"ಪುಸ್ತಕದ ಬಗ್ಗೆ ನಾನು ಹೆಚ್ಚು ವಿವರಿಸಲು ಹೋಗುವುದಿಲ್ಲ. ಏಕೆಂದರೆ ಅದು ನಿಮ್ಮ ಓದಿನ ಸುಖಕ್ಕೆ ಧಕ್ಕೆ ತಂದೀತು. ಆದರೆ, ಈ ಪುಸ್ತಕದ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ನನ್ನ ಗಮನಕ್ಕೆ ಬಂದ ಮೂರು ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ- ನಿಮ್ಮ ಚರ್ಚೆಗೆ ಬಿಡುತ್ತೇನೆ," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ರಾಜೇಂದ್ರ ಪ್ರಸಾದ್ ಅವರ ‘ಭಿನ್ನ ರುಚಿ’ ಕೃತಿ ಕುರಿತು ಬರೆದ ವಿಮರ್ಶೆ.
ಕನ್ನಡದಲ್ಲಿ ಬರೆಹಗಾರರಿಗೆ ಆಸಕ್ತಿ, ಅಧ್ಯಯನ, ಶಿಸ್ತು ಇದ್ದರೆ, ಕಥೆ-ಕಾದಂಬರಿ-ಕವಿತೆ ಇತ್ಯಾದಿ ಯಾವತ್ತೂ ಸಾಹಿತ್ಯಕ್ಕೆ ಹೊರತಾದ ಅಸಂಖ್ಯ “ಬೇಲಿ ಇಲ್ಲದ ಮೇವು” ಲಭ್ಯವಿವೆ. ಅವುಗಳಲ್ಲಿ ಒಂದು ಅಡುಗೆಗೆ ಸಂಬಂಧಿಸಿದ ಬರೆಹಗಳು. ಇಲ್ಲಿ ಗೆಳೆಯ ರಾಜೇಂದ್ರ ಪ್ರಸಾದ್ ತಾನು ವಾರ್ತಾಭಾರತಿಯಲ್ಲಿ ಬರೆದ ಅಂಕಣ ಬರೆಹಗಳನ್ನು ಸೇರಿಸಿ ಈ ಪುಸ್ತಕವನ್ನು ತಂದಿದ್ದಾರೆ. ಪತ್ರಿಕೆಯ ಪುಟಗಳಿಗೆ “ಪದ ಮಿತಿ” ಇರುವ ಕಾರಣ ಒಂದೊಂದೂ ಉದ್ಘ್ರಂಥ ಆಗಬಲ್ಲ ಇಲ್ಲಿನ ಅಧ್ಯಾಯಗಳು, ಒಂದು ಸಣ್ಣ ಮಿಂಚುನೋಟವನ್ನು ಮಾತ್ರ ಹರಿಸಿ ಮರೆಯಾಗುತ್ತವೆ. ಹಾಗಾಗಿ ನಾನೀ ಪುಸ್ತಕವನ್ನು ರಾಜೇಂದ್ರ ಅವರು ಮುಂದೆ ಬರೆಯಬಹುದಾದ (ಖಂಡಿತಾ ಬರೆಯಬೇಕಾದ) ಆ ಮಹಾಬರೆಹಗಳ “ಸಿನಾಪ್ಸಿಸ್” ಎಂದೇ ಗುರುತಿಸಬಯಸುತ್ತೇನೆ.
