“ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವವರು ಈ ಪುಸ್ತಕವನ್ನು ಮಾರ್ಗದರ್ಶಿಯಾಗಿ ಇಟ್ಟುಕೊಂಡು ಹೋದರೆ ಅಂಥವರ ಪ್ರವಾಸವೂ ಸಾರ್ಥಕ ಮತ್ತು ಪ್ರವಾಸಕ್ಕೆ ತೆತ್ತ ಹಣವೂ ಸಾರ್ಥಕವಾಗುತ್ತದೆ,” ಎನ್ನುತ್ತಾರೆ ಉದಯಕುಮಾರ ಹಬ್ಬು. ಅವರು ಎಲ್.ಎಸ್. ಶಾಸ್ತ್ರಿ ಅವರ ‘ನಗೆ ಮಲ್ಲಿಗೆಯರ ನಾಡಿನಲ್ಲಿ’ ಕೃತಿ ಕುರಿತು ಬರೆದ ವಿಮರ್ಶೆ.
ಖ್ಯಾತ ಪತ್ರಕರ್ತರೂ, ಸಾಹಿತ್ಯದ ಬಹುತೇಕ ಎಲ್ಲ ಬಗೆಯ ಸಾಹಿತ್ಯ ಕೃತಿಗಳನ್ನು ರಚಿಸಿದರಷ್ಟೆ ಅಲ್ಲದೆ ಗಮಕ ಕಲೆಯಲ್ಲೂ, ಯಕ್ಷಗಾನ ಕ್ಷೇತ್ರದಲ್ಲೂ ವಿದ್ವಾಂಸರೂ ಆದ, ಅಷ್ಟೆ ಅಲ್ಲ ಬೆಳಗಾವಿಯಲ್ಲಿ ನೆಲೆ ನಿಂತು ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿ ಅನೇಕ ಕನ್ನಡ ಶ್ರೇಷ್ಟ ಸಾಹಿತಿಗಳ ಒಡನಾಟಗಳನ್ನು ಹೊಂದಿದ ಮಾನ್ಯ ಎಲ್ ಎಸ್ ಶಾಸ್ತ್ರಿಯವರು ಅನೇಕ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸಿ ಅವರ ಸಾಹಿತ್ಯ ಕೃತಿಗಳನ್ನು ಬೆಳಕಿಗೆ ತರಲು ಊರುಗೋಲಾಗಿದ್ದಾರೆ.
ಈ ಕೃತಿ "ನಗೆ ಮಲ್ಲಿಗೆಯರ ನಾಡಿನಲ್ಲಿ" ಅವರ ಥೈಲ್ಯಾಂಡ್ ಪ್ರವಾಸದ ಅನುಭವ ಕಥನವಾಗಿದೆ ಅಷ್ಟು ಮಾತ್ರವಲ್ಲ, ಥೈಲ್ಯಾಂಡ್ ಬಗ್ಗೆ ಸಮಗ್ರ ಮಾಹಿತಿ ನೀಡುವ ಅಧ್ಯಯನ ಗ್ರಂಥ ವಾಗಿದೆ. ಇಂಥದೊಂದು ಆಕರ ಗ್ರಂಥದಂತಹ ಕೃತಿಯನ್ನು ರಚಿಸಲು ಕೇವಲ ಟೂರ್ ಪ್ಯಾಕೇಜಿನ ಮೇಲೆ ಪ್ರವಾಸಕ್ಕೆ ಹೋಗಿಬಂದ ಪ್ರವಾಸಿಗಳಿಂದ ಅಸಾಧ್ಯವಾದ ಮಾತು.
ಯಾವುದೇ ದೇಶದ ಬಗ್ಗೆ ಸಮಗ್ರವಾಗಿ ಬರೆಯುವಾಗ ಅಲ್ಲಿ ಕನಿಷ್ಟ ಒಂದೆರಡು ತಿಂಗಳು ಇರಬೇಕಾಗುತ್ತದೆ. ಅಂತವರಿಗೆ ಮಾತ್ರ ಇಂತಹ ಕೃತಿಯನ್ನು ರಚಿಸಲು ಸಾಧ್ಯ.
ಥೈಲ್ಯಾಂಡ್ ಪ್ರವಾಸಕ್ಕೆ ಹೋಗುವವರು ಈ ಪುಸ್ತಕವನ್ನು ಮಾರ್ಗದರ್ಶಿಯಾಗಿ ಇಟ್ಟುಕೊಂಡು ಹೋದರೆ ಅಂಥವರ ಪ್ರವಾಸವೂ ಸಾರ್ಥಕ ಮತ್ತು ಪ್ರವಾಸಕ್ಕೆ ತೆತ್ತ ಹಣವೂ ಸಾರ್ಥಕವಾಗುತ್ತದೆ.
ಶಾಸ್ತ್ರಿಗಳು ಥೈಲ್ಯಾಂಡ್ ಕುರಿತು, ಅಲ್ಲಿನ ಜನರ ಸದ್ಗುಣಗಳ ಬಗ್ಗೆ, ಅಲ್ಲಿನ ಸೌಕರ್ಯಗಳ ಕುರಿತು, ಪ್ರವಾಸಿಗರನ್ನು ಸಂತೋಷಪಡಿಸಲೆಂದೇ ಸರಕಾರ ಮತ್ತು ಪ್ರಜೆಗಳು ಅಹರ್ನಿಶಿ ಪ್ರಾಮಾಣಿಕವಾಗಿ ಪ್ರೀತಿಯಿಂದ ದುಡಿಯುವುದರ ಬಗ್ಗೆ, ಅಲ್ಲಿನ ಪ್ರವಾಸಿ ತಾಣಗಳ ಸ್ವಚ್ಛ, ರಾಜಕೀಯ ಶುದ್ಧ ನಡೆಯ ಬಗ್ಗೆ ಮುಕ್ತಕಂಠದಿಂದ ಪ್ರಶಂಸಿಸುತ್ತಾರೆ. ಅಂತೆಯೇ ನಾವು ಹಾಕಿದ ಹಣದ ಬಗ್ಗೆ ನಮಗೆ ಯಾವ ಪಶ್ವಾತ್ತಾಪವೂ ಆಗದು. ಇಲ್ಲಿನ ಜನರು ಜಗಳಗಂಟರಲ್ಲ. ಸಿಟ್ಟೆಂಬುದು ಗಾವುದ ದೂರ. ದೇವರು ಧರ್ಮ ಮತ್ತು ಸನ್ಯಾಸಿಗಳಾದ ಬೌದ್ಧ ಭಿಕ್ಷುಗಳೆಂದರೆ ಅಪಾರ ಗೌರವ ಇರುವ ಈ ನಾಡು ಒಂದು ಬೌದ್ಧ ದೇಶ ಎನ್ನುತ್ತ ಅವರ ಪರಧರ್ಮ ಸಹಿಷ್ಣುತೆಯನ್ನು ಕೊಂಡಾಡುತ್ತಾರೆ. ಹೀಗೆ ಥೈಲ್ಯಾಂಡ್ ನ ಗುಣಗಳನ್ನು ವರ್ಣಿಸುವಾಗ ನಮ್ಮದೇಶ ಭಾರತದ ದೌರ್ಬಲ್ಯಗಳನ್ನೂ, ಜಗಳಗಂಟತನವನ್ನೂ, ಅಸ್ವಚ್ಛತೆಯನ್ನೂ, ಭ್ರಷ್ಟಾಚಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ನಮ್ಮ ರಾಜಕಾರಣಿಗಳು ಥೈಲ್ಯಾಂಡ್ ಗೆ ಭೇಟಿ ನೀಡಿ ಕೋಟಿಗಟ್ಟಲೆ ಹಣ ಉಡಾಯಿಸಿ ಮಜಾ ಮಾಡಿ ಬರುತ್ತಾರೆ. ಈ ದೇಶದ ಅಭಿವೃದ್ಧಿಯ ಪ್ರಗತಿಗೆ ಕಾರಣವಾದ ಇಲ್ಲಿನ ಯಾವ ಪಾಠವನ್ನೂ ಕಲಿಯದೆ ಮರಳುತ್ತಾರೆ. ಥೈಲ್ಯಾಂಡ್ ಪ್ರಪಂಚದ ಎಲ್ಲರೂ ಮಾದರಿಯಾಗಿ ಸ್ವೀಕರಿಸಿ ಗೌರವಿಸಬೇಕಾದ ದೇಶ ಎನ್ನುತ್ತಾರೆ.
