“ಕಂಬಾರರ ಈ ಹೊಸ ಹಾಗೂ ಪರ್ಯಾಯ ಆಲೋಚನೆಗಳನ್ನು ಕನ್ನಡ ಸಾಹಿತ್ಯ ವಿಮರ್ಶೆ ಗುರುತಿಸಬೇಕಾದಷ್ಟು ಗುರುತಿಸಿಲ್ಲ. ಕಂಬಾರರನ್ನು ನಾಟಕಕಾರ ಮತ್ತು ಕವಿ ಆಗಿ ಗುರುತಿಸಿದಷ್ಟು, ಅವರ ಬೇರೆ ಪ್ರಯೋಗಶೀಲತೆಯನ್ನು ಗಂಭೀರ ವಿಶ್ಲೇಷಣೆಗೆ ಒಳಪಡಿಸಿಲ್ಲ ಎನ್ನುವ ತಿಳಿವಳಿಕೆ ನನ್ನದು,” ಎನ್ನುತ್ತಾರೆ ಡಾ. ವೀರೇಶ ಬಡಿಗೇರ ಅವರು ತಮ್ಮ “ಹೂ ಹೂವಿನೊಳಗೊಂದು ಕೈಲಾಸವರಳಿ” ಕೃತಿಗೆ ಬರೆದ ಲೇಖಕರ ಮಾತು.
'ನಾ ಕುಣೀಬೇಕ ಮೈಮಣೀಬೇಕ ಕಾಲ್ದಣೀಬೇಕ ತಾಯಿ', 'ಹಬ್ಬಿದ ಹಸರಾಗ ಹೆಬ್ಬುಲಿ ಒರ್ದವ | ತಬ್ಬಲಿ ಮಗ ಅತ್ತ ಕರದಾನ', 'ಇಲ್ಲಿ ಘಟನೆ ಘಟಿಸುವುದೆ ಇಲ್ಲ । ಇತಿಹಾಸಕ್ಕಿಲ್ಲ ಕೆಲಸ | ಸದಾ ಹರಿಯುವುದು ನದಿಯು ಮಾತ್ರ । ಕಥೆ ಹುಟ್ಟುತಾವ ದಿವಸ' ಕಂಬಾರ ಸಾಹಿತ್ಯದ ಈ ನಿರಂತರತೆ, ಸಂಭ್ರಮ ಹಾಗೂ ಭಿನ್ನತೆ ಮತ್ತೆ ಮತ್ತೇ ಅವರನ್ನು ಓದುವಂತೆ ಪ್ರೇರೇಪಿಸುತ್ತದೆ. ಕಂಬಾರರನ್ನು ಓದುವುದೆಂದರೆ ನನ್ನ ಮಟ್ಟಿಗೆ ಅದೊಂದು ಕೇವಲ ಭಾಷಿಕ ವ್ಯವಹಾರವಲ್ಲ. ಅಖಂಡ ಭಾರತೀಯ ಸಂವೇದನೆ ಹಾಗೂ ಅನುಭವದ ಬಹುರೂಪದ ಓದು. ಕಂಬಾರರು ಕನ್ನಡದಲ್ಲಿಯೇ ಕಥಿಸಿದರೂ ಶಿವಾಪುರವನ್ನೇ ಚಿಂತಿಸಿದರೂ 'ಮನಸಿನ ಗೆರೆ ಮೀರಿ' ನಡೆದವರು. ನೀರಮೇಲೆ ಕೊರೆದ ಗೆರೆಯಂತೆ ಬದುಕಿದವರು. ನಾದವನ್ನೇ ಭಾಷೆಯಾಗಿಸಿ ಒರೆದು ಬರೆದರೂ ಇಂಚಿಂಚು ಇಲ್ಲವಾಗುತ್ತ ಬಯಲ ತುಂಬಿ ಬೆಳೆದವರು. ನಾಮ ರೂಪವ ಮರೆತು ಕರಗಿದವರು. "ಇಷ್ಟಾಗಿ ನೀವು ಬೆರಳೂರಿದ್ದೆ ಕೇಂದ್ರು ಸುತ್ತಿದ್ದೆ ಪರಿಘ। ಪರಿಘದ ಹಾಗೆ ಕೇಂದ್ರಗಳೂ ಅಪರಂಪಾರ” ಹೀಗೆ ತಮ್ಮೆಲ್ಲ ಬರಹಗಳುದ್ದಕ್ಕೂ ಕಂಬಾರರು ಬಹುತ್ವದ ಹಾಗೂ ಸ್ವಂತಿಕೆಯ ಅಗತ್ಯವನ್ನು ಪ್ರತಿಪಾದಿಸಿದರು.
ಕಂಬಾರರ ಈ ಹೊಸ ಹಾಗೂ ಪರ್ಯಾಯ ಆಲೋಚನೆಗಳನ್ನು ಕನ್ನಡ ಸಾಹಿತ್ಯ ವಿಮರ್ಶೆ ಗುರುತಿಸಬೇಕಾದಷ್ಟು ಗುರುತಿಸಿಲ್ಲ. ಕಂಬಾರರನ್ನು ನಾಟಕಕಾರ ಮತ್ತು ಕವಿ ಆಗಿ ಗುರುತಿಸಿದಷ್ಟು, ಅವರ ಬೇರೆ ಪ್ರಯೋಗಶೀಲತೆಯನ್ನು ಗಂಭೀರ ವಿಶ್ಲೇಷಣೆಗೆ ಒಳಪಡಿಸಿಲ್ಲ ಎನ್ನುವ ತಿಳಿವಳಿಕೆ ನನ್ನದು. ಈ ಹಿನ್ನೆಲೆಯಲ್ಲಿ ಕಂಬಾರರನ್ನು ಹೊಸ ತಲೆಮಾರಿನ ಯುವ ವಿದ್ವಾಂಸರು ಸಮಗ್ರವಾಗಿ ಓದಬೇಕು. ಓದಿ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ಮಾಡಬೇಕೆನ್ನುವ ಮಹದಾಸೆಯಿಂದ ಡಾ.ಚಂದ್ರಶೇಖರ ಕಂಬಾರರ 87ನೇ ಹುಟ್ಟು ಹಬ್ಬದ ಪ್ರಯುಕ್ತ 2.1.2023 ರಿಂದ 31.1.2023ರ ವರೆಗೆ 'ಸಾವಿರದ ಶರಣವ್ವ ಕನ್ನಡದ ತಾಯೆ' ಎನ್ನುವ ಸರಣಿ ವಿಚಾರ ಸಂಕಿರಣಗಳನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ, ಮಯ ಪ್ರಕಾಶನ, ಕಮಲಾಪುರ ಹಾಗೂ ಸಿರಿನಾಡು ವೆಬ್ ಟಿವಿ, ಬೆಂಗಳೂರು ಈ ಸಂಸ್ಥೆಗಳ ಸಾರಥ್ಯದಲ್ಲಿ ಆಯೋಜಿಸಲಾಗಿತ್ತು.
