ಹಾದಿಯುದ್ದಕ್ಕೂ ಕಾಣುತ್ತಿದ್ದ ಹಸಿರು ಉಸಿರು ಕಳೆದುಕೊಂಡಿದೆ


“ವಂಗಾರಿಯವರ ಆತ್ಮ ಚರಿತ್ರೆ ನಮ್ಮೆಲ್ಲ ಗೊಂದಲ, ನೋವಿಗೆ ಮತ್ತು ಪರಿಸರದ ಗಂಭೀರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತಿದೆ. ಅವರ ದಿಟ್ಟ ಹೋರಾಟ ಅನೇಕರಿಗೆ ಮಾದರಿಯಾಗಬಲ್ಲದು, ಸ್ಫೂರ್ತಿಯಾಗಬಲ್ಲದು ಎನ್ನುತ್ತಾರೆ,” ಎಂ. ಆರ್. ಕಮಲ ಅವರು ತಮ್ಮ “ಮತ್ತೆ ಮೇಲೇಳುತ್ತೇನೆ” ಕೃತಿ ಕುರಿತು ಬರೆದ ಲೇಖಕರ ಮಾತು.

ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಗಿಡ, ಮರಗಳ ಮೇಲೆ ಸಹಜ ಪ್ರೀತಿ, ಭವಿಷ್ಯದ ತಲೆಮಾರಿಗಾಗಿ ತಂದೆಯವರು ತಮ್ಮ ಎಂಬತ್ತನೆಯ ವಯಸ್ಸಿನಲ್ಲೂ ಸಸಿಗಳನ್ನು ನೆಟ್ಟು, ಗಿಡ, ಮರಗಳನ್ನು ಬೆಳೆಸುತ್ತಿದ್ದುದನ್ನು ಕಂಡಿದ್ದೇನೆ. ತೋಟದಲ್ಲಿ ಹಣ್ಣಿನ ಮರಗಳನ್ನು ಬೆಳೆಸಲು ವಿಪರೀತ ಶ್ರಮ ವಹಿಸುತ್ತಿದ್ದರು. ಹಿತ್ತಲಿನಲ್ಲಿ ಒಂದಿಷ್ಟು ಜಾಗವನ್ನು ಮಕ್ಕಳಿಗೆ ಮೀಸಲಾಗಿಟ್ಟು, ಮಡಿ ಮಾಡಿ ಬೀಜ ಬಿತ್ತುವುದನ್ನು, ಗಿಡ ನೆಡುವುದನ್ನು ಮತ್ತು ಎಲ್ಲ ಬಗೆಯ ತರಕಾರಿಗಳನ್ನು ಬೆಳೆಯುವ ರೀತಿಯನ್ನು ನಮಗೆ ಕಲಿಸಿದ್ದರು. ವಂಗಾರಿಯವರ ಆತ್ಮಚರಿತ್ರೆಯ ಆರಂಭದ ಪುಟಗಳನ್ನು ಓದುವಾಗ ನನಗಂತೂ ನನ್ನ ಬಾಲ್ಯವನ್ನೇ ಬದುಕುತ್ತಿದ್ದೇನೆ ಅನ್ನಿಸಿತು.

