ನನಗೆ ಅನಿಸಿದ ಪ್ರಕಾರ ಬರವಣಿಗೆ ಒಂದು ಕನಸು


“ಈಗಾಗಲೇ ಹೇಳಿದ ಹಾಗೆ ನನ್ನ ಸಾಹಿತ್ಯ ಕೃಷಿಯ ಬೀಜಾಂಕುರವಾದದ್ದು ಹಾಗೂ ನನ್ನ ಇಂಗ್ಲಿಷ್ ಭಾಷಾ ಬೋಧಕ ವೃತ್ತಿಗೆ ಭದ್ರತೆ ನೀಡಿ ಆಶ್ರಯ ಒದಗಿಸಿದ್ದು ಹುನಗುಂದ ನಗರ ಎನ್ನುತ್ತಾರೆ”, ಡಾ. ಶ್ರೀಶೈಲ ಗೋಲಗೊಂಡ ಅವರು ತಮ್ಮ “ಅನೇಕಾರ್ಥ” ಕೃತಿಗೆ ಬರೆದ ನನ್ನುಡಿ.

ಹನ್ನೊಂದು ವಿಮರ್ಶಾ ಲೇಖನಗಳನ್ನೊಳಗೊಂಡ 'ಅನೇಕಾರ್ಥ' ಪುಸ್ತಕ ಹೊರಬರಲು ಹಿರಿಯ ಮತ್ತು ಕಿರಿಯ ಸಾಹಿತಿ ಮಿತ್ರರ ಸಹಕಾರದಿಂದ, ನನ್ನ ಕೆಲವು ಲೇಖನಗಳನ್ನು ಪ್ರಕಟಿಸಬೇಕೆಂಬ ಯೋಚನೆಯಲ್ಲಿದ್ದಾಗ, ಹುನಗುಂದ ಹಿರಿಯ ಸಾಹಿತಿಗಳಲ್ಲೊಬ್ಬರಾದ ಎಗ್ಗೆ ಕೊನೆಸಾಗರ ಅವರು ವಿಮರ್ಶಾ ಲೇಖನಗಳನ್ನು ಬಿಡಿಯಾಗಿ ಹೊರತರುವುದು ಲೇಸೆಂಬ ಅವರ ಮೌಲ್ವಿಕ ಸಲಹೆಯೂ ಈ ಸಂಕಲನದ ಪ್ರಕಟಣೆಯ ಹಿಂದಿದೆ. ಈಗಾಗಲೇ ಕೆಲವು ನನ್ನ ವಿಮರ್ಶಾ ಲೇಖನಗಳು ಬೇರೆ ಬೇರೆ ಗ್ರಂಥಗಳಲ್ಲಿ ಪ್ರಕಟಗೊಂಡಿದ್ದವು. ಅವುಗಳೊಂದಿಗೆ ಇನ್ನಷ್ಟು ಲೇಖನ ಗಳನ್ನು ಬರೆದು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂಬ ಚಿಂತನೆಯಲ್ಲಿದ್ದಾಗ ದೇಶದಲ್ಲಿ ಕರೊನಾ ಹೆಮ್ಮಾರಿಯ ಪ್ರವೇಶದಿಂದ ಸರ್ಕಾರ ಮುನ್ನೆಚ್ಚರಿಕೆಯ ಕ್ರಮದಿಂದ ಲಾಕ್‌ಡೌನ್ ಘೋಷಿಸಿತು. ಈ ಸಮಯವನ್ನು ಬರವಣಿಗೆಗೆ ಮೀಸಲಾಗಿರಿಸಿದೆ. ಪುಸ್ತಕ ವಿಮರ್ಶೆ ಬರೆಯಲು ತೊಡಗಿಕೊಂಡಾಗ ನನ್ನ ಇಂಗ್ಲಿಷ್ ಮತ್ತು ಕನ್ನಡ ವಿಮರ್ಶಾ ಓದು ಸಾಕಾಗುವುದಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದ್ದು ಇದೆ. ವಿಮರ್ಶಾಲೋಕದ ದಿಗ್ಗಜರೂ ನನ್ನ ವಿದ್ಯಾಗುರುಗಳೂ ಆಗಿದ್ದ ಡಾ.ಕೀರ್ತಿನಾಥ ಕುರ್ತಕೋಟಿ, ಡಾ.ಗಿರಡ್ಡಿ ಗೋವಿಂದರಾಜ ಹಾಗೂ ಇನ್ನಿತರ ವಿಮರ್ಶಕರಾದ ಡಾ.ಜಿ.ಎಸ್.ಆಮೂರ, ಎಚ್.ಎಸ್.ಶ್ರೀಮತಿ ಮುಂತಾದವರ ವಿಮರ್ಶಾ ಲೇಖನ ಗಳನ್ನು ಓದತೊಡಗಿದೆ. ನನ್ನ ಮೇಲಾದ ಅವರ ವಿಮರ್ಶಾ ಪ್ರಭಾವಳಿಗೆ ಋಣ ಬದ್ಧನಾಗಿದ್ದೇನೆ. ಓದಿದ ಪಾಂಡಿತ್ಯಕ್ಕಿಂತಲೂ ಸಾಹಿತ್ಯ ಕೃತಿಯ ಆತ್ಮೀಯ ಪ್ರವೇಶ ಹಾಗೂ ವಿಮರ್ಶೆಯ ಸಂವೇದನಾಶೀಲತೆ ವಿಮರ್ಶೆಯಲ್ಲಿ ಅತ್ಯಗತ್ಯ ಎನ್ನುವುದನ್ನು ಮನಗಂಡೆ. ಬರೆಯುವುದು ಮೊದಲು ಸ್ವಲ್ಪ ಕಷ್ಟವೆನಿಸಿದರೂ, ಇತ್ತಿತ್ತಲಾಗಿ ಆ ಕಾರ್ಯಕ್ಕೆ ಮನಸ್ಸು ಮತ್ತು ಶರೀರದ ಸಹಕಾರವನ್ನು ಹೊಂದಿಸಿಕೊಳ್ಳುತ್ತಲಿದ್ದೇನೆ. ಗುರಿ ಇಟ್ಟುಕೊಂಡು ಸೀಮಿತ ಅವಧಿಯಲ್ಲಿ ಲೇಖನ ಬರೆಯಲಾಗುತ್ತಿಲ್ಲ ಎಂಬ ಕೊರಗು ಇದ್ದೇ ಇದೆ. ಬರವಣಿಗೆಯನ್ನು ಕೆಲವೊಮ್ಮೆ ಮುಂದಕ್ಕೆ ಹಾಕುವ ಕಾರಣ ಲೇಖನವನ್ನು ಆದಷ್ಟು ಮಟ್ಟಿಗೆ ಶಿಸ್ತಿಗೆ ಒಳಪಡಿಸಿ ಬರೆಯಬೇಕೆನ್ನು ವುದೇ ಆಗಿದೆ. ಆದರೂ ಲೇಖನ ಬರೆದು ಮುಗಿಸಿದಾಗ ಮನಸಿನ ಎಲ್ಲೋ ಒಂದು ಮೂಲೆಯಲ್ಲಿ ಅತೃಪ್ತಿ ಉಳಿದೇ ಬಿಡುತ್ತದೆ.

