ಹೆಣ್ಣಿನ ಅಂತರಂಗದ ನೋವನ್ನು ಅರಿಯುವಲ್ಲಿ ಕವಿ ಯಶಸ್ವಿಯಾಗಿದ್ದಾರೆ


"ಸಮಾಜ ಈ ಮೈಲಿಗೆಯನ್ನು ಕೇವಲ ಋತುಮತಿ ಆದ ಹೆಣ್ಣಿಗೆ ಮೀಸಲಿಡಲಿಲ್ಲ ಹೆತ್ತ ಮಗುವನ್ನು, ಬಾಣಂತಿಯನ್ನು ಮೈಲಿಗೆಯೆಂದು ದೂರವಿಟ್ಟಿದೆ. ಅದನ್ನು "ಹುಟ್ಟಿನಿಂದ ಬರುವುದನ್ನು ಮೈಲಿಗೆ ಎನ್ನುವಿರಲ್ಲಾ ಹುಟ್ಟಿದ ಮೇಲೆ ಮೈಗಂಟಿಸಿಕೊಳ್ಳುವ ವ್ಯಸನಗಳಿಗೆ ಏನೆನ್ನಬೇಕು?" ಎಂದು ಪ್ರಶ್ನಿಸಿದ್ದಾರೆ ಕವಿ," ಎನ್ನುತ್ತಾರೆ ಶಿಲ್ಪಾ ಈಶ್ವರ್ ಭಟ್. ಅವರು ಅನಂತ್ ಕುಣಿಗಲ್ ಅವರ ‘ಮೂರನೆಯವಳು’ ಕವನಸಂಕಲನದ ಕುರಿತು ಬರೆದಿರುವ ವಿಮರ್ಶೆ.

ಬೆಳೆಯುತ್ತಾ ತಾಯಿಯ ಕಷ್ಟವನ್ನೇ ನೋಡುತ್ತಿದ್ದವರಿಗೆ ಹೆಣ್ಣಿನ ವಿವಿಧ ಭಾವನೆಗಳನ್ನು ತಮ್ಮ ಮೂರನೆಯವಳು ಕವನ ಸಂಕಲನವನ್ನು ಐದು ಭಾಗದಲ್ಲಿ ಬರೆದಿದ್ದು ಓದುಗರಿಗೆ ಖಂಡಿತವಾಗಿ ಇಷ್ಟವಾಗುತ್ತದೆ. ಹೆಣ್ಣಿನ ಅನೇಕ ಸೂಕ್ಷಾತಿಸೂಕ್ಷ್ಮ ಸಂಕಟಗಳನ್ನು ವಿಷಯಗಳನ್ನು ತಮ್ಮ ಕವನಗಳಲ್ಲಿ ಬಿಂಬಿಸಿರುವುದು ಕಂಡು ಬರುತ್ತದೆ.

ಮೊದಲನೆಯ ಭಾಗದಲ್ಲಿ ಹೆಣ್ಣಿನ ದೃಷ್ಟಿ ಹಾಗೂ ಸಮಾಜದ ದೃಷ್ಟಿಯಿಂದ ಹೆಣ್ಣು ಹೇಗೆ ಎಂಬುದನ್ನು ಬರೆದಿದ್ದಾರೆ. "ಮೈಲಿಗೆ" ಎಂಬ ಕವನದಲ್ಲಿ ಹೆಣ್ಣಿನ ನೈಸರ್ಗಿಕ ಕ್ರಿಯೆಯಾದ ಋತುಮತಿಯಾಗುವುದರ ಬಗ್ಗೆ ಸಮಾಜದ ದೃಷ್ಟಿ ಹಾಗೂ ಹೆಣ್ಣಿನ ದೃಷ್ಟಿ ಬಿಂಬಿಸಿದ್ದಾರೆ.

"ಋತುಮತಿಯಾಗುವುದು ಮೈಲಿಗೆಯಂತೆ
ಸುಳ್ಳು ಹೇಳಿ ಬದುಕುವುದು ಮೈಲಿಗೆಯಲದಲ್ಲವೇ" ಎಂದು ಹೆಣ್ಣಿನ ಅಂತರಂಗದ ನೋವನ್ನು ಅರಿಯುವಲ್ಲಿ ಕವಿ ಅನಂತ ಅವರು ಯಶಸ್ವಿ ಆಗಿದ್ದಾರೆ.

