ಕೆಂಡದಗಿರಿಯ ಮೇಲೆ ಅರಗಿನ ಕಂಬ..


"ಮಾತು, ಮೌನಗಳ ಅನುಭವದಲ್ಲಿನ ಈ ಹುಡುಕಾಟವು ಪ್ರಪಂಚದ ಚರಾಚರಗಳೊಂದಿಗೆ ಒಂದು ಆತ್ಮೀಯತೆಯನ್ನು ಏರ್ಪಡಿಸುತ್ತಲೇ ಇದೆ. ಇದನ್ನು ’ಅಧ್ಯಾತ್ಮ’ ಎನ್ನಬಹುದೇನೋ ತಿಳಿಯದು. ಆದರೆ ನಾನು ಹಾಗೆ ಭಾವಿಸುತ್ತೇನೆ. ಈ ಅಧ್ಯಾತ್ಮವು ದೇವರು, ಧರ್ಮದ ಹಂಗಿನದ್ದಲ್ಲ, ಅದು ಸೃಷ್ಟಿ ಮತ್ತು ಪ್ರೀತಿಯದ್ದು. ಇಲ್ಲಿ ಆಸ್ತಿಕ-ನಾಸ್ತಿಕ ವಿಚಾರಗಳು ಬರುವುದೇ ಇಲ್ಲ," ಎನ್ನುತ್ತಾರೆ ಕವಿ ರಾಜೇಂದ್ರ ಪ್ರಸಾದ್. ಅವರು ತಮ್ಮ ‘ಉಲುಹಿನ ವೃಕ್ಷದ ನೆಳಲು’ ಕೃತಿಗೆ ಬರೆದ ಕವಿಯ ನುಡಿ ನಿಮ್ಮ ಓದಿಗಾಗಿ...

ಮಾತು ಅಥವಾ ಮೌನ ಮೇಲುನೋಟಕ್ಕೆ ಅವು ಹೇಗೆ ಗೋಚರಿಸುತ್ತವೋ ಹಾಗೆ ಒಳನೋಟದಲ್ಲಿ ಖಂಡಿತಾ ಇಲ್ಲ ಎಂಬುದು ಬದುಕಿನ ಹಲವು ಸನ್ನಿವೇಶಗಳಲಿ ನಮ್ಮ ಅರಿವಿಗೆ ಬರುತ್ತಲೇ ಇರುತ್ತವೆ. ಹಾಗೆಯೆ ಒಬ್ಬ ಸೃಜನಶೀಲನಲ್ಲಿ ಕೂಡ. ಇವುಗಳ ಹರಿವು ಮತ್ತು ಹರವು, ವೇಗವೂ ವಿಶಾಲವೂ ಆಗಿ ಸ್ಪಷ್ಟವಾಗೋ ಅಸ್ಪಷ್ಟವಾಗೋ ಅವನ ಕಲಾ ಪ್ರಜ್ಞೆಯ ಕಾರಣವಾಗಿ; ದೇಶಕಾಲಗಳಿಗೆ ಅನುಗುಣವಾಗಿ ಮಾರ್ಪಡುತ್ತಾ ಕ್ರಿಯಾಶೀಲವಾಗಿರುತ್ತದೆ ಎಂದು ನಾನು ಅರಿತುಕೊಂಡಿದ್ದೇನೆ. ಸೃಜನಶೀಲನ ಪ್ರಜ್ಞೆ ಮತ್ತು ಆಲೋಚನೆಗಳ ಕ್ರಿಯಾಶೀಲತೆಯ ಬಹುಮುಖ್ಯ ಲಕ್ಷಣ ಒಂದಲ್ಲ ಒಂದು ಹುಡುಕಾಟದಲ್ಲಿ ನಿರತವಾಗಿರುವುದು.

“You must understand the whole of life, not just one little part of it. That is why you must read, that is why you must look at the skies, that is why you must sing, and dance, and write poems, and suffer, and understand, for all that is life.” - Jiddu Krishnamurti

ಜಿಡ್ಡು ಅವರ ಈ ಮಾತುಗಳನ್ನು ಓದುವ ಮೊದಲಿಗೆ ಇದೆಲ್ಲವನ್ನು ಸ್ವಾನುಭವದಿಂದ ನೋಡಿದ್ದರಿಂದ ಅದರ ಅರ್ಥವಿಸ್ತಾರ ಹೆಚ್ಚು ನನಗೆ ಸಾಧ್ಯವಾಯಿತೇನೊ! ಆದರೆ ಈ ಮಾತನ್ನು ಪ್ರತಿಯೊಬ್ಬ ಸಹೃದಯನೂ ನೆನಪಿಲ್ಲಿಟ್ಟುಕೊಳ್ಳಬೇಕಾದ್ದು. ಬದುಕು ಎಂದರೆ ’ಸಂಪಾದನೆ ಮತ್ತು ಸಂಸಾರ’ ಎಂಬ ಲೋಕರೂಢಿಗೆ ಸಿಲುಕಿ ದಿನವೂ ಒದ್ದಾಡುತ್ತಿರುವ ನಮಗೆ ಹಾಡು, ಕುಣಿತ, ಕವಿತೆ ಕಡೆಗೆ ಸಂಕಟ, ನರಳಾಟ ಕೂಡ ಬದುಕು ಎಂದು ಅರ್ಥವಾಗುವುದೇ ಇಲ್ಲ. ನಮಗೆ ಬದುಕು ಎಂದರೆ ’ಸದಾ ಸುಖವಾಗಿರುವುದು’ ಎಂದಷ್ಟೇ ಅರ್ಥ. ಆದರೆ ಆ ಸುಖ ಯಾವುದು? ಅದು ಸಾಧ್ಯವೇ? ಆ ರೀತಿಯ ಬದುಕನ್ನು ನಾವು ನಿರೀಕ್ಷಿಸಬಹುದೇ? ಎಂಬ ಪ್ರಶ್ನೆಗಳನ್ನು ಕೇಳಿಕೊಂಡರೆ, ವಾಸ್ತವವು ಹಾಗೆ ಇಲ್ಲ. ಹಾಗಾಗಲು ಸಾಧ್ಯವೂ ಇಲ್ಲ.

