2024ನೇ ಸಾಲಿನ ‘ಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿಗಳ

Date: 29-11-2024

Location: ಬೆಂಗಳೂರು


ಬೆಂಗಳೂರು: ಕಳೆದ ಹದಿನೆಂಟು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ, ಈ ಸಾಲಿನ ‘ಛಂದ ಪುಸ್ತಕ ಬಹುಮಾನ’ಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.

ಇದುವರೆಗೂ ಒಂದೂ ಕಥಾಸಂಕಲನ ಹೊರ ತಂದಿರದ ಕತೆಗಾರರಿಗೆ ಮಾತ್ರ ಅವಕಾಶವಿದೆ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು ಪ್ರಕಟವಾಗಿದ್ದರೆ ಪರವಾಗಿಲ್ಲ. ತಮಗೆ ಉತ್ತಮವೆನಿಸಿದ ಸುಮಾರು ಎಂಟರಿಂದ ಹತ್ತು ಸ್ವಂತ ಕತೆಗಳನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ, ಮುದ್ರಿತ ಪುಟಗಳನ್ನು ಕೊರಿಯರ್ ಮೂಲಕ ಕಳುಹಿಸಬೇಕು. ಮುದ್ರಿತ ಪುಟಗಳು A4 ನಲ್ಲಿ ಕನಿಷ್ಠ 50 ಪುಟಗಳಿರಲಿ. ಇ-ಮೇಲ್ ಮುಖಾಂತರ ಕತೆಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಯತಕಾಲಿಕಗಳಲ್ಲಿ ಪ್ರಕಟವಾದ ಅಥವಾ ಅಪ್ರಕಟಿತ ಕತೆಗಳೆರಡನ್ನೂ ಪರಿಗಣಿಸಿದರೂ, ಅಪ್ರಕಟಿತ ಕತೆಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಯ್ಕೆಯಾದ ಒಬ್ಬ ಕತೆಗಾರನಿಗೆ/ಳಿಗೆ ನಲವತ್ತು ಸಾವಿರ ರೂಪಾಯಿ ಬಹುಮಾನ ಕೊಟ್ಟು, ಅವರ ಕಥಾಸಂಕಲನವನ್ನು ಛಂದ ಪುಸ್ತಕ ಪ್ರಕಟಿಸುತ್ತದೆ. ಇದಲ್ಲದೆ ಉತ್ತಮವೆನಿಸಿದ ಇನ್ನೂ ಐದು ಕಥಾಸಂಕಲನಗಳನ್ನು ಗುರುತಿಸಿ, ಅವುಗಳ ಪುಸ್ತಕ ಪ್ರಕಟಿಸದಿದ್ದರೂ, ಎರಡು ಸಾವಿರ ರೂಪಾಯಿ ಬಹುಮಾನ ನೀಡಿ ಮೆಚ್ಚುಗೆಯ ಪತ್ರವನ್ನು ನೀಡಲಾಗುತ್ತದೆ. ಸುಂದರವಾದ ಸಮಾರಂಭದಲ್ಲಿ ಫಲಿತಾಂಶವನ್ನು ಘೋಷಿಸಲಾಗುವುದು. ಅನಂತರ ಪ್ರಥಮ ಬಹುಮಾನಿತ ಪುಸ್ತಕವನ್ನು ಮುದ್ರಿಸಲಾಗುವುದು. ಯಾರ ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ. ಆದ್ದರಿಂದ ಮೂಲಪ್ರತಿಯನ್ನು ಕಳುಹಿಸಕೂಡದೆಂದು ಕೋರುತ್ತೇವೆ. ಪುಸ್ತಕದ ಆಯ್ಕೆ ಮತ್ತು ಪ್ರಕಟಣೆಯಲ್ಲಿ ಪ್ರಕಾಶಕರದೇ ಅಂತಿಮ ನಿರ್ಧಾರವಾಗಿರುತ್ತದೆ.

ಕತೆಗಳನ್ನು ಕಳಿಸಬೇಕಾದ ವಿಳಾಸ:
ಛಂದ ಪುಸ್ತಕ, C/O ವಸುಧೇಂದ್ರ, ಐ-004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು–560 076 (ವಾಟ್ಸಾಪ್. 98444 22782)
ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ: ಡಿಸೆಂಬರ್ 30, 2024
ನಿಯಮಗಳು ಮತ್ತು ಹೆಚ್ಚಿನ ವಿವರಗಳಿಗೆ: me@vasudhendra.com / 98444 22782

ಸ್ಪರ್ಧೆಯಲ್ಲಿ ಭಾಗವಹಿಸುವವರು ಪಾಲಿಸಬೇಕಾದ ನಿಯಮಗಳು:

