Date: 11-11-2024
Location: ಬೆಂಗಳೂರು
ಅಂದಿನ ಜಂಬೂದ್ವೀಪದಲ್ಲಿದ್ದ ಶ್ರಮಣ, ಜೈನ, ಆಜೀವಕ ಮತಗಳ ಅಸ್ತಿತ್ವ, ಉತ್ಕರ್ಷ, ಸಮಸ್ತ ದೇಶ ತನ್ನ ಆಳ್ವಿಕೆಯಲ್ಲಿರಬೇಕೆಂಬ ಅಶೋಕನ ಮಹತ್ವಾಕಾಂಕ್ಷೆ, ಅವನ ಉಗ್ರ, ಶೀಘ್ರ ಕೋಪ, ಅಹಂಕಾರ, ಕೀರ್ತಿಕಾಮನೆ ಎಲ್ಲವೂ ಹುರಿಗೊಂಡು ಅಶೋಕ ಮನುಷ್ಯಸಹಜ ಅರ್ಥ, ಕಾಮಗಳಲ್ಲಿ ಸಿಲುಕಿರುವ ಚಿತ್ರಣವನ್ನಿಲ್ಲಿ ಕಾಣುತ್ತೇವೆ ಎನ್ನುತ್ತಾರೆ ಎಲ್.ವಿ. ಶಾಂತಕುಮಾರಿ. ಅವರು ಸಹನಾ ವಿಜಯಕುಮಾರ್ ಅವರ ‘ಮಾಗಧ’ ಕೃತಿಗೆ ಬರೆದ ಎರಡು ಮಾತುಗಳು.
'ಮಾಗಧ' ಕ್ರಿ.ಪೂ. ಮೂರನೆಯ ಶತಮಾನದ ಮಗಧ ಸಾಮ್ರಾಟ ಅಶೋಕ ಮೌರ್ಯನ ಆಡಳಿತ, ಅವನ ಕಾಲದ ರಾಜಕೀಯ, ಸಾಮಾಜಿಕ, ಧಾರ್ಮಿಕ ಸ್ಥಿತಿಗತಿಗಳ ಚಿತ್ರಣವುಳ್ಳ ಕಾದಂಬರಿ, ಅಶೋಕನೆಂದರೆ ಬೌದ್ಧಮತಾನುಯಾಯಿ ಎಂಬುದು ಪ್ರಚಲಿತ ನಂಬಿಕೆ. ಕಲಿಂಗಯುದ್ಧದಲ್ಲಿ ನಡೆದ ಹಿಂಸೆ, ರಕ್ತಪಾತಗಳಿಂದ ಮನನೊಂದ ಅವನು ಬೌದ್ಧಮತ ಸ್ವೀಕರಿಸಿ ಶಸ್ತ್ರ ತ್ಯಜಿಸಿದನೆಂಬುದು ಪ್ರಾಥಮಿಕ ಶಾಲಾ ಪಠ್ಯ ಪುಸ್ತಕಗಳಿಂದಲೇ ಎಲ್ಲರ ತಲೆಯಲ್ಲಿ ತುಂಬಿರುವ ಸಂಗತಿ. ಆದರೆ ಈ ಕೃತಿಯಲ್ಲಿ ನಾವು ಕಾಣುವ ಅಶೋಕ ಬೇರೆಯೇ ಆಗಿದ್ದಾನೆ.
ಅಧ್ಯಯನ ಹಾಗೂ ಸಂಶೋಧನಾತ್ಮಕ ಮನೋಧರ್ಮದವರಾದ ಲೇಖಕಿ ಶ್ರೀಮತಿ ಸಹನಾ ವಿಜಯಕುಮಾರ್ ತಮ್ಮ ಎರಡನೆಯ ಕೃತಿ 'ಕಶೀರ'ದ ಮೂಲಕವೇ ದೊಡ್ಡ ಭರವಸೆ ಮೂಡಿಸಿದ್ದರು. ಆ ಭರವಸೆ ಪುಷ್ಟಿಗೊಂಡು ಈ ನಾಲ್ಕನೆಯ ಕಾದಂಬರಿಯಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ಭಾರತೀಯ ಸಂಸ್ಕೃತಿ-ಇತಿಹಾಸಗಳ ಬಗೆಗಿನ ಸಹನಾ ಅವರ ಒಲವು, ನಿಷ್ಠೆ ಹಾಗೂ ಐತಿಹಾಸಿಕ ಸತ್ಯವನ್ನು ಬೆಳಕಿಗೆ ತರಬೇಕೆನ್ನುವ ಅವರ ಆಶಯಕ್ಕೆ ಈ ಕೃತಿ ಸಾಕ್ಷಿಯಾಗಿದೆ.
