ಈ ಪುಸ್ತಕ ಇರುವುದು ಒಂದೇ ಸಂಗತಿಯ ಸುತ್ತ


“ಈ ಪುಸ್ತಕದ ಬಹುಪಾಲು ವಿಚಾರಗಳು ಗ್ರಂಥಋಣದಲ್ಲಿ ಸೂಚಿಸಿರುವ ಪುಸ್ತಕಗಳು ಮಾತ್ರವಲ್ಲದೆ ಇನ್ನೂ ಅನೇಕ ಪುಸ್ತಕಗಳಿಂದ ಸಂಗ್ರಹಿಸಿದಂಥವು,” ಎನ್ನುತ್ತಾರೆ ಕೆ. ಸತ್ಯ ನಾರಾಯಣ ಅವರು ತಮ್ಮ "ಓದುವವರೆಲ್ಲ ಓದುಗರಲ್ಲ!" ಕೃತಿಗೆ ಬರೆದ ಲೇಖಕರ ಮಾತು.

1988ರಲ್ಲಿ ನಾನು 'ಓದುವ ಜನರು' ಎಂಬ ಒಂದು ಪ್ರಬಂಧ ಬರೆದಿದ್ದೆ. ಅದು 'ನಮ್ಮ ಪ್ರೀತಿಯ ಕ್ರಿಕೆಟ್' ಸಂಕಲನದಲ್ಲಿ ಪ್ರಕಟವಾಯಿತು. ಅಂದಿನಿಂದಲೂ ನನಗೆ ಜನರು ಓದುವ ಪುಸ್ತಕಗಳಿಗಿಂತ, ಪುಸ್ತಕಗಳನ್ನು ಓದುವ ಜನರ ಬಗ್ಗೆಯೇ ಹೆಚ್ಚು ಕುತೂಹಲ. ಇದು ಕುಂಡಲಿಯಲ್ಲೇ ಇರುವ ಬಾಲದೋಷ.

ಇದಕ್ಕೆ ನಾನು ಬೆಳದು ಬಂದ ರೀತಿಯೇ ಕಾರಣವಾಗಿರಬೇಕು. ಯೌವ್ವನದ ದಿನಗಳಿಂದಲೂ ನಾನು ನಾನಾ ರೀತಿಯ ಓದುಗರನ್ನು ನೋಡುತ್ತಾ ಬಂದಿದ್ದೇನೆ. ಓದುವ ರೀತಿಗಳು, ಓದಬೇಕಾದ ಪುಸ್ತಕಗಳು ನನಗೆ ಗೊತ್ತಾಗುತ್ತಿದ್ದುದು ಇಂತಹ ಜನರಿಂದ. ಮುಂದೆ ಕೂಡ ಓದುವ ರೀತಿಗಳು ನನಗೆ ಗೊತ್ತಾಗುತ್ತಿದ್ದುದು ಸಮಾಜದ ಬೇರೆ ಬೇರೆ ವರ್ಗಗಳಿಗೆ ಸೇರಿದ ಜನರಿಂದ. 1980ರ ನಂತರ ಲೇಖಕನಾಗುವ ಭ್ರಮೆ ಹತ್ತಿಕೊಂಡ ಮೇಲೆ, ಸಾಹಿತ್ಯ ವಲಯದ ಓದುವ ರೀತಿಯನ್ನು ಅನುಸರಿಸಿದ್ದು, ಅನುಕರಿಸಿದ್ದು ನಿಜ. ಆದರೆ ಓದಿನ ಮೂಲಕ್ಕೆ ಇದೂ ಒಂದು ವಲಯವಾಗಿತ್ತೇ ಹೊರತು ಎಂದೂ ಇದೊಂದೇ ವಲಯವಾಗಿರಲಿಲ್ಲ. ಸಮಾಜವಿಜ್ಞಾನದ ಹಿನ್ನೆಲೆಯಿಂದ ಬಂದದ್ದು, ಕಾಲೇಜು ಅಧ್ಯಾಪಕನಾಗದೆ ಹೋದದ್ದು, ದೇಶದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡಿದ್ದು, ಮಾಡುತ್ತಿದ್ದ ಕೆಲಸ ಕೂಡ ಸಾಹಿತ್ಯಕ ಓದಿನ ರೀತಿಯಲ್ಲದೆ ಬೇರೆ ಬೇರೆ ರೀತಿಯ ಓದುಗಳನ್ನು ಬಯಸುತ್ತಿದ್ದುದು, ಇದೆಲ್ಲವೂ ಸೇರಿಕೊಂಡ ಓದು ವೈವಿಧ್ಯಮಯವಾಯಿತು. ಓದಿನ ವಿದ್ಯಮಾನದ ಬಗ್ಗೆ ಕುತೂಹಲ ಮೂಡಿ ಅಭ್ಯಾಸ ಮಾಡತೊಡಗಿದೆ. 2013ರಲ್ಲಿ ಪ್ರಕಟಿಸಿದ 'ಸುಮ್ಮನೆ ಓದೋಣ', ಈ ಅಧ್ಯಯನದ ಬರವಣಿಗೆಯ ಫಲ. ಪುಸ್ತಕ ಜನಪ್ರಿಯವಾಯಿತು. ಪಂಡಿತರು-ಪಾಮರರಿಂದ ಪ್ರಶಂಸೆ ದೊರಕಿತು. ಮಾಧ್ಯಮಗಳಲ್ಲಿ ಪ್ರಚಾರವಿಲ್ಲದೆ, ಸಮೀಕ್ಷೆಯಿಲ್ಲದೆ ಕೂಡ ಈ ಪುಸ್ತಕ ನಾಡಿನಾದ್ಯಂತ ಓದುಗರನ್ನು ಪಡೆಯಿತು. ಮಾರಾಟ ಕೂಡ ಆಯಿತು.

