"ಲೇಖಕಿ ಅಶ್ವಿನಿ ಸುನಿಲ್ ಅವರು ವಾರದ ಹಿಂದೆ ತಮ್ಮ ಈ ಹೊಸ ಕೃತಿಯ ಬಗ್ಗೆ ಪುಸ್ತಕ ಅವಲೋಕನ ಬಳಗದಲ್ಲಿ ಪೋಸ್ಟ್ ಹಾಕಿದ್ದರು. ಸಣ್ಣ ಕಥೆಗಳನ್ನು ಇಷ್ಟ ಪಡುವ ನಾನು ಒಂದು ಪ್ರತಿಯನ್ನು ಖರೀದಿಸಲು ಬಯಸಿ ಅವರಲ್ಲಿ ವಿಚಾರಿಸಿದ್ದೆ. ಅಂತೆಯೇ ನಿನ್ನೆ ತಾನೇ ಇದು ನನಗೆ ತಲುಪಿತು. ಇಲ್ಲಿ 15 ಸಣ್ಣ ಕಥೆಗಳಿವೆ," ಎನ್ನುತ್ತಾರೆ ಮಾಲತಿ ರಾಮಕೃಷ್ಣ ಭಟ್. ಅವರು ಅಶ್ವಿನಿ ಸುನಿಲ್ ಅವರ ‘ಅತೀತಭವ’ ಕೃತಿ ಕುರಿತು ಬರೆದ ಅನಿಸಿಕೆ.
*ವಿಂಡೋ ಸೀಟ್*
ಬಸ್ಸಿನಲ್ಲಿ ಕಿಟಕಿಯ ಪಕ್ಕದ ಸೀಟನ್ನು ಎಲ್ಲರೂ ಬಯಸುತ್ತಾರೆ. ಹಾಗಿರುವಾಗ ಇನ್ನು ಮಕ್ಕಳು ಹೊರತೇ?.. ತನ್ನ ಮಕ್ಕಳು ವಿಂಡೋಸೀಟ್ ಎಂದು ಹಠ ಮಾಡುವಾಗ 30 ವರ್ಷದ ಹಿಂದೆ ಹೀಗೇ ಬಸ್ಸಲ್ಲಿ ಬಂಧುಗಳ ಮದುವೆಗೆಂದು ತಾವು ತಿರುಪತಿಗೆ ಹೋಗುವಾಗಿನ ಪ್ರಸಂಗವೊಂದು ಅವಳಿಗೆ ನೆನಪಾಗುತ್ತದೆ. ಕಿಟಕಿ ಪಕ್ಕ ಕೂತಿದ್ದ ಅಮ್ಮನ ಓಲೆ ಆಸೆಗಾಗಿ ಯಾರೋ ಅವಳ ಕಿವಿಯನ್ನೇ ಹರಿದಿದ್ದರು.!! ಕಿವಿಯ ಗಾಯದ ಜೊತೆ ಅದು ಏನೆಲ್ಲಾ ಸತ್ಯಗಳನ್ನು ಅನಾವರಣ ಗೊಳಿಸಿತು?.. ಅಂದು ಕಿಟಕಿ ಪಕ್ಕ ಕುಳಿತ ಅಲ್ಪಕಾಲದಲ್ಲಿಯೇ ಉಂಟಾದ ಅವಳ ಚಡಪಡಿಕೆಯಾದರೂ ಎಂತದ್ದು?....
*ಪೆಟ್ಟಿಗೆ ಹಿಡಿದ ಕೈ*
ದಿನಾಲೂ ಗಂಗಿ ಊರಿಗೆ ಉಪಕಾರಿ ಮನೆಗೆ ಮಾರಿಯಾದ ತನ್ನ ಗಂಡ ಕುಂಜಿರಾಮನನ್ನು ಹಂಗಿಸುತ್ತಲೇ ಇರುತ್ತಿದ್ದಳು. ಮಗ ಶೇಖರ ಹೆಂಡ ಮತ್ತು ಹೆಣ್ಣಿನಾಶೆಗೆ ಬಿದ್ದು ಕೆಟ್ಟು ದಾರಿ ತಪ್ಪಿದ್ದು ಅವರ ಜಗಳಕ್ಕೆ ಇನ್ನೂ ಕಾರಣವಾಗಿತ್ತು. ಮಳೆಗಾಲದ ಪ್ರವಾಹದ ದಿನದಲ್ಲಿ ತೇಲಿ ಬರುವ ತೆಂಗಿನಕಾಯಿ ಹಿಡಿಯಲು ಹೋದ ಕುಂಜಿರಾಮನಿಗೆ ನೀರಿನಲ್ಲಿ ಪೆಟ್ಟಿಗೆ ಹಿಡಿದು ತೇಲುತ್ತಾ ಸಹಾಯಕ್ಕಾಗಿ ಕೈ ಚಾಚುತ್ತಿದ್ದ ವ್ಯಕ್ತಿಯೊಬ್ಬ ಕಾಣುತ್ತಾನೆ. ಪೆಟ್ಟಿಗೆ ಎತ್ತಿ ಸೇತುವೆಯ ಮೇಲೆ ಹಾಕಿ ವ್ಯಕ್ತಿಯನ್ನು ರಕ್ಷಿಸಬೇಕೆನ್ನುವಷ್ಟರಲ್ಲಿ ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದ!