"ಅಡುಗೆ ಸಾಹಿತ್ಯ" ಎಂದರೆ ಅದು ಒಂದು ಅಡುಗೆಗೆ ಬೇಕಿರುವ ಸಾಮಗ್ರಿಗಳು, ಮಾಡುವ ವಿಧಾನ, ಮತ್ತು ಟಿಪ್ಸ್ ಎಂಬಲ್ಲಿಗೆ ಮುಗಿದುಬಿಡುವುದು – ಮತ್ತದನ್ನು ಬಹುತೇಕ ಮಹಿಳೆಯರೇ ಬರೆದಿರುವುದು ವಾಸ್ತವ. ನಿಜಕ್ಕೆಂದರೆ, ಅಡುಗೆಮನೆ ಒಂದು ರಸಾಯನಶಾಸ್ತ್ರ ಪ್ರಯೋಗಶಾಲೆ. ಕಾಲ ಸರಿದಂತೆ ಶೋಧಗೊಂಡು, ಮಚ್ಯುರಿಟಿ ತಲುಪುತ್ತಾ ಬಂದ ಪ್ರತೀ ಅಡುಗೆಯೂ ನಿಖರ ಡಾಕ್ಯುಮೆಂಟ್ ಆದರೆ, ಯಾವುದೇ ವಿಜ್ಞಾನ ಶಾಖೆಗೂ ಅದು ಕಡಿಮೆಯದಲ್ಲ. ಅವಕ್ಕೊಂದು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮಗ್ಗುಲೂ ಇದ್ದು – ಅದನ್ನು ಈ ಬರೆಹಗಳ ಮೂಲಕ ರಾಜೇಂದ್ರ ನಮಗೆ ಪರಿಚಯಿಸುತ್ತಿದ್ದಾರೆ. ಹಾಗಾಗಿ ಓದಲೇಬೇಕಾದ ಪುಸ್ತಕ ಇದು.
ಪುಸ್ತಕದ ಬಗ್ಗೆ ನಾನು ಹೆಚ್ಚು ವಿವರಿಸಲು ಹೋಗುವುದಿಲ್ಲ. ಏಕೆಂದರೆ ಅದು ನಿಮ್ಮ ಓದಿನ ಸುಖಕ್ಕೆ ಧಕ್ಕೆ ತಂದೀತು. ಆದರೆ, ಈ ಪುಸ್ತಕದ ಆಕರ್ಷಣೆ ಹೆಚ್ಚಿಸುವ ನಿಟ್ಟಿನಲ್ಲಿ ನನ್ನ ಗಮನಕ್ಕೆ ಬಂದ ಮೂರು ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ- ನಿಮ್ಮ ಚರ್ಚೆಗೆ ಬಿಡುತ್ತೇನೆ.
ಮೊದಲನೆಯದು, ಆಹಾರವನ್ನು ಮೂಗು ಗ್ರಹಿಸುವಲ್ಲಿರುವ ಪ್ಯಾಲೆಟರಿ ವ್ಯತ್ಯಾಸಗಳು. ಇದನ್ನೊಂದು ನಿದರ್ಶನ ನೀಡಿ ವಿವರಿಸುವೆ. ನನ್ನ ತಂದೆ (ಹತ್ತು ವರ್ಷದ ಹಿಂದೆ ಗತಿಸಿದರು) ಮತ್ತು ತಾಯಿ ನನ್ನ ತಮ್ಮನ ಮನೆಗೆ (ದಕ್ಷಿಣ ಕೊರಿಯಾ) ಭೇಟಿ ನೀಡಿದ್ದರು. ಮೀನು -ಮಾಂಸ ಬಹಳ ಇಷ್ಟಪಟ್ಟು ತಿನ್ನುವ ನನ್ನ ತಂದೆ, ಅಲ್ಲಿ ಮೀನು ಮಾರುಕಟ್ಟೆಗೆ ಹೋದವರು, ಅಲ್ಲಿನ ಮಾರುಕಟ್ಟೆಯ ವಾಸನೆ ತಾಳಲಾರದೇ ಅಸ್ವಸ್ಥಗೊಂಡಿದ್ದರು ಮತ್ತು ಅಲ್ಲಿಂದ ಬಂದ ಬಳಿಕ ಸ್ವಲ್ಪ ಸಮಯ ಮೀನು ತಿನ್ನುವುದನ್ನೇ ಬಿಟ್ಟಿದ್ದರು. ನಾನೂ ಅಲ್ಲಿಗೆ ಹೋದಾಗ, ಅಲ್ಲಿನ ಅಡುಗೆಯ ಪರಿಮಳ ನಮ್ಮ ಮೂಗಿಗೆ ಸಹಿಸಲು ಕಷ್ಟ ಎಂಬುದನ್ನು ಕಂಡುಕೊಂಡಿದ್ದೇನೆ. ನನ್ನ ತಮ್ಮನ ಪತ್ನಿ ಇಲ್ಲಿಗೆ ಬಂದಾಗಲೂ ಆಕೆಗೆ ಇಲ್ಲಿನ ಕೆಲವು ಅಡುಗೆಗಳ “ಸುವಾಸನೆ(ನಮಗೆ)” ತಡೆಯಲು ಸಾಧ್ಯವಾಗುವುದಿಲ್ಲ. ಈ ಪ್ಯಾಲೆಟರಿ ವೈವಿದ್ಯ ನಿಜಕ್ಕೂ ಅಧ್ಯಯನ ಯೋಗ್ಯ.