ಈ ಸರಣಿ ಉಪನ್ಯಾಸದ ಮುಖ್ಯ ಉದ್ದೇಶವೇ ಕಂಬಾರರ ಸಾಹಿತ್ಯವನ್ನು ಹಳೆ ತಲೆಮಾರಿನವರೂ ಸೇರಿದಂತೆ, ಹೊಸ ತಲೆಮಾರಿನ, ಹೊಸ ಉತ್ಸಾಹಿ ಓದುಗರಿಂದ, ಅಧ್ಯಯನಕಾರರಿಂದ, ಅಧ್ಯಾಪಕರಿಂದ, ವಿದ್ಯಾರ್ಥಿಗಳಿಂದ ಭಿನ್ನ ಬಗೆಯಲ್ಲಿ ಅನುಸಂಧಾನ ಮಾಡುವುದಾಗಿತ್ತು. ಕಂಬಾರರನ್ನು ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಕಾವ್ಯ, ಕಾದಂಬರಿ, ನಾಟಕ, ಸಿನಿಮಾ, ರಂಗಭೂಮಿ ಸೇರಿದಂತೆ, ಅವರ ಪ್ರಯೋಗಶೀಲ ನೆಲೆಗಳನ್ನು ಕನ್ನಡದ ದೇಸೀ ಚಿಂತನೆಯ ನೆಲೆಯನ್ನೊಳಗೊಂಡಂತೆ, ಭಾರತೀಯತೆಯ ಬಹುತ್ವದ ನೆಲೆಯಲ್ಲಿಟ್ಟು ವ್ಯಾಖ್ಯಾನಿಸುವುದಾಗಿತ್ತು. ಕಂಬಾರರ ಬರಹ ಮತ್ತು ಭಾಷಣಗಳಲ್ಲಿ ತೋರುವ ಭಾರತೀಯ ವೈವಿಧ್ಯಮಯ ಸಾಂಸ್ಕೃತಿಕ ಲೋಕಗಳನ್ನು ಕನ್ನಡ ಪ್ರಜ್ಞೆಯ ಮೂಲಕವೇ ಅಡ್ಡಹಾಯುವ ಕೆಲಸವನ್ನು ಇಲ್ಲಿನ ಎಲ್ಲ ಚಿಂತನೆಗಳು ಗಂಭೀರವಾಗಿ ಮಾಡಿವೆ. ಪ್ರತಿಯೊಬ್ಬ ಪ್ರಬಂಧಕಾರರ ಚಿಂತನೆಗಳಲ್ಲಿ ಕಾಣುವ ಪ್ರಮುಖ ಗುಣಗಳೆಂದರೆ, ಕೊಟ್ಟ ವಿಚಾರಗಳ ಕುರಿತು ತಲಸ್ಪರ್ಷಿ ಓದು, ಅಧ್ಯಯನ ಮತ್ತು ವ್ಯಾಖ್ಯಾನ ರೀತಿಗಳು. ಇದೂವರೆಗೂ ಹೆಚ್ಚು ಮುಂಚೂಣಿಗೆ ಬಾರದ ಕಂಬಾರರ ಕವಿತೆಗಳನ್ನು, ನಾಟಕಗಳನ್ನು ಪಾತ್ರಗಳನ್ನು ಸಂವೇದನೆಗಳನ್ನು ಮುಂದಿಟ್ಟುಕೊಂಡು, ಅವರ ಒಟ್ಟು ಬರಹ ಮತ್ತು ಭಾಷಣಗಳಲ್ಲಿ ಕಾಣುವ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತ ಪರ್ಯಾಯ ಚಿಂತನೆಗಳನ್ನು ಮುನ್ನೆಲೆಗೆ ತಂದಿರುವ ರೀತಿಗಳು.
ಕಂಬಾರರನ್ನು ಕೇವಲ ಕವಿ, ನಾಟಕಕಾರ, ಕಾದಂಬರಿಕಾರ, ದೇಶೀ ಚಿಂತಕ ಎಂದು ಪಾಶ್ಚಾತ್ಯ ಕಣ್ಣೋಟದಲ್ಲಿ ನೋಡಿದ ಕ್ರಮಕ್ಕಿಂತ ಭಿನ್ನವಾಗಿ, ಕಂಬಾರರು ರೂಪಿಸುವ ಹೆಣ್ಣು ಪಾತ್ರಗಳು ಮತ್ತು ಅವರು ತಮ್ಮ ಚಿಂತನ ಲಹರಿಯಲ್ಲಿ ಪ್ರಕಟಿಸುವ ಬಂಡಾಯ, ಪ್ರತಿಭಟನೆ, ಪರ್ಯಾಯ ಹಾಗೂ ಸೀಳಿರದ ಸಾಮಾಜಿಕ ಬದುಕಿನ ನೆಲೆಗಳ ಎಳೆ ಹಿಡಿದು, ಇಲ್ಲಿನ ಯುವ ಮಿತ್ರರು ತಮ್ಮ ಚರ್ಚೆಗಳನ್ನು ಬೆಳೆಸಿದ್ದಾರೆ. ಕಂಬಾರರು ಯಾಕೆ, ಎಲ್ಲಿ ಹಾಗೂ ಏಕೆ ಭಿನ್ನ ಎನ್ನುವ ಸೂಕ್ಷ್ಮತೆಗಳನ್ನು ಖಚಿತವಾಗಿ ಗುರುತಿಸಿದ್ದಾರೆ.