  • ಕತೆಗಳು ನಿಮ್ಮ ಸ್ವಂತದ್ದಾಗಿರಬೇಕು.
  • ಯಾವುದೇ ಕತೆಯ ಅನುವಾದ ಅಥವಾ ಅನುಕರಣೆಯಾಗಿರಬಾರದು.
  • ಛಂದ ಪುಸ್ತಕವು ಕೃತಿಚೌರ್ಯವನ್ನು ತೀಕ್ಷ್ಣವಾಗಿ ವಿರೋಧಿಸುತ್ತದೆ.
  • ಯಾವುದೇ ಕಾರಣಕ್ಕೆ ಕತೆಗಳು ಕೃತಿಚೌರ್ಯ ಎಂದು ಕಂಡು ಬಂದಲ್ಲಿ, ಫಲಿತಾಂಶ ಘೋಷಿಸಿದ ನಂತರವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
  • ಸಾರ್ವಜನಿಕವಾಗಿ ಕೃತಿಚೌರ್ಯವನ್ನು ಪುರಾವೆಯೊಂದಿಗೆ ಘೋಷಿಸಿ, ಮುಂದೆಂದೂ ಆ ಲೇಖಕರ ಕೃತಿಗಳನ್ನು ಪ್ರಕಟಿಸದಂತೆ ಕಪ್ಪುಪಟ್ಟಿಯಲ್ಲಿ ಹಾಕಲಾಗುವುದು.
  • ಸುಮಾರು 8-10 ಕತೆಗಳು ಸಾಕು. ಯಾವುದೇ ಕತೆಗೂ ಪದಮಿತಿ ಇಲ್ಲದಿದ್ದರೂ, ಒಟ್ಟಾರೆ ಕತೆಗಳು ಕನಿಷ್ಠ 20,000 ಪದಗಳನ್ನು ಮೀರಿದ್ದರೆ ಅನುಕೂಲ. ಯಾವುದೇ ಗರಿಷ್ಠ ಪದಮಿತಿ ಇರುವುದಿಲ್ಲ.
  • ಹಸ್ತಪ್ರತಿಯನ್ನು ಖಂಡಿತಾ ಹಿಂತಿರುಗಿಸಲಾಗುವುದಿಲ್ಲ. ದಯವಿಟ್ಟು ಮೂಲಪ್ರತಿಯನ್ನು ಕಳುಹಿಸಬೇಡಿ. ಪ್ರಥಮ ಬಹುಮಾನ ಪಡೆಯದ ಹಸ್ತಪ್ರತಿಯ ಮೇಲೆ ಛಂದ ಪುಸ್ತಕಕ್ಕೆ ಯಾವುದೇ ಹಕ್ಕು ಇರುವುದಿಲ್ಲ.
  • ಕೈಬರಹದ ಪ್ರತಿಯನ್ನು ಸ್ವೀಕರಿಸುವುದಿಲ್ಲ. ಫಲಿತಾಂಶ ಮಾಡುವ ನಿರ್ಣಾಯಕರಿಗೆ ಕೈಬರಹವನ್ನು ಓದಲು ಅನನುಕೂಲವಾಗುತ್ತದಾದ್ದರಿಂದ, ಕಂಪ್ಯೂಟರ್‌ನಲ್ಲಿ ಕೀಲಿಸಿದ, ಮುದ್ರಿತ ಪ್ರತಿಗಳನ್ನು ಮಾತ್ರ ಸ್ವೀಕರಿಸಲಾಗುವುದು.
  • ಪಠ್ಯವು ಪುಟದ ಒಂದು ಬದಿಗೆ ಮಾತ್ರ ಮುದ್ರಿತವಾಗಿದ್ದರೆ ಅನುಕೂಲ.
  • ದಯವಿಟ್ಟು ಯಾವುದೇ ಮುನ್ನುಡಿ, ಬೆನ್ನುಡಿ, ನನ್ನ ಮಾತು, ಫೋಟೋ – ಕಳುಹಿಸಬೇಡಿ. ನಿಮ್ಮ ಹಸ್ತಪ್ರತಿ ಆಯ್ಕೆಯಾದರೆ, ನಾವೇ ಅವುಗಳ ಏರ್ಪಾಟು ಮಾಡುತ್ತೇವೆ.
  • ನಿಮ್ಮ ವಿಳಾಸ, ಸಂಪರ್ಕ ಸಂಖ್ಯೆ, ಸ್ವವಿವರವುಳ್ಳ ಒಂದು ಪುಟವನ್ನು ಹಸ್ತಪ್ರತಿಯ ಜೊತೆಯಲ್ಲಿ ಕಳುಹಿಸಿ.
  • ಪ್ರಕಾಶಕರ ಮತ್ತು ನಿರ್ಣಾಯಕರ ಆಯ್ಕೆಯೇ ಅಂತಿಮವಾಗಿರುತ್ತದೆ.

MORE NEWS

ನನ್ನ ಬದುಕು ಸಾರ್ವಜನಿಕರದು; ಅ.ರಾ. ಮಿತ್ರ

30-11-2024 ಬೆಂಗಳೂರು

ಬೆಂಗಳೂರು: `ನೀನು ನೀನು ಅಂತ ಬದುಕ ಬೇಕು. ಸ್ವಾರ್ಥವೇ ಹೆಚ್ಚಾಗಿದೆ. ನನ್ನ ಬದುಕು ಸಾರ್ವಜನಿಕರದು. ಅವರು ಅವಕಾಶ ಕೊಡದಿದ...

ರಾಜ್ಯಮಟ್ಟದ `ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2024'ಕ್ಕೆ ಕೃತಿಗಳ ಆಹ್ವಾನ

30-11-2024 ಬೆಂಗಳೂರು

ಬಾಗಲಕೋಟೆ: ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ, ಯಂಡಿಗೇರಿ, ಬಾಗಲಕೋಟೆ ಇವರು 2024ನೇ ಸಾಲಿನ ರಾಜ್ಯಮಟ್ಟದ &l...

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ 10 ಮಂದಿ ಭಾಜನ

29-11-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2022 ಮತ್ತು 2023ನೇ ಸಾಲಿನಲ್ಲಿ ಕೊಡಮಾಡುವ ‘ಗೌರವ ಪ್ರಶಸ್ತಿ&rsquo...