“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ ವಾತಾವರಣ, ಹಿರಿಯರ ಮಾರ್ಗದರ್ಶನ, ಪ್ರೋತ್ಸಾಹದಲ್ಲಿ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಈ ಮೊದಲ ಹೆಜ್ಜೆಯಲ್ಲಿಯೇ ಕಾಣಿಸುತ್ತಿದೆ,” ಎನ್ನುತ್ತಾರೆ ಶಿವಾನಂದ ಕಳವೆ. ಅವರು ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ‘ಹೆಜ್ಜೆ ಊರುವ ತವಕ’ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.
ಅಜ್ಜಿಮನೆ, ಕೆಮರಾ ಹಾಗೂ ಬನದ ಹುಡುಗ
ಲೇಖನ ಬರವಣಿಗೆ ಆರಂಭಿಸಿದ ಮೊದಲಲ್ಲಿ ಎಲ್ಲರಿಗೂ ಬರೆಯುವುದಕ್ಕೆ ವಿಷಯ ಹುಡುಕುವ ಸವಾಲು. ನಮ್ಮೂರಿನ ಚಿತ್ರಕಲಾವಿದ, ಹಾಡುಗಾರ, ಯಕ್ಷಗಾನ ಕಲಾವಿದ, ದೇಗುಲ, ಪ್ರವಾಸಿ ತಾಣ, ಜಲಪಾತವೆಂದು ಒಂದರನಂತರ ಒಂದು ಬರೆದಿದ್ದೇ ಬರೆದಿದ್ದು. ಮಕ್ಕಳು ಜಾತ್ರೆಗೆ ಹೋದ ಮೊದಲಲ್ಲಿ ಅಲ್ಲಿ ಕಂಡಿದ್ದೆಲ್ಲ ಬೇಕೆನ್ನುವ ಆಸೆಯಂತೆ ಬರೆಯುವ ಆರಂಭಿಕ ಉತ್ಸಾಹದ ಘಳಿಗೆ ಅದು. ಇದಾದ ನಂತರ ನಮ್ಮದೇ ಕ್ಷೇತ್ರ ಗುರುತಿಸಿ ಒಂದು ವಿಷಯದ ಆಸುಪಾಸಿನ ಸಂಗತಿಗಳನ್ನು ಹುಡುಕಿ ಹುಡುಕಿ ಬರೆಯುತ್ತಾ ಹೋಗುವ ಹಂತ, ಇಲ್ಲಿ ವಿಷಯ ಆಯ್ಕೆಗೆ ಮಾಗುವ ಕಾಲ. ಅಧ್ಯಯನಕ್ಕೆ ಪುಸ್ತಕ ಎಲ್ಲಿದೆ? ವಿಷಯ ತಜ್ಞರು ಎಲ್ಲಿದ್ದಾರೆಂದು ಹುಡುಕಾಟ ಶುರು. ನಾವು ಸರ್ವಜ್ಞರಲ್ಲ, ತಿಳಿಯುವುದು ಬಹಳವಿದೆಯೆಂಬ ಅರಿವಿನಲ್ಲಿ ಈಗ ಎಚ್ಚರದ ನಡಿಗೆ ಬೇಕು. ಪತ್ರಿಕೆ ಪ್ರಕಟಿಸುವುದೇ ಮುಖ್ಯವಲ್ಲ, ಪ್ರಕಟಿತ ಲೇಖನ ಓದುವ ಓದುಗರು ಹಳಸಲು ಸಂಗತಿ ಗಮನಿಸಿ ಇವ ಬರೆಯೋದೇ ಇಷ್ಟು ಎಂಬಂತಾಗದೇ ಹೆಜ್ಜೆ ಹೆಜ್ಜೆಗೂ ಬೆಳೆದರೆ ಗೆಲುವು. ಪ್ರತೀ ದಿನ ನಾವು ಕಲಿಯುವ ಹುಡುಗರು. ನಾವು ಲೇಖನದಲ್ಲಿ ಬಳಸುವ ಪದಗಳು ನಮಗೇ ಬೇಜಾರಾಗಿ ಹೊಸ ಪದ ಹುಡುಕುತ್ತ ಹುಡುಕುತ್ತ ಬರಹ ಶೈಲಿ, ಭಾಷೆ ಕ್ರಮೇಣ ಸುಧಾರಣೆಯಾಗುತ್ತದೆ. ಕ್ಷೇತ್ರಕಾರ್ಯ, ಮಾಹಿತಿ ಸಂಗ್ರಹದಲ್ಲಿ ಪಳಗುತ್ತ ಬರವಣಿಗೆಯ ವಿಶಿಷ್ಟ ದಾರಿಯೊಂದು ಆಗ ತೆರೆದುಕೊಳ್ಳುತ್ತದೆ.