ನಾನೇಕೆ ಬರೆಯಬೇಕು? ಎನ್ನುವ ಪ್ರಶ್ನೆ ಅನೇಕ ಲೇಖಕರನ್ನು ಕಾಡಿದಂತೆ ನನಗೂ ಕಾಡಿದೆ. ಉತ್ತರವಾಗಿ ಬೇರೆ ಬೇರೆ ವಿಚಾರ ಶ್ರೇಷ್ಠರ ತತ್ವಗಳನ್ನೂ ಆಧರಿಸಿ ಉತ್ತರಿಸಲಾರೆ. ನನಗೆ ಅನಿಸಿದ ಪ್ರಕಾರ ಬರವಣಿಗೆ ಒಂದು ಕನಸು. ಇಂಥ ಕನಸು ಕಾಣುತ್ತ ನನ್ನ ಜೀವನದ ಬಹುಭಾಗವನ್ನು ಹುನುಗುಂದದಲ್ಲಿ ಕಳೆದಿದ್ದೇನೆ. ಬಹುತೇಕ ಇಲ್ಲಿಯ ಜನರು ಕೃಷಿಕರಾಗಿದ್ದಾರೆ. ಅವರಿಗೆ ಮುಖ್ಯವಾಗಿ ಎರಡು ಹಸಿವೆಗಳಿವೆ. ಒಂದು ಅನ್ನ, ಇನ್ನೊಂದು ವಿದ್ಯೆ. ಮೊದಲನೆಯದನ್ನು ನಾನು ಕೊಡಲಾರೆ. ಏಕೆಂದರೆ ಅದನ್ನೇ ಹುಡುಕಿಕೊಂಡು ನಾನು ಈ ಊರಿಗೆ ಬಂದವನು. ಇಲ್ಲಿ ೨೮ ವರ್ಷಗಳ ಕಾಲ ಇಂಗ್ಲಿಷ್ ವಿದ್ಯೆ ವಿದ್ಯಾರ್ಥಿಗಳಿಗೆ ನೀಡಿದ ತೃಪ್ತಿಯಂತೂ ಇದ್ದೆ ಇದೆ. ನನ್ನ ತೃಪ್ತಿಗೆ ಇನ್ನೊಂದು ಕಾರಣವೂ ಇದೆ. ಇಲ್ಲಿ ಸಾಹಿತ್ಯದ ಭೋರ್ಗರತೆ ವಿದೆ. ಇದಕ್ಕೆ ಕಾರಣರಾದವರು ಪ್ರೊ.ಎಂ.ವಿ.ಹಿರೇಮಠ, ದಿ ಕೆ.ಬಿ.ಕುಲಕರ್ಣಿ, ಪ್ರೊ.ಎನ್.ಎಚ್.ಹಿರೇಮಠ, ಪ್ರೊ.ಎಸ್.ಬಿ.ದೊಡಮನಿ, ಪ್ರೊ.ಶಕುಂತಲಾ ಹಿಪ್ಪರಗಿ, ಪ್ರೊ.ಮಹೇಶ ತಿಪ್ಪಶೆಟ್ಟಿ, ಶ್ರೀ ಎಸ್ಥೆ ಕೊನೆಸಾಗರ, ಸಿದ್ದಲಿಂಗಪ್ಪ ಬೀಳಗಿ, ಡಾ.ನಾಗರಾಜ ನಾಡಗೌಡ, ಶ್ರೀಮತಿ ಲಲಿತಾ ಹೊಸಪ್ಯಾಟಿ, ಶ್ರೀ ಎ.ಓ.ಬಿರಾದಾರ, ಡಾ.ಎಂ.ಬಿ.ಒಂಟಿ, ಪ್ರೊ.ಎಸ್.ಎಸ್.ಮುಡಪಲದಿನ್ನಿ ಮತ್ತು ಇತರರು. ಇವರೆಲ್ಲರನ್ನು ಪಕ್ಕದಲ್ಲಿಟ್ಟುಕೊಂಡು ನಾನು ಮೌನವಾಗಿರಲು ಸಾಧ್ಯವಾಗದೇ ಬರೆಯುತ್ತಿದ್ದೇನೆ. ಈ ಸಂದರ್ಭದಲ್ಲಿ "ನಮ್ಮ ಹೃದಯಲ್ಲಿ ಒಂದು ಕಡಲು ಇರುವಾಗ ಒಂದೇ ಒಂದು ಶಬ್ದವೂ ಪ್ರಳಯದ ಮಹಾಪೂರವಾಗಬಲ್ಲದು"ಎಂದು ಅಮೆರಿಕದ ಖ್ಯಾತ ಕವಿಯತ್ರಿ ಎಮಿಲಿ ಡಿಕಿನ್ಸನ್ ಬರೆದುದು ನೆನಪಾಗುತ್ತಿದೆ. ಹೀಗೆ ನನ್ನ ಸೃಜನ ಹಾಗೂ ಸೃಜನೇತರ ಬರವಣಿಗೆ ಹುಟ್ಟಿಕೊಂಡಿರುವುದು ನನ್ನೊಳಗಿನ ಕನಸಿನ ಕಡಲಿನಿಂದ. ಹೀಗೆ ಮೂಡಿಬಂದ ಈ ಕೃತಿಯಲ್ಲಿ ನಾಟಕ, ಕಾದಂಬರಿ, ಕಾವ್ಯ, ಕಥಾ ಸಂಕಲನಗಳ ಮೇಲೆ ಮೊದಲ ಪ್ರಯತ್ನದ ವಿಮರ್ಶಾ ಬರಹಗಳಿವೆ.

