“ಬದುಕಿನ ಪಯಣದಲ್ಲಿ ಗತಿಸಿದ ಅನೇಕ ಘಟನೆಗಳು, ನೋಡಿದ, ಕೇಳಿದ, ಅಂತರಂಗವನ್ನು ತಟ್ಟಿದ ಹಲವಾರು ಸಂದರ್ಭಗಳು ಆಂತರ್ಯದಲ್ಲಿ ಭಾವನೆಗಳ ತರಂಗಗಳನ್ನು ಸೃಷ್ಟಿಸುತ್ತವೆ. ಹೀಗೆ ಮನದಲ್ಲಿ ಉದ್ಬವಿಸಿದ ನೋವು, ನಲಿವು, ಹತಾಷೆ, ದುಗುಡ ಇತ್ಯಾದಿಗಳನ್ನು ಅಕ್ಷರ ರೂಪಕ್ಕಿಳಿಸಿದಾಗ ಮನಸ್ಸು ಹಗುರಾಗುತ್ತದೆ, ನಲಿಯುತ್ತದೆ,” ಎನ್ನುತ್ತಾರೆ ಮಧುರಾ ಮೂರ್ತಿ. ಅವರು ತಮ್ಮ "ನೀರ ಮೇಲಣ ನೆರಳು" ಕವನ ಸಂಕಲನಕ್ಕೆ ಬರೆದ ಲೇಖಕರ ಮಾತು.
ಮನದಿ ಮೂಡಿದ ಭಾವ ಕಾವ್ಯ ರೂಪವ ಪಡೆಯ ಕುಣಿಯುವುದು ಆಂತರ್ಯ ಸಂತೋಷದಿಂದ
ಎಣಿಕೆಗೂ ಮೀರಿರುವ ಮೆಚ್ಚುಗೆಯ ಪಡೆದಿರಲು ತಣಿಯುವುದು ಕವಿ ಮನವು- ಮಧುರ ಮನವೆ ||
ಬದುಕಿನ ಪಯಣದಲ್ಲಿ ಗತಿಸಿದ ಅನೇಕ ಘಟನೆಗಳು, ನೋಡಿದ, ಕೇಳಿದ, ಅಂತರಂಗವನ್ನು ತಟ್ಟಿದ ಹಲವಾರು ಸಂದರ್ಭಗಳು ಆಂತರ್ಯದಲ್ಲಿ ಭಾವನೆಗಳ ತರಂಗಗಳನ್ನು ಸೃಷ್ಟಿಸುತ್ತವೆ. ಹೀಗೆ ಮನದಲ್ಲಿ ಉದ್ಬವಿಸಿದ ನೋವು, ನಲಿವು, ಹತಾಷೆ, ದುಗುಡ ಇತ್ಯಾದಿಗಳನ್ನು ಅಕ್ಷರ ರೂಪಕ್ಕಿಳಿಸಿದಾಗ ಮನಸ್ಸು ಹಗುರಾಗುತ್ತದೆ, ನಲಿಯುತ್ತದೆ.
ಕವಿತೆ ಹುಟ್ಟಲು ನಾನಾ ಕಾರಣ ಇರಬಹುದು. ಒಬ್ಬ ಕವಿಗೆ/ಕವಯಿತ್ರಿಗೆ ಬರೆಯಲು ಇಂತಹದ್ದೇ ಸಂದರ್ಭ ಬೇಕೆಂದಿಲ್ಲ. ಒಂದು ಒಣಗಿದ ಬಳ್ಳಿಯನ್ನು ಕಂಡಾಗ, ಬಂಜರು ಭೂಮಿಯನ್ನು ಕಂಡಾಗ, ಸೃಷ್ಟಿಯ ಸೌಂದರ್ಯಗಳನ್ನು ಕಂಡಾಗ, ಕೆರೆ-ತೊರೆ, ಬೆಟ್ಟ-ಗುಡ್ಡ, ಬಡತನ-ಸಿರಿತನ ಹೀಗೆ ಯಾವೊಂದು ಸಂದರ್ಭವೂ ಕವಿಯ ಹೃದಯ ತಟ್ಟಬಹುದು. ಮನದಲ್ಲಿ ಮೂಡಿದ ಭಾವಕ್ಕೆ ರೆಕ್ಕೆ ಪುಕ್ಕವ ಕಟ್ಟಿ, ಆಗಸದಲ್ಲಿ ಹಾರಿಸಿ ತೃಪ್ತಿಪಟ್ಟಂತೆ ಅದನ್ನು ಕಾವ್ಯವನ್ನಾಗಿಸಬಹುದು. ತಾನು ಬರೆದಿರುವುದೇ ಸಾಹಿತ್ಯ ಎನ್ನುವ ಧೋರಣೆ ತಳೆಯದೆ ಮೌಲ್ಯಯುತ ಸಾಹಿತ್ಯವನ್ನು, ಸಂದೇಶಗಳನ್ನು ಸಮಾಜಕ್ಕೆ ನೀಡುತ್ತ ಸಮಾಜದ ಓರೆ ಕೋರೆಗಳನ್ನು ಪ್ರತಿಬಿಂಬಿಸಲು ಪ್ರಯತ್ನಿಸುವುದು ಪ್ರತಿಯೊಬ್ಬ ಬರಹಗಾರನ ಜವಾಬ್ದಾರಿಯಾಗಬೇಕಿದೆ.
ಐದು ಆರನೇ ತರಗತಿಯಲ್ಲಿರುವಾಗಲೇ ನಾನು ನನ್ನ ತಂದೆ ಬರೆಯುತ್ತಿದ್ದ ಕವನಗಳನ್ನು ಓದಿ ನಾನೂ ಬರೆಯಬೇಕೆನಿಸಿ ನಾಲ್ಕು ಸಾಲಿನ ಕೆಲವು ಚುಟುಕುಗಳನ್ನು ರಚಿಸಿದೆ. ಅಲ್ಲಿಂದ ನನ್ನ ಬರವಣಿಗೆ ಪ್ರಾರಂಭವಾದರೂ ನನ್ನಲ್ಲಿರುವ ಈ ಕವಿತ್ವವನ್ನು ನಾನೇ ಗುರುತಿಸಿರಲಿಲ್ಲ. ಮತ್ತೆ ಕಾಲೇಜು ದಿನಗಳಲ್ಲಿ ಕೆಲವು ಕವಿತೆಗಳನ್ನು ರಚಿಸಿದೆ, ಆಗಲೂ ನನ್ನ ಮನದಿ ಚಿಗುರಿದ ಭಾವಗಳನ್ನೆಲ್ಲ ಅಕ್ಷರ ರೂಪಕ್ಕಿಳಿಸಬಹುದೆಂಬ ವಿಶ್ವಾಸ ಮೂಡದೇ ನಿರಂತರವಾಗಿ ಬರೆಯಬೇಕೆಂಬ ಭಲ ಬರಲಿಲ್ಲ. ಮದುವೆಯ ನಂತರವೂ ಕೆಲವು ಕವಿತೆಗಳನ್ನು ಬರೆದೆ. ಆಗಲೂ ನನ್ನ ಬರವಣಿಗೆಯಲ್ಲಿ ನನಗೆ ವಿಶ್ವಾಸ ಹುಟ್ಟಲಿಲ್ಲ. ಇತ್ತೀಚಿಗೆ ಐದಾರು ವರ್ಷಗಳ ಹಿಂದೆ ಕೆಲವು ಮಟ್ಯಾಪ್ ಸಾಹಿತ್ಯ ಬಳಗಗಳಿಗೆ ಸೇರಿ ನನ್ನ ಬರಹಗಳನ್ನು ಹಂಚಿಕೊಂಡಾಗ ಉತ್ತಮ ಸಾಹಿತ್ಯವೆಂದು ಹಲವರಿಂದ ಪ್ರೋತ್ಸಾಹ ದೊರೆಯಿತು. ಅಲ್ಲಿಂದ ನಿರಂತರವಾಗಿ ಬರೆಯುತ್ತ ನನ್ನ ಸಾಹಿತ್ಯದ ಪಯಣ ಪ್ರಾರಂಭವಾಯಿತು. ಕೆಲವು ಲೇಖನ, ನ್ಯಾನೋ ಕತೆಗಳ ಜೊತೆಗೆ ಚುಟುಕು, ಹನಿಗವನ, ರುಬಾಯಿ, ಹಾಯ್ಕುಗಳು, ಕವನ, ಭಾವಗೀತೆ, ಭಕ್ತಿಗೀತೆ, ದೇಶಭಕ್ತಿ ಗೀತೆ, ಶಿಶುಗೀತೆ, ಗಜಲ್, ಜೋಕಾ, ಅಬಾಬಿ, ಮುಕ್ತಕ, ಪಟ್ನದಿ ರಚನೆ ಹೀಗೆ ಪ್ರತಿನಿತ್ಯ ತಪ್ಪದೇ ಯಾವುದಾದರೊಂದು ಪ್ರಕಾರದಲ್ಲಿ ಬರೆಯುವುದು ನನ್ನ ಅಭ್ಯಾಸವಾಯ್ತು. ಇದರೆ ಪರಿಣಾಮವಾಗಿ 'ಗೋಧೂಳಿ' ಗಜಲ್ ಸಂಕಲನ ಮತ್ತು 