Date: 12-12-2024
Location: ಬೆಂಗಳೂರು
ಕೇರಳ: ಹಿರಿಯ ಬಂಡಾಯ ಸಾಹಿತಿ, ಚಿಂತಕ, ಕನ್ನಡದ ದೇವನೂರ ಮಹಾದೇವ ಅವರಿಗೆ ತಮಿಳುನಾಡು ಸರ್ಕಾರ ಘೋಷಿಸಿದ್ದ 2024ನೇ ಸಾಲಿನ ‘ವೈಕಂ ಪ್ರಶಸ್ತಿ’ಯನ್ನು ತಮಿಳನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗೌರವ ಉಪಸ್ಥಿತಿಯಲ್ಲಿ 2024 ಡಿ. 12 ಗುರುವಾರದಂದು ಪ್ರದಾನಿಸಿದರು.
ಕೇರಳದ ವೈಕಂನಲ್ಲಿ ಹಮ್ಮಿಕೊಂಡಿದ್ದ ವೈಕಂ ಹೋರಾಟದಲ್ಲಿ ಪೆರಿಯಾರ್ ಪಾಲ್ಗೊಂಡಿದ್ದರ ಶತಮಾನೋತ್ಸವ ಸಮಾರೋಪ ಸಮಾರಂಭ ಹಾಗೂ ಪೆರಿಯಾರ್ ಸ್ಮಾರಕ ಉದ್ಘಾಟನೆಯ ಕಾರ್ಯಕ್ರಮದಲ್ಲಿ ‘ವೈ.ಕಂ’ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಈ ಪ್ರಶಸ್ತಿಯು ದಮನಿತ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ವ್ಯಕ್ತಿಗಳಿಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕಳೆದ ವರ್ಷ ವೈಕಂ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ನಡೆದ ಸಮಾರಂಭದಲ್ಲಿ ಘೋಷಿಸಿದ್ದರು. ಶೋಷಿತರ ಏಳಿಗೆಗೆ ಶ್ರಮಿಸಿದ ಗಣ್ಯರಿಗೆ ಗೌರವ ನೀಡುವುದೇ ಪ್ರಶಸ್ತಿಯ ಮುಖ್ಯ ಉದ್ದೇಶವಾಗಿದ್ದು, ಇಂದು ವೈಕಂ ಚಳವಳಿಯ ನೂರು ವರ್ಷಗಳ ಜ್ಞಾಪಕಾರ್ಥವಾಗಿ 'ವೈಕಂ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿಯನ್ನು ಸ್ವೀಕರಿಸಿದ ದೇವನೂರ ಮಹಾದೇವ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ‘ಆರ್.ಎಸ್.ಎಸ್ ಆಳ ಅಗಲ’ ಪುಸ್ತಕದ ಇಂಗ್ಲಿಷ್ ಮತ್ತು ಮಲೆಯಾಳಂ ಅವತರಣಿಕೆಯನ್ನು ಹಾಗೂ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಕನ್ನಡ, ಇಂಗ್ಲಿಷ್, ತಮಿಳು ಅವತರಣಿಕೆಯನ್ನು ನೀಡಿದರು.
ಪ್ರಶಸ್ತಿಯು 5 ಲಕ್ಷ ನಗದು ಮತ್ತು ಸ್ವರ್ಣಲೇಪಿತ ಪದಕವನ್ನು ಒಳಗೊಂಡಿದೆ.
ವೈಕಂ ಚಳುವಳಿ: ವೈಕೋಮ್ ಸತ್ಯಾಗ್ರಹವು 1924ರ ಮಾರ್ಚ್ 30 ರಿಂದ 1925ರ ನವೆಂಬರ್ 23ರವರೆಗೆ ನಡೆದಿದ್ದು, ಇದು ತಿರುವಾಂಕೂರು ಸಾಮ್ರಾಜ್ಯದ ವೈಕೋಮ್ ದೇವಾಲಯದ ನಿಷೇಧಿತ ಪ್ರದೇಶದ ಪ್ರವೇಶಕ್ಕೆ ನಡೆದ ಅಹಿಂಸಾತ್ಮಕ ಆಂದೋಲನವಾಗಿತ್ತು. ಕಾಂಗ್ರೆಸ್ ಮುಖಂಡರಾದ ಟಿ.ಕೆ ಮಾಧವನ್, ಕೆ. ಕೇಲಪ್ಪನ್, ಕೆ. ಪಿ ಕೇಶವ ಮೆನನ್ ಚಳುವಳಿಯ ಮೂಲ ಆಯೋಜಕರಾಗಿದ್ದು, ನಂತರದಲ್ಲಿ ಜಾರ್ಜ್ ಜೋಸೆಫ್, ರಾಮಸಾಮಿ "ಪೆರಿಯಾರ್" ಸೇರಿದಂತೆ ಶೋಷಿತ ವರ್ಗಕ್ಕೆ ಸೇರಿದ ವಿವಿಧ ಸಮುದಾಯಗಳು, ವಿವಿಧ ಕಾರ್ಯಕರ್ತರು ನೀಡಿದ ಸಂಪೂರ್ಣ ಬೆಂಬಲದೊಂದಿಗೆ ವೈಕೋಮ್ ಚಳುವಳಿಯು ಪ್ರಸಿದ್ಧಿಯಾಯಿತು.