ಹಾಗಾದರೆ ಆ ಪೆಟ್ಟಿಗೆಯಲ್ಲಿ ಏನಿತ್ತು?...
ಪೆಟ್ಟಿಗೆ ಹಿಡಿದ ಕೈ ಯಾರದ್ದು?.. ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ ಯಾರು?...
*ಮಣ್ಣಿನ ವಾಸನೆ*
ಮೊದಲ ಮಳೆಯ ಮಣ್ಣಿನ ವಾಸನೆಯನ್ನು ಎಲ್ಲರೂ ಇಷ್ಟಪಟ್ಟರೆ, ಅವಳಿಗೆ ಅದು ಬೇಡವೆನಿಸುತ್ತಿತ್ತು! ಈ ಎಳೆಯ ಜಾಡು ಹಿಡಿದು ಸಾಗುತ್ತಲೇ, ಲೇಖಕಿ ಪ್ರಸ್ತುತ ಪಡಿಸುವ ಮಧುಮಿತಾಳ ಕುಟುಂಬ, ಉದ್ಯೋಗ ಹಾಗೂ ಮಕ್ಕಳ ಬಗ್ಗೆ ಚಿಕ್ಕದೊಂದು ಪರಿಚಯವೇ ಮನ ಸೆಳೆಯುತ್ತದೆ. ಪ್ರತಿ ಆರು ತಿಂಗಳ ಮಟ್ಟಿಗೆ ಜರ್ಮನಿಗೆ ಹೋಗಿದ್ದಾಗಲೇ, ಬೆಂಗಳೂರಿಗೆ ಯಾವುದೋ ಕಾರ್ಯದ ಪ್ರಯುಕ್ತ ಬಂದ ಅತ್ತೆ ರಜೆಗೆಂದು ಮಕ್ಕಳನ್ನು ಹಳ್ಳಿಗೆ ಕರೆದು ಕೊಂಡು ಹೋಗಿದ್ದರು. ಅಲ್ಲಿ ಹೋದ ಮಕ್ಕಳ ಚಿಂತೆಯಲ್ಲಿ ಇಲ್ಲಿ ಮಧುಮಿತಾಳಿಗೆ ತಲೆ ನೋವು ಪ್ರಾರಂಭವಾಗಿತ್ತು. ಅಜ್ಜಿಯ ಮೊಬೈಲ್ ನಿಂದ ಮಗಳು ಕಳಿಸಿದ ಮಳೆಯಲ್ಲಿ ನೆನೆಯುವ ಫೋಟೋ ನೋಡಿ ಅವಳಿಗುಂಟಾದ ಭ್ರಮೆ ಏನು?... ಪಟ ಪಟನೇ ಬಿದ್ದ ಮಳೆ ಹನಿಗಳು ಅವಳ ಕೋಪವನ್ನು ತಣಿಸುವಲ್ಲಿ ಸಹಾಯವಾದವೇ?...
*ಜಾಹ್ನವಿ*
ಹಳ್ಳಿಯ ಹೆಣ್ಣು ಮಕ್ಕಳು ವಿದ್ಯೆಗಾಗಿ ದೂರದ ಕಾಲೇಜಿಗೆ ಬಸ್ಸಲ್ಲಿ ಪ್ರಯಾಣಿಸುವುದು ಕಷ್ಟ. ಬಸ್ಸಿಳಿದು ಸುರಿವ ಮಳೆಯಲ್ಲಿ ಬರುತ್ತಿದ್ದಾಗ ಜಾಹ್ನವಿಯನ್ನು ಹಿಂಬಾಲಿಸಿ ಕೊಂಡು ಬಂದ ಯುವಕನನ್ನು ನೋಡಿ ಅವಳ ಮನದಲ್ಲಿ ಏನೇನೋ ಕಲ್ಪಿತ ಕೆಟ್ಟ ವಿಚಾರಗಳು ಸರಿದಾಡಿ ಭಯ ತರಿಸಿತ್ತು. ಹೆದರಿ ಓಡೋಡಿ ಮನೆಗೆ ಬಂದ ಅವಳಿಗೆ ಆ ಯುವಕನ ಬಗ್ಗೆ ತಂದೆ ಹೇಳಿದ್ದೇನು?..