ಸಮಾಜ ಈ ಮೈಲಿಗೆಯನ್ನು ಕೇವಲ ಋತುಮತಿ ಆದ ಹೆಣ್ಣಿಗೆ ಮೀಸಲಿಡಲಿಲ್ಲ ಹೆತ್ತ ಮಗುವನ್ನು , ಬಾಣಂತಿಯನ್ನು ಮೈಲಿಗೆಯೆಂದು ದೂರವಿಟ್ಟಿದೆ. ಅದನ್ನು " ಹುಟ್ಟಿನಿಂದ ಬರುವುದನ್ನು ಮೈಲಿಗೆ ಎನ್ನುವಿರಲ್ಲಾ ಹುಟ್ಟಿದ ಮೇಲೆ ಮೈಗಂಟಿಸಿಕೊಳ್ಳುವ ವ್ಯಸನಗಳಿಗೆ ಏನೆನ್ನಬೇಕು ?" ಎಂದು ಪ್ರಶ್ನಿಸಿದ್ದಾರೆ ಕವಿ.

"ಮಡಿ ಇರಬೇಕಾದದ್ದು ಸತ್ಯ, ಸರಳತೆ, ಸಜ್ಜನತೆಯಲ್ಲಿ
ಮೈಲಿಗೆ ಕಾಣಬೇಕಾದ್ದು ಕಳ್ಳತನ, ಮೋಸ ವಂಚನೆ ಕಪಟಗಳಲ್ಲಿ
ಲೋಕದ ದೃಷ್ಟಿಯಲ್ಲಿ ಹೀನಳಾದ ಹೆಣ್ಣಿನ ರಕ್ತದಲ್ಲಲ್ಲ" ಎಂದು ಹೆಣ್ಣಿನ ಪರವಾಗಿ ಹೇಳಿದ್ದಾರೆ ಕವಿ.

ಇನ್ನು ಎರಡನೆಯ ಭಾಗದಲ್ಲಿ ತಾಯಿಯ ನೋವನ್ನು, ಅವಳ ನೋವು, ನಲಿವು, ತ್ಯಾಗ ಇವುಗಳನ್ನು ಬಿಂಬಿಸಿದ್ದಾರೆ.

ಎರಡನೇ ಭಾಗದಲ್ಲಿ ಇರುವ ಐದು ಕವನಗಳೂ ಮನಮುಟ್ಟುವಂತೆ ಇದೆ.
ಅದರಲ್ಲೂ "ನನ್ನವಳು" ಎಂಬುದು ಅರ್ಧಾಂಗಿ/ಪ್ರೇಯಸಿಯ ಬಗ್ಗೆ ಹೇಳಿರಬಹುದು ಎಂದು ಭಾವಿಸಿದರೆ ತಪ್ಪಾಗುತ್ತದೆ.
ಅಮ್ಮನಿಗೆ ನನ್ನವಳು ಎಂದಿರುವ ಕವಿ ಅಮ್ಮನ ಕಷ್ಟ, ನೋವುಗಳನ್ನು ಸುಂದರವಾದ ಹೋಲಿಕೆಯೊಂದಿಗೆ ವರ್ಣಿಸಿದ್ದಾರೆ.

"ನವಿಲುಗರಿಯ ನೆರಿಗೆಯ
ಎಳ ತೆಂಗಿನ ಮಂಡೆಯ
ಸೋತ ಕಣ್ಣುಗಳ ಸುತ್ತ
ಕಪ್ಪಂಚಿನ ಕಂದಕದವಳು
ನನ್ನವಳು"
ಎಂದು ಬಿಂಬಿಸಿರುವ ಕವಿ ತಾಯಿಯ ತ್ಯಾಗವನ್ನು ಮನಗಂಡಿದ್ದಾರೆ. ನವಿಲುಗರಿಯ ನೆರಿಗೆ ಎಂದರೆ ಬದುಕಿನ ಬೇಗೆಯಲ್ಲಿ ಬಳಲಿದ ಆಕೆಯ ಮೋರೆಯಲ್ಲಿ ಬಂದ ಸುಕ್ಕಿಗೆ ಹೇಳಿದ್ದಾರೆ. ಪ್ರತಿ ಹಂತದಲ್ಲಿ ತಾಯ ನೋವು ಕಂಡಿರುವ ಅವರಿಗೆ ತಾಯಿ ಬಗ್ಗೆ ಅಪಾರವಾದ ಗೌರವ.

