ವ್ಯಕ್ತಿ, ಸಮುದಾಯ ಮತ್ತು ಕಾಲಕ್ಕೂ ಕನ್ನಡಿ ಹಿಡಿವ ಕಥನ


“ಬರವಣಿಗೆ ಕುರಿತು ಯಾವ ಪೂರ್ವಾಗ್ರಹವೂ ಇಲ್ಲದ ಹಾಗೆಯೇ ಮೋಹವೂ ಇಲ್ಲದ ಅಭಿವ್ಯಕ್ತಿ. ಈ ನಿರ್ಲಿಪ್ತ ಗುಣವೇ ಈ ಆತ್ಮಕಥನವನ್ನು ಅನನ್ಯವಾಗಿಸಿರುವ ಅಂಶ,”ಎನ್ನುತ್ತಾರೆ ಸಿ. ಎಸ್. ಭೀಮರಾಯ ಅವರು ಪ್ರೊ. ಕೃಷ್ಣ ನಾಯಕ ಅವರ "ವಲಸೆ ಹಕ್ಕಿಯ ಹಾಡು" ಕೃತಿ ಕುರಿತು ಬರೆದ ವಿಮರ್ಶೆ.

ನವ್ಯೋತ್ತರ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರೊ. ಕೃಷ್ಣ ನಾಯಕ ಅವರ ಬರವಣಿಗೆಗೆ ವಿಶಿಷ್ಟ ಸ್ಥಾನವಿದೆ. ಉತ್ತರ ಕರ್ನಾಟಕದ ಬಂಜಾರರ ಬದುಕಿನ ಅನುಭವ ಲೋಕವನ್ನು ನಾಯಕರು ತಮ್ಮ ಕಥೆಗಳ ಮೂಲಕ ಕನ್ನಡ ಓದುಗರಿಗೆ ಪರಿಚಯಿಸಿದ್ದಾರೆ. ಕಥನ ಪರಂಪರೆಗೆ ಹೊಸ ಸಂವೇದನೆಯ ಮೊನಚು ಮತ್ತು ನೂತನ ಆಯಾಮಗಳನ್ನು ದೊರಕಿಸಿಕೊಟ್ಟ ಯಶಸ್ಸಿನಲ್ಲಿ ಕೃಷ್ಣ ನಾಯಕರ ಪಾಲು ದೊಡ್ಡದು.

ಕೃಷ್ಣ ನಾಯಕರು ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬದನಿಹಾಳ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕಲಬುರ್ಗಿಯ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಹಾವಿದ್ಯಾಲಯಗಳಲ್ಲಿ ಶ್ರೇಷ್ಠ ಪ್ರಾಧ್ಯಾಪಕರಾಗಿ, ನಂತರ ಪ್ರಾಚಾರ್ಯರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ವ್ಯಕ್ತಿಯಂತೆ ಅಭಿವ್ಯಕ್ತಿ ಎನ್ನುವಂತೆ ಕೃಷ್ಣ ನಾಯಕರು ಹೇಗೋ ಹಾಗೆ ಅವರ ಬರವಣಿಗೆ. ಸರಳ, ನೇರ ಮತ್ತು ಪಾರದರ್ಶಕ. ನಾಟಕೀಯತೆ ಮತ್ತು ಕೃತಕತೆ ಅವರಿಗೆ ಒಗ್ಗದು. ಅತಿಶಯೋಕ್ತಿ, ಅತಿರಂಜಕತೆಯಿAದ ಅವರ ಬರವಣಿಗೆ ಬಹಳ ದೂರ. ಎಂಥ ಸಂಕೀರ್ಣ ಅನುಭವವನ್ನು ಸರಳವಾಗಿ ಹೇಳಬಹುದು ಎಂಬ ನಿಲುವು ಅವರದು. ನಾಯಕರು ಪಂಥ, ಪಂಗಡ, ಚಳುವಳಿ, ವಾದ-ವಿವಾದಗಳ ಸುಳಿಗೆ ಸಿಕ್ಕು ಸುದ್ಧಿ ಶೂರರಾಗಬೇಕೆಂಬ ಉತ್ಕಟತೆಯ ಆಸೆಯಿಂದ ಗಾವುದ ದೂರ. ಸಮಚಿತ್ತ ಮತ್ತು ಸಾತ್ವಿಕ ಗುಣಗಳ ಪ್ರತಿನಿಧಿಯಂತಿರುವ ಅವರು ಬಹುಸೂಕ್ಷ್ಮ ಪ್ರವೃತ್ತಿಯವರು.