ಈ ಪುಸ್ತಕವನ್ನು ಹಾಗೇ ಮರುಮುದ್ರಿಸುವುದು ಬೇಡ, ಓದುವಿಕೆ ಕುರಿತು ಇನ್ನೂ ಹೊಸ ಲೇಖನಗಳನ್ನು ಬರೆಯಬೇಕು, ಮರುಓದಿನ ಮಹತ್ವ ಕುರಿತು ಗಣ್ಯರನ್ನೆಲ್ಲ ಸಂದರ್ಶಿಸಿ ಒಂದು ಗ್ರಂಥ ರಚಿಸಬೇಕೆಂಬ ಆಸೆ. ಸಂಪನ್ಮೂಲ, ಸಂಪರ್ಕಗಳ ಕೊರತೆಯಿಂದಾಗಿ ಹಾಗೇ ಉಳಿಯಿತು. ಸಂಬಂಧಪಟ್ಟ ಗ್ರಂಥಗಳ ಅಭ್ಯಾಸ, ಟಿಪ್ಪಣಿ ಮಾಡಿಕೊಳ್ಳುವುದು ಮುಂದುವರಿದೇ ಇತ್ತು. ಅದೆಲ್ಲದರ ಫಲಶ್ರುತಿ ಈ ಪುಸ್ತಕ.

ಇಲ್ಲಿಯ ಪ್ರತಿಯೊಂದು ಲೇಖನ ಸೂಚಿಸುವ ವಿಷಯವೂ ಸ್ವತಂತ್ರ ಗ್ರಂಥವಾಗುವುದಕ್ಕೆ ಆರ್ಹವಾದದ್ದು. ಗಂಭೀರ, ವೃತ್ತಿಪರ ಸಾಹಿತಿಗಳು ಮುಂದೆ ಎಂದಾದರೂ ಇಂತಹ ಗ್ರಂಥಗಳನ್ನು

ರಚಿಸಬಹುದು. ಓದುಗರ ಗಮನವನ್ನು ಈ ವಿದ್ಯಮಾನಗಳ ಬಗ್ಗೆ ಸೆಳೆಯಲು ಅನುವಾಗುವಂತಹ, ಓದುಗರಿಗೆ ಇನ್ನೂ ಆಳವಾಗಿ ಓದಲು ಪ್ರಚೋದಿಸುವಂತಹ ಬರಹಗಳನ್ನು ಮಾಡಿದರೆ ಸಾಕೆಂದು ನಿರ್ಧರಿಸಿದೆ. ಹಾಗಾಗಿ ಲೇಖನದ ಧಾಟಿ ಪ್ರಚೋದಕವಾಗಿದೆ ಓದುಗರಿಗೆ ಸೂಚನೆಗಳನ್ನು ಮಾತ್ರ ನೀಡುತ್ತದೆ. ಎಲ್ಲ ಲೇಖನಗಳನ್ನೂ ಓದಿದ ಮೇಲೆ ಓದುಗನ ಮನಸ್ಸಿನಲ್ಲಿ ಓದುವಿಕೆಯನ್ನು ಕುರಿತು ಒಂದು ವಿನ್ಯಾಸ ಮೂಡಬಹುದು, ಮೂಡುತ್ತದೆ ಎಂಬ ಭರವಸೆ ನನಗಿದೆ.

