ಹದ್ದಿನ ಸಂಕೇತ ಕಾದಂಬರಿಗೊಂದು ಕಾವ್ಯದ ಶಕ್ತಿಯನ್ನು ದಕ್ಕಿಸಿಕೊಟ್ಟಿದೆ


"ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು ಮನಸಿನೊಳಗೆ ಅಚ್ಚೊತ್ತಿ ಬಿಡುತ್ತದೆ. ಅತ್ತ ಮಲೆನಾಡು ಇತ್ತ ಕರಾವಳಿಯ ನಡುವಣ ಭೂಭಾಗದಲ್ಲಿ ಬದುಕುತ್ತಿರುವ ನನ್ನಂತವರಿಗೆ ರಾಯಚೂರಿನ ಬಿಸಿಲಿನ ಝಳದ ಚಿತ್ರಣವಂತೂ ಬಹಳ ತಾಕಿತು. ಬಿಸಿಲ ಬೇಗೆಗೆ ಹೆಣಗುಳುದುರುವುದು, ಮನೆಯವರನ್ನ ಕಳಕೊಂಡವರ ಗೋಳಾಟ, ಪ್ರತೀ ಸಾವಿನ ರೋದನ ಮುಗಿಲು ಮುಟ್ಟಿದರೂ ಕೆಂಡ ಸುರಿಸುವ ಆಕಾಶ, ಸುಡುವ ಬೇಗೆಯನ್ನು ಒಡಲೊಳಗಿಟ್ಟು ದಿನ‌ ನೂಕುವ ಸಂಕಟ ನಮ್ಮೊಳಗನ್ನೂ ಬೇಯಿಸುತ್ತದೆ," ಎನ್ನುತ್ತಾರೆ ಸ್ಮಿತಾ ಅಮೃತರಾಜ್ ಸಂಪಾಜೆ. ಅವರು ಹಳೆಮನೆ ರಾಜಶೇಖರ ಅವರ ‘ಒಡಲುಗೊಂಡವರು’ ಕಾದಂಬರಿ ಕುರಿತು ಬರೆದ ವಿಮರ್ಶೆ.

ಬರಬಂದು ಕಂಗೆಟ್ಟು ಮುಗಿಲಿಗೆ ಕಣ್ಣು ನೆಟ್ಟು ಕೂತ ಬನ್ನೀಪುರದವರು, ಧಗೆಯ ತಾಳಲಾರದೆ ಸಾವನ್ನಪ್ಪುವ ಹಸುಗೂಸುಗಳು, ಒಂದಷ್ಟು ಹನಿ ಬಿದ್ದು ಭೂಮಿ ಮೆತ್ತಗಾದರೆ ಬೀಜ ಬಿತ್ತಬಹುದೆಂದು ಕಾತರಿಸುವ ಊರ ಮಂದಿ, ಕಾಯುವಿಕೆಗೆ ಫಲ ಸುಳ್ಳಲ್ಲವೆಂಬಂತೆ ಬಿಡದೇ ಎಂಟು ದಿನ ಸುರಿದ ಮಳೆಗೆ ಕೆರೆ ತುಂಬಿ ತುಳುಕುವುದು, ಇನ್ನೇನು ಬದುಕು ಹಸನಾಗಿಬಿಡುತ್ತದೆ ಅಂದುಕೊಳ್ಳುವಷ್ಟರಲ್ಲೇ ಊರಜನರ ಬದುಕು ಮತ್ತೊಂದು ತಿರುವು ಪಡೆದುಕೊಳ್ಳುವುದು ಕಾದಂಬರಿಯಲ್ಲಿ ರೋಚಕವಾಗಿ ತೆರೆದುಕೊಳ್ಳುತ್ತದೆ.