ಯುವ ಬರಹಗಾರ, ಈಗಿನ್ನೂ ಕಾಲೇಜು ಓದುತ್ತಿರುವ ನವೀನಕೃಷ್ಣ ಎಸ್. ಉಪ್ಪಿನಂಗಡಿಯವರ ‘ಹೆಜ್ಜೆ ಊರುವ ತವಕ’ ಕೃತಿಯ ಲೇಖನಗಳನ್ನು ಗಮನಿಸಿ ಓದಿದಾಗ ಬರವಣಿಗೆಯ ಆರಂಭದ ದಿನಗಳು ನನಗೂ ನೆನಪಾದವು. ಕೆಮರಾ ಹೆಗಲಿಗೇರಿಸಿ ಕಾಡು, ಹಳ್ಳಿ ಸುತ್ತಾಡುವಾಗ ಬರಹಕ್ಕೆ ಆಯ್ದುಕೊಂಡ ವಿಷಯಗಳು ಕಾಡಿದವು. ಪಾಠ ಹೇಳುವವರಿಲ್ಲ, ಮಾರ್ಗದರ್ಶಕರಿಲ್ಲ, ಪತ್ರಿಕೆಗೆ ಬರೆದು ಕಳಿಸಿದ್ದೆಲ್ಲ ಸ್ವವಿಳಾಸ ಅಂಟಿಸಿದ ಲಕೋಟೆ ಸಹಾಯದಿಂದ ಅಸ್ವೀಕೃತವಾಗಿ ಹಿಂದಿರುಗುತ್ತಿದ್ದ ಕಾಲವದು. ಅಲ್ಲೊಂದು ಇಲ್ಲೊಂದು ಪ್ರಕಟವಾದಾಗ ಮುಂದೆ ಬರೆಯಲು ನೂರ್ಮಡಿ ಉತ್ಸಾಹ. ನಾನು ಬರಹಗಾರನಾದೆನಲ್ಲ ಎಂಬ ಖುಷಿ! ನಾವು ಬರೆದು ಬರೆದು ಕೊನೆಗೆ ಬರೆಯುವುದಕ್ಕೆ ವಿಷಯವೇ ಇರುವುದಿಲ್ಲವೇನೋ ಎಂಬ ಭಾವನೆ ಒಳಗೊಳಗೇ ಕಾಡಿದ್ದಿದೆ. ಮಿತ್ರ ಡಾ. ನಿರಂಜನ ವಾನಳ್ಳಿ ಪತ್ರಿಕೋದ್ಯಮ ಪಾಠ ಮಾಡುವಾಗೆಲ್ಲ ‘ಹುಡುಕುವ ಕಣ್ಣಿದ್ದರೆ ನಮ್ಮ ಕಾಲುಬುಡದಲ್ಲಿಯೇ ವಿಷಯ ಕಾಲು ಮುರಿದು ಬಿದ್ದಿರುತ್ತದೆ’ ಎನ್ನುತ್ತಿದ್ದರು. ಬರಹ ಆಸಕ್ತಿಯ ಹುಡುಗರ ತಂಡ ಸೇರಿಸಿಕೊಂಡು ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರದ ಮೂಲಕ ಕ್ರಿ.ಶ. 2001-2018 ರವರೆಗೆ ಕೃಷಿ-ಪರಿಸರ ಪತ್ರಿಕೋದ್ಯಮ ಶಿಬಿರ ಮಾಡುವಾಗ ಅದೆಷ್ಟೋ ಉತ್ಸಾಹಿಗಳ ಮುಖಾಮುಖಿ. ಹೆಚ್ಚುಕಡಿಮೆ 1,600ಕ್ಕೂ ಹೆಚ್ಚು ಪತ್ರಿಕೋದ್ಯಮ ವಿದ್ಯಾರ್ಥಿಗಳು, ಆಸಕ್ತರು ಶಿಬಿರಕ್ಕೆ ಬಂದಿರಬಹುದು. ಅವರಲ್ಲಿ ಕೆಲವರು