“ಸಮೂಹ ಮಾಧ್ಯಮ ಯಾವತ್ತೂ ಗೌಡರ ನಿಲವುಗಳನ್ನು ಸಮಸ್ಥಿತಿಯಲ್ಲಿ ಬಿಂಬಿಸುತ್ತಿತ್ತು. ಗೌಡರು ಯಾವ ಅಧಿಕಾರದ ಸ್ಥಾನದಲ್ಲಿಲ್ಲದಿದ್ದರೂ ಅವರನ್ನು ರಾಜ್ಯದ ಧೀಮಂತ ನಾಯಕನೆಂದು ಗುರ್ತಿಸಿತ್ತು,” ಎನ್ನುತ್ತಾರೆ ಡಾ. ಎಚ್. ಸಿ. ವಿಷ್ಣುಮೂರ್ತಿ ಅವರು ತಮ್ಮ “ಗೋಪಾಲಗೌಡ ಶಾಂತವೇರಿ” ಕೃತಿ ಕುರಿತು ಬರೆದ ಲೇಖಕರ ಮಾತು.
ಗೋಪಾಲಗೌಡರ ಡೈರಿಗಳು, ಪತ್ರಗಳು ಇತ್ಯಾದಿ ಎರಡನೇ ಕಂತನ್ನು ಪ್ರಕಟಿಸಲು ಬಹಳಷ್ಟು ತಡವಾಗಿದೆ. ಬದುಕಿನ ಗೋಜಲುಗಳು, ವೃತ್ತಿ, ಆರೋಗ್ಯ ಹೀಗೆ ಪಟ್ಟಿ ಮಾಡಬಹುದಾದ ಕಾರಣಗಳನೇಕವಿದ್ದರೂ ಎರಡನೇ ಭಾಗ ಇನ್ನೂ ಮುಂಚೆಯೇ ಪ್ರಕಟವಾಗಬೇಕಿತ್ತೆಂದು ನನ್ನ ಅನಿಸಿಕೆ. ವಿಳಂಬಕ್ಕಾಗಿ ನನಗೆ ವಿಷಾದವಿದೆ.
ಗೋಪಾಲಗೌಡರನ್ನು ಕುರಿತು ಒಟ್ಟಂದವಾಗಿ ಪುಸ್ತಕವೊಂದನ್ನು ತರುವ ಭಗೀರಥ ಪ್ರಯತ್ನದಲ್ಲಿ ಯಶಸ್ಸು ಸಿಗಲಾರದೆಂಬ ಅರಿವು ನನಗಿದೆ. ಯಾವುದೇ ತತ್ಪರನಾದ ಸಾರ್ವಜನಿಕ ವ್ಯಕ್ತಿಯ ಬಗೆಗೆ ಈ ಮಾತು ಸಲ್ಲುತ್ತದೆ ಕೂಡ. ಆದರೂ ಕೊರತೆಗಳ ನಡುವೆಯೂ ಗೋಪಾಲಗೌಡರ ಬಗೆಗೆ ನಾನು ಸಂಗ್ರಹಿಸಿಟ್ಟುಕೊಂಡಿದ್ದ ಹಾಗೂ ಸೋನಕ್ಕ ಮತ್ತು ಇತರ ಆತ್ಮೀಯರು ನೀಡಿದ ವಿವಿಧ ಮೂಲಗಳ ಮಾಹಿತಿಗಳು ದಾಖಲಾಗುವುದು ಸೂಕ್ತವೆಂದು ಈ ಸಾಹಸಕ್ಕೆ. ಕೈ ಹಾಕಿದ್ದೇನೆ. ಈ ಕೃತಿಯಲ್ಲಿನ ಲೋಪಗಳಿಗೆ ನಾನು ನೇರ ಹೊಣೆಯಲ್ಲವಾದರೂ ನೈತಿಕ ಹೊಣೆ ನನ್ನದು. ಗೌಡರ ಮತ್ತು ನನ್ನ ನಡುವಿನ ವಯಸ್ಸಿನ ಅಂತರ ಕಡಿಮೆಯಿದ್ದಿದ್ದಲ್ಲಿ ಬಹುಶಃ ಬಹಳಷ್ಟು ದಾಖಲಾಗದ ಸಂಗತಿ ಈ ಪುಸ್ತಕದಲ್ಲಿ ದಾಖಲಾಗುತ್ತಿದ್ದವೆಂಬ ಸತ್ಯ ನನ್ನನ್ನು ಕಾಡುತ್ತದೆಯಾದರೂ, ಒಂದೂವರೆ ದಶಕ ಹತ್ತಿರದಿಂದ ಕಂಡ ಒಡನಾಟದ ಸಂದರ್ಭದ ಬಹಳಷ್ಟು ಸಂಗತಿಗಳು ಇಲ್ಲಿ ಬೆಳಕು ಕಾಣುತ್ತಿವೆ.
