ಕವಿಯಾದವರಿಗೆ ಕಣ್ಣು, ಕಿವಿ ಎಲ್ಲ ತೆರೆದುಕೊಂಡಿರಬೇಕು


"ನನಗೆ ಬಹಳ ಇಷ್ಟವಾದದ್ದು ಇವರು ಬಳಸಿದ ಭಾಷೆ. ಕವಿಗಳಿಗೆ ಅಥವಾ ಬರಹಗಾರರಿಗೆ ಭಾಷೆಯನ್ನು ಬಳಸುವುದರ ಬಗೆಗೊಂದು ಒಲವಿರಬೇಕು. ಶಬ್ದ ಭಂಡಾರದಲ್ಲಿ ಮುಗಿಯದ ಖಜಾನೆಯಂತೆ ಪದಗಳು ತುಂಬಿ ತುಂಬಿ ತುಳುಕುತಿರಬೇಕು. ಅಂತಹುದೊಂದು ಪದ ಪುಂಜಗಳ ಗೊಂಚಲನ್ನು ಈ ಸಂಕಲನ ಗಟ್ಟಿ ಕೊಟ್ಟಿದೆ," ಎನ್ನುತ್ತಾರೆ ಸುಲೋಚನಾ ಪಚ್ಚಿನಡ್ಕ. ಅವರು ಮಧು ಬಿರಾದಾರ ಅವರ ‘ದೊರೆ ನೆತ್ತಿ ಗರುಡ’ ಕವನ ಸಂಕಲನದ ಕುರಿತು ಬರೆದ ವಿಮರ್ಶೆ.

ಡಾ.ಮಧು ಬಿರಾದರ ಅವರ "ದೊರೆ ನೆತ್ತಿ ಗರುಡ" ಕವನ ಸಂಕಲನದ ಕುರಿತು ಬರೆಯದೇ ಹೋದರೆ ತಪ್ಪಾದೀತು.

ನಾನು ತುಳು ಎಂ.ಎ ಮೊದಲ ವರ್ಷದಲ್ಲಿರುವಾಗ, ಕವಿ ಕುವೆಂಪುರವರ ಮನೆಗೆ ಅವರ ಭೇಟಿಕೊಡುವ ಕನ್ನಡ ವಿಭಾಗದ ಕಾರ್ಯಕ್ರಮದಲ್ಲಿ ನನ್ನನ್ನೂ ಸಹ ನಮ್ಮ ಸಂಯೋಜಕರಾದ ಡಾ.ಮಾಧವ ಸರ್ ಸೇರಿಸಿದ್ದರು. ಅಲ್ಲಿ ಕುವೆಂಪು ಕುರಿತ ವಿಚಾರ ಸಂಕಿರಣ ಇತ್ತು. ನಾನು ಅವರ ಕಾದಂಬರಿಗಳ ಬಗ್ಗೆ ಆ ಕಾರ್ಯಾಗಾರದಲ್ಲಿ ಒಂದು ಪೇಪರ್ ಪ್ರೆಸೆಂಟ್ ಮಾಡಿದ್ದೆ. ಆಗ ಮಧು ಸರ್ ಕೂಡಾ ಬಂದಿದ್ದರು. ಆ ಹೊತ್ತಿಗೆ ಮಂಗಳೂರಿಗೆ ಅವರು ಹೊಸಬರು. ಅವರದ್ದೇ ವಿಭಾಗದ ಕಾರ್ಯಕ್ರಮ ಆದ ಕಾರಣ ಅವರ ಪತ್ನಿಯನ್ನೂ ಸಹ ಕರೆದುಕೊಂಡು ಬಂದಿದ್ದರು. ಸರ್ ಗೆ ಆಗಷ್ಟೇ ಮದುವೆಯಾಗಿತ್ತು.

ತುಂಬ ಸಂಕೋಚದ, ಅತ್ಯಂತ ಸರಳತೆಯ, ಮೃದು ಮಾತಿನ ಸಣ್ಣ ವಯಸಿನ ಮಧು ಬಿರಾದರ್ ಊರು, ಜನಗಳು ಹೊಸತು ಅನ್ನುವ ಕಾರಣಕ್ಕಾಗಿ ಇರಬೇಕು..... ಹೆಚ್ಚು ಬೆರೆಯುತ್ತಿರಲಿಲ್ಲ. ನಾವೆಲ್ಲ ಭಾಷಾ ವಿಭಾಗದವರು ಅದೂ ಇದೂ ಅಂತೆಲ್ಲ ಒಂದಷ್ಟು ಹೊರಟೆ ಹೊಡೆದ್ವಿ. ಅವರ ಪತ್ನಿಯೂ ನಮ್ಮೆಲ್ಲರ ಜೊತೆಗೆ ಹೊಂದಿಕೊಂಡರು.

