ಅನನ್ಯ ಆತ್ಮ ಸಾಂಗತ್ಯದ ಸ್ಪೂರ್ತಿ ಚೇತ‌ನವೇ ಈ ಕವಿತೆಗಳು...


"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದಿರುವಂತವು. ಕವಿಯು ಸಮಾಜದ ದನಿಯಾಗಿ ಅವರು ಕಂಡು ಕೊಂಡ ರೀತಿ,ಅಮೂರ್ತ ಕಲ್ಪನೆಗಳಿಗೆ ಮೂರ್ತತೆಯ ಕಲಾಕಾರಿಕೆಯನ್ನು ಕುಂಚದಲ್ಲಿ ಕಟ್ಟುವ ಒಂದು ಸಣ್ಣ ಪ್ರಯತ್ನ," ಎನ್ನುತ್ತಾರೆ ವಾಣಿ ಭಂಡಾರಿ. ಅವರು ತಮ್ಮ ‘ಖಾಲಿ ಜೋಳಿಗೆಯ ಕನವರಿಕೆಗಳು’ ಕೃತಿಗೆ ಬರೆದ ನನ್ನುಡಿ ನಿಮ್ಮ ಓದಿಗಾಗಿ..

"ಮನದ ಭಾವ ಹಾಡಾದಾಗ”

“ಮುಳ್ಳಿನ ಮೇಲಿನ ಸಿಟ್ಟಿಗೆ
ಬೇಲಿಗೆ ಬೆಂಕಿ ಹಾಕಬೇಡ
ಸಾವಿರ ಮುಳ್ಳುಗಳ ನಡುವೆ
ಒಂದು ಹೂ ಅರಳಿತು”
(ಗಾಲೀಬ)

ಕವಿತೆ ಬರೆಯುವುದೆಂದರೆ ಮನದ ಭಾವಕ್ಕೆ ಹೆಪ್ಪು ಹಾಕಿ ಮಸೆದು ಕಾಯಿಸಿ ಘಮಗುಡಿಸಿ ತುಪ್ಪವಾಗಿಸುವ ಕೆಲಸ. ಇಂತಹ ಮಹತ್ಕಾರ್ಯವು ಯಾಕೆ ಏನು ಹೇಗೆ ಎಲ್ಲಿ ಉಧ್ಭವಿಸುತ್ತವೆ ಎಂಬುದು ಕವಿಯ ಆ ಕ್ಷಣದ ಭಾವದೊರೆತೆಗೂ ಕೂಡ ನಿಲುಕದ ವಿಚಾರ. ಒಟ್ಟಾರೆ ಕವಿ ಸಮಯ ಎನ್ನುವುದು ಕಾವ್ಯದ ತುಮುಲವನ್ನು, ತಲ್ಲಣ, ತಳಮಳ, ಬೇನೆ, ಮುಂತಾದ ಭಾವಾತೀತವಾದ ಭಾವಕ್ಕೆ ಕೈಗೆಟುದಿರುವ ಅಂಶಗಳು ಆ ಕವಿ ಸಮಯದಲ್ಲಿ ಹುಟ್ಟಿಕೊಳ್ಳುವುದು ಸ್ವತಃ ಕವಿಗೂ ಕೂಡ ಅಚ್ಚರಿಯ ಸಂಗತಿ. ಕವಿತೆ ಕಟ್ಟುವುದಲ್ಲ ಹುಟ್ಟುವುದು ಎಂಬಂತೆ ಇಲ್ಲಿರುವ ಕವಿತೆಗಳು ತಾನಾಗಿ ಚಿಗುರೊಡೆದು ಬೃಹದಾಕಾರವಾಗಿ ಹುಟ್ಟಿ ಹೊರ ಬಂದಂತಹವು. “ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದಿರುವಂತವು. ಕವಿಯು ಸಮಾಜದ ದನಿಯಾಗಿ ಅವರು ಕಂಡು ಕೊಂಡ ರೀತಿ, ಅಮೂರ್ತ ಕಲ್ಪನೆಗಳಿಗೆ ಮೂರ್ತತೆಯ ಕಲಾಕಾರಿಕೆಯನ್ನು ಕುಂಚದಲ್ಲಿ ಕಟ್ಟುವ ಒಂದು ಸಣ್ಣ ಪ್ರಯತ್ನ.

