“ವೃಥಾಪವಾದಕ್ಕೆ ಕೈದಿಯಾಗಬೇಕಾಗಿ ಬಂದ ಇವಾನ್ ದ್ಮಿತ್ರಿಚ್ ಅಕ್ಸಯೋನಫ್ ತನ್ನ ಸಂಯಮದಿಂದ ಎಲ್ಲರ ಮನಗೆದ್ದ, ಆ ಮೂಲಕ ನಿಜವಾದ ಅಪರಾಧಿ ತನ್ನ ತಪ್ಪನ್ನು ಒಪ್ಪಿಕೊಂಡು ಪರಿತಾಪ ಪಡುವ ಮನ: ಪರಿವರ್ತನೆಯ ಕಥೆ ಕೂಡ ಇಲ್ಲಿದೆ,” ಎನ್ನುತ್ತಾರೆ ರಘುನಾಥ್ ಕೃಷ್ಣಮಾಚಾರ್. ಅವರು ಎಚ್. ಎಸ್. ಹರಿಶಂಕರ್ ಅವರ ಅನುವಾದಿತ "ಟಾಲ್ ಸ್ಟಾಯ್ ಕಥೆಗಳು" ಕೃತಿ ಕುರಿತು ಬರೆದ ವಿಮರ್ಶೆ.
ಎಚ್. ಎಸ್. ಹರಿಶಂಕರ್: ಹಿರಿಯ ಕನ್ನಡ ವಿದ್ವಾಂಸರು, ಪ್ರಕಾಶನದ ಮೂಲಕ ಅನನ್ಯವಾದ ಕನ್ನಡ ಕೈಂಕರ್ಯ ಗೈದ ಪ್ರೊಫೆಸರ್ ಎಚ್.ಎಂ. ಶಂಕರನಾರಾಯಣ ಅವರ ಸುಪುತ್ರರಾದ ಎಚ್. ಎಸ್. ಹರಿಶಂಕರ್ ರಷ್ಯಾದಲ್ಲಿ ನೆಲೆಸಿ, ಅಲ್ಲಿನ ಭಾಷೆಯನ್ನು ಕಲಿತರು. ಹಲವು ರಷ್ಯನ್ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಕನ್ನಡದ ರಾಯಭಾರಿಯಾಗಿ ಕಾರ್ಯನಿರ್ವಹಿಸಿದರು. ನಿವೃತ್ತರಾದ ಮೇಲೆ ತಮ್ಮ ಊರಾದ ಮೈಸೂರಿಗೆ ಬಂದು ನೆಲೆಸಿದರು.
ನೇರವಾಗಿ ರಷ್ಯನ್ ಭಾಷೆಯಿಂದ ಅನುವಾದ ಮಾಡಿದ ಹಿರಿಯರಾದ ಎಚ್.ಎಸ್ ಹರಿಶಂಕರ್,ಮೇಲಿನ ಕೃತಿಯ ಕುರಿತು ಮೊಗ ಹೊತ್ತಿಗೆಯಲ್ಲಿ ಹಂಚಿಕೊಂಡಿದ್ದರು. ಅದನ್ನು ನೋಡಿದ ನಾನು 'ಓದಬೇಕು' ಎಂದ ಕೂಡಲೇ ಕಳಿಸಿ ಕೊಡುವುದಾಗಿ ತಿಳಿಸಿದರು. ಬೆಂಗಳೂರಿನಲ್ಲಿ ಇದ್ದ ಅವರು, ಮೈಸೂರಿಗೆ ಹೋದ ಕೂಡಲೇ, ನನ್ನ ಬೇಡಿಕೆಯನ್ನು ಮನ್ನಿಸಿ ಕಳಿಸಿ ಕೊಟ್ಟಿದ್ದಾರೆ.ಈಗ ಮಾಯವಾಗುತ್ತಿರುವ ಈ ಸೌಜನ್ಯಕ್ಕೆ ಅನಂತ ವಂದನೆಗಳು.
