಚಯಿಸಿದರು! ಈವರೆಗೆ ಹೊರತಂದಿರುವ ಸಂಕಲನಗಳಲ್ಲಿ ಸಿದ್ಧರಾಮಯ್ಯ ಭಾಷೆ, ವಸ್ತು ಮತ್ತು ಆಶಯದ ನೆಲೆಗಳಲ್ಲಿ ತಾನು ಶೋಧಿಸಿರುವ ವ್ಯುತ್ಪತ್ತಿ ಧಾತುವನ್ನು ಸಾಕಷ್ಟು ಆಸ್ಥೆ ಮತ್ತು ಗಂಭೀರತೆಯಿಂದ ವಿಸ್ತರಿಸಿರುವುದನ್ನು ಕಂಡಿದ್ದೇವೆ. ಈಗ ಈ ಹೊಸ ಸಂಕಲನದಲ್ಲಿ ವಿಭಿನ್ನ ರೀತಿಯಲ್ಲಿ ಅದರ ಮುಂದುವರಿಕೆಯನ್ನು ಕಾಣಬಹುದು.
ಕವಿ ಈಗ ಆತಂಕ ಸಿಟ್ಟು ಕೋಪಕ್ಕೆ ಪಕ್ಕಾಗಿದ್ದಾನೆ. ಕೋಪತಾಪಗಳಲ್ಲಿ ಅಭಿವ್ಯಕ್ತಿ ಆಗಾಗ್ಗೆ ವಾಚ್ಯವಾಗುತ್ತಿದ್ದರೂ ಲೆಕ್ಕಿಸದೆ ಕವಿತೆಗಳ ರಚನೆಯಲ್ಲಿ ತೊಡಗಿದ್ದಾನೆ. ಕಾವ್ಯ ಸೌಂದರ್ಯ ಅಥವಾ ಈಸ್ಥಟಿಕ್ ಅಂಶಗಳಿಗಿಂತ ಮುಖ್ಯವಾಗಿ, ತನ್ನ ಅಸ್ಮಿತೆಗೆ ಧಕ್ಕೆಯೊದಗುತ್ತಿರುವ, ತಾನು ಕಂಡುಕೊಂಡ ವ್ಯುತ್ಪತ್ತಿ ಧಾತುವಿಗೆ ಅಡಿಗಡಿಗೆ ಅಪಾಯವೊದಗಿಬರುತ್ತಿರುವ ಸನ್ನಿವೇಶಗಳು ಹೆಚ್ಚುತ್ತಿರುವುದನ್ನು ಕಂಡು ಕವಿ ಉದ್ವಿಘ್ನಗೊಂಡಿದ್ದಾನೆ. `ನಿಮ್ಮ ಸಾಹಿತ್ಯ ಸಲ್ಲಾಪಗಳ ಸುರಿಮಳೆ ಕ್ರಾಂತಿಯ ಮಾತುಗಳ ಬೊಜ್ಜು ಬೆಳೆ ಅದು ಇದು ನೀತಿ ಹೇಳುವ ಬೊಗಳೆ’ ಇವನ್ನೆಲ್ಲ ಬಿಟ್ಟು, `ಮನುಷ್ಯರಾಗಿ ಮಾನವಂತ ಕಲಾವಿದರಾಗಿ ನೊಂದವರ ನೋವಿಗೆ ತಂದೆತಾಯಿಗಳಾಗಿ’ ಎಂದು ತನ್ನ ಸಹಕವಿಗಳಿಗೆ ಕರೆ ಕೊಡುತ್ತಾನೆ. ಈ ಕರೆ ಓದುಗನ ನೆನಪನ್ನು ಏನಾದರೂ ಆಗು ಮೊದಲು ಮಾನವನಾಗು ಎಂದಿದ್ದ ಕವಿ ಸಿದ್ದಯ್ಯ ಪುರಾಣಿಕರ, ಅವರ ಮೂಲಕ ಇನ್ನೂ ಹಿಂದಕ್ಕೆ ಪಂಪನಂಥ ಕವಿಯ ಮಾತುಗಳತ್ತ ಸೆಳೆಯುತ್ತದೆ. ಪ್ರಜಾಪ್ರಭುತ್ವ ಅಂತ್ಯಗೊಳ್ಳುತ್ತಿರುವ ಬಗ್ಗೆ ಕವಿ ಆತಂಕಿತನಾಗಿದ್ದಾನೆ: `ಬೀದಿ ಬೀದಿಗಳಲ್ಲಿ ಬಾವುಟ ಬಟ್ಟೆ ಬಡವರ ಗುಡಿಸಲಲ್ಲಿ ಬೆತ್ತಲೆ ಹೊಟ್ಟೆ’. ಜನನಾಯಕರೆಂದುಕೊಳ್ಳುವ `ನರಿಯಣ್ಣ’ರು ಅನವರತ ನಡೆಸುತ್ತಿರುವ ವಿಡಂಬನೆಗಳನ್ನು ಕಂಡ ಕವಿ ಹೇಸಿದ್ದಾನೆ.
