ನಮ್ಮದು ಥಿಯೇಟರ್ ಕಾಲ, ನಮ್ಮ ಬಾಲ್ಯದಲ್ಲಿ ಟೆಂಟ್ ಇರಲಿಲ್ಲ..


 

"ಇಂದಿನ ಮಕ್ಕಳ ಬಾಲ್ಯ ರಂಗಾಗಿಲ್ಲ ಅಂದರೆ ಬಹುಶಃ ಫೋನು ಬಹಳ ದೊಡ್ಡ ಪರಿಣಾಮ ಖಂಡಿತ ಬೀರಿದೆ. ಇಂದಿನ ಮಕ್ಕಳಿಗೆ ಹೊರಗೆ ಹೋಗಿ ಮಕ್ಕಳ ಜೊತೆಗೂಡಿ ಆಟವಾಡೋ ಅಭ್ಯಾಸವೇ ಇಲ್ಲ. ಬಹುಮುಖ್ಯವಾಗಿ ಇಂದಿನ ಮಕ್ಕಳು ಜನರ ಜೊತೆ ಬೇರೆಯೋದೇ ಕಮ್ಮಿ ಆಗಿಬಿಟ್ಟಿದೆ," ಎನ್ನುತ್ತಾರೆ ಕಿರಣ್ ಪಿ. ಕೌಶಿಕ್. ಅವರು ಮಂಜುನಾಥ್ ಕುಣಿಗಲ್ ಅವರ ‘ಶಿವಾಜಿ ಟೆಂಟ್’ ಕಥಾ ಸಂಕಲನ ಕುರಿತು ಬರೆದಿರುವ ವಿಮರ್ಶೆ.

ಯಾರೇ ಆಗಲಿ, ತಮ್ಮ ಬಾಲ್ಯವನ್ನು ನೆನದರೆ ಮುಖದಲ್ಲಿ ನಗು ಗೊತ್ತಿಲ್ಲದಂತೆ ಮೂಡುತ್ತದೆ. ಯಾಕೆ? ಅಂತ ನಮ್ಮನ್ನ ನಾವು ಪ್ರಶ್ನಿಸಿಕೊಂಡಾಗ ಉತ್ತರವಾಗಿ ಸಿಗೋದು ನಾವುಗಳು ಕಳೆದ ಅಮೃತ ನೆನಪುಗಳು.

ಇದು ಎ.ಐ ಯುಗ, ಈಗಿನ ಮಕ್ಕಳಿಗೆ ಹುಟ್ಟಿನ ದಿನದಿಂದಲೇ ಫೋನು ಕೈಗೆ ಸಿಕ್ಕಿಬಿಟ್ಟಿದೆ. ಮಕ್ಕಳು ಊಟ ಮಾಡುತ್ತಿಲ್ಲ ಅಂದಾಗ ಅವರ ಪೋಷಕರು ಕೈಗೆ ಫೋನು ಕೊಟ್ಟು ಊಟ ಮಾಡಿಸುವಾಗ “ಅಯ್ಯೋ ಇದೆಂತಾ ಸಾವು” ಅನ್ಸತ್ತೆ.

2000 ನಂತರವೇ ನಾನು ಹುಟ್ಟಿದ್ದರು, ನಮ್ಮ ಬಾಲ್ಯ ಅದ್ಭುತವಾಗೇ ಇತ್ತು. ಫೋನು ಅಂತಾ ಇದ್ದಿದ್ದು ಅಪ್ಪನ ಕೀಪ್ಯಾಡ್ ಸೆಟ್ ಮಾತ್ರ!!! ನಾನು ಹೈಸ್ಕೂಲಿಗೆ ಬರುವವರೆಗೂ ಟಚ್ ಸ್ಕ್ರೀನ್ ಬಂದಿರಲಿಲ್ಲ. ನನಗೆ ಅಂತ ನನ್ನ ಸ್ವಂತ ಫೋನ್ ಸಿಕ್ಕಿದ್ದು ಪಿಯುಸಿ ನಂತರವೇ!!!!

