"ಪತ್ರಿಕಾರಂಗವೆಂದರೆ ಅದೊಂದು ದೊಡ್ಡ ಸಾಗರ.ಮೇಲೆ ಶಾಂತ ಸಾಗರದಂತೆ ಕಂಡರೂ ಒಳಗೊಳಗೆ ಸುಳಿಗಳಿವೆ, ಈಜಿ ಗುರಿ ತಲುಪಿದೆನೆನ್ನುವಾಗ ಧುತ್ತನೆ ಎದುರಾಗಿ ಸದೆಬಡಿದು ದಡಕ್ಕೆ ತಂದೆಸೆಯುವ ಅಲೆಗಳಿವೆ,ಸಣ್ಣ ಮೀನುಗಳನ್ನು ನುಂಗಿ ನೊಣೆಯಲು ಸದಾ ಸಿದ್ದವಾಗಿರುವ ದೊಡ್ಡ ಮೀನುಗಳಿವೆ. ಇವುಗಳನ್ನೆಲ್ಲಾ ಮೀರಿ ನಿಲ್ಲುವುದು ಸುಲಭದ ಸಂಗತಿಯಲ್ಲ," ಎನ್ನುತ್ತಾರೆ ಸ್ಮಿತಾ ಅಮೃತರಾಜ್, ಸಂಪಾಜೆ. ಅವರು ಪದ್ಮರಾಜ ದಂಡಾವತಿಯವರ ‘ಉಳಿದಾವ ನೆನಪು’ ಕೃತಿ ಕುರಿತು ಬರೆದ ವಿಮರ್ಶೆ.
ಕೆಲವೊಮ್ಮೆ ಆಗುವುದೆಲ್ಲ ಒಳ್ಳೆಯದ್ದಕ್ಕೆ ಅನ್ನಿಸುವುದು ಇದಕ್ಕೇ ಇರಬೇಕು. ಯಾಕೆಂದರೆ ಅಧ್ಯಾಪನ ವೃತ್ತಿಗೆ ಹೋಗಬೇಕಾದ ಪದ್ಮರಾಜ ದಂಡಾವತಿ ಸರ್ ಅವರು ಅಚಾನಕ್ ಪತ್ರಿಕಾರಂಗಕ್ಕೆ ಬರುತ್ತಾರೆ. ಬಹುಶಃ ಎರಡೂ ವೃತ್ತಿಯೂ ಅವರಿಗೆ ಒಗ್ಗುವಂತದ್ದೇ ಅನ್ನುವುದು ಕೃತಿ ಓದಿ ಮುಗಿದಾಗ ಭಾಸವಾಗುತ್ತದೆ. ಅಧ್ಯಾಪಕರಾಗಿದ್ದರೆ ಅವರು ಒಂದಷ್ಟು ಕೃತಿಗಳನ್ನು ರಚಿಸಿದ್ದಿರಬಹುದು, ಒಂದಷ್ಟು ಒಳ್ಳೆಯ ವಿದ್ಯಾರ್ಥಿಗಳನ್ನು ರೂಪಿಸಿದ್ದಿರಬಹುದು. ಆದರೆ ಇಲ್ಲೂ ಅದೇ ಕೆಲಸವನ್ನು ಮಾಡಿದ್ದಾರೆ. ಪುಸ್ತಕ ಓದಿ ಮುಗಿಸಿದ ಮೇಲೆ ಪತ್ರಿಕಾರಂಗವೇ ಅವರ ಅಸ್ಮಿತೆಯೇನೋ ಅಂತ ಅನ್ನಿಸಿಬಿಟ್ಟಿತು.
