ಕಾವ್ಯಾನುವಾದ ಎಲ್ಲ ಕಾಲದಲ್ಲೂ ಅಗತ್ಯವಾದ ಕ್ರಿಯೆಯೇ


"ಒಂದು ಭಾಷಿಕ ಲೋಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ, ಆಚರಣೆಯಲ್ಲಿರುವ ಸೂಕ್ಷ್ಮತೆ, ಸಂವೇದನೆ, ವಸ್ತುವಿಷಯ, ದೃಷ್ಟಿಕೋನ, ಆಯಾಮಗಳನ್ನು ಇನ್ನೊಂದು ಸ್ತರಕ್ಕೆ ವಿಸ್ತರಿಸುವ ಗುಣವನ್ನು ಪಡೆದಿರುವ ಅನುವಾದ, ಅದರಲ್ಲಿಯೂ ಕಾವ್ಯಾನುವಾದ ಎಲ್ಲ ಕಾಲದಲ್ಲೂ ಅಗತ್ಯವಾದ ಕ್ರಿಯೆಯೇ," ಎನ್ನುತ್ತಾರೆ ಕೇಶವ ಮಳಗಿ. ಅವರು ಎಸ್. ಜಯಶ್ರೀನಿವಾಸ ರಾವ್ ಅವರ ಅನುವಾದಿತ ‘ಬಾಲ್ಟಿಕ್ ಕಡಲ ಗಾಳಿ’ ಕೃತಿಗೆ ಬರೆದ ಮುನ್ನುಡಿ..

ಕಾವ್ಯಾನುವಾದದಲ್ಲಿ ಸಾಹಸಿ ಮನೋಭಾವದ ಎಸ್‌. ಜಯಶ್ರೀನಿವಾಸ ರಾವ್‌ ಆ ಗುಣದಿಂದಾಗಿಯೇ ಇಷ್ಟವಾಗುವ ಕವಿ ಮತ್ತು ಅನುವಾದಕ. ಕನ್ನಡ ಓದುಗರು ಇನ್ನೂ ಮುಖಾಮುಖಿಯಾಗಿರದ ಹೊಸ ಹೊಸ ದೇಶಭಾಷೆಯ ಕವಿಗಳನ್ನು ಹುಡುಕಿ ಅವರು ಅನುವಾದಿಸುವ ಪರಿ ಅನುಕರಣೀಯ. ಮೂಲಕ್ಕೆ ನಿಷ್ಠರಾಗಿ ಅವರು ಅನುವಾದಿಸುವ ಪರಿ ಕೂಡ ಗಮನಾರ್ಹ. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಯಾಶೀಲರಾದ ಜಯ ಅವರ ಅನುವಾದದಲ್ಲಿ ಒಂದೆರಡು ಪದ ಬಳಕೆಯ ಕುರಿತು ಈ ಹಿಂದೆ ಅವರೊಂದಿಗೆ ಚರ್ಚಿಸಿದ್ದಿದೆ. ನನ್ನಂಥವರ ವಾದವನ್ನು ಒಪ್ಪಿಯೂ ಮೂಲಪದದ ಅರ್ಥ ವ್ಯತ್ಯಾಸವಾಗುವುದರಿಂದ ತಮ್ಮ ಪದ ಬಳಕೆಯೇ ಸರಿ ಎಂದಿದ್ದು ಅವರ ಮೂಲನಿಷ್ಠೆ, ಅನುವಾದದಲ್ಲಿ ಅವರು ಅನುಸರಿಸುವ ತತ್ವವನ್ನು ಎತ್ತಿ ತೋರಿಸುತ್ತದೆ.