ಪ್ರಕಟಿತ ಲೇಖನ ಹಿಡಿದು ತರುತ್ತಿದ್ದ ನೆನಪುಗಳಿವೆ. ‘ಗಮನಿಸಿ-ಗುರುತಿಸಿ, ಪ್ರಶ್ನಿಸಿ-ಪರಿಚಯಿಸಿ, ಬರೆಯಿರಿ-ಬೆಳೆಯಿರಿ’ ಈ ಸೂತ್ರ ಹಿಡಿದುಕೊಂಡು ಕಾಡಿನಲ್ಲಿ ಪತ್ರಿಕೋದ್ಯಮ ಪಾಠ ಮಾಡಿದ್ದೆಲ್ಲ ಕಾಡುತ್ತಿದೆ. ಇಲ್ಲಿ ನಮ್ಮ ಬರಹಗಾರ ಉಪ್ಪಿನಂಗಡಿಯ ನವೀನಕೃಷ್ಣ ಅಜ್ಜಿಯ ಮನೆಗೆ ಹೋದಾಗ, ನಾಗಬನ ಸುತ್ತಾಡುವಾಗ, ಜಲಪಾತ ತಿರುಗುವಾಗ, ತಮ್ಮನೆಯ ಪಪ್ಪಾಯ ಮರಕ್ಕೆ ಹಕ್ಕಿಗಳು ಬಂದಾಗ ಕಣ್ಣರಳಿಸಿ ಕುಳಿತಿರುತ್ತಾರೆ. ನಮ್ಮ ಸುತ್ತ ಹಾರಾಡುವ ಮಲಬಾರ್ ಟ್ರೋಜನ್, ಮಡಿವಾಳ ಹಕ್ಕಿ, ಬೂದು ಮಂಗಟ್ಟೆ, ಬಾಲದಂಡೆ ಹಕ್ಕಿ, ಕೀಟ ಹಿಡಿಯುವ ಕಳ್ಳಿಪೀರ, ಮಕರಂದ ಹೀರುವ ಚಿಟ್ಟೆಯ ಬದುಕಿನ ಸೂಕ್ಷ್ಮ ನೋಡುತ್ತಾ ಧ್ಯಾನಿಯಾಗುತ್ತಾರೆ. ನೋಡುವ, ಸುತ್ತಾಟದ ಮೊದಲ ಅನುಭವಗಳು ಬರಹದ ಸಾಲುಗಳಾಗಿ ನಮ್ಮನ್ನು ವಿಷಯದ ಸುತ್ತ ಓಡಾಡಿಸುತ್ತವೆ.
ನುಡಿಚಿತ್ರ ಬರಹಗಾರನಿಗೆ ‘ಕೆಮರಾ’ ಎಂಬುದು ವಿಷಯ ನೋಡುವ ಧ್ಯಾನ ಸಲಕರಣೆ, ಓಡುವ ಮನಸ್ಸು ಒಂದು ಚೌಕಟ್ಟಿನಲ್ಲಿ ದೃಶ್ಯ ನೋಡುವ ಪರಿಯಲ್ಲಿ ಆಂತರಿಕ ಶಿಸ್ತು ಜನಿಸುತ್ತದೆ. ಸಂಯಮ, ಅಧ್ಯಯನ ಶ್ರದ್ಧೆ, ಕ್ಷೇತ್ರಕಾರ್ಯದ ಉತ್ಸಾಹ ಜೊತೆಗೆ ಈ ನವೀನ್ ಒಳ್ಳೆಯ ಓದುಗರು. ಕಾದಂಬರಿ, ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ ವಾತಾವರಣ, ಹಿರಿಯರ ಮಾರ್ಗದರ್ಶನ, ಪ್ರೋತ್ಸಾಹದಲ್ಲಿ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಈ ಮೊದಲ ಹೆಜ್ಜೆಯಲ್ಲಿಯೇ ಕಾಣಿಸುತ್ತಿದೆ.