ಈಗಾಗಲೇ ವಿಶ್ವಖ್ಯಾತಿಯ ಬರಹಗಾರರು, ದಾರ್ಶನಿಕರು ಆದ ಟಾಲ್ ಸ್ಟಾಯ್ ಕೃತಿಗಳನ್ನು ಹಲವರು ಕನ್ನಡಕ್ಕೆ ತಂದಿದ್ದಾರೆ. ನಾವು ಓದುವ ಕಾಲಕ್ಕೆ, ಅವರ ಕೃತಿಗಳು ಕನ್ನಡದಲ್ಲಿ ಲಭ್ಯವಿಲ್ಲದ ಕಾರಣ ಇಂಗ್ಲಿಷ್ ಮೂಲಕವೇ, ಅವರ ಕಾದಂಬರಿ ಮತ್ತು ಕತೆಗಳನ್ನು ಓದಿ ಪ್ರಭಾವಿತರಾದವರಲ್ಲಿ ನಾನೂ ಒಬ್ಬ.ಅವರ ಅನ್ನಾಕೆರಿನಿನಾ ಕಾದಂಬರಿಯನ್ನು ಪರಿಣಾಮಕಾರಿಯಾಗಿ ಪಾಠಮಾಡಿದ ಡಿ.ಆರ್.ಎನ್, ಮತ್ತು ಓದಿದಾಗ ಉಂಟಾದ ರೋಚಕತೆ ಇನ್ನೂ ನನ್ನಲ್ಲಿ ಸಜೀವವಾಗಿದೆ.
ಆಗ ರಷ್ಯನ್ ಮೂಲಕ ಅನುವಾದ ಮಾಡಬಲ್ಲವರು ಯಾರೂ ಇರಲಿಲ್ಲ. ಈಗ ಹಿರಿಯರಾದ ಎಚ್.ಎಸ್. ಹರಿಶಂಕರ್ ಈ ಕೊರತೆಯನ್ನು ನೀಗಿಸಿದ್ದಾರೆ. ಅದಕ್ಕೆ ಅವರಿಗೆ ಮೊದಲು ಅಭಿನಂದನೆಗಳು ಸಲ್ಲಬೇಕು. ಯಾವುದೇ ಭಾಷೆಯ ಕೃತಿಗಳನ್ನು ಅದರ ಮೂಲದಲ್ಲಿ, ಓದಿ ಅನುವಾದ ಮಾಡುವುದು, ಎಂದರೆ, ಆ ಸಂಸ್ಕೃತಿಯನ್ನು ಕನ್ನಡಕ್ಕೆ ಬರಮಾಡಿಕೊಳ್ಳುವುದು ಎಂದೇ ಅರ್ಥ.ಅಂತಹ ವಿರಳ ಸಂಖ್ಯೆಯ ವಿದ್ವಾಂಸರಲ್ಲಿ ಎಚ್.ಎಸ್. ಹರಿಶಂಕರ್ ಒಬ್ಬರು.
ಇವರು ಅನುವಾದ ಮಾಡಿದ ಕಥೆಗಳಲ್ಲಿ ಎರಡು ಮೂರು ಕಥೆಗಳನ್ನು, ಈಗಾಗಲೇ ನಾನು ಇಂಗ್ಲಿಷ್ ಅನುವಾದದಲ್ಲಿ ಓದಿದ್ದರೂ, ಈಗ ಓದಿದಾಗ ಆದ ಅನುಭವವೇ ಬೇರೆ. ಮೂಲ ಭಾಷೆಯ ಸಂಸ್ಕೃತಿಯಲ್ಲಿ, ಅವು ಬಳಕೆಯಾಗುವ ಸಂದರ್ಭಗಳಿಗೆ ಕೂಡ ಲೇಖಕರು ,ಟಿಪ್ಪಣಿ ಒದಗಿಸಿರುವುದರಿಂದ ಅವುಗಳ ಮೂಲಕ ರಷ್ಯನ್ ಸಂಸ್ಕೃತಿಯ ನಾಡಿಮಿಡಿತಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ.
ಈ ಕಥಾಸಂಕಲನದ ಕಥೆಗಳನ್ನು ಮೂರು ನೆಲೆಗಳಲ್ಲಿ ಗ್ರಹಿಸಬಹುದು.ಒಂದು :ದರಿದ್ರೋ ನಾರಾಯಣೋ ಹರಿ: ಪರಿಕಲ್ಪನೆಯನ್ನು ಆಧರಿಸಿದ ಕಥೆಗಳು.
ಎರಡು: ಕಾಯಕವೇ ಕೈಲಾಸ ಪರಿಕಲ್ಪನೆಯ ಕಥೆಗಳು.
