ಹೆಚ್ಚಿನ ಉತ್ತರವನ್ನು ಕಾಲವೇ ಕೊಡುತ್ತಿದೆ ಎನ್ನುವುದು ನನ್ನ ಭಾವನೆ..


"ಮೊದಲ ಬಾರಿ ಭೇಟಿಯಾಗಿದ್ದು ನಲ್ವತ್ತು ವರ್ಷಗಳ ಹಿಂದೆ – ನಾನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಗೆ ಸೇರಿದ ದಿನ. ಮೂರು ವರ್ಷ ಅವರು ನಮಗೆ ಡಾಕ್ಟರ್‌ ಸ್ವಾಮೀಜಿ ಆಗಿದ್ದರು ಮತ್ತು ಅಲ್ಲಿಂದ ಹತ್ತಿರದಲ್ಲೇ ಇದ್ದ ರಾಮಕೃಷ್ಣ ಆಶ್ರಮಕ್ಕೆ ಹೊರಟು ಹೋದರು," ಎನ್ನುತ್ತಾರೆ ಮಾಕೋನಹಳ್ಳಿ ವಿನಯ್‌ ಮಾಧವ. ಅವರು ಜೋಗಿ ಅವರ ‘ಇಳಂಗೋವನ್’ ಕೃತಿ ಕುರಿತು ಬರೆದ ವಿಮರ್ಶೆ.

ನಾವು ನಮ್ಮದೇ ಆಯ್ಕೆ. ಬೇರೆ ಯಾರೂ ನಮ್ಮ ಬದುಕನ್ನು ನಿಯಂತ್ರಿಸಲಾರರು. ಇಲ್ಲಿ ನಾವೇ ಆಡಿ ಗೆಲ್ಲಬೇಕು. ಆಡುವುದು ನಮ್ಮ ಕೆಲಸ, ಗೆಲ್ಲಿಸುವುದು ಮತ್ಯಾರದೋ ಕೆಲಸ ಅಂತ ಕುಳಿತರೆ ನಾಶವಾಗುತ್ತೇವೆ -- ಸಾರ್ತ್ರೆ

ನಿನಗೆ ಬದಲಾಗಬೇಕು ಅನ್ನುವುದು ಗೊತ್ತಾಗದೇ ಹೋದರೆ ಯಾವುದೇ ಸಮಸ್ಯೆಯೂ ಇರುವುದಿಲ್ಲ. ನೀನು ಸಂತೋಷವಾಗಿರಬಹುದು. ಆದರೆ ಒಂದು ಸಲ ನಿನಗೆ ಬದಲಾವಣೆ ಬೇಕು ಅಂತ ಅನ್ನಿಸಿಬಿಟ್ಟರೆ ನಿನಗೆ ನೆಮ್ಮದಿ ಇರೋದಿಲ್ಲ – ಇಳಂಗೋವನ್‌

ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭವಾಗಿ ಸಿಗುವುದಲ್ಲ – ಪೂಚಂತೇ

ನಾನು ನೆಲದ ಮೇಲೆ ಚಕ್ಕಳ-ಮಕ್ಕಳ ಹಾಕಿಕೊಂಡು ಅವರನ್ನೇ ದಿಟ್ಟಿಸುತ್ತಿದ್ದೆ. ತಮ್ಮ ಬದಿಯಲ್ಲಿದ್ದ ಖುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರೂ, ನಾನು ಒಪ್ಪಲಿಲ್ಲ. ಇದು ನಮ್ಮಿಬ್ಬರ ಕೊನೆಯ ಭೇಟಿ ಎನ್ನುವುದು ಇಬ್ಬರಿಗೂ ಗೊತ್ತಿತ್ತು.

ಮೊದಲ ಬಾರಿ ಭೇಟಿಯಾಗಿದ್ದು ನಲ್ವತ್ತು ವರ್ಷಗಳ ಹಿಂದೆ – ನಾನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆಗೆ ಸೇರಿದ ದಿನ. ಮೂರು ವರ್ಷ ಅವರು ನಮಗೆ ಡಾಕ್ಟರ್‌ ಸ್ವಾಮೀಜಿ ಆಗಿದ್ದರು ಮತ್ತು ಅಲ್ಲಿಂದ ಹತ್ತಿರದಲ್ಲೇ ಇದ್ದ ರಾಮಕೃಷ್ಣ ಆಶ್ರಮಕ್ಕೆ ಹೊರಟು ಹೋದರು.

ʻʻನಾನೊಂದು ಪುಸ್ತಕ ಬರೆದಿದ್ದೆ ಗೊತ್ತಾ?ʼʼ

ಹೌದು ಎನ್ನುವಂತೆ ಮುಗುಳ್ನಗುತ್ತಾ ತಲೆ ಆಡಿಸಿದೆ.

ʻʻಆ ದೇವರೇ ನನ್ನ ಕೈಯಲ್ಲಿ ಬರೆಯಿಸಿದ್ದು. ಬಹಳ ಜನ ಓದಿದ್ದಾರಂತೆ. ಅವರಿಗೆ ಉಪಯೋಗವಾದರೆ ಒಳ್ಳೆಯದು ಅಲ್ಲವೇ?ʼ ಎಂದು ಕೇಳಿದರು.

ಮತ್ತೆ ಮುಗುಳ್ನಕ್ಕು ತಲೆ ಆಡಿಸಿದೆ. ಏಕೆಂದರೆ, ಹೇಳಲು ನನಗೇನೂ ಇರಲಿಲ್ಲ. ಕನಿಷ್ಠ ನಲ್ವತ್ತು ಪುಸ್ತಕಗಳನ್ನು ನಾನೇ ಕೊಂಡು, ಕೇಳಿದವರಿಗೆಲ್ಲಾ ಕೊಟ್ಟಿದ್ದೇನೆ.