ಒಂದು ಭಾಷಿಕ ಲೋಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ, ಆಚರಣೆಯಲ್ಲಿರುವ ಸೂಕ್ಷ್ಮತೆ, ಸಂವೇದನೆ, ವಸ್ತುವಿಷಯ, ದೃಷ್ಟಿಕೋನ, ಆಯಾಮಗಳನ್ನು ಇನ್ನೊಂದು ಸ್ತರಕ್ಕೆ ವಿಸ್ತರಿಸುವ ಗುಣವನ್ನು ಪಡೆದಿರುವ ಅನುವಾದ, ಅದರಲ್ಲಿಯೂ ಕಾವ್ಯಾನುವಾದ ಎಲ್ಲ ಕಾಲದಲ್ಲೂ ಅಗತ್ಯವಾದ ಕ್ರಿಯೆಯೇ. ಸಹೃದಯರು ಕೈಗೆತ್ತಿಕೊಳ್ಳುವ ಅನುವಾದಕ್ಕೂ, ಜಯಶ್ರೀನಿವಾಸ ರಾವ್‌ರಂಥವರು ತೊಡಗಿಕೊಳ್ಳುವ ಅನುವಾದಕ್ಕೂ ಒಂದು ಸೂಕ್ಷ್ಮ ವ್ಯತ್ಯಾಸವಿರುತ್ತದೆ. ಈ ಬಗೆಯ ಅನುವಾದಕರ ವಿಶಾಲವಾದ ಓದು, ಅಧ್ಯಯನ, ಅಧ್ಯಾಪನ, ಆ ಕುರಿತು ಮಾಡಿದ ವಿಸ್ತೃತವಾದ ಚಿಂತನೆಗಳು ಸ್ವೀಕಾರ ಮಾಡಿಕೊಳ್ಳುವ ಭಾಷೆಗೆ ಹೊಸ ಕಸುವನ್ನು ತುಂಬ ಬಲ್ಲವು. ಅನುವಾದವೊಂದಕ್ಕೆ ಸನ್ನಿವೇಶ, ಖಚಿತತೆ ಮತ್ತು ಸಮಕಾಲೀನತೆ ಇರಬೇಕೆಂದು ಬಲವಾಗಿ ನಂಬಿರುವವನು ನಾನು. ಹೀಗಿದ್ದಾಗ, ಸ್ವೀಕೃತವಾಗುತ್ತಿರುವ ಕೃತಿಗೆ ಒಂದು ಸಾಂಸ್ಕೃತಿಕ ಮಹತ್ವ ಬರುತ್ತದೆ. ನಿಜವಾದ ಅರ್ಥದಲ್ಲಿ ಹೊಸ ಅನುಭವ ದಕ್ಕುತ್ತದೆ.

ಹಾಗೆಂದು, ಸಹೃದಯತೆಯೇ ಪ್ರಧಾನವಾಗಿ ಮಾಡಿದ ಯಶಸ್ವಿ ಅನುವಾದಗಳು ಕಡಿಮೆ ಸ್ತರದ್ದವು, ಪರಿಣತ ಅನುವಾದಗಳು ಮಾತ್ರ ಹೆಚ್ಚುಗಾರಿಕೆ ಇರುವಂಥವು ಎಂಬುದು ಇಲ್ಲಿನ ಅರ್ಥವಲ್ಲ. ಇದೊಂದು ಹೋಲಿಕೆಯಷ್ಟೇ. ಈ ಸಾದೃಶ್ಯತೆ ಸಹೃದಯ ಓದುಗ/ಅನುವಾದಕರಲ್ಲಿ ಸೂಕ್ಷ್ಮತೆ ಬೆಳೆಸಲಿ ಎಂದು ಸದಾಶಯವುಳ್ಳದ್ದು. ಉತ್ಸಾಹದಿಂದ ಅನುವಾದಕ್ಕೆ ತೊಡಗಿಕೊಳ್ಳುವ ಲೇಖಕರು ಸ್ವಲ್ಪ ಪೂರ್ವಸಿದ್ಧತೆ ಮಾಡಿಕೊಳ್ಳಲಿ ಎಂಬ ಕಳಕಳಿಯದ್ದು.