ಐತಿಹಾಸಿಕ ಕಾದಂಬರಿಗಳನ್ನು ರಚಿಸುವಾಗ ಲೇಖಕರು ಹಲವು ನಿಬಂಧನೆಗಳಿಗೆ ಒಳಗಾಗಬೇಕಾಗುತ್ತದೆ. ಶತಶತಮಾನಗಳ ಹಿಂದಿನ ಇತಿಹಾಸವನ್ನು ಚಿತ್ರಿಸುವಾಗಲಂತೂ ಕಾಲದೂರದಿಂದಾಗಿ, ತನಗೆ ದೊರೆತ ವಿವರಗಳನ್ನಾಧರಿಸಿ ಸತ್ಯಕ್ಕೆ ಅವಿರೋಧವಾಗಿ ಅಲ್ಲಿನ ಪಾತ್ರಗಳಿಗೆ ತನ್ನ ಕಲ್ಪನೆಯ ಜೀವ ತುಂಬಬೇಕಾಗುತ್ತದೆ. ಕಲ್ಪನೆಯನ್ನು ವಾಸ್ತವತೆಯ ಚೌಕಟ್ಟಿಗೆ ಮಿತಿಗೊಳಿಸಬೇಕಾಗುತ್ತದೆ. ಇಂತಹುದೇ ಕ್ಲಿಷ್ಟ ಸಂದರ್ಭವನ್ನಾಯ್ದುಕೊಂಡಿರುವ ಸಹನಾ ಅಶೋಕನನ್ನು ಚಿತ್ರಿಸಲು ಸ್ವತಃ ಅವನೇ ಬರೆಸಿದ ಹಾಗೂ ಇತರ ರಾಜರ ಶಿಲಾಲೇಖಗಳನ್ನು ಆಧರಿಸಿದ್ದಾರೆ. ಮೊದಲಿನಿಂದ ಪ್ರಚಲಿತವಿರುವ, ಅಶೋಕನು ಬೌದ್ಧ ಮತಾವಲಂಬಿಯಾದನೆಂಬ ಅಭಿಪ್ರಾಯದ ಸಂಕೋಲೆಯಿಂದ ಬಿಡಿಸಿಕೊಂಡು, ಅವನ ಧರ್ಮ ಚಾಣಕ್ಯನ ಅರ್ಥಶಾಸ್ತ್ರದಿಂದ ಪ್ರೇರಿತವಾದದ್ದು ಎನ್ನುವುದನ್ನು ಹಲವಾರು ಗ್ರಂಥ ಗಳ ಅಧ್ಯಯನ, ವಿಸ್ತ್ರತ ಕ್ಷೇತ್ರಕಾರ್ಯದ ಮೂಲಕ ಕಂಡುಕೊಂಡಿದ್ದಾರೆ. ತಮ್ಮ ಕಲ್ಪನೆ, ಪ್ರತಿಭೆಗಳ ಮೆರುಗಿನಿಂದ ಅಶೋಕನ ವ್ಯಕ್ತಿತ್ವವನ್ನು ನಮಗೂ ಕಾಣಿಸಿದ್ದಾರೆ. ತನ್ನ ಆಳ್ವಿಕೆಯ ೨೭ ವರ್ಷಗಳ ಕಾಲ ಯವನರಿಗೆ ಜಂಬೂದ್ವೀಪ ಪ್ರವೇಶವನ್ನು ಅಸಾಧ್ಯವಾಗಿಸಿದ್ದ ಅಶೋಕ ನಿಜವಾಗಿ ಕ್ಷಾತ್ರವನ್ನು ತ್ಯಜಿಸಿದ್ದನೇ ಎಂಬ ಪ್ರಶ್ನೆ ನಮ್ಮಲ್ಲೂ ಮೂಡುವಂತೆ ಮಾಡಿದ್ದಾರೆ. ಕೃತಿಯಲ್ಲಿ ಅಶೋಕನ ಕಥಾನಕ ಕಲಿಂಗಯುದ್ಧದೊಂದಿಗೇ ಸಮಾಪ್ತ ವಾಗುತ್ತದಾದರೂ ಅವನ ಮುಂದಿನ ಆಲೋಚನೆ, ಹೆಜ್ಜೆಗಳ ಸ್ಪಷ್ಟ ಸುಳಿವು ಸಿಗುವಂತೆ ರೂಪಿಸಿರುವ ಇತಿವೃತ್ತ ಸ್ವಾರಸ್ಯಕರವಾಗಿದೆ.