ಕನ್ನಡದಲ್ಲೇ ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ, ಜಪಾನೀಸ್‌ ಭಾಷೆಯೂ ಸೇರಿದಂತೆ ಹದಿಮೂರು ಭಾಷೆಗಳಿಗೆ ಅನುವಾದಗೊಂಡ ʻಬದುಕಲು ಕಲಿಯಿರಿʼ ಪುಸ್ತಕದ ಬಗ್ಗೆ ಕೇಳುತ್ತಿದ್ದರು – ಸ್ವಾಮಿ ಜಗದಾತ್ಮಾನಂದ. ಆರನೇ ಕ್ಲಾಸಿನ ಹುಡುಗನಾಗಿದ್ದಾಗ ನೋಡುತ್ತಿದ್ದ ಆಜಾನುಬಾಹು ಡಾಕ್ಟರ್‌ ಸ್ವಾಮೀಜಿ ಸೊರಗಿ ಹೋಗಿದ್ದರು. ಕಂಚಿನ ಕಂಠದ ಠೇಂಕಾರ ಇಳಿದು ಹೋಗಿತ್ತು. ಜೊತೆಗಿದ್ದದ್ದು ಮೂರು ವರ್ಷಗಳಾಗಿದ್ದರೂ, ಡಾಕ್ಟರ್‌ ಸ್ವಾಮೀಜಿ ಇನ್ನೂ ಬದುಕನ್ನು ಕಲಿಸುತ್ತಲೇ ಇದ್ದರು.

ವಿದಾಯಗೊಳ್ಳುವ ಸಮಯ. ಮೂರೇ ತಿಂಗಳಲ್ಲಿ ಸ್ವಾಮೀಜಿ ಇಹಲೋಕ ಯಾತ್ರೆ ಮುಗಿಸಿದರು.

ವಿದ್ಯಾಶಾಲೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಪ್ರಾರ್ಥನೆ ಸಮಯದಲ್ಲಿ ಭಜನೆಗಳನ್ನು ಹಾಡುತ್ತಿದ್ದೆವು. ಡಾಕ್ಟರ್‌ ಸ್ವಾಮೀಜಿ ಸಾಧಾರಣವಾಗಿ ಬೆಳಗ್ಗಿನ ಪ್ರಾರ್ಥನೆ ಮಾಡಿಸುತ್ತಿದ್ದರು. ಆ ಭಜನೆಗಳಲ್ಲಿ ಗಣಪತಿಯ ಒಂದು ಭಜನೆ ಹೀಗೆ ಆರಂಭವಾಗುತ್ತಿತ್ತು:

ಅಜಂ ನಿರ್ವಿಕಲ್ಪಂ!! ನಿರಾಕಾರ ಮೇಹಂ!!

ನಿರಾನಂದ ಮಾನಂ!! ನಮದ್ವೈಷ್ಯ ಪೂರ್ಣಂ!!

ಆ ಭಜನೆಯನ್ನು ಕೇಳಿದ ನಂತರ ನಾನು ಒಮ್ಮೆ ಸ್ವಾಮೀಜಿಯವರನ್ನು ಕೇಳಿದ್ದೆ: ʻʻದೇವರು ಹೇಗಿರುತ್ತಾನೆ?ʼʼ

ʻʻನಿನಗೆ ಬೇಕಾದ ಹಾಗೆʼʼ

ʻʻಅಂದರೆ ಪೋಟೋದಲ್ಲಿ ಅಥವಾ ವಿಗ್ರಹಗಳಲ್ಲಿ ಇರುವ ಹಾಗೆ ಇರೋಲ್ವಾ?ʼʼ

ಸ್ವಾಮೀಜಿ ಮುಗುಳ್ನಕ್ಕು, ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಒಂದು ಘಟನೆ ಹೇಳಿದರು. ಗ್ವಾಲಿಯರ್‌ ಮಹಾರಾಜನಿಗೆ ದೇವರಲ್ಲಿ ನಂಬಿಕೆ ಇರುವುದಿಲ್ಲ. ಒಮ್ಮೆ ಸ್ವಾಮಿ ವಿವೇಕಾನಂದರು ಅಲ್ಲಿಗೆ ಹೋದಾಗ ಗ್ವಾಲಿಯರ್‌ ಮಹಾರಾಜರು, ʻʻಸ್ವಾಮೀಜಿ, ದೇವರು ನಾಲ್ಕು ಕೈ, ಹಲವಾರು ತಲೆಗಳನ್ನು ಇಟ್ಟುಕೊಂಡಿರುತ್ತಾರೆ ಎಂದು ಹೆದರಿಸಿದ ತಕ್ಷಣ ನಂಬುವ ವ್ಯಕ್ತಿ ನಾನಲ್ಲ. ಈಗ ಯಾವುದಾದರೂ ದೇವರ ವಿಗ್ರಹ ಅಥವಾ ಚಿತ್ರವನ್ನು ಭಗ್ನ ಮಾಡಿದರೆ, ನಿಮ್ಮ ದೇವರೇನು ಮಾಡಿಯಾನು?ʼʼ ಎಂದು ಕೇಳಿದರಂತೆ.

ಸ್ವಾಮಿ ವಿವೇಕಾನಂದರು ನಕ್ಕು, ಸುತ್ತಲೂ ನೋಡಿದರಂತೆ. ಅಲ್ಲಿ ತೂಗು ಹಾಕಿದ್ದ ಒಂದು ಚಿತ್ರ ಯಾರದ್ದೆಂದು ಕೇಳಿದಾಗ, ಅದು ಮಹಾರಾಜರ ತಂದೆಯದು ಎಂದು ಹೇಳಿದರಂತೆ. ಆಗ ಒಬ್ಬ ಸೇವಕನ್ನು ಕರೆದು, ಆ ಚಿತ್ರದ ಮೇಲೆ ಉಗಿಯಲು ಹೇಳಿದರಂತೆ. ಸ್ವಾಮೀಜಿಯ ಮಾತು ಕೇಳಿದ ಸೇವಕ ಗಾಭರಿಯಿಂದ ಹಿಂದಕ್ಕೆ ಓಡಿ ಹೋದನಂತೆ. ಆನಂತರ ವಿವೇಕಾನಂದರು ಮಹಾರಾಜನಿಗೇ ಆ ಚಿತ್ರದ ಮೇಲೆ ಉಗಿಯಲು ಹೇಳಿದರಂತೆ.

ʻʻಸ್ವಾಮೀಜಿ, ಅದು ನನ್ನ ತಂದೆಯ ಚಿತ್ರ ಎನ್ನುವುದು ಗೊತ್ತಿದ್ದೂ ಹೀಗೆ ಮಾತನಾಡಬಹುದೇ?ʼʼ ಎಂದು ಮಹಾರಾಜ ಕೇಳಿದರು.

ಅದಕ್ಕೆ ವಿವೇಕಾನಂದರು: ʻʻಅದು ನಿಮ್ಮ ತಂದೆಯಲ್ಲ, ಅವರ ಚಿತ್ರ ಅಷ್ಟೆ. ಆ ಚಿತ್ರಕ್ಕೆ ಯಾರು, ಏನು ಮಾಡಿದರೂ ಅದು ಚಿತ್ರವೇ ಹೊರತು ನಿಮ್ಮ ತಂದೆ ಆಗುವುದಿಲ್ಲ. ಆದರೂ ಮುಂದಿನ ಜನಾಂಗಗಳಿಗೆ ನಿಮ್ಮ ತಂದೆ ಹೇಗಿದ್ದರು ಎನ್ನುವುದು ತಿಳಿಸುವ ಸಲುವಾಗಿ ಅದನ್ನು ಇಲ್ಲಿ ಹಾಕಲಾಗಿದೆ. ಏಕೆಂದರೆ, ಈ ಚಿತ್ರ ಇಲ್ಲಿರದೇ ಹೋದರೆ, ನಿಮ್ಮ ತಂದೆ ಹೇಗಿದ್ದಾರೆ ಎನ್ನುವುದನ್ನು ಊಹಿಸಿಕೊಳ್ಳಲು ಮುಂದಿನ ಪೀಳಿಗೆಗೆ ಸಾಧ್ಯವಾಗುವುದಿಲ್ಲ. ಈ ಚಿತ್ರಕ್ಕೆ ಉಗುಳಿದರೆ ಅದಕ್ಕೆ ಏನೂ ಅವಮಾನವಾಗುವುದಿಲ್ಲ. ಆದರೆ, ನಿಮಗೆ ನಿಮ್ಮ ತಂದೆಯನ್ನು ಯಾರೋ ಅಗೌರವದಿಂದ ಕಂಡಂತಾಗಿ ನೋವಾಗುತ್ತದೆ ಅಷ್ಟೆ. ದೇವರೂ ಸಹ ಯಾವುದೇ ವಿಗ್ರಹ ಅಥವಾ ಚಿತ್ರಗಳಲ್ಲಿ ಇರುವುದಿಲ್ಲ. ದೇವರು ಇದೇ ನಿರ್ದಿಷ್ಟ ರೂಪದಲ್ಲಿ ಇದ್ದಾನೆ ಎಂದು ಹೇಳಲು ಸಹ ಸಾಧ್ಯವಿಲ್ಲ. ಅದೊಂದು ಶಕ್ತಿ. ಕೆಲ ಕಾಲದ ಹಿಂದೆ ಬದುಕಿದ್ದವರು ಹೇಗಿದ್ದರು ಎನ್ನುವುದನ್ನು ಊಹಿಸಿಕೊಳ್ಳುವ ಶಕ್ತಿ ಇಲ್ಲದ ಮನುಷ್ಯನ ಮನಸ್ಸಿಗೆ ದೇವರ ನಿರಾಕಾರ ಶಕ್ತಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿ ನಾವು ಬಳಸುವುದು ನಮ್ಮ ಸೀಮಿತ ಊಹೆಯಿಂದ ಮಾಡಿದ ಒಂದು ಸಂಕೇತ ಮಾತ್ರ. ಆ ಚಿತ್ರವಾಗಲೀ, ವಿಗ್ರಹವಾಗಲೀ ದೇವರಾಗಲು ಸಾಧ್ಯವೇ ಇಲ್ಲ. ನೀವು ವಿಗ್ರಹವನ್ನು ಭಗ್ನ ಮಾಡಿದರೂ ಸಹ ದೇವರಿಗೇನೂ ಆಗುವುದಿಲ್ಲ.ʼʼ

ಈ ಕಥೆಯನ್ನು ಕೇಳಿದ ನಂತರ ನಾನು ಡಾಕ್ಟರ್‌ ಸ್ವಾಮೀಜಿಯವರ ಹತ್ತಿರ ಯಾವುದೇ ಪ್ರಶ್ನೆಗಳನ್ನು ಕೇಳಿದ ನೆನಪಿಲ್ಲ. ಅವರು ಪ್ರತೀ ರಾತ್ರಿ ಹೇಳುತ್ತಿದ್ದ ನರಭಕ್ಷಕ ಕಥೆಗಳು, ವೈಜ್ಞಾನಿಕ ವಿಸ್ಮಯದ ಕಥೆಗಳು, ಪುನರ್ಜನ್ಮ ಕುರಿತಾದಂತಹ ವೈಜ್ಞಾನಿಕ ವಿಮರ್ಶೆಗಳ ಕಥೆಗಳನ್ನು ಕೇಳುತ್ತಾ ಮೂರು ವರ್ಷಗಳು ಕಳೆದು ಹೋದವು. ಡಾಕ್ಟರ್‌ ಸ್ವಾಮೀಜಿ ಶಾಲೆಯಿಂದ ಆಶ್ರಮಕ್ಕೆ ಹೋದ ಮೇಲೆ, ಅಲ್ಲಿಗೆ ನಮ್ಮ ಸಂಬಂಧ ಮುಗಿಯಿತು ಅಂದುಕೊಂಡಿದ್ದೆ.