ಈ ಪುಸ್ತಕ ಎರಡನೆಯ ಭಾಗವಾಗಿ ಬರಬೇಕಾಗಿತ್ತಾದರೂ, ಮೊದಲ ಭಾಗದ ಪ್ರತಿಗಳ ಅಲಭ್ಯತೆಯಿಂದಾಗಿ, ಅವುಗಳನ್ನು ಸೇರಿಸಿ ಒಂದೇ ಸಂಪುಟದಲ್ಲಿ ಪ್ರಕಟಿಸುವ ಸಲಹೆ ನನ್ನ ಆತ್ಮೀಯರಿಂದ ಬಂದು, ಅದು ನನಗೂ ಸರಿಯೆನಿಸಿ, ಒಂದೇ ಸಂಪುಟವಾಗಿ ಗೋಪಾಲಗೌಡ ಶಾಂತವೇರಿ : ಅಂತರಂಗ – ಬಹಿರಂಗ" ಎಂಬ ಹೆಸರಿನಲ್ಲಿ ಹೊರಬರುತ್ತಿದೆ.
ನನ್ನ ಹಿಂದಿನ ಪ್ರಕಟಣೆಯಲ್ಲಿ ನಿವೇದಿಸಿಕೊಂಡಂತೆ, ಗೌಡರ ಬದುಕಿನ ಹಲವು ಆಯಾಮಗಳ ಚಿತ್ರಣ ಒಬ್ಬರಿಂದ ಕಷ್ಟಸಾಧ್ಯ ಅಂಥ ಸ್ಪಷ್ಟ ದಾಖಲೆಗಳನ್ನು ಬಲ್ಲ ಹಲವು ಹಿರಿಯರು ಈಗ ನಮ್ಮೆದುರು ಇಲ್ಲದಿರುವುದು ವಿಷಾದದ ಸಂಗತಿಯಾದರೂ ಪ್ರಕೃತಿ ಸಹಜ.
ಗೌಡರ ಲಭ್ಯವಿದ್ದ ಡೈರಿಗಳನ್ನು ಯಥಾವತ್ತಾಗಿ ಪ್ರಕಟಿಸಿರುವುದು ಪ್ರಜ್ಞಾಪೂರ್ವಕ, ಗೌಡರ ಜೀವನದ ದೈನಂದಿನ ಬದುಕಿನಲ್ಲಿ ಹೇಗೆ ವಿವಿಧ ಸ್ತರಗಳಲ್ಲಿ ಸ್ಪಂದಿಸುತ್ತಿದ್ದರೆಂಬ ಮಾಹಿತಿ ಅಲ್ಲಿ ದೊರೆಯುತ್ತದೆ. ದರಖಾಸ್ತು ಸಮಿತಿ ಸಭೆ, ವಿದ್ಯಾರ್ಥಿವೇತನ ನೀಡಿಕೆ ಕುರಿತ ಸಭೆಗಳಿಗೆ ಬೆಂಗಳೂರಿನಿಂದ ತೀರ್ಥಹಳ್ಳಿಗೆ ಬಂದು ಹಾಜರಾಗುತ್ತಿದ್ದುದು ನನಗೆ ವಿಚಿತ್ರವೆಸಿತ್ತು. ಕುತೂಹಲ ಹತಿಕ್ಕಲಾರದೆ 'ಈ ಚೋಟಾಮೋಟಾ ಮೀಟಿಂಗ್‌ಗಳಿಗೆಲ್ಲ ಅಲ್ಲಿಂದ ಬಂದು ಹೋಗಿ ದಣಿಯುತ್ತೀರಿ' ಅಂದಾಗ 'ಅರ್ಹರಿಗೆ ವಂಚನೆಯಾಗಿ, ಅಪಾತ್ರರಿಗೆ ಲಾಭವಾಗುವುದು ನನಗೆ ಇಷ್ಟವಿಲ್ಲ. ಬಡ ಹುಡುಗನೊಬ್ಬನಿಗೆ ಸಿಗುವ ವಿದ್ಯಾರ್ಥಿವೇತನ ಅವನಿಗೇ ಸಿಕ್ಕರೆ, ನಿರ್ಗತಿಕ ಬಡವನೊಬ್ಬನಿಗೆ ಸ್ವಲ್ಪ ಜಮೀನು ದಕ್ಕಿ ಅವನ ಜೀವನ ಹಸನಾಗುವುದಾದರೆ, ನನ್ನ ದಣಿವು ಸಾರ್ಥಕವಲ್ಲವೆ?' ಅನ್ನುವ ಕಳಕಳಿಯ ಉತ್ತರ ಅವರಿಂದ ಬಂತು.
