"ಬದುಕಿನ ಅನುಭವ, ನನ್ನ ನಡವಳಿಕೆ, ನಾನೇನು ಅಂದುಕೊಂಡಿದ್ದೆ, ನಿಜಕ್ಕೂ ಏನು ಆಗಿತ್ತು ಇತ್ಯಾದಿಗಳ ಬಗ್ಗೆ. ಇದಕ್ಕೆಲ್ಲ ಭಾಷೆ ಒಂದು ದೊಡ್ಡ ಅನುಕೂಲ ಎಂದುಕೊಳ್ಳುತ್ತೇವೆ. ಆದರೆ ಇದಕ್ಕೆಲ್ಲ ಭಾಷೆ ಒಂದು ದೊಡ್ಡ ತೊಡಕು ಎನ್ನುವುದು ಅರಿವಾಗಲು ಅರವತ್ತರ ಸಮೀಪ ವಯಸ್ಸಾಗಬೇಕಾಯಿತು," ಎನ್ನುತ್ತಾರೆ ನರೇಂದ್ರ ಪೈ. ಅವರು ತಮ್ಮ ‘ಕಾವ್ಯ ಸಂಭವ’ ಕೃತಿಗೆ ಬರೆದ ಪ್ರಸ್ತಾವನೆ.
ಸಂವೇದನೆ, ಭಾವ ಒಂದು ಭಾಷೆಯಲ್ಲಿ ಆಕಾರ ತಳೆಯುವ ಪ್ರಕ್ರಿಯೆಯನ್ನು ವಿವರಿಸುವುದು ಕಷ್ಟ. ಆದರೆ ಅದು ಅರ್ಥವಾಗದೆ ಬರೆಯುವುದು ಕೂಡ ತಪ್ಪು. ಹಾಗೆಯೇ ಯಾವುದೇ ಒಂದು ಭಾಷೆಯಲ್ಲಿ ಹೊಸ ಸಾಧ್ಯತೆಗಳು, ಒಳನೋಟಗಳು ಮತ್ತು ಪ್ರಭಾವ-ಪರಿಣಾಮಗಳು ಸಂಭವಿಸುವುದು ಕೂಡ ಒಂದು ವಿವರಿಸಲಾಗದ ವಿದ್ಯಮಾನವಾಗಿಯೇ ಉಳಿದಿದೆ. ನಾವು ಪರೋಕ್ಷವಾಗಿ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿದೆ. ಮೌನವನ್ನು, ಸದ್ದಿನ ಧ್ವನಿಶಕ್ತಿಯನ್ನು ಅರಿಯುವುದು ಸಾಧ್ಯವಿದೆ. ಆ ದಿಕ್ಕಿನಲ್ಲಿ ಇರಿಸಿದ ಒಂದು ಹೆಜ್ಜೆ ಇದಾಗಿದೆ.
ನಮ್ಮ ಹೆಚ್ಚಿನ ಬರಹಗಾರರು ಆಗಾಗ "ನನ್ನನ್ನು ನಾನು ಕಂಡುಕೊಳ್ಳುವುದು" ಸಾಹಿತ್ಯದ ಒಂದಾನೊಂದು ಉದ್ದೇಶ ಎನ್ನುವ ಮಾತನ್ನು ಆಡುವುದಿದೆ. ನನಗೂ ಕುತೂಹಲವಿದ್ದಿದ್ದು ಮನಸ್ಸು, ಮನುಷ್ಯ ಮತ್ತು ಬದುಕಿನ ಕುರಿತು. ಅದಕ್ಕಾಗಿ ನಾನು ಅಧ್ಯಾತ್ಮ, ಹ್ಯಾಂಡ್ ರೈಟಿಂಗ್ ಅನಲಿಸಿಸ್, ಬಾಡಿ ಲ್ಯಾಂಗ್ವೇಜ್, ಜ್ಯೋತಿಷ್ಯ ಶಾಸ್ತ್ರ - ಹೀಗೆ ಏನೇನು ಸಿಗುವುದೋ ಅದನ್ನೆಲ್ಲ ಓದುತ್ತಿದ್ದೆ. ಕತೆ, ಕಾದಂಬರಿ ಅಂಥ ಹತ್ತು ಹಲವು ಮಾರ್ಗಗಳಲ್ಲಿ ಒಂದಾಗಿತ್ತೇ ಹೊರತು ಸಾಹಿತ್ಯವೇ ನನ್ನ ಓದಿನ ಉದ್ದೇಶ ಆಗಿರಲಿಲ್ಲ. ನಾನು ದಿನಚರಿ ಬರೆಯುತ್ತಿದ್ದೆ. ಪ್ರತಿದಿನ ಎಂದಲ್ಲ, ಪ್ರತಿದಿನ ಆ ದಿನದ ಪುಟದಷ್ಟೇ ಅಂತಲೂ ಅಲ್ಲ. ಬದುಕಿನ ಅನುಭವ, ನನ್ನ ನಡವಳಿಕೆ, ನಾನೇನು ಅಂದುಕೊಂಡಿದ್ದೆ, ನಿಜಕ್ಕೂ ಏನು ಆಗಿತ್ತು ಇತ್ಯಾದಿಗಳ ಬಗ್ಗೆ. ಇದಕ್ಕೆಲ್ಲ ಭಾಷೆ ಒಂದು ದೊಡ್ಡ ಅನುಕೂಲ ಎಂದುಕೊಳ್ಳುತ್ತೇವೆ. ಆದರೆ ಇದಕ್ಕೆಲ್ಲ ಭಾಷೆ ಒಂದು ದೊಡ್ಡ ತೊಡಕು ಎನ್ನುವುದು ಅರಿವಾಗಲು ಅರವತ್ತರ ಸಮೀಪ ವಯಸ್ಸಾಗಬೇಕಾಯಿತು.
ಭಾಷೆಯಲ್ಲಿ ನಮಗೆ ನಾವು ತೊಡಿಸಿಕೊಂಡ ಭಂಡ ವೇಷ, ಸುಬಗತನದ ಹಿಂದೆ ಕಾಣದ ಕ್ರೌರ್ಯ, ಭ್ರಷ್ಟತೆ, ಭಂಡತನ, ಸುಳ್ಳು ಎಲ್ಲ ಇರುವುದು ಮುಂದೆಂದೂ ‘ನಿಜ’ವಾಗದ ಪರಿಯಲ್ಲಿ ಮುಚ್ಚಿ ಹೋಗುತ್ತದೆ. ಸತ್ಯಕ್ಕೆ ತೊಡಿಸುವ ಭಾಷೆಯ ಬಟ್ಟೆಯ ಬಗ್ಗೆ ಎಚ್ಚರ ಅತ್ಯಂತ ಅಗತ್ಯ. ಮನಸ್ಸಿಗೆ ಬಂದಿದ್ದು ಅಕ್ಷರದಲ್ಲಿ ಬರುವ ಹೊತ್ತಿಗೆ ವೇಷ ತೊಟ್ಟುಬಿಡುವ ಸೋಜಿಗವೊಂದು ಭಾಷೆಯ ರೋಚಕತೆಯೋ, ಮನಸ್ಸಿನ ರೋಚಕತೆಯೋ ತಿಳಿಯದ ರಹಸ್ಯ. ಮನಸ್ಸಿನ ಭಿತ್ತಿಯಲ್ಲಿ ಮೂಡಿದ ಯಾರದೋ ಮುಖ, ಮನಸ್ಸಿನಲ್ಲಿ ನೆಲೆಯಾದ ಯಾವುದೋ ಮನೆಯ ಯಾವುದೋ ನಿರ್ದಿಷ್ಟ ಸ್ಥಳದಲ್ಲಿ, ವಿಶಿಷ್ಟ ನೆರಳು ಬೆಳಕಿನ ನಿರ್ದಿಷ್ಟ ಹೊತ್ತಲ್ಲಿ ಕ್ಲಿಕ್ಕಿಸಿದ ಒಂದು ಚಿತ್ರ ಕೊಡುವ ತತ್‌ಕ್ಷಣದ ಅನುಭೂತಿಯನ್ನು ಬರೆಯಲು ಪುಟಗಟ್ಟಲೆ ಹೇಳಬೇಕಾದೀತು. ಆದರೆ ಮನಸ್ಸಿಗೆ ಅದು ಒಂದು ಕ್ಷಣದ ವಿದ್ಯಮಾನ. ಎಲ್ಲ ಹೇಳಿಯೂ ಅದು ಮನಸ್ಸಿನಲ್ಲಿ ಆ ಕ್ಷಣದಲ್ಲಿ ಮೂಡಿಸಿದ ಭಾವ ಬರಹದಲ್ಲಿ ಬರದೇನೆ ಹೋಗಬಹುದು. ನಮಗೇ ಗೊತ್ತಿಲ್ಲದ ಇನ್ನೇನೋ ಅಲ್ಲಿ ಬಂದು ಹಾಜರಿ ಹಾಕಬಹುದು. ಕೆಲವೊಮ್ಮೆ ಯಾವುದೋ ಒಂದು ಶಬ್ದ, ಒಂದು ಚಿತ್ರ, ರೂಪಕ ಯಥಾವತ್ ಆ ಅನುಭೂತಿಯನ್ನು ಕಟ್ಟಿಕೊಡಲೂ ಬಹುದು. ಯಾವುದು ನಿಜ ಮತ್ತು ಯಾವುದು ಸುಳ್ಳು ಎನ್ನುವುದಕ್ಕಿಂತ ಯಾವುದು ಚೆನ್ನಾಗಿದೆ ಎನ್ನುವುದು ಕೊನೆಗೂ ಒಬ್ಬ ಸಾಹಿತಿಗೆ ಮುಖ್ಯ. ಒಂದು ಬರಹದ ಜೀವ ಇರುವುದು ಸತ್ಯಕ್ಕೆ ನಿಷ್ಠನಾಗಿರುವುದರಲ್ಲಿ ಅಲ್ಲ, ಅನುಭವವನ್ನು ಮರುರೂಪಿಸುವ ಶಕ್ತಿಯಲ್ಲಿ. ಅನುವಾದ ಸೋಲುವುದು, ಕವಿತೆಯೊಂದು ಸೋಲುವುದು, ಕತೆಯೊಂದು ಮುಕ್ಕಾಗುವುದು ಇಲ್ಲಿ.
ಎಷ್ಟೋ ಮಂದಿ ಲೇಖಕರು ‘ಬರೆಯಲು ಹೊರಟಿದ್ದೇ ಒಂದು, ಬರೆದಿದ್ದೇ ಒಂದು’ ಎಂಬ ಅನುಭವದ ಕುರಿತು ಕೂಡ ಅಲ್ಲಲ್ಲಿ ಮಾತನಾಡಿದ್ದಾರೆ. ಯೋಚಿಸಿದ್ದನ್ನು ಬರೆಯುವ ಪ್ರಕ್ರಿಯೆಯ ಕಂದಕಗಳನ್ನು ಬಿಡಿ, ಬರೆಯುತ್ತಾ ಯೋಚಿಸುವ ಪ್ರಕ್ರಿಯೆಯಲ್ಲಿ ಕೂಡ ಯೋಚನೆಗೂ ಬರವಣಿಗೆಗೂ ಒಂದು ಕಂದಕವಿದೆ. ಅಲ್ಲಿ ಕಳೆದು ಹೋಗುವುದನ್ನು ಕಾಣಲು ಬೇಕಿರುವುದು ಭಾಷೆಯಲ್ಲ, ಬಹುಶಃ ಮೌನ. ಬಹುಶಃ ಎಂದಿರುವುದೇಕೆಂದರೆ, ಈ ಮೌನ ಕೂಡ ಮೇಲ್ನೋಟಕ್ಕೆ ಕಾಣುವ ಮೌನವಲ್ಲ ಮತ್ತೆ. ಈ ಕಂದಕಗಳು ಅನಪೇಕ್ಷಿತವೆಂದೋ, ಅಗತ್ಯವೆಂದೋ ತೀರ್ಮಾನಿಸುವುದು ಬೇರೆಯೇ ಪ್ರಶ್ನೆ. ಇದರ ಅರಿವು ಮಾತ್ರ ಒಬ್ಬ ಬರಹಗಾರನನ್ನು ಅಂಥ ತೀರ್ಮಾನಕ್ಕೆ ಬರುವಲ್ಲಿ ಪೊರೆಯಬಲ್ಲುದು. ಅರಿವೂ ಇಲ್ಲದ, ತೀರ್ಮಾನಗಳೂ ಇಲ್ಲದ, ಅಸೂಕ್ಷ್ಮ ಬರಹಗಾರ ಒಂದು ಭಾಷೆಗೆ ದೊಡ್ಡ ಹೊರೆ.
