ವಿಕ್ರಮ ವಿಸಾಜಿ ಅವರ ಕಾವ್ಯ ಲೋಕ ಅದ್ಭುತವಾದುದ್ದು: ಡಾ. ಶರಣಬಸಪ್ಪ ವಡ್ಡನಕೇರಿ


“ಕನ್ನಡ ಮತ್ತು ಇಂಗ್ಲಿಷ್ ಸೇರಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪತ್ರಿಕೆಗಳಲ್ಲಿ ಇವರ ಸಂಶೋಧನೆ, ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಮತ್ತು ರಾಷ್ಟ್ರ ಸೇರಿದಂತೆ ಅವರ ಪ್ರತಿಭೆಗೆ ಅನೇಕ ಪ್ರತಿಷತ ಪ್ರಶಸ್ತಿಗಳು ಲಭಿಸಿವೆ” ಎನ್ನುತ್ತಾರೆ ಡಾ. ಶರಣಬಸಪ್ಪ ವಡ್ಡನಕೇರಿ. ಅವರು ಡಾ. ಎಂ.ಬಿ. ಕಟ್ಟಿ ಅವರ ‘ವಿಕ್ರಮ ವಿಸಾಜಿ’ ವಾಚಿಕೆ 23 ಕುರಿತು ಬರೆದ ಅನಿಸಿಕೆ.

ಕಲ್ಯಾಣ ಕರ್ನಾಟಕದ ಸೃಜನಶೀಲ ಸಾಹಿತಿಗಳು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈ ಸಾಹಿತಿಗಳ ಕೃತಿಗಳು ಕನ್ನಡ ಓದುಗರಿಗೆ ಉಪಲಬ್ಧವಿರುವುದಿಲ್ಲ. ಈ ಲೇಖಕರು ರಚಿಸಿದ ಎಲ್ಲಾ ಸಾಹಿತ್ಯದ ಮೊತ್ತ ಸಾವಿರ ಪುಟಗಳಷ್ಟಾಗುತ್ತದೆ. ಅಷ್ಟನ್ನೂ ಮುದ್ರಿಸುವುದು ಕಷ್ಟಕರ. ಈ ದಿಸೆಯಲ್ಲಿ ನಮ್ಮ ಪ್ರಕಾಶನದಿಂದ ಸಾಹಿತಿಗಳ ವಾಚಿಕೆಗಳನ್ನು ಹೊರತಂದು, ಅವರ ಸಾಹಿತ್ಯದ ಸ್ವಾದವನ್ನು ಕನ್ನಡಿಗರಿಗೆ ಉಣಬಡಿಸಿ ಕನ್ನಡಿಗರ ಹೃನ್ಮನಗಳನ್ನು ಅರಳಿಸುವಂತಾಗಬೇಕೆನ್ನುವುದು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಸದಿಚ್ಛೆಯಾಗಿದೆ. ಸುವರ್ಣ ಕರ್ನಾಟಕ ನಾಮಕರಣ ಸಂಭ್ರಮಾಚರಣೆ ಸಂದರ್ಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ಅಹರ್ನಿಶಿ ಸೇವೆಗೈದ ಹಲವು ಹಿರಿಯ ಮತ್ತು ಕಿರಿಯ ಸಾಹಿತಿಗಳ ವಾಚಿಕೆಗಳನ್ನು ಹೊರತಂದು ಕನ್ನಡ ಓದುಗರ ಮಡಿಲಿಗೆ ಅರ್ಪಿಸುವ ಸದಿಚ್ಚೆಯಾಗಿದೆ.

ಈ ಸದಿಚ್ಛೆ ನೆರವೇರುವಲ್ಲಿ ಡಾ. ಎo. ಬಿ. ಕಟ್ಟಿಯವರು ಡಾ. ವಿಕ್ರಮ ವಿಸಾಜಿ ಕುರಿತ ಸಮಗ್ರ ಸಾಹಿತ್ಯ ವಾಚಿಕೆ ರೂಪದಲ್ಲಿ ಸಂಪಾದಿಸಿದ್ದಾರೆ. ವಿಕ್ರಮ ವಿಸಾಜಿರವರಿಂದ ರಚಿತವಾದ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಅವರ ಕೃತಿಗಳಿಗೆ ಹಲವು ಪ್ರಶಸ್ತಿ ಕೂಡಾ ಲಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕನ್ನಡ ಕಟ್ಟುವುದರ ಜೊತೆಗೆ ಕಾವ್ಯ, ವಿಮರ್ಶೆ, ಅನುವಾದ ಸಾಹಿತ್ಯದ ಹಲವು ಕೃತಿ ರಚಿಸಿದವರು. ಅವರ ಒಟ್ಟು ಸಾಹಿತ್ಯದ ಸಾರಸ್ವತ ಸತ್ವವನ್ನು ಕನ್ನಡ ಓದುಗರಿಗೆ ಈ ವಾಚಿಕೆ ಉಣಬಡಿಸುತ್ತದೆ.