ಈಸಕ್ಕಿ ಆಸೆ ನಮಗೇಕೆ - ಪರಿಕಲ್ಪನೆಯ ಕಥೆಗಳು.
ಒಂದು: ದರಿದ್ರೋ ನಾರಾಯಣೋ ಹರಿ: ಪರಿಕಲ್ಪನೆ: ಇಬ್ಬರು ಮುದುಕರು, ಎಲ್ಲಿ ಪ್ರೀತಿ ಇದೆಯೋ ಅಲ್ಲಿ ದೇವರಿದ್ದಾನೆ - ಈ ಕಥೆಗಳನ್ನು ಮೇಲೆ ಉಲ್ಲೇಖಿಸಿದ ತತ್ವಕ್ಕೆ ನಿದರ್ಶನಗಳನ್ನಾಗಿ ನೋಡಬಹುದು. ಮೊದಲನೇ ಕಥೆಯಲ್ಲಿ ಜೆರುಸಲೇಮ್ ಗೆ ಯಾತ್ರೆ ಹೊರಟ ಇಬ್ಬರು ಮುದುಕರಲ್ಲಿ ,ಎಲೀಷ ಬಾಯಾರಿ ನೀರು ಕೇಳಲು ಒಂದು ಗುಡಿಸಲು ಹೊಕ್ಕು, ಅಲ್ಲಿ ಇದ್ದವರ ದುಸ್ಥಿತಿಯನ್ನು ಮನಗಂಡು, ಅವರನ್ನು ಮೊದಲ ಸುಸ್ಥಿತಿಗೆ ತರಲು, ಅಲ್ಲಿ ಕೆಲವು ದಿನಗಳ ಕಾಲ ನಿಂತು, ಅವರಿಗೆ ಬೇಕಾದುದನ್ನು ಒದಗಿಸುವ ಭರದಲ್ಲಿ ತಾನು ತಂದಿದ್ದ ಹಣವನ್ನು ಖರ್ಚು ಮಾಡಿ, ಮುಂದಿನ ಯಾತ್ರೆ ಕೈಗೊಳ್ಳುವ ಬದಲಿಗೆ ಮನೆಗೆ ಮರಳಿದ. ಇವನನ್ನು ಬಿಟ್ಟು ಮುಂದೆ ಹೋದ ಆ ಇನ್ನೊಬ್ಬ ಮುದುಕ, ಜೆರುಸಲೇಮ್ ನಲ್ಲಿ ಕ್ರಿಸ್ತನ ಸನ್ನಿಧಿಯಲ್ಲಿ ಇವನನ್ನು ನೋಡಿ ದಿಗ್ಭ್ರಮೆಗೊಳ್ಳುತ್ತಾನೆ. ದಾರಿಯಲ್ಲಿ ಮರಳಿ ಬರುವಾಗ ಇವನನ್ನು ಕಂಡು, ಆ ಗುಡಿಸಲಿನಲ್ಲಿ ಇದ್ದವರು, ಇವನನ್ನು ಕರೆದುಕೊಂಡು ಹೋಗಿ ಉಪಚರಿಸಿ, ತಮ್ಮನ್ನು ಈ ಸ್ಥಿತಿಗೆ ತರಲು ಕಾರಣವಾದ ಮುದುಕನ ಕುರಿತು ಹೇಳುತ್ತಾರೆ. ಆಗ ಅವನಿಗೆ ಆಶ್ಚರ್ಯವಾಗುತ್ತದೆ. ಮರಳಿ ಮನೆಗೆ ಬಂದರೆ ಅವನ ಮನೆ ದುಸ್ಥಿತಿಯಲ್ಲಿ ಇರುತ್ತದೆ. ತನ್ನ ಗೆಳೆಯನ ಮನೆಗೆ ಹೋಗಿ ಅವನನ್ನ ಭೇಟಿ ಮಾಡಿ ಅದನ್ನು ಮಾತನಾಡಲು ಪ್ರಯತ್ನ ಮಾಡಿದರು, ಎಲೀಷ ಯಾವ ಉತ್ತರವನ್ನೂ ಕೊಡುವುದಿಲ್ಲ. ಕಥೆಯ ಕೊನೆಯಲ್ಲಿ ಬರುವ ಮಾತುಗಳು ಮೇಲೆ ಉಲ್ಲೇಖಿಸಿದ ಮಾತಿಗೆ ಪೂರಕವಾಗಿವೆ.