ಕಠಿಣವಾದ ವರ್ತಮಾನದಲ್ಲಿ ಬದುಕುತ್ತಿರುವ ನಮಗೆ ‘ಸುಖ’ ಎಂಬುದೊಂದು ಪ್ರಲೋಭನೆ ಅಷ್ಟೇ. ಎಲ್ಲ ದುರಿತ, ದುಃಖ, ತಕರಾರು, ಸಮಾಧಾನಗಳ ನಡುವೆ ಒಂದಷ್ಟು ಮಾತು-ಮೌನಗಳಿವೆ, ಅವು ನಮ್ಮನ್ನು ರೂಪಿಸುತ್ತಿವೆ. ಇವುಗಳನ್ನು ಅರ್ಥ ಮಾಡಿಕೊಳ್ಳುವುದೇ ಬದುಕು. ಅದನ್ನೇ ಜಿಡ್ಡು ಕೃಷ್ಣಮೂರ್ತಿ ಸಂಪೂರ್ಣ ಬದುಕು ಎನ್ನುತ್ತಾರೆ. ನಾವು ಭಾಗಶಃ ಬದುಕಿನ ಸದಾ ಚಿಂತಿತರಾಗಿರುತ್ತೇವೆ.

ಮಾತು, ಮೌನಗಳ ಅನುಭವದಲ್ಲಿನ ಈ ಹುಡುಕಾಟವು ಪ್ರಪಂಚದ ಚರಾಚರಗಳೊಂದಿಗೆ ಒಂದು ಆತ್ಮೀಯತೆಯನ್ನು ಏರ್ಪಡಿಸುತ್ತಲೇ ಇದೆ. ಇದನ್ನು ’ಅಧ್ಯಾತ್ಮ’ ಎನ್ನಬಹುದೇನೋ ತಿಳಿಯದು. ಆದರೆ ನಾನು ಹಾಗೆ ಭಾವಿಸುತ್ತೇನೆ. ಈ ಅಧ್ಯಾತ್ಮವು ದೇವರು, ಧರ್ಮದ ಹಂಗಿನದ್ದಲ್ಲ, ಅದು ಸೃಷ್ಟಿ ಮತ್ತು ಪ್ರೀತಿಯದ್ದು. ಇಲ್ಲಿ ಆಸ್ತಿಕ-ನಾಸ್ತಿಕ ವಿಚಾರಗಳು ಬರುವುದೇ ಇಲ್ಲ. ಒಮ್ಮೆ ಇದರಲ್ಲಿ ಅನುರಕ್ತರಾಗಿಬಿಟ್ಟರೆ ಸಾಕು ವಸ್ತು, ವಿಷಯ, ವ್ಯಕ್ತಿ, ರುಚಿ, ಬಣ್ಣ, ಸ್ವರ, ಸ್ಥಳ, ಸಂಚಾರ ಎಲ್ಲದರೊಂದಿಗೆ ಒಡನಾಟ, ಬಾಂಧವ್ಯ ಸಿದ್ದಿಸಿಬಿಡತ್ತೆ. ವಾಸ್ತವಕ್ಕೆ ಪರ್ಯಾಯವಾದ ಆದರ್ಶ ಸ್ಥಿತಿ ನಿರ್ಮಾಣವಾಗುತ್ತದೆ. ಸೃಜನಶೀಲನು ಕೆಲವು ವೇಳೆ ಇಂತಹ ಸ್ಥಿತಿಯಲ್ಲಿಯೇ ಬಹಳಕಾಲ ಉಳಿದು ಬಿಡುತ್ತಾನೆ, ಇವುಗಳಿಂದ ಏಕಾಏಕಿ ದೂರಾಗುವುದು ಸಾಧ್ಯವಿಲ್ಲ. ಈ ಒಡನಾಟವು ಒಂದು ಬಗೆಯ ಒಲುಮೆ. ಯಾವಾಗ ವಾಸ್ತವ, ವರ್ತಮಾನಗಳು ಈ ಆದರ್ಶ ಸ್ಥಿತಿಯ ಬಲೂನಿಗೆ ತಾಗುತ್ತವೋ ಅವಾಗ ಬಿಡಿಸಿಕೊಳ್ಳಲಾರದ ಜುಲುಮೆಯಲ್ಲಿ ವಿಷಣ್ಣರಾಗಿ ಬಿಡುತ್ತಾನೆ. ಇಂತಹ ಆದರ್ಶ ಕಲ್ಪನೆ ಮತ್ತು ವಾಸ್ತವಗಳ ನಡುವಿನ ವಿಷಣ್ಣತೆ ಬರೆಸಿದ ನೂರಾರು ಪದ್ಯಗಳು ಈ ಸಂಕಲನದಲ್ಲಿವೆ, ಅವುಗಳನ್ನು ಓದುವಾಗ ಏನಾದ್ರು ಎಳೆ ನಿಮಗೆ ಸಿಗಬಹುದು.