ಪ್ರೀತಿಯ ಹಲವು ಮಗ್ಗುಲುಗಳನ್ನು ವಿವೇಚಿಸುವ ನಿಟ್ಟಿನಲ್ಲಿ ಪ್ರೀತಿಗೆ ಪ್ರೀತಿಯೇ ಜಗತ್ತು.ಅದರಾಚೆಯ ಪ್ರಪಂಚ ಇನ್ನೊಂದು ಇದೆಯೊಂಬುದೊಂದು ಕಲ್ಪನೆ ಸಹ ಇರಲಾದಂತಹ ಭಾವತೀವ್ರತೆಯೇ ಪ್ರೀತಿ ಎಂಬ ನಿಲುವಿನಲ್ಲಿ ದೈವಿಕ ಪ್ರೇಮಜಲವೆಂದೂ ಬತ್ತದ ಒರತೆಯಂತೆ ಸದಾ ಚಿಮ್ಮಿ ಚೈತನ್ಯ ಶೀಲವಾಗಿ ಮಿನುಗುವ ನಕ್ಷತ್ರದಂತೆ ಕಾಣುವುದು. ಅಮೂರ್ತ ಭಾವಗಳಿಗೂ ಇಲ್ಲಿ ಸಾಗರಸಾಂಗತ್ಯದ ಸೆಳವಿದೆ, ಭಾವಗಳ ಹೋಯ್ದಾಟದಲ್ಲಿ ಆತ್ಮ ಸಂಗಾತಿಯೊಂದಿಗೆ ವಿಹರಿಸಿ ಜನ್ಮ ಸಾರ್ಥಕ್ಯಗೊಳಿಸುವ ಪರಿಪೂರ್ಣ ಮಾನನೀಯವಾದ ಭಾವದ ಎಲ್ಲೆಗಳು ಎಳೆ ಬಿಸಿಲಿಗೆ ಹೊಳೆವ ನೀರ ಹನಿಯಂತೆ ಗೋಚರಿಸುತ್ತವೆ.

ಕವಿ ಭಾವವೊಂದು ಕಾವ್ಯದೊಂದಿಗೆ ಸಾಂಗತ್ಯ ಬೆಳೆಸುವಂತೆ, ಪ್ರೀತಿ ಭಾವವೊಂದು ಪ್ರೀತಿಯಿಂದ ಪ್ರೀತಿಯೊಂದಿಗೆ, ಪ್ರೀತಿಗಾಗಿ ಆತ್ಮ ಸಾಂಗತ್ಯದಲ್ಲಿ ಸಖ್ಯ ಬೆಳಸಿ ಬಾಹ್ಯ ಸೌಂದರ್ಯಕ್ಕೆ ಒಳಗೊಳ್ಳದೆ ಆಂತರಿಕ ಭಾವೋದ್ವೇಗದಲ್ಲಿ ಹನಿ ಹನಿಯಾಗಿ ಹರಿದು ಜಗದಗೊಡವೆ ಮರೆತು ಸಾಗರ ಸೇರುವ, ಜನ್ಮ ಜನ್ಮಾಂತರ ನಂಟಿನ ಭಾವಗಳೇ ಎನಿಸುವ ಈ ನಕ್ಷತ್ರಪುಂಜದ ಬೆಳಗು ಈ ಪ್ರೀತಿ ಸೊಬಗು.