ಈಗ ನಮ್ಮ ತೋಟದಲ್ಲಿ ದಟ್ಟ ಹಸಿರಿಲ್ಲ. ನಡುವೆ ಹರಿಯುತ್ತಿದ್ದ ಚಿಕ್ಕ ಹಳ್ಳದ ಜುಳು ಜುಳು ನಾದ ಕೇಳುತ್ತಿಲ್ಲ, ಊರ ಮುಂದಿನ ಕಟ್ಟೆಯಲ್ಲಿ ನೀರಿಲ್ಲ. ಮೊದಲಿನಂತೆ ಮಳೆ ಬೀಳುತ್ತಿಲ್ಲ. ಹಕ್ಕಿಗಳು ಕಣ್ಮರೆಯಾಗಿವೆ. ಸುತ್ತ ಕಾಣುತ್ತಿದ್ದ ಗುಡ್ಡಗಳು ಕುಗ್ಗಿವೆ. ತೋಟಗಳನ್ನು ಕಬಳಿಸುತ್ತ ಊರು ಬೆಳೆಯುತ್ತಿದೆ. ಹಾದಿಯುದ್ದಕ್ಕೂ ಕಾಣುತ್ತಿದ್ದ ಹಸಿರು ಉಸಿರು ಕಳೆದುಕೊಂಡಿದೆ. ವಂಗಾರಿಯವರ ಆತ್ಮ ಚರಿತ್ರೆ ನಮ್ಮೆಲ್ಲ ಗೊಂದಲ, ನೋವಿಗೆ ಮತ್ತು ಪರಿಸರದ ಗಂಭೀರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತಿದೆ. ಅವರ ದಿಟ್ಟ ಹೋರಾಟ ಅನೇಕರಿಗೆ ಮಾದರಿಯಾಗಬಲ್ಲದು, ಸ್ಫೂರ್ತಿಯಾಗಬಲ್ಲದು. ಹಾಗೆಂದೇ ಅವರ ಆತ್ಮಚರಿತ್ರೆಯನ್ನು ಕನ್ನಡಕ್ಕೆ ಅನುವಾದ ಮಾಡಬೇಕೆಂದು ತೀವ್ರವಾಗಿ ಅನ್ನಿಸಿತು. ಜೊತೆಗೆ ನಾನು ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗಿನಿಂದ ರೂಪಿಸಿಕೊಂಡ ಮಹಿಳಾ ಅಧ್ಯಯನದ ಮುಂದುವರಿಕೆಯ ಭಾಗವೂ ಹೌದು. ಆ ನಿಟ್ಟಿನಲ್ಲಿಯೇ ಮೂವತ್ತೈದು ವರ್ಷಗಳ ಹಿಂದೆ ವಫ್ರಿಕನ್, ಆಫ್ರಿಕನ್-ಅಮೆರಿಕನ್ ಸಾಹಿತ್ಯ ಅನುವಾದಿಸಲು ಆರಂಭಿಸಿದೆ. ಆ ಸರಣಿ ಪುಸ್ತಕಗಳನ್ನು ಕೆಲವರು ಓದಿರಬಹುದು. ಈ ಅನುವಾದ ಕೂಡ ಅದರ ಮುಂದುವರಿಕೆಯೇ ಆಗಿದೆ. ಸಾಂಸ್ಕೃತಿಕ-ಸಾಮಾಜಿಕ ಮಹತ್ವದ ವಿಷಯಗಳು ನನ್ನ ಸ್ವಭಾವದ, ಅಂತರಂಗಕ್ಕೆ ಸೇರಿದ ವಿಷಯಗಳೇ ಆಗಿವೆ.

ಈ ಪುಸ್ತಕದ ಶೀರ್ಷಿಕೆ ಮಾಯಾ ಏಂಜೆಲೋ ಅವರ 'Still I Rise' ಕವಿತೆಯ ಸಾಲು. ನಾನೇ ಆ ಕವನವನ್ನು ಮೂವತ್ತೈದು ವರ್ಷಗಳ ಹಿಂದೆ ಅನುವಾದಿಸಿದ್ದೆ.

ತಮ್ಮ ಅಮೂಲ್ಯ ಪ್ರಕಾಶನದ ಮೂಲಕ ಇದನ್ನು ಪ್ರಕಟಿಸುತ್ತಿರುವ ಕೃಷ್ಣ ಚೆಂಗಡಿಯವರಿಗೆ, ಮುಖಪುಟ ಕಲೆ ಮತ್ತು ಒಳಪುಟ ಒಪ್ಪ ಮಾಡಿದ ಎಂ. ಆರ್. ಗುರುಪ್ರಸಾದ್ ಅವರಿಗೆ, ಈ ಪುಸ್ತಕದ ಪ್ರತಿ ಹಂತದಲ್ಲೂ ಕಾಳಜಿ ವಹಿಸಿ, ಸಲಹೆಗಳನ್ನು ನೀಡಿದ ಕತೆಗಾರ ಕೇಶವ ಮಳಗಿಯವರಿಗೆ, ನಮ್ಮ ಮನೆಯಿರುವ ರಸ್ತೆಯಲ್ಲಿ ಹತ್ತಾರು ಮರಗಳನ್ನು ಬೆಳೆಸಿ ತಂಪಾದ ವಾತಾವರಣ ಸೃಷ್ಟಿಸಿರುವ ಬಾಳ ಸಂಗಾತಿ ಎಸ್. ರಮೇಶ್ ಅವರಿಗೆ, ಅನುವಾದದಲ್ಲಿ ತೊಡಕು ಉಂಟಾದಾಗಲೆಲ್ಲ ನೆರವು ನೀಡಿದ ಮಗ ಆಕರ್ಷ ಮತ್ತು ಹಿಂಬದಿ ಪುಟದ ಚಿತ್ರ ತೆಗೆದುಕೊಟ್ಟ ಮಗಳು ಸ್ಪರ್ಶಳಿಗೆ ತುಂಬು ಮನಸ್ಸಿನ ಕೃತಜ್ಞತೆಗಳು.

- ಎಂ. ಆರ್. ಕಮಲ

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...