ಆಮೇಲಾಮೇಲೆ ಬೇರೆ ಬೇರೆ ಕಾರ್ಯಾಗಾರಗಳು, ಸಾಹಿತ್ಯ ಚಟುವಟಿಕೆಗಳು ಅವರದ್ದೇ ಕಾಲೇಜಿನಲ್ಲಿ ನನ್ನ ತುಳು ಎಂ.ಎ ಯೂ ಇದ್ದದ್ದರಿಂದ ಒಂದಷ್ಟು ಎದುರು ಬಾರಿ ಸಿಕ್ಕಾಗ ಮಾತನಾಡುವುದಕ್ಕೆ ಸಾಧ್ಯವಾಗಿತ್ತು.

ಅವರು ಕವಿತೆ ಬರೆಯುತ್ತಾರೆ ಅಂತ ಗೊತ್ತಿರಲಿಲ್ಲ ನನಗೆ. ನನ್ನ ಪುಸ್ತಕಗಳ ಬಗೆಗಿನ ಓಡಾಟದ ಸಂದರ್ಭದಲ್ಲಿ ಬಿಡುಗಡೆಗೆ ಶುಭ ಹಾರೈಸುವಾಗ ಹೇಳಿದ್ದರು. ನನ್ನದೂ ಒಂದು ಸಂಕಲನ ಐತ್ರೀ ಮೇಡಂ ಅಂತ. ಅವರ ಪುಸ್ತಕದ ಶೀರ್ಷಿಕೆ ಬಹಳ ಆಕರ್ಷಕವಾಗಿತ್ತು. ಓದಲೇಬೇಕು ಕಳಿಸಿಕೊಡಿ ಅಂತ ಹೇಳಿದ್ದೆ. ಬಿಡುಗಡೆಗೊಂಡು ಎಷ್ಟೋ ದಿನಗಳಾದ ಬಳಿಕ ಕಳುಹಿಸಿ ಕೊಟ್ಟಿದ್ದಾರೆ.

ಈ ಸಂಕಲನದಲ್ಲಿ ಒಟ್ಟು ನಲ್ವತ್ತ ಆರು ಕವಿತೆಗಳಿವೆ. ಒಂದಕ್ಕೊಂದು ಜಿದ್ದಿಗೆ ಬಿದ್ದ ಹಾಗೆ ಓದಿಸುವಂಥಹ ಕವಿತೆಗಳು. ಓದುತ್ತಾ ಹೋದಂತೆ ಯಾವುದೋ ಹಳೆಯ ಓದಿನದೊಂದು ಪ್ರಜ್ಞೆಯನ್ನು ಈ ಸಂಕಲನ ನನಗೆ ಕೊಟ್ಟಿತು. ಖುಷಿಯೆನಿಸಿತು.

ಈ ಸಂಕಲನದಲ್ಲೊಂದು ವಿಶೇಷವಿದೆ.

ತೀರಾ ಗಂಭೀರ ವಿಚಾರಗಳಿಂದ ಆರಂಭಗೊಂಡು, ನಡುವೆ ಒಂದಷ್ಟು ತುಂಟಾಟವಾಡುತ್ತಾ ಮತ್ತೆ ಪ್ರೇಮದ ಭಾವದತ್ತ ಹಾದು ಹೋಗುವ ಕವಿತೆಗಳು. ಓದ್ತಾ ಓದ್ತಾ ಇಡೀ ಸಂಕಲನ ಎಲ್ಲೂ ಬೋರೆನಿಸುವುದೇ ಇಲ್ಲ.

