"‘ಸುರಧೇನು' ಬೇಡಿದುದನ್ನು ಕೊಡುವ ದೇವಲೋಕದ ಗೋವು ಎಂಬುದು ಪೌರಾಣಿಕ ಕಲ್ಪನೆ. ಆದರೆ ಅದನ್ನು ನಮ್ಮಲ್ಲಿನ ಆಕಳುಗಳಲ್ಲಿ ಕಂಡು, ಅದರ ಸದುಪಯೋಗಪಡಿಸಿಕೊಂಡವರು ನಮ್ಮ ಹಿರಿಯರು. ಹಾಗೆಯೇ ಶ್ರೀಮಹಾದೇವರ ಈ `ಸುರಧೇನು’ ಹೊತ್ತಗೆಯ ಲೇಖನಗಳು, ಸಮಾಜಕ್ಕೆ ನೀಟಾದ ಜೀವನಕ್ಕೊಂದು `ಪಯನ' ಸುರಧೇನುವಿನ ಕ್ಷೀರಧಾರೆಯಿಂದ ಸದ್ಭಾವನೆ, ಸಹಬಾಳ್ವೆ, ಶಾಂತಿ ಸೈರಣೆ, ಸಂತೃಪ್ತಿಯ ಪಂಚಗವ್ಯಗಳು ಸಮಾಜಕ್ಕೆ ಸಂಜೀವಿನಿಯಾಗಬಲ್ಲವು," ಎನ್ನುತ್ತಾರೆ ಡಿ.ಎನ್. ಅಕ್ಕಿ. ಅವರು ಮಹಾದೇವ ಬಸರಕೋಡ ಅವರ ‘ಸುರಧೇನು’ ಕೃತಿಗೆ ಬರೆದ ಮುನ್ನುಡಿ
`ಸುರಧೇನು' ಶ್ರೀ ಮಹಾದೇವ ಬಸರಕೋಡ ಅವರ ವಿವಿಧ ವಿಷಯಗಳ ಮೇಲೆ `ಕ್ಷ' ಕಿರಣ ಬೀರುವ ಅಮೂಲ್ಯ ಲೇಖನಗಳ ೨೪ರ ಕಟ್ಟು. ೨೪ ಭಾರತೀಯರಿಗೆ ಮತ್ತು ವಿಶ್ವಕ್ಕೆ ಮಹತ್ವದ ಸಂಖ್ಯೆ. ಹಗಲು ರಾತ್ರಿ 24 ತಾಸು, 3, 6, 12, 18, 24 ಲಾಗಾಯ್ತಿನಿಂದಲೂ ಬಳಕೆಯಲ್ಲಿರುವ ಸಂಖ್ಯೆಗಳು. ಶ್ರೀಮಹಾದೇವರ ಲೇಖನಗಳು 24. ಮೈಮನಕ್ಕೆ ಬಟ್ಟೆಗೆ ದಿಟ್ಟಿಯ ನೀಡುವ ನೇಕಾರಿಕೆಯ ಮನೆತನವದವರಿಗೆ ಸೂಕ್ಷ್ಮ ಗ್ರಹಿಕೆ ತಂತಾನೇ ಮೈಗೂಡಿ ಬಂದಿರುತ್ತದೆ. ಲೆಕ್ಕದ ತಾಳಮೇಳ ಮಗ್ಗದಲ್ಲಿನ ಲಾಳಿಯಂತೆ ಹಾಸು ಹೊಕ್ಕಾಗಿರುತ್ತದೆ. ಹೀಗಾಗಿ ಲೆಕ್ಕದ ಮಾಸ್ತರರಾಗಿರುವ ಇವರು ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು ಹಾಗೆಯೇ ಸಾಹಿತ್ಯ ರಸಾಯನ ನಿರ್ಮಾತೃ ಅಪರೂಪದ ಸಮರಸದ ವ್ಯಕ್ತಿತ್ವದ ಮಹಾದೇವರ ಅನೇಕ ಕೃತಿಗಳು ಸಾಹಿತ್ಯಲೋಕದ ಮನ್ನಣೆಗೆ ಪಾತ್ರವಾಗಿರುವುದು ಅವರ ಕರ್ತೃತ್ವ ಪ್ರತಿಭೆಗೆ ಸಾಕ್ಷಿ. ಪ್ರತಿಭೆ, ಪರಿಶ್ರಮ, ಪ್ರಾಮಾಣಿಕತೆ ಪರಿಸರದ ಸೂಕ್ಷ್ಮಾವಲೋಕನ, ಅನುಭವದ ಮೂಸೆಯಲ್ಲಿ ಪಕ್ಕಾದರೆ ಹೊಳೆವ ಚಿನ್ನದಂತಹ ಕೃತಿಗಳು ಬರಲು ಸಾಧ್ಯ. ಇದಕ್ಕೆ ಪೂರಕವಾಗಿ ಶ್ರೀ ಮಹಾದೇವ ಬಸರಕೋಡರವರ ಅನೇಕ ಕೃತಿಗಳು ಸಾಬೀತುಪಡಿಸಿವೆ. ಪ್ರಶಸ್ತಿ, ಸ್ಥಾನಮಾನವನ್ನು ತಂದಿವೆ. ಅವರ ಕಾರ್ಯಕ್ಷಮತೆಯನ್ನು ವೈಚಾರಿಕ ನಿಲುವನ್ನು ಚಲನಶೀಲ ಚಿಂತನೆಯನ್ನು ಮನಗಂಡೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಅವರನ್ನು ಹುಡುಕಿಕೊಂಡು ಬಂದಿದೆ. ಈ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಛಾತಿಯೂ ಇವರಿಗಿದೆ. ಲೇಸ ಬಯಸುವ, ಲೇಸನ್ನು ನುಡಿಯುವ ಲೇಸಿನ ಹಾಸಿನ ಮೇಲೆ ನಡೆದು ಸಾರ್ಥಕ್ಯ ಪಡೆವ ಸತ್ಪರಂಪರೆ ನಮ್ಮದು. ಅದಕ್ಕೆ ಊನ ಬರದಂತೆ ಶ್ರೀಮಹಾದೇವ ಬಸರಕೋಡರವರು ನಡೆದು ಬಹುಜನ ಹಿತಾಯ ಬಹುಜನ ಸುಖಾಯದಂತೆ ಸಾಕ್ಷಾತ್ಕಾರಗೊಳಿಸುತ್ತಾರೆಂಬ ವಿಶ್ವಾಸವಿದೆ. ಬರೆದಂತೆ ಬದುಕಿದವರಿಗೆ ಬೆಲೆಯುಂಟು, ಅಂಥವರ ಬದುಕೇ ಒಂದು ಮಾದರಿ.
‘ಸುರಧೇನು' ಬೇಡಿದುದನ್ನು ಕೊಡುವ ದೇವಲೋಕದ ಗೋವು ಎಂಬುದು ಪೌರಾಣಿಕ ಕಲ್ಪನೆ. ಆದರೆ ಅದನ್ನು ನಮ್ಮಲ್ಲಿನ ಆಕಳುಗಳಲ್ಲಿ ಕಂಡು, ಅದರ ಸದುಪಯೋಗಪಡಿಸಿಕೊಂಡವರು ನಮ್ಮ ಹಿರಿಯರು. ಹಾಗೆಯೇ ಶ್ರೀಮಹಾದೇವರ ಈ `ಸುರಧೇನು’ ಹೊತ್ತಗೆಯ ಲೇಖನಗಳು, ಸಮಾಜಕ್ಕೆ ನೀಟಾದ ಜೀವನಕ್ಕೊಂದು `ಪಯನ' ಸುರಧೇನುವಿನ ಕ್ಷೀರಧಾರೆಯಿಂದ ಸದ್ಭಾವನೆ, ಸಹಬಾಳ್ವೆ, ಶಾಂತಿ ಸೈರಣೆ, ಸಂತೃಪ್ತಿಯ ಪಂಚಗವ್ಯಗಳು ಸಮಾಜಕ್ಕೆ ಸಂಜೀವಿನಿಯಾಗಬಲ್ಲವು.
