ವ್ಯಕ್ತಿಯದು ದೈಹಿಕ ಪಯಣವಾದರೆ ವ್ಯಕ್ತಿತ್ವದ್ದು ಸಾಮಾಜಿಕ ಪಯಣ


“ವಿಶ್ವ ಕಂಡ ಖ್ಯಾತ ಚಿಂತಕ ಕಾರ್ಲ್‌ಮಾರ್ಕ್ಸ್ ಮತಧರ್ಮವನ್ನು 'ಹೃದಯ ಹೀನ ಜಗತ್ತಿನ ಹೃದಯ' ಎಂದು ಹೇಳುತ್ತಲೇ ಅದನ್ನು 'ಅಫೀಮು' ಎಂದೂ ಕರೆದನು. ವಿಶ್ವದ ಕೆಲವೇ ಕೆಲವು ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಹೃದಯ ಹೀನ ಜಗತ್ತಿನ ಹೃದಯವಾಗುತ್ತಲೇ, ಜನರನ್ನು ಮತಧರ್ಮದ ಮತ್ತಿನಿಂದ ಹೊರತರುವ ಪ್ರಯತ್ನ ಮಾಡಿದರು. ಅಂಥವರಲ್ಲಿ ತೋಂಟದ ಸಿದ್ಧಲಿಂಗ ಸ್ವಾಮಿಗಳೂ ಒಬ್ಬರು”, ಎನ್ನುತ್ತಾರೆ ಡಾ. ಸಿದ್ದನಗೌಡ ಪಾಟೀಲ ಅವರು ಸಿದ್ದು ಯಾಪಲಪರವಿ ಅವರ “ಹಗಲಿನಲ್ಲಿ ಸಂಜೆಯಾಯಿತು” ಕೃತಿಗೆ ಬರೆದ ಅನಿಸಿಕೆ.

 

ವ್ಯಕ್ತಿ ಮತ್ತು ವ್ಯಕ್ತಿತ್ವದ ಪಯಣಕ್ಕೆ ಎರಡು ಆಯಾಮಗಳಿವೆ. ವ್ಯಕ್ತಿಯದು ದೈಹಿಕ ಪಯಣವಾದರೆ ವ್ಯಕ್ತಿತ್ವದ್ದು ಸಾಮಾಜಿಕ ಪಯಣ. ಈ ಸಾಮಾಜಿಕ ಪಯಣದಲ್ಲಿ ವ್ಯಕ್ತಿ ರೂಪಿಸಿಕೊಂಡ ವ್ಯಕ್ತಿತ್ವ ಮಹತ್ವದ್ದಾಗುತ್ತದೆ. ಅಂಥ ಮಹತ್ವದ ಸ್ಮರಣೀಯ ವ್ಯಕ್ತಿತ್ವವನ್ನು ರೂಪಿಸಿಕೊಂಡವರು, ಗದುಗಿನ ತೋಂಟದಾರ ಮಠದ ಶ್ರೀ ತೋಂಟದ ಸಿದ್ಧಲಿಂಗ ಸ್ವಾಮೀಜಿಯವರು. ಸಾಮಾನ್ಯವಾಗಿ ಮಠಗಳ ಮುಖ್ಯಸ್ಥರಿಗೆ 'ಮಠಾಧಿಪತಿ', 'ಪೀಠಾಧಿಪತಿ', 'ಮಠಾಧೀಶ', 'ಜಗದ್ಗುರು' ಇಂಥ ವಿಶೇಷಣಗಳಿರುತ್ತವೆ. ಬಹುತೇಕ ಕಾವಿಧಾರಿಗಳು ಇಂಥ ವಿಶೇಷಣಗಳನ್ನು ಇಷ್ಟಪಡುತ್ತಾರೆ. ಆದರೆ ಗದುಗಿನ ತೋಂಟದಾರ ಸ್ವಾಮೀಜಿ 'ಅಜ್ಜಾ' ಎಂಬ ಮಾನವೀಯ ಸಂಬಂಧದ, ಆಪ್ತತೆಯ ವಿಶೇಷಣವನ್ನು ಭಕ್ತರಿಂದ ಪಡೆದು ಅದನ್ನು ಆನಂದಿಸಿದ ವಿರಳ ವ್ಯಕ್ತಿತ್ವ ಹೊಂದಿದ್ದರು. ಸಮಾಜ ಅವರನ್ನು ಪ್ರಗತಿಪರ ಸ್ವಾಮೀಜಿ, ಪುಸ್ತಕದ ಸ್ವಾಮಿ ಎಂದೇ ಗುರ್ತಿಸಿತ್ತು. ವ್ಯವಸ್ಥೆಯ ಭಾಗವಾಗಿದ್ದುಕೊಂಡೇ ವ್ಯವಸ್ಥೆಯನ್ನು ಬದಲಾಯಿಸುವ, ಜನಪರವಾಗಿಸುವ ಅವರ ನಿರಂತರ ಪ್ರಯತ್ನದಿಂದಾಗಿಯೇ ಅವರಿಗೊಂದು ಭಿನ್ನ ವ್ಯಕ್ತಿತ್ವ ಪ್ರಾಪ್ತವಾಗಿತ್ತು.