ನನಗೆ ಬಹಳ ಇಷ್ಟವಾದದ್ದು ಇವರು ಬಳಸಿದ ಭಾಷೆ. ಕವಿಗಳಿಗೆ ಅಥವಾ ಬರಹಗಾರರಿಗೆ ಭಾಷೆಯನ್ನು ಬಳಸುವುದರ ಬಗೆಗೊಂದು ಒಲವಿರಬೇಕು. ಶಬ್ದ ಭಂಡಾರದಲ್ಲಿ ಮುಗಿಯದ ಖಜಾನೆಯಂತೆ ಪದಗಳು ತುಂಬಿ ತುಂಬಿ ತುಳುಕುತಿರಬೇಕು. ಅಂತಹುದೊಂದು ಪದ ಪುಂಜಗಳ ಗೊಂಚಲನ್ನು ಈ ಸಂಕಲನ ಗಟ್ಟಿ ಕೊಟ್ಟಿದೆ.

ಬಿರಾದರ ಬಾಬಾನಲ್ಲಿ ಹೇಳುತ್ತಾರೆ......ಹೊಟ್ಟೆ ತುಂಬಿದವರ ಬಗ್ಗೆ ಏನು ಹೇಳಲಿ
ಹಸಿದು ನಿಂತವರು ನಾವು.
ಮತ್ತೆ ತನ್ನನ್ನೇ ತಾನು ಸಂತೈಸಿಕೊಳ್ಳುತ್ತಾರೆ
ಭರವಸೆಯಿದೆ
ಆತ್ಮಕ್ಕೆ ಇಟ್ಟ ಬುದ್ಧನ ದೀಪ
ನಮ್ಮ ಗುಡಿಸಲಿಗೂ ಬೆಳಕು ಕೊಡಬಹುದು
ಈ ಭರವಸೆ ಯೇ ಅಲ್ಲವೇ ಬದುಕನ್ನು ಬದುಕುವಂತೆ ಮಾಡುವುದು.
ಅವರ ಪದ ಚಮತ್ಕಾರ ನೋಡಿ
ರಿಮ್ಯಾಂಡ್ ಹೋಮಿನ ಅಪರಾಧಿ ಕವಿತೆಯಲ್ಲಿ,

ಸೂರ್ಯನೂ ಸೀರೆ ತೊಟ್ಟಿದ್ದಾನೆ ಅನ್ನುತ್ತಾ ಹಿಮಪಾತ ಬೆಂಕಿಮಳೆ ಒಮ್ಮೆಲೇ ಸುರಿಯುತ್ತವೆ ಅಂತ ಬದುಕಿಗೆ ವಿಷಾದ ವ್ಯಕ್ತಪಡಿಸುತ್ತಾರೆ.

ದಾರಿ ಒಂದೇ ಕಾಲ ಸಂಧಿಸಲು ಅನ್ನುವ ಕವಿತೆಯೊಂದು ಎಷ್ಟೇ ಅದ್ಭುತವಾಗಿದೆ ಅಂದರೆ, ಸೆರಗಿನ ತುದಿಯಲ್ಲಿ ನಕ್ಕಂತೆ ನಗು, ಗಗನದ ಬಸಿರು ಜಾರಿದಂತೆ ಅದರ ಕೂಗು, ಬಲ ಮಹಾಮನೆ ಇವೆಲ್ಲ ಪದಗಳೇ ಸಾಕು ಕಾವ್ಯ ಪ್ರೀತಿಗೆ.

ದುಷ್ಕಾಳ ನುಂಗಿ ಅಮೃತ ಹಂಚೋಣ ಅನ್ನುವ ಕವಿತೆಯೊಂದರಲ್ಲಿ, ಒಲವಿನ ದೀಪವನ್ನು ಎಲ್ಲಿ ಹಂಚಲಿ ಅನ್ನುವ ಆತಂಕದೊಂದಿಗೆ ಇದ್ದರೂ, ಎದೆಯ ಬಾನಿನಲ್ಲಿ ಮೋಡವಾ ಬಿತ್ತಿ ಮಳೆಯಾಟ ಆಡೋಣ ಅನ್ನುವ ಭರವಸೆಯೊಂದಿಗೆ ಶೀರ್ಷಿಕೆಯನ್ನು ತರುತ್ತಾರೆ.