ಈಗಾಗಲೇ ಹೇಳಿದ ಹಾಗೆ ನನ್ನ ಸಾಹಿತ್ಯ ಕೃಷಿಯ ಬೀಜಾಂಕುರವಾದದ್ದು ಹಾಗೂ ನನ್ನ ಇಂಗ್ಲಿಷ್ ಭಾಷಾ ಬೋಧಕ ವೃತ್ತಿಗೆ ಭದ್ರತೆ ನೀಡಿ ಆಶ್ರಯ ಒದಗಿಸಿದ್ದು ಹುನಗುಂದ ನಗರ. ಅದರಲ್ಲೂ ವಿಶೇಷವಾಗಿ ವಿಜಯ ಮಹಾಂತೇಶ ಕೃಪಾ ಪೋಷಿತ ಸಂಗಯ್ಯ ರಾಚಯ್ಯ ವಸ್ತದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ. ಈ ಘನ ವಿದ್ಯಾ ಸಂಸ್ಥೆಯ ಕ್ರಿಯಾಶೀಲ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣನವರು ಸಿ.ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಶ್ರೀ ಬಿ.ಎಂ.ಹೊಕ್ರಾಣಿಯವರು, ಆಡಳಿತಮಂಡಳಿಯ ನಿರ್ದೇಶಕರು, ಸರ್ವಸದಸ್ಯರು ಹಾಗೂ ಪ್ರಾಚಾರ್ಯರಾದ ಶ್ರೀಮತಿ ಎಸ್.ಕೆ.ಮಠ ಇವರೆಲ್ಲರ ಪ್ರೋತ್ಸಾಹಕ್ಕೆ ನನ್ನ ಅನಂತ ನಮನಗಳು.