ಪ್ರೊ. ಕೃಷ್ಣ ನಾಯಕರ ‘ವಲಸೆ ಹಕ್ಕಿಯ ಹಾಡು’ ಆತ್ಮಕಥನ ವ್ಯಕ್ತಿ ಚರಿತ್ರೆಯೂ, ಸಮುದಾಯದ ಚರಿತ್ರೆಯೂ ಮತ್ತು ಕಾಲದ ಕಥನವೂ ಆಗಿರುವುದು ವಿಶೇಷ. ಈ ಸಂಗತಿಯು ‘ವಲಸೆ ಹಕ್ಕಿಯ ಹಾಡು’ವಿನ ಸಾಂಸ್ಕೃತಿಕ ಮಹತ್ವಕ್ಕೆ ಕಾರಣವಾಗಿದೆ. ಕನ್ನಡದಲ್ಲಿ ಬರುತ್ತಿರುವ ಆತ್ಮಕಥೆಗಳ ಸಾಲಿನಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವಿದೆ. ಈ ಆತ್ಮಕಥನದಲ್ಲಿ ಮೂರು ಭಾಗಗಳಿವೆ. ಅವು ‘ಗೂಡು ಕಟ್ಟಿತು ಹಕ್ಕಿ’, ‘ಹಕ್ಕಿಗಳ ಚಿಲಿಪಿಲಿ ಗಾನ’ ಮತ್ತು ‘ಹಕ್ಕಿಗಳ ಅಂಬರ ಯಾನ’. ಈ ಭಾಗಗಳಲ್ಲಿನ ಬಹುತೇಕ ಬರಹಗಳು ಯಾವುದೋ ಒಂದು ಘಟನೆ, ಅನುಭವದ ನಿವೇದನೆಯಲ್ಲಿ ಕೊನೆಗೊಳ್ಳುತ್ತವೆ. ಈ ಘಟನೆ ಹೆಚ್ಚು ಬೆಳೆಯುವುದಿಲ್ಲ. ಲೇಖಕರ ಹಳಹಳಿಕೆ ಹಾಗೂ ವಿಷಾದ ಎಲ್ಲ ಬರಹಗಳ ಸ್ಥಾಯಿಭಾವ ಆಗಿರುವಂತಿದೆ. ಬ್ರಿಟಿಷರ ವಿರುದ್ಧ ಸಿಡಿದೆದ್ದ ಅಜ್ಜ ಮಾನಸಿಂಗ ನಾಯಕ ಅವರಿಂದ ಪ್ರಾರಂಭವಾಗುವ ಆತ್ಮಕಥನ ಮೂರು ತಲೆಮಾರುಗಳ ಬದುಕಿನ ಚಿತ್ರಣವನ್ನು ವಿಶಿಷ್ಟವಾಗಿ ಕಟ್ಟಿಕೊಡುತ್ತದೆ. ನಾಯಕರು ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೆಲಸಗಳು ಪ್ರಮುಖವಾಗಿವೆ. ಅವರು ತೊಡಗಿದ ಹಲವು ಬಗೆಯ ಕೆಲಸಗಳ ಪರಿಚಯ ಮಾಡಿಕೊಡುವುದರಿಂದಾಗಿ ಈ ಆತ್ಮಕಥೆ ಅನೇಕ ಕಡೆಗಳಲ್ಲಿ ಕುತೂಹಲ ಹುಟ್ಟಿಸುತ್ತದೆ. ಈಗ ನಾಯಕರು ಎಪ್ಪತ್ತು ಸಂವತ್ಸರಗಳನ್ನು ದಾಟಿದ್ದಾರೆ. ಅವರದು ಪಕ್ವವಾದ ಅನುಭವ, ಸಮಾನತೆ, ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆಗಳ ಆಳದಿಂದ ಕೂಡಿದ ವ್ಯಕ್ತಿತ್ವ. ಎಪ್ಪತ್ತು ವರ್ಷಗಳ ಹಿಂದೆ ಹೋಗಿ ನಿಂತು, ಅದಕ್ಕಿಂತ ಹಿಂದಿನ ಸಂಗತಿಗಳನ್ನು ನೋಡುವ ವ್ಯಕ್ತಿಗೆ, ಕಲಬುರ್ಗಿ-ವಿಜಯಪುರ ಜಿಲ್ಲೆಗಳ ಮತ್ತು ಅವುಗಳ ಸುತ್ತಲಿನ ಪ್ರದೇಶದ ಸ್ಥಿತಿಗತಿಗಳು ಕಾಣುವ ರೀತಿ ಆಶ್ಚರ್ಯವನ್ನುಂಟು ಮಾಡುತ್ತದೆ. ಎಪ್ಪತ್ತು ವರ್ಷಗಳ ಹಿಂದಿನ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಬದನಿಹಾಳದಲ್ಲಿ ಬದುಕು ಆರಂಭವಾಗುತ್ತದೆ. ಮೊದಲನೇ ಭಾಗ ‘ಗೂಡು ಕಟ್ಟಿತು ಹಕ್ಕಿ’ಯಲ್ಲಿ ‘ಅಲೆಮಾರಿ ಬದುಕು’, ‘ತಾಂಡ್ಯ ಕಟ್ಟಿದ ಮಾನಸಿಂಗ ನಾಯಕ’, ‘ಒಲಿದ ಒಕ್ಕಲು-ದೊಡ್ಡ ಮನೆ’, ‘ತಂದೆ ಸೋಮ್ಲು ತಾಂಡ್ಯದ ನಾಯಕ’, ‘ಬಯಲು ಸೀಮೆಯಲ್ಲಿ ತೋಟ’, ‘ಮುಂದುವರೆದ ವಿದ್ಯಾಭ್ಯಾಸ ಮತ್ತು ತಂದೆಯವರ ಜನಪ್ರಿಯತೆ’, ‘ಹೋಳಿ ಹಬ್ಬದ ಸಡಗರ’, ‘ದೀಪಾವಳಿ ಮೆರಗು’, ‘ದೊಡ್ಡಪ್ಪನ ಮಕ್ಕಳ ನಡಾವಳಿ’, ‘ಹೊಸ ಬದುಕಿಗೆ ಹೊಂದಿಕೊಳ್ಳುತ್ತ’, ‘ಪೌರಾಗಢದಿಂದ ಮಹಾರಾಜರ ಆಗಮನ’, ‘ವ್ಯಥೆ ತಂದಳು ಅಜ್ಜಿ’, ‘ಭೂರಮೆಯ ಮಡಿಲಲ್ಲಿ’-ಹೀಗೆ ಲೇಖಕರ ವೈಯಕ್ತಿಕ, ಕೌಟುಂಬಿಕ ಮತ್ತು ಗ್ರಾಮೀಣ ಜೀವನದ ಸಮೃದ್ಧ ಅನುಭವಗಳು ಒಂದು ಕಾಲಮಾನದ ಗ್ರಾಮ ಬದುಕಿನ ಸಂಕೀರ್ಣ ಚಿತ್ರಣವನ್ನು ನೀಡುತ್ತವೆ. ಬಹುಶಃ ಮುಂದಿನ ದಿನಗಳಿಗೆ ಇವು ಐತಿಹಾಸಿಕ ದಾಖಲೆಗಳೇ ಆಗಬಹುದೇನೊ. ಕೃಷ್ಣ ನಾಯಕ ಬದನಿಹಾಳದಲ್ಲಿ ಜನಿಸಿ ನಾಡಿನ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಾಲುದಾರನಾಗಿ ಬೆಳೆದ ವೈಚಾರಿಕ ಬದುಕು ಕೃತಿಯ ಮತ್ತೊಂದು ಮಗ್ಗುಲಾಗಿದೆ. ಈ ವಿವರಗಳು ವಿವರಗಳಾಗಿ ಮಹತ್ವದವಲ್ಲ. ಆದರೆ ನಾಯಕರು ಆ ವಿವರಗಳನ್ನು ನಿರ್ವಹಿಸುವ ವಿಧಾನದಲ್ಲಿ ಮಹತ್ವವನ್ನು ಪಡೆಯುತ್ತವೆ. ಬಂಜಾರರ ಹಬ್ಬ, ಸಮುದಾಯ, ಧರ್ಮ, ಜಾತ್ರೆ, ಉತ್ಸವ, ನಾಟಕ, ಊರ ಪಂಚಾಯತಿಕೆ -ಹೀಗೆ ಗ್ರಾಮ ಸಮುದಾಯದ ಸಕಲ ಕ್ರಿಯೆಗಳನ್ನು ನೋಡುತ್ತಾ ಭಾಗಿಯಾಗಿ ಬೆಳೆದ ಕೃಷ್ಣ ನಾಯಕರು ಹಳ್ಳಿಯ ಜೀವನ ಕ್ರಮವನ್ನು ತುಂಬಾ ಚೆನ್ನಾಗಿ ಗ್ರಹಿಸಿದ್ದಾರೆ. ಲೇಖಕರು ತಮ್ಮ ಜನರ ಜೀವನ ಕ್ರಮವನ್ನು ವಾಸ್ತವಿಕ ನೆಲೆಯಲ್ಲಿ ಪರಿಚಯಿಸುವಾಗ ಸಮಾಜಶಾಸ್ತçಜ್ಞರಾಗಿ ಬಿಡುತ್ತಾರೆ. ಸದಾ ಬಡತನದ ಬೇಗೆಯಲ್ಲಿ ಬೇಯುತ್ತಾ ಬದುಕು ಸಾಗಿಸುತ್ತಿರುವ ಬಂಜಾರರು ಪ್ರಸ್ತುತ ಪರಿಸ್ಥಿತಿಯಲ್ಲೂ ಪ್ರಗತಿಪರ ಸಮಾಜದಡೆಗೆ ಮುಖಮಾಡದೇ ಇರುವುದಕ್ಕೆ ಲೇಖಕರ ಅನುಕಂಪವಿದೆ. ನಾಯಕರು ಸಾಂಪ್ರದಾಯಕ ಸಮಾಜದಲ್ಲಿ ಹುಟ್ಟಿಬಂದಿದ್ದರೂ ಸನಾತನವಾಗಿ ಬಂದಿರುವ ಕುರಡು ಸಂಪ್ರದಾಯಗಳ ವಿರುದ್ಧ ದನಿ ಎತ್ತಿದ್ದಾರೆ; ಸಮಾಜದಲ್ಲಿನ ಅಂಧಶ್ರದ್ಧೆ ಮತ್ತು ಮೌಢ್ಯಾಚರಣೆಗಳಿಗೆ ಒಳಗಾಗಿ ಪೂಜೆ, ಹರಕೆ, ಪ್ರಾಣಿ ಬಲಿಗಳನ್ನು ಅರ್ಪಿಸುತ್ತಿರುವುದನ್ನು ಖಂಡಿಸುವುದರ ಮೂಲಕ ವೈಚಾರಿಕ ಮನೋಭಾವವನ್ನು ಬೆಳೆಸಿಕೊಂಡು ಗೊಡ್ಡು ಸಂಪ್ರದಾಯದಿAದ ಹೊರಬರಲು ಕರೆ ನೀಡುತ್ತಾರೆ.

ಎರಡನೇ ಭಾಗ ‘ಹಕ್ಕಿಗಳ ಚಿಲಿಪಿಲಿ ಗಾನ’ದಲ್ಲಿ ‘ಬದುಕಿಗೆ ನೆಲೆ-ಪ್ರೀತಿಯ ಸೆಲೆ’, ‘ಪ್ರೇಮ ವಿವಾಹ’, ‘ದೇವರು ಮತ್ತು ದೋಷ’, ‘ದಾಯಾದಿಗಳ ವೈಮನಸ್ಸು’, ‘ಅಣ್ಣನ ಮಕ್ಕಳ ಮದುವೆ’, ‘ಗುಡಿ ನಿರ್ಮಾಣ ಪರ್ವ’, ‘ಪಾಠ ಪ್ರವಚನದಲ್ಲಿ ತಲ್ಲೀನತೆ ಮತ್ತು ಮನೆ ಕಟ್ಟುವ ಧಾವಂತ’, ‘ನಾನು ಕಥೆಗಾರನಾದೆ’, ‘ನನಗಂಟಿಸಿದ್ದ ಎರಡು ಕಪ್ಪು ಕಲೆಗಳು’, ‘ವಂಚನೆಯ ಸುಳಿಯಲ್ಲಿ’ ಮೊದಲಾದ ಘಟನೆಗಳನ್ನು ಕುರಿತು ನಾಯಕರು ನಿಸ್ಸಂಕೋಚ ಮತ್ತು ನಿರ್ಭೀಡೆಯಿಂದ ಮುಕ್ತವಾಗಿ ಬರೆದಿದ್ದಾರೆ.