ಆಧುನಿಕ ಬದುಕಿನ ಜಂಜಾಟದ ನಡುವೆ ಭಿನ್ನ ಭಿನ್ನ ಕಾರ್ಯ ಕಲಾಪನ್ನು ಪರಿಶೀಲಿಸುವಾಗ ನೈಜ ಪ್ರೀತಿಗೆ ಜೀವಂತಿಕೆಯನ್ನು ಹೊಂದಿದ ಪಾವಿತ್ರ್ಯೆಯ ಅಂತಃಕರಣವಿರುವುದನ್ನು ನಾವು ಮರೆತಂತೆ ಆಗಿದೆ. ಆ ಹಂಬಲಿಕೆ ಕನವರಿಕೆ ಕನಸು ತಲ್ಲಣಗಳು ವಿವಿಧ ಹಂತಗಳಲ್ಲಿ ಕಾವ್ಯದುದ್ದಕ್ಕೂ ಅವನಿಗಾಗಿ ಆಕೆಯ ಒಳ ಬೇಗುದಿಗಳು ಜೀವಂತಿಕೆಯನ್ನು ಪಡೆದಿವೆ. ಪ್ರೀತಿ ಇರದೆ ಈ ಜಗದಲ್ಲಿ ಏನಿದೆ? ಪ್ರೀತಿಯೇ ಎಲ್ಲ ಎಂಬ ನವಿರು ಭಾವದ ಜಗತ್ತು ತೆರೆದುಕೊಂಡಿದೆ. ಪ್ರೀತಿಯನ್ನು ವಿಶ್ಲೇಷಣೆಗೆ ಒಳಪಡಿಸಲುಬಾರದು ಹಾಗೂ ವಿಶ್ಲೇಷಿಸಲಾಗದು.

ಒಂದು ಹಂತದಲ್ಲಿ ಪ್ರೀತಿಯೇ ಜಗತ್ತು ಎಂದ ಕವಯತ್ರಿ ಅದರ ವೈರುದ್ಯಗಳನ್ನು ಇನ್ನೊಂದು ಮುಖದಲ್ಲಿ ಕಾಣುತ್ತಾರೆ. ಇಲ್ಲಿ ಕಾಣುವ ಬಹುಪಾಲು ಮಹಿಳೆಯರು ಹೆಚ್ಚಾಗಿ ಬಡತನದ ಬೇಗೆ ಅಥವಾ ತಳಸ್ತರದ ನೋವು, ಸಮಾಜದ ಟೀಕೆ ಟಿಪ್ಪಣಿಗಳಿಗೆ ನರಳಿ ನೊಂದ ಭಾವ, ಹಸನಾದ ಪ್ರೀತಿಗೆ ಹೆಸರಿಡಲಾಗದೆ ನೈತಿಕತೆಯ ನೆಲೆಯ ತಳಮಳ, ಅನ್ಯಾಯ, ಸಂಪ್ರದಾಯದ ಶೋಷಣೆಗೆ ಮೈಯೊಡ್ಡಿ ನಿಂತ ಕರಾಳತೆಯ ಹಿಂಸೆ,ನಂಬಿಕೆಯ ಕೊಲೆಗೆ ಪ್ರೀತಿ ಎಂಬ ಎರಡಕ್ಷರದ ಹಿಂದೆ ನಡೆಯುವ ಆಗೋಚರ ಭಾವಾಂತರಂಗದ ತಲ್ಲಣ, ಹಾಗೂ ಮನುಷ್ಯ ಪ್ರೀತಿಯನ್ನೆ ಕಳೆದು ಕೇವಲ ದಾಸ್ಯದ ನೆರಳಿನಲ್ಲಿ ನೋವುಣ್ಣುವ ಚೋಮನ ಪದದಿಂದ ಬೆಳ್ಳಿಯ ದಿಟ್ಟತೆಯವರೆಗೂ ಹಬ್ಬಿ, ಎಲ್ಲರೊಳಗೆ ನಿಲೆ ನಿಂತ ಅವ್ವ ಈ ನೆಲದ ಒಂದು ಶಕ್ತಿಯಾಗಿ ರೂಪಕವಾಗಿ ಮತ್ತೆ ಕಾಡುತ್ತಾಳೆ, ಜತನಗೈಯ್ದು ಕಾಯುವ ಧೀಶಕ್ತಿ ಎಲ್ಲರೊಳಗೆ ಅವ್ವ ಮತ್ತೆ ಮತ್ತೆ ಹೆಣ್ಣಿನಂತರಂಗ ಒಳಹೊಕ್ಕು ಹೊರಹೊಮ್ಮುತ್ತಾಳೆ. ಗಂಡು ರಾಜಕಾರಣದ ಹಿನ್ನೆಲೆಯಲ್ಲಿ ಪ್ರಭುತ್ವವು ತನ್ನ ಕಪಿಮುಷ್ಟಿಯಲಿ ಕಾರುಣ್ಯದ ಬೆಳಕು ನೀಡದೆ ಸ್ತ್ರೀಯರನ್ನು ಬಲಿಪಶುವಾಗಿಸುವ ಅನಾದಿ ಕಾಲದ ಶೋಷಣೆಯ ದನಿಯಾಗಿ ಕವಯಿತ್ರಿ ವೃಷ್ಟಿ ನೆಲೆಯಿಂದ ಸಮಷ್ಟಿಯ ದನಿಯಾಗಿ ಪ್ರತಿನಿಧಿಸುತ್ತಾರೆ. ಇಂತಹ ಕವಿತೆಗಳು ಯಾಕೆ ಸೃಷ್ಟಿಯಾದವು ಎಂಬ ಸಹಜ ಚಿಂತನೆಗೆ ನಾನು ಮೊದಲೆ ತಿಳಿಸಿದಂತೆ, ಕವಿ ಸಮಯದ ಚಮತ್ಕಾರ ಮತ್ತು ಜೀವಸೆಲೆಗೆ ಚೈತನ್ಯವನ್ನು ನೀಡುವುದೇ ಈ ದೈವಿಕ ಪ್ರೀತಿಯಾದ್ದರಿಂದ ಅದೊಂದು ಅನನ್ಯ ಆತ್ಮ ಸಾಂಗತ್ಯದ ಸ್ಪೂರ್ತಿ ಚೇತ‌ನವೇ ಈ ಕವಿತೆಗಳು.