'ಮಧುರ' ಗಜಲ್ ಸಂಕಲನ, ಛಂದೋಬದ್ಧ ಕಾವ್ಯ ಪ್ರಕಾರದಲ್ಲಿ 'ಸುಮಧುರ ಮುಕ್ತಕ' ಸಂಕಲನ, 'ಅಂತರ್ಭಾವ ಕವನ ಸಂಕಲನವನ್ನು ಓದುಗರ ಮುಂದಿಡುವಲ್ಲಿ ಯಶಸ್ವಿಯಾಗಿದ್ದೇನೆ. ಈಗ ೫ನೇ ಕೃತಿಯಾಗಿ 'ನೀರ ಮೇಲಣ ನೆರಳು' ಕವನ ಸಂಕಲನವನ್ನು ತಮ್ಮ ಮಡಿಲಲ್ಲಿರಿಸುತ್ತಿದ್ದೇನೆ.
ಮನದಲ್ಲಿ ಮೂಡಿರುವ ಭಾವಗಳನ್ನು ಅಕ್ಷರ ರೂಪಕ್ಕಿಳಿಸಲು ಪ್ರೇರಣೆಯಾದ ನನ್ನ ತಂದೆ ಶ್ರೀ ರಾಮಕೃಷ್ಣ ಹೆಗಡೆ (ಜ್ಯೋತಿಷ್ಯ ಆಚಾರ್ಯ) ಮತ್ತು ತಾಯಿ ಕುಸುಮಾ ಹೆಗಡೆಯವರ ಪಾದಾರವಿಂದಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು, ನನ್ನ ಪ್ರತಿ ಹೆಜ್ಜೆಗೂ ಬೆನ್ನೆಲುಬಾಗಿ ನನ್ನೆಲ್ಲ ಕನಸುಗಳ ನನಸಾಗಿಸುತ್ತಿರುವ ನನ್ನ ಪತಿ ಶ್ರೀ ನರಸಿಂಹಮೂರ್ತಿ ಅವರಿಗೆ ನಮನಗಳು.
ಅಮ್ಮಾ ಎಷ್ಟೊಂದು ಅರ್ಥಪೂರ್ಣವಾಗಿದೆ, ನಿನ್ನ ಬರಹದಲ್ಲಿ ನೀನಿನ್ನೂ ಬೆಳೆಯಬೇಕು, ನಿರಂತರವಾಗಿ ಬರೆಯುತ್ತಿರು, ನಿನ್ನ ಕವಿತೆಗಳನ್ನು ರೆಕಾರ್ಡಿಂಗ್ ಮಾಡಿಸು ಎಂದು ಹುರಿದುಂಬಿಸು ತಿರುವ ಪ್ರಸ್ತುತ ಪ್ರಥಮ ಪಿಯುಸಿ ಓದುತ್ತಿರುವ ನನ್ನ ಮಗಳು ಚೈತನ್ಯಾ ಭಟ್ ಮತ್ತು ಎಲ್ಲವೂ ಅರ್ಥವಾಗದಿದ್ದರೂ ಬರೆಯಲು ಪ್ರೇರೇಪಿಸುತ್ತಿರುವ ೬ನೇ ತರಗತಿಯಲ್ಲಿರುವ ನನ್ನ ಮಗ ಸಮರ್ಥ ಭಟ್ ಸಹ ನನ್ನ ಬರವಣಿಗೆಗೆ ನೀರೆರೆಯುತ್ತಿದ್ದಾರೆ ಅಂದರೆ ತಪ್ಪಾಗಲಾರದು.
- ಮಧುರಾ ಮೂರ್ತಿ
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.