ಈ ಸಂಕಲನದಲ್ಲಿರುವ ಕೆಲವು ಲೇಖನಗಳು ಈಗಾಗಲೇ ಸಂಗಮ ಹೊನಲು, ಸಂಗಮ ಸಾಹಿತ್ಯ ಸಂಭ್ರಮ-೨೦೧೮, ತೂಕದ ನೆಲೆ, ಶೋಧದ ನೆಲೆ ಸಂಪಾದನಾ ಗ್ರಂಥಗಳು, ಲೋಕದರ್ಶನ ದಿನಪತ್ರಿಕೆ, ಪ್ರಜಾದೀವಿಗೆ, ಮಾಸಪತ್ರಿಕೆ, ಸ್ಪಂದನ ಕಾಲೇಜು ಮ್ಯಾಗಝಿನ್, ಎಸ್.ವಿ.ಎಂ.ಮಹಿಳಾ ಮಹಾವಿದ್ಯಾಲಯ, ಇಲಕಲ್ ೧೯೯೮ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈಗ ಈ ಲೇಖನಗಳು ಪತ್ರಿಕೆಗಳ ಹಾಗೂ ಆ ಗ್ರಂಥಗಳ ಸಂಪಾದಕರ ಸೊತ್ತಾಗಿವೆ. ಅವುಗಳನ್ನು ನನ್ನ ಪುಸ್ತಕದಲ್ಲಿ ಪ್ರಕಟಿಸಿಕೊಳ್ಳಲು ಆತ್ಮೀಯತೆಯಿಂದ ಅನುಮತಿ ನೀಡಿದ್ದಾರೆ. ಆದ್ದರಿಂದ ಅವರಿಗೆ ನನ್ನ ಹೃತ್ತೂರ್ವಕ ಧನ್ಯವಾದಗಳು. ಹೆಸರಾಂತ ಇಂಗ್ಲಿಷ್ ಪ್ರಾಧ್ಯಾಪಕ, ಕತೆಗಾರ ಹಾಗೂ ವಿಮರ್ಶಕ ನನ್ನ ಆಪ್ತಮಿತ್ರ ಡಾ.ಬಸವರಾಜ ಡೋಣೂರ, ಡೀನ್ ಮಾನವಿಕ ಮತ್ತು ಭಾಷಾ ನಿಕಾಯ, ನಿರ್ದೇಶಕರು, ಅಧ್ಯಯನಾಂಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ನನ್ನ ಬರಹಗಳನ್ನು ಓದಿ ಪ್ರೇರಣೆ ನೀಡುತ್ತ ವಿಶ್ಲೇಷಣಾತ್ಮಕ ಮುನ್ನುಡಿ ಬರೆದಿದ್ದಾರೆ. ಕನ್ನಡದ ಮಹತ್ವದ ಕವಿಯಾಗಿ ರೂಪುಗೊಂಡ ಹಾಗೂ ಕತೆಗಾರರಾಗಿಯೂ ಸಜ್ಜುಗೊಂಡ ಶ್ರೀ ಎಸ್ಕೆ ಕೊನೆಸಾಗರ ಅವರು 'ನಿಮ್ಮ ಬರವಣಿಗೆ ಎಲ್ಲಿಗೆ ಬಂತು?' ಎಂದು ಆತ್ಮೀಯತೆಯಿಂದ ಮಾತನಾಡಿಸುತ್ತ ನನ್ನ ಲೇಖನಗಳ ಹಸ್ತಪ್ರತಿಗಳನ್ನು ತಿದ್ದಿ, ಬಹಳ ವಿಶ್ವಾಸದಿಂದ ಬೆನ್ನುಡಿ ಬರೆದುಕೊಟ್ಟಿದ್ದಾರೆ ಇವರೀರ್ವರಿಗೂ ನಾನು ಋಣಿಯಾಗಿದ್ದೇನೆ.