ಈ ಹಿನ್ನೆಲೆಯಲ್ಲಿ ನನ್ನೆಲ್ಲ ಕವಿ ಭಾವದ ಬಸಿರಿನ ಬಯಕೆ ಬೇನೆ ಜನನ ನಾಮಕರಣ, ಮಗುವಿನ ಅಳು ನಗು ತುಂಟಾಟ ಕೀಟಲೆ ಸಹಿಸಿಕೊಂಡು ಎಲ್ಲವನ್ನು ಮೊದಲಾಗಿ ವಿಮರ್ಶಿಸಿ ಚರ್ಚಿಸಿ ಸರಿ ತಪ್ಪುಗಳ ಅವಲೋಕಿಸಿ, ಭಾವಬುದ್ದಿಗೆ ಒಂದಿಷ್ಟು ಬುದ್ದಿ ಹೇಳಿ ಬದುಕು ಬರಹಕ್ಕೆ ಬೆಳಕಾದ ಎಸ್. ಎಸ್ .ಕೆ ಮತ್ತು ಎಸ್.ಕೆ. ಇವರಿಗೂ ನಾನು ಅನಂತ ಋಣಿಯಾಗಿದ್ದೇನೆ. ನನ್ನ ನೆಚ್ಚಿನ ಹಿತೈಷಿಗಳಿಗೆ, ಮಿತ್ರವೃಂದಕ್ಕೆ, ಮುಖಪುಟದ ಎಲ್ಲ ಸ್ನೇಹಿತರಿಗೆ, ನನ್ನಾಳದಲ್ಲಿ ಬೆರೆತ ನನ್ನ ಜೀವದ ಗೆಳತಿಗೆ ಹಾಗೂ ನನ್ನ ಸರಿ ತಪ್ಪುಗಳ ವಿವೇಚಿಸುವ ಮುದ್ದಿನ ತಂಗಿಗೆ ಮತ್ತು ನೋವಲ್ಲೂ ನಲಿವಲ್ಲೂ ಜೊತೆಯಾದ ನನ್ನ ಸಹೋದರಿಯರಿಗೆ ನೆನಕೆಗಳು.