ವಿಶ್ವ ಕಂಡ ಖ್ಯಾತ ಚಿಂತಕ ಕಾರ್ಲ್‌ಮಾರ್ಕ್ಸ್ ಮತಧರ್ಮವನ್ನು 'ಹೃದಯ ಹೀನ ಜಗತ್ತಿನ ಹೃದಯ' ಎಂದು ಹೇಳುತ್ತಲೇ ಅದನ್ನು 'ಅಫೀಮು' ಎಂದೂ ಕರೆದನು. ವಿಶ್ವದ ಕೆಲವೇ ಕೆಲವು ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಹೃದಯ ಹೀನ ಜಗತ್ತಿನ ಹೃದಯವಾಗುತ್ತಲೇ, ಜನರನ್ನು ಮತಧರ್ಮದ ಮತ್ತಿನಿಂದ ಹೊರತರುವ ಪ್ರಯತ್ನ ಮಾಡಿದರು. ಅಂಥವರಲ್ಲಿ ತೋಂಟದ ಸಿದ್ಧಲಿಂಗ ಸ್ವಾಮಿಗಳೂ ಒಬ್ಬರು. ಬಸವಾದಿ ಶರಣರ ಆಶಯಗಳನ್ನು ಅಳವಡಿಸಿಕೊಂಡು, ಮತೀಯ ವ್ಯವಸ್ಥೆಯ ಅಹಮಿಕೆಯ ಸಂಕೇತವಾಗಿದ್ದ 'ಅಡ್ಡಪಲ್ಲಕ್ಕಿ', 'ಜರತಾರಿ ವೇಶ', 'ಮೌಡ್ಯಾಚರಣೆ', 'ಪವಾಡ', ವೈಭವದ ಬದುಕನ್ನು ನಿರಾಕರಿಸಿ ಸಹಜ, ಸರಳ ಬದುಕನ್ನು ನಡೆಸಿ 'ಅಜ್ಜಾ' ಎನಿಸಿಕೊಂಡವರು. ಅರಮನೆ ಗುರುಮನೆ ಒಂದಕ್ಕೊಂದು ಪೂರಕವಾಗಿದ್ದ ಪರಂಪರೆಯನ್ನು ಮುರಿದು ಅರಮನೆ (ರಾಜ್ಯಾಡಳಿತ)ಯಿಂದ ಅಂತರ ಮತ್ತು ಆರೋಗ್ಯಪೂರ್ಣ ಸಾಮಿಪ್ಯವನ್ನು ಹೊಂದಿ, ಜನವಿರೋಧಿ ಪ್ರಭುತ್ವವನ್ನು ವಿಮರ್ಶಿಸುವ, ವಿರೋಧಿಸುವ ನೈತಿಕ ಬಲವನ್ನು ಈ 'ಅಜ್ಜಾ' ಅವರು ಹೊಂದಿದ್ದು ಸಾಮಾನ್ಯ ಸಂಗತಿಯಲ್ಲ. ಆ ಕಾರಣಕ್ಕೆ ಅವರಿಗೆ ಭಾಷಾ ಚಳುವಳಿ, ಪೋಸ್ಕೋ ವಿರೋಧಿ ಹೋರಾಟ, ಕಪ್ಪತಗುಡ್ಡ ರಕ್ಷಣಾ ಹೋರಾಟಗಳಲ್ಲಿ ಜನರ ಪರವಾಗಿ ಧ್ವನಿ ಎತ್ತಲು ಮತ್ತು ಪ್ರಭುತ್ವಗಳನ್ನು ಜನವಿರೋಧಿ ನೀತಿಗಳಿಂದ ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಮಠೀಯ ವ್ಯವಸ್ಥೆಗೆ ಭಿನ್ನವಾದ ಇಂಥ ಹಲವಾರು ಚಿಂತನೆ, ಚಟುವಟಿಕೆಗಳಿಂದಾಗಿಯೇ ಅವರಿಗೆ 'ಪ್ರಗತಿಪರ ಸ್ವಾಮೀಜಿ' ಎಂಬ ವಿಶೇಷಣ ಜನರಿಂದಲೇ ಕೊಡಲ್ಪಟ್ಟಿತ್ತು.

ತೋಂಟದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಕುರಿತು ಹಲವಾರು ಕೃತಿಗಳು, ಸ್ಮರಣೀಯ ಸಂಚಿಕೆಗಳು ಪ್ರಕಟವಾಗಿವೆ. ಒಂದು ಮಾದರಿ ವ್ಯಕ್ತಿತ್ವಕ್ಕೆ ಹಲವಾರು ಆಯಾಮಗಳಿರುತ್ತವೆ. ವಿಭಿನ್ನ ಗ್ರಹಿಕೆಯ, ದೃಷ್ಟಿಕೋನದಿಂದ ವ್ಯಕ್ತಿತ್ವದ ಸಮಗ್ರದರ್ಶನ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಜ್ಜಾ ಅವರ ಸಾಮಿಪ್ಯ ಮಾರ್ಗದರ್ಶನದಿಂದಲೇ ತಮ್ಮ ಬುದ್ಧಿ, ಭಾವ, ಬದುಕಿನ ವಿಕಾಸ ಕಂಡುಕೊಂಡ, ಬಾಲ್ಯದಿಂದಲೇ ಅವರೊಂದಿಗೆ ಒಡನಾಡಿದ ಲೇಖಕ ಸಿದ್ದು ಯಾಪಲಪರವಿ ಅವರು ಅತ್ಯಂತ ಆಪ್ತವಾದ ಬರಹ ಮತ್ತು ಶೈಲಿಯಿಂದ 'ಹಗಲಿನಲ್ಲಿಯೆ ಸಂಜೆಯಾಯಿತು' ಕೃತಿಯನ್ನು ರಚಿಸಿದ್ದಾರೆ.