ಇನ್ನೊಂದರಲ್ಲಿ,

ಮಳೆಯಂತೆ ಕನಸು ನೆಲಕ್ಕೆ ಇಳಿಯದೆ ಹರಿಯುತ್ತವೆ,
ಖಾಲಿ ಕೈಯಲ್ಲಿ ಕಾಲ ತಿರುಗುತ್ತವೆ....
ಇವೆಲ್ಲ ಬದುಕಿನ ಸುತ್ತ ಸುತ್ತುವ ಸಂಗತಿಗಳೇ ಆಗಿವೆ ಅಲ್ಲವೇ..
ದೇವರ ನೆಲದ ಲ್ಲಿ ಶಾಂತಿ ಅನ್ನುವ ಕವಿತೆ ಬಹಳ ತಟ್ಟುವಂತಿದೆ.
ಕಣ್ಣಲ್ಲಿ ಕೆಂಡ ಸುರಿಸುವವನ ಎದೆಯಲ್ಲಿ ಶಾಂತಿ ಮಂತ್ರ
ಅವಿನಾಶದ ಗರ್ಭದಲ್ಲಿ ವಿನಾಶ
ದಿಕ್ಕು ಪಾಲಾಗಿ ನಿಂತು ಬೆಳ್ಳಕ್ಕಿ
ನುಷ್ಯನ ಎದೆಯೊಳಕ್ಕೆ ದಾರಿ ಎಲ್ಲಿದೆ ಅನ್ನುವಲ್ಲಿ ಕವಿತೆ ಗಟ್ಟಿಯಾಗಿದೆ.

ಮತ್ತೊಂದು, ಯುದ್ದ ಕವಿತೆಯಲ್ಲಿ ಸ್ವಾಭಿಮಾನದ ಬದುಕಿಗೆ ಯುದ್ಧವೇ ಬೇಕಿತ್ತಾ ಅನ್ನುವ ಮಾತಿನ ಹಿಂದೆ ಭಾವನಾತ್ಮಕ ಬಂಧವೊಂದು ದ್ವೇಷದ ಹಿಂಸೆಗೆ ಸಿಲುಕಿ ನಲುಗಿರುವುದರ ಕುರಿತು ಬೆಳಕು ಚೆಲ್ಲುತ್ತದೆ. ಅಸಹಾಯಕತನದ ಅಭಿವ್ಯಕ್ತಿಯೊಂದು ಇಲ್ಲಿ ಪಕ್ವಗೊಂಡಿದೆ.

ದ್ರಾವಿಡ ಹುಡುಗನ ಕಿವಿಯಲ್ಲಿ ದೇವನಾಗರಿ ಹಾಡು, ಕವಿಯ ಅಂತರಂಗದ ಮಾತು, ಕಲ್ಯಾಣದ ಬಿರುಬಿಸಿಲಿನ ಹುಡುಗಿಯನ್ನು ಕಡಲ ತಡಿಗೆ ಕರೆದು ಕಾಯುವ ಕಾತರ, ಸೂರ್ಯ ಹುಟ್ಟುವಲ್ಲಿ ಅರಳಬೇಕಿದೆ ಸೂರ್ಯಕಾಂತಿ, ಸೋತ ಕಾಲದಲ್ಲಿ ಗೆಲುವಿನ ಭಾಷೆ ಬರೆದಿಡುವುದು ಕಷ್ಟ, ಕವಿತೆ ಹುಟ್ಟಿಸಿದ ಸರಸ್ವತಿ ನೀನಲ್ಲವೇ....ಇವೆಲ್ಲ ಕಾಡುವ ಸಾಲುಗಳು.

ಪ್ರತಿ ಕವಿತೆಯೂ ತುಂಬ ಹೇಳಿಸಿಕೊಳ್ಳುವ ಗುಣವನ್ನು ಹೊಂದಿದೆ. ಎಲ್ಲದರ ಬಗ್ಗೆ ಬರೆಯುತ್ತಾ ಹೋದರೆ, ಪುಸ್ತಕವೇ ಆಗಬಹುದೇನೋ.... ಹಾಗಾಗಿ ಅದನ್ನ ಓದಿ ಅನುಭವಿಸುವುದೇ ಚೆಂದ.

ಬಿರಾದರ ಅವರದ್ದು ಇದು ಎರಡನೆಯ ಸಂಕಲನವಂತೆ. ಮೊದಲ ಸಂಕಲನವನ್ನು ನಾನು ಓದಿಲ್ಲ. ಇಲ್ಲಿಯ ಕವಿತೆಗಳನ್ನು ಗಮನಿಸಿದಾಗ ಅದು ಕೂಡಾ ಪ್ರಬುದ್ಧವಾಗಿಯೇ ಇರುತ್ತದೆ ಅನ್ನುವುದು ನನ್ನ ಬಲವಾದ ನಂಬಿಕೆ.

