ಒಂದು ಕಥೆಯೊಳಗೆ ಎಷ್ಟೆಲ್ಲ ಕಥೆಗಳು!


"ನಾವು ಬದುಕನ್ನು ಆ ವರ್ಷ ಪಡೆದ ಸಂಬಳ, ಮಾಡಿದ ಖರ್ಚು, ಕೊಂಡ ವಸ್ತುಗಳು, ಕಳೆದುಕೊಂಡ ವ್ಯಕ್ತಿಗಳು ಎಂಬ ಅಂತಿಮ ಘಟ್ಟಗಳ ಮೂಲಕ ದಾಖಲಿಸುತ್ತಾ ಹೋಗುತ್ತೇವೆ.‌ ಆದರೆ ಆ ಅಂತಿಮ ಘಟ್ಟವನ್ನು ತಲುಪುವಾಗಿನ ಪ್ರಯಾಣವಿತ್ತಲ್ಲ? ಅದು ಮಾತ್ರ ಎಲ್ಲೂ ದಾಖಲಾಗುವುದಿಲ್ಲ. ಆದರೆ ನಿಜದಲ್ಲಿ ನಾವು ಬದುಕುವುದೇ ಅಂಥಾ ಚಿಕ್ಕ ಚಿಕ್ಕ ಕ್ಷಣಗಳಲ್ಲಿ. ಆ ನಿಮಿಷಗಳ ನಗು, ಅಳು, ಆತಂಕ, ಸಂಭ್ರಮಗಳಲ್ಲಿ," ಎನ್ನುತ್ತಾರೆ ವಿನಾಯಕ ಅರಳಸುರಳಿ. ಅವರು ಕಾವ್ಯಾ ಕಡಮೆ ಅವರ ‘ತೊಟ್ಟು ಕ್ರಾಂತಿ’ ಕುರಿತು ಬರೆದಿರುವ ವಿಮರ್ಶೆ.

ನಮ್ಮೆಲ್ಲರ ಬದುಕಿನ ಬಹುಭಾಗ ಯಾವುದೋ ಒಂದು ಘಳಿಗೆಗಾಗಿ ಕಾಯುತ್ತ ಕಾಯುತ್ತಲೇ ಸವೆಯುತ್ತದೆ. ಕಚೇರಿ ಮುಗಿದು ಸಂಜೆಯಾಗಿ ಮನೆ ಸೇರಿದರೆ ಅಲ್ಲಿಂದ ದಿನ ಶುರು. ರಜೆಯಿರುವ ವೀಕೆಂಡ್ ಬಂದರೆ ಅದು ನಮ್ಮ ಸಮಯ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮಗನ ಫಲಿತಾಂಶ ಬಂದ ಕ್ಷಣ, ಪ್ರೀತಿ ಮಾಡಿ ಮದುವೆಯಾದ ದಿನ, ಬೆಳೆದ ಬೆಳೆಗೆ ಹಣ ದೊರೆತ ದಿನ, ಸ್ಯಾಲರಿ ಸಿಕ್ಕಿದ್ದು, ಭಡ್ತಿ ದೊರಕಿದ್ದು, ಕಾರು ಕೊಂಡಿದ್ದು.. ಹೀಗೆ ಯಾವುದೋ ಒಂದು ಬಿಂದುವನ್ನು ನಾವು ಬದುಕು ಅಂತ ನಂಬುತ್ತೇವೆ. ಅದರಲ್ಲಿ ಮಾತ್ರ ನಾವು ಬದುಕಿರುವುದು ಅಂದುಕೊಳ್ಳುತ್ತೇವೆ. ಆ ಒಂದು ಘಳಿಗೆಯ ಹೊರತಾಗಿ ಉಳಿದೆಲ್ಲ ಕ್ಷಣವೂ ಆ ಬಿಂದುವನ್ನು ತಲುಪಲೋಸುಗ ಸವೆಯುವ ಪಯಣವೇ ಎಂದು ನಂಬುತ್ತೇವೆ.