ಗೌಡರ ಡೈರಿಯಲ್ಲಿ ಅವರ ಜೀವನದ ಎಲ್ಲ ಮಜಲಿನ ಪಾರದರ್ಶಕತೆ ಉಲ್ಲೇಖನೀಯ. ಎಲ್ಲೂ ಏನನ್ನೂ ಮುಚ್ಚಿಡದ ತೆರೆದ ಹೃದಯದ ಪಾಡು, ಪಟ್ಟ ಬವಣೆ ಕಣ್ಣಿಗೆ ಹೊಡೆಯುವಷ್ಟು ನಿಚ್ಚಳ. ತನಗಿದ್ದ ಎಲ್ಲ ದೈಹಿಕ, ಆರ್ಥಿಕ, ಸಾಮಾಜಿಕ ತೊಂದರೆ, ಇತಿಮಿತಿಗಳ ನಡುವೆಯೂ ಗೌಡರು ಸಮಾಜವಾದಿ ಸಂಘಟನೆಗೆ ಪಟ್ಟ ಶ್ರಮ; ಸಮಾಜವಾದಿ ಹೋರಾಟಗಳಿಗೆ ಜೀವ ತುಂಬಲು ಯತ್ನಿಸಿ, ವಾಸ್ತವವಾಗಿ ಅಯಶಸ್ವಿಯಾದರೂ, ನೈತಿಕ ವಿಜಯವನ್ನು ಸಾಧಿಸಿದ ಬಗೆಯನ್ನು ಅಲ್ಲಿ ಸುಲಭವಾಗಿ ಗುರ್ತಿಸಬಹುದು.
ಗೌಡರು ತಮ್ಮ ಬದುಕಿನ ಅತ್ಯಂತ ಕಠಿಣತರವಾದ ದಿನಗಳಲ್ಲೂ ಕೂಡ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಳ್ಳಲಿಲ್ಲ. ಡಾ. ಲೋಹಿಯಾ, ಮಧು ಲಿಮಯೆ, ಲಾಡ್ಲಿ ಮೋಹನ್ ನಿಗಂ, ಕೇಶವರಾವ್ ಜಾಧವ್, ಬದ್ರಿ ವಿಶಾಲ್ ಪಿತ್ತಿ, ಸಿ.ಜಿ.ಕೆ. ರೆಡ್ಡಿ, ಕಿಶನ್ ಪಟ್ನಾಯಕ್, ಜಾರ್ಜ್ ಫನಾರ್ಂಡೀಸ್, ರಬಿ ರಾಯ್ ಮುಂತಾದ ರಾಷ್ಟ್ರದ ಮುಂಚೂಣಿ ಸಮಾಜವಾದಿಗಳಿಂದ ಹಿಡಿದು ರಾಜ್ಯ, ಜಿಲ್ಲೆ, ಗ್ರಾಮಾಂತರ ಪರಿಸರದ ಸಾಮಾನ್ಯ ಕಾರ್ಯಕರ್ತನ ವರೆಗೂ ಅವರಿಟ್ಟುಕೊಂಡ ಸಂಪರ್ಕ, ಕಾಳಜಿ, ಸಂಘಟನೆಗಾಗಿ ತನ್ನನ್ನು ತಾನು ಅರ್ಪಿಸಿಕೊಂಡ ಬಗೆ ಅವರ ಹೆಸರನ್ನು ಜೀವಂತವಾಗಿರಿಸಿದೆ. ಯಾವ ಆರ್ಥಿಕ ನೆಲೆಯಿಲ್ಲದೆ ರಾಜ್ಯ, ನಂತರ ರಾಷ್ಟ್ರದಗಲ ಪಕ್ಷ ಕಟ್ಟಲು, ಸಮಾಜವಾದಿ ಆಂದೋಲನಗಳನ್ನು ಹುಟ್ಟು ಹಾಕಿ ಬೆಳೆಸಲು ಪಟ್ಟ ಅವರ ಪ್ರಯತ್ನ ದಿಗ್ಧಮೆಗೊಳಿಸುವಂಥದ್ದು
ಡಾ. ಲೋಹಿಯಾ, ಮಧು ಲಿಮಯೆ, ಜಾರ್ಜ್ ಫನಾರ್ಂಡೀಸ್ ಮುಂತಾದ ಸಮಾಜವಾದಿಗಳ ಸಂಪರ್ಕ ಗೌಡರನ್ನು ತೀವ್ರವಾದಿ ಹೋರಾಟಗಾರನನ್ನಾಗಿ ರೂಪಿಸಿದ್ದರಲ್ಲಿ ವಿಶೇಷವೇನಿಲ್ಲವಾದರೂ, ತನ್ನ ಹದಗೆಟ್ಟ ಆರೋಗ್ಯ, ಆರ್ಥಿಕ ಅಸ್ಥಿರತೆ ಮತ್ತು ರಾಜಕೀಯ ಪ್ರಲೋಭನೆಗಳೊಡನೆ ಸೆಣಸಿ ಹುತಾತ್ಮರಾದದ್ದು ಒಂದು ವೀರಗಾಥೆ.
ಗೌಡರು ಬರೆದ ಬಹಳಷ್ಟು ಪತ್ರಗಳು ಲಭ್ಯವಾಗಿಲ್ಲ. ಹಲಕೆಲವು ಲಭ್ಯವಿದ್ದ ಪತ್ರಗಳನ್ನು ಕಳೆದುಕೊಂಡಿದ್ದೇನೆ. ಇದೇ ರೀತಿ ಅವರ ಹಲವು ಸಂಗಾತಿಗಳ ಅನುಭವ. ತೀರ್ಥಹಳ್ಳಿಯ ಮೂಲೆಯ ಹಳ್ಳಿಯಿಂದ ದಿಲ್ಲಿಯವರೆಗೆ ಹರಡಿದ್ದ ಅವರ ವಿವಿಧ ರಂಗದ, ವಿವಿಧ ಸ್ತರದ ವ್ಯಕ್ತಿಗಳು, ಆತ್ಮೀಯರು, ಹಿರಿಯರು, ಕಾರ್ಯಕರ್ತರು ನಾಡಿನ ಮೂಲೆಮೂಲೆಗಳಿಂದ ಹಲವಾರು ವಿಷಯ, ಸಮಸ್ಯೆ, ಸಿದ್ಧಾಂತಗಳನ್ನು ಕುರಿತ ಕೆಲವು ಪತ್ರಗಳನ್ನು ಕಾಗುಣಿತವೂ ಸೇರಿದಂತೆ ಮೂಲಕ್ಕೆ ವ್ಯತ್ಯಯ ಬರದಂತೆ ಪತ್ರಗಳ ದಿನಾಂಕಗಳಿಗೆ ಅನುಗುಣವಾಗಿ ಪ್ರಕಟಿಸಲಾಗಿದೆ. ಹಿಂದಿ ಮತ್ತು ತಮಿಳು ಕಾಗದಗಳನ್ನು ಅನುವಾದಿಸಿ ಪ್ರಕಟಿಸಲಾಗಿದೆ.