"ನೋವ ತಿಂದವಳು
ನಲಿವ ಹಂಚುವಳು
ಶಾಂತಿ, ನೀತಿ ಸಾರಿದವಳು
ಸತ್ಯ-ನ್ಯಾಯ ಎಂದವಳು
ಜಗಕೆ ಸುಖವ ಕೋರಿದವಳು
ನನ್ನವಳು! ನನ್ನ ಹೆತ್ತವಳು
ನನಗಾಗಿಯೇ ಉಸಿರಾಡುತಿಹಳು
ನನ್ನವಳು!"
ಎಂದು ಹೇಳಿರುವ ಕವಿಗೆ ಆತನ ತಾಯಿಯ ಮೇಲೆ ಆತನಿಗಿರುವ ಪ್ರೀತಿ, ಗೌರವವನ್ನು ಸೂಚಿಸುತ್ತದೆ.

ಇನ್ನು ಆರು ಕವನಗಳಿರುವ ಮೂರನೆಯ ಭಾಗದಲ್ಲಿ ಹದಿಹರೆಯದ ಮನಸ್ಥಿತಿಯ ಬಗ್ಗೆ ಬರೆದಿದ್ದಾರೆ. "ಹೊಸಾವತಾರ" ಎಂಬ ಕವನದಲ್ಲಿ ಇಂದಿನ ಯುವ ಜನತೆಯ ಮನಸ್ಥಿತಿಯ ಬಗ್ಗೆ ಚಿತ್ರಿತವಾಗಿದೆ.
"ಬಸ್ಸಿನಲ್ಲಿ ಹೋಗುವಾಗ ಅಜ್ಜಿ ಅಜ್ಜಂದಿರು ಕಂಡರೆ
ಯಾವುದೋ ಪೇಪರ್ ಓದುವವರಂತೆ
ಮುಖಮುಚ್ಚುವ ನಾವುಗಳು
ಹರೆಯ ಹುಡುಗಿಯರ ಕಂಡರೆ ಅದೇಕೆ
ಸೀಟು ಬಿಟ್ಟು ಸಾಧುವಿನಂತೆ ಹುಸಿನಗು ಬೀರುತ್ತಾ ನಿಲ್ಲುತ್ತೇವೆ..."
ಎಂಬುದರಲ್ಲಿ ಹರೆಯದ ಮನಸ್ಥಿತಿಯ ಬಗ್ಗೆ ತಿಳಿಯುತ್ತದೆ

ಮತ್ತೆ ಆರು ಕವನಗಳಿರುವ ನಾಲ್ಕನೇ ಭಾಗದಲ್ಲಿ ಪ್ರತಿ ಸಂಬಂಧಗಳಿಗೂ ಕೊಡುವ ಪ್ರಾಮುಖ್ಯತೆ ಬಗ್ಗೆ ಹೇಳಲಾಗಿದೆ. ಅದರಲ್ಲೂ "ಹೆಣ್ಣೆಂದರೆ ಅಷ್ಟೇ ಸಾಕೆ?" ಈ ಕವನದಲ್ಲಿ ಹೆಣ್ಣು ಅಣ್ಣನ ಮುದ್ದಿನ ತಂಗಿಯಾಗಿ, ಅಕ್ಕನ ಪುಟ್ಟ ತಂಗಿಯಾಗಿ, ತಮ್ಮನಿಗೆ ಆಜ್ಞೆ ಮಾಡುವ ಅಕ್ಕನಾಗಿ ಹೇಗಿರುತ್ತಾಳೆ ಎಂದು ವರ್ಣಿಸಲಾಗಿದೆ.

