ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಹಿಂದಿ ಹೇರಿಕೆ ಸಲ್ಲ: ಗೊ.ರು. ಚನ್ನಬಸಪ್ಪ

Date: 20-12-2024

Location: ಮಂಡ್ಯ


ಸಂವಿಧಾನದ 351ನೇ ವಿಧಿಯ ಅನ್ವಯ ಹಿಂದಿ ಭಾಷೆಗೆ ಆದ್ಯತೆ ನೀಡುವ ಅವಕಾಶವಿದ್ದರೂ ಅದು ಹೇರಿಕೆ ಮತ್ತು ದಬ್ಬಾಳಿಕೆ ರೂಪದಲ್ಲಿ ಜಾರಿಗೆ ಬರಬಾರದು. ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂದು ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾದ ಡಾ. ಗೊ.ರು. ಚನ್ನಬಸಪ್ಪ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ʻರಾಜ್ಯಗಳ ಮೇಲೆ ಹಿಂದಿ ಹೇರಿಕೆʼ ಮೇಲಿನ ಮಾತನ್ನು ಮಂಡಿಸಿದರು.

ಮಂಡ್ಯ: ಭಾರತ ದೇಶದ ಭಾಷೆ, ಸಂಸ್ಕೃತಿ, ಆಚರಣೆ ಎಲ್ಲವೂ ಪ್ರಾದೇಶಿಕವಾಗಿ ಮತ್ತು ಸಾಮಾಜಿಕವಾಗಿ ಬಹುರೂಪಿಯಾಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಭಾರತದ ಪ್ರಜೆಗಳಾಗಿರುವ ಅದೃಷ್ಟವಿದ್ದರೂ ವೈಯಕ್ತಿಕವಾಗಿ ಅವರವರ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇದೆ. ಇದು ಭಾಷೆಯ ವಿಚಾರಕ್ಕೂ ನಿಜ.

ಆದರೆ 'ಭಾರತದ ಜನರೆಲ್ಲರೂ ಸಂವಹನ ನಡೆಸಲು ಹಿಂದಿ ಭಾಷೆಯನ್ನು ಕಲಿತು ಬಳಸಬೇಕು, ಅದೇ ನಮ್ಮ ರಾಷ್ಟ್ರ ಭಾಷೆ' ಎಂಬುದನ್ನು ಲಿಖಿತವಾಗಿ ಮತ್ತು ಅಲಿಖಿತವಾಗಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹೇರುವ ಹುನ್ನಾರವನ್ನು ಹಿಂದಿನ ಮತ್ತು ಇಂದಿನ ಕೇಂದ್ರ ಸರ್ಕಾರಗಳು ಮಾಡುತ್ತಲೇ ಬಂದಿವೆ. ಕೇಂದ್ರ ಸರ್ಕಾರಕ್ಕೆ ಒಳಪಟ್ಟ ಇಲಾಖೆಗಳು, ನಿಗಮ-ಮಂಡಲಿಗಳು, ಸಂಸ್ಥೆಗಳು, ಬ್ಯಾಂಕುಗಳಲ್ಲಿ ಕನ್ನಡದ ಸೊಲ್ಲು ಸಾಧ್ಯವಾದಷ್ಟೂ ಇರದಂತೆ ನೋಡಿಕೊಳ್ಳಲಾಗುತ್ತದೆ. ನಿಜವಾಗಿ ಹೇಳುವುದಾದರೆ, ಒಕ್ಕೂಟ ಸರ್ಕಾರವೇ ಸರಿಯಾದ ಸ್ವರೂಪವಾಗಿದ್ದು, ರಾಜ್ಯ ಸರ್ಕಾರಗಳಿಗೆ ಭಾಷೆಯೂ ಸೇರಿ ಅನೇಕ ವಿಷಯಗಳಲ್ಲಿ ಆಯ್ಕೆಯ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಇತರ ರಾಜ್ಯಗಳಿಗೂ ಇರುವಂತೆ, ನಮಗೂ ಇರುವ ಸಂವಿಧಾನದ 345ನೇ ವಿಧಿಯ ಪ್ರಕಾರ ಕನ್ನಡವೇ ನಮ್ಮ ರಾಜ್ಯದ ಅಧಿಕೃತ ಭಾಷೆ ಆಗಿದೆ. ಎಲ್ಲ ರಾಜ್ಯಗಳಿಗೂ ಒಂದೇ ಭಾಷೆಯನ್ನು ಹೇರುವುದು ಸಮರ್ಥನೀಯವಲ್ಲ.