ವಿಷಣ್ಣತೆಯ ಸ್ವರೂಪ ಚೂರು ಸಂಕೀರ್ಣವಾದುದು. ಅದು ಬಣ್ಣವು ಬಟ್ಟೆಯ ಮೇಲೆ ಬಿದ್ದು ಹರಡಿಕೊಳ್ಳುವಂತೆ ಬದುಕಿನಲ್ಲಿ ಹರಡಿಕೊಂಡಿರುತ್ತದೆ. ಹಾಗೆಯೆ ಒಣಗಿಹೋಗುತ್ತದೆ ಕೂಡ. ಅದರ ಕಲೆ ಮಾತ್ರ ಉಳಿದುಬಿಡುತ್ತದೆ, ಕೆಲವೊಮ್ಮೆ ಅದು ಹಸಿಯಾಗಿ ತೊಟ್ಟ ಮೈಗೆ ಖಿನ್ನತೆಯ ವ್ರಣವಾಗಿ ಅಂಟಿಕೊಳ್ಳುತ್ತದೆ. ನಂಬುಗೆ, ವಿಶ್ವಾಸ, ಒಲುಮೆ, ಅಂತಃಕರಣಗಳು ಇಲ್ಲಿ ಹೆಚ್ಚು ಸಂಪರ್ಕಕ್ಕೆ ಬರುವ ಅಂಶಗಳು. ಇವು ಯಾವಾಗ ಸ್ನೇಹದಲ್ಲಿ, ಸಂಬಂಧದಲ್ಲಿ, ಸಮಾಜದಲ್ಲಿ ಘಾಸಿಗೆ ಒಳಗಾಗುತ್ತವೋ ಅವಾಗ ವಿಷಣ್ಣತೆ ಇಂಚಿಂಚಾಗಿ ಹರಡಿಕೊಳ್ಳಲು ಶುರುವಾಗುತ್ತದೆ. ಅದು ನಮ್ಮ ಉತ್ಸಾಹ, ಹುಮ್ಮಸ್ಸು, ಆರೋಗ್ಯಗಳನ್ನು ಹೀರಿಕೊಳ್ಳುವ ಜಿಗಣೆಯಾಗಿ ಮಾರ್ಪಡುತ್ತದೆ. ಸೃಜನಶೀಲನಿಗೆ ಈ ವ್ರಣರೂಪಿ ಜಿಗಣೆಗಳ ಅಂಟಿಕೊಂಡುವೆಂದರೆ ಅದು ಅವನ ಕಲೆಯ ಮಾತ್ರವಲ್ಲ ಬದುಕಿನ ಪ್ರಶ್ನೆ ಕೂಡ ಆಗುತ್ತದೆ. ಅದನ್ನು ಎದುರಿಸಲು ಬಗೆಬಗೆಯ ಹತಾರಗಳನ್ನು ಸಿದ್ದಪಡಿಸಿಕೊಳ್ಳಬೇಕು, ಬಹುಮುಖ್ಯವಾಗಿ ಅದನ್ನು ಕಲೆಯಾಗಿ ಮಾರ್ಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಇಲ್ಲವಾದರೆ ಅದೊಂದು ಬಗೆಯ ಸಾವು, ರೂಪಕಗಳ ಸಾವು, ಪದಗಳ ಸಾವು, ಪದ್ಯಗಳ ಸಾವು. ಇದನ್ನು ಜಯಿಸುವುದರಲ್ಲಿಯೇ ಒಬ್ಬ ಸೃಜನಶೀಲನ ಯಶಸ್ಸು ಇರುವುದು ಮತ್ತು ಬಹುತೇಕ ಎಲ್ಲ ಬಗೆಯ ಸೃಜನಶೀಲರು ತಮ್ಮ ಬದುಕಿನಲ್ಲಿ ಇಂತಹ ಹಲವು ಸಾವುಗಳನ್ನು ಜಯಿಸಬೇಕಾಗುತ್ತದೆ ಎಂಬುದು ಅನಿವಾರ್ಯ ಸತ್ಯ.