ತೋಂಟದ ಸ್ವಾಮೀಜಿಯವರ ಮಾರ್ಗದರ್ಶನ, ಅವರಿಂದ ಪ್ರಭಾವಿತರಾದ, ಈಗಿನ ಸಂಡೂರು ವಿರಕ್ತಮಠದ ಸ್ವಾಮೀಜಿಗಳಾದ ಶ್ರೀ ಪ್ರಭುಸ್ವಾಮೀಜಿಯವರು ಈ ಕೃತಿಯನ್ನು ಪ್ರಕಟಿಸಿದ್ದಾರೆ. ಅನುಭವ-ಅನುಭಾವದ ಪರಿಶ್ರಮದ ಪ್ರತಿಫಲವಿದು. ಸಿದ್ದು ಯಾಪಲಪರವಿಯವರ ಅನುಭವ, ಪ್ರಭುಸ್ವಾಮಿಗಳ ಅನುಭಾವ ಚಿಂತನೆಯ ಸಂಗಮವಿದು. ಈ ಎರಡೂ ವ್ಯಕ್ತಿತ್ವಗಳನ್ನು ಪ್ರಭಾವಿಸಿದವರು ತೋಂಟದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು. ಈ ಕೃತಿಯ ಪ್ರಕಾಶಕರಾದ ಪ್ರಭುಸ್ವಾಮಿಗಳು ಅಜ್ಜಾ ಅವರ ಬದುಕಿನ ಮಾದರಿಯನ್ನು ಅನುಸರಿಸುತ್ತಿರುವವರು. ಸಂಡೂರಿನ ಮಠದ ಮೂಲಕ ಶಿಕ್ಷಣ ಪ್ರಸಾರ ಮಾಡುತ್ತಲೇ ಸ್ವತಃ ಕಾಯಕಜೀವಿ, ಅಧ್ಯಯನಶೀಲರು. ಅವರು ಸ್ನಾತಕೋತ್ತರ ಅಧ್ಯಯನ ಮಾಡುವಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನನ್ನ ಸಹಪಾಠಿ. ಸ್ನಾತಕೋತ್ತರ ವಿದ್ಯಾಭ್ಯಾಸ ಮುಗಿಸಿ ಹೋದ ನಂತರ ಅವರು ನನಗೆ ಸಿಕ್ಕದ್ದು ಗಣಿ ಅವಾಂತರಗಳ ವಿರುದ್ಧ ಪ್ರತಿಭಟಿಸಲು ನಾನು ಇತ್ತೀಚೆಗೆ ಸಂಡೂರಿಗೆ ಹೋದಾಗ, ಶುದ್ಧ ನೀರು, ಉಸಿರಾಡುವ ಶುದ್ಧ ಗಾಳಿಗಾಗಿ ತಮ್ಮದೇ ರೀತಿಯಲ್ಲಿ ಪ್ರಭುಸ್ವಾಮಿಗಳು ಅಲ್ಲಿ ಕೆಲಸ ಮಾಡುತ್ತಿದ್ದರು. ಇಂದಿಗೂ ಪರಿಸರ ರಕ್ಷಣೆಯ ಕುರಿತು ಕಾಳಜಿಯಿಂದ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ತೋಂಟದಾರ್ಯ ಮಠದ ಸ್ವಾಮೀಜಿ ಆದರ್ಶ. ಅದೇ ರೀತಿ ಈ ಕೃತಿಯ ಲೇಖಕರಾದ ಸಿದ್ದು ಯಾಪಲಪರವಿಯವರು ಮೂಲತಃ ಹೈದರಾಬಾದ ಕರ್ನಾಟಕ ಅಂದರೆ ಇಂದಿನ ಕಲ್ಯಾಣ ಕರ್ನಾಟಕದ ಕಾರಟಗಿಯವರು. ಆರ್ಥಿಕ ಸಮಸ್ಯೆಗಳಿಂದ ತೊಂದರೆಗೀಡಾದ ಕುಟುಂಬದಿಂದ ಬಂದ ಅವರು ಬಾಲ್ಯದಿಂದಲೇ ಗದುಗಿನ ತೋಂಟದ ಅಜ್ಜನವರ ಸಾಮಿಪ್ಯಕ್ಕೆ ಬಂದು ಅವರ ಮಾರ್ಗದರ್ಶನ, ನೆರಳಿನಲ್ಲಿಯೇ ಬೆಳೆದು ಸ್ನಾತಕೋತ್ತರ ಪದವಿ ಪಡೆದು ಇಂಗ್ಲಿಷ್ ಅಧ್ಯಾಪಕರಾದವರು. ತೋಂಟದ ಸ್ವಾಮೀಜಿಯವರ ಜೊತೆಗಿನ ನಿರಂತರ ಒಡನಾಟದಿಂದ ಪ್ರಭಾವಿತರಾಗಿ ಇಂದು ಒಬ್ಬ ಕ್ರಿಯಾಶೀಲ ಲೇಖಕರಾಗಿ ಬೆಳೆದಿದ್ದಾರೆ. ಬಾಲ್ಯದಿಂದ ತಾವು ಕಂಡ ಒಂದು ಮಾದರಿ ವ್ಯಕ್ತಿತ್ವದ ಕುರಿತ ಅವರ ಅನುಭವ ಗ್ರಹಿಕೆ ಬರವಣಿಗೆಯಾಗಿ ಈ ಕೃತಿ ರೂಪಗೊಂಡಿದೆ.