ನೀಲಮ್ಮ ಗೌಡಸಾನಿಯ ಶ್ರದ್ಧೆಯ ಕೆಲಸದಾಳು ಭೀಮನ ಪಾತ್ರದೊಂದಿಗೆ,ಅವನಿಗೆ ಬೀಳುವ ವಿಚಿತ್ರ ಕನಸುಗಳೊಂದಿಗೆ ತೆರೆದುಕೊಳ್ಳುವ ಕಾದಂಬರಿಯ ಒಳಗೊಂದು ಬೇರೆಯೇ ತೆರನಾದ ಲೋಕ ತೆರೆದುಕೊಳ್ಳುತ್ತದೆ. ಅದೊಂದು ಅಮೂರ್ತವಾದ ದಕ್ಕಿಯೂ ದಕ್ಕದಂತಿರುವ ಲೋಕ.‌ ಆ ಲೋಕದೊಳಗೆ ಭೀಮನ ನಡಿಗೆ ಸಾಗುತ್ತದೆ. ಎಚ್ಚರದ ಸ್ಥಿತಿಯಲ್ಲೂ ಕನಸೊಂದು ಬಿಸಿಲಿಗುದುರೆಯಂತೆ ಅಟ್ಟಾಡಿಸಿಕೊಂಡು ಬರುವ ಭೀಮನಿಗೆ, ಅವನಿಗೆ ಬೀಳುವ ಕನಸನ್ನು ಅದು ಕನಸೇ ಅಂತ ಒಪ್ಪಿಕೊಳ್ಳಲು ಆಗುವುದೇ ಇಲ್ಲ. ಅವರೆಲ್ಲ ನಿನ್ನ ಭ್ರಮೆ ಮದುವೆ ಮಾಡಿಕೋ ಅಂತ ಛೇಡಿಸುತ್ತಾರೆ. ಕೊನೇಗೆ ಹೆಂಡತಿ ಶಿವಬಸವ್ವಳ ತೆಕ್ಕೆಯೊಳಗೂ ಅವನಿಗೆ ಬೀಳುವ ಕನಸು, ಭ್ರಮೆ ಮತ್ತು ವಾಸ್ತವಕ್ಕೆ ಮುಖಾಮುಖಿಯಾಗಿಯಾಗುವಂತೆ ಮಾಡಿಬಿಡುತ್ತದೆ.

ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು ಮನಸಿನೊಳಗೆ ಅಚ್ಚೊತ್ತಿ ಬಿಡುತ್ತದೆ. ಅತ್ತ ಮಲೆನಾಡು ಇತ್ತ ಕರಾವಳಿಯ ನಡುವಣ ಭೂಭಾಗದಲ್ಲಿ ಬದುಕುತ್ತಿರುವ ನನ್ನಂತವರಿಗೆ ರಾಯಚೂರಿನ ಬಿಸಿಲಿನ ಝಳದ ಚಿತ್ರಣವಂತೂ ಬಹಳ ತಾಕಿತು. ಬಿಸಿಲ ಬೇಗೆಗೆ ಹೆಣಗುಳುದುರುವುದು,ಮನೆಯವರನ್ನ ಕಳಕೊಂಡವರ ಗೋಳಾಟ, ಪ್ರತೀ ಸಾವಿನ ರೋದನ ಮುಗಿಲು ಮುಟ್ಟಿದರೂ ಕೆಂಡ ಸುರಿಸುವ ಆಕಾಶ, ಸುಡುವ ಬೇಗೆಯನ್ನು ಒಡಲೊಳಗಿಟ್ಟು ದಿನ‌ ನೂಕುವ ಸಂಕಟ ನಮ್ಮೊಳಗನ್ನೂ ಬೇಯಿಸುತ್ತದೆ.

ಕನಸು ಬೀಳುವುದು ಭವಿಷ್ಯದ ಸೂಚಕ ಅನ್ನುವುದನ್ನ ಇಲ್ಲಿಯ ಕತೆ‌ ಸಾಬೀತು ಪಡಿಸುತ್ತದೆ. ಕಾದಂಬರಿ ಒಂದು ಕನಸಿನಂತೆ ತೆರೆದುಕೊಳ್ಳುತ್ತಾ ವಾಸ್ತವದ ದರ್ಶನ ಮಾಡಿಸುತ್ತದೆ. ಇಡೀ ಕಾದಂಬರಿ ಪ್ರತಿಮೆಗಳಲ್ಲಿ ರೂಪಕಗಳಲ್ಲಿ ಮಾತಾಡುತ್ತದೆ. ಧ್ವನಿಪೂರ್ಣವಾಗಿರುವ ಈ ಕಾದಂಬರಿಯಲ್ಲಿ ಚಿತ್ರಕ ಶಕ್ತಿ ಇದೆ. ಕಾದಂಬರಿಯಲ್ಲಿ ಬರುವ ಕೆರೆ ಮತ್ತು ಕನಸಿನಲ್ಲಿ ಬರುವ ಹದ್ದು ಒಂದು ಸಂಕೇತವಾಗಿ ಕಂಡು ಬರುತ್ತದೆ.