ಲೋಕವೆಲ್ಲ ರಾಮ ಎನ್ನುವ ಮಹಾಪೂರದಲ್ಲಿ ಮುಳುಗಿರುವಾಗ ಕವಿ ಸಿಡಿಮಿಡಿಗೊಳ್ಳುತ್ತ ಸೀತೆಯ ಸನಿಹ ನಿಲ್ಲುತ್ತಾನೆ. ಒಂದೇ ನಾಡು, ಒಂದೇ ನುಡಿ, ಒಂದೇ ಉಣಿಸು, ಒಂದೇ ಉಡುಪು ಎಂಬ ಜಾಗಟೆ ಸದ್ದುಗಳಿಗೆ ರೋಸಿ ನೆಲಮೂಲಗಳನ್ನು ಕಾಪಿಟ್ಟುಕೊಳ್ಳುವ ಎಚ್ಚರವನ್ನು ಈ ಕವಿತೆಗಳಲ್ಲಿ ಪ್ರಕಟಪಡಿಸಿದ್ದಾನೆ. ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪಲ್ಲಟಗಳಿಗೆ, ಮನುಷ್ಯನ ದುರಂತಗಳಿಗೆ, ಕೋವಿಡ್ ಮಾರಿ ಅವತರಿಸಿದ ಮತ್ತು ಕೋವಿಡೋತ್ತರ ಕಾಲದ ಮನುಕುಲದ ದುರಂತಗಳಿಗೆ ಕವಿ ತನ್ನ ಪ್ರತಿಕ್ರಿಯೆಗಳನ್ನು ಕಾವ್ಯದ ಮೂಲಕ ದಾಖಲಿಸಿದ್ದಾನೆ. ಸಮಕಾಲೀನ ವಿದ್ಯಮಾನಗಳನ್ನು ನೋಡುತ್ತಿರುವ, ಅನುಭವಿಸುತ್ತಿರುವ ಮಂದಿಗೆ ಕವಿತೆಗಳಲ್ಲಿನ ಪಾತ್ರಗಳು, ಸನ್ನಿವೇಶಗಳು ಯಾವುವೆಂಬುದು ನಿಚ್ಚಳವಾಗಿ ಗೋಚರಿಸುತ್ತವೆ. ಸಂಕಲನದಲ್ಲಿರುವ ಕವಿತೆಗಳ ಸಂಖ್ಯಾಬಾಹುಳ್ಯ ಕೂಡ ದಿನ ನಿತ್ಯವೂ ಕವಿಯ ಕಣ್ಣ ಮುಂದೆ ಅಡಿಗಡಿಗೆ ನಡೆಯುತ್ತಿರುವ ಅನಪೇಕ್ಷಣೀಯ ಘಟನಾವಳಿಗಳ ಸೂಚಿಯೇ ಆಗಿದೆ.