ಕೊನೆಯ ಭಾಗ ಅಂದರೆ ಐದನೇ ಭಾಗದಲ್ಲಿ ಇಪ್ಪತೇಳು ಕವನಗಳಿದೆ. ಅದರಲ್ಲಿ ಈಗಿನವರ ಪ್ರೀತಿ, ಕಿತ್ತಾಟ ಹೀಗೆ ಹಲವಾರು ಭಾವನೆಗಳನ್ನು ಹಿಡಿದಿಟ್ಟಿದ್ದಾರೆ ಕವಿಗಳು. ಪ್ರೇಮಾನುರಾಗವನ್ನು ಅವರವರೇ ಓದಿ ಆಸ್ವಾದಿಸಿದರೆ ಮತ್ತಷ್ಟು ಸೊಗಸು.

ಈ ಕವನ ಸಂಕಲನದಲ್ಲಿ ನನಗೆ ಮೊದಲನೆಯ ಭಾಗ, ಎರಡನೇ ಭಾಗ ಹಾಗೂ ಕೊನೆಯ ಭಾಗ ಇಷ್ಟ ಆಯ್ತು. ಮೂರನೆಯ ಭಾಗದಲ್ಲಿ ಹೊಸವತಾರವನ್ನು ಅದೇ ಭಾವಕ್ಕೆ ದಕ್ಕೆ ಆಗದಂತೆ ಸ್ವಲ್ಪ ಬೇರೆ ರೀತಿಯಲ್ಲಿ ವ್ಯಕ್ತ ಪಡಿಸಬಹುದಿತ್ತೇನೋ ಎಂದು ನನಗೆ ವೈಯುಕ್ತಿಕವಾಗಿ ಅನಿಸಿತು.

- ಶಿಲ್ಪಾ ಈಶ್ವರ್ ಭಟ್

MORE FEATURES

ಆತ್ಮಕಥೆ: ವ್ಯಕ್ತಿಯಿಂದ ಬರೆಯಲ್ಪಟ್ಟ ವ್ಯಕ್ತಿಯ ಜೀವನದ ಖಾತೆ

06-10-2024 ಬೆಂಗಳೂರು

“ಆತ್ಮಚರಿತ್ರೆ ಎಂದರೆ ಒಬ್ಬ ವ್ಯಕ್ತಿಯು ಕೆಲವು ನಿಯಮಗಳಿಗೆ ಬದ್ಧನಾಗಿ ತನ್ನ ಸ್ವಂತ ಜೀವನ ಕಥೆಯನ್ನು ಹೇಳುತ್ತಾನೆ...

ಕಥೆಗಳು ಮನುಷ್ಯನ ಜೀವನವೆ ಶ್ರೇಷ್ಠವೆಂದು ಧ್ವನಿಸುತ್ತವೆ‌

06-10-2024 ಬೆಂಗಳೂರು

"ಪಾತ್ರಗಳನ್ನು, ಅವುಗಳಿಗೆ ಸಂಬಂಧ ಪಟ್ಟ ಕಥಾನಕಗಳ ಪ್ರತ್ಯಕ್ಷ ಸಾಕ್ಷಿ ಇವರಾದ್ದರಿಂದ ಕಥೆಗಳಿಗೆ ಅಧಿಕೃತತೆ ಬಂದಿದೆ...

ಸಂಬಂಧಗಳ ಒಳಸುಳಿಗಳ ಕಥೆಗಾರ್ತಿ ನೇಮಿಚಂದ್ರ

06-10-2024 ಬೆಂಗಳೂರು

“ಸಂಬಂಧಗಳ ಒಳಸುಳಿಗಳ ಕಥೆಗಾರ್ತಿ ನೇಮಿಚಂದ್ರ. ಇಲ್ಲಿನ ಕಥೆಗಳನ್ನು ಬರೆದ ಕಾಲಮಾನದಲ್ಲಿ ಮುಂದೆ ಮುಂದೆ ಬಂದಂತೆಲ್ಲ...