“ಅವರ ವೈಯಕ್ತಿಕ ಜೀವನ ಯಾತ್ರೆಯ ವಿವರಗಳು ಯಥಾವತ್ತಾಗಿ ದಾಖಲಾಗಿದೆ, ಬಾಲ್ಯದ, ಯೌವನದ, ವೃತ್ತಿ ವಿಲಾಸದ ನಂತರದ ಇಲ್ಲಿಯವರೆಗೂ ಇದರಲ್ಲಿ ಯಾವುದೇ ಉತ್ಪ್ರೇಕ್ಷೆಗಳು ಇಲ್ಲದಿರುವುದು ಇದರ ವಿಶೇಷ,” ಎನ್ನುತ್ತಾರೆ ರಘುನಾಥ್ ಕೃಷ್ಣಮಾಚಾರ್ ಅವರು ಮೋಹನ ಹಬ್ಬು ಅವರ “ಮುಸ್ಸಂಜೆಯ ಆಲಾಪ” ಕೃತಿ ಕುರಿತು ಬರೆದ ವಿಮರ್ಶೆ.
ಮೋಹನ್ ಹಬ್ಬು: ಇವರ ಈ ಕೃತಿ ಹಲವು ಕಾರಣಗಳಿಗಾಗಿ ಕನ್ನಡದಲ್ಲಿ ವಿಶಿಷ್ಟ ಆತ್ಮ ಚರಿತ್ರೆ. ಅವುಗಳಲ್ಲಿ ಕೆಲವು 1: ವೈಯಕ್ತಿಕ: ಅವರ ವೈಯಕ್ತಿಕ ಜೀವನ ಯಾತ್ರೆಯ ವಿವರಗಳು ಯಥಾವತ್ತಾಗಿ ದಾಖಲಾಗಿದೆ, ಬಾಲ್ಯದ, ಯೌವನದ, ವೃತ್ತಿ ವಿಲಾಸದ ನಂತರದ ಇಲ್ಲಿಯವರೆಗೂ ಇದರಲ್ಲಿ ಯಾವುದೇ ಉತ್ಪ್ರೇಕ್ಷೆಗಳು ಇಲ್ಲದಿರುವುದು ಇದರ ವಿಶೇಷ. ಮಾಡಿದ ತಪ್ಪುಗಳನ್ನು, ಪಟ್ಟ ಪಾಡುಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಜತೆಗೆ ತಮ್ಮ ನೆರವಿಗೆ ಬಂದ ಎಲ್ಲರನ್ನೂ ಪ್ರತಿ ಅಧ್ಯಾಯದ ಕೊನೆಯಲ್ಲಿ ಸ್ಮರಣೆ ಮಾಡಿದ್ದಾರೆ. ನಮ್ಮ ಮೇಷ್ಟ್ರು ಜಿ.ಎಸ್.ಎಸ್. ಅವರ “ಎನಿತು ಜೀವರಿಗೆ ಎನಿತು ಋಣಿಯ ಖಣಿಯೋ " ಎಂಬ ಮಾತು ಇಲ್ಲಿ ಅನುರಣಿಸಿದೆ.
ವೈಯಕ್ತಿಕ ನೆಲೆಯಲ್ಲಿ ಗಾಂಧಿ ಆತ್ಮ ಚರಿತ್ರೆಯನ್ನ ನೆನಪಿಗೆ ತರುವ ಎರಡು ಘಟನೆಗಳು ಇವೆ. ಅವು: ಅಪ್ಪನ ಕಿಸೆಯಿಂದ ಕದ್ದಿದ್ದು, ಮತ್ತು ಬೀಡಿ ಸೇದಿದ್ದು. ಅವರ ಶೈಕ್ಷಣಿಕ ಜೀವನ ಮೂರು ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಅವು: 1:ಇವರನ್ನು ಅವರ ತಂದೆ ಮುಂದಿನ ಶಿಕ್ಷಣಕ್ಕೆ ನೆರವು ಕೋರಿ ಒಬ್ಬ ಜಮೀನುದಾರರ ಬಳಿಗೆ ಕರೆದುಕೊಂಡು ಹೋದರು. ಆಗ ಅವರು ನಾಲ್ಕಾಣೆಯನ್ನು ಅವರ ಕಡೆಗೆ ಎಸೆದದ್ದು. 