ಕವಿಯ ರಾಮನ ಪ್ರತೀಕ ಎಂಥದು? ಅವನು, `ಪಣವ ಗೆಲ್ಲಲು ಬಂದವ ಪಣದ ಬಿಲ್ಲನೇ ಮುರಿದ ಬಾಳ ದಾರಿಗೇ ಮುಳ್ಳಾದ’, `ಗದ್ದುಗೆಯನೇರಿದರು ಗೆದ್ದವನಾಗಲಿಲ್ಲ’. ಇಂಥ ಗಂಡನನ್ನು ಪಡೆದ ಸೀತೆ ಭಗವಂತನಲ್ಲಿ ಪ್ರಾರ್ಥಿಸುತ್ತಾಳೆ: `ಯಾವ ಹೆಣ್ಣಿಗೂ ಸಿಗದಿರಲಿ ನನ್ನ ಗಂಡನಂಥಾ ಗಂಡ’. ಕವಿಯಷ್ಟೇ ಸೀತೆಯ ಪರ ನಿಲ್ಲುವುದಲ್ಲ; ಅವಳ ಸ್ಥಿತಿಗೆ ಸಕಲ ಜೀವ ಸಂಕುಲ, ಗಾಳಿ ಮಳೆ ಇಡೀ ನಿಸರ್ಗವೇ ಶೋಕಪೂರಿತವಾಗಿವೆ. ಸುಳಿವ ಗಾಳಿ, ಹರಿವ ಇರುವೆ, ಬಳಿ ಬರುವ ಜಿಂಕೆ, ಮಳೆ ಹನಿ, ಹೇಗೆ ಸೀತೆಯ ಶೋಕಸಾಗರದಲ್ಲಿ ಸಹಶೋಕ ವ್ಯಕ್ತಗೊಳಿಸುತ್ತವೆಂಬ ಆರ್ದ್ರ ಚಿತ್ರಣ ಇಲ್ಲಿದೆ. ಕೊನೆಯ ಚರಣದಲ್ಲಿ, `ಅಶೋಕ ವನವೆಂಬುದು ಶೋಕಸಾಗರದಲ್ಲಿ ಪಾಪಲೇಪಿತ ಪರಿತಾಪದಲ್ಲಿ ತನ್ನ ಹೆಸರಿಗೆ ತಾನೇ ಹೇಸಿ ತಲೆತಗ್ಗಿಸಿತು’. ರಾಮಾಯಣದ ರಾಮ ಸೀತೆ ಪಾತ್ರಗಳ ನಡುವಿನ ನೈತಿಕ ಪ್ರಶ್ನೆ ಕವಿಯ ಕವಿತೆಗಳಲ್ಲಿ ಆಗಾಗ ಪ್ರಕಟಗೊಳ್ಳುತ್ತಿರುತ್ತವೆ. ಒಂದುಕಡೆ ಅನುಮಾನ ಪಡುವ ಸ್ವಭಾವವನ್ನು `ರಾಮಮತಿ’ ಎಂದು ಕರೆಯಲಾಗಿದೆ! ಸಮಕಾಲೀನ ವಿದ್ಯಮಾನಗಳಿಂದಾಗಿ `ಅವರಿವರೆನ್ನದೆ’ ಎಲ್ಲ `ಜನರಿಗೂ ಮರುಳು ಹಿಡಿದಿದೆ’. `ರಾಮನ ಮರುಳು ಅಯೋಧ್ಯೆಯ ಮರುಳು’ ಎಷ್ಟೆಲ್ಲ ಅನಾಹುತ ಮಾಡಿದೆಯೆಂಬುದನ್ನು ಕವಿ ಕಾಣಿಸುತ್ತಾನೆ. `ಮಕ್ಕಳಿಗೆ ಅಕ್ಕರವ ಕಲಿಸದ ಮರುಳು ಮಿಕ್ಕವರಿಗೆ ಪ್ರೀತಿ ತೋರದ ಮರುಳು ದ್ವೇಷ ಬಿತ್ತಿ ದ್ವೇಷ ಬೆಳೆವ ಕ್ರೂರಿ ಮರುಳು ದೇಶವನ್ನು ನಾಶ ಗತಿಗೆ ದೂಡುತಿದೆ ಮರುಳು’. ಕವಿಯ ಪ್ರಶ್ನೆ ಮಾರ್ಮಿಕವಾಗಿದೆ: `ಋತವ ಕೊಂದವನಾವ ಕರುಣಾಳು?’ ಕವಿಯನ್ನು ತನ್ನ ನಿಜನಾಮಧೇಯದಲ್ಲಿರುವ ಒಂದರ್ಧ ಭಾಗ ಬಹಳ ಕಾಡಿದೆ! ಆ ಕಾಡುವಿಕೆ ಒಂದು ಸುಂದರ ಕವಿತೆಯ ರೂಪು ತಳೆದಿದೆ. ಓದುಗರು ಅದನ್ನೊಮ್ಮೆ (ಪ್ರೀತಿ ಸಾಕಲ್ಲ) ಗಮನಿಸಬೇಕು. ಎಲ್ಲೂ ಯಾವುದನ್ನೂ ನೇರವಾಗಿ ಪ್ರಸ್ತಾಪಿಸದೆ, ವೈಯಕ್ತಿಕ ಸಂಗತಿಯ ಸುತ್ತ ಒಂದು ಬೃಹತ್ ಪುರಾಣವನ್ನೇ ಅಡಕಗೊಳಿಸಿ ಸರಳವಾಗಿ ವಿಮರ್ಶಿಸುವ ಕವಿತೆ ಅದು. ಸಂಕಲನದಲ್ಲಿ ನನ್ನ ಮೆಚ್ಚಿನ ಹಲವಾರು ಅತ್ಯುತ್ತಮ ಕವಿತೆಗಳಲ್ಲಿ ಇದೂ ಒಂದು.