ಎರಡನೇ ಕಥೆ: ಎಲ್ಲಿ ಪ್ರೀತಿ ಇದೆಯೋ ಅಲ್ಲಿ ದೇವರಿದ್ದಾನೆ. ತನ್ನಲ್ಲಿ ಇರುವ ಅಲ್ಪವನ್ನೇ ಇತರರೊಂದಿಗೆ ಹಂಚಿಕೊಳ್ಳುವ ಚಮ್ಮಾರ ಮಾರ್ತಿನ್ ನ ಹೃದಯವಂತಿಕೆಯ ಕಥೆ. ಹರಿದ ಬಟ್ಟೆ ಉಟ್ಟವಳೊಬ್ಬಳು, ಮಗುವಿಗೆ ಹೊದಿಸಲು ಬಟ್ಟೆಯಿಲ್ಲದೆ ಚಳಿಯಲ್ಲಿ ನಡುಗುತ್ತಾ ನಿಂತಿದ್ದುದನ್ನು ನೋಡಿ, ಅವರನ್ನು ತನ್ನ ಗುಡಿಸಲಿಗೆ ಕರೆದುಕೊಂಡು ಬಂದು, ಅವರಿಗೆ ಬೆಚ್ಚಗಿನ ಹೊದಿಕೆಗಳನ್ನು ಕೊಟ್ಟು, ಅವರಿಗೆ ಬೇಕಾದ ಆಹಾರ ಒದಗಿಸುವುದು ಇದಕ್ಕೆ ನಿದರ್ಶನ. ಸೇಬು ಮಾರುತ್ತಿದ್ದ ಅಜ್ಜಿಯಿಂದ ಕದ್ದ ಹುಡುಗನನ್ನು ಕ್ಷಮಿಸುವಂತೆ ಅವಳನ್ನು ಓಲೈಸಿ ಒಪ್ಪಿಸುವುದು.
ಎರಡನೆಯದು ಕಾಯಕವೇ ಕೈಲಾಸ ಪರಿಕಲ್ಪನೆ: ಇದಕ್ಕೆ ಮೂರ್ಖ ಇವಾನ್ ಕತೆ ಅತ್ಯುತ್ತಮ ನಿದರ್ಶನ. ಇವನ ಅಣ್ಣಂದಿರು ತಮಗೆ ಬೇಕಾದ ಪಾಲನ್ನು ತೆಗೆದು ಕೊಂಡು ಹೋದರು ಧೃತಿಗೆಡದೆ, ತನ್ನ ಪಾಲಿಗೆ ಬಂದದ್ದರಲ್ಲೇ ಸಂತೃಪ್ತನಾಗಿ, ತನ್ನ ಪಾಲಿನ ದುಡಿಮೆಯನ್ನು ನಿರಂತರವಾಗಿ ಮಾಡುವ ಮೂಲಕ ಸ್ವಾವಲಂಬಿಯಾಗಿ ಬದುಕುವನು. ಇವನನ್ನು ಮೂರ್ಖರೆಂದು ಜರಿದು ಹೋದ ಇವನ ಅಣ್ಣಂದಿರು, ತಮ್ಮ ಅಂದಾದುಂದಿಯಿಂದ ಎಲ್ಲವನ್ನೂ ಕಳೆದುಕೊಂಡು ಮರಳಿ ಇವನ ಆಶ್ರಯಕ್ಕೆ ಬಂದಾಗಲೂ ವಿಚಲಿತನಾಗದೆ, ಅವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು , ಅವರ ಯೋಗಕ್ಷೇಮ ನೋಡಿಕೊಳ್ಳುವನು. ಇದು ದುಡಿಮೆಯೆ ದುಡ್ಡಿನ ತಾಯಿ ಎಂಬ ಮಾತನ್ನು ದೃಢಪಡಿಸುತ್ತದೆ.