2.1.2023ರಂದು ಗದಗ ಜೆ.ಟಿ. ಕಾಲೇಜಿನಲ್ಲಿ ಸರಣಿ ವಿಚಾರ ಸಂಕಿರಣದ ಉದ್ಘಾಟನೆಯಾಯಿತು. ಸರಣಿಯ ಮೊದಲ ವಿಚಾರ ಸಂಕಿರಣ 'ಭಾರತೀಯ ಭಾಷೆ ಮತ್ತು ಸಾಹಿತ್ಯ ಕುರಿತು ಕಂಬಾರರ ಚಿಂತನೆಗಳು' ಎನ್ನುವುದಾಗಿತ್ತು. ಯುವ ವಿದ್ವಾಂಸರಾದ ಡಾ. ರಮೇಶ ಕಲ್ಲನಗೌಡರ ಅವರು 'ಭಾರತೀಯ ಭಾಷೆ ಮತ್ತು ಸಾಹಿತ್ಯ ಕುರಿತು ಕಂಬಾರರ ಚಿಂತನೆಗಳು' ಈ ಪ್ರಬಂಧದಲ್ಲಿ 'ಕಂಬಾರರ ಪ್ರಕಾರ ಭಾರತೀಯವೆಂದರೆ ಅದು ಏಕ ಭಾಷೆ ಮತ್ತು ಸಂಸ್ಕೃತಿಯನ್ನು ಒಳಗೊಂಡ ದೇಶವಲ್ಲ, ಅನೇಕ ಭಾಷೆ ಮತ್ತು ಆಯಾ ಪ್ರದೇಶದ ವೈವಿಧ್ಯಮಯವಾದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಹೊಂದಿರುವಂಥದ್ದು. ಶಿಕ್ಷಣ ಕೊಡುವುದು ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ನಡೆದರೆ, ದೇಶೀ ಸಾಹಿತ್ಯ ಸಂಸ್ಕೃತಿಗಳನ್ನು ಆಧುನಿಕ ಕಾಲದಲ್ಲಿಯೂ ಕಸಿ ಮಾಡಬಹುದು' ಎನ್ನುವ ಕಂಬಾರರ ಕನ್ನಡತ್ವ ಹಾಗೂ ಬಹುತ್ವದ ನೆಲೆಗಳ ಕುರಿತು ಚರ್ಚಿಸುತ್ತಾರೆ. ಡಾ. ವೀರೇಶ ಬಡಿಗೇರ ಅವರು 'ನಡುಗನ್ನಡ ಕಾವ್ಯ ಕುರಿತು ಕಂಬಾರರ ಚಿಂತನೆಗಳು' ಈ ಪ್ರಬಂಧದಲ್ಲಿ, ಹರಿಹರ, ರಾಘವಾಂಕ, ರತ್ನಾಕರವರ್ಣಿಯ ಭರತೇಶ ವೈಭವ ಕುರಿತು ಇದೂವರೆಗೂ ಕನ್ನಡ ಸಾಹಿತ್ಯದಲ್ಲಿ ಯಾರೂ ಎತ್ತದ ಪ್ರಶ್ನೆಗಳನ್ನು ಕಂಬಾರವರು ಎತ್ತಿದ ಕುರಿತು ಚರ್ಚಿಸಿದ್ದಾರೆ. ಹರಿಹರ ರಾಘವಾಂಕರನ್ನು ಕನ್ನಡ ಸಾಹಿತ್ಯದಲ್ಲಿ ಗುರು-ಶಿಷ್ಯ, ಮಾವ, ಅಳಿಯ, ಹಲ್ಲು ಮುರಿದ ಪವಾಡ, ಶೈವ, ವೀರಶೈವ ಎನ್ನುವ ಸೀಳುಗಳಲ್ಲಿಯೇ ನೋಡಲಾಗಿತ್ತು. ಕಂಬಾರರು ಇಬ್ಬರ ನಡುವಿನ ತಾತ್ವಿಕ ಭಿನ್ನತೆಗಳನ್ನು ಬಲು ಸೂಕ್ಷ್ಮವಾಗಿ ಬಿಡಿಸಿದ್ದಾರೆ. ಹರಿಹರನಿಗೆ ಶಿವಧ್ಯಾನ ಶಿವಭಕ್ತಿ ಮುಖ್ಯವಾದರೆ, ರಾಘವಾಂಕನ ಹರಿಶ್ಚಂದ್ರನಿಗೆ, ಶಿವ ಸಾಕ್ಷಾತ್ಕಾರ ಮಾತ್ರವಲ್ಲ ಅದೊಂದು ಬದುಕಿನ ಸತ್ಯ. ವಾಸ್ತವ ಸತ್ಯದ ಪ್ರಾಮಾಣಿಕ ಆಚರಣೆಯಲ್ಲಿ ಶಿವನಿರುವುದು. ಶಿವ ಆಚರಣೆಗಿಂತ ಸತ್ಯದ ಆಚರಣೆ ಬಹುಮುಖ್ಯ ಎಂದು ಹರಿಹರ ರಾಘವಾಂಕರ ಕುರಿತು ಕಂಬಾರರು ಹೊಸ ಬೆಳಕು ಚೆಲ್ಲಿದ್ದನ್ನು ಬಡಿಗೇರ ಅವರು ಗುರುತಿಸಿದ್ದಾರೆ. ನಾಗರಾಜ ವೀ. ಬಳಿಗೇರ ಅವರು 'ಆಧುನಿಕ ಕನ್ನಡ ಸಾಹಿತ್ಯ ಕುರಿತ ಕಂಬಾರರ ಚಿಂತನೆಗಳು' ಪ್ರಬಂಧದಲ್ಲಿ ಭಾಷೆ ಬೆಳಕನ್ನೇ ಬೆಳಗುವ ಜ್ಯೋತಿ, ಸಾಹಿತ್ಯವು ಈ ಭಾಷೆಯನ್ನು ಮಾಧ್ಯಮವಾಗಿ ಮಾತ್ರವಲ್ಲ, ತನಗೆ ತಾನೇ ಬೆಳಕಾಗಿಯೂ ವಿಕಾಸಗೊಳ್ಳಬಹುದು. ಕುವೆಂಪು ಅವರ ಸಂಸ್ಕೃತ ಪದರಚನೆ, ಅಡಿಗರ ವೈದಿಕ ಪರಿಭಾಷೆ, ಬೇಂದ್ರೆಯವರ ಗೇಯತೆ, ರಾಮಾನುಜನ್ ಅವರ ನಾಗರೀಕವಾದ ಸಂಸ್ಕೃತಿ, ಇವೆಲ್ಲವೂ ಭಿನ್ನ ಬಗೆಯ ಭಾಷಾ ಶೈಲಿಗಳಾಗಿ ಇಪ್ಪತ್ತನೇ ಶತಮಾನದ ಸಾಹಿತ್ಯವನ್ನು ಸೃಜಿಸಿವೆ. ಇವೆಲ್ಲ ಕಾಲಬದ್ಧ ಮತ್ತು ಕೃತಿಬದ್ಧ ಅಭಿವ್ಯಕ್ತಿಗಳಾಗಿದ್ದವು. ನಾನು ನನ್ನ ಕಾವ್ಯಾಭಿವ್ಯಕ್ತಿಗೆ ಜಾನಪದ ಜಗತ್ತಿನ ನಿರಾಕಾರದಲ್ಲಿ ನನ್ನ ನಾಮ ರೂಪಗಳನ್ನು ಹುಡುಕಬೇಕಾಯಿತು. ವರ್ಗೀಕೃತ ಹಾಗೂ ಕಾಲಬದ್ಧ ಶೈಲಿಗಳಿಂದ ಕಂಬಾರರು ದೂರಸರಿದು ನಿಲ್ಲಬೇಕಾದ ನಿಲುವಿಗೆ ಬಂದ ಸಂಗತಿಗಳನ್ನು ಗುರುತಿಸಿದ್ದಾರೆ. ಪ್ರೊ. ಎಸ್.ಯು. ಸಜ್ಜನಶೆಟ್ಟರ್ 'ಕನ್ನಡ ನಾಡು ನುಡಿ ಕುರಿತು ಕಂಬಾರರ ಚಿಂತನೆಗಳು
ಲೇಖನದಲ್ಲಿ 'ಕನ್ನಡ ವಿಶ್ವಚೇತನ ಭಾಷೆಯಾಗಬೇಕು. ಕನ್ನಡ ಭಾಷೆ ತಾನೆ ಯೋಚಿಸುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು. ಈ ಹವ್ಯಾಸ ಹುಟ್ಟಬೇಕಾದರೆ ಕನ್ನಡ ಭಾಷೆ ಶಿಕ್ಷಣ ಮಾಧ್ಯಮವಾಗಬೇಕು. ಸಾವಿರಾರು ವರ್ಷದ ಇತಿಹಾಸವಿರುವ ನಮ್ಮ ಭಾಷೆಗೆ ನಮ್ಮದೇ ಆದ ವ್ಯಾಕರಣದ ಅರಿವು ಇದೆ. ಹಾಗಾಗಿ ಇಲ್ಲಿ ಯಾವ ವಸ್ತುವಿನ ಅಧ್ಯಯನ ನಡೆಯಬೇಕಾದರೂ ಅದು ನಮ್ಮ ಭಾಷೆಯ ಮುಖಾಂತರವೇ ನಡೆಯಬೇಕು. ಆಗ ಮಾತ್ರ ಭಾಷೆ ಉಳಿಯಲು ಸಾಧ್ಯ' ಎನ್ನುವ ಕಂಬಾರರ ವಿಭಿನ್ನ ಆಲೋಚನೆಗಳನ್ನು ವಿಶ್ಲೇಷಿಸಿದ್ದಾರೆ.
ದಿನಾಂಕ 13.1.2023ರಂದು ರೋಣ ತಾಲ್ಲೂಕು ಹೊಳೆ ಆಲೂರಿನ ಡಿಗ್ರಿ ಕಾಲೇಜಿನಲ್ಲಿ 'ಕಂಬಾರರ ಕಾವ್ಯ : ವಿಭಿನ್ನ ನೆಲೆಗಳು' ಎನ್ನುವ ಎರಡನೆ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. 'ಕಂಬಾರರ ಕಾವ್ಯ ಸೃಜನಶೀಲ ವಿಸ್ಮಯ' ಎನ್ನುವ ಪ್ರಬಂಧ ಮಂಡಿಸಿದ ಖ್ಯಾತ ಕಥೆಗಾರರಾದ ಡಾ. ಅಮರೇಶ ನುಗಡೋಣಿ ಅವರು "ಕಂಬಾರರು ನುಡಿ ಸೃಷ್ಟಿ ಮತ್ತು ನುಡಿಗಟ್ಟುಗಳನ್ನು ಬರಹದ ಮೂಲಧಾತುವಾಗಿಸಿ ಕೊಂಡರು. ಜಾನಪದ, ಕನ್ನಡ ಸಾಹಿತ್ಯ, ವಚನ ಚಳುವಳಿ, ಗ್ರಾಮ ಸಂಸ್ಕೃತಿಯ ಅಗಾಧ ಅನುಭವ, ಅವೈದಿಕ ಪುರಾಣ, ಐತಿಹ್ಯ, ಮಾಟ, ಮಂತ್ರ, ಹೆಣ್ಣು ಮುಂತಾದ ಲೋಕಗಳನ್ನು ಮೋಹಿಸಿ ಬೆಳದಿಂಗಳೇ ಕಂಗಾಲಾಗುವಂತೆ ಮೋಹಕವಾಗಿ ಹಾಡುವ ಹುಚ್ಚು ಹಚ್ಚಿದ ಬಗೆಯನ್ನು ವಿವರಿಸಿದ್ದಾರೆ. 'ಕಂಬಾರರ ಕಾವ್ಯ ಹಾಡುವ ಮತ್ತು ಕೇಳುವ ನೆಲೆಗಳು' ಪ್ರಬಂಧದಲ್ಲಿ ಮನು ಪತ್ತಾರ ಅವರು 'ಕನ್ನಡ ಭಾವಗೀತೆಯ ಲೋಕದ ಮೇರೆಯನ್ನೇ ಮೀರಿ ಹಾಡಿನಲ್ಲಿ ಕಥೆ, ಕಥೆಯಲ್ಲಿ ಹಾಡು, ಗದ್ಯದಲ್ಲಿ ಕಾವ್ಯದ ಗಂಧ ಬೆರೆಯುವಂತೆ ಬರೆಯುವ ಅಪರೂಪದ ಕವಿ. ಜನಪದ ಲಯದಲ್ಲಿ ತೋಯ್ದ ಇವರ ಕವಿತೆಗಳನ್ನು ಹಾಡುತ್ತ ಕೇಳುತ್ತ ಹೋದಂತೆ, ಮತ್ತೆ ಮತ್ತೆ ಮನದೊಳಗೆ ಇಳಿಸಿಕೊಳ್ಳುವ ಹುಕಿ ಹೆಚ್ಚಾಗುತ್ತದೆ. ಕಾವ್ಯವನ್ನು ಕಣ್ಣಿನಿಂದ ಕಿವಿಗೆ ಹಸ್ತಾಂತರಿಸಿ ಹೃದಯಕ್ಕೆ ಮುಟ್ಟುವಂತೆ ಮಾಡಿದವರು ಕಂಬಾರರು'. 'ಕಂಬಾರರ ಕಾವ್ಯ : ಭೂತ ಮತ್ತು ವರ್ತಮಾನದ ವಿನ್ಯಾಸಗಳು' ಪ್ರಬಂಧದಲ್ಲಿ ಕನ್ನಡ ಸಾಹಿತ್ಯ, ಅಧ್ಯಯನ ವಿಭಾಗದ ಪಿಹೆಚ್.ಡಿ. ವಿದ್ಯಾರ್ಥಿ ಸಂಗಮೇಶ ಜಿನೂರು ಅವರು 'ಕಂಬಾರರ ಕಾವ್ಯ, ಆಧುನಿಕತೆಯು ರೂಪಿಸಿದ ಕಾಲದ ವಿಭಾಗ ಕ್ರಮವನ್ನು ನಂಬುವುದಿಲ್ಲ. ಅದು ಕಾಲದ ಅಖಂಡತೆಯನ್ನು ತನ್ನ ತಾತ್ವಿಕ ನೆಲೆಯನ್ನಾಗಿಸಿಕೊಂಡು ಸಮುದಾಯದ ನೋವು ನಲಿವುಗಳನ್ನು, ಕನಸುಗಳನ್ನು ಕಾಲದ ಹಂಗಿಲ್ಲದೇ ಸಮಗ್ರವಾಗಿ ಕಟ್ಟಿಕೊಳ್ಳುತ್ತದೆ ಎಂದಿದ್ದಾರೆ. 'ಕಂಬಾರರ ಕಾವ್ಯ : ಪರ್ಯಾಯ ನೆಲೆಗಳ ಹುಡುಕಾಟ' ಪ್ರಬಂಧದಲ್ಲಿ ಚಂದ್ರಶೇಖರ ಹೆಗಡೆ ಅವರು 'ಸ್ಥಳೀಯ ಸಂಸ್ಕೃತಿಯ ಅಂತರಂಗದೊಳಗಿನಿಂದಲೇ ಕಾವ್ಯದ ಭಾಷೆ ಶೈಲಿ ಅದರ ಎಲ್ಲ ರೂಪಗಳನ್ನು ರೂಪಿಸಿಕೊಳ್ಳುವುದು ಕಂಬಾರರ ಕಾವ್ಯದ ಅಗ್ಗಳಿಕೆ ಎಂದರು. ಜನಪದ ಶೈಲಿಯನ್ನು ಹಾಡಾಗಿ ಹರಸುವುದಕ್ಕಿಂತ ಅದನ್ನೊಂದು ಅಖಂಡ ಸಾಂಸ್ಕೃತಿಕ ಪಠ್ಯವನ್ನಾಗಿ ನೋಡುವಲ್ಲಿಯೇ ಕಂಬಾರರ ಕಾವ್ಯ ಚೈತನ್ಯದ ಭಿನ್ನತೆಗಳಿವೆ ಎಂದು ಪ್ರತಿಯೊಬ್ಬ ಪ್ರಬಂಧಕಾರರೂ ಕಂಬಾರರ ಕಾವ್ಯದ ಭಿನ್ನ ಹಾಗೂ ಸೂಕ್ಷ್ಮ ನೆಲೆಗಳ ಕುರಿತು ವಿಶ್ಲೇಷಿಸಿದ್ದಾರೆ.
ದಿನಾಂಕ 18.1.2023 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಂಪೂರ (ಬಾಗಲಕೋಟ ಜಿಲ್ಲೆ)ದಲ್ಲಿ ಮೂರನೆಯ ವಿಚಾರ ಸಂಕಿರಣ ನಡೆಸಲಾಯಿತು. 'ಜಾನಪದ ಲೋಕ ಮತ್ತು ಕಂಬಾರರು' ಇಲ್ಲಿನ ಪ್ರಧಾನ ವಿಷಯ. 'ಬಯಲಾಟ ಕುರಿತು ಕಂಬಾರರ ಚಿಂತನೆಗಳು' ಈ ವಿಷಯ ಕುರಿತು ಮಾತನಾಡಿದ ಡಾ. ಚಂದ್ರಶೇಖರ ಕಾಳಣ್ಣವರ ಅವರು, ಉತ್ತರ ಕರ್ನಾಟಕದ ಬಯಲಾಟಗಳು ಜನಪದ ಸಾಹಿತ್ಯದ ಉತ್ಕೃಷ್ಟ ಕೃತಿ ಗಳಾಗಿವೆ. ಪುರಾಣ ಮಹಾಕಾವ್ಯಗಳ ವಸ್ತುವಿದ್ದಾಗಲೂ ಬಯಲಾಟಗಳು ಯಾವಾಗಲೂ ಸಾಮಾಜಿಕ ಜಾಗೃತಿಯನ್ನು ವಿದೂಷಕನ ಮೂಲಕ ಮುಂಚೂಣಿಗೆ ತರುತ್ತವೆ. ಕಥೆ ಹಳೆಯದಾದರೂ ಸಮಾಜ ಜೀವನದಲ್ಲಿ ಬಂದು ಸೇರುವ ವಿಚಾರ ಹಾಗೂ ನಂಬಿಕೆಗಳ ಮೂಲಕ ಕಥೆಯನ್ನು ಪುನಃ ಸೃಷ್ಟಿ ಮಾಡುವುದು ಬಯಲಾಟಗಳ ವಿಶೇಷತೆಯಾಗಿರು ವುದನ್ನು ಚಂದ್ರಶೇಖರ ಕಂಬಾರರು ಗುರುತಿಸುತ್ತಾರೆನ್ನುವ ವಿಚಾರವನ್ನು ಎತ್ತಿ ತೋರು ತ್ತಾರೆ. 'ಆಧುನಿಕ ರಂಗಭೂಮಿ : ಕಂಬಾರರ ದೃಷ್ಟಿಕೋನಗಳು' ಕುರಿತು ಶ್ರೀಹರಿ ಧೂಪದ ಮಾತನಾಡಿ, ಕಂಬಾರರ ನಾಟಕಗಳು ಸಮಾಜಮುಖಿಯಾಗಿ ಪಡೆಯುವಷ್ಟೇ ಜೀವಂತಿಕೆಯನ್ನು ಭಾವನಾತ್ಮಕವಾಗಿಯೂ ಪಡೆಯುತ್ತವೆ. ಮನುಷ್ಯನ ಹೊರ ಜಗತ್ತಿನ ಹೊಯ್ದಾಟಗಳಂತೆ ಒಳ ಜಗತ್ತಿನ ಹೊಯ್ದಾಟಗಳೂ ಅವರ ರಂಗಭೂಮಿ ಮತ್ತು ನಾಟಕಗಳ ಮುಖ್ಯ ಜೀವಾಳ. ಅದಕ್ಕಾಗಿ ಜಾನಪದ ಧ್ವನಿಯ ಮೂಲಕವೇ ಜಾಗತಿಕ ಆಧುನಿಕ ಸಮಸ್ಯೆಗಳಿಗೆ ಮದ್ದು ಹುಡುಕಬಹುದೆನ್ನುವ ಕಂಬಾರರ ಅಖಂಡತೆಯ ನಿಲುವನ್ನು ಮುನ್ನೆಲೆಗೆ ತಂದಿದ್ದಾರೆ. 'ಕಂಬಾರರ ನಾಟಕಗಳಲ್ಲಿ ಜನಪದ ಲೋಕ' ವಿಷಯ ಕುರಿತು ಶಿವಕುಮಾರ ರಾಂಪೂರ ಅವರು ಜಾನಪದವೇ ಕಂಬಾರರ ಅನಂತ ಕುಸುರಿ ಕಲೆಗೆ ಇನ್ನಿಲ್ಲದ ಮೆರಗು ನೀಡಿದೆ. ಅವರ ಬರವಣಿಗೆಯನ್ನು ಮುಗಿಯದ ಮುಗಿಲಿನಂತೆ ಇವತ್ತಿಗೂ ಆವರಿಸಿದೆ. ಜಾನಪದ ತತ್ತ್ವದರ್ಶನವೇ ಕಂಬಾರರ ನಾಟಕಗಳ ಸತ್ಯ, ಆ ಮೂಲಕವೇ ವಸಾಹತೀಕರಣ ಮತ್ತು ಖಾಸಗೀಕರಣದ ಎಲ್ಲ ಸಮಸ್ಯೆಗಳಿಗೆ ಉತ್ತರ ಹುಡುಕುವ ಕೆಲಸ ಮಾಡಿದ್ದಾರೆ. 'ಜನಪದ ಗೀತ ಮತ್ತು ಕಥಾ ಸಾಹಿತ್ಯ ಕುರಿತ ಕಂಬಾರರ ನೋಟಗಳು' ಕುರಿತು ರಾಜಶೇಖರ ಬಿರಾದಾರ ಅವರು 'ಜನಪದ ಸಾಹಿತ್ಯ ಅನಕ್ಷರಸ್ಥವಲ್ಲ ಅನುಭವಸ್ಥ ಸಾಹಿತ್ಯ ಕಂಬಾರರ ಜಗತ್ತು ಅಕ್ಷರ ಮತ್ತು
ಶಬ್ದಗಳನ್ನು ನಂಬಿದ್ದಲ್ಲ. ನಾದ ಲಯವನ್ನು ನಂಬಿದ್ದು. ಕನಸು ಮತ್ತು ನೆನಪುಗಳೇ. ಇವುಗಳಿಗೆ ಬಲವನ್ನು ತುಂಬುತ್ತವೆ. ಆಧುನಿಕ ಶಿಕ್ಷಣದಲ್ಲಿ ಇದಕ್ಕೆ ಅವಕಾಶ ಇಲ್ಲದಿರುವುದೇ ನಮ್ಮೆಲ್ಲರ ಅಳುಬುರುಕುತನಕ್ಕೆ ಕಾರಣವಾಗಿದೆ. ಈ ಅಳುಬುರುಕುತನದಿಂದ ಹೊರ ಬರಲು ಜಾನಪದ ಕಸುವನ್ನೇ ನಂಬಬೇಕು ಎನ್ನುವ ಕಂಬಾರರ ಸೂಕ್ಷ್ಮ ಚಿಂತನೆಗಳನ್ನು ಪ್ರತಿಯೊಬ್ಬ ಪ್ರಬಂಧಕಾರರು ಸೂಕ್ಷ್ಮವಾಗಿ ಗುರುತಿಸಿದ್ದಾರೆ.