ಗೌಡರು ಸೋಮಾರಿಗಳಾಗಿದ್ದರೆಂಬ ಒಂದು ಸಾಧಾರಣ ಭಾವನೆಯಿದೆ. ಆದರೆ ಅವರಿದ್ದ ಪರಿಸ್ಥಿತಿಯಲ್ಲಿ - ಇನ್ನೂ ಹೆಚ್ಚನ್ನು ನಿರೀಕ್ಷಿಸುವುದು ಅತ್ಯಂತ ನಿರ್ದಯವಾದ ಬೇಡಿಕೆ. ಗೌಡರ ಶಿಷ್ಯರಲ್ಲಿರುವ ಎರಡು ವರ್ಗಗಳಲ್ಲಿ ಒಂದು ವರ್ಗ ಗೌಡರ ಬದುಕಿನ ಬಂದಳಿಕೆಗಳಾಗಿ ಇಂದಿಗೂ ಕಾಡುತ್ತಿರುವುದನ್ನು. ನಿತ್ಯವೂ ಹಿಂಸಿಸುತ್ತಿರುವುದನ್ನು ನೋಡಬಹುದು. ಇನ್ನೊಂದು ವರ್ಗ ಗೌಡರೊಡನೆ ಕಳೆದ ಹೋರಾಟದ ದಿನಗಳನ್ನು ಮೆಲಕು ಹಾಕುತ್ತ ತಮ್ಮ ಬಡತನ, ಸಮಸ್ಯೆಗಳ ನಡುವೆಯೂ ಸ್ವಾಭಿಮಾನದ ಬದುಕನ್ನು ಮೆರೆಯುತ್ತಿರುವುದನ್ನು ನೋಡಬಹುದು. ಗೌಡರ ಬದುಕಿನುದ್ದಕ್ಕೂ ಹರಿದುಬಂದ ಮಾನವೀಯ ಸಂಪರ್ಕ ಮತ್ತು ತನ್ನ ಪರಿಸರಕ್ಕೆ ಸ್ಪಂದಿಸುವ ಸೆಲೆಯನ್ನು ಈ ಪತ್ರಗಳ ಮೂಲಕ ಗ್ರಹಿಸಲು ಸಾಧ್ಯವೆಂದು ನನ್ನ ನಂಬುಗೆ.
ಸೋನಕ್ಕ, ಗೌಡರ ನಡುವಿನ ಖಾಸಗಿ ಪತ್ರಗಳ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ. 'ಅವಸ್ಥೆ' ಸಿನಿಮಾ, ಕಾದಂಬರಿ ವಿವಾದ ಕೋರ್ಟು ಕಟಕಟೆಯೇರಿದ ಸಂದರ್ಭದಲ್ಲಿ ಗೌಡರು - ಸೋನಕ್ಕರ ನಡುವೆಯಿದ್ದ ಮಧುರ ಹಾಗೂ ಮಾನವೀಯ ಸಂಬಂಧವನ್ನು ನಿರೂಪಿಸಲು ಅವುಗಳನ್ನು ಕೋರ್ಟಿಗೆ ಹಾಜರುಪಡಿಸಲಾಗಿತ್ತು. ಅದೀಗ ಸಾರ್ವಜನಿಕ ದಾಖಲೆಯಾದ್ದರಿಂದ ಸೋನಕ್ಕನವರ ಒಪ್ಪಿಗೆ ಮೇರೆಗೆ ಪ್ರಕಟಿಸಲಾಗಿದೆ
ಈ ಪತ್ರಗಳ ಮೂಲಕ ಜನ ಸಂಘಟನೆ, ಅದಕ್ಕಾಗಿ ಅವರು ತೆತ್ತ ಬೆಲೆ, ವಿವಿಧ ರೀತಿಯ ಸಮಸ್ಯೆ ಕುರಿತು ಪರಿಹಾರಕ್ಕಾಗಿ ದುಂಬಾಲುಬಿದ್ದ ಜನಸಾಮಾನ್ಯರುಗಳ ಪತ್ರಗಳಿಗೆ ಜೋಪಾನವಾಗಿ ಸಮಾಧಾನವನ್ನು ಕಂಡುಕೊಂಡು, ಕರಾರುವಾಕ್ಕಾಗಿ ಉತ್ತರಿಸಿ ಸ್ಥಳ, ದಿನಾಂಕಗಳನ್ನೂ ಕೂಡ ನಮೂದಿಸಿದ್ದನ್ನು ಮನಗಾಣಬಹುದು.