ಎರಡನೆಯದು, ಅಡುಗೆಯ ಸಾಮಗ್ರಿಗಳು ಕ್ರಮೇಣ ರುಚಿ,ಗುಣ ಕಳೆದುಕೊಳ್ಳುತ್ತಿವೆ ಎಂಬ ಮಾತು. ನನ್ನ ಅಜ್ಜಿ ತುಂಬಾ ಒಳ್ಳೆಯ ಅಡುಗೆ ಮಾಡುತ್ತಿದ್ದವರು. ಅವರ ಕೋಳಿ ರಸ, ಕಜ್ಜಾಯ, ಅಷ್ಟಮಿ ಉಂಡೆ, ಬಸಳೆ-ಚಟ್ಲಿ ಗಸಿ ಉಂಡವರ ಬಳಿ ಅದರ ರುಚಿ ಕೇಳಬೇಕು. ಆದರೆ ಇಂದು ಅವರದೇ ಶಿಷ್ಯೆಯರಾಗಿ ಅದನ್ನು ಕಲಿತು ಮಾಡುವ ನನ್ನಮ್ಮ, ಚಿಕ್ಕಮ್ಮ (ಹೊಸದಾಗಿ ತಿನ್ನುವವರಿಗೆ ಬಹಳ ರುಚಿ ಅನ್ನಿಸಿದರೂ) ಮಾಡುವ ಅವೇ ಅಡುಗೆಗಳು ಅಜ್ಜಿಯ ಕೈರುಚಿಯ ಬಳಿ ತಲುಪುವುದಿಲ್ಲ ಎಂಬ ವಾಸ್ತವ. ಬಹುತೇಕ ಎಲ್ಲರ ಮನೆಗೂ ಇದು ಸತ್ಯ. ಇದಕ್ಕೆ ತಕ್ಷಣ ಸಿಗುವ ಕಾರಣ – ಈ ಅಡುಗೆಗಳಿಗೆ ಇಂದು ಸಿಗುವ ಸಾಮಗ್ರಿಗಳ ಗುಣಮಟ್ಟ. ಇದು ಹೆಚ್ಚಿನಂಶ, ಅಡುಗೆಕೋಣೆಗಳು ಪ್ರಯೋಗಶಾಲೆಯ ಡಾಕ್ಯುಮೆಂಟೇಷನ್ ಹೊಂದಿದ್ದರೆ ಸುಲಭವಾಗಿ ನಮ್ಮ ಗ್ರಹಿಕೆಗೆ ಸಿಗುತ್ತಿದ್ದವೇನೋ.
