ಇಲ್ಲಿಯ ಕತೆಗಾರ್ತಿಯ ಶಕ್ತಿಯೆಂದರೆ ಭಾಷೆಯೆ…


“ಈ ಕಥೆಗಳನ್ನು ಓದಿದೆ. ಈ ಕಥೆಗಳ ಸಹಜತೆಗೆ ತೆರೆದ ಮನ ಮಗ್ನತೆಯಿಂದ ಓದಿಸಿಕೊಂಡು ಹೋಗುವಂತೆ ಮಾಡಿತು. ಓದಿದ ಮೇಲೆ ಅನಿಸಿತು ತುಂಬಾ ಒಳ್ಳೆಯ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಅಂತ. ಈ ಕಥೆಗಳ ಓದಿನ ಸುಖ ಅಂಥದ್ದು,” ಎನ್ನುತ್ತಾರೆ ಪ್ರೊ. ಕೆ. ಶಾರದಾ. ಅವರು ರೇಣುಕಾ ಕೋಡಗುಂಟಿ ಅವರ “ಚಿಗುರೊಡೆದ ಬೇರು” ಕೃತಿಗೆ ಬರೆದ ಮುನ್ನುಡಿ.

‘ಚಿಗುರೊಡೆದ ಬೇರು’- ಇದು ರೇಣುಕಾ ಕೋಡಗುಂಟಿಯವರ ಎರಡನೆಯ ಕಥಾ ಸಂಕಲನ. ಇವರ ಮೊದಲ ಕಥಾಸಂಕಲನ ‘ನಿಲುಗನ್ನಡಿ’ ಈಗಾಗಲೇ ಊಹೆಗೂ ಮೀರಿದಂತೆ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಪ್ರಸಿದ್ಧ ಕಥೆಗಾರರಾದ ಕುಂ.ವೀರಭದ್ರಪ್ಪನವರು ರೇಣುಕಾ ಕೋಡಗುಂಟಿಯವರ ಮುಂದಿನ ಬರಹದ ಭವಿಷ್ಯವನ್ನು ಈಗಾಗಲೇ ನುಡಿದಿದ್ದಾರೆ. ಅವರ ಕಾಲಜ್ಞಾನದ ನುಡಿಗಳಂತೆಯೇ ರೇಣುಕಾರವರ ಈ ಎರಡನೆಯ ಕಥಾಸಂಕಲನ ಮೊದಲಿನ ಸಂಕಲನಕ್ಕಿಂತ ಬರವಣಿಗೆಯ ಪ್ರೌಢತೆಯನ್ನು, ಕಥನಶಿಲ್ಪದ ಉನ್ನತಿಯನ್ನು, ಭಾವಜಾಲ ನಿರೂಪಣೆಯ ಆತ್ಮಸ್ಥೆರ್ಯವನ್ನು ಪಡೆದುಕೊಂಡಿದೆ.

ಈ ‘ಚಿಗುರೊಡೆದ ಬೇರು’ ಕಥಾಸಂಕಲನವು ಎರಡು ಭಾಗಗಳಲ್ಲಿದ್ದು, ಒಂದನೆಯ ಭಾಗವು ಐದು ಕಥೆಗಳನ್ನು, ಎರಡನೆಯ ಭಾಗವು ನಾಲ್ಕು ಕಥೆಗಳನ್ನು ಒಳಗೊಂಡಿದೆ. ಒಂದನೆಯ ಭಾಗದ ಕಥೆಗಳು ಅಪ್ಪಟ ಗ್ರಾಮೀಣವಾದರೆ, ಎರಡನೆಯ ಭಾಗದ ಕಥೆಗಳು ನಗರ ಸಂಸ್ಕೃತಿಯ ಪರಿವೇಷಗಳನ್ನು ಒಳಗೊಂಡಿರುವಂಥವು. ಒಂದನೆಯ ಭಾಗದ ಕಥಾ ಶೀರ್ಷಿಕೆಗಳು ಎಷ್ಟು ನೆಟಿವಿಟಿಯನ್ನು ಪ್ರತಿನಿಧಿಸುತ್ತವೆಯೋ ಎರಡನೆಯ ಭಾಗದ ಕಥಾ ಶೀರ್ಷಿಕೆಗಳು ಅಷ್ಟೇ ಸೊಫೆಸ್ಟಿಕೇಟೆಡ್.