ತಮ್ಮ ಬುದ್ದಿಗೆ ತೋಚಿ ಬರೆದದ್ದನ್ನು ನಮ್ಮ ಇಂಗ್ಲಿಷ್ ಪ್ರಾಧ್ಯಾಪಕರುಗಳೊಂದಿಗೆ ಹಂಚಿಕೊಳ್ಳುವ ಅಪರೂಪದ ವಿನೂತನ ಪ್ರಯೋಗಕ್ಕೆ ಹಾಗೂ ಜ್ಞಾನದ ವಿಸ್ತಾರಕ್ಕೆ ವೇದಿಕೆ ಒದಗಿಸಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕರ ಫೋರಮ್ಗದ ಸಕಲ ಪದಾಧಿಕಾರಿಗಳಿಗೆ ನನ್ನ ಪಿಎಚ್.ಡಿ.ಮಾರ್ಗದರ್ಶಕರಾಗಿದ್ದ ಡಾ.ಮಲ್ಲಿಕಾರ್ಜುನ ಪಾಟೀಲರಿಗೆ ನನ್ನ ಸಾಹಿತ್ಯ ಸನ್ನಿತ್ರರಾದ ಡಾ.ವಿಜಯ ನಾಗಣ್ಣವರ ಡಾ.ರಮೇಶ ರಾಠೋಡ, ಡಾ.ಎಸ್.ಎ.ಬಾಲೋಜ, ಡಾ.ಎಂ.ಎಂ.ಹುರುಳಿ, ಪ್ರೊ.ಎಸ್.ಎಂ. ಕುರುಬರ, ಡಾ.ಎಸ್.ಬಿ.ಬಿರಾದರ, ಪ್ರೊ.ಬಿ.ಮುರುಳೀಧರ, ಪ್ರೊ.ಪಿ.ಎಸ್.ತೋಳನೂರ, ಪ್ರೊ.ವಿ.ಆರ್.ಪಾಟೀಲ ಮುಂತಾದ ನನ್ನ ಉಳಿದ ಎಲ್ಲ ಇಂಗ್ಲಿಷ್ ಪ್ರಾಧ್ಯಾಪಕ ಮಿತ್ರರಿಗೆ ತುಂಬು ಹೃದಯದ ಕೃತಜ್ಞತೆಗಳು.

ನನ್ನ ಲೇಖನಗಳ ಬಗ್ಗೆ ಅಭಿಪ್ರಾಯ, ಸಲಹೆ, ಸೂಚನೆ ನೀಡಿದ ಬಿ.ಬಿ.ಕಡ್ಲಿ, ಶ್ರೀಧರ ಗೌಡರ, ವೀರೇಶ ಕುರ್ತಕೋಟಿ, ಎಚ್.ಎಸ್.ಬೋಳಿಶೆಟ್ಟರ, ಡಾ.ತಿಪ್ಪೇಸ್ವಾಮಿ ಡಿ.ಎಸ್., ಜಗದೀಶ ಹಾದಿಮನಿ, ಎಂ.ಡಿ.ಚಿತ್ತರಗಿ, ರವಿ ಹಾದಿಮನಿ, ಎಸ್.ಆರ್. ನಾಗಣ್ಣವರ, ಎಸ್.ಬಿ. ಚಳಿಗೇರಿ, ಎಸ್.ಎಸ್.ದರಗದ, ನವೀನ ಪಾಟೀಲ, ವಿನೋದ ಕುಲಕರ್ಣಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತೇಶ ಹಳ್ಳೂರ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಎಸ್.ಜಿ.ಕೋಟಿ, ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಯ ಎಲ್ಲ ಪದಾಧಿಕಾರಿಗಳಿಗೂ, ಹೊಸ ಸಾಹಿತ್ಯ ವೇದಿಕೆಯ ಸರ್ವ ಸದಸ್ಯರಿಗೂ ಹಾಗೂ ನನ್ನ ಉಳಿದ ಸಹೋದ್ಯೋಗಿ ಪ್ರಾಧ್ಯಾಪಕ ಮಿತ್ರ ಬಳಗಕ್ಕೂ ನನ್ನ ಅನಂತ ಕೃತಜ್ಞತೆಗಳು.