ಪತ್ರಿಕಾರಂಗವೆಂದರೆ ಅದೊಂದು ದೊಡ್ಡ ಸಾಗರ. ಮೇಲೆ ಶಾಂತ ಸಾಗರದಂತೆ ಕಂಡರೂ ಒಳಗೊಳಗೆ ಸುಳಿಗಳಿವೆ, ಈಜಿ ಗುರಿ ತಲುಪಿದೆನೆನ್ನುವಾಗ ಧುತ್ತನೆ ಎದುರಾಗಿ ಸದೆಬಡಿದು ದಡಕ್ಕೆ ತಂದೆಸೆಯುವ ಅಲೆಗಳಿವೆ, ಸಣ್ಣ ಮೀನುಗಳನ್ನು ನುಂಗಿ ನೊಣೆಯಲು ಸದಾ ಸಿದ್ದವಾಗಿರುವ ದೊಡ್ಡ ಮೀನುಗಳಿವೆ. ಇವುಗಳನ್ನೆಲ್ಲಾ ಮೀರಿ ನಿಲ್ಲುವುದು ಸುಲಭದ ಸಂಗತಿಯಲ್ಲ. ಅಂತಹ ಕೆಚ್ಚೆದೆ ಮತ್ತು ಮನೋರ್ಧಾಡ್ಯ ಅವರಲ್ಲಿದೆ ಅನ್ನುವುದನ್ನ ಅವರ ಯಶಸ್ವೀ ನಿವೃತ್ತಿ ಸಾಬೀತು ಪಡಿಸುತ್ತದೆ.
ನಾಕು ದಿಕ್ಕುಗಳಿಂದ ಕಾಯುವ ಸದಾ ಎಚ್ಚರದ ಕಣ್ಣು ಮತ್ತು ಸಮಚಿತ್ತತೆಯಿದ್ದರೆ ಮಾತ್ರ ಇಲ್ಲಿ ಉಳಿಯಬಹುದು ಅನ್ನುವಂತದ್ದನ್ನ ಸೂಚ್ಯವಾಗಿಯೂ ಕೆಲವೊಮ್ಮೆ ನಿರ್ಭಿಡೆಯಿಂದಲೂ ಹೇಳಿ ಮುಗಿಸಿದ್ದಾರೆ. ಯಾವುದೇ ಅಮಿಷಗಳಿಗೆ,ಪ್ರಲೋಭನೆಗೆ ಒಳಗಾಗದೆ ನಿಷ್ಟೆಯಿಂದ ವೃತ್ತಿ ಧರ್ಮಕ್ಕೂ, ಬದುಕು ಕೊಟ್ಟ ಸಂಸ್ಥೆಗೂ ಲೋಪವೆಸಗದೆ ಬದುಕಿದ ಪರಿಯಿಂದಲೇ ಇತರರಿಗಿಂತ ಭಿನ್ನವಾಗಿ ನಿಲ್ಲತ್ತಾರೆ ಅನ್ನುವುದ್ದನ್ನ ಅವರ ಏರಿದ ಎತ್ತರ ಶ್ರುತ ಪಡಿಸುತ್ತದೆ.
ಮುನ್ನುಡಿಯಲ್ಲಿ ಹೇಳಿದಂತೆ ಇದು ಪತ್ರಿಕೆಯ ಆತ್ಮಕತೆ. ಪತ್ರಿಕೆಯೊಂದಿಗಿನ ಅನುಸಂಧಾನವಷ್ಟೇ. ಬರೋಬ್ಬರಿ ಮೂವತ್ತು ವರುಷಕ್ಕಿಂತ ಹೆಚ್ಚಿಗೆ ಪತ್ರಿಕೆಯ ಜೊತೆಗಿನ ನಂಟು ಅವರದು. ವೃತ್ತಿ ಮತ್ತು ಬದುಕು ಬೇರೆ ಬೇರೆಯಲ್ಲ ಅಂತ ಪರಿಗಣಿಸಿದರೂ, ವೃತ್ತಿ ಬದುಕಿನ ನೆರಳಿನಿಂದ ವೈಯಕ್ತಿಕ ಬದುಕಿನ ಅಂತರ ಕಾಯ್ದುಕೊಂಡ ಕಾರಣವೇ ಈ ನೆನಪುಗಳ ಬುತ್ತಿಯಲ್ಲಿ ಪತ್ರಿಕಾರಂಗದ ಸಂಗತಿಗಳಷ್ಟೇ ಹೆಚ್ಚು ತೆರೆದುಕೊಳ್ಳುತ್ತವೆ. ಎಲ್ಲೋ ಒಂದೊಂದು ಕಡೆ ವೈಯಕ್ತಿಕ ಸಂಗತಿಗಳು ಯಾವುದೇ ಉತ್ರೇಕ್ಷೆಯಿಲ್ಲದೆ ಸಹಜವಾಗಿ ಹಣಕಿ ಹೋಗುತ್ತವೆ. ಅದನ್ನು ವಿಜೃಂಭಿಸಿ ಬರೆಯುವುದಾಗಲಿ, ಸ್ವ ಮರುಕ ದಕ್ಕಿಸಿಕೊಳ್ಳುವುದಾಗಲಿ ಅವರಿಗೆ ಬೇಕಿಲ್ಲ. ಆದರೆ ಅಲ್ಲಲ್ಲಿ ದಾಖಲಾದ ಒಂದೆರಡು ವೈಯಕ್ತಿಕ ಸಂಗತಿಗಳ ಎಳೆ ನನ್ನನ್ನು ಹಿಡಿದು ನಿಲ್ಲಿಸಿ ಬಿಟ್ಟಿತು. ಅದರಲ್ಲಿ, ಅವರು ಎಳೆ ಪ್ರಾಯದಲ್ಲಿ ಅಪ್ಪ, ಅಮ್ಮನನ್ನು ಕಳೆದುಕೊಂಡದ್ದು, ಹುಟ್ಟಿದ ಮಗ ದೇವರ ಪಾದ ಸೇರಿದ್ದು,ಇವೆಲ್ಲವೂ ಬದುಕಿನ ಒಂದು ಭಾಗದಂತೆ ಸಹಜವಾಗಿ ಅವರು ಹೇಳಿ ಮುಗಿಸಿದರೂ ನನ್ನನ್ನು ತೀವ್ರವಾಗಿ ತಟ್ಟಿದವು, ಕಣ್ಣಾಲಿಗಳು ಒದ್ದೆಯಾದವು. ಕೊನೆಗೆ ಅವರು ನಿವೃತ್ತಿಯಾದ ದಿನ ಅವರ ಮನೆಯವರೆಲ್ಲ ಕಛೇರಿಗೆ ಬಂದದ್ದು, ಅದರಲ್ಲೂ ಅವರ ಮಡದಿ ಮೊದಲ ಭಾರಿಗೆ ಅವರ ಕಛೇರಿಯ ಕೊಠಡಿಯ ಒಳಗೆ ಅಡಿಯಿಟ್ಟದ್ದು ತಿಳಿದಾಗ ಅಚ್ಚರಿಯಾಗುತ್ತದೆ, ಜತೆಗೆ ಗೌರವವೂ ಇಮ್ಮಡಿಯಾಗುತ್ತದೆ. ನಂತರ ಕಛೇರಿಯ ಕಾರು ಕಳಿಸುತ್ತೇನೆಂದರೂ ಒಪ್ಪದೆ ತಮ್ಮದೇ ಕಾರಿನಲ್ಲೇ ಅವರು ಮನೆಗೆ ತೆರಳುತ್ತಾರೆ. ಇಂತಹ ಹಲವು ವಿವರಗಳು ಸಣ್ಣ ಸಂಗತಿಗಳಂತೆ ಕಂಡರೂ ಅವೆಷ್ಟು ಉದ್ಧಾತ ಗುಣಗಳು ಅನ್ನುವುದನ್ನ ತೋರಿಸಿ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಇವೆಲ್ಲವೂ ಅನುಕರಣೀಯ. ವೃತ್ತಿ ಬದುಕು ಯಾವುದೇ ಇರಲಿ, ತಾನು ನಂಬಿದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೆ ಬದುಕಬೇಕೆಂದರೆ ಅಳವಡಿಸಿಕೊಳ್ಳಬೇಕಾದ ಅಂಶಗಳು ಎಲ್ಲರಿಗೂ ಒಂದೇ ಎನ್ನುವುದನ್ನ ಈ ಕೃತಿ ಸಾಬೀತು ಪಡಿಸುತ್ತದೆ. ಪತ್ರಿಕಾರಂಗ ಸೇರಬೇಕಾದವರು ಮಾತ್ರ ಅಲ್ಲ ,ಎಲ್ಲರೂ ಓದಬೇಕಾದ ಪುಸ್ತಕ ಇದು.
ಸ್ಮಿತಾ ಅಮೃತರಾಜ್, ಸಂಪಾಜೆ
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.