“ಈ ಪುಸ್ತಕ ಓದಿ ನಾನು ಯಾರು ಎಂದು ಗೊತ್ತಾಯಿತು ಮಾತ್ರವಲ್ಲ; ಬೇರೆಯವರು ಯಾಕೆ ಹೀಗೆ? ಎಂದು ತಿಳಿಯಿತು,” ಎನ್ನುತ್ತಾರೆ ನ. ರವಿಕುಮಾರ ಅವರು ಎಂ. ಬಸವಣ್ಣ ಅವರ “ಇದು ನಾನು” ಆತ್ಮಕಥನಕ್ಕೆ ಬರೆದ ಪ್ರಕಾಶಕರ ಮಾತು.
ಈಗ ಅಭಿನವಕ್ಕೆ ಇಪ್ಪತ್ತೆಂಟು ವರ್ಷ. ಇದೇನೂ ದೊಡ್ಡದಲ್ಲ. ಮನೋಹರ ಗ್ರಂಥಮಾಲೆ, ಮೈಸೂರು ವಿವಿಯ ಪ್ರಸಾರಾಂಗ, ಸಾಹಿತ್ಯ ಭಂಡಾರ, ಅಕ್ಷರ ಪ್ರಕಾಶನ, ಸಮಾಜ ಪುಸ್ತಕಾಲಯ, ಪುಸ್ತಕ ಪ್ರಕಾಶನ, ಡಿ.ವಿ.ಕೆ. ಮೂರ್ತಿ, ರಾಘವೇಂದ್ರ ಪ್ರಕಾಶನ ಮುಂತಾದವುಗಳು ೫೦-೭೫ರ ಗಡಿಯಲ್ಲಿವೆ. ಕನ್ನಡ ಸಂಸ್ಕೃತಿ ಕಟ್ಟುವಿಕೆಯಲ್ಲಿ ಪ್ರಕಾಶನ ಸಂಸ್ಥೆಗಳ ಪಾತ್ರವೂ ದೊಡ್ಡದು. ಹಿಂದಿನ ಅನೇಕ ಸಂಸ್ಥೆಗಳಂತೆ ನಮ್ಮ ಕಾಲದ ಪ್ರಕಾಶನ ಸಂಸ್ಥೆಗಳು ಕೂಡ ಈ ಕೆಲಸವನ್ನು ಮುಂದುವರೆಸಿವೆ. ಇವರೆಲ್ಲರ ಜೊತೆ ಅಭಿನವದ ಸಹಪಯಣ. ಈ ಪ್ರಯಾಣದಲ್ಲಿ ಬೆಂಬಲಕ್ಕೆ ನಿಂತ ಎಲ್ಲರನ್ನು ನೆನೆಯುವುದು ಮೊದಲ ಕರ್ತವ್ಯ.