ಮೂರನೆಯದು – ಉದಾರೀಕರಣದ ಬಳಿಕ ವೇಗದ ಬದುಕಿಗೆ “ಅನ್ನ ವಿಕ್ರಯ” (ಅರ್ಥಾತ್ ಹೊಟೇಲು ಉದ್ಯಮ) ಬಹಳ ಪೂರಕವಾಗಿ ಕೆಲಸ ಮಾಡಬೇಕಿತ್ತು. ಸಣ್ಣ ದೇಶವಾದ ಕೊರಿಯಾದಲ್ಲಿ ಅಡುಗೆಕೋಣೆಯ ಕೆಲಸ ಸಣ್ಣ ಅವಧಿಯಲ್ಲಿ ಮುಗಿದುಬಿಡುತ್ತದೆ. ಇಲ್ಲಿಗೆ ಬಂದಾಗ ತಮ್ಮನ ಪತ್ನಿಯ ದೊಡ್ಡ “ಕಂಪ್ಲೇಂಟ್” - ನೀವು ಅಡುಗೆ ಮನೆಯಲ್ಲಿ ಎಷ್ಟೊಂದು ಸಮಯ ವ್ಯರ್ಥ ಮಾಡುತ್ತೀರಿ ಎಂಬುದು. ಕೊರಿಯಾ ಅಥವಾ ಯಾವುದೇ ಮುಂದುವರಿದ ದೇಶದಲ್ಲಿ ಮನೆಯಿಂದ ಹೊರಗೆ ಧೈರ್ಯದಿಂದ ಆಹಾರ ಸೇವಿಸಿವುದು ಸಾಧ್ಯ. ಹಾಗಾಗಿ ಅಲ್ಲಿ ಅಡುಗೆ ಮನೆಯಲ್ಲಿ ಕಡಿಮೆ ಸಮಯ ಕಳೆದರೆ ಸಾಕಾಗುತ್ತದೆ. ಆದರೆ ಭಾರತದಲ್ಲಿ, ಮನೆಯಿಂದ ಹೊರಗೆ ಆಹಾರ ಸೇವಿಸವುದು ಭಯದೊಂದಿಗೇ ನಡೆಯಬೇಕಾಗುತ್ತದೆ- ಎಲ್ಲಿ ಹೊಟ್ಟೆ ಹಾಳಾದೀತೋ ಎಂದು! ಆಹಾರೋದ್ಯಮಲ್ಲಿ ಲಾಭ ಬರಬೇಕಿದ್ದರೆ ಅತ್ಯಂತ ಕಡಿಮೆ ದರಕ್ಕೆ (ಕಳಪೆ ಗುಣಮಟ್ಟದ!) ಸಾಮಗ್ರಿಗಳು ಎಲ್ಲಿ ಸಿಗುತ್ತವೆ ಎಂದು ಹುಡುಕುವುದು –ಯಶಸ್ವೀ ವ್ಯವಹಾರಿಗಳ ಲಕ್ಷಣ ಆಗಿಬಿಟ್ಟಿದೆ. ಉದಾರೀಕೃತ ಭಾರತದಲ್ಲಿ ಮನೆಯಿಂದ ಹೊರಗೆ ಆಹಾರ ಸೇವನೆ “ಸುರಕ್ಷಿತ” ಅನ್ನಿಸುವುದು ಯಾವಾಗ?! “ಅಯ್ಯೋ ಹೊರಗೆ ಊಟ ಮಾಡುವಾಗ ಅಲ್ಲಿನ ಅಡುಗೆಮನೆ ನೋಡಲೇ ಬಾರದು” ಎಂಬ ಅಲಿಖಿತ ನಿಯಮ ಕೊನೆಯಾಗುವುದು ಯಾವಾಗ?
"ಕನ್ನಡಿಗರಿಗೆ ಪ್ರೀತೀಶ್ ನೆನಪಾಗುವುದು ಕನ್ನಡದ ಮಹತ್ವದ ಕವಿ-ಕಥೆಗಾರ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ (ತಮ...
“ಶ್ರೀ ಶಾಂತಿನಾಥ ದಿಬ್ಬದ ಅವರು ಮಾಡಿರುವ ಈ ಕೆಲಸವನ್ನು ಕನ್ನಡ ಸಾಹಿತ್ಯ ಲೋಕ ಹೆಮ್ಮೆಯಿಂದ ಸ್ಮರಿಸುತ್ತದೆ,&rdqu...
“ಡಾಬ್ಸ್ - ಕಬ್ಬನ್, ಬೌರಿಂಗ್ ಮತ್ತು ಕನ್ನಿಂಗ್‌ಹ್ಯಾಮ್ ಅವರ ಬಗೆಗಿನ ವಿಶೇಷ ತಿಳುವಳಿಕೆಗಾಗಿ ವಿಕಿ...
©2025 Book Brahma Private Limited.