ಇಂದಿನ ಮಕ್ಕಳ ಬಾಲ್ಯ ರಂಗಾಗಿಲ್ಲ ಅಂದರೆ ಬಹುಶಃ ಫೋನು ಬಹಳ ದೊಡ್ಡ ಪರಿಣಾಮ ಖಂಡಿತ ಬೀರಿದೆ. ಇಂದಿನ ಮಕ್ಕಳಿಗೆ ಹೊರಗೆ ಹೋಗಿ ಮಕ್ಕಳ ಜೊತೆಗೂಡಿ ಆಟವಾಡೋ ಅಭ್ಯಾಸವೇ ಇಲ್ಲ. ಬಹುಮುಖ್ಯವಾಗಿ ಇಂದಿನ ಮಕ್ಕಳು ಜನರ ಜೊತೆ ಬೇರೆಯೋದೇ ಕಮ್ಮಿ ಆಗಿಬಿಟ್ಟಿದೆ.

ನಾವು ಹೊರಗೆ ಹೋಗಿ ಸ್ನೇಹಿತರ ಜೊತೆಗೂಡಿ ಕ್ರಿಕೆಟ್ ಆಡುತ್ತಿದ್ದಿದ್ದು, WWF ಕಾರ್ಡುಗಳು, ಟಿಕ್ಕಿ, ಗ್ರೀಟಿಂಗ್ ಗಳ ಆಟ, ಗೋಲಿ, ಚೂಚೆಂಡು, ರಾಮ ಭೀಮ ಸೋಮ ಇದುನೆಲ್ಲ ನೆನದರೇ ಆ ದಿನಗಳೇ ಎಷ್ಟು ಅದ್ಭುತವಾಗಿತ್ತು ಅನ್ಸತ್ತೆ.

ಇಂಥದ್ದೇ ನೆನಪುಗಳನ್ನು ಮರುಕಳಿಸಿದ್ದು ಮಂಜುನಾಥ್ ಕುಣಿಗಲ್ ಸರ್ ಬರೆದಿರುವ ಶಿವಾಜಿ ಟೆಂಟ್ ಪುಸ್ತಕ ಓದಿದ ಬಳಿಕ.

ಅವರ ಚೊಚ್ಚಲ ಅಫ್ಘನ್ ಯುದ್ಧಭೂಮಿಯ ಅನುಭವಕಥನ “ಕುಣಿಗಲ್ ಟು ಕಂದಹಾರ್” ಪುಸ್ತಕ ಓದಿದ ನಂತರ ಅವರದ್ದೇ ಚೊಚ್ಚಲ ಕಥಾ ಸಂಕಲನ ಈ “ಶಿವಾಜಿಟೆಂಟ್” ಓದಿದರೆ ಇವರೇನಾ ಅವರು? ಅನ್ಸಿದ್ದು ಸುಳಲ್ಲ. ಅವರ ಮೊದಲ ಕಥಾ ಸಂಕಲನದಲ್ಲಿ ಅವರ ಬಾಲ್ಯದ್ದೇ ಕಥೆಗಳನ್ನ, ಅವರ ಊರಲ್ಲಿ, ಬೀದಿಯಲ್ಲಿ ರೂಪುಗೊಂಡ ಕೆಲವು ಪ್ರಸಂಗಗಳನ್ನ ಕಥಾ ಚೌಕಟ್ಟಿಗೆ ಏನೇನು ಬೇಕೋ ಅದನ್ನ ಬಳಿಸಿಕೊಂಡು, ಕಥೆಗಳಲ್ಲಿ ಅವರೇ ಪಾತ್ರವಾಗಿ ಓದುಗರಿಗೆ ರಸದೌತಣವನ್ನು ಬಡಿಸಿದ್ದಾರೆ.

ಮಂಜುನಾಥ್ ಸರ್ ಅವರದ್ದು ಮಿಲೇನಿಯಂ ಜನರೇಷನ್ ಆದರೆ ನಮ್ಮದು Z ಜನರೇಷನ್, ಇವರ ಬಾಲ್ಯಕ್ಕೂ ನಮ್ಮ ಬಾಲ್ಯಕ್ಕೂ ಬಹಳ ವ್ಯತ್ಯಾಸವಿದ್ದರೂ ಒಂದಷ್ಟು ಸಾಮ್ಯತೆ ಕೂಡ ಇದ್ದೇ ಇದೆ. ಈ ಕಥಾಸಂಕಲನದಲ್ಲಿ ಅವರ ಬಾಲ್ಯದ ಹತ್ತು ಕಥೆಗಳು ಇದ್ದು ಅದನೆಲ್ಲವೂ ಓದಿದಾಗ ಓದುಗರಿಗೆ ನಿಜವಾಗಿಯೂ ಹೀಗೂ ನಡೆದಿತ್ತಾ ಅನ್ನೋಹಾಗೆ ಆಶ್ಚರ್ಯ ಉಂಟಾಗೋದಂತೂ ಖಂಡಿತ.