ಅಲ್ಲಲ್ಲಿ ಕಾಣಿಸಿಕೊಳ್ಳುವ ಹದ್ದು, ಹಸಿವಿನಿಂದ ಯಾವುದೋ ಜೀವ, ಜೀವ ಬಿಡುವುದನ್ನು ಕಾಯುತ್ತಿದೆ ಅಂತ ಮೊದಲ ಬಾರಿಗೆ ಅನ್ನಿಸಿದರೂ ಕತೆ ಮುಗಿಯುವಾಗ ಗಿಡುಗ ವ್ಯವಸ್ಥೆಯ ಬೇರೆ ಬೇರೆ ರೂಪವಾಗಿ ತೋರುತ್ತದೆ, ಮತ್ತು ಅದರ ಹಸಿವು ಅಂತಿಂತ ಹಸಿವಲ್ಲ, ಇಡೀ ಊರನ್ನೇ ಕಬಳಿಸುವ ಹಸಿವು ಅಂತ ಗೊತ್ತಾದಾಗ ಎದೆ ಝುಮ್ ಎನ್ನುತ್ತದೆ. ಹದ್ದಿನ ಸಂಕೇತ ಕಾದಂಬರಿಗೊಂದು ಕಾವ್ಯದ ಶಕ್ತಿಯನ್ನು ದಕ್ಕಿಸಿಕೊಟ್ಟಿದೆ.

ಭೀಮನಿಗೆ ಬೀಳುವ ಕನಸುಗಳು,ಕಲ್ಪನೆಗಳು ಅರಳಿಕೊಳ್ಳುವ ರೀತಿ, ಅಲ್ಲಿಯ ಭಾಷೆ , ನಡುವೆ ಭೀಮ , ಶಿವಬಸಮ್ಮರ ನವಿರು ಪ್ರೇಮ, ಭೀಮನಿಗೆ ದನಗಳ ಮೇಲಿದ್ದ ಪ್ರೀತಿ, ಮನೆಯ ಮರದ ತೊಲೆಯಲ್ಲಿ ಗೂಡು ಕಟ್ಟಿದ ಗುಬ್ಬಿ, ಗುಬ್ಬಿ ಮರಿಯನ್ನು ಕಬಳಿಸಲು ಬಂದ ಹಾವು,ಎಲ್ಲಾ ಜೀವಿಗಳಿಗೂ ಬದುಕಲು ಅನುವು ಮಾಡಿಕೊಡುವ ಜನರ ಉದಾರತೆ, ಬಸಯ್ಯ ತಾತನ ಮಾತಿನ ಶಕ್ತಿ ಮೇಲೆ ಜನರಿಗಿದ್ದ ನಂಬಿಕೆ ಇವೆಲ್ಲವೂ ಕಾದಂಬರಿಗೆ ಒಂದು ವಿಶೇಷ ಮೆರುಗನ್ನ, ಹೊಸ ಅರ್ಥವನ್ನ ದಕ್ಕಿಸಿಕೊಡುತ್ತದೆ.

ಸಹಭಾಳ್ವೆಯಿಂದ ಬಾಳುವ ಒಂದು ಊರು, ಇಡೀ ಊರಿಗಾಗಿಯೇ ನೀಲಮ್ಮ‌ಗೌಡಸಾನಿಯ ಹೊಲದಲ್ಲಿ ತೆರೆದು ನಿಂತ ಕೆರೆ. ಊರನ್ನು ಒಂದು ಗೂಡಿಸುವ ಒಂದು ಜೀವಂತಿಕೆಯ ಸಂಕೇತ ಕೆರೆ. ಅದರ ದಡದಲ್ಲಿ ನೆರಳು ಕೊಡುವ ಬೇವಿನ ಮರ. ಇಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗೌಡಸಾನಿ, ಸಿದ್ದವ್ವ, ಬಸಯ್ಯ,ಭೀಮ …ಎಲ್ಲರೂ ಬೇವಿನ ಮರಗಳೇ ಆಗಿ ಕಾಣುತ್ತಾರೆ.