ಕನ್ನಡ ಸಾಹಿತ್ಯದ ಬಹುಮುಖ ಪ್ರತಿಭೆ ಡಾ. ವಿಕ್ರಮ ವಿಸಾಜಿ ಅವರ ಕುರಿತು ವಾಚಿಕೆ ಸಿದ್ದಪಡಿಸುವುದು ನನಗೆ ಖುಷಿಯ ವಿಷಯ ಮತ್ತು ಹೆಮ್ಮೆ. ಡಾ. ವಿಕ್ರಮ ವಿಸಾಜಿ ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಡಗಂಚಿಯಲ್ಲಿ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರರ ಸಾಹಿತ್ಯ ಕುರಿತು ಪಿಎಚ್.ಡಿ. ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಎಂ.ಎ. ಪದವಿಯನ್ನು ಇದೇ ವಿಶ್ವವಿದ್ಯಾಲಯದಿಂದ ನಾಲ್ಕು ಚಿನ್ನದ ಪದಕಗಳೊಂದಿಗೆ ಪ್ರಥಮ ರ್ಯಾಂಕ್ ಪಡೆದ ಪ್ರತಿಭಾನ್ವಿತರು.

ಡಾ. ವಿಸಾಜಿಯವರು ಬೀದರ ಜಿಲ್ಲೆಯ ಬಾಲ್ಕಿ ತಾಲೂಕಿನವರಾದರು ಅವರ ಕಾರ್ಯಸ್ಥಾನ ಮತ್ತು ವಾಸಸ್ಥಳ ಕಲಬುರಗಿಯೇ ಆಗಿದೆ. ಕಲ್ಯಾಣ ಕರ್ನಾಟಕದ ಪ್ರತಿಭೆ ಕರ್ನಾಟಕ ಅಷ್ಟೇ ಅಲ್ಲ ರಾಷ್ಟ್ರಮಟ್ಟದವರೆಗೆ ಬೆಳೆದಿರುವುದು ಅಭಿಮಾನದ ಸಂಗತಿ. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಬಲ್ಲ ಡಾ. ವಿಕ್ರಮ ವಿಸಾಜಿ ಅವರು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ ಕನ್ನ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಕೆಲವು ಕೃತಿಗಳು ಹಿಂದಿ ಭಾಷೆಗೆ ಅನುವಾದಗೊಂಡಿವೆ. ಜೊತೆಗೆ ಇವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸೇರಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಪತ್ರಿಕೆಗಳಲ್ಲಿ ಇವರ ಸಂಶೋಧನೆ, ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಮತ್ತು ರಾಷ್ಟ್ರ ಸೇರಿದಂತೆ ಅವರ ಪ್ರತಿಭೆಗೆ ಅನೇಕ ಪ್ರತಿಷತ ಪ್ರಶಸ್ತಿಗಳು ಲಭಿಸಿವೆ. ಕೊಲ್ಕತ್ತದ ಭಾರತೀಯ ಭಾಷಾ ಪರಿಷತ್‌ನಿಂದ ಯುವ ಸಾಹಿತ್ಯ ಪುರಸ್ಕಾರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಯೋಜಿತ ಪಶ್ಚಿಮ ಬಂಗಾಳದಿಂದ ಯುವೆ ಲೇಖಕ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಪು.ತಿ.ನ ಪ್ರಶಸ್ತಿ, ದ.ರಾ.ಬೇಂದ್ರೆ ಪ್ರಶಸ್ತಿ, ಶ್ರೀ ವಿಜಯ ಪ್ರಶಸ್ತಿ, ಸಂಕ್ರಮಣ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. 21 ವರ್ಷಗಳ ಬೋಧನೆ ಮತ್ತು ಸಂಶೋಧನಾ ಅನುಭವ ಹೊಂದಿರುವ ಡಾ. ವಿಕ್ರಮ ವಿಸಾಜಿ ಅವರ ಮಾರ್ಗದರ್ಶನದಲ್ಲಿ ಒಬ್ಬರು ಎಂ.ಫಿಲ್. ಮತ್ತು ನಾಲ್ಕು ಜನ ಪಿಎಚ್.ಡಿ ಪದವಿ ಪಡೆದಿದ್ದಾರೆ. ಅನೇಕ ಆಡಳಿತಾತ್ಮಕ ಹುದ್ದೆಗಳನ್ನು ನಿಭಾಯಿಸಿರುವ ವಿಕ್ರಮ ವಿಸಾಜಿಯವರು ಒಬ್ಬ ಕನ್ನಡ ಶ್ರೇಷ್ಠ ಪ್ರಾಧ್ಯಾಪಕ ಮತ್ತು ಲೇಖಕ ಎಂದರೆ ತಪ್ಪಾಗದು.