ಸೃಜನಶೀಲರನ್ನು ಕಂಡಾಗಲೆಲ್ಲಾ ಜನರು ’ಅವ್ನು ಒಂಥರಾ!’ ಎನ್ನುವುದಕ್ಕೂ ಇದಕ್ಕೂ ಸಂಬಂಧವಿದೆಯೇ ಎಂದು ಯೋಚಿಸುತ್ತಿದ್ದಲ್ಲಿ, ಖಂಡಿತಾ ಇದು ಅದೇ! ಸೃಜನಶೀಲರ ವಿಕ್ಷಿಪ್ತ ಮನೋಭಾವ, ನಡವಳಿಕೆಗಳು ಸಮಾಜದಲ್ಲಿ ಅವರ ಕುರಿತಾಗಿ ಹಲವು ತರಹದ ಕಥೆಗಳನ್ನು, ವದಂತಿಗಳನ್ನು ಜನರು ಹಬ್ಬಿಸಿಕೊಂಡು ರೋಚಕಗೊಳ್ಳುತ್ತಾ, ಕೆಲವೊಮ್ಮೆ ಅಸಹ್ಯಪಡುತ್ತಾ ಇನ್ನೂ ಕೆಲವೊಮ್ಮೆ ಮರುಕ ಪಡುತ್ತಾ ಇರುವಂತಹ ಸನ್ನಿವೇಶಗಳನ್ನು ಸೃಷ್ಟಿಸಿಬಿಡುತ್ತವೆ. ಇಂತಹ ಹಲವು ಸನ್ನಿವೇಶಗಳಿಗೆ ಓದುಗ ಸಾಕ್ಷಿಯಾಗಿರುತ್ತಾನೆ. ಅಸಲಿಗೆ ಸಮಾಜವನ್ನು ತನ್ನ ಸೂಕ್ಷ್ಮ ನಡವಳಿಕೆಗಳ ಮೂಲಕ ಗಮನಿಸುತ್ತಿರುವ ಸೃಜನಶೀಲ ಇಂದು ಮತ್ತು ಮುಂದೆ ಆಗಬಹುದಾದ ವಿಪರೀತಗಳನು, ಆಪತ್ತುಗಳನು ಗುರುತು ಹಚ್ಚಬಲ್ಲನಾಗಿರುತ್ತಾನೆ, ಹಾಗಾಗಿಯೇ ಸಾಮಾನ್ಯರ ಲೋಕಾರೂಢಿಯ ನಡವಳಿಕೆ ಮತ್ತು ಬದುಕು ಅವನದಾಗಿರುವುದಿಲ್ಲ. ಅವನಂತೆಯೇ ಅವನ ಆಸಕ್ತಿಗಳೆಲ್ಲವೂ ಸೃಜನಶೀಲವೂ ನಿಗೂಢವೂ ಆಗಿವೆ. ರೂಢಿಯ ಬೆನ್ನು ಹತ್ತದ ಇಂತಹವನ್ನು ಕಂಡಾಗ ಸಮಾಜ ಬೆಚ್ಚುವುದು, ಅಣಕಿಸುವುದು, ಹಂಗಿಸುವುದು ಮಾಡುತ್ತಲೇ ಕ್ರಮೇಣ ಗೌರವಕ್ಕೆ ಬದಲಾಗುವ ಅವಕಾಶಗಳೂ ಉಂಟು.

ಸೃಜನಶೀಲನ ಮಾತಾಗಲಿ, ಮೌನವಾಗಲಿ ಅದರ ಅಭಿವ್ಯಕ್ತಿ ಕಲೆಯಾಗಿಯೇ ಮಾರ್ಪಡುವುದು. ಕವಿಗೆ ಕವಿತೆ, ಕಲಾಕಾರನಿಗೆ ಕಲೆ, ಸಂಗೀತಗಾರನಿಗೆ ಸ್ವರ... ಹೀಗೆ. ಕವಿ ಮಾತ್ರ ಶಬ್ದ ಮತ್ತು ಅರ್ಥ ಎರಡರ ಜೊತೆಯಲ್ಲೂ ಗೆಳೆತನ ಬೆಳೆಸಿಕೊಂಡಿದ್ದಾನೆ. ಅವುಗಳೊಂದಿಗೆ ನಾನಾ ತರಹದ ಆಟವಾಡುತ್ತಾ, ಓದುಗನ ಗಮನವನ್ನು ಸೆಳೆದುಕೊಂಡು ನಂತರ ಅವನನ್ನೂ ಕೂಡ ತನ್ನ ಸಹ ಆಟಗಾರನಾಗಿಸಿಕೊಳ್ಳುತ್ತಾನೆ, ಆಟದಿಂದ ಆಚೆಗೆ ಹೋಗಲು ಸಾಧ್ಯವಿಲ್ಲ, ಅಲ್ಲಮ ತನ್ನದೊಂದು ವಚನದಲ್ಲಿ

ಉಲುಹಿನ ವೃಕ್ಷದ ನೆಳಲಡಿಯಲಿರ್ದು

ಗಲಭೆಯನೊಲ್ಲೆನೆಂಬುದೆಂತಯ್ಯಾ? ಎನ್ನುತ್ತಾನೆ.

ಉಲುಹು ಎಂದರೆ ಶಬ್ದ. ಶಬ್ದದ ಮರದ ನೆರಳಿನಲ್ಲಿ ನಿಂತು ಗಲಭೆಯು ಬೇಡ ಎಂದರೆ ಹೇಗೆ? ಎನ್ನುವುದು ಪ್ರಭುದೇವರ ಪ್ರಶ್ನೆ... ಆ ಪ್ರಶ್ನೆಯಲ್ಲಿಯೇ ತತ್ವ ನಿರೂಪಣೆಯೂ ಆಗಿಹೋಗಿದೆ. ಇದು ಅಕ್ಕನ ’ಸಂತೆಯೊಳಗೊಂದು ಮನೆಯ ಮಾಡಿ. ಶಬ್ದಕ್ಕೆ ನಾಚಿದೊಡೆಂತಯ್ಯ? ಎನ್ನುವ ವಚನದ ಸಾಲನ್ನು ನೆನಪಿಸಿದರೂ ಅಲ್ಲಮನ ರೂಪಕದ ಸಾಂದ್ರತೆಯು ಬಿಗಿಯಾಗಿದೆ. ಉಲುಹಿನ ವೃಕ್ಷ ಮಾತಾಡುತ್ತಲೇ ಇರುತ್ತದೆ, ಅದರ ನೆರಳಿನಲ್ಲಿ ಆಶ್ರಯ ಪಡೆದಿರುವ ನಾವು ಮಾತನಾಡದೇ ಎಷ್ಟು ಹೊತ್ತು ಇರಲು ಸಾಧ್ಯ? ಮಾತು ಬರಿಯ ಮಾತಾಗಿ ಉಳಿಯುವುದಿಲ್ಲ ಅಥವಾ ನಿಲ್ಲುವುದಿಲ್ಲ, ಅದು ಬೆಳೆದು ಗಲಭೆಯಾಗುತ್ತದೆ. ಅದು ಬೇಡವೆಂದರೆ ನಾವು ಅಲ್ಲಿ ನಿಲ್ಲಬಾರದು, ಆದರೆ ನಮಗೆ ನೆರಳು ಅಗತ್ಯವಾಗಿದೆ. ನಾವು ಅಲ್ಲಿ ಇರುವರೆಗೂ ಮಾತನ್ನು ಕೇಳಬೇಕು, ಪ್ರತಿಕ್ರಿಯಿಸಬೇಕು.. ಅಥವಾ ಮೌನದಿಂದ ಗಲಭೆಯನ್ನು ಸೈರಿಸಬೇಕು. ಯಾರನ್ನು ಇಲ್ಲಿ ಆರೋಪಿಸಲು ಆಗುವುದಿಲ್ಲ. ’ಸೈರಣೆ’ ಬಹಳ ಮುಖ್ಯ. ವಿಷಣ್ಣತೆ, ವಿಕ್ಷಿಪ್ತತೆ, ಖಿನ್ನತೆ, ಏಕಾಂಗಿತನ ಇವೆಲ್ಲವೂ ನಾವು ನಿಂತಿರುವ ಉಲುಹಿನ ವೃಕ್ಷದ ಕವಲುಗಳು. ಇವುಗಳ ನೆರಳು, ನಾವು ದಾಟಲೇಬೇಕಾದ ಗಡಿಗಳು. ಈ ಸಂಕಲನದಲ್ಲಿರುವವು ಅಂತಹ ದಾಟು ಗಳಿಗೆಯ ಪದ್ಯಗಳು.