ಬಾಲ್ಯ, ಯೌವ್ವನ ದಾಟಿ ಮುಂದೆ ನಗರದಲ್ಲಿ ನೆಲೆಯೂರಿ ನಿಂತಾಗಲೂ ಈ ಹಳ್ಳಿಯ ಬದುಕಿನ ಅನುಭವ ಕೃಷ್ಣ ನಾಯಕರ ನರನಾಡಿಗಳಲ್ಲಿ ಹರಿಯುತ್ತಿದೆ. ತೋರಿಕೆಯ ಆಡಂಬರದ ವೇಷಭೂಷಣ, ನಡೆ-ನುಡಿಗಳಿಂದ ಗಾವುದ ದೂರವಿರುವ ಅವರು ತಾವೊಬ್ಬ ಹಳ್ಳಿಗನೆಂಬುದನ್ನು ಈವರೆಗೂ ಮರೆತಿಲ್ಲ. ಅವರು ಸಂತೋಷವಾಗಿ ಒಪ್ಪಿಕೊಂಡು ಬದುಕುತ್ತಿರುವರು; ಆತ್ಮಕಥೆಯ ಪ್ರತಿಯೊಂದು ಸಾಲುಗಳಲ್ಲಿ ಅದರ ಛಾಯೆಯನ್ನು ಗುರುತಿಸಬಹುದಾಗಿದೆ. ದ್ವಂದಗಳ ನಡುವೆಯೇ ಬೆಳೆಯುತ್ತಾ ವೈಚಾರಿಕವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಂಡ ನಾಯಕರು ತಮ್ಮ ಬದುಕಿನಲ್ಲಿ ಎದುರಿಸಿದ ಧಾರ್ಮಿಕವೆನ್ನಿಸಬಹುದಾದ ತಾಕಲಾಟಗಳು ಪ್ರಮುಖವಾಗಿವೆ.

ಮೂರನೇ ಭಾಗ ‘ಹಕ್ಕಿಗಳ ಅಂಬರ ಯಾನ’ದಲ್ಲಿ ‘ಉಪನ್ಯಾಸಕನಾಗಿ ಕಾಲೇಜಿನ ಆ ದಿನಗಳು’, ‘ಪ್ರಾಂಶುಪಾಲರಾಗಿ’, ‘ಬೌದ್ಧಿಕತೆ ಬೆಳೆಸಿದ ಭಾರತದ ನೋಟ’, ‘ಹೃದಯ ಅರಳಿಸಿದ ಕೃತಿಗಳು,’ ‘ವಿದೇಶ ಪ್ರವಾಸಗಳು,’ ‘ವಾಸ್ತು ಎಂಬ ಅಸಂಗತ ಸಂಗತಿ’, ‘ಮಿತ್ರನಿಗೆ ಬರೆದ ಪತ್ರ’- ಹೀಗೆ ತಮ್ಮ ಬದುಕಿನ ಕೆಲವು ಮುಖ್ಯ ಘಟ್ಟಗಳನ್ನು, ಘಟನೆಗಳನ್ನು ಕುರಿತು, ಈ ನೆಲೆಯ ಸ್ನೇಹ ಸಂಬAಧಗಳು ಕುರಿತು ಸಾಕಷ್ಟು ವಿವರವಾಗಿ ಬರೆದಿರುವ ನಾಯಕರು ತಮ್ಮ ಕೃತಿಗಳ ಪ್ರಕಟನೆಯ ವರ್ಷ ಮತ್ತು ಸಂದರ್ಭಗಳ ಕುರಿತು ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರೆ. ಅನೇಕ ದೇಶಗಳನ್ನು ಪ್ರವಾಸ ಮಾಡಿರುವ ನಾಯಕರು ಆ ದೇಶಗಳಿಗೆ ಭೇಟಿ ನೀಡಿದಾಗಿನ ವಿಶಿಷ್ಟ ಅನುಭವಗಳನ್ನು, ಆ ದೇಶಗಳ ವಿಶೇಷತೆಗಳನ್ನು ಯಥಾವತ್ತಾಗಿ ಈ ಭಾಗದಲ್ಲಿ ದಾಖಲಿಸಿದ್ದಾರೆ.