ಆದರೆ, ಅದೊಂದು ತಪ್ಪು ಕಲ್ಪನೆ ಎನ್ನುವುದು ಗೊತ್ತಾಗಲು ಬಹಳ ಸಮಯ ಬೇಕಾಗಲಿಲ್ಲ. ಏಳೆಂಟು ವರ್ಷಗಳ ನಂತರ, ನನಗೆ ಜೀವನದ ಬಗ್ಗೆ ಜಿಜ್ಞಾಸೆಗಳು ಮೂಡಿದಾಗಲೆಲ್ಲ ನಾನು ʻಬದುಕಲು ಕಲಿಯಿರಿʼ ಪುಸ್ತಕದ ಮೊರೆ ಹೋಗುತ್ತಿದ್ದೆ. ಅದರಲ್ಲಿ ಬರುವ ಹೆಚ್ಚಿನ ಕಥೆಗಳು ಮತ್ತು ವಿಷಯಗಳನ್ನು ಡಾಕ್ಟರ್‌ ಸ್ವಾಮೀಜಿ ನಮಗೆ ಶಾಲೆಯಲ್ಲಿಯೇ ಹೇಳಿದ್ದರು. ಆದರೂ, ಅದನ್ನು ಪ್ರತೀ ಬಾರಿ ಓದಿದಾಗ ನನಗೆ ಹೊಸ ಅರ್ಥಗಳು ಮೂಡಲು ಆರಂಭಿಸಿತು. ಇಡೀ ಪುಸ್ತಕದಲ್ಲಿ ನನಗೆ ಬಹಳ ಇಷ್ಟವಾದ ಮಾತು ಎಂದರೆ: ʻಚಿತೆಗೂ ಚಿಂತೆಗೂ ಸೊನ್ನೆ ಮಾತ್ರ ವ್ಯತ್ಯಾಸ. ಚಿತೆ ಸತ್ತವರನ್ನು ಸುಟ್ಟರೆ, ಚಿಂತೆ ಜೀವಂತವಾಗಿರುವವರನ್ನು ಸುಡುತ್ತದೆ.ʼ

ಮುಂದೆ ಸ್ವಾಮೀಜಿಯವರನ್ನು ಕೆಲವು ಬಾರಿ ಭೇಟಿಯಾದರೂ, ಹೆಚ್ಚೇನೂ ಮಾತುಕತೆ ಇರುತ್ತಿರಲಿಲ್ಲ. ಅವರು ಹೇಳಿದ್ದನ್ನು ಕೇಳಿಕೊಂಡು ಬರುತ್ತಿದ್ದೆ. ಅವರು ಇಹಲೋಕ ಯಾತ್ರೆ ಮುಗಿಸಿದರೂ, ಅವರ ಜೊತೆಯ ನನ್ನ ಪಯಣ ಮುಂದುವರೆದೇ ಇದೆ. ಇಳಂಗೋವನ್‌ ಜೊತೆ ನಿಮ್ಮ ಪಯಣ ಇದ್ದ ಹಾಗೆ.

ದೇವರ ಬಗ್ಗೆ ವಿವೇಕಾನಂದರ ಕಥೆ ಹಾಗಿರಲಿ. ನನಗೆ ದೇವರು ಲೌಕಿಕ, ಅಲೌಕಿಕ ಮತ್ತು ವ್ಯಾಪಾರ ರೂಪದಲ್ಲಿ ಕಾಣುತ್ತಾರೆ. ತಿರುಪತಿಯಲ್ಲಿ ಆದ ಒಂದು ಅಪಘಾತದಲ್ಲಿ ನನ್ನ ಅಮ್ಮನಿಗೆ ತಲೆಗೆ ಪೆಟ್ಟು ಬಿದ್ದಿತ್ತು. ಹಾಗಾಗಿ ನಾನು ತಿರುಪತಿ ಕಡೆ ತಲೆ ಹಾಕುತ್ತಿರಲಿಲ್ಲ. ಆದರೂ, ನನ್ನ ಮದುವೆಯಾದ ಮೇಲೆ ಹೋಗಲೇ ಬೇಕಾಯಿತು. ಒಮ್ಮೆ ನಾನು ತಿರುಪತಿಗೆ ಹೋಗಿ ಬಂದಾಗ, ʻದೇವರಲ್ಲಿ ಏನು ಕೇಳಿಕೊಂಡೆ?ʼ ಎಂದು ಅಮ್ಮ ಕೇಳಿದರು.

ಏನೂ ಇಲ್ಲ ಎನ್ನುವಂತೆ ತಲೆ ಅಲ್ಲಾಡಿಸಿದೆ. ʻಅಲ್ಲಾ ಕಣೋ… ದೇವರ ಹತ್ತಿರ ಏನಾದರೂ ಕೇಳಿಕೊಳ್ಳುವುದಲ್ವಾ? ಪ್ರಮೋಷನ್‌, ಮನೆ ತಗೊಳ್ಳೋದು ಅಂತ ಏನಾದ್ರೂ ಕೇಳಿಕೊಳ್ಳಬೇಕು,ʼ ಅಂತ ಅಮ್ಮ ಹೇಳಿದರು.