2: ಅಣ್ಣ ತಮ್ಮ ಇಬ್ಬರೂ ಹಂಚಿಕೊಂಡು ಅರೆಹೊಟ್ಟೆ ಉಂಡು ಪ್ರೌಢ ಶಿಕ್ಷಣ ಪಡೆದದ್ದು. 3: ಬರಿಗಾಲಲ್ಲಿ ಅವರ ಅರ್ಧ ಶಿಕ್ಷಣ ನಡೆಯಿತು. ಕಲಿಸುತ್ತಲೇ ಕಲಿಯಬೇಕಾಗಿ ಬಂದದ್ದು. ಅವರು ಶಿಕ್ಷಣ ಕ್ಷೇತ್ರದಲ್ಲಿ ಎದುರಿಸಿದ ಸವಾಲುಗಳು. ಬಹುತೇಕ ಬಿ.ಜಿ.ಎಲ್ ಸ್ವಾಮಿ ಅವರ ಪ್ರಾಧ್ಯಾಪಕನ ಪೀಠದಲ್ಲಿ ಮತ್ತು ಕಾಲೇಜು ರಂಗಗಳನ್ನ ನೆನಪಿಗೆ ತರುತ್ತವೆ. ಆ ಸವಾಲುಗಳು ಇವರನ್ನು ಧೃತಿಗೆಡಿಸಿ ಆರು ತಿಂಗಳ ಕಾಲ ಮಾನಸಿಕ ಅಸ್ವಸ್ಥರಾಗಿದ್ದರು. ಆಗ ಇವರನ್ನು ಕಾಪಾಡಿಕೊಂಡ ದೇವಿ ಎಂದು ಅವರು ತಮ್ಮ ಶ್ರೀಮತಿಯನ್ನು ಕೊಂಡಾಡಿದ್ದಾರೆ. ಅಲ್ಲದೆ ಆಗ ತಮಗೆ ಬೆಂಬಲವನ್ನು ನೀಡಿದ ಆಡಳಿತ ವರ್ಗದವರನ್ನು ಕೂಡ.
2: ಕೌಟುಂಬಿಕ ನೆಲೆಯಲ್ಲಿ: ಅವರ ತಂದೆಯವರು ಬರೆದು ಇಟ್ಟಿದ್ದ ಟಿಪ್ಪಣಿಗಳನ್ನು ಆಧರಿಸಿ ಅವರ ಜೀವನದ ಚರಿತ್ರೆಯ ಪುನಾರಚನೆ ಮಾಡಿದ್ದಾರೆ. ಅದರಲ್ಲಿ ಅವರ ಪ್ರಾಮಾಣಿಕತೆಯನ್ನು ಮೆಚ್ಚಿದರು, ಬೀಡಿ ಚಟ ಬಿಡಲಾರದೆ ಗಂಟಲಿನ ಕ್ಯಾನ್ಸರ್ ಗೆ ತುತ್ತಾದ ದುರಂತ ಮತ್ತು ಅದರಿಂದ ಮೂರಾಬಟ್ಟೆಯಾದ ತಮ್ಮ ಬದುಕನ್ನು ಕೂಡ ದಾಖಲೆ ಮಾಡಿದ್ದಾರೆ. ಇಷ್ಟಾದರು ಅವರು ಮಾಡಿದ ಐದು ಗುಂಟೆ ನೆಲ ಮಾರಿ ಅದರಿಂದ ಬಂದ ಹಣವನ್ನು, ಇವರು ಮನೆ ಕಟ್ಟಲು ಸಹಾಯಕ್ಕೆ ಬಂದುದನ್ನು ನೆನೆದು ಕೃತಜ್ಞತೆ ಸಲ್ಲಿಸಿದ್ದಾರೆ. ಇವರ ಅಣ್ಣ ಮತ್ತು ತಮ್ಮಂದಿರು ದಡ ಹತ್ತಿ, ಎಲ್ಲರೂ ಲೇಖಕರಾಗಿರುವ ವೈಶಿಷ್ಟ್ಯವನ್ನು, ಅದಕ್ಕೆ ತಮ್ಮ ತಂದೆಯವರ ಬರವಣಿಗೆ ಮೂಲಸ್ಪೂರ್ತಿ ಎಂದಿದ್ದಾರೆ. ಕಾರಂತರ ಪ್ರಸಿದ್ಧ ಹೇಳಿಕೆ "ರಕ್ತದಿಂದ ಬರುವುದು ಖಾಯಿಲೆ ಮಾತ್ರ" ಯನ್ನು ಸುಳ್ಳು ಮಾಡಿದ ಶ್ರೇಯಸ್ಸು ಈ ಸೋದರರಿಗೆ ಸಲ್ಲುತ್ತದೆ.