ಇಡೀ ಊರು ಬಿಸಿಲಿನಿಂದ ಕಂಗೆಟ್ಟು ಜೀವಗಳು ಹೋಗುವ ಚಿತ್ರ ಕರುಳು ಹಿಂಡುತ್ತದೆ. ಪ್ರತೀ ಸಾವಿನ ಮನೆಯಲ್ಲೂ ಜನ‌ ನಿಟ್ಟುಸಿರಿನಿಂದ ಮೋಡ ಕಟ್ಟುವುದನ್ನು ನೋಡುವುದು ಕೆರೆ ತುಂಬುವುದನ್ನು ಕಾಯುವಾಗ ನಮ್ಮ‌ ಎದೆಯೂ ಆರ್ದ್ರ ಗೊಳ್ಳುತ್ತದೆ. ಕೊನೇಗೆ ಮಳೆ ಬರುತ್ತದೆ, ಕೆರೆ ಕಟ್ಟುತ್ತದೆ. ಆದರೆ ಬದಲಾವಣೆಯ ಹರಿಕಾರನಂತೆ ಬಂದ ನೀಲಮ್ಮ ಗೌಡಸಾನಿಯ ಮಗ ಬಯಲ ಕೆರೆಗೆ ಗೋಡೆ ಕಟ್ಟುವ ಚಿತ್ರಣ , ಎಲೆ ನೀರಿಗೆ ಬಿದ್ದು ನೀರಿನ ರುಚಿ ಕಳೆದುಕೊಳ್ಳುತ್ತದೆಯೆಂಬ ನೆವದಲ್ಲಿ ಬೇವಿನ ಮರದ ಬುಡಕ್ಕೆ ಕೊಡಲಿ ತಾಗಿಸಲು ಅಣಿಯಾಗುವ ಸನ್ನಿವೇಶ, ಒಂದು ಊರಿನ ಅವಸಾನದಂತೆ ಕಾಣಿಸುತ್ತದೆ. ವಿದ್ಯೆ ಕಲಿಯದವರು, ವಿದ್ಯೆ ಕಲಿತವರು ಬದುಕನ್ನು ಗ್ರಹಿಸುವ ಪರಿ ಮನಸಿನಲ್ಲಿ ಪ್ರಶ್ನೆಗಳನ್ನ ಹುಟ್ಟು ಹಾಕುತ್ತದೆ.

ಕಾದಂಬರಿಯ ಕೊನೇಗೆ ಕೆರೆಯ ದಂಡೆಯಲ್ಲಿ ಅವರೆಲ್ಲ ಮಲಗುವ ಸನ್ನಿವೇಶ ಮತ್ತು ಅಲ್ಲಿ ಭೀಮನಿಗೆ ಬೀಳುವ ಕನಸು ತುಂಬಾ ಪರಿಣಾಮಕಾರಿಯಾಗಿದೆ. ಕನಸಿನಲ್ಲಿ ಮತ್ತದೇ ಹದ್ದು ಕೆರೆಯ ನೀರನ್ನೇ ಆಪೋಷನ ತೆಗೆದುಕೊಂಡು, ದಂಡೆಯ ಮರಗಳಿಗೆ ಬೆಂಕಿಯಿಕ್ಕಿಬಿಡುತ್ತದೆ,ಮಲಗಿದವರನ್ನ ಬೆಂಕಿಗೆ ಹಾಕಿಬಿಡುತ್ತದೆ. ‘ಬಸಯ್ಯ ತಾತ ಬೆಂಕಿಗೆ ಬೀಳುವುದು, ಭೀಮ ಕೆರೆಗೆ ಇಳಿದರೆ ಒಂದು ತೊಟ್ಟು ನೀರಿಲ್ಲ’ ‌ ಅಂತ ತೋರುವುದು ಅನೇಕ ಅರ್ಥಗಳನ್ನ ಹೊಳೆಯಿಸಿ ನಮ್ಮನ್ನು ಗಕ್ಕನೆ ನಿಲ್ಲಿಸಿ ಬಿಡುತ್ತದೆ .