ನನಗೆ ಇದು ವಿಚಿತ್ರ ಅನ್ನಿಸಿತು. ʻಅಮ್ಮಾ… ಅಲ್ಲಿ ಸಾವಿರ ರೂಪಾಯಿಗಳ ನೋಟಿನ ಕಂತೆಗಳನ್ನು ಹುಂಡಿಗೆ ಹಾಕಿ, ಅಪ್ಲಿಕೇಶನ್‌ ಹಾಕಿಕೊಂಡಿರುವವರನ್ನ ನೋಡ್ಕೊಳ್ಳೋಕೇ ದೇವರಿಗೆ ಸಮಯ ಇದೆಯೋ ಇಲ್ವೋ… ನಾನೊಬ್ಬ ಬರಿಗೈ ದಾಸಯ್ಯ ಬೇರೆ ಅಪ್ಲಿಕೇಶನ್‌ ಹಾಕಿದ್ರೆ ಅದು ದೇವರವರೆಗೆ ತಲುಪುತ್ತೋ ಇಲ್ವೋ ಗೊತ್ತಿಲ್ಲ,ʼ ಅಂದುಬಿಟ್ಟೆ. ಅಮ್ಮನಿಗೆ ಪಿತ್ತ ನೆತ್ತಿಗೇರಿ, ನನ್ನನ್ನು ಹೊಡೆಯುವುದೊಂದು ಬಾಕಿ. ನಾನು ಮಾತನಾಡಿದ್ದು ದೇವರಿಗೆ ಮಾಡಿದ ಅವಮಾನ ಎಂದೇ ಅಮ್ಮ ಭಾವಿಸಿದ್ದರು. ನಾನು ದೇವರ ಸ್ಥಳದ ವ್ಯಾಪಾರೀಕರಣದ ಬಗ್ಗೆ ಮಾತನಾಡುತ್ತಿದ್ದೆ.

ತಿರುಪತಿಯ ದರ್ಶನದ ಸಾಲುಗಳಲ್ಲಿ ನಿಂತಾಗ ಬಹಳಷ್ಟು ಜನರ ಮಾತುಕಥೆಗಳು ನನ್ನ ಕಿವಿಗೆ ಬಿದ್ದವು. ಯಾವ ಭಾಷೆಯಲ್ಲಿ ಮಾತನಾಡಿದರೂ, ಒಂದಷ್ಟಾದರೂ ಅರ್ಥವಾಗುತ್ತಿತ್ತು. ಎಲ್ಲಾ ಮಾತುಗಳೂ ಅತ್ತೆ-ಸೊಸೆ ಸಂಬಂಧ, ಆಸ್ತಿಯಲ್ಲ ಮೋಸ, ಯಾರದೋ ಸಂಬಂಧಗಳು… ಹೀಗೆಯೇ ದೇವರ ಮುಂದೆ ಬಂದು ನಿಲ್ಲುವವರೆಗೂ ಸಾಗುತ್ತವೆ. ಅಪ್ಪಿ ತಪ್ಪಿ ಯಾರದಾದರೂ ಕಾಲು ತುಳಿಯುವುದೋ, ಅಥವಾ ದೂಕುವುದೋ ಆದರೆ, ಜಗಳಗಳೂ ಶುರುವಾಗುತ್ತವೆ. ಇಷ್ಟೊಂದು ಲೌಕಿಕವಾದ ಚಿಂತನೆಯಲ್ಲಿ ದೇವರ ಸ್ಥಳಕ್ಕೆ ಏಕೆ ಬರಬೇಕು?

ಒಂದೆರೆಡು ಸಲ ತಿರುಪತಿಗೆ ಹೋಗಿ ಬಂದ ಮೇಲೆ ನಾನು ಒಂದು ವಿಷಯ ಗಮನಿಸಿದೆ. ತಿರುಪತಿಗೆ ಹೋಗಿ ಬಂದು ಮೂರ್ನಾಲ್ಕು ತಿಂಗಳ ಕಾಲ ನನ್ನ ಹೆಂಡತಿ ಬಹಳ ಶಾಂತವಾಗಿರುತ್ತಾಳೆ. ನನ್ನದೇ ತಪ್ಪಿದ್ದರೂ ಸಹ ಜಗಳವಾಡುವುದಿಲ್ಲ. ಇದು ಮಾತ್ರ ಅಲೌಕಿಕ.

ದೇವರ ಬಗ್ಗೆ ಒಂದು ತಾರ್ಕಿಕ ತೀರ್ಮಾನಕ್ಕೆ ಬರುವ ಹೊತ್ತಿಗೆ ನಮಗೆ ಬರುವುದೇ ಅಲೌಕಿಕ ಜಗತ್ತಿನ ಚಿಂತನೆಗಳು. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಈ ಚಿಂತನೆಗೆ ಮೂಲ ಎಂದರೆ, ನಮಗೆ ಇಷ್ಟ ಬಂದಂತೆ ಬದುಕುವ ಸಂಪೂರ್ಣ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದು. ಒಮ್ಮೆ ತೇಜಸ್ವಿಯವರನ್ನು ಅವರ ಇಷ್ಟಕ್ಕೆ ವಿರುದ್ದವಾಗಿ ಬೆಂಗಳೂರಿಗೆ ಕರೆಸಲೇ ಬೇಕಾದಾಗ, ಅವರು ನನಗೆ ಬಾಯಿಗೆ ಬಂದಂತೆ ಬೈದಿದ್ದರು. ನಾವೆಲ್ಲ ಸಮಾಜ, ಸಂಸಾರದ ಒತ್ತಡಗಳ ನಡುವೆಯೂ ನಮಗಿಷ್ಟ ಬಂದಂತೆ ಬದುಕುವ ಸ್ವಾತಂತ್ರ್ಯ ಹುಡುಕುತ್ತಿರುತ್ತೇವೆ. ನಮ್ಮ ಓದುಗಳು ಮತ್ತು ಒಡನಾಟಗಳು ನಮ್ಮಲ್ಲಿ ಇಂತಹ ಅಲೌಕಿಕ ಜಗತ್ತಿನ ಚಿಂತನೆಗಳನ್ನು ಹುಟ್ಟುಹಾಕುತ್ತವೆ ಎನ್ನುವುದು ನನ್ನ ಭಾವನೆ. ನಾವು ಬೇಜವಾಬ್ದಾರಿ ಎಂದು ಕರೆಯುವ ಮನುಷ್ಯರು ಯಾವಾಗಲೂ ಸಂತೋಷವಾಗಿರುತ್ತಾರೆ. ಏಕೆಂದರೆ, ಅವರು ಬದಲಾವಣೆ ಬಯಸುವುದಿಲ್ಲ. ಈ ಬದಲಾವಣೆ ಸಹ ನಮ್ಮದೇ ಆಯ್ಕೆ ಮತ್ತು ಅದನ್ನು ನಾವೇ ಆಡಿ ಗೆಲ್ಲಬೇಕು.