ದುಃಖ, ಖಿನ್ನತೆ, ಹತಾಶೆ, ಸಂಕಟ ಇತ್ಯಾದಿ ನೆಲೆಗಳಲಿ ನಿರ್ವಚಿಸಲಾಗುವ ’ನೋವು’ ನಮ್ಮನ್ನು ಕಟ್ಟುತ್ತ ಕಟ್ಟುತ್ತಾ ಕೆಂಡದ ಗಿರಿಯ ಮೇಲೆ ತಂದು ನಿಲ್ಲಿಸುತ್ತವೆ. ಆಲೋಚನೆಗಳು, ಅನುಮಾನಗಳು, ಅಂಧಶ್ರದ್ಧೆಗಳು ಈ ಗಿರಿಯ ಮೂಲಧಾತುಗಳು. ಇವೆಲ್ಲ ಹೇಗೆ ನಿರ್ಮಿತವಾದುವು ಎಂಬುದನ್ನು ಅರಿಯುವ ವೇಳೆಗೆ ನಾವು ಗಿರಿಯ ತುದಿಗೆ ತಲುಪಿರುತ್ತೇವೆ. ಮತ್ತಲ್ಲಿಂದ ಜಾರಿ ಬಯಲು ಮುಟ್ಟಲು ಸಾಧ್ಯವೇ? ಸಾಧ್ಯ! ಆದರೆ ಅಷ್ಟು ಸಮಯ ಮತ್ತು ಸಂಯಮ ನಮಗೆ ಸಿದ್ದಿಸಬೇಕು. ಉರಿಯುತ್ತಿರುವ ಕೆಂಡದಗಿರಿಯ ಮೇಲೆ ನಿಲ್ಲುವ ತ್ರಾಣವಿರಬೇಕು. ಸೃಜನಶೀಲನಿಗೆ ಪ್ರತಿರೋಧದ ಶಕ್ತಿ ಸಿಗುವುದು ಇಲ್ಲೇ.. ಇಲ್ಲಿ ಸಿಕ್ಕಿತೆಂದರೆ ಅವ ಗಟ್ಟಿಯಾಗಿ ನಿಲ್ಲಬಲ್ಲ, ಬದುಕಿ ಬಾಳಬಲ್ಲ. ಇಲ್ಲವಾದರೆ ಅವನೊಂದು ಅರಗಿನ ಕಂಬವಾದಾನು!

ಇಲ್ಲಿನ ಕವಿತೆಗಳು ಏನು ಹೇಳುತ್ತಿವೆ,, ಅದರ ಅರ್ಥವೇನು ಎಂಬುದು ನನ್ನ ವ್ಯಾಪ್ತಿಯ ಮಾತು ಅಲ್ಲ. ಇಲ್ಲಿರುವ ನನ್ನ ಮಾತುಗಳು ಈ ಕವಿತೆಗಳು ಹುಟ್ಟುವ ಒಂದು ಕಾಲದ ಪರಿಚಯ ಮಾತ್ರ, ನೆನಪಿರಲಿ ಎಲ್ಲ ಕಾಲವಲ್ಲ! ಕವಿತೆಗಳು ಯಾಕೆ ಇಷ್ಟೆಲ್ಲಾ ಮಾತಾಡುತ್ತಿವೆ ಅಥವಾ ಯಾವ ದಾರಿಯನ್ನು ಹುಡುಕುತ್ತಿವೆ ಎಂಬುದಕ್ಕೆ ಇದೊಂದು ಸಣ್ಣ ಸುಳಿವು. ಇದು ಓದುಗಗೆ ಒದಗಬಹುದು ಅಥವಾ ಜಾರಿ ಹೋಗಬಹುದು. ಆದರೆ ಇದನ್ನು ದಾಖಲಿಸುವುದು ಮುಖ್ಯ ಎಂದು ನನಗಸಿದೆ.