ಇವೆಲ್ಲದರ ಮಧ್ಯೆ ಸಂಜೆ ಮನೆಗೆ ಹೊರಡುವ ಮುನ್ನ ಒಂಬತ್ತು ಗಂಟೆ ಆಫೀಸಿನಲ್ಲಿ ಕೆಲಸ ಮಾಡಿದ, ಸಹೋದ್ಯೋಗಿಗಳೊಟ್ಟಿಗೆ ಹರಟಿದ, ಯಾರದೋ ಹಾಸ್ಯಕ್ಕೆ ಜೋರಾಗಿ ನಕ್ಕ, ಇನ್ಯಾರಿಗೋ ಸಹಾಯ ಮಾಡಿದ, ಮತ್ಯಾರಿಂದಲೋ ಸಹಾಯ ಮಾಡಿಸಿಕೊಂಡ, ಬಾಸಿಂದ ಬೈಸಿಕೊಂಡ, ಇನ್ಯಾರನ್ನೋ ಬೈದ, ಹೋಗುವಾಗ ದಾರಿಯಲ್ಲಿ ಚೌಕಾಶಿ ಮಾಡಿ ಮೊಳಕ್ಕೆ ಮೊವ್ವತ್ತಿದ್ದ ಮಲ್ಲಿಗೆಯನ್ನು ಇಪ್ಪತೈದಕ್ಕೆ ಕೊಂಡ ಕ್ಷಣಗಳಿರುತ್ತವೆ. ಕೂತು ಓದಲೊಲ್ಲದ ಮಗನಿಗೆ ಪೂಸಿ ಹೊಡೆದು, ಕೂರಿಸಿ, ಓದಿಸಿ, ಅವನ ಒಂದಷ್ಟು ಸಮಯವನ್ನು ಅವನಿಗೆ ಕೊಟ್ಟು, ಏನೇನೋ ಹೇಳಿ ಮುದ್ದಿಸಿದ ದಿನಗಳಿರುತ್ತವೆ. ಕಾರಿನ ಡೌನ್ ಪೇಮೆಂಟಿಗೆ ಉಳಿಸಬೇಕಾದ ಹಣಕ್ಕಾಗಿ ಮಾಡಿದ ಒದ್ದಾಟವಿರುತ್ತದೆ. ಬೆಳೆಯ ಪಕ್ಕದ ಕಳೆಯನ್ನು ಕಿತ್ತು, ಹೊಲದಂಚಿನ ಕಟ್ಟಕಡೆಯ ಗಿಡಕ್ಕೂ ನೀರು ತಾಗಿದೆಯಾ ನೋಡಿ, ಸಾಯಲು ಹೊರಟ ಸಸಿಗೊಂದಷ್ಟು ಶುಶ್ರೂಷೆ ಮಾಡಿ, ನಡು ಮಧ್ಯಾಹ್ನದ ಬಿಸಿಲಲ್ಲಿ ಮರದಡಿ ಕುಳಿತು, ಬೆಲ್ಲ ತಿಂದು, ನೀರು ಕುಡಿದು, ಮರದ ನೆರಳಲ್ಲೇ ನಿದ್ರಿಸಿದ ಘಳಿಗೆಗಳಿರುತ್ತವೆ.