ಈ ಅಲೌಕಿಕ ಚಿಂತನೆಗಳಲ್ಲಿ ನಾವು ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯುವ ಹಾದಿಯಲ್ಲಿರುತ್ತೇವೆ. ಈ ಅಲೌಕಿಕ ಚಿಂತನೆಗಳು ಹೆಚ್ಚಾಗಿ ಧಾರ್ಮಿಕತೆಗೆ ತಳಕು ಹಾಕಿಕೊಂಡಿರುತ್ತವೆ ಮತ್ತು ಅವುಗಳಿಗೆ ಹಲವು ಸ್ತರಗಳಿವೆ. ಭಕ್ತಿ ಪಂಥ ಮತ್ತು ಸೂಫಿ ಬಹಳ ಸರಳವಾದ ಸ್ತರ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಅದಕ್ಕಿಂತ ಸರಳವಾಗಿ ನಾಥ ಪಂಥ ಇದೆ ಎನ್ನುವುದು ನನ್ನ ಭಾವನೆ.

ದೇವರು ನಿನ್ನಿಷ್ಟದಂತೆ ಎನ್ನುವ ಈ ಪಂಥದಲ್ಲಿ, ನಮಗಿಷ್ಟ ಬಂದಂತೆ ಕಥೆಗಳು ಉದ್ಭವವಾಗುತ್ತವೆ. ತಾನು ತಿನ್ನುವುದನ್ನೇ ದೇವರು ಸಹ ತಿನ್ನುತ್ತಾನೆ ಎನ್ನುವ ನಂಬಿಕೆಯ ಬೇಡರ ಕಣ್ಣಪ್ಪನಿಂದ ಹಿಡಿದು. ತಾವೇನೋ ಸಾಧಿಸುತ್ತೇವೆ ಎಂದು ಹಟ ಹಿಡಿದು ಜೀವನವಿಡೀ ನಗ್ನರಾಗಿ ತಿರುಗುವ ನಾಗಾ ಸಾಧುಗಳವರೆಗೆ ಇದ್ದಾರೆ. ಇವರಿಗೆ ಯಾರದೇ ಹಂಗಿಲ್ಲ. ಇದರಲ್ಲಿ ನನಗೆ ಬಹಳ ಇಷ್ಟವಾದದ್ದು ಕಾಡಿನಲ್ಲಿರುವ ಜೇನು ಕುರುಬರ ಅಮ್ಮಾಳೆ ದೇವರು. ಅದೊಂದು ಮಣೆಯ ಮೇಲೆ ಇರುವ ಗದ್ದುಗೆ ಅಷ್ಟೆ. ಹಾಡಿಯಲ್ಲಿ ಯಾರಿಗಾದರೂ ಕಷ್ಟ ಬಂದರೆ, ದೇವರು ಅವರಲ್ಲಿ ಒಬ್ಬನ ಮೇಲೆ ಬಂದು ಆ ಕಷ್ಟಗಳಿಗೆ ಪರಿಹಾರ ಸೂಚಿಸುತ್ತದೆ. ಕೆಲವೊಮ್ಮೆ ದೇವರು ಬರುವುದು ತಡವಾದರೆ, ತಾಳ್ಮೆಗೆಟ್ಟ ಅವರು ದೇವರಿಗೆ ವಾಚಾಮಗೋಚರವಾಗಿ ಬೈಯುತ್ತಾರೆ. ಆದರೂ ಸಿಟ್ಟು ಮಾಡಿಕೊಳ್ಳದ ದೇವರು ಬರುತ್ತದೆ. ಇವರಿಗೆ ಪರಿಹಾರ ಹೇಳುತ್ತದೆ. ಆ ಪರಿಹಾರ ಸರಿಯಾಗಿದ್ದು ಬಹಳ ಕಡಿಮೆ ಅಂತ ನನಗೆ ಅನ್ನಿಸುತ್ತದೆ. ಆದರೆ, ಅದಕ್ಕೆ ಈ ಜನಗಳು ಬೇಸರ ಮಾಡಿಕೊಳ್ಳುವುದಿಲ್ಲ. ದೇವರ ಮೇಲಿನ ನಂಬಿಕೆಯನ್ನೂ ಕಳೆದುಕೊಳ್ಳುವುದಿಲ್ಲ. ತಾವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹಾಡಿ ಬದಲಿವುವಾಗ, ತಮ್ಮ ದೇವರನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.

ಹಾಗೆಯೇ, ಯರವರ ʻಕುಂಡೆ ದೇವರ ಹಬ್ಬʼ ಸಹ ಅಯ್ಯಪ್ಪ ದೇವರನ್ನು ವಾಚಾಮಗೋಚರವಾಗಿ ಬೈಯುವುದೇ ಆಗಿದೆ. ಒಮ್ಮೊಮ್ಮೆ ಯೋಚಿಸಿದರೆ, ಇದರಷ್ಟು ಸರಳವಾದ ನಂಬಿಕೆ ಆಫ್ರಿಕಾ, ಲ್ಯಾಟಿನ್‌ ಅಮೆರಿಕಾ, ರೆಡ್‌ ಇಂಡಿಯನ್‌ ಮತ್ತು ಆಸ್ಟ್ರೇಲಿಯಾದ ಆಬ್ರೋಜಿನ್‌ಗಳಲ್ಲಿ ಇದೆ. ಪ್ರಕೃತಿಯ ಜೊತೆ ಲೀನವಾಗಿ, ಎಲ್ಲವನ್ನು ಒಪ್ಪಿಕೊಳ್ಳುವುದು.