ಅಭಿನವಕ್ಕೆ ೨೫ ತುಂಬಿದಾಗ ಬೆಳ್ಳಿ ಬೆಳಕು ಮಾಲಿಕೆಯಲ್ಲಿ ೨೫ ಪುಸ್ತಕಗಳನ್ನು ಹೊರತರುವ ಯೋಜನೆ ನಮ್ಮದಾಗಿತ್ತು. ಎಚ್. ಎಸ್. ವೆಂಕಟೇಶಮೂರ್ತಿ ಅವರ 'ಆಪ್ತಗೀತೆ' (ಭಗವದ್ಗೀತೆಯ ತಿಳಿಗನ್ನಡ ಅವತರಣ), ಕೆ. ಸತ್ಯನಾರಾಯಣರ 'ಸ್ಕೂಲು ಬಿಡುವ ಸಮಯ' (ಪ್ರಬಂಧಗಳು), ಎಚ್. ಎಸ್. ಶ್ರೀಮತಿಯವರ 'ಸ್ತ್ರೀವಾದ ಪದವಿವರಣ ಕೋಶ', ಕೆ. ಪುಟ್ಟಸ್ವಾಮಿಯವರು ಅನುವಾದಿಸಿದ ಬೂಕರ್ ಟಿ ವಾಷಿಂಗ್ಟನ್ ಆತ್ಮಕಥನ 'ದಾಸ್ಯದಿಂದ ಆಚೆಗೆ', ಲಕ್ಷ್ಮೀಶ ತೋಳ್ವಾಡಿಯವರ ಮಹಾಭಾರತ ಅನುಸಂಧಾನ 'ಭಾರತ ಯಾತ್ರೆ', ಓ. ಎಲ್. ನಾಗಭೂಷಣ ಸ್ವಾಮಿಯವರು ಅನುವಾದಿಸಿರುವ ಓರ್ಹಾನ್ ಪಮುಕ್‌ರ 'ಮುಗ್ಧ ಪ್ರಬುದ್ಧ', ಪಿ. ಚಂದ್ರಿಕಾರ 'ಮೋದಾಳಿ' (ನಾಟಕ), ನರಹಳ್ಳಿ ಬಾಲಸುಬ್ರಹ್ಮಣ್ಯರ 'ಬಾ ಕುವೆಂಪು ದರ್ಶನಕೆ' (ಕುವೆಂಪು ಸಮಸ್ತ ಸಾಹಿತ್ಯ ಶೋಧ), ಶ್ರೀಧರ ಬಳಗಾರರ 'ಮೃಗಶಿರ' (ಕಾದಂಬರಿ), ರಹಮತ್ ತರೀಕೆರೆಯವರ 'ನ್ಯಾಯನಿಷ್ಠುರಿಗಳ ಜತೆಯಲ್ಲಿ' (೧೫ ಮಾತುಕತೆಗಳು), ಎಚ್. ಎಸ್. ಗೋಪಾಲರಾವ್ ಅವರ 'ಶಾಸನ ಅಧ್ಯಯನ ಕೆಲ ಹೆಜ್ಜೆ ಗುರುತುಗಳು' ನಾಗ ಐತಾಳರ 'ಕಾಲ ಉರುಳಿ ಉಳಿದುದು ನೆನಪಷ್ಟೆ' (ಅನುಭವ ಕಥನ), ಆತ್ಮಾನಂದರ 'ನನ್ನೊಳಗಿನ ಅಪ್ಪ' (ಆತ್ಮಕಥೆ), ಪ್ರಜ್ಞಾ ಮತ್ತಿಹಳ್ಳಿ ಅವರ 'ಬಿಟ್ಟಸ್ಥಳ' (ಕಥೆಗಳು), ವಿಕ್ರಮ ವಿಸಾಜಿಯವರ 'ಪಠ್ಯದ ಭವಾವಳಿ' (ಸಾಹಿತ್ಯ ಸಂಸ್ಕೃತಿ ಸಮಕಾಲೀನ ಸ್ಪಂದನೆ), ಕೆ. ವೈ. ನಾರಾಯಣಸ್ವಾಮಿ ಅವರ 'ಹುಲಿ ಸೀರೆ' (ಕವನ ಸಂಕಲನ), ಎಂ. ಹಿರಿಯಣ್ಣ ಅವರ 'ಭಾರತೀಯ ಪುರುಷಾರ್ಥ ಚಿಂತನೆ' ವಿನಾಯಕ ಅರಳಿ ಸುರಳಿ ಅವರ 'ನವಿಲುಗರಿ ಮರಿ ಹಾಕಿದೆ', ವೈದೇಹಿ ಅವರ 'ನೆನಪು ಏಕತಾರಿ', ಮೈ. ಶ್ರೀ. ನಟರಾಜ ಅವರ 'ಗಾಳಿಯಲ್ಲಿ ತೇಲಿಬಂದ ಹೂಗಳು' (ಅನುವಾದಿತ ಕವನ ಸಂಕಲನ) ಕೃತಿಗಳು ಜನಮನ್ನಣೆ ಗಳಿಸಿವೆ. ಇದು ಈ ಮಾಲಿಕೆಯ ಇಪ್ಪತ್ತೊಂದನೆಯ ಕೃತಿ. ಈ ಮಾಲಿಕೆಯ ಮುಂದಿನ ಕೃತಿಗಳು ಕೂಡ ಕುತೂಹಲಕಾರಿಯಾಗಿವೆ.