23.1.2023ರಂದು ಬೆಳಗಾವಿಯ ಆರ್.ಪಿ.ಡಿ. ಕಾಲೇಜಿನಲ್ಲಿ ಸರಣಿಯ ನಾಲ್ಕನೆಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. 'ಕಂಬಾರರ ನಾಟಕ ಸಾಹಿತ್ಯ' ಅಗ್ರ ವಿಷಯ ವಾಗಿತ್ತು. 'ಕಂಬಾರರ ನಾಟಕಗಳಲ್ಲಿ ವ್ಯವಸ್ಥೆಯ ಪುಂಡಾಟಿಕೆ ಮತ್ತು ಪೊಳ್ಳುತನದ ಚಿತ್ರಣ' ಪ್ರಬಂಧವನ್ನು ಡಾ. ಸುಖದೇವ ಎಂ ಪಾನಬುಡೆ ಅವರು ಮಂಡಿಸಿದರು. ಸ್ವತಂತ್ರಪೂರ್ವ ಕಾಲದ ಗ್ರಾಮೀಣ ಸಮಾಜ ಎದುರಿಸುವ ಬಿಕ್ಕಟ್ಟುಗಳು, ಮನುಷ್ಯನ ಅಪರಿಪೂರ್ಣತ್ವ ಕಂಬಾರರ ನಾಟಕಗಳ ಮೂಲವಸ್ತು. ಆಳುವವರ ದರ್ಪ, ದೌರ್ಜನ್ಯ, ದಬ್ಬಾಳಿಕೆಗೆ ನಲಗುತ್ತಲೇ, ಪುಟಿದೆದ್ದು ಪ್ರತಿಭಟಿಸುವ ಪಾತ್ರಗಳನ್ನು ಕಂಬಾರರು ತರುತ್ತಾರೆ. ಅದರಲ್ಲಿಯೂ ಹೆಣ್ಣು ಪಾತ್ರಗಳು ತನ್ನ ಫಲವಂತಿಕೆ ಹಾಗೂ ಬಂಜೆತನದ ಗೊಂದಲ ದಲ್ಲಿಯೇ ಒಡಮುರಿದೆದ್ದು, ಗೌಡರ ಷಂಡತನಗಳನ್ನು ಹಾಗೂ ಪೊಳ್ಳು ಅಹಂಕಾರಗಳನ್ನು ಅನಾವರಣ ಮಾಡುವ ಪರಿಯನ್ನು ಕಂಬಾರರು ಭರವಸೆಯಿಂದ ಚಿತ್ರಿಸುತ್ತಾರೆ. ಶ್ರಮ ಮತ್ತು ಸಮಸಮಾಜ ಅವರ ನಾಟಕಗಳ ಬಹು ಮುಖ್ಯ ಧ್ವನಿ. 'ಕಂಬಾರರ ನಾಟಕಗಳಲ್ಲಿ ಹೆಣ್ಣು ಮತ್ತು ಪ್ರತಿರೋಧದ ನೆಲೆಗಳು' ಕುರಿತು ಹೊಂಬಯ್ಯ ಹೊನ್ನಲಗೆರೆ ಅವರು 'ಕಂಬಾರರ ಸಾಹಿತ್ಯದ ಮೂಲ ದ್ರವ್ಯ ಹೆಣ್ಣು. ಹೆಣ್ಣು ಕಂಬಾರರ ನಾಟಕಗಳಲ್ಲಿ ಪ್ರತಿರೋಧ ಮತ್ತು ಫಲವಂತಿಕೆ ರೂಪದಲ್ಲಿ ಬರುತ್ತಾಳೆ. ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ ಮೌಲ್ಯಗಳು ಶಿಥಿಲ ಸ್ಥಿತಿಗೆ ತಲುಪಿದ ಮತ್ತು ಹೆಣ್ಣು ಇಂತಹ ಮೌಲ್ಯರಹಿತ ವ್ಯವಸ್ಥೆ ವಿರುದ್ಧ ಸ್ವಯಂ ಬಂಡಾಯ ಏಳುವ, ವ್ಯವಸ್ಥೆಗೆ ಸೆಡ್ಡು ಹೊಡೆಯುವ ಗಟ್ಟಿತನ ಕಂಬಾರರ ಹೆಣ್ಣು ಪಾತ್ರಗಳಿಗಿರುವುದು ಹೊಸ ದೃಷ್ಟಿಯಾಗಿದೆ ಎಂದರು.
28.1.2023ರಂದು ಬೆಂಗಳೂರಿನ ಮಲ್ಲೇಶ್ವರಂನ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಅಗ್ರ ವಿಷಯ 'ಡಾ. ಚಂದ್ರಶೇಖರ ಕಂಬಾರರು ಮತ್ತು ಪ್ರಯೋಗಶಿಲತೆ'. 'ಕನ್ನಡ ರಂಗಭೂಮಿ ಮತ್ತು ಕಂಬಾರರ ಹೊಸ ಪ್ರಯೋಗಗಳು' ಈ ವಿಷಯ ಕುರಿತು ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ಮಾತನಾಡಿದರು. 'ಇಡಿ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ಪಲ್ಲಟಗಳನ್ನು ಕಂಬಾರರ ನಾಟಕ ಸಾಹಿತ್ಯದಲ್ಲಿ
ಕಾಣಬಹುದು. ಕಥೆಯೇ ಕಂಬಾರರ ನಾಟಕದ ಮುಖ್ಯ ಕೇಂದ್ರ ಮೈಥಾಲಜಿ ಮೂಲಕ ಹೇಳಿದರೂ ವರ್ತಮಾನಕ್ಕೆ ಹೆಚ್ಚು ಆದ್ಯತೆ. ಕಥೆ, ಪಾತ್ರ, ಪುರಾಣ, ಪ್ರಯೋಗ ಎಲ್ಲದರಲ್ಲಿಯೂ ಕಂಬಾರರು ನಿರಂತರ ಪ್ರಯೋಗಶೀಲರು' ಎಂದು ಹೇಳಿದರು. ಖ್ಯಾತ ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು 'ಕನ್ನಡ ಚಲನಚಿತ್ರ: ಕಂಬಾರರ ಪ್ರಯೋಗಶೀಲತೆ' ವಿಷಯ ಕುರಿತು ಮಾತನಾಡುತ್ತ 'ನಿರಂತರ ಕಲಿಕೆಯೇ ಕಂಬಾರರ ಪ್ರಯೋಗಶೀಲತೆಯಾಗಿದೆ. ಕಥೆ, ತಂತ್ರಜ್ಞಾನ, ಹಾಡು, ಸಂಗೀತ, ಬಾಲ್ಯದ ಸಿಹಿ ಕಹಿ ನೆನಪುಗಳನ್ನು ಮೇಲೈಸಿ ಹೊಸ ಪರಿಕಲ್ಪನೆಗಳನ್ನು ಸೃಷ್ಟಿಸುವಲ್ಲಿ ಅವರು ನಿಸ್ಸಿಮರು. ಕಾಡು ಕುದುರೆ ಓಡಿ ಬಂದಿತ್ತ ಎಂದು ಅವರು ಸೃಷ್ಟಿಸಿದ ಲಯ ರಾಷ್ಟ್ರಪ್ರಶಸ್ತಿ ಪಡೆಯಿತು. ಭಾಷೆ ಅರ್ಥವಾಗದಿದ್ದರೂ ಅವರ ಲಯ ಇಡೀ ಭಾರತದ ರಂಗಸಂಗೀತ ಗಾರರನ್ನು ಸಮ್ಮೋಹನಗೊಳಿಸಿತ್ತು ಎಂದು ಹೇಳಿದರು.