ನಮ್ಮದು ಥಿಯೇಟರ್ ಕಾಲ, ನಮ್ಮ ಬಾಲ್ಯದಲ್ಲಿ ಟೆಂಟ್ ಇರಲಿಲ್ಲ. ಶಾಲೆಗೆ ಬಸ್ಸಿನಲ್ಲಿ ಹೋಗುವಾಗ ಮೈಸೂರಿನ ಕುಂಬಾರಕೊಪ್ಪಲಿನ ಬಳಿ ಸುಜಾತ ಟೆಂಟ್ ಹೊರಗಿನಿಂದ ನೋಡಿದ ನೆನಪಿದೆ ಹಾಗೆಯೇ ಹೆಬ್ಬಾಳಿನ ಮಹದೇಶ್ವರ ಟೆಂಟ್ ಈಗಲೂ ಚಾಲ್ತಿಯಲ್ಲಿದೆ. ಬೋಗಾದಿಯ ಮಾರುತಿ ಟೆಂಟ್ ಕೂಡ ಮೈಸೂರಿನ ಪ್ರಖ್ಯಾತ ಟೆಂಟ್ ಗಳು. ಆದ್ರೆ ನಾನ್ಯಾವುದೂ ಟೆಂಟ್ನಲ್ಲಿ ಸಿನೆಮಾ ನೋಡಿಲ್ಲ, ಎಲ್ಲವೂ ಥಿಯೇಟರ್ ನಲ್ಲೇ ನೋಡಿರೋದು, ಕಥಾಸಂಕಲನದ ಮೊದಲ ಶಿವಾಜಿ ಟೆಂಟ್ ಕಥೆ ಓದಿದಾಗ, ಶಾಲೆಯ ದಿನಗಳಲ್ಲಿ ಶಾಲೆಗೆ ರಜೆ ಹಾಕಿ ಸಿನೆಮಾ ನೋಡಿದ್ದು, ಅಪ್ಪನ ಬಳಿ ಸಿಕ್ಕಿಹಾಕಿಕೊಂಡಿದ್ದು ಎಲ್ಲವೂ ನೆನಪಾಗತ್ತೆ. ಮರಿಮಲ್ಲಪ್ಪ ಶಾಲೆಯಲ್ಲಿ ಓದಿದ ನಾನು ಸಿನೆಮಾದಲ್ಲಿ ಅತೀ ಹೆಚ್ಚು ಆಸಕ್ತಿ ಮೂಡಿಸಿದ್ದು ಹತ್ತಿರದಲ್ಲೇ ಇದ್ದ ಶಾಂತಲ, ಗಾಯತ್ರಿ, ಲಕ್ಷ್ಮಿ ಚಿತ್ರಮಂದಿರಗಳು. ಆ ಮೂರು ಚಿತ್ರಮಂದಿರಗಳಲ್ಲಿ ಈಗ ಕೇವಲ ಗಾಯತ್ರಿ ಮಾತ್ರ ಉಳಿದಿರೋದು. ಮತ್ತೆರಡು ನೆಲಸಮವಾಗಿಬಿಟ್ಟಿದೆ. ಆ ದಿನಗಳಲ್ಲಿ ಸಿನೆಮಾ ಹುಚ್ಚು ಹಿಡಿಸಿದ ಗೆಳೆಯ Vishwas G ಅನ್ನೂ ಮರೆಯೋಹಾಗಿಲ್ಲ.

ಹೈಸ್ಕೂಲ್ ದಿನಗಳಲ್ಲಿ ಎಲ್ಲರಿಗೂ ಭಯಬೀಳಿಸೋ ಗಣಿತ, ಎಷ್ಟೇ ಪಾಠ ಮಾಡಿದರು ಅರ್ಥವಾಗದ ಪ್ರಾಂಬ್ಲಂ ಗಳು. ನಾವು ಬೈಕೊಳ್ಳುತ್ತಿದ್ದ ಗಣಿತ ಮಾಸ್ಟರ್ ಅನ್ನು ಒಂದು ಕಥೆ ನೆನಪಿಸುತ್ತದೆ. ಹಾಗೆಯೇ ಇನ್ನೊಂದು ಕಥೆಯಲ್ಲಿ ನಮ್ಮ ಬಾಲ್ಯದಿನಗಳಲ್ಲಿ ಅಕ್ಕಪಕ್ಕದ ಮನೆಯಲ್ಲಿ ಕಂಡ ಜನರ ಹಾಗೂ ಪ್ರಾಣಿಪಕ್ಷಿಗಳ ಪ್ರೀತಿಯ ಬಾಂಧವ್ಯವನ್ನು ಕಂಡು ಆಶ್ಚರ್ಯ ಪಡುತ್ತಿದ್ದ ದಿನಗಳನ್ನೂ ಸಹ ನಮ್ಮ ಬಾಲ್ಯವನ್ನು ನೆನಪಿಸುತ್ತದೆ.