'ಸೋಮವಾರ ಬೆಳಿಗ್ಗೆ ಮೊದಲ ಪಿರಿಯಡ್ ನನ್ನದಾಗಿರುತ್ತಿತ್ತು. ನಾನು ಎಲ್ಲೇ ಇದ್ದರೂ, ಎಷ್ಟೇ ಕಷ್ಟವಿದ್ದರೂ ಆ ಕ್ಲಾಸ್ ತೆಗೆದುಕೊಳ್ಳಲೇಬೇಕು. ಅವತ್ತು ಒಬ್ಬ ವಿದ್ಯಾರ್ಥಿನಿಯ ಮದುವೆ. ತಿರುಪತಿಯಲ್ಲಿ 'ನಿತ್ಯ ಮದುವೆ ಪಚ್ಚ ತೋರಣ' ಎಂಬ ಗಾದೆಯೇ ಇದೆ. ಆ ದಿನ ನಾನು ಕ್ಲಾಸಿಗೆ ಹೋದೆ. ಮದುವಣಗಿತ್ತಿ ವಿದ್ಯಾರ್ಥಿನಿಯನ್ನು ಕ್ಲಾಸ್‌ನಲ್ಲಿ ನೋಡಿ ಆಶ್ಚರ್ಯವಾಯ್ತು. 'ನೀನ್ಯಾಕೆ ಬಂದೆ ಇವತ್ತು? ನಿನ್ನ ಮದುವೆ ಅಲ್ಲವಾ ?' ಕೇಳಿದೆ. ಅದಕ್ಕೆ ಆ ವಿದ್ಯಾರ್ಥಿನಿ: 'ಸರ್ ನಾನು ಯಾವತ್ತೂ ನಿಮ್ಮ ಕ್ಲಾಸನ್ನು ಮಿಸ್ ಮಾಡ್ಕೊಳ್ಳಲ್ಲ. ಮೊದಲ ಪಿರಿಯಡ್ ಮುಗಿಸ್ಕೊಂಡ್ ಮದುವೆಗೆ ಹೋಗ್ತಿನಿ' ಎಂದಳು. ಮನೆಗೆ ಬಂದು 'ಪರವಾಗಿಲ್ಲ ಮೇಷ್ಟ್ರಾಗಿದ್ದದ್ದಕ್ಕೆ ಸಾರ್ಥಕವಾಯ್ತು' ಎಂದು ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ'. ಇದು ಭಾರತದ ಅತ್ಯುತ್ತಮ ಮನೋವಿಜ್ಞಾನದ (ಪ್ರೊಫೇಸರ್ ಗೋಪಾಲಸ್ವಾಮಿ ಅಯ್ಯರ್ ಅವರ ಶಿಷ್ಯ ಮತ್ತು ಆಂಧ್ರಪ್ರದೇಶದಲ್ಲಿ ಮೊದಲು ಮನೋವಿಜ್ಞಾನ ಅಧ್ಯಯನ ಕೇಂದ್ರವನ್ನು ಆರಂಭಿಸಿದ ಡಾ. ಎಂ. ಬಸವಣ್ಣ ಅವರ ಅನುಭವ.
'ಸಾಮಾನ್ಯವಾಗಿ ನಾವೆಲ್ಲರೂ ನಮ್ಮಲ್ಲಿಲ್ಲದ್ದನ್ನು ಪಡೆಯಲಿಕ್ಕೆ, ನಮ್ಮಲ್ಲಿರುವ ಕೀಳರಿಮೆಯನ್ನು ಹೋಗಲಾಡಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಲೇ ಇರುತ್ತೇವೆ. ಅದಕ್ಕೆ • ಬೇಕಾದ ಜೀವನಕ್ರಮವೊಂದನ್ನು ರೂಪಿಸಿಕೊಳ್ಳುತ್ತೇವೆ. ದೈಹಿಕವಾಗಿ, ಮಾನಸಿಕವಾಗಿರುವ ಕೀಳರಿಮೆಯನ್ನು ಪರಿಹರಿಸಿಕೊಳ್ಳಲು ನಾವು ಮಾಡುವ ಒಟ್ಟಾರೆ ಪ್ರಯತ್ನಗಳ ಸಮೂಹವನ್ನೇ ಆಡ್ಲರ್ 'ಜೀವನಶೈಲಿ' ಎಂದು ಕರೆಯುವುದು. ಪ್ರತಿಯೊಬ್ಬರಿಗೂ ಅವರವರದೇ ಆದ ಒಂದು ವಿಶಿಷ್ಟ ಜೀವನಶೈಲಿ ಇರುತ್ತದೆ. ಯಾರಿಬ್ಬರ ಜೀವನಶೈಲಿಗಳು ಒಂದೇ ತೆರನಾಗಿರುವುದಿಲ್ಲ. ಕೆಲವರದು ಇತರರ ಮೇಲೆ ಅಧಿಕಾರ ನಡೆಸುವ, ಜನರನ್ನು ನಿಯಂತ್ರಿಸುವ, ಆಳುವ ಶೈಲಿ; ಇನ್ನೂ ಕೆಲವರದು ಯಾವಾಗಲೂ ಯಾರಿಗಾದರೂ ಏನನ್ನಾದರೂ ಕೊಡುವ ಶೈಲಿ, ಇನ್ನೂ ಹಲವರದು ಎಲ್ಲರಿಂದ ಯಾವಾಗಲೂ ಏನನ್ನಾದರೂ ಪಡೆಯುವ ಶೈಲಿ, ಇನ್ನೂ ಕೆಲವರದು ಎಲ್ಲರಿಂದಲೂ ಎಲ್ಲದರಿಂದಲೂ ತಪ್ಪಿಸಿಕೊಳ್ಳುವ ಶೈಲಿ, ಇಲ್ಲಿ ಯಾವ ಶೈಲಿ ಸರಿ? ಯಾವುದು ತಪ್ಪು? ಎಂದು ನಿರ್ದಿಷ್ಟವಾಗಿ ಹೇಳಬರುವುದಿಲ್ಲ. ಅದು ಪರಿಸ್ಥಿತಿಗಳನ್ನು ಅವಲಂಭಿಸಿರುತ್ತದೆ. ಆಡ್ಲರ್ ಪ್ರಕಾರ ಸಮಾಜೋಪಯುಕ್ತ ಜೀವನ ಶೈಲಿ ಉತ್ತಮವಾದುದು. ಅವನ ಪ್ರಕಾರ ಸಾಮಾಜಿಕ ಆಸಕ್ತಿ ಮಾನವನ ಹುಟ್ಟುಗುಣ. ಉತ್ತಮ ಸಮಾಜವನ್ನು ನಿರ್ಮಿಸಬೇಕೆಂಬ ಅಭೀಪ್ಲೆ ಅವನಿಗೆ ರಕ್ತಗತವಾಗಿ ಬಂದಿರುತ್ತದೆ. ಸಮಾಜದಲ್ಲಿ ಎಲ್ಲರೂ ಚೆನ್ನಾಗಿದ್ದರೆ ತಾನೂ ಚೆನ್ನಾಗಿರುತ್ತೇನೆ ಎಂಬುದು ಅವನ ಆಶಯ' ಎಂದು ನಂಬಿರುವ ಬಸವಣ್ಣನವರು ಮಾನವೀಯತೆಗೆ ಹೆಚ್ಚು ಬೆಲೆ ಕೊಡುತ್ತಾರೆ. ಇವತ್ತಿನ ಎಲ್ಲ ಸಾಮಾಜಿಕ ಸಮಸ್ಯೆ, ಮನುಷ್ಯ ವ್ಯಾಪಾರಗಳನ್ನು ಮನಃಶಾಸ್ತ್ರದ ಹಿನ್ನೆಲೆಯಲ್ಲಿ ಪರಿಶೀಲಿಸುತ್ತಾರೆ.