ಕವಿ ತನ್ನ ನೆಲಮೂಲಗಳ ನೆಮ್ಮದಿ ಕದಡುತ್ತಿರುವ ಶತೃಮೂಲಗಳನ್ನು ಗುರುತಿಸುತ್ತಾನೆ. ಅವು ಕೋಮು ಪಿಶಾಚಿಗಳ ಭಾಷಾಂಧ ಭಟರ ಪಡೆಗಳು, ಸರ್ವಾಧಿಕಾರಿ ನಿಲುವುಗಳು. ಸಂವಿಧಾನ ಕಂಟಕರು, ಬಹುತ್ವ ಒಡೆಯುವವರು. ವಂಶಪಾರಂಪರ್ಯ ರಾಜಕಾರಣ: `ಸುಳ್ಳ ಬಂದ ಬಂದೇ ಬಂದ ಇಡೀ ಕುಟುಂಬ ರಾಜಕಾರಣದ ತಾತಿಲಿ ಅಪ್ಪಿಲಿ ಅವ್ವಿಲಿ ಮರಿಯಿಲಿ ನರಿಯಿಲಿ ಎಲ್ಲಾಬಂದುವು ಓಡೋಡಿ’. ಕವಿ ಕಾಣಿಸುವ ಶತೃಗಳು ಊರಿನವರಲ್ಲ, `ಅವರು’ ಊರಿಗೆ `ಬಂದವರು’. `ಅವರು ಬಂದದ್ದೆ ಬಂದದ್ದು ತೋಟವೆಲ್ಲಾ ಬರಿದೋ’. ಅವನು `ಆಳುವವನು’. `ಆಳುವ ದೊರೆ ನೆಲವ ಮರೆತ ಹಾರಾಟಿಗ/ ಮಾತೆಲ್ಲ ಬಾರು ಮನವೆಲ್ಲ ತೂತು ಅಲಂಕಾರಿಕ ಬಡಿವಾರವೇ ದೇಸಗತಿ ಬೆತ್ತಲೆಯ ರಾಜ್ಯದಲ್ಲಿ ದ್ವೇಷ ಮತಿ’. ಅವನ ನೀತಿಗಳೆಂದರೆ, ಹೇಳುವುದು ಪುರಾಣ, ಮಾಡುವುದು ಅಪಸವ್ಯ; ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ. ಅವನು ಆಳುವವನಷ್ಟೇ ಅಲ್ಲ; ಒಡೆದು ಆಳುವವನು: `ತಂದೆ ಮಕ್ಕಳಿಗೆ ತಂದಿಕ್ಕುವಿರಿ ಅಣ್ಣತಮ್ಮರಿಗೆ ದ್ವೇಷಹಚ್ಚುವಿರಿ’. ಅವರ ಆಯುಧ ಯಾವುದೆಂಬುದನ್ನು ಕವಿ ಪತ್ತೆ ಹಚ್ಚುತ್ತಾನೆ: ವೈವಿಧ್ಯತೆಯೆಲ್ಲ ಯಾವುದೋ ಒಂದು ಬಣ್ಣವಾಗಿ ಹರಿದುಹೋಗುತ್ತಿರುವ ಕೇಸರಿ ಎಂಬ ಆಯುಧ. `ಹಾದಿಗಳಲ್ಲಿ ಬೀದಿಗಳಲ್ಲಿ ಹೆದ್ದಾರಿ ರಾಜಮಾರ್ಗಗಳಲ್ಲಿ ಹರಿದಂತೆ ಹರಿದು ಬಂತು ಬಂದೇ ಬಂತು ಮನೆಯಂಗಳಕ್ಕೆ ಹಾಗೇ ಅಡುಗೆ ಕೋಣೆಗೆ’. ಇಲ್ಲಿ ಅಡುಗೆ ಕೋಣೆಗೆ ಎಂಬ ಕವಿಯ ಮಾತು ನಾಡಿನಲ್ಲಿ ಜನರ ಉಣ್ಣುವ ಆಹಾರ ಪದ್ಧತಿಯನ್ನು ಹೀಯಾಳಿಸುತ್ತ ಭುಗಿಲೆದ್ದಿರುವ ಅಹಿಂಸೆ, ಪ್ರಾಣಹಾನಿಯನ್ನ ಅತ್ಯಂತ ಮಾರ್ಮಿಕವಾದ ರೂಪಕ ನೆಲೆಯಲ್ಲಿ ಕಟ್ಟಿಕೊಡುತ್ತದೆ. `ಮಣ್ಣಿನ ಮಕ್ಕಳು ನಾವು ಪರುಶರಾಮನ ಕೊಡಲಿ ಹೇಗೆ ತಾನೆ ಹಿಡಿಯಲಿ?’ ಎಂಬ ವಿಷಾದದಲ್ಲಿರುವ ಕವಿಗೆ ತನ್ನ ಮನೆಮಕ್ಕಳೇ ಕೇಸರಿ ಹೊಳೆಯಲ್ಲಿ ಮಿಂದೇಳುವ ಕಾಲಾಳುಗಳಾಗಿರುವ ದುರಂತದ ಬಗ್ಗೆ ನೋವಾಗಿದೆ. ಮನೆಮಕ್ಕಳು, `ಹೊಲ ಉಳುವುದ ಮರೆತವು ಅಕ್ಷರ ಕಲಿವುದ ಮರೆತವು ಬೊಗಸೆ ಕೆಲಸ ಮರೆತವು ಕಾಲಾಳು ಪಡೆವಳರಾಗಿ ಮನೆಗೆ ಬರುವುದ ಮರೆತವು’. ಅವೇ ಮಕ್ಕಳು ಈಗ ಕತ್ತಿಗಳಾಗಿವೆ, ಮಚ್ಚು ಲಾಂಗುಗಳಾಗಿವೆ ಎಂದು ಕವಿ ಇಂದು ನಮ್ಮ ನಾಡಿನಲ್ಲಿ ನೆಡೆಯುತ್ತಿರುವ ಆತಂಕಕಾರಿ ಕೋಮು ವೈಷಮ್ಯಗಳನ್ನು ಚಿತ್ರಿಸುತ್ತಾನೆ. `ಅನ್ಯ’ನು ಕಾಲಕಾಲಕ್ಕೆ ತನ್ನ ನೆಲಮೂಲ ನಡೆನುಡಿಗಳಿಗೆ ಅಪಾಯವನ್ನುಂಟು ಮಾಡುತ್ತಿರುವ, ಅವನ ವಿವಿಧ ಹುನ್ನಾರಗಳನ್ನು ಕಾರ್ಯಚಟುವಟಿಕೆಗಳನ್ನು ಅನಾಹುತ ಮೋಸಗಳನ್ನು ಕವಿ ಬಹಿರಂಗಗೊಳಿಸುತ್ತಾನೆ. ಕನ್ನಡ ಅಸ್ಮಿತೆಯ ಅವನತಿ ಅಥವಾ ನಾಶಕ್ಕೆ ಕಾರಣವಾಗುವ ದ್ರೋಹಗಳನ್ನು ಕಂಡರಿಸುತ್ತಾನೆ. `ಎಲ್ಲರ ಸೊಲ್ಲನು ಭಜನೆಗೆ ಬಳಸಿ ಸೋತು ಸುಣ್ಣಾದರು ಇದ್ದಲ್ಲಿಯೆ ಇರುವ ಕೋಟಿ ಕೋಟಿ ಕಣ್ಣಡಿಗರು _ ಈ ಸಾಲುಗಳಲ್ಲಿರುವ `ಕಣ್ಣಡಿಗರು’ ಎಂಬ ಪ್ರಯೋಗ ಕೇವಲ ಕನ್ನಡ ನುಡಿಯನ್ನಾಡುವವರ ಸ್ಥಿತಿಯನ್ನಷ್ಟೇ ಸೂಚಿಸದೆ ನಾಡಿನಾದ್ಯಂತ ಇರುವ ಇತರ ಭಾಷಿಕರ ದಾರುಣತೆಯನ್ನೂ ಒಳಗೊಳ್ಳುತ್ತದೆ, ಅಸ್ಮಿತೆಗೆ ಭಂಗವಾಗುತ್ತಿರುವ ಭಾವನೆಯನ್ನು, `ಒಕ್ಕೂಟ ಗಣತಂತ್ರ ಎಕ್ಕುಟ್ಟಿ ಹೋಗುತಿದೆ’ ಎಂಬ ಮಾತುಗಳಲ್ಲಿ ಪ್ರಕಟಗೊಳಿಸುತ್ತದೆ. ಸ್ವಂತಿಕೆ, ಸ್ವಾಯತ್ತತೆ ನಾಶವಾಗುತ್ತಿದ್ದರೂ ಚಿಂತಿಸದೆ ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷಗಳನ್ನು ಓಲೈಸುವ ಚಾಳಿಯನ್ನು ಕಂಡ ಕವಿ ಅಸಂತುಷ್ಟನಾಗಿದ್ದಾನೆ.