ಅರಿವಿಗೆ ಅಕ್ಷರ, ಅಕ್ಷರದಿಂದ ಕಲಿಕೆ, ಕಲಿಕೆಯಿಂದ ವಿವೇಚನೆ, ವಿವೇಚನೆಯಿಂದ ವಿವೇಕ. ಇದು ಸಾಮಾಜಿಕ ಸ್ವಾಸ್ಥ್ಯಕ್ಕೆ ಸಂಜೀವಿನಿ ಎಂಬುದು 'ಸರ್ವರೋಗಕ್ಕೂ ಶಿಕ್ಷಣವೇ ಸಂಜೀವಿನಿ' ಎಂಬ ಲೇಖನದಿಂದ ಪುಟ ತೆಗೆಯುವ `ಸುರಧೇನು' ಕೃತಕ ಬುದ್ಧಿಮತ್ತೆಯ ಸಾಧಕ-ಬಾಧಕ ಉಪಯೋಗ ಅಪಾಯಗಳ ಎಚ್ಚರಿಕೆಯ ಲೇಖನ. ಕೌಟುಂಬಿಕ ವ್ಯವಸ್ಥೆ, ಒಂದು ನೋಟ, ಚೀನಾಕ್ಕೆ ಮುಳುವಾಗುತ್ತಿರುವ ಲಾಂಗ್‌ಪಿಂಗ್ ಮಂತ್ರ. ಪ್ರಶ್ನಿಸುವುದು ನಮ್ಮೆಲ್ಲರ ಜವಾಬ್ದಾರಿ ಇನ್ನಿತರ ಲೇಖನಗಳು ಚಿಂತನೆಯ ಜೊತೆಗೆ ಚೈತನ್ಯಕ್ಕೆ ಸಹಕಾರಿ. ಸಮಕಾಲೀನ ಆತಂಕಗಳು ಮತ್ತು ನಮ್ಮ ಜವಾಬ್ದಾರಿ. ಸಮಕಾಲೀನ ಜಗತ್ತು ಅತ್ಯಂತ ಕುರೂಪವೂ, ಅವೈಚಾರಿಕವೂ ಆಗಿ ರೂಪುಗೊಳ್ಳುವ ತೀರಾ ಅಸ್ವಸ್ಥ ಪರಿಸ್ಥಿತಿಯಲ್ಲಿ ನಮ್ಮೆಲ್ಲರ ಬದುಕು ಸಾಗುವವರಿಗೆ ಹಳಹಳಿಸಿದ್ದಾರೆ. ಭಯೋತ್ಪಾದನೆ, ಭ್ರಷ್ಟಾಚಾರ, ಅತ್ಯಾಚಾರ, ಅಪರಾಧಗಳನ್ನು ಜಾತಿ ಧರ್ಮ, ವ್ಯಕ್ತಿ, ಪಕ್ಷಗಳ ಮಾನದಂಡದಿಂದ ಅಳೆದು ನಿರ್ಣಯಿಸುವುದು ಸಾಧುವಲ್ಲ. ತಪ್ಪು ತಪ್ಪೇ, ಅಪರಾಧ ಅಪರಾಧವೆ ಮತಬ್ಯಾಂಕ್‌ಗಳ ದುರಾಸೆಯಿಂದ ಸಮರ್ಥನೆಯಾಗಲಿ ದಂಡನೆಗಳಾಗಲಿ, ಸಾಮಾಜಿಕ ನೆಮ್ಮದಿಗೆ ಆತಂಕದ ವಿಷಯಗಳೆಂಬ ಸೂಕ್ಷ್ಮತೆ ಈ ಲೇಖನಗಳಲ್ಲಿದೆ.