  ಒಂದನೆಯ ಕಥಾ ಸಂಕಲನದ ಮೂಲಕವೇ ದೊಡ್ಡ ಭರವಸೆಯನ್ನು ಮೂಡಿಸಿದ ರೇಣುಕಾರವರಿಗೆ ವಯಸ್ಸಿಗೂ ಮೀರಿದ ಸಾಂಸ್ಕೃತಿಕ ಅವಗಾಹನೆಯೊಂದಿಗೆ, ಸುತ್ತಲಿನ ಪರಿಸರಗಳ ಒಳಗುಗಳನ್ನು ಹೀರಿಕೊಳ್ಳುವ ಶಕ್ತಿಯಿದೆ. ಭೌತಿಕ ದಾಳಿಗಳಿಂದ ಸಾಂಸ್ಕೃತಿಕ ದಾಳಿಗಳವರೆಗೂ ವಿಸ್ತರಿಸಿಕೊಳ್ಳುವ ಈ ಕಥೆಗಳು ಒಂದೆರಡು ಚಿಕ್ಕಪುಟ ಘಟನೆಗಳೊಂದಿಗೆ force ending ಇಲ್ಲದೆಯೇ ಮುಕ್ತಾಯಗೊಳ್ಳುತ್ತವೆ. ಮಸ್ಕಿ ಪ್ರಾಂತದ ಸುತ್ತಮುತ್ತಲ ಜೀವನ ಸ್ರವಂತಿ ಈ ಕಥೆಗಳಿಗೆ ಜೀವದ್ರವ್ಯವಾಗಿದೆ. ತನ್ನ ಅನುಭವಕ್ಕೆ ದಕ್ಕಿಸಿಕೊಂಡ, ಜೀವಕ್ಕೆ ಆತುಕೊಂಡ, ಹೃದಯವು ಆರಿಸಿಕೊಂಡವುಗಳ ಸ್ಪಂದನೆಗಳೇ ಈ ಕಥೆಗಳಿಗೆ ವಸ್ತುಗಳಾಗಿವೆ. ಹೀಗಾಗಿ ಇವು ಜೀವನದ ತಾತ್ವಿಕತೆಯನ್ನು, ಸುಂದರ ಕಥನಶಿಲ್ಪವನ್ನು ರೂಪಿಸಿಕೊಡಲು ಲೇಖಕಿಯನ್ನು ಒತ್ತಾಯಿಸಿವೆ.