ಇದುವರೆಗೆ ನಾನು ಆisಣuಡಿbeಜ ಆದ ಅಶಾಂತ ಮನಸ್ಥಿತಿಯುಳ್ಳ ಕವಿಯ ರಚನೆಗಳನ್ನು ಕುರಿತು ಪ್ರಸ್ತಾಪಿಸಿದೆ. ಇಲ್ಲಿ ಕಾವ್ಯಲಯಕ್ಕಿಂತ ತನ್ನ ಸುತ್ತಲಿನ ಲೋಕದ ಲಯ ಮತ್ತು ಸ್ವಾಸ್ಥö್ಯದ ಚಿಂತನೆಯೇ ಮುಖ್ಯವೆಂಬ ದಾರ್ಶನಿಕ ಅಂಶ ಎದ್ದು ಕಾಣುತ್ತದೆ. ಇವುಗಳಲ್ಲಿ ಬಹುತೇಕ ರಚನೆಗಳು ಅಪ್ಪಟ ರಾಜಕೀಯ ಕವಿತೆಗಳು. ಈಚಿನ ದಿನಗಳಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ರಾಜಕೀಯ ಕವಿತೆಗಳನ್ನು ಬರೆದವರು ಕಡಿಮೆ. ಹೊಸ ತಲೆಮಾರಿನ ಕೆಲವು ಕವಿಗಳು ಅಲ್ಲಲ್ಲಿ ಬರೆಯುತ್ತಿರುವುದು ನಿಜ. ಆದರೆ ಸಿದ್ಧರಾಮಯ್ಯನ ತಲೆಮಾರಿನವರು ಅಂಥ ಪ್ರಯತ್ನಗಳನ್ನು ಮಾಡಿಲ್ಲವೆಂದೇ ಹೇಳಬಹುದು. ಇದನ್ನು ಕುವೆಂಪು ಮಾದರಿ ಎನ್ನಲು ಅಡ್ಡಿಯಿಲ್ಲ.
ಎಂದಿನ ಶಾಂತಚಿತ್ತ ಕಾವ್ಯ ರಚನೆಗಳು ಇಲ್ಲಿ ಇಲ್ಲವೆಂದಲ್ಲ. ಅಂಥ ಅನೇಕ ರಚನೆಗಳು ಸಂಕಲನದಲ್ಲಿವೆ. ಹಲವು ಕವಿಭಾವಗಳು, ಕವಿತೆ ಕುರಿತ ಕವಿತೆ, ಭಾಷೆ ಕುರಿತ ಕವಿತೆ, ಶಬ್ದ ಅರ್ಥ ಭಾವಗಳನ್ನು ಕುರಿತ ಮೀಮಾಂಸೆ, ಸಾಕ್ಷಿ ಮಲಿಕ್ ಘಟನೆ, ಅತ್ಯಾಚಾರ ಮತ್ತು ಕೊಲೆಗೀಡಾದ ಸೌಜನ್ಯಳ ದುರಂತ, ಅಂಬೇಡ್ಕರ್ ಮತ್ತು ಎಂಡಿಎನ್ ಅವರ ವ್ಯಕ್ತಿ ಚಿತ್ರಗಳು, ಜಾಗತಿಕ ನೆಲೆಯಲ್ಲಿ ಸಂಭವಿಸುತ್ತಿರುವ ಯುದ್ಧಗಳು, ಪ್ರೀತಿ ಪ್ರೇಮ, ಆತ್ಮಾವಲೋಕನ, ಪಶ್ಚಾತ್ತಾಪ ಮುಂತಾದ ಹಲವುಹತ್ತು ವಸ್ತುಗಳು ಇಲ್ಲಿ ಒಳ್ಳೆಯ ಕವಿತೆಗಳಲ್ಲಿ ಮೈದುಂಬಿವೆ. ಅನೇಕ ಕವಿತೆಗಳ ಮೂಲ ಕವಿಯ ನೆನಪುಗಳನ್ನು, ಬಾಲ್ಯದ ಅನುಭವಗಳನ್ನು ಒಳಗೊಂಡಿವೆ. ನೆನಪು