ಕನ್ನಡ ಪತ್ರಿಕೋದ್ಯಮ ನುಡಿಚಿತ್ರಗಳ ಸುವರ್ಣ ಯುಗ 1995ರ ಆಸುಪಾಸಿನಲ್ಲಿ ವೇಗ ಪಡೆದು 20 ವರ್ಷಗಳ ಪರ್ಯಂತ ವಿಜೃಂಭಿಸಿದೆ. ವಾರಪತ್ರಿಕೆ, ಪುರವಣಿಗಳ ಬಣ್ಣದ ಪುಟಗಳು ನಾಡಿನ ಮೂಲೆಮೂಲೆಯ ಬರಹಗಾರರನ್ನು ಬೆಳೆಸಿದೆ. ನಂತರದಲ್ಲಿ ಸಾಪ್ತಾಹಿಕ ಪುರವಣಿಗಳ ಸ್ವರೂಪ ಬದಲಾಗುತ್ತ ಹವ್ಯಾಸಿ ಬರಹಗಾರರಿಗೆ ಪ್ರೋತ್ಸಾಹ ಕಡಿಮೆಯಾಗುತ್ತ ಬಂದಿದೆ. ಮಾಧ್ಯಮ ಉದ್ಯಮ ನೀತಿಯಲ್ಲಿ ಸುತ್ತಾಡಿ ಬರೆಯುವ ಬರಹಗಾರರ ಲೇಖನಿ ಕೆಳಗಿಡುವ ಕಾಲ ಅಲ್ಲಿಗೆ ಒದಗಿತು. ಬಹುತೇಕ ಪತ್ರಿಕೋದ್ಯಮ ಕಾಲೇಜುಗಳು ಇನ್ನುಳಿದ ವಿಷಯಗಳಂತೆ ಪಾಠ ಹೇಳುವ ಕಾರ್ಯದಲ್ಲಿ ತೊಡಗಿ ಉತ್ಸಾಹಿ ಬರಹಗಾರರಿಗೆ ಅಗತ್ಯ ಪ್ರೋತ್ಸಾಹ ಸಿಗುತ್ತಿರುವುದು ಕಡಿಮೆಯೇ! ನಾವುಗಳು ಚಿತ್ರಲೇಖನ ಬರೆಯುವ ಕಾಲದಲ್ಲಿ ಒಂದೊಂದು ಲೇಖನಕ್ಕೆ 1500-2500 ರೂಪಾಯಿ ಗೌರವ ಹಣ ದೊರೆಯುತ್ತಿತ್ತು. ಹವ್ಯಾಸಿ ಪತ್ರಿಕೋದ್ಯಮ ನಂಬಿ ಬದುಕಿದ ಕಾಲವಿತ್ತು. ಈಗ ಗೌರವ ಹಣ ಬಹಳ ಕಡಿಮೆಯಾಗಿದೆ. ಪತ್ರಿಕೋದ್ಯಮ ಓದಿ ನಗರ ಸೇರುವ ಹುಡುಗರು ಕಳೆದು ಹೋಗುತ್ತಿದ್ದಾರೆ. ಕಾಡು ಹಳ್ಳಿಗಳಿಗೆ ಕೆಮರಾ ಹೊತ್ತು ಸುತ್ತುವ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ . ಅದು ಮಾಧ್ಯಮ ಪುಟದಲ್ಲಿ ಕಾಣುತ್ತಿದೆ. ಅದರಲ್ಲಿಯೂ ಪರಿಸರದ ವಿಷಯ ಬರೆಯುವವರು ಕಡಿಮೆಯಾಗಿರುವಾಗ ನವೀನ್ ಬರೆಯುತ್ತಿರುವುದು ನನಗಂತೂ ಬಹಳ ಖುಷಿ ತಂದಿದೆ.