ಒಳ್ಳೆಯ ಕಾದಂಬರಿ, ಕಣ್ಣಿಗೆ ಕಟ್ಟಿಸುವಂತೆ ,ನಮ್ಮ‌ಅನುಭವಕ್ಕೆ ದಕ್ಕುವಂತೆ ಓದಿಸಿಕೊಂಡು ಹೋಗುತ್ತದೆ. ಬಯಲು ಸೀಮೆಯ ಬನ್ನೀಪುರ ಊರು ಕಣ್ಣಿಗೆ ಕಟ್ಟುತ್ತದೆ. ಗೌಡಸಾನಿ ,ಭೀಮ‌ ಎದೆಯೊಳಗೆ ನಿಲ್ಲುತ್ತಾರೆ. ಊರ ಜನರನ್ನ,ಬೆಸೆಯುತ್ತಿದ್ದ ಕೆರೆಯ ನೀರೇ ಜನರನ್ನು ಬೇರ್ಪಡಿಸುವುದು ವ್ಯವಸ್ಥೆಯ ಮತ್ತೊಂದು ದಾರುಣತೆಯನ್ನ ತೋರಿಸುತ್ತದೆ. ಒಟ್ಟಾರೆಯಾಗಿ ನೀರೊಂದು ಬದುಕಿನ ಹಲವು ಮಗ್ಗಲುಗಳನ್ನ ನಮ್ಮ‌ ಮುಂದೆ ತೆರೆದಿಡುತ್ತದೆ. ಎಲ್ಲೂ ಏಕತಾನತೆ ಬರದೆ ಕಾದಂಬರಿ ಕೊನೇ ತನಕ ಓದಿಸಿಕೊಂಡು ಹೋಗುತ್ತದೆ.

ಬಿಸಿಲೂರಿನ ಬೇಗೆಯ ಕಥನವನ್ನು ಓದಿ ಮುಗಿಸುವುದು, ಕಾಕತಾಳೀಯವೆಂಬಂತೆ ಮಟ ಮಟ ಮದ್ಯಾಹ್ನದಲ್ಲಿ ನನ್ನ ಮನೆಯಂಗಳದಲ್ಲಿ ‘ಧೋ’ ಅಂತ ಮಳೆ ಬೀಳುವುದಕ್ಕೂ ಸರಿ ಆಯಿತು.

ಈ ಕಾದಂಬರಿ ಓದುಗರಿಗೆ ಇಷ್ಟವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಶುಭವಾಗಲಿ.

- ಸ್ಮಿತಾ ಅಮೃತರಾಜ್ ಸಂಪಾಜೆ

MORE FEATURES

87ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ

22-12-2024 ಮಂಡ್ಯ

ಮಂಡ್ಯ: ಇನ್ನೇನು ವಾರವಷ್ಟೇ ಇದೇ ಎಂದಾಗ ಇಡೀ ರಾಜ್ಯದಲ್ಲಿ ಆಹಾರದ ವಿಚಾರವಾಗಿ ಜೋರು ಚರ್ಚೆಗೆ ಕಾರಣವಾದ್ದು 87ನೇ ಕನ್ನಡ ...

ಪುಸ್ತಕಗಳು ಪ್ರಜಾಪ್ರಭುತ್ವದ ಅಡಿಗಲ್ಲು; ವಸುಧೇಂದ್ರ

21-12-2024 ಬೆಂಗಳೂರು

ಮಂಡ್ಯ: "ಕಳೆದೆರಡು ಶತಮಾನಗಳಿಂದ ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಓದುಗರ ಸಂಖ್ಯೆ ಕುಸಿಯುತ್ತಲೇ ಇದೆ. ಆದರೆ ವಿಶ...

ಸಮ್ಮೇಳನಾಧ್ಯಕ್ಷರ ಹಕ್ಕೊತ್ತಾಯಗಳು

20-12-2024 ಮಂಡ್ಯ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಕನ್ನಡಿಗರ ಪರವಾಗ...