ಆತ್ಮಕಥೆಯನ್ನು ಬರೆಯುವುದು ಸುಲಭದ ಕೆಲಸವಲ್ಲ. ಆತ್ಮಕಥೆಯನ್ನು ಬರೆಯುವುದು ಸುಲಭವೆಂದು ಭಾವಿಸಿ ಅನೇಕ ಲೇಖಕರು ಈ ಸಾಹಿತ್ಯ ಪ್ರಕಾರಕ್ಕೆ ಕೈಹಾಕಿ ಅದರ ಚಂದನವನ್ನು ವಿರೂಪಗೊಳಿಸಿರುವುದರಿಂದ ಒಂದೋ ಆತ್ಮಾನುಕಂಪದಿAದ ನಲುಗಿ ತನ್ನ ಮೂಲ ರೂಪವನ್ನೇ ಕಳೆದುಕೊಂಡ ಆತ್ಮಕಥೆಗಳಾಗಿರುತ್ತವೆ, ಇಲ್ಲ ಆತ್ಮಕಥೆಯ ಮೂಲಕ ತಮಗಾಗದವರ ಮೇಲೆ ಹರಿಹಾಯುವುದಕ್ಕೋಸ್ಕರವೇ ಈ ಸಾಹಿತ್ಯ ಪ್ರಕಾರವನ್ನು ಆಯ್ದುಕೊಂಡಿರುತ್ತವೆ. ಅಂದರೆ ಇವೆರಡು ಅಂಶಗಳು ಆತ್ಮಕಥೆಯ ಪ್ರಕಾರಕ್ಕೆ ಇರುವ ದೊಡ್ಡ ಕುತ್ತುಗಳು. ಇವುಗಳನ್ನು ದಾಟಬೇಕಾದರೆ ಮನಸ್ಸು ಮಾಗಬೇಕು. ಪ್ರೌಢಿಮೆಯ ಅಂಶದ ಜೊತೆಗೆ ಒಂದು ಕಾಲಮಾನದ ಜೀವನವನ್ನು ಹೊಸ ಮೌಲ್ಯಗಳ ಬೆಳಕಿನಲ್ಲಿ ಪರೀಕ್ಷಿಸುವ ಪರಿಣತಿಯೂ ಲೇಖಕನಲ್ಲಿ ಮೂಡಬೇಕು. ಇದೇನು ಸಾಮಾನ್ಯ ಮಾತಲ್ಲ ಮತ್ತು ಸಾಮಾನ್ಯವಾದ ಲೇಖಕರಲ್ಲಿ ಮೂಡುವ ವಿಷಯವಲ್ಲ. ವಿದ್ವತ್ತಾಗಲಿ, ಪಾಂಡಿತ್ಯವಾಗಲಿ, ಸೃಜನಶೀಲ ಬರವಣಿಗೆಯ ಶಕ್ತಿಯಾಗಲಿ ಇದಕ್ಕೆ ಪ್ರೇರಕವಾಗಿ ನಿಲ್ಲುವ ಶಕ್ತಿಯಾಗಲಾರದು. ಆದ್ದರಿಂದ ಆತ್ಮಕಥೆಯನ್ನು ಬರೆಯುವ ಪ್ರೌಢಿಮೆ ಮೂಡಬೇಕೆಂದರೆ ಮನಸ್ಸಿಗೆ ಬೇರೊಂದು ಆಯಾಮ ಮೂಡಬೇಕಾಗುತ್ತದೆ. ನಾಯಕರ ‘ವಲಸೆ ಹಕ್ಕಿಯ ಹಾಡು’, ‘ಆತ್ಮಕಥೆ’ಯ ಈ ಕುತ್ತುಗಳನ್ನು ದಾಟಿದೆ. ಆತ್ಮಕಥೆಯು ಕೇವಲ ಜೀವನವೊಂದರ ವೃತ್ತಾಂತವೆAದರೆ ಸಾಲದು. ಅದು ವ್ಯಕ್ತಿಯೊಬ್ಬನು ತನ್ನ ಕಾಲಕ್ಕೆ ಸ್ಪಂದಿಸಿದ ರೀತಿಯನ್ನು ದಾಖಲು ಮಾಡುವ ಮೂಲಕ ತಾನು ನಂಬಿದ್ದನ್ನು ತಾನು ಸೃಷ್ಟಿಸಿದ ಮೌಲ್ಯವ್ಯವಸ್ಥೆಯೊಡನೆ ಅನುಸಂಧಾನಕ್ಕೆ ಇಳಿಸುವ ಕ್ರಮ. ಈ ಗುಣ ನಾಯಕರ ಆತ್ಮಕಥೆಗೆ ಮೆರೆಗು ನೀಡುತ್ತದೆ. ಈ ಆತ್ಮಕಥನವು ಅಲ್ಲಲ್ಲಿ ಸೃಜನಾತ್ಮಕ ಕಥಾರೂಪವನ್ನು ತಾಳುತ್ತದೆ. ಮೂಲತಃ ಕಥೆಗಾರರಾಗಿರುವ ಕೃಷ್ಣ ನಾಯಕರ ಜೀವನ ಚರಿತ್ರೆಯಲ್ಲಿ ಇದು ಅನಿವಾರ್ಯ. ಈ ದೃಷ್ಟಿಯಿಂದ ನೋಡಿದಾಗ ಅವರ ಇಡೀ ಸಾಹಿತ್ಯ ಪ್ರಪಂಚವನ್ನು ವಿಮರ್ಶಿಸುವಾಗ ಅವರ ಈ ಆತ್ಮಕಥೆಯು ಆಕರ ಗ್ರಂಥವಾಗಿ ನಿಲ್ಲುತ್ತದೆ.