ಉತ್ತಮ ವಿಷಯ ಆಯ್ಕೆ, ಶೈಲಿ, ಪದ ಬಳಕೆ, ಸಣ್ಣ ಸಣ್ಣ ಸಾಲುಗಳ ಸಹಜ ಅಭಿವ್ಯಕ್ತಿ ಸೊಗಸಾಗಿದೆ. ಸುಧಾರಣೆಗೆ ಅವಕಾಶವೂ ಇದೆ, ಇವರಿಗೆ ಸಾಮರ್ಥ್ಯವೂ ಇದೆಯೆಂಬುದು ಪುಸ್ತಕದ ಬರಹ ಓದಿದರೆ ಅರ್ಥವಾಗುತ್ತದೆ. ಈಗಾಗಲೇ ಇವರ ಬಹುತೇಕ ಬರಹ ಪ್ರಕಟಿತವಾಗಿವೆ. ಮೆಚ್ಚುವುದಕ್ಕೆ ಇವು ಪ್ರಕಟವಾಗಿವೆ ಎನ್ನುವುದಕ್ಕಿಂತ ಎಲ್ಲರ ಆಸಕ್ತಿ ಹುಟ್ಟಿಸುವ ಲೇಖನವಾಗಿದೆಯೆಂಬುದು ಹೆಮ್ಮೆಯ ಸಂಗತಿ. ಈಗಿನ್ನೂ ಓದುವ ಹುಡುಗ ಬರೆಯುತ್ತ ಬೆಳೆಯುತ್ತಿರುವುದು ಕಾಲೇಜಿನ ಹೆಮ್ಮೆ. ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ಸಂಘ ನವೀನರ ಲೇಖನ ಸಂಕಲನ ಪ್ರಕಟಣೆಗೆ ಮುಂದಾಗಿದ್ದು, ಇದು ಕನ್ನಡ ಸಂಘದ ವಿಶೇಷ ಹೆಜ್ಜೆಯಾಗಿದೆ. ಇಂಥ ಪ್ರೋತ್ಸಾಹ ಮತ್ತೆಲ್ಲಿಯೂ ಸಿಗಲಿಕ್ಕಿಲ್ಲ! ಇದಕ್ಕಾಗಿ ಕಾಲೇಜಿನ ಎಲ್ಲರಿಗೆ ಅಭಿನಂದನೆಗಳು. ಇದು ನವೀನರ ನಾಳಿನ ಬರಹ ಬದುಕನ್ನು ಇನ್ನಷ್ಟು ಸಶಕ್ತಗೊಳಿಸಲು ಪ್ರೇರಕವಾಗುತ್ತದೆ. ಹಿರಿಯ ಲೇಖಕ ಮಿತ್ರ ಪುತ್ತೂರಿನ ಎಚ್.ಜಿ. ಶ್ರೀಧರ್ ಇತ್ತೀಚೆಗೆ ಫೋನ್ ಮಾಡಿ ತಮ್ಮ ಕಾಲೇಜಿನ ಓರ್ವ ಬರಹಗಾರನ ಪುಸ್ತಕಕ್ಕೆ ಮುನ್ನುಡಿ ಬರೆಯಲು ಕೇಳಿದರು, ತಕ್ಷಣ ಒಪ್ಪಿದೆ. ಪುತ್ತೂರು ಕನ್ನಡ ಸಂಘದಲ್ಲಿ ಬೋಳಂತಕೋಡಿ ಈಶ್ವರ ಭಟ್ಟರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಅವರ ಜೀವಿತಾವಧಿಯ ಕೊನೆಯ ಪುಸ್ತಕವಾಗಿ ‘ಮೊನೋಕಲ್ಚರ್ ಮಹಾಯಾನ’ ನನ್ನದೇ ಕೃತಿ ಪ್ರಕಟಿಸಿತ್ತು. ಆ ಕಾಲದಿಂದ ನಮ್ಮ ಒಡನಾಟ. ಆತ್ಮೀಯರಾದ ಶ್ರೀಧರ ಹೇಳಿದರೆ ಇಲ್ಲ ಎನ್ನಲಾದೀತೇ! ಪುಸ್ತಕದ ಕರಡು ಪ್ರತಿ ಬಂದು ಕೃತಿಕಾರರ ಹೆಸರು ನೋಡುವಾಗ ಅನುಮಾನ, ಇದೇನು ಈ ನವೀನ್ ಇನ್ನೂ ಕಾಲೇಜು ವಿದ್ಯಾರ್ಥಿಯೇ? ನನ್ನ ಕಾದಂಬರಿ ಕುರಿತ ಬರಹಗಳೂ ಸೇರಿದಂತೆ ಆಗಾಗ ಇವರ ಹಲವು ಲೇಖನ ಓದುತ್ತಿರುವ ನನಗೆ ಆ ಕ್ಷಣ ಹುಡುಗ ಅಚ್ಚರಿ ಹುಟ್ಟಿಸಿದ್ದಾನೆ. ಕೊನೆಗೆ ಮಾತಾಡಿದೆ.