ನನ್ನ ಜೀವ ಭಾವದಲ್ಲಿ ಬೆರೆತು ಬದುಕಿಗೆ ನೆರಳಾಗಿ ನಿಂತು, ಕಷ್ಟದಲ್ಲಿ ಸುಖದಲ್ಲಿ ಜೊತೆಗೂಡಿ ಕೈ ಹಿಡಿದು ನಡೆಸುವ ನನ್ನ ಆತ್ಮಸಂಗಾತಿಗೆ ಕೃತಜ್ಞತೆಗಳು ಧನ್ಯವಾದಗಳು ಇವೆಲ್ಲ ಕೇವಲ ಪದಗಳಷ್ಟೆ. ಅದರಾಚೆಗಿನ ಬದುಕಿಗೆ ಸಾರಥಿಯಾದ ಪ್ರೇಮದ ಮೂರ್ತಿಗೆ ನನ್ನೊಲವಿಗೆ ನಾನೆಂದು ಅಬಾರಿ ಋಣಿಯಾಗಿದ್ದೇನೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನ್ನ ಬರಹಕ್ಕೆ ಪ್ರೇರಣ ಶಕ್ತಿಯಾದ ಸೃಜನಶೀಲ ಮನಸುಗಳಿಗೆ, ಆತ್ಮೀಯರಿಗೂ ಮತ್ಯೊಮ್ಮೆ ಮಗದೊಮ್ಮೆ ಕೃತಜ್ಞತೆಗಳು.

ಸಂಕಲನದ ಕಾರ್ಯಭಾರ ಹೊತ್ತು ಪ್ರಕಟಿಸುತ್ತಿರುವ ಆಪ್ತರಾದ ಗೋಮಿನಿ ಪ್ರಕಾಶನದ ಗುಬ್ಬಚ್ಚಿ ಸತೀಶ್ ಅವರಿಗೆ ಅವರ ಪರಿಶ್ರಮಕ್ಕೆ ನನ್ನ ಕೃತಜ್ಞತೆಗಳು. ಖಾಲಿ ಜೋಳಿಗೆಯ ಕನವರಿಕೆಗಳು ಸಹೃದಯರ ಕನವರಿಕೆಗಳಾಗಿಯು ಎದೆಯೊಳಗೆ ನೆಲೆ ನಿಂತಿರಬಹುದು.ಈ ಹಿನ್ನೆಲೆಯಲ್ಲಿ ಕಾವ್ಯ ನಮೆಲ್ಲರ ದನಿ. ಈ ಕನವರಿಕೆಗಳನ್ನು ಕೊಂಡು ಓದುವ ಸಂಪ್ರದಾಯ ಇರಲೆಂದು ಬಯಸುತ್ತೇನೆ.

- ವಾಣಿ ಭಂಡಾರಿ

MORE FEATURES

ಬೇಸರವನ್ನೋಡಿಸುವ ತಾಕತ್ತಿನ ‘ಬೇಸೂರ್’

22-11-2024 ಬೆಂಗಳೂರು

"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...

ಅಂತಃಕರಣ ಕರೆವಾಗ ಎಂಥ ಕಾರಣವಿದ್ದರೂ ಕುಂತ ಜಾಗದಿಂದಲೇ ಧಾವಿಸು

21-11-2024 ಬೆಂಗಳೂರು

‘‘Small is beautiful and small is the soul of universe’ ಎಂಬ ಸತ್ಯವನ್ನು ಇವರ ಕವಿತೆಗಳ ...