ಸಿದ್ದು ಯಾಪಲಪರವಿಯವರು ಈ ಕೃತಿಯಲ್ಲಿ ದಾಖಲಿಸಿದ ಹಲವಾರು ವಿಷಯಗಳು ಸ್ವಾಮೀಜಿಯವರ ಕುರಿತು ಪ್ರಕಟವಾದ ಹಲವಾರು ಕೃತಿಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಬಂದಿವೆಯಾದರೂ ಒಬ್ಬ ಬಾಲಕನ ಜೊತೆ ಸ್ವಾಮೀಜಿಯವರ ಒಡನಾಟ ಹೇಗಿತ್ತು, ಅವರ ಕಾಳಜಿ, ಮಾರ್ಗದರ್ಶನದ ವಿಧಾನ ಈ ಕೃತಿಯ ವಿಶೇಷ. ಅಂತರಂಗ-ಬಹಿರಂಗದ ಬದುಕಿನ ಏಕತೆಯನ್ನು, ಮಾತು ಮತ್ತು ಕೃತಿಯ ನಡುವಿನ ಬದ್ಧತೆಯನ್ನು ಸಮೀಪದಿಂದ ಗ್ರಹಿಸಿ ಅಭಿವ್ಯಕ್ತಿಸಿದ ಕೃತಿ ಇದು. ಇಲ್ಲಿ ಯಾವುದೂ ವೈಭವೀಕರಣಕ್ಕೆ ಒಳಗಾಗಿಲ್ಲ. ಕಳೆದ ಶತಮಾನದ ಎಂಭತ್ತರ ದಶಕದ ಆರಂಭದ ಗೋಕಾಕ ಚಳುವಳಿಯ ಸಂದರ್ಭದಿಂದಲೂ ನಾನು ತೋಂಟದ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರನ್ನು ಹತ್ತಿರದಿಂದ ಕಂಡಿದ್ದೇನೆ. ಪೋಸ್ಕೊ ವಿರೋಧಿ ಚಳುವಳಿಯಲ್ಲಿ ಸ್ವಾಮೀಜಿಯವರ ಜೊತೆಗೂಡಿ ಕೆಲಸ ಮಾಡಿದ್ದೇನೆ. ಹಲವಾರು ಸಂದರ್ಭದಲ್ಲಿ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದೇನೆ. ಹೀಗಾಗಿ ಈ ಕೃತಿಯಲ್ಲಿ ಬಂದ ಹಲವು ಘಟನೆ, ವಿದ್ಯಮಾನಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಸ್ವಾಮೀಜಿಯವರ ಕುರಿತು ಯಾಪಲಪರವಿಯವರು ದಾಖಲಿಸಿದ ಸಂಗತಿಗಳು ವಾಸ್ತವ ಮತ್ತು ಮಾದರಿಯಾಗಿವೆ.

ಒಂದು ಅಪಘಾತದಿಂದ ತಪ್ಪಿಸಿಕೊಂಡಾಗ, ಅಪಘಾತದ ಭೀಕರ ಪರಿಣಾಮಗಳು ಅರ್ಥವಾಗುವುದಿಲ್ಲ. ಗೋಕಾಕ ವರದಿ ಜಾರಿಗೆ ಬರದೇ ಇದ್ದರೆ ಇಂದು ಶಿಕ್ಷಣದಲ್ಲಿ ಕನ್ನಡ ಭಾಷೆಯ ಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ಪೋಸ್ಕೋ ಕಂಪನಿ ಬಂದಿದ್ದರೆ ಗದಗ ಸುತ್ತಲ ಪರಿಸರ ನಾಶವಾಗುತ್ತಿತ್ತು. ಕಪ್ಪತಗುಡ್ಡ ಕರಗಿ ಹೋಗಿದ್ದರೆ ಅಲ್ಲಿ ಕಲುಷಿತ ಗಾಳಿಯಿಂದ ಜನರ ಉಸಿರಾಟದ ಭೀಕರ ಸಮಸ್ಯೆ ತಲೆದೋರುತ್ತಿತ್ತು. ಇಂಥ ಹಲವಾರು ಸಾಮಾಜಿಕ, ಪರಿಸರದ ಚಳುವಳಿಗಳಿಗೆ ಚಾಲನ ಶಕ್ತಿ ಮತ್ತು ಮುಂಚೂಣಿಯ ವ್ಯಕ್ತಿಯಾಗಿ ನಿಂತವರು ತೋಂಟದ ಸ್ವಾಮೀಜಿಯವರು. ಈ ಎಲ್ಲ ವಿವರಗಳೂ ಈ ಕೃತಿಯಲ್ಲಿವೆ. ಬೆಂಗಳೂರಿನ ನಿಡುಮಾಮಿಡಿ ಸ್ವಾಮೀಜಿಯವರ ಜೊತೆಗೂಡಿ ತೋಂಟದ ಸ್ವಾಮೀಜಿ ಮತ್ತು ಹಲವಾರು ಪ್ರಗತಿಪರ ಸ್ವಾಮೀಜಿಗಳು ನಡೆಸಿದ ಹೋರಾಟದ ಪರಿಣಾಮವೇ ಇಂದು ಕರ್ನಾಟಕದಲ್ಲಿ ಮೌಡ್ಯ ಆಚರಣೆಗಳ ನಿಷೇಧ ಕಾನೂನು ಜಾರಿಯಾಗಿದೆ. ಇದು ಡಾ. ಎಂ. ಎಂ. ಕಲಬುರ್ಗಿಯವರಿಗೆ ಸಲ್ಲಿಸಿದ ವಿಶೇಷ ನಮನ ಎಂದೇ ನಾನು ಭಾವಿಸುತ್ತೇನೆ. ಡಾ. ಎಂ. ಎಂ. ಕಲಬುರ್ಗಿಯವರು ಶ್ರೀ ತೋಂಟದ ಸಿದ್ಧಲಿಂಗ ಸ್ವಾಮೀಜಿಯವರಿಗೂ, ನನಗೂ ಮತ್ತು ಪ್ರಭುಸ್ವಾಮೀಜಿಯವರಿಗೂ ಗುರುಗಳು ಕಲಬುರ್ಗಿಯವರು, ತೋಂಟದ ಸ್ವಾಮೀಜಿಯವರಿಗೆ ಗುರುಗಳಾಗಿದ್ದರು ಮತ್ತು ಇವರು ಅವರಿಗೆ ಪೂಜ್ಯರಾಗಿದ್ದರು. ಇಂಥ ವಿಶೇಷ ಸಂಬಂಧ ಅಪರೂಪವಾದದ್ದು. ಇಂದು ಅವರಿಬ್ಬರೂ ಇಲ್ಲದೆ 'ಮೇಟಿ ಕಿತ್ತಿದ ಸ್ಥಿತಿ'.