3. ಸಾಮುದಾಯಿಕ ನೆಲೆಯಲ್ಲಿ: ಇವರ ಹಬ್ಬು ಸಮುದಾಯದ ಮೂಲಚೂಲಗಳ ಜೊತೆಗೆ, ಇತರ ಉತ್ತರ ಕನ್ನಡ ಜಿಲ್ಲೆಯ ಸಮುದಾಯಗಳಾದ ನಾಡವರು, ಹಳೆಪೈಕರು, ಹಾಲಕ್ಕಿ ಮುಂತಾದವರ ವೈಶಿಷ್ಟ್ಯಗಳನ್ನು ಇಲ್ಲಿ ದಾಖಲಿಸಿದ್ದಾರೆ.
4: ಶೈಕ್ಷಣಿಕ ನೆಲೆ: ದಿನಕರ ದೇಸಾಯಿ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆನರಾ ವೆಲ್ಫೇರ್ ಟ್ರಸ್ಟ್ ಮೂಲಕ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಅಲ್ಲಿ ಹಲವಾರು ಶಾಲೆ ಕಾಲೇಜುಗಳನ್ನು ಪ್ರಾರಂಭಿಸಲು ಕಾರಣಪುರುಷರಾದರು. ಅದರ ಪರಿಣಾಮವಾಗಿ ಅಲ್ಲಿನ ವಿವಿಧ ಸಮುದಾಯಗಳಿಗೆ ಸೇರಿದ ಜನ, ಅದರ ಪ್ರಯೋಜನವನ್ನು ಪಡೆದು, ಅಭಿವೃದ್ಧಿ ಹೊಂದಿದ್ದನ್ನು ಇವರು ಪ್ರತ್ಯಕ್ಷ ಸಾಕ್ಷಿಯಾಗಿ ದಾಖಲಿಸಿದ್ದಾರೆ.
5: ಪ್ರಾದೇಶಿಕ ನೆಲೆಯಲ್ಲಿ: ಮುಖ್ಯವಾಗಿ ಉತ್ತರ ಕನ್ನಡದ ಅಂಕೋಲಾ ಮತ್ತು ಕಾರವಾರ ಜಿಲ್ಲೆಗಳ ಐದು ದಶಕದ ಇತಿಹಾಸವನ್ನು ಕಟ್ಟಿಕೊಟ್ಟಿದ್ದಾರೆ.ಅವುಗಳ ಸರ್ವಾಂಗೀಣ ಅಭಿವೃದ್ಧಿಗೆ ಇವರು ಜೀವಂತ ಸಾಕ್ಷಿಯಾಗಿದ್ದಾರೆ. ಇವರು ಅಲ್ಲಿನ ಕರ್ನಾಟಕ ಸಂಘದ ಮೂಲಕ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸಲು ಪಡೆದ ಪ್ರೇರಣೆ ಮತ್ತು ಅಲ್ಲಿನ ಇತರ ಲೇಖಕರ ಸಹಕಾರದಿಂದ ಅಲ್ಲಿ ಸಾಹಿತ್ಯ ಸಮ್ಮೇಳನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ನಡೆಸಲು ಸಾಧ್ಯವಾದುದಕ್ಕೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಮೂಲತಃ ವಿಜ್ಞಾನದ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ, ಇವರು ಮಾಡಿದ ಈ ಸಾಧನೆಗಳು ಎಲ್ಲ ಅಡೆತಡೆಗಳನ್ನು ದಾಟಿ - ನಮಗೆ ಮಾದರಿ.
- ರಘುನಾಥ್ ಕೃಷ್ಣಮಾಚಾರ್
“ಇದು ನನ್ನ ಅಂತರಂಗದ ಭಾವನೆಗಳನ್ನು ಅಕ್ಷರರೂಪಕ್ಕಿಳಿಸಿದ ಕೃತಿ. ಜೊತೆಗೆ ನಾವು ಭೇಟಿಯಿತ್ತ ಸ್ಥಳಗಳ ಬಗೆಗಿನ ಮಾಹಿ...
“ಮನುಷ್ಯನ ಒಳಿತು-ಕೆಡುಕು ಪ್ರವೃತ್ತಿಗಳ ಬಗ್ಗೆ ಗಮನಸೆಳೆಯುವ 'ಆತ್ಮಸಾಕ್ಷಿ' ಹಾಗೂ 'ಸರ್ವೆ ನಂಬರ್-...
“ಜಗತ್ತಿನ ಎಂಟು ಧರ್ಮಗಳು ಪ್ರತಿಪಾದಿಸಿದ ದೇವರು, ಜಗತ್ತು, ಜೀವ, ಸ್ವರ್ಗ- ನರಕಗಳ ಪರಿಕಲ್ಪನೆ, ಕರ್ಮ-ಪುನರ್ಜನ್ಮ...
©2024 Book Brahma Private Limited.