ಒಲವು ನನ್ನ ಅಧ್ಯಾತ್ಮ ತಿಳುವಳಿಕೆಯ ಮೂಲಧಾತು. ಎಲ್ಲವು ಘಟಿಸುವುದು, ಘಟಿಸುತ್ತಿರುವುದು ಒಲವಿನಿಂದ ಮಾತ್ರ ಎಂಬುದು ನನ್ನ ನಂಬುಗೆ. ಒಲವು ಎಂಬುದರ ಬಗೆಗೆ ಹಲವರು ಚರ್ಚೆಗಳು ಈಗಾಗಲೇ ನಡೆದು ಹೋಗಿವೆ. ಮತ್ಯಾವುದು ಮಾತಾಡಿದರೂ ಅದೆಲ್ಲವೂ ಈಗ ಇರುವ ತಾತ್ವಿಕತೆಗಳ ಸುತ್ತಲೇ ಹೊರಡುತ್ತದೆ. ಆದರೆ ಈ ಒಲವು ಬರಿಯ ಪ್ರೀತಿ, ಪ್ರೇಮ, ಪ್ರಣಯಗಳ ಸುತ್ತಲೇ ಇರುವುದೇ ಅಥವಾ ಸೃಷ್ಟಿ ಸಂಬಂಧಗಳ ಜೊತೆಗೆ ಹೆಣೆದುಕೊಂಡಿರುವ ಬಲೆಯೋ ಎಂದು ಕೆದುಕಲು ಪ್ರಾರಂಭಿಸಿದರೆ ಅದು ಮುಗಿಯುವುದೇ ಇಲ್ಲ. ಅದಕ್ಕೆ ಒಂದು ಮುಕ್ತಾಯವನ್ನು ಬರೆಯುವುದು ಕೂಡ ಸಾಧ್ಯವೇ ಇಲ್ಲ. ಯಾಕಂದರೆ ಕಾಲಕಳೆದಂತೆ ಇವೆಲ್ಲದರ ಅರ್ಥೈಸುವಿಕೆಗಳು ಬದಲಾಗುತ್ತಿವೆ. ಆದರೂ ನಾವೆಲ್ಲಾ ನಮ್ಮದೇ ಆದ ಒಂದೊಂದು ಅರಗಿನ ಕಂಬವನ್ನು ಇಲ್ಲಿ ನಿಲಿಸುವುದು ರೂಢಿಯಾಗಿದೆ.

ಎರಡೂವರೆ ಸಾವಿರ ವರ್ಷಗಳ ಹಿಂದಿನ ಲಾವೋ-ತ್ಸೆಯ ಈ ಸಾಲು ಓದಿರಿ,

ಗಂಡಸನ್ನ ತಿಳಿ

ಆದರೆ ಹೆಣ್ಣಿನಲ್ಲಿ ನೆಲೆಸು

ಆಗ ನೀನು ಪೃಥವಿಯ ಕಮರಿಯಾಗುತ್ತಿಯ.

ಹೀಗೆ ಸ್ವೀಕಾರದ ಕಮರಿ ನೀನು ಅದಾಗ

ದಾವ್ ನಿನ್ನ ಬಿಟ್ಟುಕೊಡುವುದಿಲ್ಲ

ನೀನೊಂದು ಮಗುವಿನಂತೆ ಇರುತ್ತೀಯ”

(ಲಾವೋತ್ಸೆಯ ’ದಾವ್ ದ ಜಿಂಗ್’ - ೨೮ ಅನು: ಯು.ಆರ್. ಅನಂತಮೂರ್ತಿ)

ಮನುಷ್ಯನೊಳಗಿರುವ ಎರಡು ಲಿಂಗ ಸಂಬಂಧಗಳನ್ನು ಎಷ್ಟು ಚೆನ್ನಾಗಿ ಬೆಸೆದು ಹೇಳುತ್ತಿದ್ದಾನೆ.. ಕವಿಯ ಮನಸ್ಸು ಇರುವುದೇ ಹೀಗೆ ಅಲ್ಲವೇ.. ಅದು ಈ ಎರಡು ಲಿಂಗಗಳಿಗೆ ಮಾತ್ರವಲ್ಲ ಜಗತ್ತಿನ ಚರಾಚರ ವಸ್ತುಗಳ ಜೊತೆಗೂ ಸಂಬಂಧ ಕಲ್ಪಿಸಿಕೊಳ್ಳುತ್ತದೆ, ಜೀವ ತುಂಬುತ್ತದೆ, ಮಾತಾಡುತ್ತದೆ. ಕವಿಯ ಪ್ರೀತಿ, ನೀತಿ ಒಂದು ಲಿಂಗನೋಟವಲ್ಲ ಅದು ಸಮಸ್ತ ಜೀವನೋಟ. ಗಂಡಸನ್ನ ತಿಳಿಯುವುದು, ಆದರೆ ಹೆಣ್ಣಿನಲ್ಲಿ ನೆಲೆಸುವುದು... ಮಾತು-ಮೌನಗಳ ಅಂತರದಲ್ಲಿ ಒದಗಿದ ಅಧ್ಯಾತ್ಮ. ಈ ತಿಳಿವಿನ ಹಲವು ಪದ್ಯಪ್ರಯೋಗಗಳು ಇಲ್ಲಿವೆ.