ಸದ್ಯ ಜಯಶ್ರೀನಿವಾಸ ರಾವ್‌ ಪ್ರಕಟಿಸುತ್ತಿರುವ ʻಬಾಲ್ಟಿಕ್‌ ಕಡಲ ಗಾಳಿʼ ಮೇಲಿನ ಹೇಳಿಕೆಯನ್ನು ನಿಜ ಮಾಡುವ, ಓದುಗರಿಗೆ ಹೊಸ ಬಗೆಯ ಅನುಭವವನ್ನು ನೀಡುವ ಸಂಕಲನ. ಬಾಲ್ಟಿಕ್‌ ದೇಶಗಳ (ಎಸ್ಟೋನಿಯಾ, ಲ್ಯಾಟ್ವಿಯಾ, ಲಿಥುವೇನಿಯಾ) ಸುಮಾರು ಇಪ್ಪತ್ತು ಕವಿಗಳ ನೂರಾರು ಕವಿತೆಗಳು ಇಲ್ಲಿ ಸಂಗ್ರಹಗೊಂಡಿವೆ. ಯೂರೋಪಿನ ಸಣ್ಣಪುಟ್ಟ ದೇಶಗಳಾದ ಮತ್ತು ರಾಜಕೀಯ ಅಸ್ಥಿರತೆ, ರಾಜಕೀಯ ಆಕ್ರಮಣಗಳಿಗೆ ಒಳಗಾದ ಈ ದೇಶಗಳ ಜತೆಗೆ ನಾವೊಂದು ಬಾದರಾಯಣ ಸಂಬಂಧ ಹುಡುಕಬಹುದಾದರೆ ಈ ದೇಶಭಾಷೆಗಳು ಇಂಡೋ-ಯುರೋಪಿಯನ್‌ ಭಾಷಾ ಕುಟುಂಬಕ್ಕೆ ಸೇರಿದಂಥವು.

ಸಂಕಲನದಲ್ಲಿ ಅನುವಾದಗೊಂಡ ಸಮಕಾಲೀನ ಕವಿಗಳು ಆಯಾ ಭಾಷೆಗಳಲ್ಲಿ ಮಾತ್ರವಲ್ಲ, ಯೂರೋಪ್‌ ಹಾಗೂ ಇಂಗ್ಲಿಷ್ ಕಾವ್ಯಜಗತ್ತಿನಲ್ಲಿಯೂ ಲೋಕಪ್ರಿಯರು. ಈ ಲೋಕಪ್ರಿಯತೆಗೆ ಅವರ ಕಾವ್ಯಗುಣವೇ ಕಾರಣವೆನ್ನುವುದು ಹೆಚ್ಚುಗಾರಿಕೆಯ ಮಾತು. ಆಯ್ಕೆ, ಸಂಪಾದನೆ ಮತ್ತು ಅನುವಾದದಲ್ಲಿ ಜಯಶ್ರೀನಿವಾಸ ರಾವ್‌ರ ಪರಿಣತಿ, ಸೂಕ್ಷ್ಮತೆ ಎದ್ದು ಕಾಣುತ್ತದೆ. ಪ್ರತಿ ಕವಿಯ ಕುರಿತು ಅವರು ಬರೆದ ಆರಂಭಿಕ ಟಿಪ್ಪಣಿಗಳು ಅಧ್ಯಯನಪೂರ್ಣವಾಗಿದ್ದು ಹೊಸ ಓದುಗರಿಗೆ ಒಂದು ಸಂದರ್ಭದಲ್ಲಿ ಒಬ್ಬ ಕವಿಯ ಕವಿತೆಗಳಿಗೆ ಪ್ರವೇಶ ಪಡೆಯುವುದು ಹೇಗೆಂದು ತಿಳಿಸುವಂತಿವೆ.

ʻಬಾಲ್ಟಿಕ್‌ ಕಡಲ ಗಾಳಿʼ ಸಂಗ್ರಹದ ಕವಿತೆಗಳು ಯಾವ ರೀತಿಯಿಂದ ನೋಡಿದರೂ ಹೊಸ ಬಗೆಯವು. ಅಂದಮಾತ್ರಕ್ಕೆ, ನಾವು ಕಂಡು-ಕೇಳಿರದ ಲೋಕವೊಂದರ ಅನುಭವಗಳನ್ನಿವು ಅನಾವರಣಗೊಳಿಸುತ್ತವೆ ಎಂದಲ್ಲ. ಬದಲಿಗೆ, ಸಾಮಾನ್ಯವಾಗಿ ಕಾವ್ಯ ವಿಷಯಕ್ಕೆ ಹೊರತಾದ, ಆದರೆ, ನಮ್ಮ ಸಂವೇದನೆಗೆ ಅಪರಿಚಿತವಲ್ಲದ ಲೋಕವನ್ನು ತೆರೆದಿಡಲು ಕವಿತೆಗಳು ಬಳಸುವ ಭಾಷೆ, ತೋರುವ ಸೂಕ್ಷ್ಮತೆ, ವಿಧಾನಗಳಿಂದಾಗಿ, ಕಾವ್ಯ ಕಾಳಜಿ, ಅಪ್ಪಟ ಜೀವನಪ್ರೀತಿಯಿಂದಾಗಿ ಮನಸ್ಸನ್ನು ತಟ್ಟುವಂಥವು. ಕಾವ್ಯ ವಸ್ತುವೊಂದಕ್ಕೆ ಬೇರೊಂದು ನೆಲೆಯಿಂದ ಪ್ರವೇಶ ಪಡೆಯಲು ಸಾಧ್ಯವೆಂದು ತೋರಿಸುವಂಥವು. ಕೆಲವೊಮ್ಮೆ ಅರೆ! ಎಂಥ ಕಿರಿದಾದ ವಿಷಯ, ಎಷ್ಟು ಸಣ್ಣ ಸಂಗತಿ ಆದರೂ ಬೆರಗುಗೊಳ್ಳುವ ರಚನೆಯಾಗಿದೆಯಲ್ಲ ಎಂದು ಉದ್ಗಾರ ಹೊರಡಿಸುವಂಥವು. ಸಂಕಲದಲ್ಲಿರುವ ಕೆಲವು ಕವಿತೆಗಳನ್ನು ಹೆಸರಿಸಬಹುದಾದರೆ, ಮಹಾ ಕೊಡಲಿ, ಬೇಸಗೆಯೊಳಗೆ ಕಾಲಿಡುವುದು, ಹೂದೋಟದಲ್ಲಿನ ಆ ಹಳದಿ ಚಿಟ್ಟೆಗಳೋ!, ಬೀದಿಗಾಯಕರು, ಕೇಳಿಸುತಿದೆ ನನಗೆ, ಸುರುಳಿ ಮೆಟ್ಟಲುಗಳು, ಕಿಡಿಯೊಂದು ಬಟ್ಟೆಯ ಕಚ್ಚಿ ಕಚ್ಚಿ, ನನ್ನ ಜೀವದ ಗಡಿಯಾರ. . . ಇತ್ಯಾದಿ. ಇವು ಮತ್ತು ಇಂಥ ಕವಿತೆಗಳು ತಮ್ಮ ರಾಚನಿಕ ಸ್ವರೂಪ, ವಸ್ತುವಿಗೆ ಪ್ರವೇಶ ಪಡೆಯುವ ಬಗೆಯಿಂದಾಗಿ ಓದುಗರಲ್ಲಿ ಹುಟ್ಟು ಹಾಕುವ ಬೆರಗು ಸಾಮಾನ್ಯವಾದುದಲ್ಲ. ಬಹುಶಃ ಕನ್ನಡದಲ್ಲಿ ಇಂಥ ಕವಿತೆಗಳನ್ನು ಬರೆಯುವ ಸಂವೇದನೆ-ಸಾಮರ್ಥ್ಯವಿದ್ದವರು ಕೆ. ವಿ. ತಿರುಮಲೇಶ್‌ ಮಾತ್ರವೇನೊ!