  ಭಾಷೆಯನ್ನು ಲೇಖಕ/ಲೇಖಕಿಯರು ಸಂಭಾಷಣೆ, ಆವರಣ ವಿವರಣೆ, ಕಥಾ ನಿರೂಪಣೆ ಹೀಗೆ.... ಬೇರೆ ಬೇರೆ ಆಯಾಮಗಳಲ್ಲಿ, ಬೇರೆ ಬೇರೆಯದೇ ರೀತಿಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ಗ್ರಾಂಥಿಕ ನುಡಿ ಮತ್ತು ಆಡುನುಡಿಗಳಲ್ಲಿ ದುಡಿಸಿಕೊಳ್ಳುವುದುಂಟು. ಇಲ್ಲಿಯ ಕತೆಗಾರ್ತಿಯ ಶಕ್ತಿಯೆಂದರೆ ಭಾಷೆಯೆ. ಇವರ ಕಥನ ಭಾಷೆ ತುಂಬಾ ಸಜೀವವಾದ ಜೀವ ಭಾಷೆ. ಅದರ ನುಡಿಕಾರ, ಅದರ ಲೋಕಲ್ ಫ್ಲೇವರ್.... ಅದೊಂದು ರೀತಿಯಲ್ಲಿ (ವಿಶೇಷತಃ ಭಾಗ-೧ರ ಕಥೆಗಳಲ್ಲಿ) ಕಾವ್ಯಾತ್ಮಕ ಗದ್ಯ ಭಾಷೆಯ ಸಕಲ ಸೌಂದರ್ಯ ಪಾರ್ಶ್ವಗಳನ್ನೂ ಲೇಖಕಿ ಸೃಜಿಸಿ ಬಿಟ್ಟಿದ್ದಾರೆನಿಸುತ್ತದೆ. ಶಕ್ತಿವಂತವಾದ ಮಸ್ಕಿ ಪರಿಸರದ ಭಾಷೆ ಅದಕೂ ಇದಕೂ ಎದಕೂ ಎಂಬAತೆ ಬಳಸಿಕೊಂಡದ್ದು ಈ ಕಥೆಗಳಿಗೆ ವಿಶಿಷ್ಟ ಶಕ್ತಿಯನ್ನು ನೀಡಿದೆ. ಕಥೆಗಾರ್ತಿಯೇ ನಿರೂಪಕಿಯಾಗಿ ನಿರೂಪಣೆಗೂ ತನ್ನ ಮಣ್ಣಿನ ಭಾಷೆಯನ್ನೇ ಬಳಸಿಕೊಳ್ಳುವುದರ ಮೂಲಕ ತಮ್ಮದೇ ಆದ ಒಂದು ವಿಶಿಷ್ಟ ಶೈಲಿಯನ್ನು ರೂಪಿಸಿಕೊಂಡಿದ್ದಾರೆ. ಆಡುಭಾಷೆಯ ಯಾಸೆಯನ್ನು ಹಾಗೆ ಹಾಗೇ ಅಕ್ಷರ ರೂಪಕ್ಕಿಳಿಸುವಲ್ಲಿನ ಶ್ರಮ ಅಕ್ಷರಸ್ಥ ಓದುಗಿಯೂ ಆದ ಕಥೆಗಾರ್ತಿಗೆ ದೊಡ್ಡ ಸವಾಲೇ ಸರಿ. ಕಥೆಗಾರ್ತಿಯ ವಿದ್ಯಾಭ್ಯಾಸದ ಹಿನ್ನೆಲೆ, ಓದು ಅವರ ಮೂಲ ಭಾಷೆಯನ್ನು ಕೆಡಿಸಿಲ್ಲ. ಅವರ ಮತ್ತೊಂದು ಆಸಕ್ತಿಯಾದ ಸಂಶೋಧನೆ ಅವರನ್ನು ಕಾಲ್ಪನಿಕ ಜಗತ್ತಿನಿಂದ ದೂರ ಮಾಡಿಲ್ಲ. ಬದಲಾಗಿ ಅವರ ಕಥೆಗಳಿಗೆ ಈ ಅನುಭವಗಳು ಹೊಸ ನೋಟಗಳನ್ನು ದಕ್ಕಿಸಿವೆ. ಸುತ್ತಲಿನ ನಾಗರಿಕ ಸಮಾಜ, ಸಂಸ್ಕೃತಿಗಳು ಅವರ ಭಾಷೆಯನ್ನು ಪೊಲ್ಯೂಟ್ ಮಾಡಲು ಸಾಧ್ಯವಾಗಿಲ್ಲ. ಏಕೆಂದರೆ ಓದಿನ ವಾಸನೆ ಬಡಿದವರು ತಮ್ಮ ಭಾಷೆಯ ಮೂಲವನ್ನು ಹಾಗೇ ಉಳಿಸಿಕೊಳ್ಳುವುದು ಕಷ್ಟ. ಆದರೆ ಇಲ್ಲಿ ಹಾಗಾಗದೆ ಭಾವ ಮತ್ತು ಭಾಷೆಗಳು ಒಟ್ಟೊಟ್ಟಿಗೇ ಚಿಗುರಿವೆ. ಮತ್ತೊಂದೆAದರೆ ಈ ಕಥೆಗಳ ಭಾಷೆಗೆ ಅಭಿನಯದ ಶಕ್ತಿಯೂ ಸಿದ್ಧಿಸಿದೆ. ಜೊತೆಗೆ ಆ ನೆಲದ ಗಡುಸುತನ, ಆ ಪ್ರಾಂತದ ಲಯಗಳು ಈ ಕಥಾ ಸಂಕಲನಗಳ ಭಾಗ-೧ರ ಕಥೆಗಳಿಗೆ ಸಮೃದ್ಧವಾಗಿ ದಕ್ಕಿವೆ.