ಹಲವು ದಿನಗಳ ಕಾಲ ತೀರ ಆಳಕ್ಕಿಳಿದ ಖಿನ್ನತೆಯಲ್ಲಿ ಮುಳುಗಿದ್ದ ನಾನು ಆ ಅವಧಿಯಲ್ಲಿ ಮನುಷ್ಯ, ಸಮಾಜ ಮತ್ತು ಸೃಷ್ಟಿ ಕುರಿತು ವಿಪರೀತವಾದ ಆಲೋಚನೆಗಳಲ್ಲಿ ಮುಳುಗಿದ ಪರಿಣಾಮ ಹಲವು ಕವಿತೆಗಳು ಮತ್ತು ಪೇಂಟಿಂಗ್‌ಗಳು ರಚಿತವಾದುವು. ಅದು ನನ್ನ ಸೃಜನಶೀಲತೆಯ ಉತ್ತುಂಗದ ಕಾಲವೂ ಹೌದು ಮತ್ತು ನನ್ನ ಮಾನಸಿಕ ಆರೋಗ್ಯದ ವಕ್ರಕಾಲವೂ ಹೌದು. ನಿತ್ಯವೂ ಒಂದೊಂದು ಪಾತಳಿ, ಒಂದೊಂದು ನರಕ. ಒಂದು ಸಣ್ಣ ಬಿರುಕು ದೊಡ್ಡಕಟ್ಟೆಯನ್ನು ಒಡೆದು ಹಾಕಿ ಹರಿವಿಗೆ ಸ್ವತಂತ್ರ ಕೊಡಿಸಿದ ಹಾಗೆ. ಇದನ್ನು ಅರಿವಿನ ರೂಪಕವಾಗಿ ನೋಡಲೂ ಅಡ್ಡಿಯಿಲ್ಲ. ನೊಂದಾಗ, ನರಳಿದಾಗ ಹುಟ್ಟಿದ ಕಲೆಯಲ್ಲಿ ಕಣ್ಣೀರಿನ ಪಾಲು ಬೇಕಾದಷ್ಟಿದೆ. ಅಲ್ಲಿ ಆಕ್ರೋಶ, ಪ್ರತಿರೋಧಗಳೂ ಉಂಟು. ಇಲ್ಲಿ ಕಟ್ಟುತ್ತಿರುವ ಕವಿತೆಗಳು ನುಡಿಯ ದೃಷ್ಟಿಯಿಂದ ಮಾತ್ರವೇ ನೋಡುವಂತಹವಲ್ಲ. ಸಾಮಾಜಿಕ ಮನೋವೈಜ್ಞಾನಿಕದ ನೋಟವು ಬೇಕೇ ಬೇಕು. ಸೃಜನಶೀಲನ ಪ್ರತಿಸ್ಪಂದನೆಯು ದೇಹಕ್ಕೋ, ದೇಶಕ್ಕೋ ಅವನ ರೂಪಕಗಳಲ್ಲಿ, ಪ್ರತಿಮೆಗಳಲ್ಲಿ, ನುಡಿಯ ಪ್ರಾಸ-ಲಯಗಳಲ್ಲಿ ಎಲ್ಲೆಲ್ಲೋ ಚದುರಿ ಹರಡಿ ಅಡಗಿಕೊಂಡಿವೆ. ಅವುಗಳ ಬೆನ್ನು ಬಿದ್ದು ಹಿಡಿದು ಕಾಣದೇ ಹೋದರೆ ಕಾವ್ಯಸಿದ್ದಿಯಾಗದು.

ನಾವು ನಂಬಿರುವ ತಾತ್ತ್ವಿಕತೆಯ ಗಾಳಿಗೋಪುರಗಳು, ಅವುಗಳ ಪ್ರಯೋಗಶೀಲತೆಯ ಪ್ರಪಾತಗಳು, ವ್ಯಕ್ತಿಗತ ಸಮಾಜದ ಏರುಗತಿಯ ಅಸ್ಮಿತೆಗಳು, ಇಳಿಮುಖವಾದ ನಂಬುಗೆ- ವಿಶ್ವಾಸಗಳು ಈ ಅರಗಿನ ಕಂಬವನ್ನು ಇನ್ನಷ್ಟು ಆಳಕ್ಕೆ ಇಳಿಸಿ ಕರಗಿಸುತ್ತಿವೆ. ಇವಕ್ಕೆ ಲೋಹದ ಹೊಳಪಿಲ್ಲ, ಕಲ್ಲಿನ ಕಾಠಿಣ್ಯವಿಲ್ಲ. ಇರುವುದೆಲ್ಲ ಅರಗು ಕೇವಲ ಅರಗು. ಸೃಷ್ಟಿ ಮತ್ತು ಪ್ರೀತಿಯ ಸುಳಿಯಲ್ಲಿ ಯಾವುದೂ ಉದ್ದೇಶಿತವಲ್ಲ, ಅನುದ್ದೇಶಿತವೂ ಅಲ್ಲ. ಹಾಗಾಗಿ ಪ್ರೀತಿಸುವ ಸಮಯವೇ ಸಾಲದಾಗಿರುವಾಗ, ಮತ್ತಾರನ್ನೋ ದ್ವೇಷಿಸಲು ನನಗೆ ಕಿಂಚಿತ್ತೂ ಸಮಯವಿಲ್ಲ. ಇರುವ ಸಮಯವೆಲ್ಲವು ಪ್ರೀತಿಗಾಗಿಯೇ ಮೀಸಲು.