ಈ ಪುಸ್ತಕದ ಲೇಖಕ ಎಂದು ನಾನು ಗುರುತಿಸಿಕೊಂಡಿದ್ದರೂ ಅದು ತಾಂತ್ರಿಕ ಕಾರಣಕ್ಕಾಗಿ ಮಾತ್ರ ಈ ಪುಸ್ತಕದ ಬಹುಪಾಲು ವಿಚಾರಗಳು ಗ್ರಂಥಋಣದಲ್ಲಿ ಸೂಚಿಸಿರುವ ಪುಸ್ತಕಗಳು ಮಾತ್ರವಲ್ಲದೆ ಇನ್ನೂ ಅನೇಕ ಪುಸ್ತಕಗಳಿಂದ ಸಂಗ್ರಹಿಸಿದಂಥವು. ಪುಸ್ತಕದ ಒಟ್ಟು ವಿನ್ಯಾಸವನ್ನು ರೂಪಿಸಿ ಕೊಳ್ಳುವಾಗಲೂ ಕೂಡ ಕೆಲವು ಪುಸ್ತಕಗಳನ್ನು ನಿರ್ದಿಷ್ಟವಾಗಿ ಗಮನಿಸಲಾಗಿದೆ. ಒಳನೋಟಗಳಿಗೆ ಸಂಬಂಧಿಸಿದ ಹಾಗೆ ಹೇಳುವುದಾದರೆ, ಒಳನೋಟಗಳ ವಾರಸುದಾರರು ಹಲವು ಅತ್ಮೀಯ ಓದುಗರು. ಈ ಓದುಗರು, ಅವರು ಓದುವ ರೀತಿನೀತಿಗಳಿಗೆ ಸಂಬಂಧಿಸಿದ ಹಾಗೆ ಹೇಳಿಕೊಂಡ ವಿಚಾರಗಳೆಲ್ಲ ಇಲ್ಲಿ ಅಡಕವಾಗಿದೆ. ಇಷ್ಟೆಲ್ಲಾ ಕಡ ಪಡೆದಿದ್ದರೂ ಇದನ್ನು ಬರೆಯುವಾಗ ನನಗೆ ತುಂಬಾ ಸಂತೋಷವಾಗಿದೆ. ಹಾಗಾಗಿ, ನಾನು ಇದರ ಲೇಖಕ ಎಂದು ಹೇಳಿಕೊಳ್ಳಬಹುದು ಅಷ್ಟೇ.

ಈ ಪುಸ್ತಕ ಇರುವುದು ಒಂದೇ ಸಂಗತಿಯ ಸುತ್ತ, ಓದುವಿಕೆ ಮತ್ತು ಓದುಗರ ಪ್ರಪಂಚ ಕುರಿತಾದದ್ದು. ಇಲ್ಲಿಯ ಲೇಖನಗಳನ್ನು ಒಟ್ಟಿಗೇ ಬರೆದದ್ದರಿಂದ ಬರವಣಿಗೆಯಲ್ಲಿ, ವಿಚಾರಗಳಲ್ಲಿ ಪುನರುಕ್ತಿ ಇರುವುದು ಸಹಜ. ಇದನ್ನು ಓದುಗರು ಮನ್ನಿಸಬೇಕು. ಅಲ್ಲದೆ, ಒಂದು ಲೇಖನದಲ್ಲಿ ಪ್ರಶ್ನೆಯಾಗಿರುವುದು, ಇನ್ನೊಂದು ಲೇಖನದಲ್ಲಿ ಒಳನೋಟವಾಗಿರುತ್ತದೆ. ಮತ್ತೊಂದು ಲೇಖನದಲ್ಲಿ ಉತ್ತರವೋ, ಅನುಮಾನವೋ, ಅಸಮಾಧಾನವೋ ಆಗುತ್ತದೆ. ಬರವಣಿಗೆಯ ಈ ಸ್ವರೂಪ, ಉದ್ದೇಶಪೂರ್ವಕವಾದದ್ದು. ಹೀಗೆ ಬರೆಯುವುದರ ಹಿಂದೆ ಒಂದು ಕಿಡಿಗೇಡಿತನವೂ ಇದೆ. ಓದುಗರು ಈ ಪುಸ್ತಕದ ವಿಚಾರಗಳನ್ನು ತಮ್ಮ ಓದಿನಲ್ಲಿ, ಪ್ರೀತಿಯಲ್ಲಿ, ಅಸಮ್ಮತಿಯಲ್ಲಿ ಮುಂದುವರೆಸುವಂತೆ ಆಹ್ವಾನಿಸುವುದೇ ಈ ಉದ್ದೇಶ. ಈ ತುಂಟತನವನ್ನು ಓದುಗರು ಮೆಚ್ಚಬೇಕೆಂದು ಕೋರಿಕೆ. ಪೂರ್ಣತೆಯ ಪ್ರಸಾದವನ್ನು ಈ ಪುಸ್ತಕ ಓದುಗರಿಂದಲೇ ಪಡೆಯುತ್ತದೆ.

- ಕೆ. ಸತ್ಯ ನಾರಾಯಣ

MORE FEATURES

ಎಲ್ಲರಿಗೂ ಅವರವರ ಆವರಣದ ಅರಿವಿದೆ

07-01-2025 ಬೆಂಗಳೂರು

"ಇಲ್ಲಿ ಜಾತಿ, ಧರ್ಮ ಯಾರನ್ನೂ ದೊಡ್ಡವರು, ಚಿಕ್ಕವರನ್ನಾಗಿ ಮಾಡಿಲ್ಲ. ತಮ್ಮ ಮತ ತಮಗೆ ಹಾಕುವ ಕಟ್ಟುಪಾಡುಗಳಿದ್ದಾಗ...

‘ಕೊನೆಯ ಕುಣಿಕೆ’ ಹೆಸರಿನಲ್ಲಿ ಭುಟ್ಟೊ ನಾಟಕ..

06-01-2025 ಬೆಂಗಳೂರು

“ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದ...

ಸುಳಿವುಗಳನ್ನು ಓದಿ ಸೂಕ್ತ ಉತ್ತರ ಕಂಡುಹಿಡಿಯಬೇಕು

06-01-2025 ಬೆಂಗಳೂರು

“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...