ಬಸವಾದಿ ಶರಣರಿಗೆ ವಚನ ಚಳುವಳಿ ಒಂದು ಗುರಿ ಅಗಿರಲಿಲ್ಲ ಅದೊಂದು ಸಾಮಾಜಿಕ ಬದಲಾವಣೆಯ ಮಾಧ್ಯಮವಾಗಿತ್ತು. ಹಾಗೇ ತೋಂಟದ ಸ್ವಾಮೀಜಿಯವರಿಗೆ ಮಠ ಒಂದು ಗುರಿಯಾಗದೇ ಒಂದು ಮಾಧ್ಯಮವಾಗಿತ್ತು. ಅಂಥ ಮತೀಯ ವ್ಯವಸ್ಥೆಯನ್ನು ಅವರು ಹೇಗೆ ಸಾಮಾಜಿಕ ಪರಿವರ್ತನೆಗೆ ಬಳಸಿದರು ಎಂಬ ಮಾಹಿತಿಯನ್ನು ಈ ಕೃತಿ ಕಟ್ಟಿಕೊಡುತ್ತದೆ. ಗದುಗಿನ ತೋಂಟದ ಮಠದ ಇಂದಿನ ಸ್ವಾಮೀಜಿಗಳಾದ ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿಯವರ ಪೂತ್ವದ ಮಠವಾದ ಬೆಳಗಾವಿಯ ರುದ್ರಾಕ್ಷಿಮಠದ ವಸತಿ ಶಾಲೆಯಲ್ಲಿ ನಾನು 1970ರ ದಶಕದಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದವನು. ಮಠಗಳು ಕಂದಾಚಾರದ, ಮೌಡ್ಯ ಬಿತ್ತನೆಯ ಕೇಂದ್ರಗಳಾಗದೇ ಶಿಕ್ಷಣ, ಸಾಮಾಜಿಕ ವಿಕಾಸದ ಮಾಧ್ಯಮಗಳಾದರೆ ಬಡವರ, ಶೋಷಿತರ ಬದುಕಿಗೆ ಆಶಾಕಿರಣವಾಗುತ್ತವೆ. ಅಂಥ ಆಶಾಕಿರಣದ ಆಕರವಾಗಿದ್ದ ಶ್ರೀ ತೋಂಟದ ಸಿದ್ದಲಿಂಗ ಸ್ವಾಮೀಜಿಯವರ ಕುರಿತು ಬರೆದ ಈ ಕೃತಿ ಧಾರ್ಮಿಕ ಕ್ಷೇತ್ರದ ಇತರರಿಗೂ ಮಾದರಿಯಾಗಲಿ.

- ಡಾ. ಸಿದ್ದನಗೌಡ ಪಾಟೀಲ

MORE FEATURES

ಬೇಸರವನ್ನೋಡಿಸುವ ತಾಕತ್ತಿನ ‘ಬೇಸೂರ್’

22-11-2024 ಬೆಂಗಳೂರು

"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...

ಅನನ್ಯ ಆತ್ಮ ಸಾಂಗತ್ಯದ ಸ್ಪೂರ್ತಿ ಚೇತ‌ನವೇ ಈ ಕವಿತೆಗಳು...

22-11-2024 ಬೆಂಗಳೂರು

"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದ...

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...