ಕವಿಗಿರುವ ಸಂಕೋಚ, ತೊಳಲಾಟ, ಆಸಕ್ತಿ, ನಿರಾಸಕ್ತಿ, ಭ್ರಮೆ, ಕನಸು, ವಿಷಾದ, ಬಲವಾದ ಆಶಾಭಾವ, ಸಣ್ಣ ಆತಂಕ, ಜೊತೆಗೊಂದಷ್ಟು ಪ್ರೀತಿ, ಸಾಮಾಜಿಕ ಕಳಕಳಿ, ಎಲ್ಲಕಿಂತ ಹೆಚ್ಚು ಕನ್ನಡ ಪ್ರೀತಿ.... ಎಲ್ಲವೂ ತುಂಬಿರುವ ಇವುಗಳಿಂದ ಈ ಕವಿತೆ ಗಳ ಗೊಂಚಲು ಬಹಳವೇ ಇಷ್ಟವಾಗುತ್ತವೆ.

ನನಗೆ ನನ್ನ ಕವಿತೆಗಳೆಲ್ಲ ಪ್ರೇಮದ ಸ್ಥಾಯೀಭಾವದಿಂದ ಆಚೆ ಕದಲದ್ದರ ಬಗೆಗೆ ಈಗೊಂದು ವಿಷಾದವೇ ಕಾಣಿಸುತ್ತಿದೆ. ನನಗೇಕೆ ಈ ತರಹವೆಲ್ಲ ಯೋಚಿಸಲಾಗದು, ಬರೆಯಲಾಗದು....ಒಂದೇ ವಿಚಾರದಲ್ಲೇ ಸುತ್ತಿಕೊಂಡು, ಸುತ್ತಿಕೊಂಡು ನೂಲುವುದೇ ನನ್ನ ಕವಿತೆಗಳು ಶಕ್ತಿಯೇ ಅನಿಸುತಿದೆ.

ಕವಿಯಾದವರಿಗೆ ಕಣ್ಣು, ಕಿವಿ ಎಲ್ಲ ತೆರೆದುಕೊಂಡಿರಬೇಕು ಅನ್ನುವುದಕ್ಕೆ ಬಿರಾದರ ಅವರ ಕವಿತೆಗಳು ಸಾಕ್ಷಿಯಾಗಿವೆ. ತಾನಿರುವ ಪರಿಸರದಿಂದ ಹಿಡಿದು, ಇಡೀ ಜಗತ್ತನ್ನು ಜೊತೆಗೆ ನಮ್ಮ ಕನ್ನಡವನ್ನು ಅವರು ಕವಿತೆಯೊಳಗೆ ತರುವ ಭಾವ ಚಂದವೇ ಚಂದ. ಡಾಕ್ಟರೇಟ್ ಆಗಿದ್ದರೂ ಅದನ್ನು ಎಲ್ಲೂ ತೋರಿಸಿಕೊಳ್ಳದೆ ಸಹಜವಾಗಿ ಬದುಕವ ಅವರು ಯಾರಿಗಾದರೂ ಇಷ್ಟವಾಗುತ್ತಾರೆ.

ಅವರಿಗೆ ಸಿಗಬಹುದಾದ ಸಾಹಿತ್ಯಿಕ ವಲಯವೊಂದು ಈ ಊರಲ್ಲಿ ದಕ್ಕಲಿ ಅನ್ನುತ್ತಾ....

ಬಿರಾದರ ಮತ್ತವರ ಬರವಣಿಗೆಗೆ ಒಳಿತಾಗಲಿ ಎನ್ನುವ ಆಶಯದೊಡನೆ, ‌‌‌‌

- ಸುಲೋಚನಾ ಪಚ್ಚಿನಡ್ಕ

MORE FEATURES

ಬೇಸರವನ್ನೋಡಿಸುವ ತಾಕತ್ತಿನ ‘ಬೇಸೂರ್’

22-11-2024 ಬೆಂಗಳೂರು

"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...

ಅನನ್ಯ ಆತ್ಮ ಸಾಂಗತ್ಯದ ಸ್ಪೂರ್ತಿ ಚೇತ‌ನವೇ ಈ ಕವಿತೆಗಳು...

22-11-2024 ಬೆಂಗಳೂರು

"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದ...

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...