ಸಂಕೀರ್ಣತೆ ಆರಂಭವಾಗುವುದೇ ನಾವು ಎತ್ತರದ ಸ್ತರದಲ್ಲಿ ನಿಂತು ಯೋಚಿಸಿದಾಗ. ನಾವು ಯಾವುದನ್ನೂ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಪ್ರಶ್ನೆಗಳು ಉದ್ಭವಿಸುತ್ತಿರುತ್ತವೆ. ಒಂದು ಪ್ರಶ್ನೆಗೆ ಉತ್ತರ ಸಿಗುವ ಹೊತ್ತಿಗೆ, ಆ ಉತ್ತರದ ಮೇಲೆ ಹತ್ತಾರು ಪ್ರಶ್ನೆಗಳು ಮೂಡುತ್ತವೆ. ಜೀವನದ ನಶ್ವರತೆ ಮತ್ತು ಅಲೌಕಿಕದ ಅನಂತಕ್ಕೆ ಒಂದು ವ್ಯಾಖ್ಯಾನ ಹುಡುಕುವ ಹಪಾಹಪಿಯಲ್ಲಿರುತ್ತೇವೆ. ಅದಕ್ಕೆ ಬೇಕಾಗಿ ವೇದ, ಉಪನಿಷತ್‌, ಭಗವದ್ಗೀತೆ, ಬುದ್ದ, ಕ್ರೈಸ್ತ, ಬಸವಣ್ಣ ಮತ್ತು ನಮಗಿಷ್ಟವಾದವರ ಉಪದೇಶಗಳ ಮೊರೆ ಹೋಗುತ್ತೇವೆ. ಸಾಕಾರ, ನಿರಾಕಾರ, ದ್ವೈತ, ಅದ್ವೈತ ಎಂದು ವಿಂಗಡಿಸುತ್ತಾ ಹೋಗುತ್ತೇವೆ. ಪ್ರತೀ ಪ್ರಶ್ನೆಗೂ ಹಟ ಬಿಡದೆ ಉತ್ತರ ಕಂಡುಹಿಡಿಯಲು ಹೆಣಗಾಡುತ್ತೇವೆ. ಎಲ್ಲವನ್ನೂ ಒಂದು ಕ್ಷಣಕ್ಕೆ ಒಪ್ಪಿಕೊಂಡು, ಇನ್ನೊಂದು ಕ್ಷಣಕ್ಕೆ ನಿರಾಕರಿಸುತ್ತೇವೆ. ಆ ನಿರಾಕರಣೆಯೇ ಇನ್ನೊಂದು ಪ್ರಶ್ನೆಯಾಗಿ ಕಾಡತೊಡಗುತ್ತದೆ.

ನಿಮ್ಮ ಈ ಪಯಣದಲ್ಲಿ, ಅಣ್ಣ, ಪುತ್ತೂರು ಅಜ್ಜ, ಇಳಂಗೋವನ್‌, ನಿಕೋಸ್‌, ಮಾರ್ಕಸ್‌ ಅಲೇರಿಯಸ್‌, ಯೂಜಿ, ಜಿಕೆ, ರಮಣರು, ಓಶೋ, ಖಲೀಲ್‌ ಗಿಬ್ರನ್‌, ಎಷ್ಟೋ ಸಾಹಿತ್ಯ, ಧಾರ್ಮಿಕ ಗ್ರಂಥಗಳೂ ಸೇರಿವೆ. ತಾರ್ಕಿಕ ಅಂತ್ಯಕ್ಕೆ ಬಂದಿದೆ ಎಂದು ನನಗೆ ಅನ್ನಿಸುವುದಿಲ್ಲ. ಹಾಗೆಯೇ, ನನ್ನ ಪಯಣದಲ್ಲಿಯೂ ಸಹ, ಸ್ವಾಮಿ ಜಗದಾತ್ಮಾನಂದ ಸೇರಿದಂತೆ, ನಿಮಗೆ ಸ್ಪೂರ್ತಿಯಾದ ಕೆಲವು ಅಂಶಗಳೂ ಸೇರಿವೆ. ಹೆಚ್ಚಿನ ಉತ್ತರವನ್ನು ಕಾಲವೇ ಕೊಡುತ್ತಿದೆ ಎನ್ನುವುದು ನನ್ನ ಭಾವನೆ. ʻಕಾಲಾಯ ತಸ್ಮೈ ನಮಃʼ ಆದರೂ, ಪ್ರಶ್ನೆಗಳ ಉದ್ಭವವೂ ನಿಂತಿಲ್ಲ ಮತ್ತು ಹುಡುಕುತ್ತಿರುವ ಉತ್ತರಗಳೂ ಸಿಕ್ಕಿಲ್ಲ.

ಇವೆಲ್ಲಾ ಯೋಚಿಸುವಾಗ ವಿಲ್‌ ಸ್ಮಿತ್‌ ನಟಿಸಿದ ಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌ ಸಿನೆಮಾ ನೆನಪಿಗೆ ಬರುತ್ತದೆ. ತನ್ನ ಸಂಶೋಧನೆಯ ಹಿಂದೆ ಬಿದ್ದು, ಮಗನನ್ನು ಬೆನ್ನಿಗೆ ಕಟ್ಟಿಕೊಂಡು, ರಕ್ತ ಮಾರಿ ದುಡ್ಡು ಸಂಪಾದಿಸಿಕೊಂಡು, ಉಚಿತ ಸೂಪ್‌ ಮತ್ತು ಹಾಸಿಗೆಯ ನೆಲೆಯಲ್ಲಿ ದಿನ ಕಳೆಯುತ್ತಿರುತ್ತಾನೆ.