ನಾವು ಬದುಕನ್ನು ಆ ವರ್ಷ ಪಡೆದ ಸಂಬಳ, ಮಾಡಿದ ಖರ್ಚು, ಕೊಂಡ ವಸ್ತುಗಳು, ಕಳೆದುಕೊಂಡ ವ್ಯಕ್ತಿಗಳು ಎಂಬ ಅಂತಿಮ ಘಟ್ಟಗಳ ಮೂಲಕ ದಾಖಲಿಸುತ್ತಾ ಹೋಗುತ್ತೇವೆ.‌ ಆದರೆ ಆ ಅಂತಿಮ ಘಟ್ಟವನ್ನು ತಲುಪುವಾಗಿನ ಪ್ರಯಾಣವಿತ್ತಲ್ಲ? ಅದು ಮಾತ್ರ ಎಲ್ಲೂ ದಾಖಲಾಗುವುದಿಲ್ಲ. ಆದರೆ ನಿಜದಲ್ಲಿ ನಾವು ಬದುಕುವುದೇ ಅಂಥಾ ಚಿಕ್ಕ ಚಿಕ್ಕ ಕ್ಷಣಗಳಲ್ಲಿ. ಆ ನಿಮಿಷಗಳ ನಗು, ಅಳು, ಆತಂಕ, ಸಂಭ್ರಮಗಳಲ್ಲಿ. ಒಂದು ಸಂಬಂಧವನ್ನು ಬೆಳೆಸುವ ಅಥವಾ ಮುಗಿಸುವ ತನಕದ ತಾಕಲಾಟಕ್ಕೆ ಆ ಬಂಧದ ಅಂತಿಮ ಫಲಿತಾಂಶವನ್ನು ಮೀರಿದ ತೂಕವಿದೆ. ಇಳಿದ ಎಲ್ಲ ನಿಲ್ದಾಣಗಳ ಹಿಂದೆ ಮುಗಿದ ಪಯಣಗಳಿವೆ. ಅಂಥಾ ನಿಮಿಷಗಳನ್ನು, ಭಾವದಲೆಗಳನ್ನು, ಏರಿಳಿತಗಳನ್ನು ಹಿಡಿದಿಟ್ಟ ಸಂಕಲನದಂತೆ ನನಗೆ 'ತೊಟ್ಟು ಕ್ರಾಂತಿ'ಯಲ್ಲಿನ ಕಥೆಗಳು ಕಂಡವು. ಇದು ಕಥೆಗಳ ಸ್ವರೂಪದ ವಿವರವಲ್ಲ. ಅವು ಹೇಳುವ ಸಂಗತಿಗಳ ಭಾವ ವಿವರಣೆಯಷ್ಟೇ.

ಕಥೆ ಹೇಳುವುದು ಒಂದು ಕಲೆ. ಕಥೆಯೊಳಗಿನ ಕಥೆಗಳನ್ನು ಕಟ್ಟಿಕೊಡುವುದು ಅದನ್ನೂ ಮೀರಿದ ಕಲೆ. ಪಾತ್ರವೊಂದು ಹೊರಳಿಕೊಂಡ ತಿರುವಿನ ಬಗ್ಗೆ ಮಾತ್ರವಲ್ಲದೆ ತಿರುವೇ ಇಲ್ಲದ ನೇರ ದಾರಿಯಲ್ಲಿ ಸಾಗುವಾಗ ಅನುಭವಿಸಿದ ಏಕಾನತೆಯನ್ನು ಕಟ್ಟಿಕೊಡುವುದು ಎಲ್ಲದಕ್ಕಿಂತ ದೊಡ್ಡ ಕಲೆ! ಅಂಥ ಎಲ್ಲ ಕಂಪನಗಳನ್ನೂ ಲೇಖಕಿ ಚಂದದ ಶೈಲಿಯಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.

- ವಿನಾಯಕ ಅರಳಸುರಳಿ

MORE FEATURES

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...

ಮೊದಲ ಹೆಜ್ಜೆಯಲ್ಲಿಯೇ ಉತ್ತಮ ಬರಹಗಾರರಾಗಿ ಬೆಳೆಯುವ ಭರವಸೆ ಕಾಣುತ್ತಿದೆ

20-09-2024 ಬೆಂಗಳೂರು

“ಈ ಪುಸ್ತಕದಲ್ಲಿ ಪರಿಸರ ಕೃತಿಗಳನ್ನು ಓದುವ ಆಸಕ್ತಿ ಇವರ ಭಾಷೆಯ ಬೆಳವಣಿಗೆಗೆ ಪೂರಕವಾಗಿದೆ. ಹಳ್ಳಿಗಾಡಿನ ಬದುಕಿನ...

ತಮ್ಮದೆ ಭಾವಾಲೋಕದಲ್ಲಿ ಪಯಣಿಸುವ ಸಾಧ್ಯತೆಗಳನ್ನು ಮಕ್ಕಳ ಕವಿತೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ; ಗುಂಡುರಾವ್

20-09-2024 ಬೆಂಗಳೂರು

"ಮಕ್ಕಳ ಸಾಹಿತ್ಯದ ಸಿದ್ಧಮಾದರಿಯಿಂದ ಬದಲಾದ ಹೊಸಮಕ್ಕಳ ಕವಿತೆಗಳನ್ನು ಬರೆದು, ಮಕ್ಕಳ ಸಾಹಿತ್ಯದಲ್ಲೂ ತ್ರಿಪದಿ ರೂಪ...