ಈ ದೇಶದ ಬಗ್ಗೆ ಇಷ್ಟೊಂದು ಆಳವಾಗಿ ವಿಸ್ತೃತವಾಗಿ ಬರೆಯಲು ಹೇಗೆ ಸಾಧ್ಯವಾಯಿತು ಶಾಸ್ತ್ರಿಗಳಿಗೆ? ಥೈಲ್ಯಾಂಡ್ ನ ಕನ್ನಡ ಬಳಗವು ಶಾಸ್ತ್ರಿಗಳಿಗೆ ಈ ದೇಶಕ್ಕೆ ನಲವತ್ತು ದಿನಗಳವರೆಗೆ ಆತಿಥ್ಯ ನೀಡಿತು. ಥೈಲ್ಯಾಂಡ್ ಭೂಲೋಕದ ಸ್ವರ್ಗ ಎಂದೆಜೆಸುವಂತೆ ಆ ದೇಶವನ್ನು ಬಣ್ಣಿಸಿದ್ದಾರೆ. ಸಂದರ್ಭ ಸಿಕ್ಕಾಗಲೆಲ್ಲ ನಮ್ಮ ದೇಶವನ್ನು ಕುಟುಕಿದ್ದಾರೆ.
ಈ ದೇಶದ ಎಲ್ಲ ಕ್ಷೇತ್ರಗಳ ಕುರಿತು ಶಾಸ್ತ್ರಿಗಳು ಸವಿವರವಾಗಿ ಉದಾಹರಣೆಗಳ ಸಹಿತ ತುಂಬು ಮೆಚ್ಚುಗೆಯಿಂದ ಬರೆದಿದ್ದಾರೆ. ಮುನ್ನುಡಿಕಾರ ಮಾನ್ಯ ಪಂಚಾಕ್ಷರಿ ಹಿರೇಮಠ ಬರೆದ ಈ ಮಾತುಗಳು ಅಕ್ಷರಶಃ ಸತ್ಯ "ಮಿತ್ರರೆ, ಈ ಕೃತಿಯ ಒಂದು ಸಾಲನ್ನೂ ಬಿಡದೆ ನೀವು ಓದಬೇಕು. ಭಾರತೀಯ ಸಂಸ್ಕೃತಿ, ಒಂದು ಕಾಲದಲ್ಲಿತ್ತೆಂದು ಜಂಬ ಕೊಚ್ಚಿಕೊಳ್ಳುವ ಯಾವ ಸಂಸ್ಕೃತಿಯನ್ನು ನಾವಿಂದು ಭಾರತದಲ್ಲಿ ನೋಡಲಾಗುವುದಿಲ್ಲವೋ ಆ ಅಮೋಘವಾದ ಸಂಸ್ಕೃತಿ ಆಚಾರ ವಿಚಾರಗಳನ್ನು ಥಾಯಿ ಜನಾಂಗದಲ್ಲಿ, ಥಾಯಿ ದೇಶದ ಹಳ್ಳಿ ಹಳ್ಳಿಯಲ್ಲಿ ನಾವು ಕಾಣುತ್ತಿದ್ದೇವೆಂಬುದನ್ನುಈ ಕೃತಿಯ ಓದಿನಿಂದ ನೀವು ಕಾಣುತ್ತೀರಿ ಇಂಥದರೊಂದಿಗೆ ಇಂದಿನ ಭಾರತ, ಭಾರತದ ಹಳ್ಳಿಗಳನ್ನು ಹೋಲಿಸಿ ನೋಡಿದ್ದಾರೆ ಲೇಖಕರಾದ ಶಾಸ್ತ್ರಿಗಳು ಆ ಸಮಯದಲ್ಲೆಲ್ಲಾ ಅವರ ಹೃದಯ ಭಾರತವನ್ನೂ, ತನ್ನ ತಾಯ್ನಾಡನ್ನೂ ತನಗೆ ಜನ್ಮ ನೀಡಿದ ಪುಟ್ಟ ಗ್ರಾಮವನ್ನೂ ನೆನಪಿಸಿಕೊಂಡು ಅಳುವುದನ್ನು ನಾವು ಕಾಣುತ್ತೇವೆ.' ಮುನ್ನುಡಿಕಾರರ ಈ ಮಾತು ಪ್ರತಿ ಶತ ಸತ್ಯ.