ಇಲ್ಲಿನ ಅನೇಕ ಕವಿತೆಗಳ ಸ್ಥಾಯೀಭಾವ. ಅದು ಕವಿಯ ನೆಡೆದು ಬಂದ ದಾರಿಯ ಏಳುಬೀಳುಗಳನ್ನು ತೆರೆದು ತೋರುತ್ತವೆ: `ಗತಿಸಿದ ದಾರಿಯಲ್ಲಿ ನೆನಪುಗಳ ಬಿತ್ತ ಒಂದಷ್ಟು ಕಳೆ ಒಂದಷ್ಟು ಬೆಳೆ’. ಕವಿಯ ದಕ್ಷಿಣ ಆಫ್ರಿಕಾ ಪ್ರವಾಸ ಕಾಲದ ಕೆಲವು ಚಿತ್ರಣ ಮತ್ತು ನೆನಪುಗಳು ಇಲ್ಲಿವೆ. ಮುಖ್ಯವಾಗಿ ಗಾಂಧೀಜಿಯವರ ಅಲ್ಲಿನ ಕೆಲವು ಘಟನೆಗಳನ್ನು ಇಂಡಿಯಾದ ಸಂದರ್ಭಕ್ಕೂ ಹೊಂದಿಸಿ ರಚಿಸಿರುವ ಕವಿತೆಗಳು ಗಮನಸೆಳೆಯುತ್ತವೆ. ಮುಖ್ಯವಾಗಿ ಗಾಂಧೀಜಿಯವರ ದಕ್ಷಿಣ ಆಫ್ರಿಕಾದ ರೈಲಿನ ಘಟನೆ ಅವರಲ್ಲುಂಟುಮಾಡಿದ ಚಾರಿತ್ರಿಕ ಬದಲಾವಣೆಯನ್ನು ಕವಿ `ಸತ್ಯಾಗ್ರಹಿ’ ಕವಿತೆಯಲ್ಲಿ ಗ್ರಹಿಸುತ್ತಾರೆ.
`ಭಾವ-ವಿಕಲ್ಪ’ ಒಂದು ಮನಮಿಡಿಯುವ ಆರ್ದ್ರ ಕವಿತೆ. ಚಿತ್ತ ವಿಚಲತೆಯ ಕ್ಷಣದಲ್ಲಿಯೇ ಆತ್ಮಾವಲೋಕನವಾಗುವ ಮತ್ತು ಆ ಕ್ಷಣದಲ್ಲಿಯೇ ತನ್ನ ತಪ್ಪಿಗೆ ಶಿಕ್ಷೆ ಪಡೆಯಬಯಸುವ ಸಂತನೊಬ್ಬನ ಚಿತ್ರಣವನ್ನು ಈ ಕವಿತೆಯಲ್ಲಿ ಕಾಣುತ್ತೇವೆ. ಕನ್ನಡ ಕಾವ್ಯದಲ್ಲಿ ಜನಪದರು, ತತ್ವವಪದಕಾರರಾದಿಯಾಗಿ ಕೆಲವು ಕವಿಗಳು `ಜೋಗಿ’ ಪ್ರತಿಮೆಯನ್ನು ವಿವಿಧ ಆಯಾಮಗಳಲ್ಲಿ ಕಂಡರಿಸಿದ್ದಾರೆ. ಸಿದ್ಧರಾಮಯ್ಯ ಕೂಡ ತನ್ನ ಈ ಹಿಂದಿನ ಕವಿತೆಗಳಲ್ಲಿ ಈ ಪ್ರತಿಮೆಗೆ ಮಾರುಹೋದವನೇ ಆಗಿದ್ದಾನೆ. ಪ್ರಸ್ತುತ ಸಂಕಲನದಲ್ಲೂ ಜೋಗಿ ಒಂದು ಹೊಸ ಸ್ವರೂಪದಲ್ಲಿ ನಿಂತು ನೆನಪಾಗಿ ಕಾಡುವವನಾಗಿದ್ದಾನೆ. `ಮುಂಬೈ ಬೀಚ್ನಲ್ಲಿ’ ಎಂಬ ಕವಿತೆಯಲ್ಲಿ ಮಾತಿನ ಮೂಲಕ ಪರಸ್ಪರರನ್ನು ಕಂಡುಕೊಳ್ಳುವ ಅರಿತುಕೊಳ್ಳುವ ಕ್ರಿಯೆ ಸಮುದ್ರದ ದಂಡೆಯಲ್ಲಿ ನಡೆಯುತ್ತದೆ. ಸಮುದ್ರದ ತೆರೆಗಳ ಭೋರ್ಗರೆತಗಳ ನಡುವೆ ಮಾತು ಮಂಥನಕ್ಕೊಳಗಾಗುವ ರೂಪಕವೊಂದು ಓದುಗನ ಮನಸ್ಸಿನಲ್ಲಿ ಉಳಿಯುವಂಥದು. `ಜಗದೀಶ” ಎಂಬ ಕಥನ ಕವಿತೆಯ ಒಂದು ಮಾದರಿಯೂ ಇಲ್ಲಿದೆ. ಅದು ಅಂತಿಮವಾಗಿ ಒಂದು ನೋವು ಪಶ್ಚಾತ್ತಾಪ, ದುರಂತದ ಚಿತ್ರಣವನ್ನು ನೀಡುತ್ತದೆ. ಇನ್ನೂ ಹಲವು ಅತ್ಯುತ್ತಮ ಕವಿತೆಗಳನ್ನು ಕುರಿತು ಪ್ರಸ್ತಾಪಿಸುವ ಹಂಬಲವನ್ನು ಹತ್ತಿಕ್ಕಿ ವಿರಾಮ ಹೇಳಬಯಸುತ್ತೇನೆ.
ಕವಿಗೆ ನಿರುದ್ವಿಘ್ನ ಶಾಂತ ಮನಸ್ಥಿತಿ ಪ್ರಾಪ್ತಿಯಾಗಲು ತನ್ನ ಸುತ್ತಲಿನ ವಾತಾವರಣವೂ ಶಾಂತಗೊಳ್ಳಬೇಕಾದೀತು. ಎಂಥದ್ದೇ ಕಾಲ ಬಂದರೂ ಕಾವ್ಯ ಸಿದ್ಧರಾಮಯ್ಯನಂಥ ಕವಿಗಳಲ್ಲಿ ತನ್ನ ಮಾರ್ಗವನ್ನು ಕಂಡುಕೊAಡೇ ತೀರುತ್ತದೆ. ನಮ್ಮ ದೀರ್ಘಕಾಲದ ಗೆಳೆತನವನ್ನು ಪ್ರೀತಿತುಂಬಿದ ಭಾವದಲ್ಲಿ ನೆನೆದು ನನ್ನಿಂದ ಕೆಲವು ಮಾತುಗಳನ್ನು ಬಯಸಿದ ಗೆಳೆಯ ನನ್ನ ಬಗ್ಗೆ ಅಪಾರ ಅಭಿಮಾನವನ್ನು ತಳೆದಿದ್ದಾನೆ.
- ಅಗ್ರಹಾರ ಕೃಷ್ಣಮೂರ್ತಿ
“ನಾನು ಎಂದೋ ಬರೆದು ಮರೆಯುತ್ತಿರುವ ಕಾಲಂ. ಇಂದೂ ಕೂಡ ನನ್ನ ಬೆನ್ನು ಹತ್ತಿರುವ ಕಾರಣಕ್ಕೆ, ಕೆಲವು ಉತ್ತಮವಾದ ಕಂತ...
""ಒಂದು ಪುರಾತನ ನೆಲದಲ್ಲಿ" ಪ್ರವಾಸ ಕಥನದ ರೂಪದಲ್ಲಿರುವ ಒಂದು ಮಿಶ್ರ ತಳಿಯ ಇತಿಹಾಸ. ಇದು ಈಜಿಪ್ಟ್ ಸ...
"ಪದ್ಮಾ ಅವರ ಕಥೆಗಳು ಮುಖ್ಯವಾಗಿ ಹದಿಹರೆಯದವರ ಸಂದಿಗ್ಧತೆಗಳು, ಆಧುನೀಕರಣ, ಗ್ರಾಹಕೀಕರಣ ಮತ್ತು ಜಾಗತೀಕರಣದೊಂದಿಗೆ...
©2024 Book Brahma Private Limited.