ಈ ಕೃತಿಯಲ್ಲಿ ಅಶೋಕನನ್ನು ಪ್ರಭಾವಿಸುವ ಮೂರು ಬಲವಾದ ಎಳೆಗಳನ್ನು ಕಾಣುತ್ತೇವೆ. ಮೊದಲನೆಯದು, ಅರ್ಥಶಾಸ್ತ್ರ ಪಂಡಿತರಾದ ಮಗಧದ ಮಹಾಮಾತ್ಯ ರುದ್ರದೇವರದು. ಓಜಸ್ವೀ ವ್ಯಕ್ತಿತ್ವದವರಾದ ಅವರು ಅಶೋಕನಂತಹ ಮದಗಜಕ್ಕೆ ಅಂಕುಶ ಹಾಕಬಲ್ಲ ಸಮರ್ಥರು. ಎರಡನೆಯದು, ತಮ್ಮ ಚಾತುರ್ಯದಿಂದ ಅಶೋಕನನ್ನು ಬೌದ್ಧಮತದೆಡೆ ಸೆಳೆದುಕೊಳ್ಳಲೆತ್ನಿಸುವ ವೈಶಾಲಿಯ ಮಹಾನಾಯಕರು. ಮೂರನೆಯದು, ಅತ್ತಲೋ ಇತ್ತಲೋ ಎಂದು ಹೊಯ್ದಾಡುವ ಅಶೋಕನ ಅಂತರಂಗ.
ಅಂದಿನ ಜಂಬೂದ್ವೀಪದಲ್ಲಿದ್ದ ಶ್ರಮಣ, ಜೈನ, ಆಜೀವಕ ಮತಗಳ ಅಸ್ತಿತ್ವ, ಉತ್ಕರ್ಷ, ಸಮಸ್ತ ದೇಶ ತನ್ನ ಆಳ್ವಿಕೆಯಲ್ಲಿರಬೇಕೆಂಬ ಅಶೋಕನ ಮಹತ್ವಾಕಾಂಕ್ಷೆ, ಅವನ ಉಗ್ರ, ಶೀಘ್ರ ಕೋಪ, ಅಹಂಕಾರ, ಕೀರ್ತಿಕಾಮನೆ ಎಲ್ಲವೂ ಹುರಿಗೊಂಡು ಅಶೋಕ ಮನುಷ್ಯಸಹಜ ಅರ್ಥ, ಕಾಮಗಳಲ್ಲಿ ಸಿಲುಕಿರುವ ಚಿತ್ರಣವನ್ನಿಲ್ಲಿ ಕಾಣುತ್ತೇವೆ. ಅಶೋಕನ ರಾಣೀವಾಸದ ವಿವರಗಳು, ಅವನ ತಾಯಿಯ ಪಾತ್ರ, ಅಂಗರಕ್ಷಕಿಯರು, ಇವುಗಳೊಡನೆ ಅಲೆಕ್ಸಾಂಡರನ ದಂಡಯಾತ್ರೆಯ ನಂತರ ಭಾರತದ ರಾಜಕೀಯ ಪರಿಸ್ಥಿತಿ, ಮೌರ್ಯ-ಯವನರ ಸಂಬಂಧಗಳೆಲ್ಲ ಈ ಕಥಾನಕದ ವಿಶಾಲ ಭಿತ್ತಿಯಲ್ಲಿ ಅಡಕ ಗೊಂಡಿವೆ.
ಕಥಾನಕದ ಈ ಬೃಹತ್ ಭಿತ್ತಿ ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಪಾಟಲೀ ಪುತ್ರ, ದಕ್ಷಿಣತೋಸಲಿ, ದಂತಪುರ ಹಾಗೂ ಉತ್ತರತೋಸಲಿ ಎಂಬುದಾಗಿ ಈ ವಿಭಾಗ ಗಳು ಪ್ರತ್ಯೇಕವಾಗಿ ಮುಂದುವರೆದು ಕಥೆಯ ವಿಭಿನ್ನ ಎಳೆಗಳು ಬಿಚ್ಚಿಕೊಂಡು ಮತ್ತೆ ಸೇರಿ ಒಂದಕ್ಕೊಂದು ಪೂರಕವಾಗುತ್ತವೆ. ಶಿಲಾಶಾಸನ ಬರೆಸುವ ಪ್ರೇರಣೆ ಅಶೋಕನಿಗೆ ಮೂಡಿದ್ದು ಪರ್ಷಿಯಾದ ರಾಜ ಧಾರಯದ್ವಸುವಿನ ಉದಾಹರಣೆಯಿಂದ ಹಾಗೂ ಅಶೋಕ ರೂಪಿಸಿದ ನಿಯಮಗಳು ಪರ್ಷಿಯನ್ ವಿಚಾರ ಹಾಗೂ ಭಾರತೀಯ ದರ್ಶನ ಗಳನ್ನು ಒಳಗೊಂಡಿದ್ದವೆಂಬುದನ್ನೂ ಸಹನಾ ತಿಳಿಸುತ್ತಾರೆ.