ಥೈಲ್ಯಾಂಡ್ ಒಂದು ಮಿನಿ ಭಾರತ ಇದ್ದಂತೆ. ಇಲ್ಲಿ ರಾಮಾಯಣ ಕಾವ್ಯವು ಆದರ್ಶವಾಗಿದೆ ರಾಮನ ಪಿತೃಭಕ್ತಿ, ಭರತನ ಭಾತೃಪ್ರೇಮ, ಹನುನಂತನ ರಾಮನ ಭಕ್ತಿ ಇವರಿಗೆ ಶ್ರೇಷ್ಠ ಮೌಲ್ಯವಾಗಿವೆ. ರಾಮಕಿನ್ ಇದು ಥೈಲ್ಯಾಂಡ್ ನ ರಾಷ್ಟ್ರೀಯ ಕಾವ್ಯವಾಗಿದೆ ಇವರು ದಾಯಾದಿ ಮತ್ಸರದ, ಕಾನೀನ ಮಾತೆಯರ ದುಷ್ಟ ಜನರಿಂದಲೆ ತುಂಬಿರುವ ಮಹಾಭಾರತವನ್ನು ತಿರಸ್ಕರಿಸಿದ್ದಾರೆ.
ಥೈಲ್ಯಾಂಡ್ ದೇಶದ ರಾಜಧಾನಿಯ ವಿಮಾನ ನಿಲ್ದಾಣ ಸುವರ್ಣ ಭೂಮಿ, ಸಭ್ಯರ ನಗರ, ಸರಕಾರಿ ಅಡಳಿತ, ಥೈಲ್ಯಾಂಡ್ ಭೌಗೋಲಿಕ ಸ್ವರೂಪ, ಇತಿಹಾಸ ಹಾಗೂ ರಾಜಮನೆತನ, ಪರಂಪರಾಗತ ಕಲೆಗಳು, ಧರ್ಮ ಜಾತಿ, ಜನಾಂಗಗಳು, ಥಾಯಿ ಜೀವನ ಪದ್ಧತಿ ರೂಢಿ ರಿವಾಜುಗಳು, ಥೈ ಗ್ರಾಮ ಜೀವನ ಚಿತ್ರ ಥೈ ಬುಡಕಟ್ಟು ಜನಾಂಗಗಳು, ಥೈ ಹಬ್ಬಗಳು,ಸ್ವಾರಸ್ಕರ ಆಚರಣೆಗಳು ಸಂಸದೀಯ ವ್ಯವಸ್ಥೆ, ರಾಷ್ಟ್ರೀಯ ಹೆಗ್ಗುರುತುಗಳು,ಥಾಯ್ ಗ್ರಂಥಾಲಯಗಳು, ಥೈ ಕೃಷಿಕ್ಷೇತ್ರ, ಉದ್ದಿಮೆ ರಫ್ತು ಕ್ಷೇತ್ರ, ಥಾಯ್ ಮಹಿಳೆಯರ ಸ್ತಾನಮಾನ, ಥಾಯ್ ವೀರನಾರಿಯರು, ಥಾಯ್ ವೇಶ್ಯೆ ಜಗತ್ತು, ಅಪರಾಧ ಲೋಕ, ಥೈ ಮಸಾಜ್, ಒಂದು ಹಳ್ಳಿ ಒಂದು ಉತ್ಪನ್ನ ಥಾಯ್ ಮಾದರಿಯ ಯೋಜನೆ, ಥಾಯ್ ರಾಷ್ಟ್ರೀಯ ಕವಿ, ಕಲಾವಿದರು, ಸಿಯಾಂ ನಿರ್ಮಿತ ಮಾಯಾಲೋಕದಲ್ಲಿ, ಮೃತ್ಯು ರೈಲಿನಕಥೆ, ಥೈಲ್ಯಾಂಡಿನಲ್ಲಿ ಭಾರತೀಯ ಸಂಸ್ಥೆಗಳು, ಪ್ರವಾಸಿ ತಾಣಗಳು, ಕಾಂಚನಪುರಿಯಲ್ಲೊಂದು ದಿನ, ಸೀ ಬೀಚುಗಳು, ಬ್ಯಾಂಕಾಕ್ ಹೆಸರಿನ ಸ್ವಾರಸ್ಯ, ಮುರಿದ ಕಠಾರಿ ವೀರ. ಒಂದೆ ಎರಡೆ? ಅಲ್ಲಿನ ಎಲ್ಲ ಪ್ರವಾಸಿ ತಾಣಗಳ ಬಗ್ಗೆ ರಾಷ್ಟ್ರೀಯ ಜೀವನದ ವಿಧಾನಗಳನ್ನೆಲ್ಲಾ ಸೂಕ್ಷ್ಮ ದೃಷ್ಟಿಯಿಂದ ನೋಡಿ ಜಾಲಾಡಿಬಿಟ್ಟಿದ್ದಾರೆ ಶಾಸ್ತ್ರಿಗಳು. ದೇಶದ ಒಳಿತುಗಳ ಬಗ್ಗೆ ಮನದುಂಬಿ ಹೊಗಳಿದಂತೆ ಅಲ್ಲಿನವಬದುಕಿನ ಕಪ್ಪು ಮುಖದ ಬಗ್ಗೆಯೂ ಬರೆಯುತ್ತ ಅದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ.
ವೇಶ್ಯಾವಾಟಿಕೆ ಯಾಕೆ ಅಲ್ಲಿ ಹುಟ್ಟಿ ಬೆಳೆಯಿತು, ಎಂಬುದಕ್ಕೆ ಸಕಾರಣಗಳನ್ನೂ ನೀಡುತ್ತಾರೆ. ರಾಮಾಯಣವನ್ನು ಈ ದೇಶದ ಕಲಾವಿದರು ನಾಟಕವನ್ನಾಗಿ ಪ್ರದರ್ಶಿಸುತ್ತಾರೆ.
ಈ ಕೃತಿಯನ್ನು ಓದಿದವರು ಒಮ್ಮೆಯಾದರೂ ಥೈಲ್ಯಾಂಡ್ ಪ್ರವಾಸವನ್ನು ಮಾಡದೆ ಬಿಡರು.
ನಾನೂ ಅಲ್ಲಿಗೆ ಎರಡು ದಿನಗಳ ಪ್ರವಾಸಿಯಾಗಿ ಹೋಗಿದ್ದೆ ಆದರೆ ನಾವು ಕನಿಷ್ಟ ಒಂದು ತಿಂಗಳು ಅಲ್ಲಿರಬೇಕು. ಥೈಲ್ಯಾಂಡ್ ಅಷ್ಟು ಅಭಿವೃದ್ಧಿಶೀಲ ರಾಷ್ಟ್ರವಾಗಬೇಕಿದ್ದರೆ ಆ ದೇಶದ ಜನರು ಬೌದ್ಧಧರ್ಮವನ್ನು ಆಚರಿಸುತ್ತಿದ್ದುದೇ ಕಾರಣ ಎಂದು ನನಗೆ ಅನಿಸುತ್ತದೆ. ಬೌದ್ಧ ರಾಜ್ಯ ನಮ್ಮಲ್ಲೂ ಬರಲಿ.
- ಉದಯಕುಮಾರ ಹಬ್ಬು
"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...
"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದ...
"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...
©2024 Book Brahma Private Limited.