ಮೂರನೇ ಈಸಕ್ಕಿಯಾಸೆ ನಿನಗೇಕೆ: ಕೋಳಿ ಮೊಟ್ಟೆಯ ಗಾತ್ರದ ಕಾಳು: ಆ ಗಾತ್ರದ ಕಾಳನ್ನು ಬೆಳೆಯುತ್ತಿದ್ದ ಆರೋಗ್ಯ ಪೂರ್ಣ ವಯೋವೃದ್ಧ ಬಂದಾಗ, ರಾಜನ ಆಸ್ಥಾನಕ್ಕೆ ಬಂದಾಗ ಹೇಳುವ ಮಾತುಗಳು " ನಮಗೆ ಎಷ್ಟು ಬೇಕೋ ಅಷ್ಟನ್ನು ನಾವು ಕೈಗಳಿಂದ ದುಡಿದು ಇಂತಹ ನಮ್ಮ ಅಗತ್ಯಕ್ಕೆ ತಕ್ಕಂತೆ ಧಾನ್ಯಗಳನ್ನು ಬೆಳೆಯುತ್ತಿದ್ದೆವು. ಆಗ ನಮ್ಮ ಪರಸ್ಪರ ನೆರವಾಗುತ್ತಿದ್ದೆವು. ಭೂಮಿ ಎಲ್ಲರದೂ ಆಗಿತ್ತು. ಈಗ ಯಾರೂ ದುಡಿಯದೆ ಕೂಲಿಕಾರರಿಂದ ದುಡಿಸುತ್ತಾರೆ . ಅಗತ್ಯಕ್ಕಿಂತ ಹೆಚ್ಚು ಬೆಳೆಯುತ್ತಾರೆ. ಸ್ವತಃ ದುಡಿಯದೆ . ಆದ್ದರಿಂದಲೇ ಈಗ ಎಲ್ಲರೂ ದುರ್ಬಲರಾಗಿದ್ದಾರೆ" ಎಂದು ಹೇಳುವುದು ಆಧುನಿಕ ನಾಗರೀಕತೆಯ ದುರಂತವನ್ನು ಸೆರೆಹಿಡಿಯುತ್ತದೆ. ಮೇಲೆ ಉಲ್ಲೇಖಿಸಿದ ಮಾತಿಗೆ ನಿದರ್ಶನವಾಗಿದೆ.
೪:ಇದಕ್ಕೆ ವಿರುದ್ಧವಾಗಿ ಮನುಷ್ಯನಿಗೆ ಎಷ್ಟು ಭೂಮಿ ಬೇಕು , ಅಲಕ್ಷ್ಯ ಮಾಡಿದರೆ ಮನೆ ಸುಡುತ್ತದೆ ( ಒಡಲಕಿಚ್ಚು ಒಡಲ ಸುಟ್ಟಲ್ಲದೆ ನೆರೆಮನೆಯ ಸುಡದು) ದುರಂತದಲ್ಲಿ ಪರ್ಯವಸಾನಗೊಳ್ಳುವ ದುರಾಸೆ, ಸಣ್ಣತನಗಳ ಘೋರ ಪರಿಣಾಮಗಳನ್ನು ತೋರಿಸುವ ಕಥೆಗಳು ಇಲ್ಲಿವೆ. ಮೊದಲ ಕತೆಯಲ್ಲಿ ರೈತ ಪಹೋಮ್ ಭೂಮಿಯ ಆಸೆಗೆ ಬಿದ್ದು ಕಡೆಗೆ ನಡೆದು ನಡೆದು ಬಿದ್ದು ಸತ್ತಾಗ, ಅವನಿಗೆ ದೊರೆತದ್ದು ಆರಡಿ ಭೂಮಿ . ಎರಡನೆ ಕತೆಯಲ್ಲಿ ನೆರೆಹೊರೆಯವರು ಕ್ಷುಲ್ಲಕ ಕಾರಣಕ್ಕೆ ಹೋರಾಟ ಮಾಡಿ, ಕೋರ್ಟ್ ಗೆ ಹೋಗಿ ಸೋತವನು ಸತ್ತ, ಗೆದ್ದವನು ಸೋತ ಎನ್ನುವ ಸ್ಥಿತಿಗೆ ತಲುಪಿದಾಗ ಗೇಬ್ರಿಯಲ್ ಒಲೆಯ ಮೇಲೆ ಮಲಗಿದ ( ರಷ್ಯನ್ ಭಯಂಕರ ಚಳಿಯ ಪರಿಣಾಮ) ತಂದೆಯವರ ಮಾತಿಗೆ ಕಿವಿಗೊಟ್ಟು ಹದಗೆಟ್ಟಿದ್ದ ಸಂಬಂಧವನ್ನು ಮತ್ತೆ ಹಳಿಗೆ ತಂದುಕೊಳ್ಳುವನು.