ಒಂದು ದಿನ, ಅವನ ಸಂಶೋಧನೆಯನ್ನು ಯಾವ ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಳ್ಳಬೇಕೋ, ಅಲ್ಲಿಗೆ ಟ್ಯಾಕ್ಸಿಯಲ್ಲಿ ಬರುತ್ತಾನೆ. ಅವನನ್ನು ಟ್ಯಾಕ್ಸಿಯಲ್ಲಿ ಕರೆದುಕೊಂಡು ಬಂದವನು ಆ ಕಂಪನಿಯ ಡೈರೆಕ್ಟರ್. ಆ ಕಂಪನಿಯ ಡೈರೆಕ್ಟರ್‌ ಇವನ ಸಂಶೋಧನೆಯನ್ನು ಒಪ್ಪಿದರೆ ಮಾತ್ರ ಈತನ ಇಷ್ಟು ವರ್ಷಗಳ ಸಂಶೋಧನೆಗೆ ಪ್ರತಿಫಲ ಸಿಗುತ್ತದೆ.

ಜೇಬನ್ನು ತಡಕಾಡಿದ ಡೈರೆಕ್ಟರ್‌, ತಾನು ಪರ್ಸ್‌ ಮರೆತು ಬಂದಿದ್ದೇನೆ ಎನ್ನುವುದು ನೆನಪಾಗುತ್ತದೆ. ಟ್ಯಾಕ್ಸಿಯವನಿಗೆ ಐದು ಡಾಲರ್‌ ಕೊಡು ಎಂದು ವಿಲ್‌ ಸ್ಮಿತ್‌ಗೆ ಹೇಳುತ್ತಾನೆ. ಆಗ ವಿಲ್‌ ಸ್ಮಿತ್‌ ಜೇಬಿನಲ್ಲಿ ಐದು ಡಾಲರ್‌ ಮಾತ್ರ ಉಳಿದಿರುತ್ತದೆ. ಆ ದಿನವಾದರೂ ತನ್ನ ಮಗನಿಗೆ ಏನಾದರೂ ಒಳ್ಳೆಯದನ್ನು ತಿನ್ನಿಸಬೇಕು ಎಂದು ಜೋಪಾನ ಮಾಡಿಕೊಂಡಿರುತ್ತಾನೆ. ಡೈರೆಕ್ಟರ್‌ ಎದುರು ಏನೂ ಹೇಳಲಾಗದೆ ಆ ಐದು ಡಾಲರ್‌ ತೆಗೆದು ಟ್ಯಾಕ್ಸಿಯವನಿಗೆ ಕೊಡುತ್ತಾನೆ.

ಅಂದು ಆ ಕಂಪನಿಯ ಮುಖ್ಯಸ್ಥರಿಗೆ ತನ್ನ ಸಂಶೋಧನೆಯನ್ನು ವಿಲ್‌ ಸ್ಮಿತ್‌ ಪ್ರಸ್ತುತ ಪಡಿಸುತ್ತಾನೆ. ತಮಗೆ ಒಂದು ವಾರ ಸಮಯ ಬೇಕು ಎಂದು ಕಂಪನಿಯವರು ಹೇಳುತ್ತಾರೆ. ಒಂದು ವಾರ ಬಿಟ್ಟು ಅವರ ಕಛೇರಿಗೆ ಹೋದಾಗ, ಆ ಕಂಪನಿಯು ವಿಲ್‌ ಸ್ಮಿತ್‌ನನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಲ್ಲದೆ, ಆತನ ಸಂಶೋಧನೆಯ ಪೇಟೆಂಟ್ ಮಿಲಿಯನ್‌ ಡಾಲರ್‌ಗೆ ಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ಅಷ್ಟೊಂದು ದುಡ್ಡು ತನ್ನ ಬ್ಯಾಂಕ್‌ ಖಾತೆಗೆ ಬಂದ ಸಂಭ್ರಮದಲ್ಲಿ ವಿಲ್‌ ಸ್ಮಿತ್‌ ಇದ್ದಾಗ, ಹಿಂದಿನ ವಾರ ಟ್ಯಾಕ್ಸಿ ಡ್ರೈವರ್‌ಗೆ ದುಡ್ಡು ಕೊಡಿಸಿದ ಡೈರೆಕ್ಟರ್‌ ಬಂದು: ʻಕ್ಷಮಿಸು… ನಿನ್ನ ಐದು ಡಾಲರ್‌ ಕೊಡಲು ನನಗೆ ಮರೆತು ಹೋಗಿತ್ತುʼ, ಎಂದು ಐದು ಡಾಲರ್‌ ನೋಟನ್ನು ವಿಲ್‌ ಸ್ಮಿತ್‌ ಕೈಯಲ್ಲಿ ಇಡುತ್ತಾನೆ.

ಈ ಹಡುಕಾಟದಲ್ಲಿರುವವರ ಪರಿಸ್ಥಿತಿಯೂ ಹೀಗೇ ಅನ್ನಿಸುತ್ತದೆ. ನಮ್ಮ ಈ ಐದು ಡಾಲರ್‌ ಪ್ರಶ್ನೆಗಳಿಗೆ ಉತ್ತರ ಸಿಗುವ ಹೊತ್ತಿಗೆ, ನಾವು ನಿಧಿಯ ಮುಂದೆ ನಿಂತಿರುತ್ತೇವೆ… ಅಥವಾ ಭಯವಿಲ್ಲದೆ ಮಲಗಿರುತ್ತೇವೆ… ಶಾಂತವಾಗಿ. ಅಲ್ಲಿಯವರೆಗೆ, ನೀವು ಇಳಂಗೋವನ್‌ ಜೊತೆ ಮತ್ತು ನಾನು ಸ್ವಾಮಿ ಜಗದಾತ್ಮಾನಂದರ ಜೊತೆ ನಮ್ಮ ಪಯಣವನ್ನು ಮುಂದುವರೆಸೋಣ….

- ಮಾಕೋನಹಳ್ಳಿ ವಿನಯ್‌ ಮಾಧವ

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...