ಸಂಕಲನದ ಎಲ್ಲ ಕವಿತೆಗಳನ್ನು ಓದಿದಾಗ ಪಡೆಯುವ ಒಟ್ಟು ಅನುಭವವನ್ನು ಸಾಂದ್ರವಾಗಿ ಪದಗಳಲ್ಲಿ ಹೇಳಬಹುದಾದರೆ, ಮನುಷ್ಯನ ಅಸ್ತಿತ್ವ, ನಿಸರ್ಗದ ನಿಗೂಢತೆ, ಜೀವಿಗೆ ಇರಬಹುದಾದ ಇತಿಮಿತಿಗಳ ಕುರಿತು ವಿಷಾದ, ಆ ವಿಷಾದದಿಂದ ಮೂಡುವ ಹೊಸ ಅರಿವು, ಸಂವೇದನಾಶೀಲನಾಗಿರುವ ಕವಿಯ ಬಿಡುಗಡೆಯೆಂದರೆ ಆತನ ಅಭಿವ್ಯಕ್ತಿ ಮಾತ್ರ, ಈ ಬಿಡುಗಡೆಯ ಹಂಬಲ ಕೂಡ ತಕ್ಷಣದ ಜಂಜಡಗಳಿಂದ ಪಡೆಯುವ ಮುಕ್ತಿ ಮಾತ್ರವಾಗಿರದೆ, ಜೀವಿಯ ಅಸ್ತಿತ್ವ, ಬದುಕಿನ ಅರ್ಥವನ್ನು ಬಗೆದು ನೋಡುತ್ತ ಅದರಲ್ಲೇ ಸಾರ್ಥಕತೆಯನ್ನು ಕಂಡುಕೊಳ್ಳುವುದಾಗಿದೆ. ಸಾಮಾಜಿಕ ತಲ್ಲಣವನ್ನು ವಾಚ್ಯವಾಗಿಸದೆ ರೂಪಕದಲ್ಲಿ ಹಿಡಿದಿಡಬಲ್ಲ ವಿಧಾನ ಯಾವುದು? ಮನುಷ್ಯನ ಆದಿಮ ಪ್ರೇಮಗೀಮವನ್ನು ತನ್ನ ಅನುಭವವಾಗಿ ಶಬ್ದದಲ್ಲಿ ಕಟ್ಟುವುದು ಹೇಗೆ? ಎಂದು ಧ್ಯಾನಿಸುವುದಾಗಿದೆ. ಮತ್ತು ಓದುಗರು ಪಡೆಯಬಹುದಾದ ಈ ಭಾವಗಳು ಅನುಕ್ರಮದಲ್ಲಿ ಎದುರಾಗುವ ಅನುಭವಗಳಾಗಿರದೆ ಸಂಕಲನದುದ್ದಕ್ಕೂ ಹರಡಿ ಓದುಗರ ಸೂಕ್ಷ್ಮತೆಯ ಮೇಲೆ ಒಲಿಯುವಂಥವು.