ಬ್ಯಾಂಕು, ಅಂಚೆಕಚೇರಿಗಳಲ್ಲಿ ಸರಳ ವ್ಯವಹಾರಗಳಿಗೂ ಹಿಂದಿ ಭಾಷೆ ಬಳಸಬೇಕು ಎನ್ನುವುದು ಬಹುಪಾಲು ಜನರಿಗೆ ಎಟುಕುವ ಸಂಗತಿಯಲ್ಲ. ಅನೇಕ ಬ್ಯಾಂಕ್‌ಗಳ ಚಲನ್‌ಗಳಲ್ಲಿ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ವಿವರಗಳನ್ನು ತುಂಬುವ ಅವಕಾಶವಿರುವುದು ಗ್ರಾಹಕರಿಗೆ ಸದ್ದಿಲ್ಲದೆ ನೀಡುವ ಕಿರುಕುಳವಷ್ಟೆ. ಇನ್ನು ಬೇರೆ ಕ್ಲಿಷ್ಟ ವ್ಯವಹಾರಗಳ ಸಂವಹನವನ್ನು ಹಿಂದಿಯಲ್ಲಿ ನಿರ್ವಹಿಸುವ ಕಷ್ಟವನ್ನು ಯಾರಾದರೂ ಊಹಿಸಬಹುದು. ಸಂವಿಧಾನದ 351ನೇ ವಿಧಿಯ ಅನ್ವಯ ಹಿಂದಿ ಭಾಷೆಗೆ ಆದ್ಯತೆ ನೀಡುವ ಅವಕಾಶವಿದ್ದರೂ ಅದು ಹೇರಿಕೆ ಮತ್ತು ದಬ್ಬಾಳಿಕೆ ರೂಪದಲ್ಲಿ ಜಾರಿಗೆ ಬರಬಾರದು. ಕನ್ನಡನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎನ್ನುವುದು ನಿರ್ವಿವಾದ. ಇದನ್ನು ನಮ್ಮ ರಾಜ್ಯ ಸರ್ಕಾರ ಸರ್ವರೀತಿಯಲ್ಲೂ ಕೇಂದ್ರ ಸರ್ಕಾರಕ್ಕೆ ಮನಗಾಣಿಸಬೇಕು. ಇದಕ್ಕೆ ಕನ್ನಡಿಗರು ಪ್ರತಿರೋಧ ತೋರಿಸಿದರೆ ಅದು ತಪ್ಪೇನಲ್ಲ; ತಮಿಳುನಾಡು ಮುಂತಾದ ಮಾದರಿಗಳು ನಮ್ಮ ಜೊತೆಗೆ ಇದ್ದೇ ಇವೆ. ಕೇಂದ್ರದ ಪ್ರಭಾವಿ ಸಚಿವರುಗಳು ಈ ವಿಚಾರವನ್ನು ಆಗಾಗ ಪ್ರಸ್ತಾಪ ಮಾಡುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.

MORE NEWS

ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷ ನಡೆಯಲಿ:  ಅಮರನಾಥ ಗೌಡ  

22-12-2024 ಮಂಡ್ಯ

ಮಂಡ್ಯ: ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದ...

ಗಣಿನಾಡು ಬಳ್ಳಾರಿಯಲ್ಲಿ ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

22-12-2024 ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ ಆಯೋಜಿಸಲು ನಿರ...

ಸರ್ಕಾರಿ ಶಾಲೆಗಳ ಜಮೀನು ಒತ್ತುವರಿಗೆ ನಾವೇ ದನಿಯಾಗಬೇಕು: ಪುರುಷೋತ್ತಮ ಬಿಳಿಮಲೆ 

22-12-2024 ಮಂಡ್ಯ

ಮಂಡ್ಯ:  100 ವರ್ಷ ಪೂರೈಸಿದ ಶಾಲೆಗಳಿಗೆ ಆಟದ ಮೈದಾನ ಇತ್ತು. ಇಂದು ಅವು ಇಲ್ಲ. ಸ್ಥಳೀಯ ರಾಜಕಾಣಿಗಳ, ಪ್ರಭಾವಿಗಳ ...