ಈ ಸರಣಿಯ ಐದು ವಿಚಾರ ಸಂಕಿರಣಗಳಲ್ಲಿ ಪ್ರತಿಯೊಬ್ಬ ಪ್ರಬಂಧಕಾರರು ಕಂಬಾರರನ್ನು, ಅವರ ಸಾಹಿತ್ಯದ ಸತ್ವವನ್ನು ಹೊಸ ನೋಟ ಕ್ರಮದಲ್ಲಿ ಗ್ರಹಿಸಿದ್ದಾರೆ. ಹೆಚ್ಚಿನವರು ಇದುವರೆಗೂ ಯಾರೂ ಉಲ್ಲೇಖಿಸದ ಪದ್ಯಗಳನ್ನು, ಪಾತ್ರಗಳನ್ನು, ಸಂಗತಿಗಳನ್ನು ಮೊದಲಬಾರಿಗೆ ಉಲ್ಲೇಖಿಸಿ ಕಂಬಾರರನ್ನು ತಟಸ್ಥ ಓದಿನಿಂದ ಸೃಜನಶೀಲ ಓದಿನ ದಾರಿಗೆ ತಿರುಗಿಸಿದ್ದಾರೆ. ವಿಶೇಷವೆಂದರೆ ಕೆಲವೊಬ್ಬ ಹಿರಿಯ ವಿದ್ವಾಂಸರು ಮತ್ತು ರಂಗತಜ್ಞರನ್ನು ಬಿಟ್ಟರೆ ಹೆಚ್ಚಿನ ಯುವ ಮಿತ್ರರು ಕಂಬಾರರನ್ನು ಮೊದಲ ಬಾರಿಗೆ ಕಣ್ಣು ತುಂಬಿಕೊಂಡವರು. ಅವರ ವಿಚಾರಗಳೊಂದಿಗೆ ಅನುಸಂಧಾನ ಮಾಡಿದವರು. ನಮ್ಮ ಈ ಸರಣಿ ವಿಚಾರ ಸಂಕಿರಣದ ಉದ್ದೇಶವೇ ಕಂಬಾರರನ್ನು ರೂಢಿಗತ ಅಧ್ಯಯನಕ್ಕಿಂತ ಭಿನ್ನವಾಗಿ ಓದುವುದಾಗಿತ್ತು. ಕಂಬಾರ ಮತ್ತು ಅವರ ಸಾಹಿತ್ಯವನ್ನು ಅಪರಿಚಿತರಾದ ಹೊಸ ಓದುಗ ಹಾಗೂ ಕೇಳುಗ ವಲಯಕ್ಕೆ ಕೊಂಡೊಯ್ಯುವುದಾಗಿತ್ತು. ಕಂಬಾರರ ಸಾಹಿತ್ಯದ ಓದನ್ನು ಹೊಸ ವಿಸ್ತಾರದತ್ತ ತಿರುಗಿಸಬೇಕಾಗಿತ್ತು. ಅದನ್ನು ಯಶಸ್ವಿಯಾಗಿ ಮಾಡಿದೆವು ಕೂಡ.
ನಾನು ಈ ವಿಷಯಗಳನ್ನು ಮಾತನಾಡುವ ಹುಡುಗರಿಗೆ ನೀಡಿದಾಗ ಅವರಲ್ಲಿ ಮೂಡಿದ ಆಶ್ಚರ್ಯ, ವಿಸ್ಮಯ, ರೋಮಾಂಚನ, ಭಯ, ಸಂಭ್ರಮಗಳು ನನ್ನ ಮಾತಿಗೆ ಒತ್ತಾಸೆಯಾಗಿವೆ. 'ಸರ್ ನಾನು ಕಂಬಾರರ ಬಗ್ಗೆ ಮಾತನಾಡಬೇಕಾ....' 'ನಾನಾ.. ಸರ್', 'ಸರ್ ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಸರ್' ಎಂದು ಯುವ ಮಿತ್ರರು ತಗೆದ ಉದ್ಗಾರ, ಕಾಲೇಜುಗಳಲ್ಲಿ ಅಲ್ಲಿನ ಅಧ್ಯಾಪಕರು, ವಿದ್ಯಾರ್ಥಿಗಳು ವಿಚಾರ ಸಂಕಿರಣದ ದಿನ ಹಬ್ಬದಂತೆ, ಸೀರೆ, ಪಂಚೆ ಉಟ್ಟು ಮನೆಯಿಂದ ಬಗೆ ಬಗೆಯ ಅಡುಗೆ ಮಾಡಿಕೊಂಡು ತಂದು ಎಲ್ಲರೂ ಸಹಭೋಜನ ಮಾಡಿದ ರೀತಿಗಳು ನನ್ನ ಕಣ್ಣಾಲಿಯಲ್ಲಿ ಅಚ್ಚಳಿಯದೆ ಉಳಿದಿವೆ.
ಕಂಬಾರರೆಂದರೆ ಸಂಭ್ರಮ, ಕಂಬಾರರೆಂದರೆ ಸಡಗರ, ಕಂಬಾರರೆಂದರೆ ಸೌಜನ್ಯ ಕಂಬಾರರೆಂದರೆ ಅಂತಃಕರಣ, ಕಂಬಾರರೆಂದರೆ ಕನ್ನಡದ ನರ ನಾಡಿಗಳು ಕುಣಿದು ಕುಪ್ಪಳಿಸುತ್ತವೆ. ಇವತ್ತಿಗೂ ಕಂಬಾರರೆಂದರೆ ಆಕರ್ಷಣೆ, ಒಂದು ಆತ್ಮ ವಿಶ್ವಾಸ. ಅವರ ಜನ ಪ್ರೀತಿ ಕರ್ನಾಟಕದ ಜನಮನಸಲ್ಲಿ ಪ್ರವಾಹ ರೂಪದಲ್ಲಿ ಪ್ರವಹಿಸುತ್ತದೆ. ಶಾಲಾ, ಕಾಲೇಜು, ಮಠ ಮಾನ್ಯ, ವಿವಿಧ ಸಮುದಾಯದ ಕಾರ್ಯಕ್ರಮಗಳಿಗೆ ಕಂಬಾರರನ್ನು ಕರೆದೊಯ್ದಾಗ ನಾ ಕಂಡ ದೃಶ್ಯಗಳಿವು. ಒಟ್ಟಿನಲ್ಲಿ ಕಂಬಾರರೆಂದರೆ ಅದೊಂದು ಅಚ್ಚಳಿಯದ ಕನ್ನಡದ ಸಾಕ್ಷಿಪ್ರಜ್ಞೆ, ಕನ್ನಡದ ಅಸ್ಮಿತೆ.
- ಡಾ. ವೀರೇಶ ಬಡಿಗೇರ
ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...
ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...
©2024 Book Brahma Private Limited.