'ಬದುಕಿನಲ್ಲಿ ನಾವೇನಾಗಬಲ್ಲೆವೂ ಅದಾಗಬೇಕು. ಅದೇ ಆತ್ಮಸಾಕ್ಷಾತ್ಕಾರ (ರಿಯಲೈಸೇಜನ್) ನಾನು ಮೇಷ್ಟ್ರಾಗಬೇಕು ಎಂದುಕೊಂಡಿದ್ದವ. ಆದೆ ಅಷ್ಟೆ. ಈಗಲೂ ಆ ಬಗೆಗೆ ನನಗೆ ಪಶ್ಚಾತ್ತಾಪವಿಲ್ಲ. ಹಣ ಮಾಡಲಿಲ್ಲ ಅದು ಬೇರೆ ಪ್ರಶ್ನೆ. ಆ ಕೊರಗು ನನ್ನಲ್ಲಿಲ್ಲ. ಐಯಾಮ್ ಪೂರ್; ಬಟ್ ನಾಟ್ ಸಫರ್ಡ್ ಪಾವರ್ಟಿ. ಇದು ಸತ್ಯ' ಎನ್ನುತ್ತಾರೆ. ಅವರ ಮಕ್ಕಳು ಬಹಳ ದೊಡ್ಡ ವೃತ್ತಿಗಳಲ್ಲಿದ್ದಾರೆ. ಎಲ್ಲರ ಹತ್ತಿರವೂ ಕಾರಿದೆ. ಈಗಲೂ ಬಸವಣ್ಣನವರು ಕಾರನ್ನು ಬಳಸುವುದಿಲ್ಲ. 'ನಮ್ಮಪ್ಪ, ನಮ್ಮಜ್ಜ ಎಲ್ಲರೂ ನಡೆದುಕೊಂಡೇ ಬದುಕಿದವರು. ಯಾರ ಮುಲಾಜಿನಲ್ಲೂ ಇರಬಾರದು ಎಂಬುದು ನನ್ನ ರೀತಿ. ಇದನ್ನೆ ನೀವು ಒಳ್ಳೆಯತನವೆನ್ನಿ, ಅಹಂಕಾರ ಎನ್ನಿ ಅದು ನನ್ನಲ್ಲಿದೆ. ಮುಖ್ಯವಾದ ಸಂಗತಿಯೆಂದರೆ ಬೇರೆಯವರಿಗೆ ತೊಂದರೆ ಆಗಬಾರದು ಎನ್ನುವುದು ನನ್ನ ಜೀವನದ ಪರಮ ಧೈಯ. ಉಪಕಾರವಾಗದಿದ್ದರೆ ಹೋಗಲಿ ತೊಂದರೆ ಆಗಬಾರದು ಅಷ್ಟೆ. ಇದು ಸಣ್ಣವನಾಗಿದ್ದಾಗಿನಿಂದಲೂ ಬಂದುಬಿಟ್ಟಿದೆ'. ಎಂದು ಬಾಯಿ ತುಂಬ ನಗುತ್ತಾರೆ. ಅವರ ಮಾತಿನಲ್ಲಿರುವ ಸಹಜತೆ, ಪ್ರಾಮಾಣಿಕತೆಯೇ ಜನರನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ.