ಗೌಡರು ಬರೆದ ಕೆಲವು ಲೇಖನಗಳು ಕೂಡಾ ಇಲ್ಲಿ ಪ್ರಕಟಗೊಂಡಿವೆ. 'ಕಸ್ತೂರಿ' ವಸಂತ ಸಂಚಿಕೆಗೆ ಗೌಡರಿಂದ ಲೇಖನ ಬರೆಸಿಕೊಡಬೇಕೆಂದು ಪೂಜ್ಯ 'ಪಾವೆಂ'ರವರ ವಿನಂತಿ ಮೇರೆಗೆ ಪತ್ರ ಬರೆದು ಲೇಖನ ('ಸ್ವರಾಜ್ಯ ಬಂತು') ತರಿಸಿಕೊಟ್ಟಿದ್ದೆ. ಈ ಲೇಖನವಲ್ಲದೆ, ಸಾಂದರ್ಭಿಕವಾದ ಲೇಖನಗಳು ಕೆಲವು ಇಲ್ಲಿ ಪ್ರಕಟಗೊಂಡಿವೆ. 'ಜನ ಜಾಗ್ರತಿಯ ಆವಶ್ಯಕತೆ'ಯಂತಹ ಕೆಲವು ಟಿಪ್ಪಣಿಗಳು ಇಂದು ಕಣ್ಮರೆಯಾಗಿವೆ. ಅಂತಹ ಹಲವು ಗೋಪಾಲಗೌಡರ ಬರಹ, ಟಿಪ್ಪಣಿಗಳು ಕೈತಪ್ಪಿರುವುದು ವಿಷಾದದ ಸಂಗತಿ ಗೋಪಾಲಗೌಡರಿಗೆ ವ್ಯಂಗ್ಯಚಿತ್ರ ಹಾಗೂ ಕವನಗಳನ್ನು ಬರೆಯುವ ಗೀಳಿತ್ತು. ಗೌಡರು ಬರೆದ ಕವನಗಳಲ್ಲಿ ಸಿಕ್ಕಿದೊಂದೇ ಒಂದು ಕವನ -'ಕಾಲಾಯ ತಸ್ಯೆ ನಮಃ', 'ಗಿರಿಧಾರಿ' (ಗೋಪಾಲ) ನಾಮಾಂಕಿತದಲ್ಲಿ ಬರೆದ ಈ ಕವನವನ್ನು ಅಚ್ಚು ಹಾಕಲಾಗಿದೆ.
ಶಾಸನ ಸಭೆಯ ಒಂದೆರಡು ಮಹತ್ವದ ಘಟನೆಗಳ ವಿವರಗಳನ್ನು ಇಲ್ಲಿ ಸೇರಿಸಲಾಗಿದೆ. ಪ್ರಮುಖವಾಗಿ ರಾಜ್ಯಪಾಲರ ಭಾಷಣದ ಪ್ರತಿಯನ್ನು ತುಳಿದ ಘಟನೆ, ಧ್ವನಿವರ್ಧಕವನ್ನು ಕಿತ್ತೆಸೆದ ಘಟನೆ ಅಲ್ಲದೆ ಅಂದು ಶಾಸನ ಸಭೆ, ಸಮೂಹ ಮಾಧ್ಯಮಗಳು ಮತ್ತು ಜನತೆಯ ಪ್ರತಿಕ್ರಿಯೆಯನ್ನು ಪ್ರಕಟಿಸಲಾಗಿದೆ. ಅಂದು ವಿಪರೀತವೆನಿಸಿದ ಘಟನೆಗಳ ಹಿಂದಿನ ಒಂದು ಪ್ರಾಮಾಣಿಕ, ನಿಸ್ಸಾಹಾಯಕ ನೋವಿನ ದನಿಯನ್ನು, ಕಾಲ ಸವೆದಂತೆಲ್ಲ ಜನ ಅರ್ಥಮಾಡಿಕೊಂಡು ಆ ಘಟನೆಗಳ ವೈಭವೀಕರಣದ ಮಟ್ಟ ತಲುಪಿದ್ದು ಇತಿಹಾಸದ ಒಂದು ಸೋಜಿಗ.