*ಅಪ್ಪ*
ಕೆಲವು ತಿಂಗಳ ಮಟ್ಟಿಗೆ ತಾನು ಕೆಲಸದ ನಿಮಿತ್ತ ಕ್ಯಾಲಿಫೋರ್ನಿಯಾಕ್ಕೆ ಹೋಗುವಾಗ ಅನಿವಾರ್ಯವಾಗಿ ಅಪ್ಪನನ್ನು ಆಶ್ರಮದಲ್ಲಿ ಬಿಡಬೇಕಾದ ಪ್ರಸಂಗ ಒದಗಿತ್ತು. ಬದುಕಿನ ಕಷ್ಟ ತಿಳಿಯ ಬೇಕೆಂದು 25 ವರ್ಷಗಳ ಹಿಂದೆ ತನ್ನನ್ನು ಹಾಸ್ಟೆಲ್ ನಲ್ಲಿ ಓದಲು ಬಿಟ್ಟ ಅಪ್ಪನಿಗೂ ಅಂತಹ ನೋವು ಉಂಟಾಗಲಿ ಎನಿಸಿತ್ತು. ಆದರೆ ಅಪ್ಪನ ಸ್ನೇಹಿತರು ಹೇಳಿದ ವಿಷಯ ಕೇಳಿ ಅಪ್ಪನ ಬಗ್ಗ ಇದುವರೆಗೂ ಇದ್ದ ಸುಮಂತನ ತಿರಸ್ಕಾರದ ದೃಷ್ಟಿ ಬದಲಾಯಿತೇ?...
*ಅತೀತಭವ*
ಯೋಗೀಂದ್ರ ತಿಲಕ್ ಆಂದ್ರದ ಬ್ಯಾಂಕಿಗೆ ಹೊಸದಾಗಿ ಬಂದ ಮ್ಯಾನೇಜರ್. ತೆಲುಗು ಮಾತಾಡುವ ಜನರ ನಡುವೆ ಕೆಲಸ. ಆ ಊರಲ್ಲಿ ಸಾಯಿ ಎನ್ನುವ ಒಂದುರಾಶಿ ಜನರಿದ್ದಾರೆ. 'ಸಾಯಿ' ಎಂದು ಯಾರಾದ್ರೂ ಕರೆದರೆ ಯೋಗೀಂದ್ರನಿಗೆ ತನ್ನನ್ನೇ ಕರೆದಂತೆ ಭಾಸವಾಗುತ್ತಿದ್ದದ್ದು ಯಾಕೆ?... ಅದನ್ನು ನಿವಾರಿಸಿಕೊಳ್ಳಲು ಜ್ಯೋತಿಷಿಯ ಮೊರೆ ಹೋದವನಿಗೆ ತನ್ನ ಹುಟ್ಟಿನ ಬಗ್ಗೆ ತಿಳಿದ ರಹಸ್ಯವೇನು?...