ನಿವೃತ್ತಿಯ ನಂತರವೂ ಅಧ್ಯಾಪಕ ವೃತ್ತಿಯನ್ನು ಪ್ರೀತಿಸುವ ಬಸವಣ್ಣನವರು ವ್ಯಕ್ತಿತ್ವ ವಿಕಾಸದ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿ, ದೇಶದ ಉದ್ದಗಲಕ್ಕೂ ಸಂಚರಿಸಿ ಉಪನ್ಯಾಸಗಳನ್ನು ಕಮ್ಮಟಗಳನ್ನು ನಡೆಸುತ್ತಿದ್ದಾರೆ. ಗುಲ್ಬರ್ಗಾ, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಂದಿಗೂ ಮನಃಶಾಸ್ತ್ರದ ಕ್ರಿಯಾಶೀಲ ವಿದ್ಯಾರ್ಥಿಯಾಗಿ ಅನೇಕ ಸಂಘ-ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿದ್ದಾರೆ.
ಒಮ್ಮೆ ಬಸವಣ್ಣ ಅವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದರಂತೆ. ಇವರು ಮುಂದೆ ಹೋಗುತ್ತಿದ್ದರೆ ಹಿಂದೆ ಒಬ್ಬ ವಿದ್ಯಾರ್ಥಿನಿ ಇವರ ಹೆಜ್ಜೆಯ ಗುರುತಿನ ಮೇಲೆ ತನ್ನ ಹೆಜ್ಜೆಯನ್ನು ಇಟ್ಟು ನಡೆಯುತ್ತಿದ್ದಳಂತೆ. 'ಯಾಕೆ ಹೀಗೆ ಮಾಡುತ್ತಿದ್ದೀಯಮ್ಮ?' ಎಂದು ಕೇಳಿದರೆ - ಅವಳು ಹೇಳಿದಳಂತೆ: 'ಸರ್ ಬದುಕಿನಲ್ಲಿ ನಿಮ್ಮನ್ನು ಅನುಕರಿಸುವುದಂತೂ ಸಾಧ್ಯವಿಲ್ಲ. ನಿಮ್ಮ ಹೆಜ್ಜೆಯನ್ನಾದರೂ ಅನುಸರಿಸೋಣ ಎನ್ನಿಸಿದೆ' ಎಂದು. ಒಬ್ಬ ಅಧ್ಯಾಪಕನಿಗೆ ಇದಕ್ಕಿಂತ ಹೆಚ್ಚಿನ ಗೌರವ ಬೇಕೆ?
ಬಸವಣ್ಣ ಅವರ ಆತ್ಮಚರಿತ್ರೆಯ ಈ ಪುಸ್ತಕ ಸ್ವಂತ ಅನುಭವಗಳ ಜತೆಗೆ ಒಂದು ಕಾಲಘಟ್ಟದ ಸಮಾಜದ ಸ್ಥಿತಿಗತಿಗಳನ್ನು ದಾಖಲಿಸುತ್ತದೆ. ಬಸವಣ್ಣ ಅವರಿಗೆ ಈಗ 92ರ ಹರೆಯ. ಅವರು ಇನ್ನೂ ಬರೆಯಬೇಕಿದೆ. 'ಬರೆಯಲು ತುಂಬ ವಿಷಯಗಳಿವೆ; ದೈಹಿಕವಾಗಿ ಸಾಧ್ಯವಾಗುತ್ತಿಲ್ಲ ಕಣ್ರಿ' ಎಂಬ ಮಾತನ್ನು ಆಗಾಗ ಹೇಳುತ್ತಿರುತ್ತಾರೆ. ಆದರೂ ಅವರೀಗ ಅಭಿನವಕ್ಕಾಗಿಯೇ ಆಡ್ಲರ್ ಬಗೆಗೆ ಪುಸ್ತಕವನ್ನು ಬರೆಯುತ್ತಿದ್ದಾರೆ. ಕೇವಲ ತಾಂತ್ರಿಕವಾಗಬಹುದಾದ ವಿಷಯವನ್ನು ತುಂಬ ಆತ್ಮೀಯ ಮತ್ತು ಆಕರ್ಷಕ ಶೈಲಿಯಲ್ಲಿ ಬರೆಯುವುದಕ್ಕೆ ಅವರ ಸಾಹಿತ್ಯಕ ಓದಿನ ವಿಸ್ತಾರ ಮತ್ತು ಪರಿಶ್ರಮಗಳು ಕಾರಣ.