ಪಾಟಲೀಪುತ್ರದಲ್ಲಿ ನಡೆಯುವ ಅಶೋಕನ ಕಥೆ ಆಪ್ತವಾಗುವಂತೆಯೇ ಕಲಿಂಗದ ರಾಜ ಗುಣಕೀರ್ತಿ ಹಾಗೂ ಅವನ ಪತ್ನಿ ಸ್ವಯಂಪ್ರಭೆಯ ಅನುರೂಪ ದಾಂಪತ್ಯ, ಜಿನ ಮುನಿ ಶಾಂತಿಸಾಗರರ ಚಿತ್ರಣವನ್ನೊಳಗೊಂಡ ದಕ್ಷಿಣತೋಸಲಿಯ ಕಥೆಯೂ ಆಪ್ಯಾಯಮಾನವೆನಿಸುತ್ತದೆ. ಬೌದ್ಧ ಸ್ಥಳವಾದ ದಂತಪುರದಲ್ಲಿ ಕಾಣಿಸಿರುವ ಭಿಕ್ಖು- ಭಿಕ್ಷುಣಿ ವಿಹಾರಗಳು, ಅವುಗಳ ಪಾತ್ರ ಸಂದರ್ಭಗಳು ವಿಶಿಷ್ಟವಾಗಿದ್ದು ಭಾವನಿರ್ಭರವಾಗಿವೆ. ಅಂತೆಯೇ ಉತ್ತರತೋಸಲಿಯ ಕಥಾನಕವೂ ರೋಚಕವಾಗಿದೆ. ಒಟ್ಟಾರೆ ಕೃತಿಯ ಪಾತ್ರ, ಸನ್ನಿವೇಶಗಳು ಸತ್ಯಪೂರ್ಣತೆಯಿಂದ, ಮಾನವೀಯ ಭಾವನೆಗಳನ್ನೊಳಗೊಂಡು ಮನೋಜ್ಞವಾಗಿ ಮೂಡಿಬಂದಿವೆ. ಯುದ್ಧಪ್ರಸಂಗದ ವರ್ಣನೆಗಳು ಕಣ್ಣಿಗೆ ಕಟ್ಟುವಂತಿವೆ. ಕಾದಂಬರಿಯ ಅಂತಿಮ ಸನ್ನಿವೇಶದಲ್ಲಿ ಅಶೋಕನ ವರ್ತನೆ ಅವನ ಸ್ವಭಾವಕ್ಕೆ ಹಿಡಿದ ಕನ್ನಡಿಯಂತಿದೆ.
ಪ್ರಚಲಿತ ಇತಿಹಾಸದಲ್ಲಿ ಕಂಡುಬರದ ವಾಸ್ತವಗಳನ್ನು ಅನೇಕ ಶಿಲಾಶಾಸನ ಮತ್ತು ಅಧಿಕೃತ ಗ್ರಂಥಗಳ ಸಹಾಯದಿಂದ ಕಂಡರಿಸಿ ಅಶೋಕ ಚಕ್ರವರ್ತಿಯ ಬಗೆಗಿರುವ ಅಭಿಪ್ರಾಯಗಳ ಸತ್ಯಾಸತ್ಯತೆಯೆಡೆ ಬೆಳಕು ಚೆಲ್ಲಲು ಯತ್ನಿಸಿರುವ ಸಹನಾ ಅವರ ಈ ಬೃಹತ್ ಪ್ರಯತ್ನಕ್ಕೆ ಹಾರ್ದಿಕ ಅಭಿನಂದನೆಗಳು. ಅವರ ಲೇಖನ ಹಾಗೂ ಸೃಷ್ಟಿಶೀಲ ಮನಸ್ಸು ಹೀಗೇ ಕಾರ್ಯೋನ್ಮುಖವಾಗಿದ್ದು ಕನ್ನಡ ಸಾಹಿತ್ಯಕ್ಕೆ ವೈವಿಧ್ಯಪೂರ್ಣ, ಸಂಕೀರ್ಣ ಕಥಾವಸ್ತುಗಳ ಇನ್ನಷ್ಟು ರಸಘಟ್ಟಿಗಳನ್ನು ನೀಡಲೆಂದು ಹಾರೈಸುತ್ತೇನೆ.
- ಎಲ್.ವಿ. ಶಾಂತಕುಮಾರಿ
“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...
“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...
“ಭೂತಾಯಿಯ ಹೊರತಾಗಿ ಬಂದ ಕವನಗಳನ್ನೆಲ್ಲಾ ಸೇರಿಸಿ ಪ್ರತ್ಯೇಕವಾದ ಒಂದು ಕವನ ಸಂಕಲನವನ್ನು ಹೊರ ತರುವ ಆಲೋಚನೆ ಮನಸ್...
©2024 Book Brahma Private Limited.