ತಾಳ್ಮೆ, ಕೇಳುವುದು, ಮೌನ, ಅರಿವಿನ ಬೆಳಕಿನಲ್ಲಿ ಸಾಗಲಿ ಬದುಕು, ಲೇಖನ ಪ್ರತಿಪಾದಿಸುತ್ತದೆ. ಮಕ್ಕಳಿಗೆ ಅಗತ್ಯವಾಗಿ ಬೇಕಿದೆ ನೈತಿಕ ಶಿಕ್ಷಣ; ಲೇಖನ ವಿಷಯ ಬೋಧನೆಗೆ ಒತ್ತು ಕೊಟ್ಟು ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿ ಪರಿಗಣಿಸುವ, ಶೈಕ್ಷಣಿಕ ವ್ಯವಸ್ಥೆಯಿಂದ ಸಾಮಾಜಿಕ ಮೌಲ್ಯಗಳು ಸೊರಗಿ ವೈಯಕ್ತಿಕ ಮೌಲ್ಯಗಳೇ ವಿಜೃಂಭಿಸಿ ಮಾನವೀಯ ಸಂಬಂಧಗಳನ್ನು ಸಡಿಲಗೊಳಿಸುವ ಅಪಾಯದ ಬಗ್ಗೆ ಚಿಂತಿತರಾಗಿದ್ದಾರೆ. ಮಕ್ಕಳ ಸಾಮರ್ಥ್ಯಕ್ಕೆ ಮೀರಿದ ಹೇರುವಿಕೆಯ ಬೋಧನೆ, ಭಾರವಾದ ಶಾಲಾ ಬ್ಯಾಗು, ಅವೈಜ್ಞಾನಿಕ ಮನೆಗೆಲಸ ಮಕ್ಕಳ ಮನೋವಿಜ್ಞಾನವರಿಯದ ಅರೆಬೆಂದ ಬೋಧಕರುಗಳಿಂದ ಮಗು ಆತ್ಮವಿಶ್ವಾಸವನ್ನು ಲವಲವಿಕೆಯನ್ನು ಕಳೆದುಕೊಂಡು ದಿನೇ ದಿನೇ ಖಿನ್ನತೆಗೆ ಜಾರಿ, ಪಲಾಯನವಾದದತ್ತ ಮನ ಮಾಡುತ್ತಿರುವುದು ದುರಂತ. ಇದನ್ನು ಮಗುವಿನ ಪೋಷಕರು, ಬೋಧಕರು ಶಾಲಾ ಆಡಳಿತ ಮಂಡಳಿಯವರು ಕಾಳಜಿ ವಹಿಸುವುದು ಅಗತ್ಯ. ಇಲ್ಲವಾದಲ್ಲಿ ಅಮೂಲ್ಯ ಜೀವಗಳು ಕೈತಪ್ಪಿ ಹೋದಾವು.
ಮಾನವೀಯತೆಯೇ ಬದುಕಿನ ಉಸಿರಾಗಿ; ದೇವರು ಸ್ವರ್ಗ ನರಕ ಕಾಣದ ವಿಷಯಗಳ ಬೆಂಬತ್ತಿ ಭ್ರಮ ನಿರಸನಗೊಂಡ ಬದುಕು ಜೀವಾನುಕಂಪ ಮಾನವೀಯತೆಯ ತುಡಿತ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. `ಧಾವಂತದ ಸುಳಿಯಲ್ಲಿ ಸೊರಗದಿರಲಿ ಪ್ರಕೃತಿ ಪ್ರೇಮ' ಲೇಖನದಲ್ಲಿ ಕಾವ್ಯಾತ್ಮಕವಾಗಿ ಅನುಭವಿಸುವ ನಸುಕನ್ನು ಅನುಭವಿಸಿದ, ಸಂಭ್ರಮಿಸಿದ ಪರಿ ತುಂಬಾ ಚೇತೋಹಾರಿ. ಇದೊಬ್ಬ ಸೂಕ್ಷ್ಮಗ್ರಾಹಿ ಪ್ರತಿಭಾವಂತನಿಗೆ ಮಾತ್ರ ಸಾಧ್ಯ. ಹಿಟ್ಟಿಲ್ಲದೆ ಹಸಿವಿನಿಂದ ಬಳಲುವವರು ಒಂದೆಡೆ, ಅಜೀರ್ಣವಾಗುವಷ್ಟು ಸಿಕ್ಕಿದ್ದೆನ್ನೆಲ್ಲ ತಿಂದು ಬೊಜ್ಜು ಹೊಟ್ಟೆಯನ್ನು ಕರಗಿಸಿಕೊಳ್ಳಲು ಹೆಣಗುವವರು ಮತ್ತೊಂದೆಡೆ. ಇದು ವಿಪರ್ಯಾಸ. ನಿಸರ್ಗದ ಕೊಳ್ಳೆ ಹೊಡೆಯುವುದನ್ನೇ ನಿತ್ಯದ ಕಾಯಕ ವ್ಯವಹಾರವನ್ನಾಗಿಸಿ ಪ್ರಕೃತಿಯನ್ನು ಮಾರುಕಟ್ಟೆಯ ಸರಕನ್ನಾಗಿಸಿಕೊಂಡು ಪ್ರಾಕೃತಿಕ ವಿಕೋಪಗಳಿಗೆ ಆಹ್ವಾನ ನೀಡಿ ವಿನಾಶಗಳಿಗೆ ಭಾಷ್ಯ ಬರೆಯ ಹತ್ತಿದ್ದೇವೆ. ಶಕ್ತಿಯ ಮೂಲಗಳ ಸದ್ಭಳಕೆ, ವಿವೇಚನಾಯುಕ್ತವಾಗಿರಲಿ. ಪರಿಸರಕ್ಕೆ ಪೂರಕವಾಗಿರುವಂಥ ಜೀವನ ಶೈಲಿ ನಮ್ಮದಾದಾಗ ನಾವೂ ಬದುಕಿ ಇತರ ಜೀವಿಗಳು ಬದುಕಲು ಸಾಧ್ಯವಾಗುತ್ತದೆ. ಅತಾರ್ಕಿಕ ನಿಲುವಿಗೆ ಕಟ್ಟುಬಿದ್ದು ಐಷಾರಾಮಿ ಪ್ರದರ್ಶನದ ಅಡ್ಡ ಪರಿಣಾಮದ ಬಗ್ಗೆಯೂ ಚಿಂತಿಸಲು ತಿಳಿಸಿರುವ ಶ್ರೀ ಮಹಾದೇವ ಬಸರಕೋಡ ಅವರು ವಾಸ್ತವಿಕ ಬದುಕಿಗೆ ಒತ್ತುಕೊಡುವ ಲೇಖಕರು.
`ಹಬ್ಬಗಳ ಹಾದಿಯಲ್ಲಿ ಒಂದು ಇಣುಕು ನೋಟ’, `ಗರ್ಭಪಾತ; ಬದಲಾಗಬೇಕಿದೆ ನಮ್ಮ ಗ್ರಹಿಕೆಗಳು’, `ಬೇಕು ಬೇಕು ಎಂಬ ಸಲ್ಲದ ಬಯಕೆಯ ಬೆನ್ನೇರಿ...’, `ಪ್ರಕೃತಿಯೊಂದಿಗೆ ಸಾಮರಸ್ಯ ಸಾಧಿಸೋಣ...’ - ಇವು ಗಮನ ಸೆಳೆಯುವ ಇನ್ನಿತರ ಲೇಖನಗಳು. ಕೆಲವು ಲೇಖನಗಳಲ್ಲಿ ವಿಷಯಗಳ ಪುನರಾವರ್ತನೆ ಎನ್ನಿಸುತ್ತದೆ. ಆಯ್ದ ಪತ್ರಿಕೆಗಳಿಗೆ ಸಾಂದರ್ಭಿಕವಾಗಿ ಬರೆದ ಲೇಖನಗಳಿಂದಾಗಿ ಇದು ಪುನರಾವರ್ತನೆ ಎನಿಸುತ್ತದೆ.
ಯುವ ಸಾಹಿತಿ ಬಹುಮುಖ ಪ್ರತಿಭೆಯ ಹೃದಯವಂತರಾದ ಶ್ರೀಮಹಾದೇವ ಬಸರಕೋಡರಿಂದ ಇನ್ನೂ ಅನೇಕ ಮೌಲ್ಯಯುತ ಕೃತಿಗಳು ಬರಲಿ. ಅವರಿಂದ ನಾಡು ನುಡಿಗೆ ಶ್ರೇಯಸ್ಸನ್ನು ತರಲಿ.
ನನಗೆ ನಾಲ್ಕು ನುಡಿಗಳನ್ನು ಬರೆಯಲವಕಾಶನ್ನಿತ್ತ ಶ್ರೀಮಹಾದೇವ ಬಸರಕೋಡ ಅವರಿಗೂ, ಯುವ ಬರೆಹಗಾರ ಶ್ರೀ ಶ್ರೀಧರ ಬನವಾಸಿಯವರಿಗೂ ಕೃತಜ್ಞತೆಗಳನ್ನು ಅರ್ಪಿಸುವೆ.
- ಡಿ ಎನ್ ಅಕ್ಕಿ
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
ಒಂದು ಶತಮಾನಕ್ಕೂ ಹೆಚ್ಚಿನ ವರ್ಷಗಳನ್ನು ಪೂರೈಸಿರುವ ಕರ್ನಾಟಕಸ್ಥರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು...
©2024 Book Brahma Private Limited.