'ಈ ಪುಸ್ತಕ ಓದಿ ನಾನು ಯಾರು ಎಂದು ಗೊತ್ತಾಯಿತು ಮಾತ್ರವಲ್ಲ; ಬೇರೆಯವರು ಯಾಕೆ ಹೀಗೆ? ಎಂದು ತಿಳಿಯಿತು' ಎಂದು 'ಸಿಗಂಡ್ ಫ್ರಾಯ್ಡ್' ಪುಸ್ತಕದ ನುಡಿವ ಬೆಡಗುವಿನಲ್ಲಿ ಹೀಗೆ ಬರೆದಿದ್ದೆ. ಆ ಮಾತನ್ನು ಮುಂದುವರೆಸುವುದಾದರೆ ಬಸವಣ್ಣನವರ ಆತ್ಮಕತೆ ಓದಿದ ಮೇಲೆ 'ಸಮಾಜ ಯಾಕೆ ಹೀಗಿದೆ' ಎನ್ನುವುದಕ್ಕೆ ಕಾರಣಗಳೂ ಸಿಕ್ಕಿವೆ.
ಬಸವಣ್ಣ ಅವರು ಈ ಪುಸ್ತಕವನ್ನು ಪ್ರಕಟಿಸಲು ಅಭಿನವಕ್ಕೆ ಅನುಮತಿ ನೀಡಿದ್ದಷ್ಟೆ ಅಲ್ಲ; ಪ್ರಕಟಣೆ ತಡವಾದದ್ದಕ್ಕೆ ಬೇಸರಿಸದೆ ಕಾದಿದ್ದಾರೆ. ಅವರ ಪ್ರೀತಿ ವಿಶ್ವಾಸ ನಂಬಿಕೆಗಳಿಗೆ ಋಣಿ. ಎಂದಿನಂತೆ ಅಭಿನವವನ್ನು ಕೈ ಹಿಡಿದಿರುವ ಓದುಗ ಸಮುದಾಯಕ್ಕೆ, ಪುಸ್ತಕ ವಿನ್ಯಾಸದ ಶ್ರೀಧರ್, ಕರಡು ತಿದ್ದಿದ ಇಂದ್ರಕುಮಾರ್, ಸೀಮಾ ಎಸ್. ಭಟ್, ಹೊದಿಕೆ ವಿನ್ಯಾಸದ ಅರುಣ್, ಮುದ್ರಿಸಿದ ಧರಣಿ ಪ್ರಿಂಟರ್ಸ್‌ನ ಹೂವಪ್ಪ ಎಲ್ಲರಿಗೂ ಶರಣು.
- ನ. ರವಿಕುಮಾರ
"ಇಲ್ಲಿ ಜಾತಿ, ಧರ್ಮ ಯಾರನ್ನೂ ದೊಡ್ಡವರು, ಚಿಕ್ಕವರನ್ನಾಗಿ ಮಾಡಿಲ್ಲ. ತಮ್ಮ ಮತ ತಮಗೆ ಹಾಕುವ ಕಟ್ಟುಪಾಡುಗಳಿದ್ದಾಗ...
“ಇದೀಗ ಭುಟ್ಟೋ ನಾಟಕ “ಕೊನೆಯ ಕುಣಿಕೆ" ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದೆ. ಆಗಾಗ ನನ್ನನ್ನು ಕನ್ನಡದ...
“ಕನ್ನಡ ನೆಲ, ಜಲ, ಭಾಷೆಯ ಬಗ್ಗೆ, ಸಾಹಿತ್ಯ, ಕಲೆ, ಸಂಗೀತ, ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಿನೆಮಾ, ರಾಜಕೀಯ,...
©2025 Book Brahma Private Limited.