೧೯೬೦ ರಲ್ಲಿ ಗೌಡರು ಬೆಂಗಳೂರಿನಿಂದ ಸಮಾಜವಾದಿ ಪಕ್ಷದ ಮುಖವಾಣಿಯಾಗಿ 'ಮಾರ್ಗದರ್ಶಿ' ವಾರಪತ್ರಿಕೆಯನ್ನು ಎಲ್ಲ ಆರ್ಥಿಕ ಅಡಚಣೆಗಳ ನಡುವೆ ಪ್ರಕಟಿಸುತ್ತ ಬಂದರು. ೧೯೬೧ ರಲ್ಲಿ ಅದನ್ನು ಜಿ. ಸದಾಶಿವರಾಯರಿಗೆ ಶಿವಮೊಗ್ಗೆಯಿಂದ ಪ್ರಕಟಿಸುವ ಜವಾಬ್ದಾರಿಯನ್ನು ಹೊರಿಸಿದರು. ಗೌಡರ ಜೀವನದ ಆದರ್ಶವಾಗಿದ್ದ ಭೂಸುಧಾರಣೆ, ಇನಾಂ ರದ್ದಿಯಾತಿ, ರಾಜಧನ ರದ್ದತಿ ಮುಂತಾದ ವಿಷಯಗಳ ಬಗೆಗೆ ಹಲವು ಲೇಖನ ಬರೆದಿದ್ದರು. ಅವುಗಳ ಕೆಲವು ಪ್ರತಿಗಳು ನನ್ನಲ್ಲಿದ್ದವಾದರೂ ಪದೇ ಪದೇ ಊರು ಸುತ್ತುವ ನೌಕರಿ, ಬಾಡಿಗೆ
ಮನೆಯಿಂದ ಬಾಡಿಗೆ ಮನೆಗೆ ಸುತ್ತುವ ನನ್ನ ತಾಪತ್ರಯದಲ್ಲಿ ಹಲವಾರು ಪುಸ್ತಕ, ದಾಖಲೆಗಳನ್ನೊಳಗೊಂಡಂತೆ ಅವುಗಳು ನನ್ನಿಂದ ಕಳಚಿಕೊಂಡಿವೆ. ಮೇಗರವಳ್ಳಿಯ ಗೌಡರ ಮೆಚ್ಚಿನ ಸಂಗಾತಿ ಹಾಗೂ ಹಿರಿಯರಾದ ಶ್ರೀ ಬಿ.ವಿ. ಮೂರ್ತಿಯವರಲ್ಲಿದ್ದ 'ಮಾರ್ಗದರ್ಶಿ' ಯ ಒಂದು ಪ್ರತಿಯ ಮುಖಪುಟವನ್ನು ಇಲ್ಲಿ ಪ್ರಕಟಿಸಲಾಗಿದೆ. 'ಮಾರ್ಗದರ್ಶಿ' ಹೊರತರಲು ಗೌಡರು ಪಟ್ಟ ಶ್ರಮ ಅವರ ಡೈರಿಯಲ್ಲಿ ವ್ಯಕ್ತವಾಗುತ್ತದೆ.
ಸಮೂಹ ಮಾಧ್ಯಮ ಯಾವತ್ತೂ ಗೌಡರ ನಿಲವುಗಳನ್ನು ಸಮಸ್ಥಿತಿಯಲ್ಲಿ ಬಿಂಬಿಸುತ್ತಿತ್ತು. ಗೌಡರು ಯಾವ ಅಧಿಕಾರದ ಸ್ಥಾನದಲ್ಲಿಲ್ಲದಿದ್ದರೂ ಅವರನ್ನು ರಾಜ್ಯದ ಧೀಮಂತ ನಾಯಕನೆಂದು ಗುರ್ತಿಸಿತ್ತು. ಅವರು ವಿವಿಧ ಸುದ್ದಿ ಗೋಷ್ಠಿಗಳಲ್ಲಿ ನೀಡಿದ ಹೇಳಿಕೆ, ವಿಶ್ಲೇಷಣೆ, ಅಭಿಪ್ರಾಯಗಳು ಸಾಂದರ್ಭಿಕ ಮೌಲಿಕತೆಯನ್ನುಳಿಸಿಕೊಂಡಿರುವುದರಿಂದ ಅವನ್ನು ಪ್ರಕಟಿಸಲಾಗಿದೆ. ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಡೆಕ್ಕನ್ ಹೆರಾಲ್ಡ್ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್, ಹಿಂದೂ ಪತ್ರಿಕೆಗಳ ವರದಿಗಳು ಹೆಚ್ಚಾಗಿ ಲಭ್ಯವಾದವು. ಒಂದೇ ವಿಷಯದ ಮೇಲಿನ ಪ್ರಸ್ತಾಪ ಬಂದಾಗ ಭಾಗಶಃ ಪುನರಾವರ್ತನೆಯಾಗಿದೆ. ಆದರೆ ಅವರ ಹೇಳಿಕೆಯ ಪೂರ್ಣ ಪಾಠವನ್ನು ಗ್ರಹಿಸಲು ಅನುಕೂಲವಾಗುತ್ತದೆ. ಆದುದರಿಂದಾಗಿ ಆ ಪುನರಾವರ್ತನೆ ಅನಿವಾರ್ಯವಾಯಿತು.