ಕೃಷ್ಣ ನಾಯಕ ವೈಯಕ್ತಿಕ ಹಾಗೂ ವೃತ್ತಿ ಬದುಕುಗಳೆರಡರಲ್ಲೂ ನಿರಂತರ ಸಾಹಸ ಮತ್ತು ಪ್ರಯೋಗಗಳನ್ನು ನಡೆಸಿದವರು. ಸಂಸಾರವೆAದರೆ ತನ್ನ ಕುಟುಂಬವೆAದು ಅರ್ಥೈಸಿಕೊಂಡವನು ಎಲ್ಲವನ್ನು ತನ್ನ ಮಕ್ಕಳಿಗೆ ಬರೆದಿಡುತ್ತಾನೆ. ಸಂಸಾರವೆAದರೆ ಸಮಾಜವೆಂದು ಅರಿತವನು ‘ವಿಲ್’ನ್ನು ಕವಿತೆಯಾಗಿಯೋ, ಕಥೆಯಾಗಿಯೋ, ಕಾದಂಬರಿಯಾಗಿಯೋ ಬರೆದಿಡುತ್ತಾನೆ. ಬದುಕಿನ ಕ್ರೂರ ವಾಸ್ತವಗಳು ಹೇಗೆ ಆಪ್ತ ಸಂಬAಧಗಳ ವಿಚಾರದಲ್ಲಿ ಪಾಪ ಪ್ರಜ್ಞೆಯನ್ನು ಮನಸ್ಸಿನಾಳದಲ್ಲಿ ನೆಲೆಯೂರಿಸಬಹುದೆಂಬುದನ್ನು ಅವರು ತಂದೆಯ ಬಗೆಗೆ ನಾಯಕರ ಹಲುಬುವಿಕೆಯಲ್ಲಿ ಗುರುತಿಸಬಹುದಾಗಿದೆ.

ಸಹಜವಾಗಿ ಲೇಖಕನು ತಾನು ನಡೆದು ಬಂದ ದಾರಿಯಲ್ಲಿ ತನ್ನನ್ನೇ ಇಟ್ಟುಕೊಂಡು ಮತ್ತೊಮ್ಮೆ ನೋಡಿಕೊಳ್ಳುತ್ತಾನೆ. ಆಗ ತಾನು ಜೀವನದುದ್ದಕ್ಕೂ ಕಂಡ ಮತ್ತು ಅರಿತ ಜನರನ್ನು ಕುರಿತು ಅವನು ಬರೆಯುತ್ತ ಹೋಗುತ್ತಾನೆ. ಬಾಲ್ಯದಿಂದ ಹಿಡಿದು ಜೀವನದ ಸಂಧ್ಯಾಕಾಲದವರೆಗೆ ನಡೆದುದೇನು, ತನ್ನ ಜೀವನವನ್ನು ಯರ‍್ಯಾರು ಎಷ್ಟೆಷ್ಟು ಆಳವಾಗಿ ಮತ್ತು ಎಷ್ಟೆಷ್ಟು ಆಯಾಮಗಳಲ್ಲಿ ಸ್ಪರ್ಶಿಸಿದ್ದಾರೆ ಎಂಬುದು ವಿಶ್ಲೇಷಣೆಗೂ ಒಳಗಾಗುತ್ತದೆ. ಇದು ಮೌಲ್ಯಮಾಪನವಲ್ಲ. ಇದು ಬೇರೆಯವರನ್ನು ಕಾಣುತ್ತಲೇ ತನ್ನನ್ನು ಅರಿಯುವ ಒಂದು ರೀತಿಯ ಬರವಣಿಗೆಯ ಸಾಹಸ. ಸಾಮಾನ್ಯವಾಗಿ ಆತ್ಮಕಥೆಗಳಲ್ಲಿ ಲೇಖಕರು ತಮಗೆ ಕಿರಿಕಿರಿಯನ್ನುಂಟುಮಾಡುವಂತಹ ಕೆಲವಾದರೂ ಪ್ರಸಂಗಗಳನ್ನು ಬಿಟ್ಟುಬಿಡುವುದುಂಟು. ಆದರೆ ನಾಯಕರು ಇದಕ್ಕೊಂದು ಅಪವಾದ. ತಮ್ಮ ವ್ಯಕ್ತಿತ್ವದ ಗುಣ-ದೋಷ, ಸೋಲು-ಗೆಲುವು, ಸವಾಲು-ಸಾಧನೆಗಳ ಕುರಿತು ಅವರು ವಿಶ್ಲೇಷಣಾತ್ಮಕವಾಗಿ ವಿವರಿಸಿದ್ದಾರೆ. ನೇರವಾಗಿ, ಯಾವುದೇ ಮುಚ್ಚುಮರೆಯಿಲ್ಲದೆ ತಮ್ಮ ಕನಸು, ಹಾಗೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ನಾಯಕರು ಬರೆದುಕೊಂಡಿದ್ದಾರೆ. ತನ್ನ ತಕ್ಷಣದ ಪರಿಸರದ ಹಲವು ಸಾಧ್ಯತೆಗಳನ್ನು ಹೀರುವ ಮತ್ತು ಮೀರುವ ಅಪೇಕ್ಷೆಗಳು ಲೇಖಕರನ್ನು ಜಡವಾಗದಂತೆ ಕಾಪಾಡಿವೆ. ಬರವಣಿಗೆ ಕುರಿತು ಯಾವ ಪೂರ್ವಾಗ್ರಹವೂ ಇಲ್ಲದ ಹಾಗೆಯೇ ಮೋಹವೂ ಇಲ್ಲದ ಅಭಿವ್ಯಕ್ತಿ. ಈ ನಿರ್ಲಿಪ್ತ ಗುಣವೇ ಈ ಆತ್ಮಕಥನವನ್ನು ಅನನ್ಯವಾಗಿಸಿರುವ ಅಂಶ. ಲೇಖಕರ ಜೀವನದ ಅನುಭವಗಳ ಚಿತ್ರಣ ಹಾಗೂ ಪ್ರಾದೇಶಿಕ ವಿವರಗಳು ಈ ಕೃತಿಯ ಚೆಲುವನ್ನು ಹೆಚ್ಚಿಸಿವೆ.

ಈ ಆತ್ಮಕಥನದ ಓದು ಒಂದು ವಿಶೇಷ ಅನುಭವ. ಈ ಕೃತಿಯು ಹಣ, ಅಧಿಕಾರ, ವಿದ್ಯೆ ಮತ್ತು ಪ್ರತಿಷ್ಠೆಗಳ ಹಿನ್ನೆಲೆ ಇಲ್ಲದ ರೈತಾಪಿ ಕುಟುಂಬದಿಂದ ಬಂದ ತಾಂಡ್ಯದ ಯುವಕನೊಬ್ಬ ಕಲಬುರ್ಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಶ್ರೇಷ್ಠ ಪ್ರಾಧ್ಯಾಪಕನಾಗಿ, ಪ್ರಾಂಶುಪಾಲರಾಗಿ ಮತ್ತು ನಾಡಿನ ಪ್ರಮುಖ ಕಥೆಗಾರನಾಗಿ ಬೆಳೆದು ತನ್ನ ಅಸ್ತಿತ್ವವನ್ನು ಸ್ಥಾಪಿಸಿದ ಬಗೆಯನ್ನು ಕಾಣಿಸುತ್ತದೆ. ಆತ್ಮವಿಶ್ವಾಸದ ಶಕ್ತಿ ಇಲ್ಲದ ಎಲ್ಲರಿಗೂ ಇದು ಸ್ಫೂರ್ತಿಯಾಗುತ್ತದೆ. ಇತ್ತೀಚೆಗೆ ಬಂದ ಆತ್ಮಕಥೆಗಳಲ್ಲಿ ಕೃಷ್ಣ ನಾಯಕರ ‘ವಲಸೆ ಹಕ್ಕಿಯ ಹಾಡು’ ತನ್ನ ಗದ್ಯದ ಅಪ್ರತಿಮ ಸೊಗಸು ಮತ್ತು ಅಲ್ಲಿಯ ನಿರೂಪಣಾ ಶೈಲಿಯಿಂದ ಓದುಗರ ಗಮನ ಸೆಳೆಯುತ್ತದೆ.

- ಸಿ. ಎಸ್. ಭೀಮರಾಯ (ಸಿಎಸ್ಬಿ)
ಆಂಗ್ಲ ಉಪನ್ಯಾಸಕರು

 

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...