ಚಳುವಳಿಯ ಮೊದಲ ಗೆಲುವಾಗಿ ತಿರುವಾಂಕೂರು ಸರ್ಕಾರವು ದೇವಾಲಯದ ಬಳಿ ಕೆಳಜಾತಿಯವರ, ಶೋಷಿತರ ಒಡಾಟಕ್ಕೆ, ಉಪಯೋಗಕ್ಕೆ ಹೊಸ ರಸ್ತೆಗಳನ್ನು ನಿರ್ಮಿಸಿತು. ಆದರೆ ವೈಕೋಮ್ ದೇವಾಲಯವು ಕೆಳಜಾತಿಯವರ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಿತ್ತು. 1925ರಲ್ಲಿ ವೈಕೋಮ್ ಗೆ ಭೇಟಿ ನೀಡುವ ಮಹಾತ್ಮ ಗಾಂಧಿಯವರು, ವೈಕೋಮ್ ಚಳುವಳಿಯ ಹಾಗೂ ಸರ್ಕಾರದ ನಡುವೆ ಮಧ್ಯಸ್ಥಿಕೆಯನ್ನು ವಹಿಸಿ ರಾಜಪ್ರತಿನಿಧಿ ಸೇತು ಲಕ್ಷ್ಮಿ ಬಾಯಿಯೊಂದಿಗೆ ರಾಜಿ ಮಾಡಿಸಿದರು. ಚಳುವಳಿಯಲ್ಲಿ ಬಂಧಿಸಲ್ಪಟ್ಟ ಎಲ್ಲರನ್ನು ಬಿಡುಗಡೆ ಮಾಡಿದರು. ಅಷ್ಟೇ ಅಲ್ಲದೆ ವೈಕಂ ಮಹಾದೇವ ದೇವಸ್ಥಾನಕ್ಕೆ ಹೋಗುವ ಉತ್ತರ, ದಕ್ಷಿಣ ಮತ್ತು ಪಶ್ಚಿಮ ಸಾರ್ವಜನಿಕ ರಸ್ತೆಗಳನ್ನು ಎಲ್ಲರಿಗೂ ತೆರೆದರು. ಆದರೆ ದೇವಾಲಯದ ಪೂರ್ವ ರಸ್ತೆಯನ್ನು ತೆರೆಯಲು ಲಕ್ಷ್ಮಿ ಬಾಯಿ ನಿರಾಕರಿಸಿದರು. ಆದರೆ ಸರ್ಕಾರದ ಈ ನಡೆಯನ್ನು ರಾಮಸಾಮಿ "ಪೆರಿಯಾರ್" ಸೇರಿದಂತೆ ಹಲವರು ಟೀಕಿಸಿದರು.
ನಿರಂತರವಾದ ಟೀಕೆಗಳಿಂದ 1936ರಲ್ಲಿ ವೈಕೋಮ್ ದೇವಾಲಯಕ್ಕೆ ಕೆಳಜಾತಿಯ ವರ್ಗಕ್ಕೆ ಪ್ರವೇಶವನ್ನು ಘೋಷಿಸಲಾಯಿತು. ಪೂರ್ವ ರಸ್ತೆಗೆ ಪ್ರವೇಶ ಮತ್ತು ದೇವಾಲಯದ ಪ್ರವೇಶವನ್ನು ಕೆಳಜಾತಿಗಳಿಗೆ ಅನುಮತಿಸಲಾಯಿತು. ಈ ನಿಟ್ಟಿನಲ್ಲಿ ವೈಕೋಮ್ ಸತ್ಯಾಗ್ರಹವು ಕೇರಳದಲ್ಲಿ ಬಹಳಷ್ಟು ಪ್ರಸಿದ್ದಿಯನ್ನು ತಂದುಕೊಟ್ಟಿತು.
ಇಂದಿಗೂ ಕೂಡ ಕೇರಳದ ಕೊಟ್ಟಾಯಂನ ವೈಕೋಮ್ ಪಟ್ಟಣದಲ್ಲಿ ‘ವೈಕಂ’ ಹೋರಾಟದ ನೆನಪಿನಲ್ಲಿ ಸ್ಥಾಪಿಸಿರುವ ರಾಮಸಾಮಿ ಪ್ರತಿಮೆಯನ್ನು ನಾವು ಕಾಣಬಹುದಾಗಿದೆ.
ದೇವನೂರ ಮಹಾದೇವ ಅವರ ಲೇಖಕರ ಪರಿಚಯ ಮತ್ತು ಅವರ ಕೃತಿಗಳ ಕುರಿತ ಮಾಹಿತಿಯನ್ನು ತಿಳಿಯಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ..
ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...
ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...
ಮಂಡ್ಯ: 100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...
©2024 Book Brahma Private Limited.