ಕರ್ನಾಟಕದಲ್ಲಿ ಸಮಾಜವಾದಿ ಆಂದೋಲನಕ್ಕೆ ನಾಂದಿ ಹಾಡಿದ ಕಾಗೋಡು ಸತ್ಯಾಗ್ರಹದ ಸಮಯದಲ್ಲಿ ಪಂಡಿತ್ ರಾಮನಂದನ ಮಿಶ್ರರು ಬರೆದ ಮಲೆನಾಡಿನ ಗೇಣಿದಾರರ, ರೈತರ ಆರ್ಥಿಕ ಅಧ್ಯಯನದ ಕಿರು ಹೊತ್ತಿಗೆ 'ಕಾಗೋಡು ರೈತ ಸತ್ಯಾಗ್ರಹವನ್ನು ಇಲ್ಲಿ ಮರುಮುದ್ರಿಸಲಾಗಿದೆ. ಚುನಾವಣೆಯ ಕರಪತ್ರಗಳು, ಪಕ್ಷದ ಅಂದಿನ ಸಿದ್ಧಾಂತ, ಚುನಾವಣಾ ಪ್ರಣಾಳಿಕೆಗಳನ್ನು ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷದ ಅಂದಿನ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಸಹ ದಾಖಲೆಗಾಗಿ ಸೇರಿಸಲಾಗಿದೆ.
ಒಟ್ಟಿನಲ್ಲಿ ಈ ಪುಸ್ತಕ ಸಾಧ್ಯವಿದ್ದಷ್ಟು ಸಮಗ್ರವಾಗಿ ಮೂಲ ಸೆಲೆಯ ತೀವ್ರತೆಯನ್ನುಳಿಸಿಕೊಂಡು ಪ್ರಕಟವಾಗುತ್ತಿದೆ. ಈ ಕೃತಿಯನ್ನು ತೆರೆಯ ಮರೆಯಲ್ಲೇ ನಿಂತು ಸಂಕಲಿಸಬೇಕಾದ ಪ್ರಜ್ಞಾಪೂರ್ವಕ ಹೊಣೆ ನನ್ನ ಮೇಲಿತ್ತಾದ್ದರಿಂದ ಮಾನಸಿಕ ಒತ್ತಡಕ್ಕೆ ಒಳಗಾದದ್ದು ಸ್ವಾಭಾವಿಕ. ಗೋಪಾಲಗೌಡರು ಹೀಗೆ ಒಂದು ವ್ಯವಸ್ಥೆಯ ಮಾನಸಿಕ ಪರಿವರ್ತನೆಗೆ, ಇಂದಿನ ಸಮಾಜಕ್ಕೆ ಪ್ರಸ್ತುತವಾಗುತ್ತಿರುವ ಬಗೆ, ಇಂದಿನ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಪಡೆದುಕೊಳ್ಳುತ್ತಿರುವ ಹೊಸ
ಹೊಸ ಅರ್ಥ- ಗೌಡರ ಕಾಲಾನಂತರವಾದರೂ ಜನ ಅವರನ್ನು ಅರ್ಥಮಾಡಿಕೊಳ್ಳುವಂತಾಯಿತಲ್ಲ ಎಂಬುದೇ ಸಂತೋಷದ ಸಂಗತಿ. ನನ್ನ ಜನರು ನನ್ನನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ, ಅಥವಾ ನಾನು ಸತ್ತ ನಂತರ, ಅವರು ನನ್ನನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಡಾ. ಲೋಹಿಯಾ ಹೇಳುತ್ತಿದ್ದರು. ಗೋಪಾಲಗೌಡ ಶಾಂತವೇರಿಯವರ ಬದುಕು, ಭಾವನೆಗಳು ಭಿನ್ನವೇನಲ್ಲ.
- ಡಾ. ಎಚ್. ಸಿ. ವಿಷ್ಣುಮೂರ್ತಿ
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.