ನನ್ನ ಲೇಖನಗಳನ್ನು ತನ್ನದೇ ಆದ ಬೇರೆ ಶೈಲಿಯಲ್ಲಿ ವಿಮರ್ಶಕ ಬುದ್ಧಿಯಿಂದ ಓದಿ ಪ್ರೋತ್ಸಾಹಿಸುತ್ತಿರುವ ಪತ್ನಿ ಜಯಶ್ರೀ, 'ದ್ಯಾಮ ಯಮ್ನವ್ವ ಮತ್ತು ಇತರೆ ಕಥೆಗಳು' ಎಂಬ ನನ್ನ ಪ್ರಥಮ ಕಥಾ ಸಂಕಲನವನ್ನು ತನ್ನೆಲ್ಲ ಮಿತ್ರರು ಬಹಳ ಆಸಕ್ತಿಯಿಂದ ಓದಿ ಅಭಿಪ್ರಾಯ ತಿಳಿಸಿದರೆಂದು ಹೇಳಿ ನನ್ನೊಳಗಿನ ಬರಹಗಳನ್ನು ಜಾಗೃತಗೊಳಿಸುತ್ತ ಪ್ರೀತಿ ತೋರಿಸಿದ ಮಗ ವಿನಾಯಕ(ರುದ್ರಪ್ಪ), ಆಗೊಮ್ಮೆ ಈಗೊಮ್ಮೆ ನನ್ನ ಲೇಖನಗಳನ್ನು ಓದುತ್ತಾ ಹರ್ಷ ವ್ಯಕ್ತಪಡಿಸಿದ ಮಗಳು ಸಹನಾ ಇವರೆಲ್ಲರ ಅಪರಿಮಿತ ಪ್ರೀತಿಗೆ ಕೊನೆ ಉಂಟೆ? ಸಹೋದರರಾದ ಲೋಕಪ್ಪ, ಮಡಿವಾಳಪ್ಪ, ಮಾವಂದಿರಾದ ಶ್ರೀಶೈಲ ಸಿಂದಗಿ, ಶ್ರೀಶೈಲ ಬಿಷ್ಟಗೊಂಡ, ಫಕೀರಪ್ಪ ತಿಮ್ಮಾಪೂರ, ಸಹೋದರಿಯರಾದ ಶಾಂತಕ್ಕ, ರೇಣುಕಾ, ಬೋರಮ್ಮ ಹಾಗೂ ಅಳಿಯಂದಿರು ಇವರೆಲ್ಲರಿಗೂ ನನ್ನ ಬದುಕಿನ ಶಕ್ತಿಗಳು ಅವರು ಎಲ್ಲಿಯೋ ಕೂತು ನನಗೆ ತೋರಿಸುತ್ತಿರುವ ಪ್ರೀತಿ, ಅನುರಾಗ, ಅಂತಃಕರಣ, ಪ್ರೋತ್ಸಾಹ ತೋರುತ್ತಿರುವುದಕ್ಕಾಗಿ ಅವರಿಗೆ ನನ್ನ ಅನಂತ ವಂದನೆಗಳು.

- ಡಾ.ಶ್ರೀಶೈಲ ಗೋಲಗೊಂಡ

MORE FEATURES

ಬೇಸರವನ್ನೋಡಿಸುವ ತಾಕತ್ತಿನ ‘ಬೇಸೂರ್’

22-11-2024 ಬೆಂಗಳೂರು

"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...

ಅನನ್ಯ ಆತ್ಮ ಸಾಂಗತ್ಯದ ಸ್ಪೂರ್ತಿ ಚೇತ‌ನವೇ ಈ ಕವಿತೆಗಳು...

22-11-2024 ಬೆಂಗಳೂರು

"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದ...

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...