೫: ಸ್ವತಃ ಮೊದಲ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಟಾಲ್ ಸ್ಟಾಯ್ ಸೆರೆಸಿಕ್ಕ ಸೈನಿಕರ ಪಾಡನ್ನು ,ಅವರು ತಪ್ಪಿಸಿಕೊಂಡು ಹೋಗಲು ಮಾಡುವ ಪಡಿಪಾಟಲುಗಳನ್ನು , ಕಡೆಗೂ ಅದರಲ್ಲಿ ತನ್ನ ಗಮ್ಯವನ್ನು ತಲುಪಿದ ಸೈನಿಕನೊಬ್ಬನ ಕಥನದ ಮೂಲಕ ತೆರೆದಿಟ್ಟಿದ್ದಾರೆ.( ಕಾಕಸಸ್ ನ ಕೈದಿ).
ವೃಥಾಪವಾದಕ್ಕೆ ಕೈದಿಯಾಗಬೇಕಾಗಿ ಬಂದ ಇವಾನ್ ದ್ಮಿತ್ರಿಚ್ ಅಕ್ಸಯೋನಫ್ ತನ್ನ ಸಂಯಮದಿಂದ ಎಲ್ಲರ ಮನಗೆದ್ದ, ಆ ಮೂಲಕ ನಿಜವಾದ ಅಪರಾಧಿ ತನ್ನ ತಪ್ಪನ್ನು ಒಪ್ಪಿಕೊಂಡು ಪರಿತಾಪ ಪಡುವ ಮನ: ಪರಿವರ್ತನೆಯ ಕಥೆ ಕೂಡ ಇಲ್ಲಿದೆ.( ದೇವರು ಸತ್ಯವನ್ನು ನೋಡುತ್ತಾನೆ ಆದರೆ ಕಾಯುತ್ತಾನೆ).
ಟಾಲ್ ಸ್ಟಾಯ್ ರ ಇಂತಹ ಆಳವಾದ ತೀವ್ರ ನೈತಿಕತೆಯ ಕಥೆಗಳನ್ನು, ಮೊದಲ ಬಾರಿಗೆ ನೇರವಾಗಿ ರಷ್ಯನ್ ಭಾಷೆಯಿಂದ ಅನುವಾದ ಮಾಡಿದ ಎಚ್.ಎಸ್ ಹರಿಶಂಕರ್ ಅವರಿಗೆ ಅಭಿನಂದನೆಗಳು. ಕಥಾ ಸಂಕಲನವನ್ನು ಕಳಿಸುವ ಮೂಲಕ ಓದುವ ಅವಕಾಶ ಕಲ್ಪಿಸಿದ ಲೇಖಕರಿಗೆ ಕೃತಜ್ಞತೆಗಳು.
ಕನ್ನಡದ ಸಂದರ್ಭದಲ್ಲಿ ಮಾಸ್ತಿ ಮತ್ತು ಲಂಕೇಶ್, ಟಾಲ್ ಸ್ಟಾಯ್ ಬದುಕನ್ನೇ ಕಥೆಗಳನ್ನು ಆಗಿಸಿದ್ದರೆ, ಗೆಳೆಯರಾದ ಕೆ.ಸತ್ಯನಾರಾಯಣ ಟಾಲ್ ಸ್ಟಾಯ್ ಮತ್ತು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಗಳ, ಕೆಲವು ಸಮಾನ ಸಂನಿವೇಶಗಳ ತೌಲನಿಕ ಅಧ್ಯಯನ ಮಾಡಿದ್ದಾರೆ. ಇನ್ನೂ ವಿಸ್ತಾರವಾಗಿ, ಟಾಲ್ ಸ್ಟಾಯ್ ಕನ್ನಡ ಲೇಖಕರ ಮೇಲೆ ಬೀರಿರುವ ಪ್ರಭಾವವನ್ನು ಅಧ್ಯಯನ ಕೈಗೊಳ್ಳಬಹುದು.
- ರಘುನಾಥ್ ಕೃಷ್ಣಮಾಚಾರ್
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.