ಎಲ್ಲೆಲ್ಲಿಯೂ ಪ್ರೀತಿ, ಕವಿತೆ, ಕಲೆಯೇ ಕಾಣುವಾಗ ಅವುಗಳ ಕೆಳಗೆ ಗಾಢವಾದ ವಿಷಾದ, ವಿಷಣ್ಣತೆಗಳ ನೆರಳೂ ಕಾಣಿಸುತ್ತದೆ. ಇವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಥವಾ ಸಿಲುಕದಿರಲು ಸಾಧ್ಯವೇ ಎಂದು ಮರು ಯೋಚಿಸಿದರೆ ಅದೂ ಸಾಧ್ಯವಿಲ್ಲ. ಇದೆಲ್ಲವನ್ನು ಗಮನಿಸುತ್ತಿರುವಾಗ ಕುಮಾರವ್ಯಾಸನ ಷಟ್ಪದಿ ನೆನೆಪಾಗುತ್ತಿದೆ..

ಒಳಗೆ ಹೃದಯಾಂಬುಜದ ಮಧ್ಯ-

ಸ್ಥಳದೊಳಗೆ ಮುರವೈರಿಯನು ಹೊರ-

ವಳಯದಲಿ ಫಲುಗುಣನ ಮಣಿರಥದಗ್ರಭಾಗದಲಿ

ಹೊಳೆವ ಹರಿಯನು ಕಂಡನಿದು ಹೊರ-

ಗೊಳಗೆ ಹರಿ ತಾನೆಂಬ ಭೇದವ

ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ

(ಕರ್ಣಪರ್ವ, ಕುಮಾರವ್ಯಾಸನ ಗದುಗಿನ ಭಾರತ)

ಒಳಗೆ ಹೊರಗೇ ಕೃಷ್ಣನನ್ನೇ ಕಾಣುತ್ತಿರುವ ಕರ್ಣನ ಸ್ಥಿತಿಯು ’ಝೆನ್’ಅನ್ನು ಹೋಲುತ್ತಿದೆ.

ಜೊತೆಗಿರುವವರು, ಎದುರು ನಿಂತವರು ಎಂಬ ಭೇದವೇ ಇಲ್ಲದೇ ಒಲುಮೆಯು ನನ್ನ ಎಲ್ಲ ಗೆಳತಿಯರು, ಗೆಳಯರು, ಹಿರಿಯರೊಂದಿಗೆ ಯಾವುದೇ ತರತಮವಿಲ್ಲದೇ ಹಂಚಿಹೋಗಿದೆ. ಎಷ್ಟೋ ಸಲ ವಾದ-ಪ್ರತಿವಾದಗಳಲ್ಲಿ ನಾನು ಭಿನ್ನಮತ ಕಾಯ್ದುಕೊಂಡಿರಬಹುದು ಆದರೆ ವಾದ ಮುಗಿದ ಮೇಲೆ ಜೊತೆಗೆ ಊಟ ಮಾಡದೇ ಹೋದರೆ ಸಮಾಧಾನವಾಗುವುದಿಲ್ಲ. ಹೀಗೆ ನಾವು ಸೈರಣೆಯನ್ನು ನಮ್ಮೊಳಗೆ ಪ್ರತಿಷ್ಠಾಪನೆ ಮಾಡಿಕೊಳ್ಳದೇ, ಒಲುಮೆಯ ಆಧ್ಯಾತ್ಮವನು ಅವಾಹಿಸಿಕೊಳ್ಳದೇ ಹೋದರೆ ಜಗತ್ತು ಉಳಿಯುವುದದರೂ ಹೇಗೆ?

ಕಂಬ ಬೆಂದಿತ್ತು ಹಂಸೆ ಹಾರಿತ್ತು..

ಕಟ್ಟಿಕೊಂಡ ಕೆಂಡದ ಗಿರಿ, ನಿಂತಿದ್ದ ಅರಗಿನ ಕಂಬ ಎರಡೂ ಈಗ ಇಲ್ಲ.. ಹಿಂತಿರುಗಿದರೆ ಹಾರುವಾಗ ಕಂಡ ಒಂದು ಪಕ್ಷಿನೋಟ ಮಾತ್ರ ನನ್ನಲ್ಲಿ ಲಭ್ಯ. ಅದು ನನ್ನದೇ ಅಧ್ಯಾತ್ಮದ ಅನುಸೃಷ್ಟಿಯೂ ಇರಬಹುದು. ಸೃಷ್ಟಿಯ ಜೊತೆಗೆ ಸಾನುರಾಗದಿಂದ ಜೊತೆಯಾಗುತ್ತಾ ಹೋದಂತೆ ನಮ್ಮೊಳಗೆ ಇರುವ ನಂಜೆಲ್ಲಾ ಬೆವರಿನಂತೆ ಬಂದು ಇಳಿದುಹೋಗಿ ಚೈತನ್ಯದ ಧಾರೆಯೊಂದು ಒಡಲೊಳಗೆ ಸದಾ ಹರಿಯಲು ಶುರುವಿಟ್ಟಿದೆ. ಅದು ಜಗತ್ತಿನೊಡನೆ ಇಲ್ಲದ ಹಾಗೆ ಬೆರೆತು ಎಲ್ಲವನ್ನು ತಾನಾಗಿ ಕಾಣುವ ಕಾಣ್ಕೆಯನ್ನು ಪಡೆದುಕೊಳ್ಳುತ್ತಿದೆ. ಇಲ್ಲಿರುವ ಪ್ರೇಯಸಿ, ಗೆಳೆಯ, ಭಗವಂತ ಎಲ್ಲವು ಸೃಷ್ಟಿಯ ಸಂಕೇತಗಳು.. ಕವಿಯು ಅವುಗಳಲ್ಲಿ ಸಂಚರಿಸುತ್ತಿರುವ ಒಂದು ವರ್ಣತಂತು ಮಾತ್ರ.

 

 

 

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...