ಇನ್ನೂ ಪಾಳ್ಮನೆ ರಾಣಿ ಅನ್ನೋ ಕಥೆ ಓದಿದಾಗ “ಯಪ್ಪಾ… ದೇವ್ರೇ ಮನುಷ್ರು ಹೀಗೂ ಇರ್ತರಾ ಅನ್ಸತ್ತೆ” ಒಬ್ಬ ಮಾನಸಿಕ ಅಸ್ವಸ್ಥೆಯು ಗರ್ಭಿಣಿಯಾಗೋ ಕಥೆಯಿದು. ಅದನ್ನು ಅದ್ಭುತವಾಗಿ ನಿರೂಪಿಸೋ ರೀತಿ ಎಲ್ಲರನ್ನೂ ಅಚ್ಚರಿಗೊಳಿಸೋದಂತು ಪಕ್ಕಾ!!!

ಸೂರಿ ಸಾಮಾನು ಕಥೆಯು ಬಹಳ ಹಾಸ್ಯಭರಿತವಾಗಿದ್ದು ಪಡ್ಡೆಹುಡುಗರ, ಹಳ್ಳಿ ಹಾಗೂ ಸಣ್ಣಪುಟ್ಟ ಪಟ್ಟಣಗಳಲ್ಲಿ ಬೆಳೆದ ಹುಡುಗರಿಗೆ ಅತೀ ಹತ್ತಿರ ಅನ್ನಿಸುತ್ತದೆ.

ಗಣಪತಿ ಬಪ್ಪಾ ಮೋರೆಯ ಕಥೆಯು ಮಕ್ಕಳ ಉತ್ಸಾಹ, ಅವರಿಗೆ ಆಗೋ ನಿರಾಸೆ ಎಲ್ಲವೂ ಓದುಗನಿಗೆ ಮನಮುಟ್ಟುತ್ತದೆ. ಇನ್ನುಳಿದಂತೆ ಹೆಡ್ ಮಾಸ್ಟರ್ ಮರಿಭಟ್ರು ಕಥೆಯಲ್ಲಿ ಒಬ್ಬ ಪ್ರಾಮಾಣಿಕ ಮೇಷ್ಟ್ರು ಹೇಗಿರ್ತಾರೆ, ಒಂದು ಊರಿಗೆ ಶಾಲೆಯನ್ನು ತರಲು ಆ ವ್ಯಕ್ತಿ ಶ್ರಮಪಡೋ ರೀತಿ ನಿಜಕ್ಕೂ ಅದ್ಭುತ ಅನಿಸುತ್ತದೆ.

ಮತ್ತುಳಿದ ಹನುಮನ ಕಿಚ್ಚು, ನವೀದನ ಕುದುರೆ ಸವಾರಿ, ಕಲಾವಿದನ ದುಡ್ಡು ಕಥೆಗಳು ಮಂಜುನಾಥ್ ಸರ್ ಅವರ ಬಾಲ್ಯ ಇಷ್ಟೊಂದು ವರ್ಣಮಯವಾಗಿತ್ತಾ. ಅಬ್ಬಾ…!!! ಅನ್ನಿಸುತ್ತದೆ. ಒಟ್ಟಾರೆಯಾಗಿ ಎಲ್ಲಾ ಕಥೆಗಳು ಪ್ರತಿಯೊಬ್ಬ ಓದುಗರಿಗೆ ಒಂದೊಳ್ಳೆ ಓದಾಗುತ್ತದೆ. ಎಲ್ಲಾ ಹತ್ತು ಕಥೆಗಳು ಓದಿದ ಬಳಿಕ ಗಣಪನ ಗುಂಗಲ್ಲಿ ನೀವು ಮತ್ತೊಂದು ವಾರ ಇರಬಹುದು.

 

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...