ಕಾಡಿನಲ್ಲಿ ಆಹಾರಕ್ಕಾಗಿ ಜೋರಾಗಿ ಕಾದಾಡಿ ಕೊನೆಗೆ ಎಲ್ಲ ಮರೆತು ಅರೆಕ್ಷಣದಲ್ಲಿ ಒಂದಾಗುವ ಪಕ್ಷಿ ಸಂಕುಲದ ಘಟನೆ ಗಮನಿಸಿದ ನವೀನ್ ಕೊನೆಗೆ ದ್ವೇಷದ ಕಾಳ್ಗಿಚ್ಚು ಹಚ್ಚುವ ಈ ಮನುಷ್ಯನೆಲ್ಲಿ? ಎಂದು ಮಾರ್ಮಿಕವಾಗಿ ಲೇಖನವೊಂದರಲ್ಲಿ ಪ್ರಶ್ನಿಸುತ್ತಾರೆ. ಪರಿಸರ ವಿಸ್ಮಯ ಗಮನಿಸಿ ಬರೆದ ಸಾಲು ಓದಿದ ಪ್ರತಿಯೊಬ್ಬರಿಗೂ ಕಾಡುತ್ತದೆ. ಅಜ್ಜಿಮನೆ, ಕೆಮರಾ, ಕಾಡು, ಹಕ್ಕಿ, ಬನದ ಹುಡುಗನ ನಿಸರ್ಗ ಸಂರಕ್ಷಣೆಯ ಅರಿವಿನ ಇನ್ನಷ್ಟು ಬರಹ ಬರಲೆಂದು ಹಾರೈಸುವೆ. ಪತ್ರಿಕೋದ್ಯಮ ಓದುವ ಮಕ್ಕಳಿಗೆ, ಪರಿಸರ ಆಸಕ್ತರಿಗೆ ಸುತ್ತಲಿನ ನಿಸರ್ಗ ನೋಡುವ ಕಣ್ಣು ನೀಡುವ ಕೃತಿ ಇದಾಗಿದೆ.
- ಶಿವಾನಂದ ಕಳವೆ
"ಈ ಪುಸ್ತಕ ನನಗೆ ಓದಿನ ಸುಖವನ್ನಷ್ಟೇ ಕೊಡಲಿಲ್ಲ. ಬದಲಾಗಿ ಅವಶ್ಯವಾಗಿ ತಿಳಿಯಲೇ ಬೇಕಾದ ಸಂಗತಿಗಳನ್ನು ತಿಳಿಸಿದೆ, ...
"ಹೆಣೆದಿದ್ದಾರೆ. ಮೂರು ತಲೆಮಾರಿನ ಜನರ ಆಲೋಚನೆಗಳು, ಚಿಂತನೆಗಳು, ಮನಸ್ಥಿತಿ, ಕಾರ್ಯವೈಖರಿಗಳನ್ನು ತೆರೆದಿಡುತ್ತಾ ...
"ಬರಹಗಾರ ತಾನು ಎದ್ದು ಕಾಣೋದಕ್ಕಿಂತ ಹಿಂದಿನವರು ಸೃಷ್ಟಿಸಿದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಬರೆಯುವುದೇ ಮುಖ...
©2025 Book Brahma Private Limited.