ಇದೇ ರೀತಿ ಗೌರಿ ದನವನ್ನು ಹುಡುಕಲು ಅಪರಾತ್ರಿಯಲ್ಲಿ ಗೋಪಾಲ ತೋಟದ ಹಾದಿಯಲ್ಲಿ ಬಂದಾಗ ಕಂಡ 'ಕುಲೆತ ಸೊಪ್ಪಿ'ನ ರೋಚಕ ಕಥೆ, ಫೇಸ್ ಬುಕ್ ನಲ್ಲಿ ಬಂದ ಫೇಕ್ ಸುದ್ದಿಯನ್ನು ಬಿತ್ತರಿಸಿದ ಸ್ಯಾಂಡಿಯ ಕಥೆ, ಕರೋನ ಕಾಲದ ಮಾಸ್ಕ್ ಧರಿಸುವಿಕೆ, ಅದು ಮುಗಿದ ಬಳಿಕವೂ ಬಗೆ ಹರಿಯದ ವಾಸನೆಯ 'ಭ್ರಮೆ', ಮನೆ ಬಿಟ್ಟು ಓಡಿ ಹೋದ ಗಣೇಶನ ಜನಪ್ರಿಯ ಶಾಪ್ 'ಗೋಲಿ ಸೋಡಾ, ಅಣ್ಣ- ತಮ್ಮಂದಿರ ನಡುವೆ ತಂದಿಟ್ಟ 'ದ್ರೋಹ', ಓದುತ್ತಾ ನಮಗೂ ಬಾಲ್ಯದ ನೆನಪು ತಂದ 'ಬಣ್ಣದ ಡಸ್ಟರ್'. ಕಥೆಗಳ ಜೊತೆಗೆ ಶ್ರೀಮಂತಿಕೆಯ ಬೆನ್ನು ಹತ್ತಿ ವಯಸ್ಸಾದ ಉದ್ಯಮಿಯನ್ನು ಮದುವೆಯಾದ ಶರ್ಮಿಷ್ಠಾ, 'ಗೊರಬು' ಕಥೆಯ ಚಂದ್ರಮತಿ ಮತ್ತು ಮೀನಾಕ್ಷಿಯ ವಿಚಾರಗಳು, ಪ್ರತೀಕ್ಷಾ ಮತ್ತು ನೀಲಿಮಾ ಇವರಿಬ್ಬರೂ ಮುಂಬೈಯಿಂದ ಊರಿಗೆ ಪ್ರಯಾಣಿಸುವ ಚರ್ಚೆಯ 'ಹಗಲುಗನಸು' ಮುಂತಾದ ಕಥೆಗಳೂ ಸಹ ಬೇಸರ ಬರದಂತೆ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುವಂತಿದೆ.
ಇಲ್ಲಿನ ಬಹುತೇಕ ಪುಟ್ಟ ಕಥೆಗಳು ಯಾವುದೋ ಸಂಗತಿಯೇನೋ ಎಂಬಷ್ಟು ಸಹಜವಾಗಿವೆ. ವಿಷಯವನ್ನು ಎಳೆದುಕೊಂಡು ವಿಸ್ತಾರವಾಗಿ ಜಗ್ಗದೇ, ಚಿಕ್ಕದಾದರೂ ಗಟ್ಟಿ ಎಳೆಯಾಗಿಸಿ ಅಶ್ವಿನಿಯವರು ಎಲ್ಲ ಬಗೆಯ ಕಥೆಗಳನ್ನು ಸೃಷ್ಟಿಸಿದ ಪರಿ ಇಷ್ಟವಾಯಿತು.
ಹೊರ ರಾಜ್ಯದಲ್ಲಿದ್ದರೂ ಮನೆಯವರ ಪ್ರೋತ್ಸಾಹದಿಂದ ಓದುವ ಹಾಗೂ ಬರೆಯುವ ಹವ್ಯಾಸವನ್ನು ನಿರಂತರವಾಗಿ ಕಾಯ್ದುಕೊಂಡು ಬಂದ ಅಶ್ವಿನಿ ಸುನಿಲ್ ಅವರಿಂದ ಇಂತಹ ಇನ್ನಷ್ಟು ಕೃತಿಗಳು ಮೂಡಿಬರಲಿ ಎನ್ನುವ
ಶುಭಹಾರೈಕೆ ನನ್ನದು.
- ಮಾಲತಿ ರಾಮಕೃಷ್ಣ ಭಟ್.
“ಈ ಸ್ಕೂಲ ಚೌಕಟ್ಟಿನಲ್ಲಿಟ್ಟು ಇಲ್ಲಿನ ಕಥೆಗಳನ್ನು ಅರ್ಥೈಸುತ್ತಿರುವಾಗಲೇ ಇದನ್ನು ದಾಟಿ ಚಿಮ್ಮುವ ಕೆಲವು ಕತೆಗಳೂ...
“ಚೊಕ್ಕಟ ಕೃಷಿ ಬದುಕು ಕಟ್ಟಿಕೊಂಡು, ಕೊಟ್ಟಿಗೆ ತುಂಬ ದನಗಳನ್ನು ಸಾಕಿಕೊಂಡು, ಕೋಳಿ, ಕುರಿ, ಬೆಕ್ಕು, ನಾಯಿ, ಹಂದ...
“ಜಗತ್ತಿನ ಶ್ರೇಷ್ಠ ಕಾದಂಬರಿಳ ಪಟ್ಟಿಗೆ ಸೇರೋ ಈ ಕಾದಂಬರಿಯ ಅನುವಾದ ಸರಾಗವಾಗಿ ಓದಿಸಿಕೊಂಡು ಹೋದರೂ ಅಲ್ಲಲ್ಲಿ ಹಂ...
©2024 Book Brahma Private Limited.