ಡಾ. ವಿಕ್ರಮ ವಿಸಾಜಿ ಅವರ ವಾಚಿಕೆಯನ್ನು ಪ್ರಮುಖವಾಗಿ ನಾಲ್ಕು ಭಾಗಗಳನ್ನಾಗಿ ಮಾಡಿಕೊಳ್ಳಲಾಗಿದೆ. ಕಾವ್ಯ, ವಿಮರ್ಶೆ, ನಾಟಕ, ಸಂಶೋಧನೆ ಹೀಗೆ ಅವರ ಸಾಹಿತ್ಯವನ್ನು ವಿಭಾಗಿಸಿಕೊಂಡಿದ್ದೇನೆ. ವಾಚಿಕೆಯು ಪುಟಗಳ ಮಿತಿಗೆ ಒಳಪಟ್ಟಿರುವದ ರಿಂದ ಈ ವಿಭಾಗ ಕ್ರಮವನ್ನು ಅನುಸರಿಸಿದ್ದೇನೆ.

ವಿಕ್ರಮ ವಿಸಾಜಿ ಅವರ ಕಾವ್ಯ ಲೋಕ ಅದ್ಭುತವಾದುದ್ದು. ಅವರ ಕಾವ್ಯ ಶಬ್ದ ಮತ್ತು ಅರ್ಥಗಳೊಂದಿಗೆ ಚಮತ್ಕಾರವನ್ನು ಸೃಷ್ಟಿಸುತ್ತದೆ. ಕೇವಲ ಭಾವನೆ ಮತ್ತು ಕಲ್ಪನಾ ವಿಚಾರಗಳನ್ನು ಮಾತ್ರ ಕಟ್ಟುವದಿಲ್ಲ. ಆಲೋಚನಾ ಲಹರಿಗಳನ್ನು ಹುಟ್ಟು ಹಾಕುತ್ತದೆ. ವಾಸ್ತವಿಕ ಪ್ರಜ್ಞೆ ಕವಿಗೆ ಬಹಳ ಕಾಡುತ್ತದೆ. ಅವರ ಕಾವ್ಯ ಯಾವಾಗಲೂ ಭಾವನಾ ಪ್ರಪಂಚದಲ್ಲಿ ಮುಳುಗೇಳಿಸುವ, ನವಿರಾದ ಮಾತುಗಳಿಂದ ಸಮ್ಮೋ ಹನಕ್ಕೀಡುವ ಮಾಡುವ ಗೋಜಿಗೆ ಹೋಗುವುದಿಲ್ಲ. ತಮ್ಮ ಕಾವ್ಯ ಕುಲುಮೆಯಿಂದ ಕಾದ ಪದಗಳ ಗುಚ್ಚ ಮನುಷ್ಯ ಜೀವಿಯ ಎದೆ ಹೊಕ್ಕು ರುದ್ರಾನರ್ತನ ಗೆಯುತ್ತ, ತಲೆಯಲ್ಲಿ ತುಂಬಿದ ಕೊಳೆಯನ್ನು ಕಿತ್ತೆಸೆಯುತ್ತವೆ. ಕೇವಲ ಆನಂದವನ್ನು ನೀಡುವುದು ಕಾವ್ಯ ಎನ್ನುವ ಮಾತನ್ನು ವಿಸಾಜಿಯವರ ಕಾವ್ಯ ತಿರಸ್ಕರಿಸುತ್ತದೆ. ಸಾಮಾಜದ ಓರೆ ಕೋರೆಗಳನ್ನು ತಿದ್ದುವುದರ ಜೊತೆಗೆ ಮನುಷ್ಯ ಸಂಬಂಧಗಳ ಅನನ್ಯತೆಯನ್ನು ಸಾರಿ ಹೇಳುತ್ತವೆ. ವಿಸಾಜಿ ಅವರ ಕಾವ್ಯದಲ್ಲಿ ನಿಗೂಢತೆಗೆ ಹೆಚ್ಚು ಆಸ್ಪದವಿಲ್ಲ. ನೇರ ಸಂಹವನವೇ ಅವರ ಕಾವ್ಯದ ಶಕ್ತಿಯಾಗಿದೆ. ಅಷ್ಟೇ ಅಲ್ಲ ಲೋಕಾನುಭವದ ಸ್ವಾದವಿದೆ. ಕಥನಗಳ ಸಂವಾದವಿದೆ. ಕಾವ್ಯಕಾರಣ ಮತ್ತು ಕಾವ್ಯ ಶೋಧ ವಿಕ್ರಮ ಅವರ ಕಾವ್ಯದ ಶಕ್ತಿ ಮತ್ತು ಯುಕ್ತಿ. ಅವರ ಪ್ರತಿಭೆಯು ಕಾವ್ಯದಲ್ಲಿ ದಟ್ಟವಾಗಿ ತೋರಿದೆ. ವಿಸಾಜಿ ಅವರ ಎಲ್ಲಾ ಕವನಗಳೂ ಬೇಗ ಆಕರ್ಷಿಸುತ್ತವೆ ಕಾರಣ ಅವರ ಕಾವ್ಯ ವಸ್ತುವಿನ ಆಯ್ಕೆ ಬಹಳ ಸುಂದರ, ದಿನನಿತ್ಯದ ಸಹಜ ಜೀವನದ ವಿಷಯವನ್ನೇ ಕಾವ್ಯವನ್ನಾಗಿಸುವ ಅವರ ಕರ್ತಾಕ ಶಕ್ತಿ ನಿಜಕ್ಕು ಅಚ್ಚರಿ ಮೂಡಿಸುತ್ತದೆ. ಅವರು ರೂಪಿಸುವ ರೂಪಕಗಳು, ಕಥನಕಗಳು, ಕಾವ್ಯದಲ್ಲಿ ಔಚಿತ್ಯಪೂರ್ಣವಾಗಿ ಬರುತ್ತವೆ. ಮಿರ್ಜಾ ಗಾಲಿಬ್ ಜೊತೆ ಮಾತು ಕತೆ, ಪಿಣಿಕರ್ ಓದುವ ಕೋಣೆ, ಡೆಸ್ಟಿಮೋನಾಳ ಕರವಸ್ತ್ರ, ಸಮಗಾರ ಹರಳಯ್ಯ, ಶಾಣಮ್ಮ, ಮಾಸಿಕಲ್ಲು, ನದಿ, ಸಮುದ್ರದ ಹಕ್ಕಿ, ಗೂಡು, ಜೈಲು, ದುಂಬಿ, ಚಿಟ್ಟೆ, ಜೇನು, ಜನಕ ಹೆಣ್ಣು ಕುಲುಮೆ, ಜಾತಿ ಬಿಕ್ಷಾಟನೆ, ವಿಜ್ಞಾನ ನವಿಲು, ಪ್ರೇಮ, ಕನಸು ಸುಖ, ಅಪ್ಪ ಅವ್ವಕನ್ನಡ, ಬದುಕು, ಬೆಳಕು ಕತ್ತಲು, ಕಲೆ, ಇವೆಲ್ಲ ವಿಕ್ರಮ ವಿಶಾಜಿಯವರ ಕಾವ್ಯಕ್ಕೆ ಆಸ್ತಿಯಾಗಿ ಕಾವ್ಯ ಸಂಪತ್ತನ್ನು ಸಮೃದ್ಧಗೊಳಿಸಿವೆ.

- ಡಾ. ಶರಣಬಸಪ್ಪ ವಡ್ಡನಕೇರಿ

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...