  ಆ ಪ್ರಾಂತದಲ್ಲಿಯೇ ಅನೇಕ ವರ್ಷಗಳ ಕಾಲ ಇದ್ದು ಆ ನೆಲದಿಂದ ದೂರವಾಗಿ ಬಂದ ನನಗೆ ಭಾಗ-೧ರ ಕಥೆಗಳನ್ನು ಓದುತ್ತಿರಬೇಕಾದರೆ ಒಂದು ಹೆಣ್ಣಿಗೆ ತವರಿನ ಅನುಭವಗಳು ಎಷ್ಟು ಉಲ್ಲಸಿತಗೊಳಿಸುತ್ತವೆಯೋ ಅಂತಹ ಅನುಭವ ಈ ಕಥೆಗಳ ಓದಿನಿಂದಾಗಿದೆ. ಒಂದೆಡೆ ಒಂದೇ ಯಾಸೆಯ ಇಷ್ಟು ಕಥೆಗಳನ್ನು ಓದಿದ್ದು ಸಹ ಒಂದು ವಿಶಿಷ್ಟ ಅನುಭವವೆ. ಕಥಾವಸ್ತುವಿಗಿಂತ ಕಥನ ನಿರೂಪಣೆಯಲ್ಲಿಯೆ ನನ್ನ ಮನಸ್ಸು ಮತ್ತೆ ಮತ್ತೆ ಲಗ್ನವಾದದ್ದುಂಟು. ಭಾಷೆಯ ಆ ಲೀಲಾಜಾಲತೆಗೆ ಮನಸೋತದ್ದುಂಟು. ಆ ಗೌಡಿಕೆ... ಆ ಮನೆಗಳು.... ಆ ಪರಿಸರ... ಆ ಹೊಲಮನೆಗದ್ದೆಗಳು.... ಆ ಪ್ರಕೃತಿ.... ಆ ಮಂದಿ.... ಆ ದೇಹಾಕೃತಿಗಳು.... ಅವರ ಮಾನವೀಯತೆ.... ಬಹುಕಾಲದ ನಂತರ ಆ ಪ್ರಾಂತಗಳನ್ನು ಸುತ್ತಾಡಿ ಬಂದAತಾಗಿದೆ. ಕಥೆಗಾರ್ತಿ ಕಥೆಗಳನ್ನು ಹೇಳುವಲ್ಲಿಯ ಇನ್‌ವಾಲ್ವ್ಮೆಂಟ್, ಒಂಟಿ ಧ್ಯಾನ, ಮಗ್ನತೆ, ಏಕಾಗ್ರತೆ, ತಾದ್ಯಾತ್ಮಿಕ ನಿರೂಪಣೆಗಳು ಕಥೆಗಳನ್ನು ಓದಿಸಿಕೊಳ್ಳುವುದರ ಜೊತೆಗೆ ಅವರಲ್ಲಿ ನಾವು ಒಬ್ಬರಾಗಿ ಸ್ಪಂದಿಸುವAತೆ ಮಾಡುತ್ತವೆ. ಹಾಗಾಗಿಯೇ ಓದುಗಿಯಾಗಿ ಈ ಕಥನಗಳನ್ನು ತುಂಬಾ eಟಿರಿoಥಿ ಮಾಡಿದ್ದೇನೆ. ಪಾತ್ರಗಳು ಕಣ್ಣ ಮುಂದೆಯೇ ಓಡಾಡಿದಂತಿವೆ. ಸನ್ನಿವೇಶಗಳು ಒಂದು ಸುಂದರ ಆವರಣವನ್ನೇ ಕಟ್ಟಿಕೊಟ್ಟಿವೆ. ಹೈದ್ರಾಬಾದ್ ಕರ್ನಾಟಕ ಪರಿಸರದಲ್ಲಿ ಬೆಳೆದು ಬಂದ ನನಗೆ ರೇಣುಕಾರವರು ಮಸ್ಕಿ ಭಾಗದ ಸಂಸ್ಕೃತಿ, ಭಾಷೆಯ ನಾಡಿಗಳನ್ನು ಎಷ್ಟು ಸಮರ್ಥವಾಗಿ ಹಿಡಿದಿದ್ದಾರೆಂಬುದನ್ನು ಆ ಭಾಗದವಳಾಗಿ ಸುಲಭವಾಗಿ ಜಡ್ಜ್ ಮಾಡಬಲ್ಲವಳಾಗಿದ್ದೇನೆ.

  ಬಹುಶಃ ನನ್ನ ಈ ಮೇಲಿನ ಎಲ್ಲ ಮಾತುಗಳು ಈ ಕಥಾ ಸಂಕಲನ ಒಂದನೆಯ ಭಾಗಕ್ಕೆ ಹೆಚ್ಚಾಗಿ ಅನ್ವಯವಾಗುತ್ತವೆನಿಸುತ್ತದೆ. ಅದರ ಹೊರತಾಗಿಯೂ ಈ ಕಥಾಸಂಕಲನದ ಬಗ್ಗೆ ತುಂಬಾ ಹೇಳಬಹುದೆನಿಸುತ್ತದೆ.

  ಈ ಕಥಾಸಂಕಲನದ ಸಜೀವ ಪಾತ್ರಗಳೆಲ್ಲವೂ ಸ್ತ್ರೀ ಪಾತ್ರಗಳೆ. ಹಳ್ಳಿ, ನಗರಗಳೆರಡರ ಮಹಿಳೆಯನ್ನು ಪ್ರತಿನಿಧಿಸುವ ಪಾತ್ರಗಳು. ವೃದ್ದಾಪ್ಯದ ಹಿಂಸೆಗಳು, ಕುಟುಂಬ, ಸಮಾಜದ ಹಿಂಸೆಗಳಂತಹ ಅನೇಕ ಹಿಂಸೆಗಳ ನಡುವೆಯೂ ಈ ಹೆಣ್ಣುಮಕ್ಕಳು ಜೀವಂತಿಕೆಯನ್ನುಳಿಸಿಕೊಳ್ಳುವುದು.... ಅಂಬಮ್ಮ, ಮಲ್ಲಮ್ಮ, ಮೌಲಮ್ಮ, ಸಾವಿತ್ರಿಯರಂತಹವರ ರಾಜಿ-ಪ್ರತಿಭಟನೆಗಳು ಒಂದು ರೀತಿಯಾದರೆ, ಭಾಗ-೨ರ ಕಥೆಗಳಲ್ಲಿಯ ನಿರೂಪಕಿ, ಸೌಮ್ಯ ಮುಂತಾದ ಪಾತ್ರಗಳ ರಾಜಿ-ಪ್ರತಿಭಟನೆಗಳ ಸ್ವರೂಪಗಳು ಮತ್ತೊಂದು ರೀತಿಯವು. ಏನೇ ಇರಲಿ, ಈ ಎಲ್ಲ ಕಥೆಗಳನ್ನು ಬಹುತೇಕ ಆಳಿದ್ದು (‘ಬಂ ಬಂ ಬಾಬಾ’, ‘ಕಥೆಗೊಂದು ಕಾಲ’ ಹೊರತುಪಡಿಸಿ) ಸ್ತ್ರೀ ಸಂವೇದನೆಗಳೆ. ‘ಕುಲುಮೆ’, ‘ಆದಿನ’, ‘ಕಡಲ ಮನದ ಮಿಡಿತ’ ಕಥೆಗಳು ಆಧುನಿಕ ಮಹಿಳೆಯು ಗಂಡು ರಾಜಕಾರಣ ಹುಟ್ಟು ಹಾಕಿದ ಕೌಟುಂಬಿಕ, ಸಾಮಾಜಿಕ, ರಾಜಕೀಯ, ಮಾನಸಿಕ ಹಿಂಸೆಗಳನ್ನು ಪುಟ್ಟದಾದ ಒಂದು ಘಟನೆಯ ವಿವರಗಳ ಮೂಲಕ ತುಂಬಾ ಸರಳವಾಗಿ ಕಟ್ಟಿಕೊಡುವ ಕ್ರಮವು ಈ ಕಥೆಗಳ ಒಂದು ವಿಶಿಷ್ಟತೆಯೆಂದೇ ಹೇಳಬಹುದು. ಜೊತೆಗೆ ‘ಮುಟ್ಟಾದ ಮೂರು ದಿನ’, ‘ಗಂಡರ‍್ತಿ’, ‘ಕಡಲ ಮನದ ಮಿಡಿತ’ಗಳ ಎಂಡಿಂಗ್‌ಗಳಂತೂ ಅಪ್ಪಟ ಸಿನಿಮೀಯವಾಗಿ ಮುಕ್ತಾಯಗೊಳ್ಳುತ್ತವೆ.

  ಮುನ್ನುಡಿ ಬರೆಯಲು ಈ ಕಥೆಗಳನ್ನು ಓದಿದೆ. ಈ ಕಥೆಗಳ ಸಹಜತೆಗೆ ತೆರೆದ ಮನ ಮಗ್ನತೆಯಿಂದ ಓದಿಸಿಕೊಂಡು ಹೋಗುವಂತೆ ಮಾಡಿತು. ಓದಿದ ಮೇಲೆ ಅನಿಸಿತು ತುಂಬಾ ಒಳ್ಳೆಯ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಅಂತ. ಈ ಕಥೆಗಳ ಓದಿನ ಸುಖ ಅಂಥದ್ದು.

  ‘ಮುನ್ನುಡಿ’ಗಳು ಮುಜುಗರದ ಅತಿಥಿಗಳು ಎಂಬ ಮಾತಿದೆ. ಆದರೆ ನಾನಿಲ್ಲಿ ಮುಜುಗರಕ್ಕೆ ಇಷ್ಟೆಲ್ಲಾ ಬರೆದಿಲ್ಲ. ಕಥನಶಿಲ್ಪ ಇನ್ನಷ್ಟುಗಟ್ಟಿಗೊಳ್ಳಬೇಕು, ವಸ್ತುವು ಇನ್ನಷ್ಟು ವಿಸ್ತೃತಿಯನ್ನು ಪಡೆದುಕೊಳ್ಳಬೇಕೆಂದು ಈ ಕಥೆಗಳನ್ನು ಓದಿದಾಗ ಅನಿಸಿದ್ದೂ ಉಂಟು. ಅದು ಮುಂದಿನ ದಿನಗಳಲ್ಲಿ ರೇಣುಕಾ ಸಾಧ್ಯವಾಗಿಸಬಲ್ಲರು. ಏಕೆಂದರೆ ವಾಸ್ತವತೆಗೆ ಒಂದು ಕಥೆ ತಲೆ ಬಾಗಿದರೆ ಅದು ಕಲಾಖಂಡವಾಗಬಲ್ಲದು..... ಎಂಬ ಎಚ್ಚರಿಕೆಯೂ ಕಥೆಗಾರ್ತಿಗಿದೆ. ಕವಯಿತ್ರಿಯೂ ಆದ ರೇಣುಕಾರವರು ಕಥೆ, ಕವನಗಳೆರಡನ್ನೂ ನಿಭಾಯಿಸಬೇಕಿದೆ. ನಿಭಾಯಿಸಬಲ್ಲರು.....

- ಪ್ರೊ. ಕೆ. ಶಾರದಾ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ

MORE FEATURES

ಬೇಸರವನ್ನೋಡಿಸುವ ತಾಕತ್ತಿನ ‘ಬೇಸೂರ್’

22-11-2024 ಬೆಂಗಳೂರು

"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...

ಅನನ್ಯ ಆತ್ಮ ಸಾಂಗತ್ಯದ ಸ್ಪೂರ್ತಿ ಚೇತ‌ನವೇ ಈ ಕವಿತೆಗಳು...

22-11-2024 ಬೆಂಗಳೂರು

"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದ...

ಜೀವ, ಜೀವನ, ಮರುಸೃಷ್ಟಿ ನಡುವಣ ಹೋರಾಟವೇ ಜಲಪಾತ...

21-11-2024 ಬೆಂಗಳೂರು

"ನಾನು ಓದಿದ ಭೈರಪ್ಪನವರ ಮೊದಲ ಪುಸ್ತಕ ವಂಶವೃಕ್ಷ ಅದು 8ನೇ ತರಗತಿಯಲ್ಲಿ, ನಂತರದ್ದೇ ಜಲಪಾತ ಆಗ ನಾನು 8ನೇ ತರಗತಿ ...