ಜಯಶ್ರೀನಿವಾಸ ರಾವ್‌ ಮೂಲಕ್ಕೆ ನಿಷ್ಠರಾದ ಅನುವಾದಕರು ಎಂದು ಮೊದಲೊಮ್ಮೆ ಹೇಳಿದೆ. ಇಲ್ಲಿನ ಕವಿತೆಗಳು ಬೇರೊಂದು ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಗೊಂಡು ಬಳಿಕ ಕನ್ನಡಕ್ಕೆ ಬರುತ್ತಿರುವಂಥವು. ಆದಾಗ್ಯೂ, ಕವಿತೆಗಳನ್ನು ಅನುವಾದಿಸುವಾಗ ಅವರು ಮಾಡಿಕೊಂಡಿರುವ ಪೂರ್ವಸಿದ್ಧತೆ ಮತ್ತು ಶ್ರದ್ಧೆಯಿಂದಾಗಿ ಮೂಲಕ್ಕೆ ಬಹಳ ಹತ್ತಿರದಲ್ಲಿವೆ ಎಂದು ಕಲ್ಪಿಸಬಹುದು.

ಜಾಗತೀಕರಣದ ಬಳಿಕ ವಿಶ್ವದ ಎಲ್ಲ ದೇಶ-ಭಾಷೆಗಳಂತೆಯೇ ಕನ್ನಡ ಕೂಡ ಹೊಸ ವಿಚಾರ ಮತ್ತು ಸಂವೇದನೆಗಳಿಗೆ ತೆರೆದುಕೊಳ್ಳುತ್ತ ಬಂದಿದೆ. ಹೊಸ-ಹಳೆಯ ತಲೆಮಾರಿನ ಅನುವಾದಕರು ಉತ್ಸಾಹದಿಂದ ಕಾವ್ಯಾನುವಾದದಲ್ಲಿ ತೊಡಗಿಕೊಂಡ ಕಾಲವೂ ಇದೆ. ಈ ಪ್ರಯತ್ನದಿಂದಾಗಿಯೇ ಅನ್ಯ ದೇಶಭಾಷೆಯ ಅನೇಕ ಅಪರಿಚಿತ ಕವಿಗಳು ಇಂದು ಕನ್ನಡದ ಕವಿಗಳಾಗಿದ್ದಾರೆ. ಜಯಶ್ರೀನಿವಾಸ ರಾವ್‌ ಅವರ ʻಬಾಲ್ಟಿಕ್‌ ಕಡಲ ಗಾಳಿʼ ಅಂಥ ಪ್ರಯತ್ನಗಳಲ್ಲಿ ಅಪರೂಪದ್ದು, ಅನನ್ಯವಾದುದು. ಈವರೆಗೂ ಓದಿರದ ಬಾಲ್ಟಿಕ್‌ ದೇಶಭಾಷೆಗಳ ಮಹತ್ವದ, ಸಮಕಾಲೀನ ಕವಿಗಳನ್ನು ಈ ದೆಸೆಯಿಂದ ಒಟ್ಟಿಗೆ ಓದಿ, ಕಾವ್ಯಾಧ್ಯಯನದಲ್ಲಿ ತೊಡಗಿಕೊಳ್ಳುವ ಅವಕಾಶವನ್ನು ಈ ಸಂಕಲನ ಒದಗಿಸುತ್ತಿದೆ. ಹೊಸ ತಲೆಮಾರಿನ ಕಾವ್ಯಾಸಕ್ತರಿಗೆ ಈ ಸಂಗ್ರಹ ಅನೇಕ ವಿಷಯಗಳನ್ನು ಏಕಕಾಲಕ್ಕೆ ಕಲಿಸಬಲ್ಲ ಗುಣವನ್ನು ಹೊಂದಿದೆ. ಇಂಥ ಹಲವಾರು ಕಾರಣಕ್ಕಾಗಿ ಜಯಶ್ರೀನಿವಾಸ್‌ ರಾವ್‌ರಿಗೆ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸುತ್ತ ಓದುಗರು ಹುಮ್ಮಸ್ಸಿನಿಂದ ಈ ಅನುವಾದಿತ ಕಾವ್ಯ ಕೃತಿಯನ್ನು ಸ್ವೀಕರಿಸಲೆಂದು ಆಶಿಸುತ್ತೇನೆ.

ಕೇಶವ ಮಳಗಿ

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...