ಈ ಪುಸ್ತಕದಲ್ಲಿ ನನ್ನದು ಎನ್ನುವುದೇನೂ ಇಲ್ಲ. ಎಲ್ಲವೂ ಪೂರ್ವಸೂರಿಗಳ ಮಾತುಗಳೇ. ಅವನ್ನೆಲ್ಲ ಒಂದೆಡೆ ತರುವುದು ಸಾಧ್ಯವಾಗಿದ್ದು ಕೂಡ ವಿಚಿತ್ರ ರೀತಿಯಲ್ಲಿ. ಇಲ್ಲಿ ನಮಗೆ ಸಿಗುವ ನಯರ್ ಮಸೂದ್, ಜೆನ್ನಿ ಎರ್ಪನ್ಬೆಕ್, ಎಲೆನಾ ಫರಾಂಟೆ, ಆನ್ ಕರ್ಸನ್, ಬ್ರಿಯಾನ್ ದಿಲ್ಲಾನ್, ಬೆನ್ ಲಾರ್ನರ್, ವಿಜಯಕುಮಾರ, ಅರುಣ್ ಕೋಲಟ್ಕರ್, ಭಾನು ಕಪಿಲ್, ವಿವೇಕ್ ನಾರಾಯಣನ್, ಶಂಖ ಘೋಷ್, ಆದಿಲ್ ಜುಸ್ವಾಲ್ ಜೊತೆಗೆ ಕನ್ನಡಕ್ಕೆ ಎಚ್ಚೆಸ್ಸಾರ್ ಅವರಿಂದ ಬಂದ ರಿಲ್ಕ, ಎಸ್ ದಿವಾಕರ್, ಜ ನಾ ತೇಜಶ್ರೀ, ಸಿದ್ಧು ಸತ್ಯಣ್ಣನವರ ಎಲ್ಲರೂ ಭಾಷೆಯ ಬಳಕೆಯ ಬಗ್ಗೆ, ಅದರ ಸಂಕಟಗಳ ಬಗ್ಗೆ, ಅದು ಹೂಡುವ ಆಟಗಳ ಬಗ್ಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಮಾತನಾಡಿದ್ದಾರೆ. ನೊಬೆಲ್ ಪುರಸ್ಕೃತ ಕವಿ, ವಿಸ್ಲಾವ್ ಶಿಂಬೊಶ್ಕಾ ಸಂಪಾದಕಿಯಾಗಿ ಎಳೆಯ ಕವಿಗಳಿಗೆ ನೀಡಿದ ಹಿತವಚನಗಳ, ಆಯ್ದ ಟಿಪ್ಪಣಿಗಳ ಅನುವಾದವೂ ಅದೇ ಧಾಟಿಯಲ್ಲಿದೆ. ಇವೆಲ್ಲವೂ ಭಾಷೆ, ಸಂವೇದನೆ, ಅಭಿವ್ಯಕ್ತಿ ಮತ್ತು ನಮ್ಮ ಸಾಹಿತ್ಯಿಕ ಉದ್ದೇಶಗಳ ಬಗ್ಗೆ ನಮಗೆ ಹೆಚ್ಚಿನ ಸ್ಪಷ್ಟತೆಯನ್ನು ಒದಗಿಸುವುದರಲ್ಲಿ ಅನುಮಾನವಿಲ್ಲ.
ಕವಿತೆ, ಕತೆ, ಎಲ್ಲ ಬರವಣಿಗೆಯೂ ನಮ್ಮ ಮನಸ್ಸಿನ ಒಳಜಗತ್ತನ್ನು ಮತ್ತು ಹೊರ ಜಗತ್ತಿನ ವಾಸ್ತವವನ್ನು ಸಮೃದ್ಧವಾಗಿ ಪೊರೆಯುತ್ತಿರಲಿ...
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.